Connect with us

Bantawala

ಭಕ್ತರ ನೋವಿನ ಮದ್ಯೆಯೇ ಅಷ್ಟಕುಲ ನಾಗದೇವರ ಚರಪ್ರತಿಷ್ಠೆ;ಶತಮಾನಗಳ ಇತಿಹಾಸವಿರುವ ನಾಗಬನ ಧ್ವಂಸ ಪ್ರಕರಣ; ಮೂಲ ಸ್ಥಳದಲ್ಲಿಯೇ ನಾಗಪ್ರತಿಷ್ಠೆ ನಡೆಯುವ ಘಳಿಗೆಗಾಗಿ ಸಂಕಲ್ಪ ಮಾಡಿದ ಭಕ್ತರು.

Published

on

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಬೊಂಡಾಳ ಸೇನೆರೆಬೈಲು ಎಂಬಲ್ಲಿ ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ಪವಿತ್ರ ನಾಗಬನ ಹಾಗೂ ರಕ್ತೇಶ್ವರೀ ದೈವದ ಸಾನಿಧ್ಯವನ್ನು ಕಮರ್ಷಿಯಲ್ ಯೋಜನೆಗಳಿಗಾಗಿ ಧ್ವಂಸಗೊಳಿಸಿರುವ ಘಟನೆ ಭಕ್ತಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅನ್ಯಾಯದ ವಿರುದ್ಧ ಸಿಡಿದೆದ್ದಿರುವ ಬೊಳ್ಳೆಮಾರ್ ಬಿಲ್ಲವ ಕಿರೋಡಿಯನ್ ಕುಟುಂಬಸ್ಥರು ಹಾಗೂ ಸ್ಥಳೀಯ ಭಕ್ತರು, ದೈವಜ್ಞರ ಸೂಚನೆಯಂತೆ ಆ ಪ್ರದೇಶದಲ್ಲಿಯೇ ಪರ್ಯಾಯ ಜಾಗದಲ್ಲಿ ನಾಗದೇವರ ಚರಪ್ರತಿಷ್ಠೆಯನ್ನು ನೆರವೇರಿಸಿದ್ದಾರೆ. “ಸತ್ಯ ಶ್ರೀಮಂತಿಕೆಯ ಮುಂದೆ ಸೋಲಬಹುದು, ಆದರೆ ಸಾಯುವುದಿಲ್ಲ” ಎಂದು ನಂಬಿರುವ ಭಕ್ತ ಸಮೂಹ, ಮೂಲ ಸ್ಥಳದಲ್ಲಿಯೇ ನಾಗಪ್ರತಿಷ್ಠೆ ನಡೆಯುವವರೆಗೆ ನಾಗನಿಗೆ ಒದಗಿಬಂದಿರುವ ಸಂಕಷ್ಟವನ್ನು ಒಂದು ಮಹಾನ್‌ ತಪಸ್ಸಿನಂತೆ ಸ್ವೀಕರಿಸಿ ನಮ್ಮ ಸಂಕಲ್ಪ ಈಡೇರುವ ತನಕ ಗ್ರಾಮದ ಮತ್ತು ತರವಾಡಿನ ದೈವದೇವರು ಮತ್ತು ಅಷ್ಟಕುಲ ನಾಗದೇವರಿಗೆ ಪ್ರತಿನಿತ್ಯ ಪ್ರಾರ್ಥಿಸಿ ಆ ಶುಭಘಳಿಗೆಗಾಗಿ ಬೇಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ:
ಬೊಂಡಾಳ ಸೇನೆರೆಬೈಲಿನಲ್ಲಿ ನೂರಾರು ಕುಟುಂಬಗಳ ಆರಾಧ್ಯ ಸಾನಿಧ್ಯವಾಗಿದ್ದ ನಾಗಬನ ಮತ್ತು ರಕ್ತೇಶ್ವರೀ ಕಟ್ಟೆಯನ್ನು ಭೂಮಿ ಖರೀದಿದಾರರಾದ ಸತೀಶ್ ಕುಮಾರ್ ಅವರು, ಪುರೋಹಿತ ಕೇಶವ ಅಶಾಂತಿ ಎಂಬವರ ಮಾರ್ಗದರ್ಶನದಲ್ಲಿ ಜೆಸಿಬಿ ಬಳಸಿ ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ. ಶತಮಾನಗಳ ಇತಿಹಾಸವಿರುವ ನೈಸರ್ಗಿಕ ನಾಗಬನ ಹಾಗೂ ಪವಿತ್ರ ಕೆರೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ನಾಶಪಡಿಸಿರುವುದು ಸಾವಿರಾರು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ.

ಘಟನೆಯ ಹಿನ್ನೆಲೆ ಮತ್ತು ದೈವದ್ರೋಹದ ಆರೋಪ:
ಬೊಳ್ಳೆಮಾರ್ ಬಿಲ್ಲವ ಕಿರೋಡಿಯನ್ ಕುಟುಂಬಸ್ಥರು ಮತ್ತು ಭಕ್ತರು ಸೇರಿ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದ ಈ ಸಾನಿಧ್ಯವನ್ನು, ಯಾವುದೇ ಮುನ್ಸೂಚನೆ ನೀಡದೆ ರಾತ್ರೋರಾತ್ರಿ ಜೆಸಿಬಿ ಬಳಸಿ ನೆಲಸಮ ಮಾಡಲಾಗಿತ್ತು. ನಾಗಬನದಲ್ಲಿದ್ದ ಬೃಹದಾಕಾರದ ಮರಗಳನ್ನು ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ಕಡಿದು ಸಾಗಿಸಲಾಗಿದೆ. ಅನ್ಯಧರ್ಮೀಯರಿಂದ ಇಂತಹ ಘಟನೆ ನಡೆದಿದ್ದರೆ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತಿದ್ದವು. ಆದರೆ, ಸ್ವಧರ್ಮದವರೇ ಸಾನಿಧ್ಯಗಳನ್ನು ನಾಶಪಡಿಸುತ್ತಿದ್ದರೂ ಧರ್ಮರಕ್ಷಕರು ಹಾಗೂ ಧಾರ್ಮಿಕ ಮುಖಂಡರು ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ನೊಂದ ಕುಟುಂಬಸ್ಥರು ನ್ಯಾಯಕ್ಕಾಗಿ ಪತ್ರಿಕಾಗೋಷ್ಠಿ ನಡೆಸಿದರೂ, ಕಾನೂನು ಹೋರಾಟ ಮಾಡಿದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೈವಜ್ಞರ ಮೊರೆ ಹೋಗಿದ್ದರು.

ದೈವಜ್ಞರ ಎಚ್ಚರಿಕೆ ಮತ್ತು ಪ್ರಶ್ನಾ ಚಿಂತನೆ:
ಘಟನೆಗೆ ಸಂಬಂಧಿಸಿದಂತೆ ಫೆ.15ರಂದು ನಡೆದ ಪ್ರಶ್ನಾ ಚಿಂತನೆಯಲ್ಲಿ, “ನಾಗಬನವನ್ನು ಸ್ಥಳಾಂತರಿಸುವಂತಿಲ್ಲ, ಎಲ್ಲಿ ನಾಶವಾಗಿದೆಯೋ ಅದೇ ಸ್ಥಳದಲ್ಲಿ ಪುನರ್ ಪ್ರತಿಷ್ಠೆ ನಡೆಯಬೇಕು. ಇಲ್ಲವಾದಲ್ಲಿ ಸಂಕಷ್ಟಗಳು ಎದುರಾಗಲಿವೆ” ಎಂದು ದೈವಜ್ಞರು ಎಚ್ಚರಿಸಿದ್ದರು. ಈ ಬಗ್ಗೆ ನಾನು ಮುಂದುವರಿಯುವುದಿಲ್ಲ ಎಂದು ದೈವಜ್ಞರಲ್ಲಿ ಮಾತುಕೊಟ್ಟ ಅಶಾಂತಿಯು ಮಾತು ತಪ್ಪಿಸಿದಲ್ಲದೆ, ಆತನ ನೇತೃತ್ವದಲ್ಲಿ ನಾಗನ ಶಿಲೆಗಳನ್ನು ಖರೀದಿದಾರನ ಅಣತಿಯಂತೆ ಫೆ. 27ರಂದು ನಾಗನಿಗೆ ಸಂಬಂಧಿಸದ ಜಾಗದಲ್ಲಿ ಪ್ರತಿಷ್ಠೆ ಮಾಡಲು ಮುಂದಾದ ಘಟನೆಯೂ ನಡೆದಿದೆ. ನಾಗಬನವನ್ನು ಸ್ಥಳಾಂತರಿಸಬಹುದು ಎಂದು ತಪ್ಪು ಮಾರ್ಗದರ್ಶನ ನೀಡಿದ ಪುರೋಹಿತ ಕೇಶವ ಅಶಾಂತಿ ಅವರ ನಡೆಗೆ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಸ್ವಾರ್ಥಕ್ಕಾಗಿ ಧರ್ಮನಿಷ್ಠೆಯನ್ನು ಮಾರಿಕೊಂಡ ಇಂತಹ ಮಾರ್ಗದರ್ಶಕರಿಂದಲೇ ಇಂದು ದೈವಿಕ ಶಕ್ತಿಗಳಿಗೆ ಸಂಕಷ್ಟ ಎದುರಾಗಿದೆ” ಎಂದು ಭಕ್ತರು ದೂರಿದ್ದಾರೆ. ಫೆಬ್ರವರಿ 27 ರಂದು ಸಂಜೆ ನಾಗಶಿಲೆಗಳನ್ನು ಸ್ಥಳಾಂತರಕ್ಕೆ ಯತ್ನಿಸುವ ಪ್ರಕ್ರಿಯೆಗಳು ನಡೆಯುತ್ತಿರುವಂತೆಯೇ ಪೊಲೀಸರ ಸಮ್ಮುಖದಲ್ಲೇ ಭಕ್ತರು ಅಶಾಂತಿಯನ್ನು ತರಾಟೆಗೆ ತೆಗೆದುಕೊಂಡಾಗ ನಾನು ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ನಾಗ ಪ್ರತಿಷ್ಠೆಯನ್ನು ಮಾಡುವುದಿಲ್ಲ, ನಾಗಶಿಲೆಗಳನ್ನು ಇಲ್ಲಿಂದ ತೆರವುಗೊಳಿಸಬೇಕೆಂದು ಹೇಳಿದ್ದರು.

ಅನಾದಿಕಾಲದ ಆರಾಧಕ ವಂಶದ ಸಹೋದರರಿಂದ ನಾಗನಿಗೆ ನೆಲೆ
ತಾವು ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ನಾಗನ ನೆಲೆ ನಾಶವಾದಾಗ ಬೀದಿಗೆ ಬಿದ್ದು ಹೋರಾಟ ಮಾಡಿದ ಭಕ್ತರಿಗೆ ಕೊನೆಗೂ ಜಯ ಲಭಿಸಿದೆ. ಭಕ್ತರ ಆಕ್ರೋಶಕ್ಕೆ ಮಣಿದು ಕೈತಪ್ಪಿ ಹೋದ ನಾಗನ ಶಿಲೆಗಳನ್ನು ನಾಗಾರಾಧಕರಿಗೆ ನೀಡಲು ಒಪ್ಪಿಗೆ ನೀಡಿ ಗಡುವು ವಿಧಿಸಿದ್ದಾರೆ. ತಕ್ಷಣ ಎಚ್ಚೆತ್ತ ದೈವಾರಾಧಕರು ನಾಗಶಿಲೆಗಳಿಗೆ ನೆಲೆ ನೀಡುವ ಬಗ್ಗೆ ದೈವಜ್ಞರ ಮೊರೆಹೋಗಿದ್ದಾರೆ. ದೈವಜ್ಞರು ಸ್ಥಳದಲ್ಲಿ ಯಾವ ರೀತಿಯಲ್ಲಿ ಚಿಂತನೆ ನಡೆಸಿ ಈ ಹಿಂದೆ ತಿಳಿಸಿದ್ದಾರೋ ಅದೇ ರೀತಿಯಲ್ಲಿ ಮತ್ತೆ ತಿಳಿಸಿ ಆ ಪ್ರದೇಶವನ್ನು ಬಿಟ್ಟು ಹೋಗುವುದಕ್ಕೆ ನಾಗ ದೇವರು ಸಿದ್ದನಿಲ್ಲ. ಅದೇ ಪರಿಸರದಲ್ಲಿ ಹೆಚ್ಚು ದೂರವಾಗದಂತೆ ( ಸಾನಿಧ್ಯವನ್ನು ನೋಡಿಕೊಂಡಿರುವಂತೆ) ಜಾಗವನ್ನು ಹುಡುಕಿ ಎಂದು ನಿರ್ದೇಶಿಸಿದ್ದಾರೆ. ಅದರಂತೆ ತಕ್ಷಣ ಸಭೆ ಸೇರಿದ ಭಕ್ತರು ವಿಷಯವನ್ನು ಪ್ರಸ್ತಾಪಿಸಿದಾಗ ಬೊಂಡಾಳ ಜಯಶಂಕರ್‌ ಅವರ ಮುಂದಾಳುತ್ವದಲ್ಲಿ ಅನಾದಿಕಾಲದಿಂದಲೂ ಆರಾಧನೆ ಮಾಡುತ್ತಿದ್ದ ವಂಶಸ್ಥರಾದ ದಿ. ರಾಮ ಪೂಜಾರಿಯವರ ಮಕ್ಕಳಾದ ಚಿದಾನಂದ ಪೂಜಾರಿ ಮತ್ತು ಶಿವಾನಂದ ಪೂಜಾರಿಯವರು ಮುಂದೆ ಬಂದು ನಾಗನಿಗೆ ಅವರ ದೈವಸ್ಥಾನದ ಪಕ್ಕದಲ್ಲಿಯೇ ಜಾಗ ನೀಡಲು ಒಪ್ಪಿದ್ದಾರೆ. ಈ ವಿಷಯವನ್ನು ದೈವಜ್ಞರಲ್ಲಿ ಪ್ರಶ್ನಿಸಲಾಗಿ ನಾಗದೇವರ ಅನುಗ್ರಹ ಒದಗಿ ಬಂದಿದ್ದು, ದೈವಸ್ಥಾನದ ಕನ್ಯಾಭಾಗದಲ್ಲಿ ತಾತ್ಕಾಲಿಕ ಕಟ್ಟೆ ನಿರ್ಮಿಸಿ ಚರ ಪ್ರತಿಷ್ಠೆ ಮಾಡುವಂತೆ ತಿಳಿಸಿದ್ದಾರೆ.

ಶ್ರದ್ಧಾಭಕ್ತಿಯಿಂದ ನಡೆದ ಚರಪ್ರತಿಷ್ಠೆ:
ನಾಗಬನ ನಾಶವಾದ ಪರಿಸರದಲ್ಲಿಯೇ ಆರಾಧನೆ ಮುಂದುವರಿಸಲು ಭಕ್ತರು ನಿರ್ಧರಿಸಿದ್ದಾರೆ. ದೈವಜ್ಞರ ಮಾರ್ಗದರ್ಶನದಲ್ಲಿ ಮತ್ತು ಕ್ಷೇತ್ರದ ತಂತ್ರಿಗಳಾದ ಶಂಕರ ಹೊಳ್ಳ ನಾಗತ್ತಿಮಾರ್ ಅವರ ದಿವ್ಯ ಉಪಸ್ಥಿತಿಯಲ್ಲಿ ಮಾರ್ಚ್ 8ರಂದು ಸಮೀಪದ ( ನಾಗಬನ ನಾಶವಾದ ಸ್ಥಳದಿಂದ ಸುಮಾರು 100 ಮೀಟರ್‌ ದೂರದ ದೈವಸ್ಥಾನದ ಆವರಣದೊಳಗಡೆ ) ಪಂಜರ್ಲಿ ಕಲ್ಲುರ್ಟಿ ದೈವಸ್ಥಾನದ ಕನ್ಯಾಭಾಗದಲ್ಲಿ ಶಿಲ್ಪಿಗಳಿಂದ ವಾಸ್ತು ಆಧಾರಿತವಾದ ತಾತ್ಕಾಲಿಕ ಕಟ್ಟೆ ನಿರ್ಮಿಸಿ, ಅಷ್ಟಕುಲ ನಾಗದೇವರು ಹಾಗೂ ರಕ್ತೇಶ್ವರೀ ದೈವದ ಚರಪ್ರತಿಷ್ಠೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ನೂತನ ಕಟ್ಟೆಯಲ್ಲಿ ನಾಗಬ್ರಹ್ಮ, ನಾಗರಾಜ, ನಾಗಕನ್ನಿಕೆ ಸೇರಿದಂತೆ ಅಷ್ಟಕುಲ ನಾಗದೇವರು ಮತ್ತು ರಕ್ತೇಶ್ವರೀ ದೈವಗಳಿಗೆ ಪೂಜೆ ಸಲ್ಲಿಸಲಾಯಿತು. “ಮೂಲ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠೆಯ ಕಾಲ ಕೂಡಿಬರುವವರೆಗೆ ಇಲ್ಲೇ ವಾರ್ಷಿಕ ಆರಾಧನೆಗಳು ನಡೆಯಲಿವೆ” ಎಂದು ಕುಟುಂಬಸ್ಥರು ಈ ಸಂದರ್ಭದಲ್ಲಿ ಸಂಕಲ್ಪ ಮಾಡಿದರು.

Continue Reading
Advertisement

award

ಮಂಗಳೂರು ವಿಶ್ವವಿದ್ಯಾಲಯ: ಸುಶ್ಮಿತ ಸಿ.ಎಚ್. ಅವರಿಗೆ ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪ್ರದಾನ

Published

on

ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಶ್ಮಿತ ಸಿ.ಎಚ್. ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.

ಅವರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೃಷ್ಣಕುಮಾರ್ ಜಿ. ಅವರ ಮಾರ್ಗದರ್ಶನದಲ್ಲಿ “Antidiabetic activities of Syzygium hemisphericum (Wight) Alston and Syzygium kanarense (Talbot) Raizada” (ಸಿಜಿಜಿಯಂ ಹೆಮಿಸ್ಫೆರಿಕಂ ಮತ್ತು ಸಿಜಿಜಿಯಂ ಕೆನರೆನ್ಸ್ ಸಸ್ಯಗಳ ಮಧುಮೇಹ ವಿರೋಧಿ ಚಟುವಟಿಕೆಗಳು) ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದರು.

2025ರ ಅಕ್ಟೋಬರ್‌ನಲ್ಲಿ ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಇವರಿಗೆ, 2026ರ ಮಾರ್ಚ್ 28ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ 44ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಯಿತು.

ಡಾ. ಸುಶ್ಮಿತ ಅವರು ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಕಣಿಯೂರು ಸೂರ್ಯನಾರಾಯಣ ಭಟ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲದ ಉದ್ಯೋಗಿ ಶ್ರೀಮತಿ ಆಶಾಪಾರ್ವತಿ ದಂಪತಿಯ ಪುತ್ರಿ. ಇವರು ಯುವ ಉದ್ಯಮಿ ಶ್ರೀ ಕೃಷ್ಣ ವಿಕಾಸ್ ಅವರ ಪತ್ನಿಯಾಗಿದ್ದಾರೆ.

ತಮ್ಮ ಈ ಶೈಕ್ಷಣಿಕ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ-ತಾಯಿ, ಸಹೋದರಿ ಹಾಗೂ ಪತಿಯವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಡಾ. ಸುಶ್ಮಿತ ಅವರು ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದಲ್ಲೇ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Continue Reading

Bantawala

ಘನತ್ಯಾಜ್ಯ ವಿಲೇವಾರಿಯಲ್ಲಿ ಗೋಲ್ಮಾಲ್..ಸ್ಮಶಾನದಂತಾದ ವಿಟ್ಲದ ಘನತ್ಯಾಜ್ಯ ಘಟಕ..ಬೆಂಕಿ ಇಟ್ಟು ಸುಡುವ ಮೂಲಕ ಜನರ ಆರೋಗ್ಯದಲ್ಲಿ ಚೆಲ್ಲಾಟ..ಸಾಮಾಜಿಕ ಹೋರಾಟಗಾರನಿಂದ ಪೊಲೀಸ್ ಠಾಣೆಗೆ ದೂರು..

Published

on

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ವಿಲೇವಾರಿ ಮಾಡಬೇಕಾಗಿದ್ದ ಜವಾಬ್ದಾರಿಯುತ ಅಧಿಕಾರಿ, ಸಿಬ್ಬಂದಿಗಳು ತ್ಯಾಜ್ಯಗಳ ರಾಶಿಗೆ ಘಟಕದ ಆವರಣದಲ್ಲೇ ಬೆಂಕಿಹಾಕಿ ಸುಡುವ ಮೂಲಕ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ.

ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ಕಳೆದ ಮೂರು ತಿಂಗಳಿಂದ ಘನತ್ಯಾಜ್ಯ ವಿಲೇವಾರಿಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಸಾಮಾಜಿಕ ಹೋರಾಟಗಾರ ಧನಂಜಯ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಸೇರಿದಂತೆ ಇತರ ಘನತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗಿತ್ತು. ಅದಕ್ಕಾಗಿಯೇ ಅಂಗಡಿ ಮಾಲಿಕರಿಂದ, ಜನ ಸಾಮಾನ್ಯರಿಂದ ಹಣ ವಸೂಲಿ ಕೂಡಾ ಮಾಡುತ್ತಿದ್ದಾರೆ. ಆದರೆ ಮೂಟೆ ಮೂಟೆ ಘನತ್ಯಾಜ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಘಟಕದ ಆವರಣದಲ್ಲೇ ಸ್ಮಶಾನದಲ್ಲಿ ಹೆಣಗಳನ್ನು ಸುಡುವ ರೀತಿಯಲ್ಲಿ ಸುಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಏಳುತ್ತಿರುವ ವಿಷಕಾರಿ ಹೊಗೆಯು ಪರಿಸರಕ್ಕೆ, ಪರಿಸರ ನಿವಾಸಿಗಳ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ, ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ವೈಜ್ಞಾನಿಕವಾಗಿ ಸಂಶೋಧನೆಯಲ್ಲಿ ಸಾಬೀತಾಗಿದೆ.

ಈ ಅಕ್ರಮ ಚಟುವಟಿಕೆಯು ಪರಿಸರ ಸಂರಕ್ಷಣಾ ಕಾಯ್ದೆ 1986 (Environment Protection Act 1986), ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 (Air Pollution Act 1981) ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 2016 ರ (Plastic Waste Management Rules 2016) ನೇರ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನವನ್ನು ಘನತ್ಯಾಜ್ಯ ವಿಲೇವಾರಿಗೆ ಬಳಸದೆ ದುರ್ಬಳಕೆ ಮಾಡಲಾಗುತ್ತಿದೆ ಪಟ್ಟಣ ಪಂಚಾಯತಿನಲ್ಲಿ ಪ್ಲಾಸ್ಟಿಕ್‌ ವಿಲೇವಾರಿಗೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದರೂ ಅದನ್ನು ಸರಿಯಾಗಿ ಬಳಕೆ ಮಾಡದೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಆರೋಗ್ಯಾಧಿಕಾರಿ, ಸುಪರ್‌ವೈಸರ್‌ ಮತ್ತು ಕೌನ್ಸಿಲರ್‌ ಇವರೆಲ್ಲರೂ ಸೇರಿ ಸರಕಾರದಿಂದ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡು ಪ್ಲಾಸ್ಟಿಕನ್ನು ಸುಟ್ಟು ಶಿಕ್ಷಾರ್ಹ ಅಪರಾಧವನ್ನೆಸಗುತ್ತಿದ್ದಾರೆ ಎಂದು ದೂರುದಾರರು ಗಂಭೀರವಾಗಿ ಆರೋಪಿಸಿದ್ದಾರೆ.

ಈ ಅಕ್ರಮ ಹಾಗೂ ಅವೈಜ್ಞಾನಿಕ ವಿಲೇವಾರಿಯು ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಗಳ ನೇರ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನವನ್ನು ಸರಿಯಾಗಿ ಬಳಸದೆ ಗೋಲ್ಮಾಲ್ ನಡೆಸುವ ಮೂಲಕ ಸ್ಪಷ್ಟವಾಗಿ ದುರ್ಬಳಕೆ ಮಾಡಲಾಗುತ್ತಿದೆ ಮತ್ತು ಈ ಬಗ್ಗೆ ಪ್ರಶ್ನಿಸಿದರೆ ಸಂಬಂಧಿಸಿದ ಅಧಿಕಾರಿ ಚೇತನ್ ಎಂಬವರು ಬೇಜವಾಬ್ದಾರಿ ಹಾಗೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ದೂರುದಾರರು ವಿವರಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಸದ್ಯ ವಿಟ್ಲ ಪೊಲೀಸರು ಈ ದೂರಿನ ಕುರಿತು ಎನ್‌ಸಿಆರ್ (NCR) ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Bantawala

ಮಾಣಿಲ ಶಿರಿಯಾ ನದಿಗೆ ಸೇತುವೆ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸ್ಥಳ ಪರಿಶೀಲನೆ

Published

on

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿಲ ಗ್ರಾಮದ ಶಿರಿಯಾ ನದಿಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಬೇಕೆಂಬ ದಶಕಗಳ ಕಾಲದ ಬೇಡಿಕೆಗೆ ಕೊನೆಗೂ ಜೀವಕಳೆ ಬಂದಿದೆ. ಈ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಶಕಗಳ ಬೇಡಿಕೆಗೆ ಸ್ಪಂದನೆ
ಮಾಣಿಲ ಭಾಗದ ಜನರು ಕೇರಳದ ಪ್ರದೇಶಗಳಿಗೆ ತೆರಳಲು ಮತ್ತು ಗಡಿ ಭಾಗದ ಸಂಪರ್ಕ ಸುಗಮಗೊಳಿಸಲು ಈ ಸೇತುವೆಯ ನಿರ್ಮಾಣ ಅತ್ಯಂತ ಅವಶ್ಯಕವಾಗಿದೆ.

ಪ್ರಸ್ತುತ ಮಳೆಗಾಲದಲ್ಲಿ ಹಾಗೂ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಜನರು ನದಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದ ಸ್ಥಳೀಯರು, ಕೂಡಲೇ ಸುಸಜ್ಜಿತ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.

ತಾಂತ್ರಿಕ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ
ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು:”ಈ ಭಾಗದ ಜನರ ದಶಕಗಳ ಬೇಡಿಕೆಯ ಬಗ್ಗೆ ಗಂಭೀರವಾಗಿ ಗಮನ ಹರಿಸಲಾಗುವುದು. ಸೇತುವೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿ ಹಾಗೂ ಅಂದಾಜು ಪಟ್ಟಿಯನ್ನು (Estimation) ಸಿದ್ಧಪಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಮನವರಿಕೆ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸಚಿವರಿಗೆ ಈ ಯೋಜನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಗಡಿ ಭಾಗದ ಅಭಿವೃದ್ಧಿ ಹಾಗೂ ಜನರ ಸಂಕಷ್ಟ ನಿವಾರಣೆಗೆ ಈ ಸೇತುವೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಣಿಲ ಗ್ರಾಮ ಪಂಚಾಯತ್‌ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಶ್ರೀಧರ್ ಬಾಳೆಕಲ್ಲು , ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು

Continue Reading

Trending

Copyright © 2025 Deevatige