Connect with us

Kasaragod

ಬಿಎಲ್‌ಒ ಮುಹಮ್ಮದ್ ಸವಾದ್ ಆತ್ಮಹತ್ಯೆ ಪ್ರಕರಣ; ಸಮಗ್ರ ತನಿಖೆಗೆ ಜಿಲ್ಲಾಧಿಕಾರಿ ಆದೇಶ

Published

on

ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಒಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕುಂಬಳೆ ಸಮೀಪದ ಮೊಗ್ರಾಲ್‌ನಲ್ಲಿ ನಡೆದಿದೆ.

ಮೊಗ್ರಾಲ್ ನಿವಾಸಿ ಮುಹಮ್ಮದ್ ಸವಾದ್ (32) ಮೃತಪಟ್ಟ ದುರ್ದೈವಿ. ಇವರು ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಬೆಳಿಗ್ಗೆಯಿಂದಲೇ ನಾಪತ್ತೆಯಾಗಿದ್ದ ಸವಾದ್‌ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮೊಗ್ರಾಲ್ ಸೇತುವೆಯ ಮೇಲೆ ಅವರ ಬೈಕ್ ಪತ್ತೆಯಾಗಿತ್ತು. ಬಳಿಕ ಸ್ಥಳೀಯರು ಮತ್ತು ಕುಟುಂಬಸ್ಥರು ನದಿಯಲ್ಲಿ ಹುಡುಕಾಟ ನಡೆಸಿದಾಗ ಸವಾದ್ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಅತ್ಯಂತ ಕಡಿಮೆ ಕಾಲಾವಕಾಶದಲ್ಲಿ ಹೆಚ್ಚಿನ ಕೆಲಸಗಳನ್ನು ಪೂರ್ಣಗೊಳಿಸುವಂತೆ ಬಿಎಲ್‌ಒಗಳ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣದಲ್ಲಿ, ಘಟನೆಯ ಹಿಂದಿನ ದಿನವಷ್ಟೇ ಅವರಿಗೆ ಹೆಚ್ಚಿನ ಕೆಲಸದ ಜವಾಬ್ದಾರಿ ನೀಡಲಾಗಿದ್ದು, ಮರುದಿನ ಮಧ್ಯಾಹ್ನ 12 ಗಂಟೆಯೊಳಗೆ ಅದನ್ನು ಕಡ್ಡಾಯವಾಗಿ ಮುಗಿಸುವಂತೆ ಗಡುವು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಕೇವಲ ಕೇರಳ ಮಾತ್ರವಲ್ಲದೆ, ದೇಶದಾದ್ಯಂತ ಬಿಎಲ್‌ಒಗಳು ಇಂತಹ ಕಠಿಣ ಕೆಲಸದ ಒತ್ತಡವನ್ನು ಎದುರಿಸುತ್ತಿದ್ದಾರೆ. ಒಬ್ಬ ಶಿಕ್ಷಕರಾಗಿ ಅತಿಯಾದ ಮಾನಸಿಕ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಅವರು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸೂಕ್ತ ಕಾಲಾವಕಾಶ ನೀಡಬೇಕು ಮತ್ತು ಮಾನವೀಯ ನೆಲೆಯಲ್ಲಿ ಅವರ ಶ್ರಮವನ್ನು ಪರಿಗಣಿಸಬೇಕು ಎಂಬ ಒತ್ತಾಯಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Continue Reading
Advertisement

award

ಶೈಕ್ಷಣಿಕ ಕ್ಷೇತ್ರದಲ್ಲಿ ಮಿಂಚಿದ ಪೆರ್ಲದ ಪ್ರತಿಭೆ: ಎಂ.ಸಿ.ಎ ಪದವಿಯಲ್ಲಿ ಅನನ್ಯ ಬಿ.ಎಸ್. ಅವರಿಗೆ ದ್ವಿತೀಯ ರ‍್ಯಾಂಕ್

Published

on

ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ 2023-25ನೇ ಸಾಲಿನ ಎಂ.ಸಿ.ಎ (MCA – Master of Computer Application) ಸ್ನಾತಕೋತ್ತರ ಪದವಿಯಲ್ಲಿ ಅನನ್ಯ ಬಿ.ಎಸ್. ಅವರು ದ್ವಿತೀಯ ರ‍್ಯಾಂಕ್ ಮೂಲಕ ಅನನ್ಯ ಸಾಧನೆ ಮಾಡಿದ್ದಾರೆ.

ಇವರು ಕಾಸರಗೋಡು ಜಿಲ್ಲೆಯ ಪೆರ್ಲದವರಾಗಿದ್ದು, ಭಾಸ್ಕರ್ ಬನಾರಿ ಹಾಗೂ ಸುಜಾತಾ ಸೇರಾಜೆ ದಂಪತಿಯ ಪುತ್ರಿ. ಇವರು ಕೇರಳ ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದ ಖ್ಯಾತ ವ್ಯಕ್ತಿ ಸಿಪಿಎಂ ಪಕ್ಷದ ನೇತಾರನಾಗಿದ್ದ ದಿ. ಕೆ.ಪಿ. ಮದನ್ ಮಾಸ್ಟರ್ ಸೇರಾಜೆ ಅವರ ಮರಿಮೊಮ್ಮಗಳು ಎಂಬುದು ಗಮನಾರ್ಹ.

ಅನನ್ಯ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪೆರ್ಲದ ಶ್ರೀ ಸತ್ಯನಾರಾಯಣ ಹೈಸ್ಕೂಲ್‌ನಲ್ಲಿ ಮುಗಿಸಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90 ಅಂಕ ಗಳಿಸಿದ್ದರು. ನಂತರ ಬಡಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಿಯುಸಿ (ವಿಜ್ಞಾನ ವಿಭಾಗ) ಶಿಕ್ಷಣ ಪೂರೈಸಿದರು.

ಉನ್ನತ ಶಿಕ್ಷಣಕ್ಕಾಗಿ ಪುತ್ತೂರಿನ ವಿವೇಕಾನಂದ ಕಾಲೇಜನ್ನು ಸೇರಿ ಬಿ.ಸಿ.ಎ (BCA) ಪದವಿಯಲ್ಲಿ ಶೇ. 93 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದರು. ಇದೀಗ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಸಿ.ಎ ಪದವಿಯಲ್ಲಿ ಶೇ. 94 ಅಂಕಗಳನ್ನು ಪಡೆಯುವ ಮೂಲಕ ಇಡೀ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಅನನ್ಯ ಅವರ ಈ ಸಾಧನೆಗೆ ಪೆರ್ಲ ಹಾಗೂ ಸುತ್ತಮುತ್ತಲಿನ ಭಾಗದ ಸಾರ್ವಜನಿಕರು ಮತ್ತು ಶಿಕ್ಷಣ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Continue Reading

cyber crime

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ: ‌ ಕಾಸರಗೋಡು ಗಣೇಶ್‌ ಪ್ರಸಾದ್ ಮಂಗಳೂರು ಪೊಲೀಸರ ವಶಕ್ಕೆ

Published

on

ಸೌಹಾರ್ದತೆಯ ತಾಣವಾದ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ದ್ವೇಷ ಬಿತ್ತಲು ಯತ್ನಿಸುವವರ ವಿರುದ್ಧ ಮಂಗಳೂರು ಪೊಲೀಸರು ಕಠಿಣ ಕ್ರಮ ಮುಂದುವರಿಸಿದ್ದಾರೆ. ಜನವರಿ ತಿಂಗಳಿನಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋಗೆ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಕಮೆಂಟ್ ಹಾಕಿದ ಆರೋಪದ ಮೇಲೆ ಕಾಸರಗೋಡು ಮೂಲದ ವ್ಯಕ್ತಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಿ ಮಂಗಳೂರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಕಿರಾತ್’ (ಕುರಾನ್ ಪಠಣ) ಸ್ಪರ್ಧೆ ನಡೆದಿತ್ತು. ಈ ಕಾರ್ಯಕ್ರಮದ ವಿಡಿಯೋವನ್ನು ಪ್ರಮುಖ ಮಾಧ್ಯಮ ಸಂಸ್ಥೆಯಾದ ‘ಉದಯವಾಣಿ’ ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಸಾರ ಮಾಡಿತ್ತು. ಈ ವಿಡಿಯೋದ ಅಡಿಯಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ನಿವಾಸಿ ಎಸ್ ಎನ್ ಕಬನುರಾಯ ಅವರ ಮಗ ಗಣೇಶ್ ಪ್ರಸಾದ್ (41 ವರ್ಷ) ಎಂಬಾತನು ತನ್ನ ಫೇಸ್‌ಬುಕ್ ಖಾತೆಯಿಂದ ಅತ್ಯಂತ ಪ್ರಚೋದನಕಾರಿ ಕಮೆಂಟ್ ಮಾಡಿದ್ದನು.“ಮಕ್ಕಳ ತಲೆಯನ್ನು ಬ್ರೈನ್ ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂಬ ವಿವಾದಾತ್ಮಕ ಹೇಳಿಕೆಯನ್ನು ಪೋಸ್ಟ್ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಮತ್ತು ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕಲು ಯತ್ನಿಸಿದ ಆರೋಪ ಇವನ ಮೇಲಿದೆ.

ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 15/2026 ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಾರ್ಚ್ 27ರಂದು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಕಲಂ 196 BNS (Bharatiya Nyaya Sanhita): ಧರ್ಮ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು. ಮತ್ತು ಕಲಂ 66 IT ಕಾಯ್ದೆ: ಮಾಹಿತಿ ತಂತ್ರಜ್ಞಾನ ದುರ್ಬಳಕೆ. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ನಮ್ಮ ಕರಾವಳಿ ಭಾಗವು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿನ ಶಾಂತಿ ಕದಡಲು ಸಣ್ಣದೊಂದು ಕಿಡಿ ಸಾಕು ಎನ್ನುವುದನ್ನು ಸಮಾಜಘಾತುಕ ಶಕ್ತಿಗಳು ಅರಿತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕಮೆಂಟ್ ಮಾಡುವ ಮುನ್ನ ಯೋಚಿಸಿರಿ, ನಿಮ್ಮ ಒಂದು ಕಮೆಂಟ್ ಅಥವಾ ಶೇರ್ ಸಮಾಜದ ಶಾಂತಿಯನ್ನು ಹಾಳುಗೆಡವಬಹುದು ಮತ್ತು ನಿಮ್ಮನ್ನು ಜೈಲು ಪಾಲಾಗಿಸಬಹುದು. ಯಾವುದೇ ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಸಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ಇರಲಿ.ಸೈಬರ್ ಕ್ರೈಂ ವಿಭಾಗವು ಪ್ರತಿಯೊಂದು ಪೋಸ್ಟ್ ಮತ್ತು ಕಮೆಂಟ್‌ಗಳ ಮೇಲೆ ತೀವ್ರ ನಿಗಾ ಇರಿಸಿದೆ. ಅನಾಮಧೇಯ ಖಾತೆಗಳ ಮೂಲಕ ದ್ವೇಷ ಹರಡಿದರೂ ತಾಂತ್ರಿಕವಾಗಿ ಪತ್ತೆಹಚ್ಚುವುದು ಈಗ ಸುಲಭವಾಗಿದೆ. ಭಾವೋದ್ವೇಗಕ್ಕೆ ಒಳಗಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಕಾನೂನು ಉಲ್ಲಂಘಿಸುವವರ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.

Continue Reading

Article

ಕಟುಕರ ಕೈಸೇರಿ ಬಚಾವಾದ ಹಾಲು ಕೊಡುವ ಹಸುಗಳು..ವಿಟ್ಲ ಪೊಲೀಸರ ಸಹಕಾರದಲ್ಲಿ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರು ಜನ್ಮ ಪಡೆದ ಗೋವುಗಳು.

Published

on

ಕರಾವಳಿಯಲ್ಲಂತೂ ಅಕ್ರಮ ಗೋಸಾಗಾಟ ರಾಜಕೀಯ ಬೆಳವಣಿಗೆಗೆ ಪೌಷ್ಟಿಕಾಂಶವೆಂದೇ ಹೇಳಬೇಕು. ಅಕ್ರಮ ದನ ಸಾಗಾಟವನ್ನು ತಡೆಹಿಡಿದು ಕಾನೂನಾತ್ಮಕವಾಗಿ ಅಕ್ರಮ ಸಾಗಾಟಗಾರನ್ನು ಪೊಲೀಸರಿಗೊಪ್ಪಿಸುವ ಮಂದಿ ಕೆಲವರಾದರೆ, ಅಕ್ರಮ ಗೋಸಾಗಾಟವನ್ನು ತಡೆಹಿಡಿದು ಸಾಗಾಟಗಾರರೊಡನೆ ಡೀಲು ಕುದುರಿಸಿ ಹಣ ಪಡೆದು ಗೋವು ಸಾಗಾಟಕ್ಕೆ ದಾರಿ ಮಾಡಿಕೊಡುವ ಗೋಪ್ರೇಮಿಗಳು ಕತ್ತಲಿನಲ್ಲಿ ಅಗಾಗ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಅಕ್ರಮ ಗೋ ಸಾಗಾಟವನ್ನು ತಡೆಹಿಡಿದು ಯಾವಾಗ ಪೊಲೀಸರ ವಶಕ್ಕೆ ಸಿಕ್ಕಿತೋ ಈ ಗೋವುಗಳನ್ನು ಏನು ಮಾಡುವುದು ಎಂಬಲ್ಲಿಗೆ ಪೊಲೀಸರು ತಲೆಕೆರೆದು ಕೊಂಡಾಗ ಗೋಪ್ರೇಮಿಗಳ ಫೋನುಗಳು ಪೊಲೀಸರ ಕಿವಿ ತಟ್ಟುತ್ತದೆ. ನಮಗೆ ಗೋವುಗಳನ್ನು ಕೊಡಿ ನಾವು ಮನೆಯಲ್ಲಿ ಆರಾಮವಾಗಿ ಸಾಕುತ್ತೇವೆ ಎಂದು..ಮತ್ತೆ ಅದು ಹೋಗುವುದು ಕಟುಕರ ಕೈಗೆ ಎಂಬುವುದು ಪೊಲೀಸರಿಗೂ ಗೊತ್ತು.! ಅದಕ್ಕಾಗಿ ಅಧಿಕೃತ ಗೋಶಾಲೆಗಳ ಕದ ಬಡಿಯುವುದು ಪೊಲೀಸರ ಸಾಹಸವೇ ಸರಿ. ಚುನಾವಣಾ ಸಂದರ್ಭದಲ್ಲಿ ಗೋ ರಕ್ಷಣೆಯ ಹೆಸರಲ್ಲಿ ಮತ ಬೇಡುವ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರತೀ ಗ್ರಾಮಕ್ಕೊಂದು ಗೋಶಾಲೆ ನಿರ್ಮಾಣ ಮಾಡುವ ವಾಗ್ದಾನ ನೀಡಿತ್ತು. ಆದರೆ ಅಧಿಕಾರ ದಕ್ಕಿದ ಹನ್ನೆರಡು ವರ್ಷಗಳಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆ ಕಸದ ತೊಟ್ಟಿ ಸೇರಿಕೊಂಡಿದೆ. ಗೋವುಗಳು ಭಕ್ಷಕರ ಹೊಟ್ಟೆ ಸೇರಲು ದಾರಿ ಸುಗಮವಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಂಡ್ಯ ಮೂಲದ ಹಿಂದೂ ಯುವಕರಿಬ್ಬರು ಸಾಲೆತ್ತೂರಿನ ಶಾಫಿ ಎಂಬಾತನಿಗೆ ನಕಲಿ ದಾಖಲೆ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಗೋವುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಗೋಸಾಗಾಟ ತಡೆಯಲು ಸಂಘಟನೆಗಳ ಕಾರ್ಯಕರ್ತರು ರೆಡಿಯಾಗಿದ್ದಾರೆಯೇ ವಿನಹ ಆ ಬಳಿಕ ಗೋವುಗಳಿಗೆ ಯಾರು ಗತಿ ಎಂಬುದನ್ನು ಈವರೆಗೂ ಯಾವುದೇ ಸಂಘಟನೆಗಳಾಗಲೀ.. ಗೋರಕ್ಷಣೆ ಬಗ್ಗೆ ವೇದಿಕೆಯಲ್ಲಿ ಮೈಕ್ ಹಿಡಿದು ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷದ ಮುಖಂಡರಾಗಲೀ ಯೋಚಿಸುತ್ತೂ ಇಲ್ಲ..ಸಹಕಾರ ನೀಡುತ್ತಲೂ ಇಲ್ಲ ಎಂಬುದು ನೂರರಷ್ಟು ಸತ್ಯ.

ನೋಡಲಾಗುತ್ತಿಲ್ಲ ಮೂಕ ಪ್ರಾಣಿಗಳ ವೇದನೆ.
ಮೂರು ದಿನಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ರಸ್ತೆಯ ಕರೈ ಎಂಬಲ್ಲಿ ಪತ್ತೆ ಹಚ್ಚಿದ ಗೋವುಗಳ ಪರಿಸ್ಥಿತಿಯೂ ಇದೇ ಆಗಿದೆ. ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಎರಡು ಗೋವುಗಳು ಸಾಕಷ್ಟು ಪ್ರಮಾಣದಲ್ಲಿ ದೈಹಿಕವಾಗಿ ಗಾಯಗೊಂಡಿತ್ತು‌. ಪೊಲೀಸರು ವಶಕ್ಕೆ ಪಡೆದ ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತಿದೆ.
ರಸ್ತೆಯಲ್ಲಿ ತಡೆಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಬಳಿಕ ಗೋಪ್ರೇಮಿ ಕಾರ್ಯಕರ್ತರ ಜವಾಬ್ದಾರಿ ಮುಗಿಯಿತೇ.? ಗೋವುಗಳಿಗೆ ನೀರು, ಆಹಾರ ನೀಡುವುದು ಪೊಲೀಸರ ಜವಾಬ್ದಾರಿಯೇ.? ಪೊಲೀಸ್ ಠಾಣೆಗಳಲ್ಲಿ ಹುಲ್ಲು, ಹಿಂಡಿ ಸೇರಿದಂತೆ ಇನ್ನಿತರ ಪಶುಗಳ ಆಹಾರ ದಾಸ್ತಾನು ಇದೆಯೇ.? ಕಾನೂನು ಪ್ರಕ್ರಿಯೆ ಮುಗಿಯುವ ತನಕ ಗೋವುಗಳನ್ನು ಕಟ್ಟಿಹಾಕಲು ಪೊಲೀಸ್ ಠಾಣೆಯಲ್ಲಿ ಹಟ್ಟಿ ವ್ಯವಸ್ಥೆ ಇದೆಯೇ.? ಇದೆಲ್ಲವನ್ನೂ ಮಾಡಬೇಕಾದವರು ಯಾರು ಎಂಬ ಬಗ್ಗೆ ಈವರೆಗೂ ಯಾರೊಬ್ಬರೂ ಚಿಂತಿಸದಿರುವುದು ಗೋಪ್ರೇಮಿಗಳ ನಕಲಿ ಹಿಂದುತ್ವ ಎಂಬುದನ್ನು ಬಿಡಿಸಿ ಹೇಳಬೇಕೇ.?

ಗೋವುಗಳ ಪಡೆಯಲು ಗೋಶಾಲೆಗಳ ನಕಾರ..
ಪೊಲೀಸರು ವಶಕ್ಕೆ ಪಡೆದ ಗೋವುಗಳನ್ನು ಪಡೆಯಲು ಯಾವುದೇ ಖಾಸಗಿ ಗೋಶಾಲೆಗಳ ವ್ಯವಸ್ಥಾಪಕರು ಮುಂದೆ ಬರುತ್ತಿಲ್ಲ. ಗೋಶಾಲೆಗಳಿಗೆ ಯಾವುದೇ ಸರಕಾರ ಈವರೆಗೂ ಪುಡಿಗಾಸೂ ನೀಡುತ್ತಿಲ್ಲ. ಗೋಶಾಲೆ ನಡೆಸುವವರೂ ಅವುಗಳ ಪಾಲನೆ ಮಾಡಲು ಅನಿವಾರ್ಯವಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದಾರೆ. ಅಕ್ರಮ ಗೋಸಾಗಾಟ ತಡೆಯುವ ಸಂಘಟನೆಗಳು, ಗೋಪ್ರೇಮಿ ರಾಜಕೀಯ ಪುಢಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಗೋಶಾಲೆಗಳ ಬಗ್ಗೆ ಸ್ಪಂದಿಸುವುದು ಬಿಡಿ ಅತ್ತ ಕಡೆ ತಲೆ ಕೂಡ ಹಾಕುತ್ತಿಲ್ಲ ಎಂಬುದು ನೂರರಷ್ಟು ಸತ್ಯ. ಪ್ರತಿಯೊಂದು ಗೋಶಾಲೆಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಗೋವುಗಳು ತುಂಬಿಹೋಗಿದ್ದು ಅವುಗಳ ಪಾಲನೆಗಾಗಿ ಪ್ರತಿನಿತ್ಯ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಸಹಕಾರ ನೀಡುತ್ತಿಲ್ಲ ಎಂಬುದೇ ಗೋಶಾಲೆಗಳು ಗೋವುಗಳ ಪಡೆಯಲು ನಿರಾಕರಿಸಲು ಮುಖ್ಯ ಕಾರಣವಾಗಿದೆ.

ಗ್ರಾಮ ಪಂ, ಪ.ಪಂಚಾಯತ್ ಗೋಶಾಲೆ ನಿರ್ಮಿಸಲಿ..
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಇನ್ನಾದರೂ ತಮ್ಮ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಿಸಲು ಜನಪ್ರತಿನಿಧಿಗಳು ಒತ್ತಾಯಿಸಬೇಕು. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂತಹ ಸಂದರ್ಭದಲ್ಲಿ ಸಿಕ್ಕಿದ ಗೋವುಗಳನ್ನು ಕಾನೂನು ಪ್ರಕ್ರಿಯೆ ಮುಗಿದ ಬಳಿಕ ತಮ್ಮ ಗೋಶಾಲೆಗಳಲ್ಲಿ ಸಲಹುವಂತಾಗಬೇಕು. ಇಲ್ಲವಾದರೆ ಗೋವುಗಳು ಪತ್ತೆಯಾದ ತಕ್ಷಣ ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಸಾಕುವ ನೆಪದಲ್ಲಿ ಠಾಣೆಯಿಂದ ಪಡೆಯುವ ಖಾಸಗಿ ವ್ಯಕ್ತಿಗಳು ಒಂದೆರಡು ದಿನ ಮನೆಯಲ್ಲಿರಿಸಿ ಮತ್ತೆ ಕುಟುಕರಿಗೆ ಸಾವಿರಾರು ರೂಪಾಯಿಗಳಿಗೆ ನೀಡುವ ಮೂಲಕ ದಂಧೆ ನಡೆಸುತ್ತಿದ್ದಾರೆ.

ಅನಾಥವಾದ ಗೋವುಗಳು.
ಸಾಲೆತ್ತೂರು ಕರೈ ಬಳಿ ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ವಶಕ್ಕೆ ಪಡೆದ ಎರಡು ದೊಡ್ಡ ಗಾತ್ರದ ಹಾಲು ಕರೆಯುವ ಹಸುಗಳು ಮೂರು ದಿನಗಳಿಂದ ವಿಟ್ಲ ಠಾಣೆಯಲ್ಲಿ ಆಶ್ರಯ ಪಡೆದಿತ್ತು. ವಿಟ್ಲ ಪರಿಸರದ ಗೋಶಾಲೆಗಳು ಸ್ಥಳಾವಕಾಶ ಮತ್ತು ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ಗೋವುಗಳ ಪಡೆಯಲು ನಿರಾಕರಿಸಿದ್ದವು. ಈ ಮಧ್ಯೆ ಮೂರ್ನಾಲ್ಕು ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ಬೇಕೆಂದು ಹೇಳುತ್ತಾ ಗೋವುಗಳ ಪಡೆಯಲು ಕಸರತ್ತು ನಡೆಸಿದ್ದರು. ಆದರೆ ಕಾನೂನು ಚೌಕಟ್ಟಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ಗೋವುಗಳನ್ನು ನೀಡುವಂತಿಲ್ಲ. ಅದರಿಂದಾಗಿ ನಕಲಿ ಗೋಪ್ರೇಮಿಗಳ ಕಸರತ್ತು ವಿಫಲವಾಗಿದೆ.

ಗೋವುಗಳಿಗೆ ಮರು ಜನ್ಮ ನೀಡಿದ ದೈಗೋಳಿ ಸೇವಾಶ್ರಮ..
ಹಲವು ವರ್ಷಗಳಿಂದ ನೂರಾರು ಅನಾಥ ಬಡ ಜೀವಗಳಿಗೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಬೀದಿ ಬೀದಿ ಅಲೆದಾಡುತ್ತಿದ್ದ ಅದೆಷ್ಟೋ ಜೀವಗಳ ಪಾಲಿಗೆ ಮಂಜೇಶ್ವರ ತಾಲೂಕಿನ ದೈಗೋಳಿಯ ಡಾ.ಉದಯಕುಮಾರ್-ಶಾರದಮ್ಮ ದಂಪತಿಗಳ ನೇತೃತ್ವದ ಶ್ರೀಸಾಯಿ ನಿಕೇತನ ಸೇವಾಶ್ರಮ ಮರು ಜನ್ಮ ನೀಡುತ್ತಿದೆ. ಇದರ ಜೊತೆಗೆ ಅಲ್ಲಿನ ಕಾಮಧೇನು ಗೋಶಾಲೆಯಲ್ಲಿ ಈಗಾಗಲೇ ಐವತ್ತಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ. ಅಲ್ಲೂ ಸ್ಥಳಾವಕಾಶ ದ ಕೊರತೆ ಎದ್ದು ಕಾಣುತ್ತಿದೆ. ಆದರೆ ಗಾಯಗೊಂಡ ಗೋವುಗಳ ಅಸಹಾಯಕ ಪರಿಸ್ಥಿತಿಯನ್ನು ಮನಗಂಡು ಆಶ್ರಯ ನೀಡಲು ವೈದ್ಯ ದಂಪತಿಗಳು ಮುಂದೆ ಬಂದಿರುವುದು ತಮ್ಮ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಪತ್ರಕರ್ತ ವಿ.ಟಿ.ಪ್ರಸಾದ್ ಅವರ ಬೇಡಿಕೆಗೆ ಸ್ಪಂದಿಸಿದ ದೈಗೋಳಿ ಸೇವಾಶ್ರಮದ ವೈದ್ಯ ದಂಪತಿಗಳು ತಮ್ಮ ಕಾಮಧೇನು ಗೋಶಾಲೆಗೆ ವಿಟ್ಲ ಪೊಲೀಸರ ಸಹಕಾರದಲ್ಲಿ ಕರೆದೊಯ್ದ ಎರಡು ಗೋವುಗಳನ್ನು ದಾಖಲಿಸುವ ಮೂಲಕ ಮರು ಜನ್ಮ ನೀಡಿದ್ದಾರೆ.

ಇನ್ನಾದರೂ ಗೋಸಾಗಾಟ ತಡೆಯುವ ಗೋಪ್ರೇಮಿಗಳು ಆ ಬಳಿಕ ಗೋವುಗಳ ಮುಂದಿನ ಜೀವನದ ಬಗ್ಗೆ ಸ್ಪಂದಿಸುವ ಹೃದಯವಂತಿಕೆಯಲ್ಲಿ ಅಸಲಿ ಗೋಪ್ರೇಮಿಗಳಾಗಿ ಸಮಾಜದಲ್ಲಿ ಬದುಕಲಿ ಎಂಬುದು ಹಾರೈಕೆಯಾಗಿದೆ.

ವಿ.ಟಿ.ಪ್ರಸಾದ್‌ ಹಿರಿಯ ಪತ್ರಕರ್ತರು

ಈ ವೀಡಿಯೋ ನೋಡಿ Watch the video

ಕಟುಕರ ಕೈಯಿಂದ ಬಚಾವಾದ ಗೋವುಗಳಿಗೆ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರುಜನ್ಮ

ಈ ನ್ಯೂಸನ್ನೂ ಓದಿ

Continue Reading

Trending

Copyright © 2025 Deevatige