community
ಬೆಂಗಳೂರಿನಲ್ಲಿ ಮಾರ್ಚ್ 18ಕ್ಕೆ ಅದ್ದೂರಿ ‘ಮಹಾ ಪ್ರತ್ಯಂಗಿರಾ ಯಾಗ 2026’: ಸಂಕಷ್ಟಗಳ ನಿವಾರಣೆಗೆ ವಿಶೇಷ ಪೂಜೆ
ಬೆಂಗಳೂರು: ನಗರದ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರ (ರಿ) ಹಾಗೂ ಶ್ರೀ ಪಾಂಡುರಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ‘ಮಹಾ ಪ್ರತ್ಯಂಗಿರಾ ಯಾಗ 2026’ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯುಗಾದಿ ಅಮಾವಾಸ್ಯೆಯ ಪುಣ್ಯದಿನವಾದ ಮಾರ್ಚ್ 18, 2026 ರಂದು ಈ ವಿಶೇಷ ಯಾಗ ನಡೆಯಲಿದೆ.

ವಿಶ್ವದಲ್ಲೇ ಮೊದಲು:
ಡಾ. ಶ್ರೀ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರ ನೇತೃತ್ವದಲ್ಲಿ ಈ ಯಾಗ ನಡೆಯಲಿದ್ದು, ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ 21 ರೀತಿಯ ಕಾಳಿಯರು, 12 ರೀತಿಯ ದುರ್ಗೆಯರು, ದಶಮಹಾವಿದ್ಯೆ ಹಾಗೂ 40 ಪ್ರತ್ಯಂಗಿರಾ ದೇವಿಯರ ಆರಾಧನೆಯೊಂದಿಗೆ ಈ ಮಹಾ ಯಾಗವನ್ನು ನೆರವೇರಿಸಲಾಗುತ್ತಿದೆ.

ಯಾಗದ ಉದ್ದೇಶ:
ಮಾಟ-ಮಂತ್ರ, ಕೆಟ್ಟ ದೃಷ್ಟಿ, ಶತ್ರು ಬಾಧೆ, ಹಣಕಾಸಿನ ತೊಂದರೆ ಹಾಗೂ ಗ್ರಹದೋಷಗಳಿಂದ ಬಳಲುತ್ತಿರುವ ಭಕ್ತರಿಗಾಗಿ ಈ ಯಾಗವನ್ನು ಆಯೋಜಿಸಲಾಗಿದೆ. ಭಕ್ತರು ತಮ್ಮ ಹಸ್ತದಿಂದಲೇ ವಿವಿಧ ಮುದ್ರೆ, ಮಂತ್ರ ಮತ್ತು ತಂತ್ರಗಳ ಮೂಲಕ ಪೂರ್ಣಾಹುತಿ ನೀಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ, ಯುಗಾದಿ ಅಮಾವಾಸ್ಯೆಯ ಪುಣ್ಯದಿನವಾದ 2026ರ ಮಾರ್ಚ್ 18, ಬುಧವಾರದಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ‘ಮಹಾ ಪ್ರತ್ಯಂಗಿರಾ ಯಾಗ’ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಭಕ್ತರು www.sptt.in ವೆಬ್‌ಸೈಟ್ ಸಂಪರ್ಕಿಸಬಹುದು ಅಥವಾ ಪೋಸ್ಟರ್‌ನಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗಳನ್ನು (92421 30010, 88845 22464) ಸಂಪರ್ಕಿಸಲು ಕೋರಲಾಗಿದೆ.

community
ನಾರಾಯಣ ಗುರು ನಿಗಮಕ್ಕೆ ಬಜೆಟ್ ನಲ್ಲಿ ಅನುದಾನವಿಲ್ಲ ; ಸರಕಾರದ ಕ್ರಮಕ್ಕೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ತೀವ್ರ ಅಸಮಾಧಾನ
ಕಾಂಗ್ರೆಸ್ ಸರ್ಕಾರವು ನಾಲ್ಕನೇ ಬಾರಿ ಮಂಡಿಸಿದ ಬಜೆಟ್ ನಲ್ಲೂ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಘೋಷಿಸದೆ ಸಮುದಾಯವನ್ನು ಕಡೆಗಣಿಸಿರುವ ಬಗ್ಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ತೀವ್ರವಾಗಿ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಗಮನಸೆಳೆದ ಪಕ್ಷಾತೀತ ಶಾಸಕರಿಗೆ ಅಭಿನಂದನೆ ಸಲ್ಲಿಸಿದೆ.
ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷದಲ್ಲಿ ನಾಲ್ಕನೇ ಬಜೆಟ್ ಮಂಡಿಸಿದರೂ ನೂತನವಾಗಿ ರಚನೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದಿರುವುದು ಅತ್ಯಂತ ಖೇದಕರ. ಈ ಬಾರಿ ರಾಜ್ಯದ ಈಡಿಗ ಮತ್ತು 26 ಪಂಗಡಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಈ ಬಗ್ಗೆ ನಡೆಸಿದ ಹೋರಾಟವನ್ನು ಸರಕಾರವು ಕಡೆಗಣಿಸಿ ಸಮುದಾಯದ ಜನರಿಗೆ ದ್ರೋಹ ಎಸಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈಡಿಗ ನಿಗಮ ರಚನೆಯಾಗಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದರೂ ನಾರಾಯಣ ಗುರು ಅಭಿವೃದ್ಧಿ ಕೋಶಕ್ಕೆ ಮೀಸಲಿಟ್ಟಿದ್ದ 10 ಕೋಟಿ ರೂಪಾಯಿ ಹಣವನ್ನು ಮಾತ್ರ ವರ್ಗಾವಣೆ ಮಾಡಲಾಗುವುದು ಎಂದು ಸರಕಾರ ನೀಡಿರುವ ಹೇಳಿಕೆ ಈ ಸಮಾಜಕ್ಕೆ ಮಾಡಿದ ಅಗೌರವ. ಕನಿಷ್ಠ 500 ಕೋಟಿ ರೂ ಅನುದಾನ ಒದಗಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿ ಇತ್ತೀಚೆಗೆ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಕಲಬುರಗಿಯ ಚಿತ್ತಾಪುರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ 42 ದಿನಗಳ ಕಾಲ 708 ಕೀ . ಮೀ ಪಾದಯಾತ್ರೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ್ ತಂಗಡಗಿಯವರ ಮೂಲಕ ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ನೀಡದಿರುವುದು ರಾಜ್ಯದ 12 ಜಿಲ್ಲೆಗಳಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ ಸಮುದಾಯವನ್ನು ತೀವ್ರವಾಗಿ ಕಡೆಗಣಿಸಿದಂತಾಗಿದೆ. ಸಮಾಜದ ಹಿರಿಯ ಮುಖಂಡರಾದ ಮಾಲಿಕಯ್ಯ ಗುತ್ತೇದಾರ್ ಮತ್ತು ಎಚ್ ಆರ್ ಶ್ರೀನಾಥ್ ದಣಿ ಗಳು ಮುಖ್ಯಮಂತ್ರಿ ಅವರ ಜೊತೆ ನೇರವಾಗಿ ಮಾತನಾಡಿ ಚರ್ಚೆ ಮಾಡಿದ್ದರೂ ಬಜೆಟ್ಟಿನಲ್ಲಿ ಯಾವುದೇ ಘೋಷಣೆಗಳಿಲ್ಲದೆ ಇರುವುದು ಸರಕಾರದ ನಿರ್ಲಕ್ಷಕ್ಕೆ ಉದಾಹರಣೆಯಾಗಿದೆ. ಸಮುದಾಯಕ್ಕಾಗಿ ರಚನೆ ಮಾಡಿದ ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಯಾವುದೇ ರಾಜಕೀಯ ಪಕ್ಷಪಾತ ಧೋರಣೆ ಮಾಡದೆ ರಾಜ್ಯದ ಹಿಂದುಳಿದ ಸಮುದಾಯದ ನಾಲ್ಕನೇ ಅತಿ ದೊಡ್ಡ ಪಂಗಡದ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಿಂದುಳಿದ ಖಾತೆಯ ಸಚಿವರು ತಕ್ಷಣ 500 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿ ಸಮುದಾಯದ ಇತರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್, ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್ ನಾಗೂರ್,ಅಶೋಕ್ ಗುತ್ತೇದಾರ್ ಬಡದಾಳ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್, ಡಾ.ಸದಾನಂದ ಪೆರ್ಲ, ರಾಜೇಶ್ ಡಿ ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಸುರೇಶ್ ಗುತ್ತೇದಾರ್ ಮಟ್ಟೂರ್, ಇ. ತಿಮ್ಮಪ್ಪ ಗಂಗಾವತಿ, ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಗುತ್ತೇದಾರ ಹೊಳಕುಂದ, ಪ್ರವೀಣ್ ಜತ್ತನ್, ಸುರೇಶ್ ಗುತ್ತೇದಾರ್ ಕರದಾಳ, ಬಿ.ಎಂ ರಾವೂರು, ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರ ಪಕ್ಷಾತೀತ ಧ್ವನಿಗೆ ಮೆಚ್ಚುಗೆ :
ವಿಧಾನಸಭೆಯ ಪ್ರಶ್ನೋತ್ತರ ವೇಳೆ ಮಾ. 11ರಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ವಿಷಯ ಪ್ರಸ್ತಾಪಿಸಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕ ಅನುದಾನ ಬಿಡುಗಡೆ ಆಗಿಲ್ಲ. ನಿಗಮದ ರಚನೆಯ ಉದ್ದೇಶವಾದರೂ ಏನು ಎಂದು ಸರಕಾರವನ್ನು ಪ್ರಶ್ನಿಸಿದಾಗ ಸಚಿವ ತಂಗಡಗಿಯವರು ನಾರಾಯಣ ಗುರು ಅಭಿವೃದ್ಧಿ ಕೋಶದ ಹತ್ತು ಕೋಟಿ ನೀಡುವುದಾಗಿ ಉತ್ತರಿಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಸುನಿಲ್ ಕುಮಾರ್ ಕನಿಷ್ಠ 50 ಕೋಟಿ ನಿಗಮಕ್ಕೆ ಇಡಬೇಕು ಎಂದು ಒತ್ತಾಯಿಸಿದರು ಈ ನಡುವೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಲಿಂಗಾಯತ ನಿಗಮ ಗಳಿಗೆಲ್ಲ 200 ರಿಂದ 300 ಕೋಟಿ ಕೊಡುತ್ತೀರಿ. ನಮ್ಮ ಸಮುದಾಯಕ್ಕೆ 100 ಕೋಟಿ ಯಾಕೆ ಕೊಡುವುದಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದರು. ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ 26 ಪಂಗಡಗಳಲ್ಲಿರುವ ಹಿಂದುಳಿದ ಜನ ಸಮುದಾಯಕ್ಕೆ ಸರಕಾರ ಸ್ಪಂದಿಸದಿರುವುದು ದುಃಖಕರ. ಬಿಲ್ಲವರ ಬೆಂಬಲದಿಂದ ಕರಾವಳಿಯ ಶಾಸಕರು ವಿಧಾನಸಭೆಗೆ ಬರುವಂತಾಗಿದೆ. ಅವರ ಋಣ ನಮ್ಮ ಮೇಲೆ ಇದೆ. ನಿಗಮಕ್ಕೆ ಅನುದಾನ ಘೋಷಣೆ, ಕುಲಕಸುಬು ಸೇಂದಿಯನ್ನು ಮಹಾರಾಷ್ಟ್ರ, ತೆಲಂಗಾಣ, ಕೇರಳದ ರಾಜ್ಯಗಳಲ್ಲಿರುವಂತೆ ಮುಂದುವರಿಸಲು ಅವಕಾಶ ನೀಡುವುದು, ಕುಲಕಸುಬು ಕಳೆದುಕೊಂಡು ಇದೀಗ ಕಲ್ಯಾಣ ಕರ್ನಾಟಕ ಭಾಗದಿಂದ 1,25,000 ಕ್ಕೂ ಸಂತ್ರಸ್ಥರಾಗಿ ಹೆಚ್ಚಿನ ಜನ ಮಹಾರಾಷ್ಟ್ರ ಗೋವಾ ಹೈದರಾಬಾದ್ ಬೆಂಗಳೂರಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಸರಕಾರ ತಕ್ಷಣ ನಿಗಮಕ್ಕೆ ಹಣ ಬಿಡುಗಡೆ ಮಾಡಿ ಈ ಸಮುದಾಯದ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮಾತನಾಡಿ ಬಿಲ್ಲವರು ಮತ್ತು ಈಡಿಗರ ಕಲ್ಯಾಣದ ದೃಷ್ಟಿಯಿಂದ ರಚನೆ ಮಾಡಿದ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು. ಹಿಂದುಳಿದ ಸಮುದಾಯದ ಬಗ್ಗೆ ಶಾಸಕರು ಪಕ್ಷಾತೀತವಾಗಿ ಪಟ್ಟು ಹಿಡಿದು ಸರ್ಕಾರದ ಮೇಲೆ ಒತ್ತಡ ಹಾಕಿರುವುದಕ್ಕೆ ಹೋರಾಟ ಸಮಿತಿಯು ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಮಗೆ ಅನುದಾನ ಬೇಡವೇ? ಸ್ಪೀಕರ್ ಗೆ ಪ್ರಶ್ನಿಸಿದ ಸುನಿಲ್
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಸಚಿವ ತಂಗಡಗಿ ಮತ್ತು ವಿಧಾನಸಭೆಯ ಉಪನಾಯಕರಾದ ಸುನಿಲ್ ಮಧ್ಯೆ ಬಿಸಿ ಬಿಸಿ ವಾಗ್ವಾದ ನಡೆಯುತ್ತಿದ್ದಾಗ ಸುನಿಲ್ ಕುಮಾರ್ ಸ್ಪೀಕರ್ ಯುಟಿ ಖಾದರ್ ಅವರಿಗೆ ನೇರವಾಗಿ ಅನುದಾನ ನಿಮಗೆ ಬೇಡವೇ? ಎಂದು ಪ್ರಶ್ನಿಸಿದರು. ಸ್ಪೀಕರ್ ನಯವಾಗಿ ಬೇಕು ಎಂದು ಹೇಳಿದಾಗ ಹಾಗಾದರೆ ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಾರಾಯಣ ಗುರು – ಗಾಂಧಿ ಸಂಗಮದ ಶತಮಾನೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ತಾವು ತೋರಿಸಿದ ಉತ್ಸಾಹ ಮತ್ತು ನಾರಾಯಣ ಗುರು, ನಾರಾಯಣ ಗುರು ಎಂದು ಅಲ್ಲಿ ಉಲ್ಲೇಖಿಸಿ ಗೌರವ ಸೂಚಿಸಿದ್ದೀರಿ. ಆ ಕಾರ್ಯಕ್ರಮಕ್ಕೆ ಮಾಡಿದ ವೆಚ್ಚದಷ್ಟು ನಿಗಮಕ್ಕೆ ಕೊಡದಿರುವುದು ಸರಿಯೇ? ತಾವು ಸಚಿವರಿಗೆ ಹೇಳಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಹಿಂದುಳಿದ ವರ್ಗಗಳ ಸಚಿವರನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
Bantawala
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮ.ಜನಪ್ರತಿನಿಧಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ..ರಸ್ತೆ ದುರವಸ್ಥೆಯಿಂದಾಗಿ 32ಬಡ ಕುಟುಂಬಗಳು ಹೈರಾಣ..
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂಭತ್ತನೇ ವಾರ್ಡಿನ ಬರ್ಕಳ, ಪೆರ್ಲದಬೈಲು ಪರಿಸರದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಮೂವತ್ತೆರಡು ಬಡ ಕುಟುಂಬಗಳು, ಇತಿಹಾಸ ಪ್ರಸಿದ್ಧ ಪೆರ್ಲದಬೈಲು ಶ್ರೀ ಮಾರಿಯಮ್ಮ ದೈವಸ್ಥಾನ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಸುಮಾರು ಇನ್ನೂರು ವರ್ಷಗಳಿಂದ ಬೀಡಿ ಕಟ್ಟಿ ಕೂಲಿ ಕೆಲಸ ಮಾಡಿ ಬದುಕುತ್ತಿರುವ ಕುಟುಂಬಗಳಿಗೆ ಮಳೆಗಾಲ ಬಂತೆಂದರೆ ಎಲ್ಲಿಲ್ಲದ ನಡುಕ, ಭಯ ಆವರಿಸುತ್ತಿದೆ. ಈ ಭಾಗದ ವಯೋವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಶಾಲಾ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಸಂಚರಿಸಲು ವಾಹನ ಸಂಚಾರ ಬಿಡಿ ಕನಿಷ್ಠ ನಡೆದು ಹೋಗಲು ಕೂಡಾ ರಸ್ತೆ ದುರವಸ್ಥೆಯಿಂದಾಗಿ ಅಸಾಧ್ಯವಾಗಿದೆ.

ತೀರಾ ಇಕ್ಕಟ್ಟಾದ ಘಾಟಿ ರಸ್ತೆಯಂತಿರುವ ಮಣ್ಣಿನ ಏರಿಳಿತದ ಕಣಿವೆ ರಸ್ತೆಯಲ್ಲಿ ಮಳೆ ಬಂತೆಂದರೆ ವಾಹನಗಳು ಸಂಚರಿಸುವಂತಿಲ್ಲ. ಅನಾರೋಗ್ಯ ಪೀಡಿತರನ್ನು ಪ್ರಾಣ ಉಳಿಯಬೇಕಾದರೆ ಬಟ್ಟೆಯಲ್ಲಿ ಸುತ್ತಿ ಹೊತ್ತುಕೊಂಡು ಹೋಗುವುದೊಂದೇ ದಾರಿಯಾಗಿದೆ.

ಚುನಾವಣೆ ಸಂದರ್ಭ ಮನೆ ಮುಂದೆ ನಿಂತು ಕೈ ಮುಗಿಯುತ್ತಾ ಕಾಂಕ್ರೀಟ್ ರಸ್ತೆ ಮಾಡಿಕೊಡುವ ಭರವಸೆ ನೀಡುವ ಪುಢಾರಿಗಳು ಚುನಾವಣಾ ಫಲಿತಾಂಶ ಘೋಷಣೆಯ ಬಳಿಕ ಐದು ವರ್ಷಗಳ ಕಾಲ ಅತ್ತ ಕಡೆ ಅಪ್ಪಿತಪ್ಪಿಯೂ ತಲೆ ಹಾಕಿಯೂ ಮಲಗುತ್ತಿಲ್ಲ ಎಂಬುದು ಈ ಭಾಗದ ಬಡ ಕುಟುಂಬಗಳ ಮಾತಾಗಿದೆ.
ಮುಂದಿನ ಮಳೆಗಾಲದ ಮೊದಲು ಬರ್ಕಳ, ಪೆರ್ಲದಬೈಲು ರಸ್ತೆ ಅಭಿವೃದ್ಧಿ ಮಾಡುವ ಮೂಲಕ ಈ ಭಾಗದ ಹಲವು ವರ್ಷಗಳ ಕನಸು ನನಸಾಗಿಸುವ ಇಚ್ಛಾಶಕ್ತಿಯೂ ನಮ್ಮಲ್ಲಿದೆ ಎಂಬುದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿ ತೋರಿಸಬೇಕಾಗಿದೆ.
Belthangady
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿಗಳ ಒಕ್ಕಲೆಬ್ಬಿಸುವ ನಿರ್ಧಾರ ಕೈಬಿಡಿ ;ಸರ್ಕಾರಕ್ಕೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಎಚ್ಚರಿಕೆ..
ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶತಮಾನಗಳಿಂದ ವಾಸಿಸುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಸರ್ಕಾರದ ನಿರ್ಧಾರ ಮೂರ್ಖತನದಿಂದ ಕೂಡಿದೆ. ಸರ್ಕಾರ ತಕ್ಷಣವೇ ತನ್ನ ದುಡುಕು ನಿರ್ಧಾರ ಕೈಬಿಡದಿದ್ದರೆ ಆದಿವಾಸಿಗಳು ಬದುಕುವ ಹಕ್ಕುಗಳ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಘಟಕ ಕಟುಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ.

ಶತಮಾನಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಆದಿವಾಸಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡುವುದು ಮೀನನ್ನು ನೀರಿನಿಂದ ಮೇಲಕ್ಕೆ ತೆಗೆದಂತೆ. ಮಾನವ- ಕಾಡುಪ್ರಾಣಿ ಸಂಘರ್ಷ ತಪ್ಪಿಸಲು ಇಂತಹ ಮೂರ್ಖತನದ ನಿರ್ಧಾರ ಕೈಗೊಳ್ಳುವ ಬಗ್ಗೆ ತಿಳಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು. ಅರಣ್ಯದ ಮಕ್ಕಳನ್ನು ಒಕ್ಕಲೆಬ್ಬಿಸುವ ಬದಲಾಗಿ ಅವರಿಗೆ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿರ್ಧಾರ ತೆಗೆದುಕೊಳ್ಳಬೇಕು. ಅಮಾಯಕ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಮೀಸಲಿಟ್ಟ 300 ಕೋಟಿ ರೂಪಾಯಿಗಳನ್ನು ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟು ವಿದ್ಯುತ್, ಕುಡಿಯುವ ನೀರು ಮತ್ತು ರಸ್ತೆಯಂತಹ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಒದಗಿಸಲಿ ಎಂದು ಸಂಚಾಲಕ ಶೇಖರ್ ಲಾಯಿಲ ಒತ್ತಾಯಿಸಿದ್ದಾರೆ.

ಸ್ವಾತಂತ್ರ್ಯ ದೊರಕಿ 79 ವರ್ಷಗಳಾದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಬಡ ಆದಿವಾಸಿಗಳ ಮೇಲೆ ಅಧಿಕಾರದ ದರ್ಪದಿಂದ ನಿರ್ದಾಕ್ಷಿಣ್ಯವಾಗಿ , ಬಲವಂತವಾಗಿ , ದಬ್ಬಾಳಿಕೆಯ ಮೂಲಕ ಅವರನ್ನು ಒಕ್ಕಲೆಬ್ಬಿಸಲು ಮುಂದಾದರೆ ಮುಂದಿನ ದಿನಗಳಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಕೈಗೊಳ್ಳುವುದು ಅನಿವಾರ್ಯವಾದೀತು.

ಮುಂದೆ ಇದರಿಂದಾಗುವ ಎಲ್ಲಾ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ. ಹಿಂದೊಮ್ಮೆ ಒಕ್ಕಲೆಬ್ಬಿಸಲು ಹೊರಟು ನಕ್ಸಲ್ ಚಟುವಟಿಕೆಗಳನ್ನು ತಾನಾಗಿಯೇ ಆಹ್ವಾನಿಸಿಕೊಂಡ ಸರ್ಕಾರಗಳು ಈಗ ಮತ್ತೆ ಒಕ್ಕಲೆಬ್ಬಿಸಲು ಹೊರಟು ಯಾವ ಸಂದೇಶ ನೀಡುತ್ತಿದೆ ಎಂದು ಪ್ರಶ್ನಿಸಿರುವ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಅವರು “ಬೆಂಕಿಯೊಂದಿಗೆ ಯಾವತ್ತೂ ಸರಸ-ಸಲ್ಲಾಪ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
-
crime1 day agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
