Article
ಪುತ್ತೂರಿನಲ್ಲಿ ಮೊಳಗಿದ ಅಂಕದ ಕೋಳಿಯ ಬಿಂಕದ ಕೂಗು
ಜ್ಯೋತಿಪ್ರಕಾಶ್ ಪುಣಚ
ದೈವದೇವರ ನೇಮೋತ್ಸವದ ಪ್ರಯುಕ್ತ ನಡೆಸಲಾಗುವ ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಪುತ್ತೂರಿನ ತುಳುವರು ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತಡೆದಿದ್ದಾರೆ ಇದೀಗ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ದ.ಕ. ಆರಂಭವಾಗಿದ್ದು, ಸಾಂಪ್ರದಾಯಿಕ ಆಚರಣೆಯನ್ನು ಹತ್ತಿಕ್ಕುವ ಪೊಲೀಸ್ ಕ್ರಮಗಳ ವಿರುದ್ಧ ಇದುವರೆಗೂ ಯಾವುದೇ ತುಳು ಸಂಘಟನೆಗಳು, ತಲೆಯದಿರತಕ್ಕಂತಹ. ಒತ್ತಾಯಿಸಿರದಂತಹ ನಿರ್ಧಾರಕ್ಕೆ ವೇದಿಕೆ ಸಿದ್ಧವಾಗಿದೆ.
ಕೋಳಿ ಅಂಕಕ್ಕೆ ಜೂಜು ಎನ್ನುವ ಹಣೆ ಪಟ್ಟಿ ಕಟ್ಟಿದ್ದರಿಂದ ಪೊಲೀಸ್ ಇಲಾಖೆ ಇದಕ್ಕೆ ನಿರ್ಬಂಧ ಹೇರುತ್ತಿದೆ ಎಂಬುವುದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿಯ ಪ್ರಮುಖ ಆರೋಪವಾಗಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಕರಾವಳಿಗರು ಒಂದೆಡೆ ಸೇರಿದ್ದಾರೆ. ಧಾರ್ಮಿಕ ಹಿನ್ನೆಲೆಯಲ್ಲಿ ಕೋಳಿಅಂಕದ ಮೂಲಕ ಗಣಗಳಿಗೆ ರಕ್ತತರ್ಪಣ ನೀಡುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿ ಆಚರಣೆ, ತೆಂಗಿನಕಾಯಿ ಕುಟ್ಟುವುದು ಸೇರಿದಂತೆ ದ ಕ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಯಾದ ಕೋಳಿ ಅಂಕವನ್ನೂ ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಧಾರ್ಮಿಕ ಪರಂಪರೆಯ ಕೋಳಿ ಅಂಕಕ್ಕೆ ನಿಷೇಧ ಹೇರುವ ಮೂಲಕ ಜನರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕೆಲಸ ನಡೆಸಲಾಗಿದೆ ಎಂಬುದು ಸಮಿತಿಯ ಆರೋಪವಾಗಿದೆ. ಕ್ರಿಕೆಟ್, ಕುದುರೆ ರೇಸ್ ಕಂಬಳದಂತೆ ಸಾಂಪ್ರದಾಯಿಕ ಮನೋರಂಜನೆ ಮತ್ತು ಕ್ರೀಡೆಯಾದ ಕೋಳಿ ಅಂಕಕ್ಕೆ ಸರಕಾರ ಮಾನ್ಯತೆ ನೀಡಬೇಕೆಂಬುದೇ ಆ ಸಭೆಯ ನಿರ್ಧಾರವಾಗಿತ್ತು.

ನೂತನವಾಗಿ ಅಸ್ಥಿತ್ವಕ್ಕೆ ಬಂದ ವೇದಿಕೆಯ ಪ್ರಶ್ನೆಗಳೇನು ?
ಕೋಳಿ ಅಂಕ ನಡೆಯುವ ಸಂದರ್ಭ ಪೊಲೀಸ್ ದಾಳಿಯ ವೇಳೆಯಲ್ಲಿ ಅಮಾಯಕರು ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸುವಾಗ ಸಾವು ನೋವುಗಳು ನಡೆದಿರುವುದು ಕೂಡಾ ಇದೆ. ಈ ಕದ್ದುಮುಚ್ಚಿ ಕೋಳಿಅಂಕ ಮಾಡುವ ಅನಿವಾರ್ಯವಾದರೂ ನಮಗೆ ಯಾಕಾಗಿ ಬಂದಿದೆ ? ಕಂಬಳ ಮತ್ತು ಜಲ್ಲಿಕಟ್ಟುಗಳಿಗೆ ಕೆಲವು ವಿಶೇಷ ತಿದ್ದುಪಡಿಗಳ ಮೂಲಕ ಭಾರತದಲ್ಲಿ ಅನುಮತಿ ನೀಡಲಾಗಿರುವಾಗ ಕೋಳಿಅಂಕಕ್ಕೆ ಅನುಮತಿ ಸಿಗಲಾರದೇ ? ಯಾವುದೇ ಒಂದು ಕ್ರೀಡೆ ಮೂಲ ಆಶಯದಲ್ಲಿ ಜೂಜು ಆಗಲು ಸಾಧ್ಯವೇ ಇಲ್ಲ ಅದು ಕೇವಲ ಮನರಂಜನೆಯ ಸ್ಪರ್ಧೆಗೆ ಮಾತ್ರ ಸೀಮಿತವಾಗಿರುತ್ತದೆ. ಅದರ ಮೂಲ ಆಶಯ ಮಾತ್ರ ಮನರಂಜನೆ ಮತ್ತು ಸ್ಪೂರ್ತಿ ಹಾಗೂ ಸ್ಪರ್ಧೆ. ಹೀಗಿರುವಾಗ ತುಳುನಾಡಿನ ಪ್ರಾಚೀನ ಕ್ರೀಡೆಯಾದ ಜನಪದದೊಂದಿಗೆ ಹಾಸು ಹೊಕ್ಕಾಗಿರುವ ಅಬಾಲ ವೃದ್ಧರ ಗ್ರಾಮ್ಯ ಮನರಂಜನೆಯ ಮೂಲವಾಗಿರುವ ಕೋಳಿ ಅಂಕಕ್ಕೆ ಜೂಜಿನ ಹಣೆಪಟ್ಟಿ ಕಟ್ಟಿ ನಿಷೇಧಿಸುವುದು ಸರಿಯೇ ಎಂಬುವುದು ವೇದಿಕೆಯ ಪ್ರಶ್ನೆ

ಜೂಜು ಎಲ್ಲಾ ಕ್ರೀಡೆಗಳಲ್ಲಿ ನಡೆಯುತ್ತದೆ; ಕೋಳಿಅಂಕದಲ್ಲಿ ಕಣ್ಣಿಗೆ ರಾಚುತ್ತದೆ ಅಷ್ಟೇ !
ಜೂಜೆಂಬುವುದು ಕ್ರೀಡೆಗಳಿಗೆ ಅಂಟಿಕೊಂಡು ಅದೆಷ್ಠೋ ಸಮಯಗಳೇ ಕಳೆದಿದೆ. ಮಹಾಭಾರತದ ಜ್ಯೂತದಲ್ಲಿ ಸೋತ ಪಾಂಡವರು ಒತ್ತೆಯಿಟ್ಟದ್ದು ದ್ರೌಪದಿಯನ್ನು ಎಂಬುವುದರಿಂದ ಹಿಡಿದು ವಿವಿಧ ಕ್ರೀಡೆಗಳ ಅದರಲ್ಲೂ ಕ್ರಿಕೆಟಿನ ಪ್ರತಿ ಬಾಲು, ಎಸೆತ, ಪ್ರತಿ ಹೊಡೆತಗಳವರೆಗೆ ಜೂಜು ಎಷ್ಟು ಹಾಸು ಹೊಕ್ಕಾಗಿದೆ ಎಂದು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಜ್ಯೂತ ಅಥವಾ ಕ್ರಿಕೆಟ್ ಎಂಬುದು ಜೂಜು ಅಥವಾ ಜುಗಾರಿಗಿಂತ ಮುಂಚೇನೆ ಹುಟ್ಟಿರುವುದು ಕೂಡಾ ಅಷ್ಟೇ ಸತ್ಯ ! ಯಾವುದೇ ಪಂದ್ಯ, ಆಟ, ಕ್ರೀಡೆಗಳು ರಂಗೇರಲು ಸ್ಪರ್ಧಾಭಾವ ಜೊತೆಗೆ ಗರಿಗೆದರಲು ಪಂಥಾಹ್ವಾನ ಅನಿವಾರ್ಯವೆಂಬುವುದನ್ನು ಹೌದೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕುದುರೆ ರೇಸು, ಕ್ರಿಕೆಟ್ ಕಂಬಳದಲ್ಲಿ ನಡೆಯುವಷ್ಟು ಜೂಜು ಕೋಳಿಅಂಕದಲ್ಲಿ ಯಾವತ್ತೂ ನಡೆಯುವುದಿಲ್ಲ. ಆದರೆ ಕುದುರೆ ರೇಸು, ಕ್ರಿಕೆಟ್ ಕಂಬಳದಲ್ಲಿ ಇರುವ ವಿಶಾಲವಾದ ವೇದಿಕೆಯಲ್ಲಿ ನಡೆಯುವ ಜೂಜುಗಳು ಅಗೋಚರವಾದರೆ, ಕೋಳಿಅಂಕದಲ್ಲಿ ಇತಿಮಿತಿಯೊಳಗಿನ ಕಳದಲ್ಲಿ ನಡೆಯುವ ಜೂಜು ಕಣ್ಣಿಗೆ ರಾಚುತ್ತದೆ ಅಷ್ಟೆ !

ಎಲ್ಲಾ ತುಳುನಾಡಿನ ಸಂಘಟನೆಗಳು ಜೊತೆಗೂಡಬೇಕು
ಅದೇನೆ ಇರಲಿ ತುಳುನಾಡಿನ ಕೋಳಿ ಅಂಕ ಮತ್ತು ಕಂಬಳವನ್ನು ತುಳುವರಾದ ನಾವು ಕ್ರಿಕೆಟ್ ಕುದುರೆ ರೇಸುಗಳಿಂದಲೂ ಪ್ರತ್ಯೇಕವಾಗಿ ಗುರುತಿಸುವಂತಾಗಬೇಕು. ಅದನ್ನು ಕ್ರೀಡೆ ಎಂಬುದರ ಜೊತೆಗೆ ಮನರಂಜನೆ, ಜನಪದ ಆಚರಣೆ ಎಂಬಿತ್ಯಾದಿ ರೀತಿಯಲ್ಲಿ ಸ್ವೀಕರಿಸುವಂತಾಗಬೇಕು. ಇದಕ್ಕಾಗಿ ಅನೇಕ ಜನಪ್ರತಿನಿಧಿಗಳ ಸಹಿತ ತುಳುವರ ಸಂಘಟನೆಗಳು, ತುಳು ಒಕ್ಕೂಟಗಳು, ಹೊರನಾಡ ತುಳು ಸಂಘಸಂಸ್ಥೆಗಳು, ತುಳು ಜನಪದರು ಪುತ್ತೂರಿನ ಕೋಳಿ ಅಂಕ ಅಭಿಮಾನಿಗಳು ಪ್ರಾರಂಭಿಸಿದ ಹೊಸ ನಿರ್ಧಾರಗಳಿಗೆ ಜೊತೆಗೂಡಬೇಕಾಗಿದೆ ಎಂಬುವುದು ವೇದಿಕೆಯ ಆಶಯವಾಗಿದೆ.

ಕರಾವಳಿಯ ಜನರಿಗೆ ಕೋಳಿಅಂಕ ಸ್ಪರ್ಧೆಯಲ್ಲ; ಒಂದು ಧಾರ್ಮಿಕ ಆಚರಣೆ
ತುಳುನಾಡಿನ ಸಂಸ್ಕೃತಿಯಲ್ಲಿ ದೈವ-ದೇವರು ಮತ್ತು ಕೋಳಿ ಅಂಕಕ್ಕೆ ಅವಿನಾಭಾವ ಸಂಬಂಧವಿದೆ. ಹೊರಗಿನವರಿಗೆ ಇದು ಕೇವಲ ಒಂದು ಸ್ಪರ್ಧೆಯಾಗಿ ಕಂಡರೂ, ಕರಾವಳಿಯ ಜನರಿಗೆ ಇದು ಒಂದು ಧಾರ್ಮಿಕ ಆಚರಣೆ ಮತ್ತು ಭಕ್ತಿಯ ಸೇವೆಯಾಗಿದೆ. ಅನೇಕ ದೈವಸ್ಥಾನಗಳಲ್ಲಿ (ಉದಾಹರಣೆಗೆ: ಜುಮಾದಿ, ಪಂಜುರ್ಲಿ, ಜಾರಂದಾಯ) ವಾರ್ಷಿಕ ನೇಮ ಅಥವಾ ಉತ್ಸವದ ಸಂದರ್ಭದಲ್ಲಿ ಕೋಳಿ ಅಂಕವನ್ನು ನಡೆಸಲೇಬೇಕು ಎಂಬ ನಿಯಮವಿದೆ. ಇದನ್ನು ‘ದೈವದ ಕಳ’ ಅಥವಾ ‘ನೇಮದ ಕೋಳಿ ಅಂಕ’ ಎನ್ನಲಾಗುತ್ತದೆ. ಇದು ದೈವಕ್ಕೆ ಸಲ್ಲಿಸುವ ಒಂದು ಬಗೆಯ “ರಕ್ತ ತರ್ಪಣ” ಅಥವಾ ಹರಕೆ ಎಂದು ನಂಬಲಾಗುತ್ತದೆ. ಕೆಲವು ಕಡೆ ದೈವದ ನೇಮ ನಡೆಯುವ ಮುನ್ನ ಅಥವಾ ನಡೆದ ನಂತರ ಕೋಳಿ ಅಂಕ ನಡೆಯುತ್ತದೆ. ದೈವದ ಪಾತ್ರಿ (ದರ್ಶನ ಪಾತ್ರಿ) ಅಥವಾ ದೈವದ ಚಾಕರಿ ಮಾಡುವವರು ಮೊದಲು ಕೋಳಿಯನ್ನು ಅಂಕಕ್ಕೆ ಬಿಡುವ ಮೂಲಕ ಆಚರಣೆಗೆ ಚಾಲನೆ ನೀಡುತ್ತಾರೆ. ಈ ಸಂದರ್ಭದಲ್ಲಿ ನಡೆಯುವ ಅಂಕದಲ್ಲಿ ಯಾವುದೇ ಹಣದ ಪಣ (ಬೆಟ್ಟಿಂಗ್) ಇರುವುದಿಲ್ಲ, ಇದು ಸಂಪೂರ್ಣವಾಗಿ ಧಾರ್ಮಿಕವಾಗಿರುತ್ತದೆ. ಭಕ್ತರು ತಮ್ಮ ಕಷ್ಟಗಳು ದೂರಾದಾಗ ಅಥವಾ ಕೆಲಸಗಳು ಕೈಗೂಡಿದಾಗ ದೈವಕ್ಕೆ “ಕೋಳಿ ಅಂಕದ ಹರಕೆ” ಹೊರುತ್ತಾರೆ. ಹರಕೆ ತೀರಿಸಲು ನಿರ್ದಿಷ್ಟ ದೈವದ ಸನ್ನಿಧಿಯಲ್ಲಿ ತಮ್ಮ ಹುಂಜವನ್ನು ಅಂಕಕ್ಕೆ ಬಿಡುತ್ತಾರೆ.

ಹಠಕ್ಕೆ ಬಿದ್ದು ಹೋರಾಟ ಮಾಡಿದರೆ ಕೋಳಿ ಅಂಕವನ್ನು ಉಳಿಸಿಕೊಳ್ಳಲು ಸಾಧ್ಯವಿದೆ
ಈ ನಿಟ್ಟಿನಲ್ಲಿ ಪುತ್ತೂರಿನ ತುಳುವರು ಕರಾವಳಿಗರನ್ನು ಜೊತೆ ಸೇರಿಸಿಕೊಂಡು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಉಳಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಮ್ಮ ತುಳುನಾಡ ಸಂಸ್ಕೃತಿ ಕ್ರೀಡೆ ಆಚರಣೆಗಳ ಉಳಿವಿಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ʼಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ದ.ಕ.ʼ ಎಂಬ ಸಮಿತಿಯನ್ನು ಹುಟ್ಟುಹಾಕಿ ಫೆ.1ರಂದು ಪುತ್ತೂರು ಕೊಟೆಚಾ ಸಭಾ ಭವನದಲ್ಲಿ ಸಮಾಲೋಚನಾ ಸಭೆ ನಡೆಸಿದ್ದಾರೆ. ನೂರಾರು ಮಂದಿ ಸೇರಿದ ಈ ಬಿಂಕದ ತುಳುವರ ಸಭೆಯಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸದನದಲ್ಲಿ ಧ್ವನಿಯೆತ್ತುತ್ತಲೇ ಬಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು ಭಾಗವಹಿಸಿದ್ದಾರೆ. ಕೋಳಿ ಅಂಕಕ್ಕೆ ಮಹಿಳೆಯರ ವಿರೋಧವಿದೆ ಎಂಬುವುದು ಗೊತ್ತು, ಅದಾಗ್ಯೂ ಜೂಜು ರಹಿತ ಕೋಳಿ ಅಂಕದ ಬಗ್ಗೆ ಮಾತ್ರ ನಾನು ಮಾತಾನಾಡುತ್ತಿದ್ದೇನೆ ಎಂದು ವೇದಿಕೆಯಲ್ಲಿ ಮಾತು ಪ್ರಾರಂಭಿಸಿದ ರೈಯವರು ಕೋಳಿ ಅಂಕಕ್ಕೆ ಹೋಗುವವರು ರೈತರು… ಎದೆತಟ್ಟಿ ನಾವು ರೈತರೆಂದು ಹೇಳುತ್ತಾ, ಕೋಳಿ ಅಂಕದ ಹೋರಾಟಕ್ಕೆ ಬನ್ನಿ ಎಂದು ಉಭಯ ಜಿಲ್ಲೆಗಳ 12 ಶಾಸಕರ ಮನೆಯ ಕದವನ್ನು ಬಡಿದು ಹೋರಾಟಕ್ಕೆ ಕರೆಯಿರಿ, ಕರಾವಳಿಯ 12 ಶಾಸಕರು ಸದನದಲ್ಲಿ ಪ್ರಶ್ನಿಸಿದರೆ ಖಂಡಿತಾ ನಮ್ಮ ಜೂಜುರಹಿತ ಸಾಂಪ್ರದಾಯಿಕ ಕೋಳಿ ಅಂಕವನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ನಮ್ಮನ್ನು ( ಶಾಸಕರನ್ನು) ಉಪಯೋಗಿಸಿಕೊಂಡು ಹಠ ಬಿದ್ದು ಹೋರಾಟ ಮಾಡಿ ಎಂದು ಹೋರಾಟಗಾರರನ್ನು ಹುರಿದುಂಬಿಸಿದರು. ಶಾಸಕರ ಮಾತುಗಳನ್ನು ಕೇಳಿದ ಕೋಳಿಅಂಕದ ಅಭಿಮಾನಿಗಳ ಮುಖದಲ್ಲಿ ಸಂತಸದೊಂದಿಗೆ ಸಭೆ ಮುಕ್ತಾಯವಾಗಿದೆ.
ಕಾನೂನು ಚೌಕಟ್ಟಿನೊಳಗಡೆ ನಿಷೇಧವಾಗಿದ್ದ ಕೋಳಿ ಅಂಕಕ್ಕೂ ಕಟ್ಟುನಿಟ್ಟಿನ ನಿರ್ಬಂಧ
ಕೋಮು ದಳ್ಳುರಿಯಿಂದ ದಗದಗನೆ ಉರಿಯುತ್ತಿದ್ದ ಕರಾವಳಿಯನ್ನು ಕೇವಲ 6 ತಿಂಗಳಿನಲ್ಲಿಯೇ ಒಂದು ಮಾದರಿ ಶ್ರದ್ದಾಕೆಂದ್ರವಾಗಿ ಮಾಡುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ. ಅರುಣ್ ಅವರು ಜಿಲ್ಲೆಯ ಹಲವಾರು ಅನಿಷ್ಟ ಪದ್ದತಿಗಳಿಗೆ ಕಾನೂನು ಕೈಕೋಲವನ್ನು ತೊಡಿಸಿ ನೆನೆಗುದಿಗೆ ಬಿದ್ದಿದ್ದ ಸಂವಿಧಾನದ ಆಡಳಿತಾತ್ಮಕ ಸೂತ್ರಗಳನ್ನು ಜಾರಿ ಗೊಳಿಸುವಾಗ ಕಾನೂನು ಚೌಕಟ್ಟಿನೊಳಗಡೆ ನಿಷೇಧವಾಗಿದ್ದ ಕೋಳಿ ಅಂಕಕ್ಕೂ ಕಟ್ಟುನಿಟ್ಟಿನ ನಿರ್ಬಂಧವಾಗಿದೆ. ಎಂಬುವುದು ಎಲ್ಲರಿಗೂ ಗೊತ್ತು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960: ಕೋಳಿ ಕಾದಾಟ ಅಪರಾಧವಾಗಿದೆ
ಕೋಳಿ ಅಂಕ (Cockfighting) ಎನ್ನುವುದು ಭಾರತದ ಸಂಪ್ರದಾಯ ಮತ್ತು ಕಾನೂನಿನ ನಡುವೆ ಇರುವ ಒಂದು ಸೂಕ್ಷ್ಮ ವಿಷಯವಾಗಿದ್ದು, ಕಾನೂನಾತ್ಮಕವಾಗಿ ಕೋಳಿ ಅಂಕವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960: ಈ ಕಾಯ್ದೆಯ ಪ್ರಕಾರ ಪ್ರಾಣಿ ಅಥವಾ ಪಕ್ಷಿಗಳನ್ನು ಪರಸ್ಪರ ಕಾದಾಟಕ್ಕೆ ಬಿಡುವುದು, ಅದರಲ್ಲಿ ಬೆಟ್ಟಿಂಗ್ ಕಟ್ಟುವುದು ಅಥವಾ ಅಂತಹ ಪಂದ್ಯಗಳನ್ನು ಆಯೋಜಿಸುವುದು ಅಪರಾಧ. ಸುಪ್ರೀಂ ಕೋರ್ಟ್ ತೀರ್ಪುನ ಪ್ರಕಾರ ಪ್ರಾಣಿಗಳ ಹಕ್ಕುಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಯಾವುದೇ ರೀತಿಯ ಪ್ರಾಣಿ ಕಾದಾಟದ ಕ್ರೀಡೆಗಳು ಕಾನೂನುಬಾಹಿರ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿ (ದಕ್ಷಿಣ ಕನ್ನಡ, ಉಡುಪಿ) ಮತ್ತು ಗಡಿ ಭಾಗಗಳಲ್ಲಿ ಕೋಳಿ ಅಂಕವು ಸಾಂಪ್ರದಾಯಿಕವಾಗಿ ನಡೆಯುತ್ತಲೇ ಇತ್ತು. ಆದರೆ ಕೋಳಿ ಅಂಕ ನಡೆಸಲು ಸಿದ್ಧತೆ ನಡೆಸಿದರೆ ಪೊಲೀಸರು ಅಂತಹ ಸ್ಥಳಗಳ ಮೇಲೆ ದಾಳಿ ಮಾಡುತ್ತಲೇ ಇದ್ದರು. ಕಾರಣ ಕೋಳಿ ಅಂಕ ಕೇವಲ ಕ್ರೀಡೆಯಾಗಿ ಉಳಿಯದೆ, ಅಲ್ಲಿ ಲಕ್ಷಾಂತರ ರೂಪಾಯಿಗಳ ಜೂಜು ನಡೆಯುವುದರಿಂದ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕೂಡ ಇದನ್ನು ನಿಷೇಧಿಸಲಾಗಿದೆ.ಕಾನೂನು ಕೋಳಿ ಅಂಕವನ್ನು ಏಕೆ ನಿಷೇಧಿಸಿದೆ ಎಂದರೆ ಒಂದನೆಯದಾಗಿ ಕೋಳಿಗಳ ಕಾಲಿಗೆ ಚೂಪಾದ ಕತ್ತಿ (ಬಾಳ್) ಅಥವಾ ಮುಳ್ಳುಗಳನ್ನು ಕಟ್ಟುವುದು. ಮತ್ತು ಎರಡನೇಯದಾಗಿ ಪಂದ್ಯದಲ್ಲಿ ಒಂದು ಕೋಳಿ ಸಾಯುವವರೆಗೆ ಅಥವಾ ತೀವ್ರವಾಗಿ ಗಾಯಗೊಳ್ಳುವವರೆಗೆ ಹೋರಾಡಿಸುವುದು. ಇದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಪ್ರಕಾರ ಅಪರಾಧವಾಗುತ್ತದೆ.

ಕಂಬಳ ಜಲ್ಲಿಕಟ್ಟುಗಳಿಗೆ ಇಲ್ಲದ ನಿಷೇಧ ಕೋಳಿ ಅಂಕಕ್ಕೆ ಯಾಕೆ ?
ಕೋಳಿ ಅಂಕಕ್ಕೆ ನಿಷೇಧವಿದ್ದರೂ, ಕಂಬಳ ಮತ್ತು ಜಲ್ಲಿಕಟ್ಟುಗಳಿಗೆ ಕೆಲವು ವಿಶೇಷ ತಿದ್ದುಪಡಿಗಳ ಮೂಲಕ ಭಾರತದಲ್ಲಿ ಅನುಮತಿ ನೀಡಲಾಗಿದೆ ಯಾಕೆಂದರೆ ಕಂಬಳ ಮತ್ತು ಜಲ್ಲಿಕಟ್ಟು ಮೂಲತಃ ಕ್ರೀಡೆಗಳಾಗಿವೆ, ಇಲ್ಲಿ ಕೋಳಿ ಅಂಕದಂತೆ ದೊಡ್ಡ ಮಟ್ಟದ ವ್ಯವಸ್ಥಿತ ಜೂಜಾಟ ಕಾನೂನಿನ ಕಣ್ಣಿನಲ್ಲಿ ಅಷ್ಟಾಗಿ ಗೋಚರಿಸುವುದಿಲ್ಲ. ಪ್ರಾಣಿಯ ಸಾವು ಸಂಭವಿಸುವುದಿಲ್ಲ: ಈ ಕ್ರೀಡೆಗಳಲ್ಲಿ ಪ್ರಾಣಿಗಳು ಸಾಯುವ ಉದ್ದೇಶವಿರುವುದಿಲ್ಲ (ಅವುಗಳನ್ನು ಕೇವಲ ಓಡಿಸಲಾಗುತ್ತದೆ ಅಥವಾ ಹಿಡಿಯಲಾಗುತ್ತದೆ). ಈ ಕ್ರೀಡೆಗಳು ಆಯಾ ಪ್ರದೇಶದ ರೈತರ ಸಂಸ್ಕೃತಿ ಮತ್ತು ಪಶುಸಂಗೋಪನೆಯೊಂದಿಗೆ ಬೆಸೆದುಕೊಂಡಿವೆ ಎಂದು ಸರ್ಕಾರಗಳು ವಾದ ಮಂಡಿಸಿವೆ. ಹಾಗೆಂದು ಯಾವುದೇ ಕ್ರೀಡೆಯಲ್ಲಿ ಪ್ರಾಣಿಗಳಿಗೆ ರಕ್ತ ಬರುವಂತಹ ಗಾಯವಾದರೆ ಅಥವಾ ಉದ್ದೇಶಪೂರ್ವಕವಾಗಿ ಹಿಂಸೆ ನೀಡಿದ್ದು ಕಂಡುಬಂದರೆ, ಅಂತಹ ಆಯೋಜಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ಮತ್ತು ಕ್ರೀಡೆಯನ್ನು ತಕ್ಷಣವೇ ನಿಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ.

ಮಂಜೋಟಿ ಏರಿದ ಕಂಬಳವನ್ನು ಗಂತಿಗೆ ತಂದು ನಿಲ್ಲಿಸಿದವರು ಇದೇ ಆಶೋಕಣ್ಣ
2014ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ‘ಜಲ್ಲಿಕಟ್ಟು’ ಕ್ರೀಡೆಯನ್ನು ನಿಷೇಧಿಸಿದ ಬೆನ್ನಲ್ಲೇ, ಕರ್ನಾಟಕದಲ್ಲಿ ಕಂಬಳದ ಮೇಲೂ ನಿರ್ಬಂಧಗಳು ಬಂದವು. ಆ ನಂತರ ಕಂಬಳವು ಕರಾವಳಿ ಜನರ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯ ಅವಿಭಾಜ್ಯ ಅಂಗವಾಗಿದ್ದರಿಂದ ನಿಷೇಧದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದವು. ರಾಜ್ಯ ಸರ್ಕಾರವು ‘ಪ್ರಾಣಿ ಹಿಂಸೆ ತಡೆ ಕಾಯ್ದೆ’ಗೆ ತಿದ್ದುಪಡಿ ತಂದು, ಕಂಬಳವನ್ನು “ಸಾಂಪ್ರದಾಯಿಕ ಕ್ರೀಡೆ” ಎಂದು ಪರಿಗಣಿಸಿ 2017ರಲ್ಲಿ ವಿಶೇಷ ಸುಗ್ರೀವಾಜ್ಞೆ ಹೊರಡಿಸಿತು. ಸುದೀರ್ಘ ವಿಚಾರಣೆಯ ನಂತರ, ಮೇ 18, 2023 ರಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಂಬಳಕ್ಕೆ ನೀಡಿದ ರಾಜ್ಯ ಸರ್ಕಾರದ ಅನುಮತಿಯನ್ನು ಎತ್ತಿ ಹಿಡಿಯಿತು ಎಂಬುವುದು ನಮಗೆಲ್ಲಾ ತಿಳಿದಿರುವ ವಿಚಾರ. ಇದರ ಹಿಂದೆ ಮಂಜೋಟಿ ಏರಿದ ಕಂಬಳವನ್ನು ಗಂತಿಗೆ ತಂದು ನಿಲ್ಲಿಸಿದವರು ಇದೇ ಆಶೋಕಣ್ಣ ಎಂಬುವುದು ಈಗ ಜನಜನಿತ.

ಶಾಸಕರ ಮಾರ್ಗದರ್ಶನದಲ್ಲಿ ಮುಂದುವರಿಯುವುದು ಮಾತ್ರ ಹೋರಾಟಗಾರರಿಗೆ ಉಳಿದಿರುವ ಒಂದೇ ಒಂದು ದಾರಿ !
ಸಮಾಲೋಚನಾ ಸಭೆಯಲ್ಲಿ ಶಾಸಕರು ಒಂದು ಮಾತಿನ ಭರವಸೆ ನೀಡಿದ್ದಾರೆ. ಹೋರಾಟಗಾರರು ಉಭಯ ಜಿಲ್ಲೆಗಳ 13 ಶಾಸಕರ ಮನೆಯ ಕದವನ್ನು ತಟ್ಟಿ ಸಾಂಪ್ರಾದಾಯಿಕ ಆಚರಣೆಯನ್ನು ಉಳಿಸಿಕೊಳ್ಳಲು ಧ್ವನಿ ಎತ್ತುವಂತೆ ಮಾಡಿ, ಸದನದಲ್ಲಿ ಪ್ರಶ್ನಿಸೋಣ ಸದನದಲ್ಲಿ ಎಲ್ಲಾ ಶಾಸಕರು ಮಾತನಾಡಿದರೆ ಸಾಂಪ್ರದಾಯಿಕ ಆಚರಣೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ ಅಂದರೆ ಸಾಧ್ಯವಿದೆ ಎಂಬುವುದನ್ನು ರೈಯವರು ವೇದಿಕೆಯವರಿಗೆ ಪರೋಕ್ಷವಾಗಿ ತಿಳಿಸಿದ್ದಾರೆ. ಜೊತೆಗೆ ಬೇಕಾಗಿರುವುದು ಹಠ ಸಾಧನೆ ಎಂಬುವುದನ್ನೂ ಹೇಳುವುದಕ್ಕೆ ಮರೆಯಲಿಲ್ಲ. ಶಾಸಕರ ಮಾರ್ಗದರ್ಶನದಲ್ಲಿ ಮುಂದುವರಿಯುವುದು ಮಾತ್ರ ಹೋರಾಟಗಾರರಿಗೆ ಉಳಿದಿರುವ ಒಂದೇ ಒಂದು ದಾರಿ ! ಇಲ್ಲವಾದರೆ ಕಾನೂನು ಕಟ್ಟಳೆಗಳು ಬಂಟನಾಗಿ ಹೋರಾಟಗಾರರು ಒಟ್ಟೆಯಾಗುತ್ತಾರೆ. ಕೊನೆಯದಾಗಿ ಸಾಂಪ್ರದಾಯಿಕ ಜೂಜುರಹಿತ ಕೋಳಿಅಂಕಕ್ಕೆ ಕಾನೂನಿನಲ್ಲಿ ಅವಕಾಶ ಸಿಗಲಿ ಎಂದು ದೈವ ದೇವರಲ್ಲಿ ಪ್ರಾರ್ಥಿಸುತ್ತಾ ಮತ್ತೆ ಸಿಗೋಣ ಕಳದಲ್ಲಿ.. ಕೋಳಿಅಂಕದ ಕಳದಲ್ಲಿ ?
Article
ಹೊಸ ಭರವಸೆಯ ಹೊಸ ವರ್ಷ: ‘ದೀವಟಿಗೆ ನ್ಯೂಸ್’ ಕಡೆಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಚೈತ್ರ ಮಾಸದ ಆಗಮನ, ಪ್ರಕೃತಿಯಲ್ಲಿ ಹೊಸ ಚಿಗುರು, ಕೋಗಿಲೆಯ ಗಾಯನ… ಇವೆಲ್ಲವೂ ಹೊತ್ತು ತರುವುದು ಸೌರಮಾನ ಯುಗಾದಿಯ ಸಂಭ್ರಮವನ್ನು. ಈ ಶುಭ ಸಂದರ್ಭದಲ್ಲಿ ‘ದೀವಟಿಗೆ ನ್ಯೂಸ್’ ತನ್ನೆಲ್ಲಾ ಪ್ರೀತಿಯ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಕ್ರೋಧಿ ನಾಮ ಸಂವತ್ಸರದ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದ
ಬೆಳಕಿನ ಹಾದಿಯಲ್ಲಿ ‘ದೀವಟಿಗೆ’ಯ ಪಯಣ
ಹೆಸರೇ ಸೂಚಿಸುವಂತೆ, ಕತ್ತಲೆಯನ್ನು ದೂರಮಾಡಿ ಸತ್ಯದ ಬೆಳಕನ್ನು ಪಸರಿಸುವ ಉದ್ದೇಶದೊಂದಿಗೆ ಆರಂಭವಾದ ನಮ್ಮ ‘ದೀವಟಿಗೆ ನ್ಯೂಸ್’ ಇಂದು ಓದುಗರ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆದು ನಿಂತಿರುವುದು ನಮ್ಮ ಹೆಮ್ಮೆ. ವೇಗವಾಗಿ ಸುದ್ದಿ ನೀಡುವುದರ ಜೊತೆಗೆ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಿಮಗೆ ತಲುಪಿಸುತ್ತಿದ್ದೇವೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ನಾವು ಸದಾ ಮುಂದು. ಅಲ್ಪ ಅವಧಿಯಲ್ಲಿಯೇ ಸಾವಿರಾರು ಓದುಗರನ್ನು ತಲುಪಿರುವ ನಮ್ಮ ಈ ಬೆಳವಣಿಗೆಗೆ ನಿಮ್ಮ ಪ್ರೋತ್ಸಾಹವೇ ಅಡಿಪಾಯ.
“ಬೆಲ್ಲದ ಸಿಹಿ, ಬೇವಿನ ಕಹಿ ಎರಡನ್ನೂ ಸಮನಾಗಿ ಸ್ವೀಕರಿಸುವಂತೆ ಪ್ರೇರೇಪಿಸುವ ಯುಗಾದಿಯು, ನಿಮ್ಮ ಜೀವನದಲ್ಲಿ ಬರೀ ಸುಖ-ಸಂತೋಷವನ್ನೇ ತುಂಬಲಿ.”

ಜೀವನವೆಂದರೆ ಸುಖ-ದುಃಖಗಳ ಸಮ್ಮಿಶ್ರಣ. ಈ ಯುಗಾದಿಯು ನಿಮ್ಮ ಬದುಕಿನ ಕಷ್ಟಗಳನ್ನೆಲ್ಲಾ ದೂರ ಮಾಡಿ, ಯಶಸ್ಸಿನ ಸಿಹಿಯನ್ನು ಉಣಿಸಲಿ. ಕೃಷಿ, ವ್ಯಾಪಾರ, ಶಿಕ್ಷಣ ಹಾಗೂ ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿರುವ ನಮ್ಮ ಓದುಗರಿಗೆ ಈ ವರ್ಷ ಅದೃಷ್ಟದ ವರ್ಷವಾಗಲಿ ಎಂದು ಆಶಿಸುತ್ತೇವೆ.
ನಿಮ್ಮ ನೆಚ್ಚಿನ ದೀವಟಿಗೆ ನ್ಯೂಸ್, ಮುಂದಿನ ದಿನಗಳಲ್ಲಿ ಇನ್ನು ಹತ್ತು ಹಲವು ಹೊಸ ಬದಲಾವಣೆಗಳೊಂದಿಗೆ, ತಂತ್ರಜ್ಞಾನದ ಸುಧಾರಣೆಯೊಂದಿಗೆ ನಿಮ್ಮ ಮನೆಮನಗಳನ್ನು ತಲುಪಲು ಸಜ್ಜಾಗಿದೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಹೀಗೆಯೇ ಮುಂದುವರಿಯಲಿ ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!
Article
ಸಂಚಾರ ನಿಯಮ ಉಲ್ಲಂಘನೆ: ಸುಳ್ಯದ ಯುವಕನಿಗೆ 15 ದಿನಗಳ ‘ಸಮುದಾಯ ಸೇವೆ’ಯ ವಿನೂತನ ಶಿಕ್ಷೆ!
ಸಂಚಾರ ನಿಯಮಗಳನ್ನು ಪದೇ ಪದೇ ಗಾಳಿಗೆ ತೂರುವವರಿಗೆ ಸುಳ್ಯದ ನ್ಯಾಯಾಲಯವು ಒಂದು ಕಠಿಣ ಹಾಗೂ ಸಮಾಜಮುಖಿ ಸಂದೇಶ ರವಾನಿಸಿದೆ. ಸಂಚಾರ ನಿಯಮ ಉಲ್ಲಂಘಿಸಿದ ಯುವಕನೊಬ್ಬನಿಗೆ ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಸಾರ್ವಜನಿಕವಾಗಿ ನಿಂತು ‘ಸಮುದಾಯ ಸೇವೆ’ ಮಾಡುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಐತಿಹಾಸಿಕ ತೀರ್ಪು ನೀಡಿದೆ.

ಘಟನೆಯ ಸಾರಾಂಶ
ಸುಳ್ಯದ ನಿವಾಸಿಯಾದ ರಕ್ಷಿತ್ ಜಿ. ಎಂಬಾತ ಕಳೆದ ಮಾರ್ಚ್ 12ರಂದು ಪಟ್ಟಣದ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದನು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿಪಿ ಅವರು ಐ ಎಮ್ ವಿ ಆ್ಯಕ್ಟ್ ಅಡಿಯಲ್ಲಿ ಕಲಂ 119 R/w 177, 184, 194(C) ರಂತೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ನ್ಯಾಯಾಲಯದ ‘ಜಾಗೃತಿ’ಯ ಪಾಠ!
ಪ್ರಕರಣದ ವಿಚಾರಣೆ ನಡೆಸಿದ ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು, ಆರೋಪಿತನ ನಡವಳಿಕೆಯಲ್ಲಿ ಬದಲಾವಣೆ ತರಲು ಒಟ್ಟು 3,000 ರೂಪಾಯಿ ನಗದು ದಂಡ ವಿಧಿಸಿದೆ. ಚಾಲನಾ ಪರವಾನಿಗೆಯನ್ನು (Driving License) ಮೂರು ತಿಂಗಳ ಕಾಲ ರದ್ದುಗೊಳಿಸಿದೆ. ಮಾತ್ರವಲ್ಲದೆ ಮಾರ್ಚ್ 15 ರಿಂದ 29 ರವರೆಗೆ ಒಟ್ಟು 15 ದಿನಗಳ ಕಾಲ ಸುಳ್ಯ ಪಟ್ಟಣದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ಜಾಗೃತಿಯ ಫಲಕ ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂಬ ಸಮುದಾಯ ಸೇವೆ (ವಿಶಿಷ್ಟ ಶಿಕ್ಷೆ)ಯನ್ನು ವಿಧಿಸಿದೆ.

ಇದೇ ಮೊದಲಲ್ಲ ! ರಾಜ್ಯದ ಇತರ ಜಿಲ್ಲೆಗಳಲ್ಲೂ ಇಂತಹ ಮಾದರಿ ಶಿಕ್ಷೆ!
ಸುಳ್ಯದಲ್ಲಿ ನಡೆದ ಈ ಘಟನೆಯು ಅಪರೂಪದ್ದಾಗಿದ್ದರೂ, ಕರ್ನಾಟಕದ ಇತರ ನ್ಯಾಯಾಲಯಗಳು ಈ ಹಿಂದೆ ಇಂತಹದ್ದೇ ‘ಸಮುದಾಯ ಸೇವೆ’ಯ ತೀರ್ಪುಗಳನ್ನು ನೀಡಿ ಸಾರ್ವಜನಿಕರ ಗಮನ ಸೆಳೆದಿವೆ: ಕಳೆದ ವರ್ಷ ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ, ನ್ಯಾಯಾಲಯವು ಒಂದು ವಾರ ಕಾಲ ನಗರದ ಪ್ರಮುಖ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಸಹಕರಿಸುವಂತೆ ಆದೇಶ ನೀಡಿತ್ತು. ಬೆಂಗಳೂರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ಅಥವಾ ತೀವ್ರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಲ್ಲಿ, ನಗರದ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (TMC) ಕುಳಿತು ಸಂಚಾರ ನಿಯಮಗಳ ಕುರಿತ ವಿಡಿಯೋಗಳನ್ನು ವೀಕ್ಷಿಸುವ ಅಥವಾ ಪಾರ್ಕ್‌ಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಶಿಕ್ಷೆಯನ್ನು ವಿಧಿಸಿದ ಉದಾಹರಣೆಗಳಿವೆ. ಮೈಸೂರುನಲ್ಲಿ ಹೆಲ್ಮೆಟ್ ರಹಿತ ಚಾಲನೆ ಮತ್ತು ಅತೀ ವೇಗದ ಚಾಲನೆಗೆ ಸಂಬಂಧಿಸಿದಂತೆ, ಯುವಕರಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ (Trauma Center) ಅಪಘಾತಕ್ಕೊಳಗಾದವರಿಗೆ ನೆರವಾಗುವ ಮೂಲಕ ‘ರಸ್ತೆ ಸುರಕ್ಷತೆಯ ಬೆಲೆ’ ಏನೆಂದು ತಿಳಿಯುವಂತೆ ಆದೇಶಿಸಿದ ನಿದರ್ಶನಗಳಿವೆ.

ಸಾರ್ವಜನಿಕ ವಲಯದಲ್ಲಿ ಶ್ಲಾಘನೆ
ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಕಟ್ಟಿ ಕೈತೊಳೆದುಕೊಳ್ಳುವವರೇ ಹೆಚ್ಚು. ಆದರೆ, “ದುಡ್ಡಿನ ದಂಡಕ್ಕಿಂತ ನೈತಿಕ ದಂಡ ದೊಡ್ಡದು” ಎಂಬ ತತ್ವದಡಿ ನ್ಯಾಯಾಲಯ ನೀಡುವ ಇಂತಹ ಶಿಕ್ಷೆಗಳು ತಪ್ಪಿತಸ್ಥರಲ್ಲಿ ಪಶ್ಚಾತ್ತಾಪ ಮೂಡಿಸುತ್ತವೆ. ಪೊಲೀಸ್ ಇಲಾಖೆಯ ಚುರುಕಾದ ಕ್ರಮ ಮತ್ತು ನ್ಯಾಯಾಲಯದ ಈ ಸಮಾಜಮುಖಿ ತೀರ್ಪು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆ ಸುರಕ್ಷತೆ ಎಂಬುದು ಕೇವಲ ಕಾನೂನಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಸುಳ್ಯದ ಈ ಘಟನೆಯು ಇಡೀ ರಾಜ್ಯಕ್ಕೆ ‘ಸಂಸ್ಕಾರಯುತ ಸಂಚಾರ’ದ ಸಂದೇಶ ರವಾನಿಸಿದೆ. “ಕೇವಲ ದಂಡ ವಿಧಿಸುವುದಲ್ಲದೆ, ಸಮಾಜದಲ್ಲಿ ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ನ್ಯಾಯಾಲಯವು ಈ ‘ಸಮುದಾಯ ಸೇವೆ’ಯ ಆದೇಶ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.”

Article
ಕಟುಕರ ಕೈಸೇರಿ ಬಚಾವಾದ ಹಾಲು ಕೊಡುವ ಹಸುಗಳು..ವಿಟ್ಲ ಪೊಲೀಸರ ಸಹಕಾರದಲ್ಲಿ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರು ಜನ್ಮ ಪಡೆದ ಗೋವುಗಳು.
ಕರಾವಳಿಯಲ್ಲಂತೂ ಅಕ್ರಮ ಗೋಸಾಗಾಟ ರಾಜಕೀಯ ಬೆಳವಣಿಗೆಗೆ ಪೌಷ್ಟಿಕಾಂಶವೆಂದೇ ಹೇಳಬೇಕು. ಅಕ್ರಮ ದನ ಸಾಗಾಟವನ್ನು ತಡೆಹಿಡಿದು ಕಾನೂನಾತ್ಮಕವಾಗಿ ಅಕ್ರಮ ಸಾಗಾಟಗಾರನ್ನು ಪೊಲೀಸರಿಗೊಪ್ಪಿಸುವ ಮಂದಿ ಕೆಲವರಾದರೆ, ಅಕ್ರಮ ಗೋಸಾಗಾಟವನ್ನು ತಡೆಹಿಡಿದು ಸಾಗಾಟಗಾರರೊಡನೆ ಡೀಲು ಕುದುರಿಸಿ ಹಣ ಪಡೆದು ಗೋವು ಸಾಗಾಟಕ್ಕೆ ದಾರಿ ಮಾಡಿಕೊಡುವ ಗೋಪ್ರೇಮಿಗಳು ಕತ್ತಲಿನಲ್ಲಿ ಅಗಾಗ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಅಕ್ರಮ ಗೋ ಸಾಗಾಟವನ್ನು ತಡೆಹಿಡಿದು ಯಾವಾಗ ಪೊಲೀಸರ ವಶಕ್ಕೆ ಸಿಕ್ಕಿತೋ ಈ ಗೋವುಗಳನ್ನು ಏನು ಮಾಡುವುದು ಎಂಬಲ್ಲಿಗೆ ಪೊಲೀಸರು ತಲೆಕೆರೆದು ಕೊಂಡಾಗ ಗೋಪ್ರೇಮಿಗಳ ಫೋನುಗಳು ಪೊಲೀಸರ ಕಿವಿ ತಟ್ಟುತ್ತದೆ. ನಮಗೆ ಗೋವುಗಳನ್ನು ಕೊಡಿ ನಾವು ಮನೆಯಲ್ಲಿ ಆರಾಮವಾಗಿ ಸಾಕುತ್ತೇವೆ ಎಂದು..ಮತ್ತೆ ಅದು ಹೋಗುವುದು ಕಟುಕರ ಕೈಗೆ ಎಂಬುವುದು ಪೊಲೀಸರಿಗೂ ಗೊತ್ತು.! ಅದಕ್ಕಾಗಿ ಅಧಿಕೃತ ಗೋಶಾಲೆಗಳ ಕದ ಬಡಿಯುವುದು ಪೊಲೀಸರ ಸಾಹಸವೇ ಸರಿ. ಚುನಾವಣಾ ಸಂದರ್ಭದಲ್ಲಿ ಗೋ ರಕ್ಷಣೆಯ ಹೆಸರಲ್ಲಿ ಮತ ಬೇಡುವ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರತೀ ಗ್ರಾಮಕ್ಕೊಂದು ಗೋಶಾಲೆ ನಿರ್ಮಾಣ ಮಾಡುವ ವಾಗ್ದಾನ ನೀಡಿತ್ತು. ಆದರೆ ಅಧಿಕಾರ ದಕ್ಕಿದ ಹನ್ನೆರಡು ವರ್ಷಗಳಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆ ಕಸದ ತೊಟ್ಟಿ ಸೇರಿಕೊಂಡಿದೆ. ಗೋವುಗಳು ಭಕ್ಷಕರ ಹೊಟ್ಟೆ ಸೇರಲು ದಾರಿ ಸುಗಮವಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಂಡ್ಯ ಮೂಲದ ಹಿಂದೂ ಯುವಕರಿಬ್ಬರು ಸಾಲೆತ್ತೂರಿನ ಶಾಫಿ ಎಂಬಾತನಿಗೆ ನಕಲಿ ದಾಖಲೆ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಗೋವುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಗೋಸಾಗಾಟ ತಡೆಯಲು ಸಂಘಟನೆಗಳ ಕಾರ್ಯಕರ್ತರು ರೆಡಿಯಾಗಿದ್ದಾರೆಯೇ ವಿನಹ ಆ ಬಳಿಕ ಗೋವುಗಳಿಗೆ ಯಾರು ಗತಿ ಎಂಬುದನ್ನು ಈವರೆಗೂ ಯಾವುದೇ ಸಂಘಟನೆಗಳಾಗಲೀ.. ಗೋರಕ್ಷಣೆ ಬಗ್ಗೆ ವೇದಿಕೆಯಲ್ಲಿ ಮೈಕ್ ಹಿಡಿದು ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷದ ಮುಖಂಡರಾಗಲೀ ಯೋಚಿಸುತ್ತೂ ಇಲ್ಲ..ಸಹಕಾರ ನೀಡುತ್ತಲೂ ಇಲ್ಲ ಎಂಬುದು ನೂರರಷ್ಟು ಸತ್ಯ.

ನೋಡಲಾಗುತ್ತಿಲ್ಲ ಮೂಕ ಪ್ರಾಣಿಗಳ ವೇದನೆ.
ಮೂರು ದಿನಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ರಸ್ತೆಯ ಕರೈ ಎಂಬಲ್ಲಿ ಪತ್ತೆ ಹಚ್ಚಿದ ಗೋವುಗಳ ಪರಿಸ್ಥಿತಿಯೂ ಇದೇ ಆಗಿದೆ. ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಎರಡು ಗೋವುಗಳು ಸಾಕಷ್ಟು ಪ್ರಮಾಣದಲ್ಲಿ ದೈಹಿಕವಾಗಿ ಗಾಯಗೊಂಡಿತ್ತು. ಪೊಲೀಸರು ವಶಕ್ಕೆ ಪಡೆದ ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತಿದೆ.
ರಸ್ತೆಯಲ್ಲಿ ತಡೆಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಬಳಿಕ ಗೋಪ್ರೇಮಿ ಕಾರ್ಯಕರ್ತರ ಜವಾಬ್ದಾರಿ ಮುಗಿಯಿತೇ.? ಗೋವುಗಳಿಗೆ ನೀರು, ಆಹಾರ ನೀಡುವುದು ಪೊಲೀಸರ ಜವಾಬ್ದಾರಿಯೇ.? ಪೊಲೀಸ್ ಠಾಣೆಗಳಲ್ಲಿ ಹುಲ್ಲು, ಹಿಂಡಿ ಸೇರಿದಂತೆ ಇನ್ನಿತರ ಪಶುಗಳ ಆಹಾರ ದಾಸ್ತಾನು ಇದೆಯೇ.? ಕಾನೂನು ಪ್ರಕ್ರಿಯೆ ಮುಗಿಯುವ ತನಕ ಗೋವುಗಳನ್ನು ಕಟ್ಟಿಹಾಕಲು ಪೊಲೀಸ್ ಠಾಣೆಯಲ್ಲಿ ಹಟ್ಟಿ ವ್ಯವಸ್ಥೆ ಇದೆಯೇ.? ಇದೆಲ್ಲವನ್ನೂ ಮಾಡಬೇಕಾದವರು ಯಾರು ಎಂಬ ಬಗ್ಗೆ ಈವರೆಗೂ ಯಾರೊಬ್ಬರೂ ಚಿಂತಿಸದಿರುವುದು ಗೋಪ್ರೇಮಿಗಳ ನಕಲಿ ಹಿಂದುತ್ವ ಎಂಬುದನ್ನು ಬಿಡಿಸಿ ಹೇಳಬೇಕೇ.?

ಗೋವುಗಳ ಪಡೆಯಲು ಗೋಶಾಲೆಗಳ ನಕಾರ..
ಪೊಲೀಸರು ವಶಕ್ಕೆ ಪಡೆದ ಗೋವುಗಳನ್ನು ಪಡೆಯಲು ಯಾವುದೇ ಖಾಸಗಿ ಗೋಶಾಲೆಗಳ ವ್ಯವಸ್ಥಾಪಕರು ಮುಂದೆ ಬರುತ್ತಿಲ್ಲ. ಗೋಶಾಲೆಗಳಿಗೆ ಯಾವುದೇ ಸರಕಾರ ಈವರೆಗೂ ಪುಡಿಗಾಸೂ ನೀಡುತ್ತಿಲ್ಲ. ಗೋಶಾಲೆ ನಡೆಸುವವರೂ ಅವುಗಳ ಪಾಲನೆ ಮಾಡಲು ಅನಿವಾರ್ಯವಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದಾರೆ. ಅಕ್ರಮ ಗೋಸಾಗಾಟ ತಡೆಯುವ ಸಂಘಟನೆಗಳು, ಗೋಪ್ರೇಮಿ ರಾಜಕೀಯ ಪುಢಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಗೋಶಾಲೆಗಳ ಬಗ್ಗೆ ಸ್ಪಂದಿಸುವುದು ಬಿಡಿ ಅತ್ತ ಕಡೆ ತಲೆ ಕೂಡ ಹಾಕುತ್ತಿಲ್ಲ ಎಂಬುದು ನೂರರಷ್ಟು ಸತ್ಯ. ಪ್ರತಿಯೊಂದು ಗೋಶಾಲೆಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಗೋವುಗಳು ತುಂಬಿಹೋಗಿದ್ದು ಅವುಗಳ ಪಾಲನೆಗಾಗಿ ಪ್ರತಿನಿತ್ಯ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಸಹಕಾರ ನೀಡುತ್ತಿಲ್ಲ ಎಂಬುದೇ ಗೋಶಾಲೆಗಳು ಗೋವುಗಳ ಪಡೆಯಲು ನಿರಾಕರಿಸಲು ಮುಖ್ಯ ಕಾರಣವಾಗಿದೆ.

ಗ್ರಾಮ ಪಂ, ಪ.ಪಂಚಾಯತ್ ಗೋಶಾಲೆ ನಿರ್ಮಿಸಲಿ..
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಇನ್ನಾದರೂ ತಮ್ಮ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಿಸಲು ಜನಪ್ರತಿನಿಧಿಗಳು ಒತ್ತಾಯಿಸಬೇಕು. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂತಹ ಸಂದರ್ಭದಲ್ಲಿ ಸಿಕ್ಕಿದ ಗೋವುಗಳನ್ನು ಕಾನೂನು ಪ್ರಕ್ರಿಯೆ ಮುಗಿದ ಬಳಿಕ ತಮ್ಮ ಗೋಶಾಲೆಗಳಲ್ಲಿ ಸಲಹುವಂತಾಗಬೇಕು. ಇಲ್ಲವಾದರೆ ಗೋವುಗಳು ಪತ್ತೆಯಾದ ತಕ್ಷಣ ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಸಾಕುವ ನೆಪದಲ್ಲಿ ಠಾಣೆಯಿಂದ ಪಡೆಯುವ ಖಾಸಗಿ ವ್ಯಕ್ತಿಗಳು ಒಂದೆರಡು ದಿನ ಮನೆಯಲ್ಲಿರಿಸಿ ಮತ್ತೆ ಕುಟುಕರಿಗೆ ಸಾವಿರಾರು ರೂಪಾಯಿಗಳಿಗೆ ನೀಡುವ ಮೂಲಕ ದಂಧೆ ನಡೆಸುತ್ತಿದ್ದಾರೆ.

ಅನಾಥವಾದ ಗೋವುಗಳು.
ಸಾಲೆತ್ತೂರು ಕರೈ ಬಳಿ ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ವಶಕ್ಕೆ ಪಡೆದ ಎರಡು ದೊಡ್ಡ ಗಾತ್ರದ ಹಾಲು ಕರೆಯುವ ಹಸುಗಳು ಮೂರು ದಿನಗಳಿಂದ ವಿಟ್ಲ ಠಾಣೆಯಲ್ಲಿ ಆಶ್ರಯ ಪಡೆದಿತ್ತು. ವಿಟ್ಲ ಪರಿಸರದ ಗೋಶಾಲೆಗಳು ಸ್ಥಳಾವಕಾಶ ಮತ್ತು ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ಗೋವುಗಳ ಪಡೆಯಲು ನಿರಾಕರಿಸಿದ್ದವು. ಈ ಮಧ್ಯೆ ಮೂರ್ನಾಲ್ಕು ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ಬೇಕೆಂದು ಹೇಳುತ್ತಾ ಗೋವುಗಳ ಪಡೆಯಲು ಕಸರತ್ತು ನಡೆಸಿದ್ದರು. ಆದರೆ ಕಾನೂನು ಚೌಕಟ್ಟಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ಗೋವುಗಳನ್ನು ನೀಡುವಂತಿಲ್ಲ. ಅದರಿಂದಾಗಿ ನಕಲಿ ಗೋಪ್ರೇಮಿಗಳ ಕಸರತ್ತು ವಿಫಲವಾಗಿದೆ.

ಗೋವುಗಳಿಗೆ ಮರು ಜನ್ಮ ನೀಡಿದ ದೈಗೋಳಿ ಸೇವಾಶ್ರಮ..
ಹಲವು ವರ್ಷಗಳಿಂದ ನೂರಾರು ಅನಾಥ ಬಡ ಜೀವಗಳಿಗೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಬೀದಿ ಬೀದಿ ಅಲೆದಾಡುತ್ತಿದ್ದ ಅದೆಷ್ಟೋ ಜೀವಗಳ ಪಾಲಿಗೆ ಮಂಜೇಶ್ವರ ತಾಲೂಕಿನ ದೈಗೋಳಿಯ ಡಾ.ಉದಯಕುಮಾರ್-ಶಾರದಮ್ಮ ದಂಪತಿಗಳ ನೇತೃತ್ವದ ಶ್ರೀಸಾಯಿ ನಿಕೇತನ ಸೇವಾಶ್ರಮ ಮರು ಜನ್ಮ ನೀಡುತ್ತಿದೆ. ಇದರ ಜೊತೆಗೆ ಅಲ್ಲಿನ ಕಾಮಧೇನು ಗೋಶಾಲೆಯಲ್ಲಿ ಈಗಾಗಲೇ ಐವತ್ತಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ. ಅಲ್ಲೂ ಸ್ಥಳಾವಕಾಶ ದ ಕೊರತೆ ಎದ್ದು ಕಾಣುತ್ತಿದೆ. ಆದರೆ ಗಾಯಗೊಂಡ ಗೋವುಗಳ ಅಸಹಾಯಕ ಪರಿಸ್ಥಿತಿಯನ್ನು ಮನಗಂಡು ಆಶ್ರಯ ನೀಡಲು ವೈದ್ಯ ದಂಪತಿಗಳು ಮುಂದೆ ಬಂದಿರುವುದು ತಮ್ಮ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಪತ್ರಕರ್ತ ವಿ.ಟಿ.ಪ್ರಸಾದ್ ಅವರ ಬೇಡಿಕೆಗೆ ಸ್ಪಂದಿಸಿದ ದೈಗೋಳಿ ಸೇವಾಶ್ರಮದ ವೈದ್ಯ ದಂಪತಿಗಳು ತಮ್ಮ ಕಾಮಧೇನು ಗೋಶಾಲೆಗೆ ವಿಟ್ಲ ಪೊಲೀಸರ ಸಹಕಾರದಲ್ಲಿ ಕರೆದೊಯ್ದ ಎರಡು ಗೋವುಗಳನ್ನು ದಾಖಲಿಸುವ ಮೂಲಕ ಮರು ಜನ್ಮ ನೀಡಿದ್ದಾರೆ.

ಇನ್ನಾದರೂ ಗೋಸಾಗಾಟ ತಡೆಯುವ ಗೋಪ್ರೇಮಿಗಳು ಆ ಬಳಿಕ ಗೋವುಗಳ ಮುಂದಿನ ಜೀವನದ ಬಗ್ಗೆ ಸ್ಪಂದಿಸುವ ಹೃದಯವಂತಿಕೆಯಲ್ಲಿ ಅಸಲಿ ಗೋಪ್ರೇಮಿಗಳಾಗಿ ಸಮಾಜದಲ್ಲಿ ಬದುಕಲಿ ಎಂಬುದು ಹಾರೈಕೆಯಾಗಿದೆ.
ವಿ.ಟಿ.ಪ್ರಸಾದ್ ಹಿರಿಯ ಪತ್ರಕರ್ತರು
ಈ ವೀಡಿಯೋ ನೋಡಿ Watch the video
ಕಟುಕರ ಕೈಯಿಂದ ಬಚಾವಾದ ಗೋವುಗಳಿಗೆ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರುಜನ್ಮ
ಈ ನ್ಯೂಸನ್ನೂ ಓದಿ
-
crime1 day agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
