Connect with us

INCIDENT

ಬೆಕ್ಕಿನ ಪ್ರೀತಿಗಾಗಿ ಬಾವಿಯಲ್ಲಿ ಬಾಕಿಯಾದ ಬಾಲಕ: ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಅವರಿಂದ ಸಾಹಸಮಯ ರಕ್ಷಣೆ!

Published

on

ವಿಟ್ಲ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಬಾಲಕನೊಬ್ಬ ಸುಮಾರು 60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಶಿವಾಜಿನಗರದಲ್ಲಿ ನಡೆದಿದೆ. ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದ ಫ್ರೆಂಡ್ಸ್ ವಿಟ್ಲ ತಂಡದ ನಾಯಕ ಮುರಳೀಧರ ವಿಟ್ಲ ಅವರು ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಮೂಲಕ ಸಂಭವನೀಯ ಅನಾಹುತವನ್ನು ತಪ್ಪಿಸಿದ್ದಾರೆ.

ಘಟನೆಯ ವಿವರ:

ಶಿವಾಜಿನಗರದ ಕೃಷ್ಣ ನಾಯ್ಕ ಎಂಬುವವರ ಮನೆಯ ಬಳಿಯಿರುವ ಸುಮಾರು 60 ಅಡಿ ಆಳದ ನೀರಿಲ್ಲದ ಬಾವಿಗೆ ಆಕಸ್ಮಿಕವಾಗಿ ಬೆಕ್ಕೊಂದು ಬಿದ್ದಿತ್ತು. ಬಾವಿಯ ಒಳಗಿನಿಂದ ಬೆಕ್ಕು ಪ್ರಾಣಭಯದಲ್ಲಿ ಕಿರುಚುತ್ತಿರುವುದನ್ನು ಕಂಡು ಮನೆಯವರು ಮರುಗಿದ್ದರು. ಈ ವೇಳೆ ಕೃಷ್ಣ ನಾಯ್ಕ ಅವರ ಅಪ್ರಾಪ್ತ ಮೊಮ್ಮಗ ತಾನೇ ಕೆಳಗಿಳಿದು ಬೆಕ್ಕನ್ನು ತರುವುದಾಗಿ ಹೇಳಿದ್ದಾನೆ. ಮೊಮ್ಮಗನ ಹಠಕ್ಕೆ ಮಣಿದ ತಾತ ಹಗ್ಗದ ಸಹಾಯದಿಂದ ಆತನನ್ನು ಕೆಳಗಿಳಿಸಿದ್ದಾರೆ.

ಬಾಲಕ ಯಶಸ್ವಿಯಾಗಿ ಕೆಳಗಿಳಿದು, ಬೆಕ್ಕನ್ನು ಬಕೆಟ್‌ನಲ್ಲಿ ಹಾಕಿ ಮೇಲಕ್ಕೆ ಕಳುಹಿಸುವ ಮೂಲಕ ಮೂಕಪ್ರಾಣಿಯ ಜೀವ ಉಳಿಸಿದ್ದಾನೆ. ಆದರೆ, ಬೆಕ್ಕನ್ನು ರಕ್ಷಿಸಿದ ನಂತರ ಬಾಲಕನಿಗೆ ಮೇಲಕ್ಕೆ ಬರಲು ಸಾಧ್ಯವಾಗದೆ ಒಂದು ಗಂಟೆಯ ಕಾಲ ಬಾವಿಯೊಳಗೇ ಚಡಪಡಿಸುವಂತಾಯಿತು.

ಗಲಿಬಿಲಗೊಂಡ ಕುಟುಂಬಸ್ಥರು:

ಮೊಮ್ಮಗ ಬಾವಿಯೊಳಗೆ ಸಿಲುಕಿರುವುದನ್ನು ಕಂಡು ತಾತ ಮತ್ತು ಅಜ್ಜಿ ಕಂಗಾಲಾಗಿದ್ದರು. ಏನು ಮಾಡಬೇಕೆಂದು ತೋಚದೆ ಗಾಬರಿಗೊಂಡಿದ್ದ ಸಂದರ್ಭದಲ್ಲಿ, ಸ್ಥಳೀಯವಾಗಿ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಫ್ರೆಂಡ್ಸ್ ವಿಟ್ಲ ತಂಡದ ನಾಯಕ ಮುರಳೀಧರ ವಿಟ್ಲ ಅವರಿಗೆ ವಿಷಯ ಮುಟ್ಟಿಸಲಾಯಿತು.

ಸಾಹಸಮಯ ರಕ್ಷಣೆ:

ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಮುರಳೀಧರ ಅವರು ಕ್ಷಣಾರ್ಧದಲ್ಲಿ ಬಾವಿಯೊಳಗೆ ಇಳಿದಿದ್ದಾರೆ. ಅತಂತ್ರ ಸ್ಥಿತಿಯಲ್ಲಿದ್ದ ಬಾಲಕನಿಗೆ ಧೈರ್ಯ ತುಂಬಿ, ಹಗ್ಗದ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು.

ಮೂಕಪ್ರಾಣಿಯ ಮೇಲಿನ ಕಾಳಜಿಯಿಂದ ಬಾಲಕ ಸಾಹಸಕ್ಕೆ ಕೈಹಾಕಿದ್ದರೂ, ಹಿರಿಯರು ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ,” ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ತನ್ನ ಪ್ರಾಣದ ಹಂಗು ತೊರೆದು ಬಾಲಕನನ್ನು ರಕ್ಷಿಸಿದ ಮುರಳೀಧರ ವಿಟ್ಲ ಅವರ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

INCIDENT

ಪುತ್ತೂರಿನಲ್ಲಿ ಸುಡುಮದ್ದು ಅವಾಂತರ ಹಾಗೂ ಕಟ್ಟಡ ಧ್ವಂಸ ಪ್ರಕರಣ – ಎರಡು ಪ್ರತ್ಯೇಕ ಪ್ರಕರಣ ದಾಖಲು

Published

on

ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವದ ಸಂಭ್ರಮದ ನಡುವೆಯೇ ಎರಡು ಅಹಿತಕರ ಘಟನೆಗಳು ಸಂಭವಿಸಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ದಿನಾಂಕ 17-04-2026 ರಂದು ರಾತ್ರಿ ಜಾತ್ರೆಯ ಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯುತ್ತಿದ್ದಾಗ ಅವಾಂತರ ಸಂಭವಿಸಿದೆ. ದೂರದಲ್ಲಿ ನಿಂತು ಪ್ರದರ್ಶನ ವೀಕ್ಷಿಸುತ್ತಿದ್ದ ಕುಂದಾಪುರ ನಿವಾಸಿ ಸುಮಂತ್ ಶೆಟ್ಟಿ (20) ಹಾಗೂ ಅವರ ಸ್ನೇಹಿತರಾದ ಭರತ್, ಕೌಶಿಕ್, ಸೌಮ್ಯ, ದೀಪಕ್, ಯಶವಂತ್ ಮತ್ತು ಮೋಹನ್ ಎಂಬುವವರ ಮೇಲೆ ಸುಡುಮದ್ದಿನ ಬೆಂಕಿ ಬಿದ್ದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಡುಮದ್ದು ನಿರ್ವಹಣೆ ಮಾಡುವವರು ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇ ಈ ಘಟನೆಗೆ ಕಾರಣ ಎಂದು ಸುಮಂತ್ ಶೆಟ್ಟಿ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 45/2026 ಕಲಂ: 288, 125(a), 3(5) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಮಂಗಳೂರಿನ ಕದ್ರಿಹಿಲ್ಸ್ ನಿವಾಸಿ ಡಾ. ಅರವಿಂದ ರಾವ್ ಕೇದಿಗೆ ಅವರು ದೇವಸ್ಥಾನದ ಪದಾಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಮಾನ್ಯ ಬಂಟ್ವಾಳ ನ್ಯಾಯಾಲಯದ ಆದೇಶದ ಮೇರೆಗೆ ಪಿರ್ಯಾದುದಾರರ ಸುಪರ್ದಿಯಲ್ಲಿದ್ದ ಪುತ್ತೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಹಳೆಯ ಕಟ್ಟಡ ಮತ್ತು ಜಮೀನಿಗೆ, ದಿನಾಂಕ 14-04-2026 ರಂದು ರಾತ್ರಿ ದೇವಸ್ಥಾನದ ಪದಾಧಿಕಾರಿ ಅಧ್ಯಕ್ಷರು ಮತ್ತು ಇತರರು ಅಕ್ರಮವಾಗಿ ಪ್ರವೇಶಿಸಿ, ಕಟ್ಟಡವನ್ನು ಕೆಡವಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ದಿನಾಂಕ 17-04-2026 ರಂದು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 44/2026, ಕಲಂ: 329(3), 324(2) ಜೊತೆಗೆ 3(5) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

DEATH

ಕಳೆಂಜಿಮಲೆ ರಕ್ಷಿತಾರಣ್ಯದ ತಪ್ಪಲಲ್ಲಿ ಕಾಟಿಯ ದುರಂತ ಅಂತ್ಯ

Published

on

ಬಂಟ್ವಾಳ ತಾಲೂಕು ವಿಟ್ಲ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಲವು ವರ್ಷಗಳಿಂದ ಸ್ವಚ್ಚಂದವಾಗಿ ಸುತ್ತಾಡುತ್ತಿದ್ದ(ಕಾಟಿ)ಕಾಡೆತ್ತು ಹಗ್ಗದ ಉರುಳಿಗೆ ಸಿಲುಕಿ ದುರಂತ ಅಂತ್ಯ ಕಂಡಿದೆ.

ರಕ್ಷಿತಾರಣ್ಯದ ತಪ್ಪಲು ಪ್ರದೇಶದ ವಿಟ್ಲ ಪಡ್ನೂರು ಗ್ರಾಮದ ಅನಿಲಕಟ್ಟೆ ಪೂರ್ಲಿಪ್ಪಾಡಿ ಎಂಬಲ್ಲಿನ ದಿ.ಮೋನಪ್ಪ ಗೌಡರ ಸ್ವಾಧೀನದ ಜಮೀನಿನಲ್ಲಿರುವ ನಾಲ್ಕೈದು ಕುಟುಂಬಗಳ ಕೃಷಿಗೆ ಅನುಕೂಲವಾಗುವ ಕೆದುವಾರು ಪಾಲಿನ ಕೆರೆಗೆ ನೀರು ಕುಡಿಯಲು ಕಾಡೆತ್ತು ಬರುತ್ತಿತ್ತು.

ನಿನ್ನೆ(ಶುಕ್ರವಾರ)ಸಂಜೆ ಕುತ್ತಿಗೆಯಲ್ಲಿ ಪಾಲಿಥೀನ್ ಹಗ್ಗ ಬಿಗಿದ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡಿದ್ದ ಕಾಡೆತ್ತು ನೋವು ತಾಳಲಾರದೇ ಕೆರೆಗೆ ನೀರು ಕುಡಿಯಲು ಬಂದಿರುವುದು ಸ್ಥಳೀಯರ ಕಣ್ಣಿಗೆ ಕಂಡು ಬಂದಿತ್ತು. ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅರಣ್ಯಾಧಿಕಾರಿಗಳ ತಂಡ ಶುಕ್ರವಾರ ಮುಸ್ಸಂಜೆಯೇ ಸ್ಥಳಕ್ಕಾಗಮಿಸಿ ಕುತ್ತಿಗೆಯಲ್ಲಿ ಬಿಗಿದಿದ್ದ ಹಗ್ಗದ ಉರುಳು ತುಂಡರಿಸಿದ್ದಾರೆ.
ಶನಿವಾರ ಬೆಳಗ್ಗೆ ಅದೇ ಅರಣ್ಯದೊಳಗಿನ ಕೆರೆಯ ಬದಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಡೆತ್ತು ಇಹಲೋಕ ತ್ಯಜಿಸಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ, ಉಕ್ಕುಡ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಹತ್ತು ಹದಿನೈದು ದಿನಗಳ ಹಿಂದೆ ಎಲ್ಲೋ ಕಾಟಿ ಮಾಂಸದ ರುಚಿ ಸವಿಯಲು ಜೊಲ್ಲು ಸುರಿಸಿದ್ದ ನರರಾಕ್ಷಸರು ಹತ್ಯೆಗೈಯಲು ಕಾಡೆತ್ತಿನ ಕುತ್ತಿಗೆಗೆ ಪಾಲಿಥೀನ್ ಹಗ್ಗದ ಉರುಳು ಬಿಗಿದಿರುವುದು ಸ್ಪಷ್ಟವಾಗಿದೆ.
ದೈತ್ಯ ದೇಹದ ಬಲಶಾಲಿಯಾಗಿದ್ದ ಕಾಡೆತ್ತು ನರರಾಕ್ಷಸರ ಪಾಲಿಥೀನ್ ಹಗ್ಗವನ್ನು ತುಂಡರಿಸಿದ್ದರೂ ಕುತ್ತಿಗೆಗೆ ಬಿಗಿದ ಉರುಳು ತೆಗೆಯಲಾಗಿಲ್ಲ. ದಿನದಿನಕ್ಕೆ ಕುತ್ತಿಗೆಯ ಉರುಳು ಬಿಗಿದ ಕಾರಣ ಕಾಡೆತ್ತಿನ ಕುತ್ತಿಗೆಯ ಅಡಿಭಾಗದಲ್ಲಿ ಭಾರಿ ಪ್ರಮಾಣದ ಗಾಯಗಳಾಗಿ ಹುಳ ಹುಟ್ಟಿಕೊಂಡಿದೆ. ನೋವು ತಡೆಯಲಾಗದೇ ಎಂದಿನಂತೆ ಬರುತ್ತಿದ್ದ ದಾರಿಯಲ್ಲೇ ಬಂದು ಕೆರೆಯಲ್ಲಿ ನೀರು ಕುಡಿದ ಬಳಿಕ ಇಂದು ಬೆಳಗ್ಗೆ ಕಾಡೆತ್ತು ಇಹಲೋಕ ತ್ಯಜಿಸಿದೆ.

ಇಲಾಖಾ ನಿಯಮದಂತೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಬಳಿಕ ಅರಣ್ಯದಲ್ಲೇ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Continue Reading

Bantawala

ವಿಟ್ಲ: ಸಿಡಿಪಿಒ ಕಚೇರಿಯಲ್ಲಿ ದಾಂಧಲೆ; ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಪೀಠೋಪಕರಣ ಧ್ವಂಸ

Published

on

ವಿಟ್ಲ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) ಕಚೇರಿಯಲ್ಲಿ ದಂಪತಿಗಳ ನಡುವಿನ ಮನಸ್ತಾಪದ ಕುರಿತು ಆಪ್ತ ಸಮಾಲೋಚನೆ (COUNSELING) ನಡೆಯುತ್ತಿದ್ದ ವೇಳೆ, ಪತಿಯ ಕಡೆಯವರು ಏಕಾಏಕಿ ದಾಂಧಲೆ ನಡೆಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ಬುಧವಾರ ವಿಟ್ಲದ ಬಸವನಗುಡಿ ರಸ್ತೆಯಲ್ಲಿ ಸಂಭವಿಸಿದೆ.

ಘಟನೆಯ ವಿವರ: ವಿಟ್ಲದ ಬಸವನಗುಡಿ ರಸ್ತೆಯಲ್ಲಿರುವ ಕುಲಾಲ ಭವನದಲ್ಲಿ ಕಾರ್ಯಾಚರಿಸುತ್ತಿರುವ ಸಿಡಿಪಿಒ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ. ಇರಾ ಮೂಲದ ಪತ್ನಿ ಹಾಗೂ ಉಳ್ಳಾಲ ಮೂಲದ ಪತಿಯ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಪತ್ನಿಯ ಕಡೆಯವರು ನೀಡಿದ ದೂರಿನ ಮೇರೆಗೆ ಇಲಾಖೆಯು ಎರಡೂ ತಂಡಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಬುಧವಾರ ಮಧ್ಯಾಹ್ನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಆಪ್ತ ಸಮಾಲೋಚನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇತ್ತಂಡಗಳ ನಡುವೆ ವಾದ-ಪ್ರತಿವಾದ ತಾರಕಕ್ಕೇರಿದೆ. ಈ ವೇಳೆ ರೊಚ್ಚಿಗೆದ್ದ ಪತಿಯ ಕಡೆಯವರು ಪತ್ನಿಯ ಕಡೆಯವರ ಮೇಲೆ ನೂಕಾಟ-ತಳ್ಳಾಟ ನಡೆಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕಚೇರಿ ಆಸ್ತಿ ಪಾಸ್ತಿ ಧ್ವಂಸ: ಗಲಾಟೆ ನಿಯಂತ್ರಿಸಲು ಕಚೇರಿಯ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಯತ್ನಿಸಿದರಾದರೂ, ಉದ್ರಿಕ್ತ ಗುಂಪು ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಬಡಿದು ಧ್ವಂಸಗೊಳಿಸಿದೆ. ಇಷ್ಟಕ್ಕೇ ಸುಮ್ಮನಾಗದ ಗುಂಪು, ಕೌನ್ಸಿಲಿಂಗ್ ಕೇಂದ್ರದಿಂದ ಹೊರಗೆ ಬಂದು ಕೇಕೆ ಹಾಕುತ್ತಾ ಆರ್ಭಟಿಸಿದೆ. ಅಲ್ಲದೆ, ಕಚೇರಿಯ ಶಟರ್ ಎಳೆದು ಬೆದರಿಕೆ ಹಾಕಿದ್ದರಿಂದ ಕಚೇರಿ ಸಿಬ್ಬಂದಿಗಳು ತೀವ್ರ ಭಯಭೀತರಾಗಿ ಬೊಬ್ಬೆ ಹೊಡೆದಿದ್ದಾರೆ.

“ಪತಿ-ಪತ್ನಿಯರ ನಡುವಿನ ಸಣ್ಣ ವಿಚಾರದ ಮನಸ್ತಾಪವನ್ನು ಆಪ್ತ ಸಮಾಲೋಚನೆಯ ಮೂಲಕ ಬಗೆಹರಿಸಬಹುದಾಗಿತ್ತು. ಆದರೆ, ಕೌನ್ಸಿಲಿಂಗ್‌ಗೆ ಎರಡೂ ಕಡೆಯಿಂದ ಸಂಬಂಧವಿಲ್ಲದ ಅನಗತ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದೇ ಈ ಗಲಾಟೆಗೆ ಮುಖ್ಯ ಕಾರಣ” ಎಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ

ಸರ್ಕಾರಿ ಕಚೇರಿಯೊಳಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಈ ಘಟನೆ ವಿಟ್ಲ ಪರಿಸರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.


Continue Reading

Trending

Copyright © 2025 Deevatige

error: Content is protected !!