Connect with us

Article

ಮಾನಸಿಕ ಅಸ್ವಸ್ಥತೆಯಿಂದ ಅನಾಥನಾಗಿ ಸುತ್ತಾಡುತ್ತಿದ್ದ ಅಪರಿಚಿತ..ದೈಗೋಳಿ ಸಾಯಿ ನಿಕೇತನ ಸೇರಿ ಆರು ತಿಂಗಳಲ್ಲೇ ಮರುಜನ್ಮ ಪಡೆದು ಮನೆ ಸೇರಿದ ತಮಿಳುನಾಡಿನ ನಟರಾಜ..

Published

on

ದಿನಬೆಳಗಾದರೆ ಸಾಕು.. ಪ್ರತಿನಿತ್ಯ ರಸ್ತೆಯಲ್ಲಿ ಅಲೆದಾಡುತ್ತಾ ಭಿಕ್ಷೆ ಬೇಡಿ ಸಿಕ್ಕ ಸಿಕ್ಕ ವಸ್ತುಗಳನ್ನು ತಿಂದು ಬದುಕುತ್ತಿರುವ ಅದೆಷ್ಟೋ ಬಡ ಜೀವಗಳು ನಮ್ಮೆಲ್ಲರ ಕಣ್ಮುಂದೆ ಬರುತ್ತಿವೆ. ರಸ್ತೆ ಬದಿಯ ಮರಗಳು, ಬಸ್ ತಂಗುದಾಣಗಳು, ಅಂಗಡಿಗಳ ಜಗಲಿಗಳೇ ಆಶ್ರಯ ತಾಣಗಳಾಗುತ್ತಿವೆ. ಇಂತವರನ್ನು ಕಂಡರೆ ಛೀ..ಥೂ.. ಎನ್ನುತ್ತಾ ದೂರ ಸರಿಯುವವರೇ ಇಂದಿನ ಕಾಲದಲ್ಲಿ ಹೆಚ್ಚಾಗಿದ್ದಾರೆ. ಮಾನಸಿಕ ಅಸ್ವಸ್ಥರನ್ನು, ಭಿಕ್ಷುಕರನ್ನು ಮುಟ್ಟಿದರೆ ನಮಗೆಲ್ಲಿ ರೋಗ ಬರುತ್ತೋ ಎಂಬ ಭಯ ಒಂದೆಡೆಯಾದರೆ..ಅವನನ್ನು ಮುಟ್ಟಿ ನನ್ನ ಬಟ್ಟೆಗೇಕೆ ಕೊಳೆ ಮಾಡಬೇಕೆಂಬ ಅಹಂ, ತಾತ್ಸಾರ ಮತ್ತೊಂದೆಡೆ ಇಂದಿನ ಜನರಲ್ಲಿ ಆಳವಾಗಿ ಬೇರು ಬಿಟ್ಟಿದ್ದು ಮಾನವೀಯತೆ ಎಂಬ ಶಬ್ದವನ್ನೇ ಇಂದಿನ ಕಾಲಘಟ್ಟದಲ್ಲಿ ಅಳಿಸಿ ಹಾಕಲಾಗಿದೆ ಎಂದರೂ ಅತಿಶಯೋಕ್ತಿಯಲ್ಲ. ಇಂತಹ ಕಾಲಘಟ್ಟದಲ್ಲಿಮಾನವೀಯತೆ ಎಂಬುದನ್ನು ಉಳಿಸಿ-ಬೆಳೆಸುತ್ತಾ ಹಲವು ವರ್ಷಗಳಿಂದ ಮಾನವ ಧರ್ಮವನ್ನು ಜಗತ್ತಿಗೆ ಸಾರುತ್ತಿರುವ ಮಂಜೇಶ್ವರ ತಾಲೂಕು ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದ ಕಾರ್ಯಕರ್ತರು ಬೀದಿಪಾಲಾದ ಅದೆಷ್ಟೋ ನಿರ್ಗತಿಕರಿಗೆ ಬದುಕು ಕಲ್ಪಿಸಿಕೊಡುತ್ತಿರುವ ಮಾನವೀಯ ನೈಜ ವರದಿಗಳನ್ನು ಆಗಾಗ ಕೇಳುತ್ತಲೇ ಇದ್ದೇವೆ. ಇಂತಹುದೇ ಒಂದು ಬೀದಿಪಾಲಾದ ವ್ಯಕ್ತಿಗೆ ಆರೇ ತಿಂಗಳಿನಲ್ಲಿ ಮರುಜನ್ಮ ನೀಡಿ ಆತನನ್ನು ಮನೆ ಸೇರಿಸಿ ಕೃತಾರ್ಥರಾದ ಮಾನವೀಯ ಸ್ಪಂದನಾತ್ಮಕವಾದ ಘಟನೆ ನಡೆದಿದೆ.
ಈ ಮೂಲಕ ದೈಗೋಳಿ ಸೇವಾಶ್ರಮ ಎಂಬುದು ಮಂದಿರ-ಮಸೀದಿ-ಚರ್ಚುಗಳಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳಿಗಿಂತ ಶ್ರೇಷ್ಠವಾಗಿದೆ ಎಂಬುವುದು ಜನಮನದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಆರು ತಿಂಗಳ ಹಿಂದೆ ಮಂಜೇಶ್ವರ ತಾಲೂಕಿನ ವರ್ಕಾಡಿ ಬೇಕರಿ ಜಂಕ್ಷನ್ ನಲ್ಲಿ ಮರದ ಅಡಿಯಲ್ಲಿ ಹಲವು ದಿನಗಳಿಂದ ಅನಾಥನಾಗಿ ಕಾಲ ಕಳೆಯುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಸ್ಥಳೀಯ ಶ್ರೀ ಗೋಡ್ವಿನ್ ಲೋಬೋ ಹಾಗೂ ಮಿತ್ರರ ಮಾಹಿತಿಯಂತೆ ಸಾಯಿ ನಿಕೇತನ ಸೇವಾಶ್ರಮದ ಕಾರ್ಯಕರ್ತರು ತಮ್ಮ ಆಶ್ರಮಕ್ಕೆ ದಾಖಲಿಸಿಕೊಂಡರು.

ಮಾನಸಿಕ ಹಾಗೂ ದೈಹಿಕವಾಗಿ ಜರ್ಝರಿತರಾಗಿದ್ದ ಅವರು ಸೂಕ್ತ ಊಟೋಪಚಾರ, ಚಿಕಿತ್ಸೆ, ಗುಂಪು ಚಟುವಟಿಕೆ, ಮಾನಸಿಕ ಸಮಾಲೋಚನೆ , ಪ್ರೀತಿಯ ವಾತಾವರಣ ಇತ್ಯಾದಿಗಳಿಂದ ನಿಧಾನವಾಗಿ ಚೇತರಿಸಿಕೊಂಡರು. ಬಳಿಕ ಅವರ ಹೆಸರು, ಮನೆ ಮಂದಿಯ ವಿವರ, ವಿಳಾಸ ಇತ್ಯಾದಿಗಳನ್ನು ಸಂಗ್ರಹಿಸಲಾಯಿತು. ಕೇರಳ ಸರಕಾರದ ಪ್ರತ್ಯೂಷಾ (ಮರಳಿ ಮನೆಗೆ) ಯೋಜನೆಯ ಪ್ರಕಾರ ನಟರಾಜ ಅವರನ್ನು ಮನೆ ಸೇರಿಸಲು ಅಧಿಕೃತ ಸಂಸ್ಥೆಯಾದ ಮಂಜೇಶ್ವರದ Snehalaya Mangalore ಸ್ನೇಹಾಲಯ ಕ್ಕೆ ತಾ.26-01-2026 ರಂದು ಕಳುಹಿಸಿಕೊಡಲಾಗಿದ್ದು ಸರಕಾರದ ಯೋಜನೆಯ ಪ್ರಕಾರ ಅಲ್ಲಿಂದ 05-02-2026 ರಂದು ನಟರಾಜ ಅವರು ತಮ್ಮ ಮನೆ ಮಂದಿಯನ್ನು ಸೇರಿಕೊಂಡರು.


ಹಲವು ತಿಂಗಳು/ ವರ್ಷಗಳ ಕಾಲ ಸಾಯಿ ನಿಕೇತನ ಸೇವಾಶ್ರಮ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಅವರ ಕುಟುಂಬದೊಂದಿಗೆ ಸೇರಿ ಉತ್ತಮ ಜೀವನ ಹೊಂದುವಂತೆ ಮಾಡುವ ನಿಸ್ವಾರ್ಥ ಸೇವೆಗೆ ಭಗವಂತ ಇನ್ನಷ್ಟು ಅನುಗ್ರಹ ನೀಡಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ. ಬೀದಿಯಲ್ಲಿ ನಿರ್ಗತಿಕರಾಗಿರುವ ಇನ್ನಷ್ಟು ಜನ ತಮ್ಮ ಮಾನಸಿಕ ಸಮತೋಲನವನ್ನು ಗಳಿಸಿ ಅವರ ಮನೆ/ಕುಟುಂಬಸ್ಥರನ್ನು ತಲುಪುವಂತಾಗಲಿ ಎನ್ನುವುದೇ ನಮ್ಮ ನಿಮ್ಮೆಲ್ಲರ ಆಶಯವಲ್ಲವೇ.?‌


ಸಾಯಿ ನಿಕೇತನ ಸೇವಾಶ್ರಮಕ್ಕೆ ನೀಡುವ ಪ್ರತಿಯೊಂದು ಕೊಡುಗೆಯೂ ನಿಜವಾದ ಜನರ ಜೀವನದಲ್ಲಿ ಬದಲಾವಣೆಯ ಅಲೆಗಳನ್ನು ಸೃಷ್ಟಿಸುತ್ತದೆ. ಕಳೆದ 10 ವರ್ಷಗಳಿಂದ ಬೀದಿಗಳಲ್ಲಿ ಸಿಲುಕಿರುವ ನಿರಾಶ್ರಿತರನ್ನು ರಕ್ಷಿಸಲು, ಅವರ ಆರೋಗ್ಯವನ್ನು ಪುನಃಸ್ಥಾಪಿಸಲು, ಕುಟುಂಬಗಳನ್ನು ಮತ್ತೆ ಒಂದುಗೂಡಿಸಲು ಮತ್ತು ಭವಿಷ್ಯವನ್ನು ಪುನರ್ನಿರ್ಮಿಸಲು ಸೇವಾಶ್ರಮಕ್ಕೆ ದಾನಿಗಳು ಸಹಾಯ ಸಹಕಾರವನ್ನು ನಾವು ನೀಡಲೇ ಬೇಕು. ಈ ಮೂಲಕ ಸಂಕಷ್ಟಕ್ಕೊಳಗಾದವರ ನೋವಿನಲ್ಲಿ ನಾವೂ ಸಹಕರಿಸೋಣ.


ವಿ.ಟಿ.ಪ್ರಸಾದ್

Continue Reading
Advertisement

Article

ಹೊಸ ಭರವಸೆಯ ಹೊಸ ವರ್ಷ: ‘ದೀವಟಿಗೆ ನ್ಯೂಸ್’ ಕಡೆಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

Published

on

ಚೈತ್ರ ಮಾಸದ ಆಗಮನ, ಪ್ರಕೃತಿಯಲ್ಲಿ ಹೊಸ ಚಿಗುರು, ಕೋಗಿಲೆಯ ಗಾಯನ… ಇವೆಲ್ಲವೂ ಹೊತ್ತು ತರುವುದು ಸೌರಮಾನ ಯುಗಾದಿಯ ಸಂಭ್ರಮವನ್ನು. ಈ ಶುಭ ಸಂದರ್ಭದಲ್ಲಿ ‘ದೀವಟಿಗೆ ನ್ಯೂಸ್’ ತನ್ನೆಲ್ಲಾ ಪ್ರೀತಿಯ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಕ್ರೋಧಿ ನಾಮ ಸಂವತ್ಸರದ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದ

ಬೆಳಕಿನ ಹಾದಿಯಲ್ಲಿ ‘ದೀವಟಿಗೆ’ಯ ಪಯಣ

ಹೆಸರೇ ಸೂಚಿಸುವಂತೆ, ಕತ್ತಲೆಯನ್ನು ದೂರಮಾಡಿ ಸತ್ಯದ ಬೆಳಕನ್ನು ಪಸರಿಸುವ ಉದ್ದೇಶದೊಂದಿಗೆ ಆರಂಭವಾದ ನಮ್ಮ ‘ದೀವಟಿಗೆ ನ್ಯೂಸ್’ ಇಂದು ಓದುಗರ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆದು ನಿಂತಿರುವುದು ನಮ್ಮ ಹೆಮ್ಮೆ. ವೇಗವಾಗಿ ಸುದ್ದಿ ನೀಡುವುದರ ಜೊತೆಗೆ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಿಮಗೆ ತಲುಪಿಸುತ್ತಿದ್ದೇವೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ನಾವು ಸದಾ ಮುಂದು. ಅಲ್ಪ ಅವಧಿಯಲ್ಲಿಯೇ ಸಾವಿರಾರು ಓದುಗರನ್ನು ತಲುಪಿರುವ ನಮ್ಮ ಈ ಬೆಳವಣಿಗೆಗೆ ನಿಮ್ಮ ಪ್ರೋತ್ಸಾಹವೇ ಅಡಿಪಾಯ.

“ಬೆಲ್ಲದ ಸಿಹಿ, ಬೇವಿನ ಕಹಿ ಎರಡನ್ನೂ ಸಮನಾಗಿ ಸ್ವೀಕರಿಸುವಂತೆ ಪ್ರೇರೇಪಿಸುವ ಯುಗಾದಿಯು, ನಿಮ್ಮ ಜೀವನದಲ್ಲಿ ಬರೀ ಸುಖ-ಸಂತೋಷವನ್ನೇ ತುಂಬಲಿ.”

ಜೀವನವೆಂದರೆ ಸುಖ-ದುಃಖಗಳ ಸಮ್ಮಿಶ್ರಣ. ಈ ಯುಗಾದಿಯು ನಿಮ್ಮ ಬದುಕಿನ ಕಷ್ಟಗಳನ್ನೆಲ್ಲಾ ದೂರ ಮಾಡಿ, ಯಶಸ್ಸಿನ ಸಿಹಿಯನ್ನು ಉಣಿಸಲಿ. ಕೃಷಿ, ವ್ಯಾಪಾರ, ಶಿಕ್ಷಣ ಹಾಗೂ ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿರುವ ನಮ್ಮ ಓದುಗರಿಗೆ ಈ ವರ್ಷ ಅದೃಷ್ಟದ ವರ್ಷವಾಗಲಿ ಎಂದು ಆಶಿಸುತ್ತೇವೆ.

ನಿಮ್ಮ ನೆಚ್ಚಿನ ದೀವಟಿಗೆ ನ್ಯೂಸ್, ಮುಂದಿನ ದಿನಗಳಲ್ಲಿ ಇನ್ನು ಹತ್ತು ಹಲವು ಹೊಸ ಬದಲಾವಣೆಗಳೊಂದಿಗೆ, ತಂತ್ರಜ್ಞಾನದ ಸುಧಾರಣೆಯೊಂದಿಗೆ ನಿಮ್ಮ ಮನೆಮನಗಳನ್ನು ತಲುಪಲು ಸಜ್ಜಾಗಿದೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಹೀಗೆಯೇ ಮುಂದುವರಿಯಲಿ ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!

Continue Reading

Article

ಸಂಚಾರ ನಿಯಮ ಉಲ್ಲಂಘನೆ: ಸುಳ್ಯದ ಯುವಕನಿಗೆ 15 ದಿನಗಳ ‘ಸಮುದಾಯ ಸೇವೆ’ಯ ವಿನೂತನ ಶಿಕ್ಷೆ!

Published

on

ಸಂಚಾರ ನಿಯಮಗಳನ್ನು ಪದೇ ಪದೇ ಗಾಳಿಗೆ ತೂರುವವರಿಗೆ ಸುಳ್ಯದ ನ್ಯಾಯಾಲಯವು ಒಂದು ಕಠಿಣ ಹಾಗೂ ಸಮಾಜಮುಖಿ ಸಂದೇಶ ರವಾನಿಸಿದೆ. ಸಂಚಾರ ನಿಯಮ ಉಲ್ಲಂಘಿಸಿದ ಯುವಕನೊಬ್ಬನಿಗೆ ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಸಾರ್ವಜನಿಕವಾಗಿ ನಿಂತು ‘ಸಮುದಾಯ ಸೇವೆ’ ಮಾಡುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಐತಿಹಾಸಿಕ ತೀರ್ಪು ನೀಡಿದೆ.

ಘಟನೆಯ ಸಾರಾಂಶ
ಸುಳ್ಯದ ನಿವಾಸಿಯಾದ ರಕ್ಷಿತ್ ಜಿ. ಎಂಬಾತ ಕಳೆದ ಮಾರ್ಚ್ 12ರಂದು ಪಟ್ಟಣದ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದನು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿಪಿ ಅವರು ಐ ಎಮ್‌ ವಿ ಆ್ಯಕ್ಟ್ ಅಡಿಯಲ್ಲಿ ಕಲಂ 119 R/w 177, 184, 194(C) ರಂತೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ನ್ಯಾಯಾಲಯದ ‘ಜಾಗೃತಿ’ಯ ಪಾಠ!
ಪ್ರಕರಣದ ವಿಚಾರಣೆ ನಡೆಸಿದ ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು, ಆರೋಪಿತನ ನಡವಳಿಕೆಯಲ್ಲಿ ಬದಲಾವಣೆ ತರಲು ಒಟ್ಟು 3,000 ರೂಪಾಯಿ ನಗದು ದಂಡ ವಿಧಿಸಿದೆ. ಚಾಲನಾ ಪರವಾನಿಗೆಯನ್ನು (Driving License) ಮೂರು ತಿಂಗಳ ಕಾಲ ರದ್ದುಗೊಳಿಸಿದೆ. ಮಾತ್ರವಲ್ಲದೆ ಮಾರ್ಚ್ 15 ರಿಂದ 29 ರವರೆಗೆ ಒಟ್ಟು 15 ದಿನಗಳ ಕಾಲ ಸುಳ್ಯ ಪಟ್ಟಣದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ಜಾಗೃತಿಯ ಫಲಕ ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂಬ ಸಮುದಾಯ ಸೇವೆ (ವಿಶಿಷ್ಟ ಶಿಕ್ಷೆ)ಯನ್ನು ವಿಧಿಸಿದೆ.

ಇದೇ ಮೊದಲಲ್ಲ ! ರಾಜ್ಯದ ಇತರ ಜಿಲ್ಲೆಗಳಲ್ಲೂ ಇಂತಹ ಮಾದರಿ ಶಿಕ್ಷೆ!
ಸುಳ್ಯದಲ್ಲಿ ನಡೆದ ಈ ಘಟನೆಯು ಅಪರೂಪದ್ದಾಗಿದ್ದರೂ, ಕರ್ನಾಟಕದ ಇತರ ನ್ಯಾಯಾಲಯಗಳು ಈ ಹಿಂದೆ ಇಂತಹದ್ದೇ ‘ಸಮುದಾಯ ಸೇವೆ’ಯ ತೀರ್ಪುಗಳನ್ನು ನೀಡಿ ಸಾರ್ವಜನಿಕರ ಗಮನ ಸೆಳೆದಿವೆ: ಕಳೆದ ವರ್ಷ ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ, ನ್ಯಾಯಾಲಯವು ಒಂದು ವಾರ ಕಾಲ ನಗರದ ಪ್ರಮುಖ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಸಹಕರಿಸುವಂತೆ ಆದೇಶ ನೀಡಿತ್ತು. ಬೆಂಗಳೂರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ಅಥವಾ ತೀವ್ರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಲ್ಲಿ, ನಗರದ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (TMC) ಕುಳಿತು ಸಂಚಾರ ನಿಯಮಗಳ ಕುರಿತ ವಿಡಿಯೋಗಳನ್ನು ವೀಕ್ಷಿಸುವ ಅಥವಾ ಪಾರ್ಕ್‌ಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಶಿಕ್ಷೆಯನ್ನು ವಿಧಿಸಿದ ಉದಾಹರಣೆಗಳಿವೆ. ಮೈಸೂರುನಲ್ಲಿ ಹೆಲ್ಮೆಟ್ ರಹಿತ ಚಾಲನೆ ಮತ್ತು ಅತೀ ವೇಗದ ಚಾಲನೆಗೆ ಸಂಬಂಧಿಸಿದಂತೆ, ಯುವಕರಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ (Trauma Center) ಅಪಘಾತಕ್ಕೊಳಗಾದವರಿಗೆ ನೆರವಾಗುವ ಮೂಲಕ ‘ರಸ್ತೆ ಸುರಕ್ಷತೆಯ ಬೆಲೆ’ ಏನೆಂದು ತಿಳಿಯುವಂತೆ ಆದೇಶಿಸಿದ ನಿದರ್ಶನಗಳಿವೆ.

ಸಾರ್ವಜನಿಕ ವಲಯದಲ್ಲಿ ಶ್ಲಾಘನೆ
ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಕಟ್ಟಿ ಕೈತೊಳೆದುಕೊಳ್ಳುವವರೇ ಹೆಚ್ಚು. ಆದರೆ, “ದುಡ್ಡಿನ ದಂಡಕ್ಕಿಂತ ನೈತಿಕ ದಂಡ ದೊಡ್ಡದು” ಎಂಬ ತತ್ವದಡಿ ನ್ಯಾಯಾಲಯ ನೀಡುವ ಇಂತಹ ಶಿಕ್ಷೆಗಳು ತಪ್ಪಿತಸ್ಥರಲ್ಲಿ ಪಶ್ಚಾತ್ತಾಪ ಮೂಡಿಸುತ್ತವೆ. ಪೊಲೀಸ್ ಇಲಾಖೆಯ ಚುರುಕಾದ ಕ್ರಮ ಮತ್ತು ನ್ಯಾಯಾಲಯದ ಈ ಸಮಾಜಮುಖಿ ತೀರ್ಪು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆ ಸುರಕ್ಷತೆ ಎಂಬುದು ಕೇವಲ ಕಾನೂನಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಸುಳ್ಯದ ಈ ಘಟನೆಯು ಇಡೀ ರಾಜ್ಯಕ್ಕೆ ‘ಸಂಸ್ಕಾರಯುತ ಸಂಚಾರ’ದ ಸಂದೇಶ ರವಾನಿಸಿದೆ. “ಕೇವಲ ದಂಡ ವಿಧಿಸುವುದಲ್ಲದೆ, ಸಮಾಜದಲ್ಲಿ ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ನ್ಯಾಯಾಲಯವು ಈ ‘ಸಮುದಾಯ ಸೇವೆ’ಯ ಆದೇಶ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.”

Continue Reading

Article

ಕಟುಕರ ಕೈಸೇರಿ ಬಚಾವಾದ ಹಾಲು ಕೊಡುವ ಹಸುಗಳು..ವಿಟ್ಲ ಪೊಲೀಸರ ಸಹಕಾರದಲ್ಲಿ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರು ಜನ್ಮ ಪಡೆದ ಗೋವುಗಳು.

Published

on

ಕರಾವಳಿಯಲ್ಲಂತೂ ಅಕ್ರಮ ಗೋಸಾಗಾಟ ರಾಜಕೀಯ ಬೆಳವಣಿಗೆಗೆ ಪೌಷ್ಟಿಕಾಂಶವೆಂದೇ ಹೇಳಬೇಕು. ಅಕ್ರಮ ದನ ಸಾಗಾಟವನ್ನು ತಡೆಹಿಡಿದು ಕಾನೂನಾತ್ಮಕವಾಗಿ ಅಕ್ರಮ ಸಾಗಾಟಗಾರನ್ನು ಪೊಲೀಸರಿಗೊಪ್ಪಿಸುವ ಮಂದಿ ಕೆಲವರಾದರೆ, ಅಕ್ರಮ ಗೋಸಾಗಾಟವನ್ನು ತಡೆಹಿಡಿದು ಸಾಗಾಟಗಾರರೊಡನೆ ಡೀಲು ಕುದುರಿಸಿ ಹಣ ಪಡೆದು ಗೋವು ಸಾಗಾಟಕ್ಕೆ ದಾರಿ ಮಾಡಿಕೊಡುವ ಗೋಪ್ರೇಮಿಗಳು ಕತ್ತಲಿನಲ್ಲಿ ಅಗಾಗ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಅಕ್ರಮ ಗೋ ಸಾಗಾಟವನ್ನು ತಡೆಹಿಡಿದು ಯಾವಾಗ ಪೊಲೀಸರ ವಶಕ್ಕೆ ಸಿಕ್ಕಿತೋ ಈ ಗೋವುಗಳನ್ನು ಏನು ಮಾಡುವುದು ಎಂಬಲ್ಲಿಗೆ ಪೊಲೀಸರು ತಲೆಕೆರೆದು ಕೊಂಡಾಗ ಗೋಪ್ರೇಮಿಗಳ ಫೋನುಗಳು ಪೊಲೀಸರ ಕಿವಿ ತಟ್ಟುತ್ತದೆ. ನಮಗೆ ಗೋವುಗಳನ್ನು ಕೊಡಿ ನಾವು ಮನೆಯಲ್ಲಿ ಆರಾಮವಾಗಿ ಸಾಕುತ್ತೇವೆ ಎಂದು..ಮತ್ತೆ ಅದು ಹೋಗುವುದು ಕಟುಕರ ಕೈಗೆ ಎಂಬುವುದು ಪೊಲೀಸರಿಗೂ ಗೊತ್ತು.! ಅದಕ್ಕಾಗಿ ಅಧಿಕೃತ ಗೋಶಾಲೆಗಳ ಕದ ಬಡಿಯುವುದು ಪೊಲೀಸರ ಸಾಹಸವೇ ಸರಿ. ಚುನಾವಣಾ ಸಂದರ್ಭದಲ್ಲಿ ಗೋ ರಕ್ಷಣೆಯ ಹೆಸರಲ್ಲಿ ಮತ ಬೇಡುವ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರತೀ ಗ್ರಾಮಕ್ಕೊಂದು ಗೋಶಾಲೆ ನಿರ್ಮಾಣ ಮಾಡುವ ವಾಗ್ದಾನ ನೀಡಿತ್ತು. ಆದರೆ ಅಧಿಕಾರ ದಕ್ಕಿದ ಹನ್ನೆರಡು ವರ್ಷಗಳಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆ ಕಸದ ತೊಟ್ಟಿ ಸೇರಿಕೊಂಡಿದೆ. ಗೋವುಗಳು ಭಕ್ಷಕರ ಹೊಟ್ಟೆ ಸೇರಲು ದಾರಿ ಸುಗಮವಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಂಡ್ಯ ಮೂಲದ ಹಿಂದೂ ಯುವಕರಿಬ್ಬರು ಸಾಲೆತ್ತೂರಿನ ಶಾಫಿ ಎಂಬಾತನಿಗೆ ನಕಲಿ ದಾಖಲೆ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಗೋವುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಗೋಸಾಗಾಟ ತಡೆಯಲು ಸಂಘಟನೆಗಳ ಕಾರ್ಯಕರ್ತರು ರೆಡಿಯಾಗಿದ್ದಾರೆಯೇ ವಿನಹ ಆ ಬಳಿಕ ಗೋವುಗಳಿಗೆ ಯಾರು ಗತಿ ಎಂಬುದನ್ನು ಈವರೆಗೂ ಯಾವುದೇ ಸಂಘಟನೆಗಳಾಗಲೀ.. ಗೋರಕ್ಷಣೆ ಬಗ್ಗೆ ವೇದಿಕೆಯಲ್ಲಿ ಮೈಕ್ ಹಿಡಿದು ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷದ ಮುಖಂಡರಾಗಲೀ ಯೋಚಿಸುತ್ತೂ ಇಲ್ಲ..ಸಹಕಾರ ನೀಡುತ್ತಲೂ ಇಲ್ಲ ಎಂಬುದು ನೂರರಷ್ಟು ಸತ್ಯ.

ನೋಡಲಾಗುತ್ತಿಲ್ಲ ಮೂಕ ಪ್ರಾಣಿಗಳ ವೇದನೆ.
ಮೂರು ದಿನಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ರಸ್ತೆಯ ಕರೈ ಎಂಬಲ್ಲಿ ಪತ್ತೆ ಹಚ್ಚಿದ ಗೋವುಗಳ ಪರಿಸ್ಥಿತಿಯೂ ಇದೇ ಆಗಿದೆ. ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಎರಡು ಗೋವುಗಳು ಸಾಕಷ್ಟು ಪ್ರಮಾಣದಲ್ಲಿ ದೈಹಿಕವಾಗಿ ಗಾಯಗೊಂಡಿತ್ತು‌. ಪೊಲೀಸರು ವಶಕ್ಕೆ ಪಡೆದ ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತಿದೆ.
ರಸ್ತೆಯಲ್ಲಿ ತಡೆಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಬಳಿಕ ಗೋಪ್ರೇಮಿ ಕಾರ್ಯಕರ್ತರ ಜವಾಬ್ದಾರಿ ಮುಗಿಯಿತೇ.? ಗೋವುಗಳಿಗೆ ನೀರು, ಆಹಾರ ನೀಡುವುದು ಪೊಲೀಸರ ಜವಾಬ್ದಾರಿಯೇ.? ಪೊಲೀಸ್ ಠಾಣೆಗಳಲ್ಲಿ ಹುಲ್ಲು, ಹಿಂಡಿ ಸೇರಿದಂತೆ ಇನ್ನಿತರ ಪಶುಗಳ ಆಹಾರ ದಾಸ್ತಾನು ಇದೆಯೇ.? ಕಾನೂನು ಪ್ರಕ್ರಿಯೆ ಮುಗಿಯುವ ತನಕ ಗೋವುಗಳನ್ನು ಕಟ್ಟಿಹಾಕಲು ಪೊಲೀಸ್ ಠಾಣೆಯಲ್ಲಿ ಹಟ್ಟಿ ವ್ಯವಸ್ಥೆ ಇದೆಯೇ.? ಇದೆಲ್ಲವನ್ನೂ ಮಾಡಬೇಕಾದವರು ಯಾರು ಎಂಬ ಬಗ್ಗೆ ಈವರೆಗೂ ಯಾರೊಬ್ಬರೂ ಚಿಂತಿಸದಿರುವುದು ಗೋಪ್ರೇಮಿಗಳ ನಕಲಿ ಹಿಂದುತ್ವ ಎಂಬುದನ್ನು ಬಿಡಿಸಿ ಹೇಳಬೇಕೇ.?

ಗೋವುಗಳ ಪಡೆಯಲು ಗೋಶಾಲೆಗಳ ನಕಾರ..
ಪೊಲೀಸರು ವಶಕ್ಕೆ ಪಡೆದ ಗೋವುಗಳನ್ನು ಪಡೆಯಲು ಯಾವುದೇ ಖಾಸಗಿ ಗೋಶಾಲೆಗಳ ವ್ಯವಸ್ಥಾಪಕರು ಮುಂದೆ ಬರುತ್ತಿಲ್ಲ. ಗೋಶಾಲೆಗಳಿಗೆ ಯಾವುದೇ ಸರಕಾರ ಈವರೆಗೂ ಪುಡಿಗಾಸೂ ನೀಡುತ್ತಿಲ್ಲ. ಗೋಶಾಲೆ ನಡೆಸುವವರೂ ಅವುಗಳ ಪಾಲನೆ ಮಾಡಲು ಅನಿವಾರ್ಯವಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದಾರೆ. ಅಕ್ರಮ ಗೋಸಾಗಾಟ ತಡೆಯುವ ಸಂಘಟನೆಗಳು, ಗೋಪ್ರೇಮಿ ರಾಜಕೀಯ ಪುಢಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಗೋಶಾಲೆಗಳ ಬಗ್ಗೆ ಸ್ಪಂದಿಸುವುದು ಬಿಡಿ ಅತ್ತ ಕಡೆ ತಲೆ ಕೂಡ ಹಾಕುತ್ತಿಲ್ಲ ಎಂಬುದು ನೂರರಷ್ಟು ಸತ್ಯ. ಪ್ರತಿಯೊಂದು ಗೋಶಾಲೆಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಗೋವುಗಳು ತುಂಬಿಹೋಗಿದ್ದು ಅವುಗಳ ಪಾಲನೆಗಾಗಿ ಪ್ರತಿನಿತ್ಯ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಸಹಕಾರ ನೀಡುತ್ತಿಲ್ಲ ಎಂಬುದೇ ಗೋಶಾಲೆಗಳು ಗೋವುಗಳ ಪಡೆಯಲು ನಿರಾಕರಿಸಲು ಮುಖ್ಯ ಕಾರಣವಾಗಿದೆ.

ಗ್ರಾಮ ಪಂ, ಪ.ಪಂಚಾಯತ್ ಗೋಶಾಲೆ ನಿರ್ಮಿಸಲಿ..
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಇನ್ನಾದರೂ ತಮ್ಮ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಿಸಲು ಜನಪ್ರತಿನಿಧಿಗಳು ಒತ್ತಾಯಿಸಬೇಕು. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂತಹ ಸಂದರ್ಭದಲ್ಲಿ ಸಿಕ್ಕಿದ ಗೋವುಗಳನ್ನು ಕಾನೂನು ಪ್ರಕ್ರಿಯೆ ಮುಗಿದ ಬಳಿಕ ತಮ್ಮ ಗೋಶಾಲೆಗಳಲ್ಲಿ ಸಲಹುವಂತಾಗಬೇಕು. ಇಲ್ಲವಾದರೆ ಗೋವುಗಳು ಪತ್ತೆಯಾದ ತಕ್ಷಣ ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಸಾಕುವ ನೆಪದಲ್ಲಿ ಠಾಣೆಯಿಂದ ಪಡೆಯುವ ಖಾಸಗಿ ವ್ಯಕ್ತಿಗಳು ಒಂದೆರಡು ದಿನ ಮನೆಯಲ್ಲಿರಿಸಿ ಮತ್ತೆ ಕುಟುಕರಿಗೆ ಸಾವಿರಾರು ರೂಪಾಯಿಗಳಿಗೆ ನೀಡುವ ಮೂಲಕ ದಂಧೆ ನಡೆಸುತ್ತಿದ್ದಾರೆ.

ಅನಾಥವಾದ ಗೋವುಗಳು.
ಸಾಲೆತ್ತೂರು ಕರೈ ಬಳಿ ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ವಶಕ್ಕೆ ಪಡೆದ ಎರಡು ದೊಡ್ಡ ಗಾತ್ರದ ಹಾಲು ಕರೆಯುವ ಹಸುಗಳು ಮೂರು ದಿನಗಳಿಂದ ವಿಟ್ಲ ಠಾಣೆಯಲ್ಲಿ ಆಶ್ರಯ ಪಡೆದಿತ್ತು. ವಿಟ್ಲ ಪರಿಸರದ ಗೋಶಾಲೆಗಳು ಸ್ಥಳಾವಕಾಶ ಮತ್ತು ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ಗೋವುಗಳ ಪಡೆಯಲು ನಿರಾಕರಿಸಿದ್ದವು. ಈ ಮಧ್ಯೆ ಮೂರ್ನಾಲ್ಕು ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ಬೇಕೆಂದು ಹೇಳುತ್ತಾ ಗೋವುಗಳ ಪಡೆಯಲು ಕಸರತ್ತು ನಡೆಸಿದ್ದರು. ಆದರೆ ಕಾನೂನು ಚೌಕಟ್ಟಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ಗೋವುಗಳನ್ನು ನೀಡುವಂತಿಲ್ಲ. ಅದರಿಂದಾಗಿ ನಕಲಿ ಗೋಪ್ರೇಮಿಗಳ ಕಸರತ್ತು ವಿಫಲವಾಗಿದೆ.

ಗೋವುಗಳಿಗೆ ಮರು ಜನ್ಮ ನೀಡಿದ ದೈಗೋಳಿ ಸೇವಾಶ್ರಮ..
ಹಲವು ವರ್ಷಗಳಿಂದ ನೂರಾರು ಅನಾಥ ಬಡ ಜೀವಗಳಿಗೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಬೀದಿ ಬೀದಿ ಅಲೆದಾಡುತ್ತಿದ್ದ ಅದೆಷ್ಟೋ ಜೀವಗಳ ಪಾಲಿಗೆ ಮಂಜೇಶ್ವರ ತಾಲೂಕಿನ ದೈಗೋಳಿಯ ಡಾ.ಉದಯಕುಮಾರ್-ಶಾರದಮ್ಮ ದಂಪತಿಗಳ ನೇತೃತ್ವದ ಶ್ರೀಸಾಯಿ ನಿಕೇತನ ಸೇವಾಶ್ರಮ ಮರು ಜನ್ಮ ನೀಡುತ್ತಿದೆ. ಇದರ ಜೊತೆಗೆ ಅಲ್ಲಿನ ಕಾಮಧೇನು ಗೋಶಾಲೆಯಲ್ಲಿ ಈಗಾಗಲೇ ಐವತ್ತಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ. ಅಲ್ಲೂ ಸ್ಥಳಾವಕಾಶ ದ ಕೊರತೆ ಎದ್ದು ಕಾಣುತ್ತಿದೆ. ಆದರೆ ಗಾಯಗೊಂಡ ಗೋವುಗಳ ಅಸಹಾಯಕ ಪರಿಸ್ಥಿತಿಯನ್ನು ಮನಗಂಡು ಆಶ್ರಯ ನೀಡಲು ವೈದ್ಯ ದಂಪತಿಗಳು ಮುಂದೆ ಬಂದಿರುವುದು ತಮ್ಮ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಪತ್ರಕರ್ತ ವಿ.ಟಿ.ಪ್ರಸಾದ್ ಅವರ ಬೇಡಿಕೆಗೆ ಸ್ಪಂದಿಸಿದ ದೈಗೋಳಿ ಸೇವಾಶ್ರಮದ ವೈದ್ಯ ದಂಪತಿಗಳು ತಮ್ಮ ಕಾಮಧೇನು ಗೋಶಾಲೆಗೆ ವಿಟ್ಲ ಪೊಲೀಸರ ಸಹಕಾರದಲ್ಲಿ ಕರೆದೊಯ್ದ ಎರಡು ಗೋವುಗಳನ್ನು ದಾಖಲಿಸುವ ಮೂಲಕ ಮರು ಜನ್ಮ ನೀಡಿದ್ದಾರೆ.

ಇನ್ನಾದರೂ ಗೋಸಾಗಾಟ ತಡೆಯುವ ಗೋಪ್ರೇಮಿಗಳು ಆ ಬಳಿಕ ಗೋವುಗಳ ಮುಂದಿನ ಜೀವನದ ಬಗ್ಗೆ ಸ್ಪಂದಿಸುವ ಹೃದಯವಂತಿಕೆಯಲ್ಲಿ ಅಸಲಿ ಗೋಪ್ರೇಮಿಗಳಾಗಿ ಸಮಾಜದಲ್ಲಿ ಬದುಕಲಿ ಎಂಬುದು ಹಾರೈಕೆಯಾಗಿದೆ.

ವಿ.ಟಿ.ಪ್ರಸಾದ್‌ ಹಿರಿಯ ಪತ್ರಕರ್ತರು

ಈ ವೀಡಿಯೋ ನೋಡಿ Watch the video

ಕಟುಕರ ಕೈಯಿಂದ ಬಚಾವಾದ ಗೋವುಗಳಿಗೆ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರುಜನ್ಮ

ಈ ನ್ಯೂಸನ್ನೂ ಓದಿ

Continue Reading

Trending

Copyright © 2025 Deevatige