Connect with us

Bantawala

ಜಿಲ್ಲೆಯ ಜನರ ಶಾಂತಿಯುತ ಬದುಕಿಗೆ ಅಪೂರ್ವ ಕೊಡುಗೆ ನೀಡಿದ ಇಬ್ಬರು ದಕ್ಷ ಅಧಿಕಾರಿಗಳು..

Published

on


ಕೋಮುಗಲಬೆಗಳಿಗೆ ಬ್ರೇಕ್ ಬಿದ್ದಿದೆ. ರೌಡಿಗಳು ಕ್ರಿಮಿನಲ್‌ಗಳು ಬಿಲ ಸೇರಿದ್ದಾರೆ, ಅಕ್ರಮ ಜೂಜಾಟಗಳು ನಡೆಯುವುದೇ ಇಲ್ಲ, ಅಕ್ರಮ ವ್ಯವಹಾರಗಳ ಕುಳಗಳು ತಲೆಮರೆಸಿಕೊಂಡಿದ್ದಾರೆ, ಮಸಾಜ್ ಪಾರ್ಲರ್ ಅಡ್ಡೆಗಳಿಗೆ ಬೀಗ ಬಿದ್ದಿದೆ, ಅಕ್ರಮ ಕಲ್ಲಿನ ಕೋರೆಗಳ ಸದ್ದು ನಿಂತೇ ಹೋಗಿದೆ, ಕಿವಿತಮಟೆಯನ್ನೇ ಹರಿದುಹಾಕುವ ಡಿಜೆ ಸದ್ದುಗಳು ಇಲ್ಲವೇ ಇಲ್ಲ. ದ್ವೇಷ ಭಾಷಣಕ್ಕೆ ಮೈಕ್ರೋಪೋನೇ ಬೆದರಿದೆ. ಸಾಮಾಜಿಕ ಜಾಲತಾಣಗಳಿಂದ ವ್ಯಕ್ತಿ ನಿಂದಕ, ಗಲಭೆ ಪ್ರಚೋದಕ, ಸುಳ್ಳುವಿವಾದಕ ಪೋಸ್ಟ್ಗಳು ಇಲ್ಲದಾಗಿವೆ, ಅಕ್ರಮ ದನ ಸಾಗಾಟಕ್ಕೆ ಅವಕಾಶವೇ ಇಲ್ಲ. ಅದೆಷ್ಟೋ ಸಂಸಾರವನ್ನು ಬಲಿ ಪಡೆದ ಮಾದಕ ಜಾಲದ ಒಂದೊoದೆ ಡ್ರಗ್ಗ್ ಪೆಡ್ಲರ್ ಗಳು ಬೆಳಕಿಗೆ ಬರುತ್ತಿದ್ದಾರೆ. ಇಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಎಂಬ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿ ಈಗ ಸ್ವಚ್ಛವಾಗುತ್ತಿದೆ. ಕೋಮು ದಳ್ಳುರಿಯಿಂದ ದಗದಗನೆ ಉರಿಯುತ್ತಿದ್ದ ಕರಾವಳಿಯನ್ನು ಕೇವಲ 6 ತಿಂಗಳಿನಲ್ಲಿಯೇ ಒಂದು ಮಾದರಿ ಶ್ರದ್ದಾಕೆಂದ್ರವಾಗಿ ಮಾಡುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ. ಅರುಣ್ ಅವರಿಗೊಂದು ಸಲಾಂ, ಜಿಲ್ಲೆಯ ಜನತೆ ಅವರ ಕಾರ್ಯವೈಖರಿಗೆ ತಲೆಬಾಗಲೇಬೇಕು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಅದೆಷ್ಟೋ ಕಮಿಷನರುಗಳಾಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಐಪಿಎಸ್ ಅಧಿಕಾರಿಗಳು ಸೇವೆ ಸಲ್ಲಿಸಿದ್ದರು. ಆದರೆ ಈ ಬಾರಿ ಬಂದಿದ್ದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಡಾ.ಅರುಣ್ ಕುಮಾರ್ ಅವರ ಖಡಕ್ ಕರ್ತವ್ಯದಿಂದಾಗಿ ಜನ ಸಾಮಾನ್ಯರಿಗೆ ಯಾವುದು ಅಕ್ರಮ..ಯಾವುದೆಲ್ಲ ಕಾನೂನು ಚೌಕಟ್ಟಿನೊಳಗೆ ನಡೆಯುವ ಕಾರ್ಯಗಳು ಎಂಬುದು ಮನವರಿಕೆಯಾಗಿದೆ. ಈವರೆಗೆ ಮೈಕ್ ಮುಂದೆ ಭಾಷಣ ಬಿಗಿಯುವುದೆಲ್ಲವೂ ಕಾನೂನು ಚೌಕಟ್ಟಿನೊಳಗೆ ಎಂಬ ಮಾತು ನಂಬಿದ್ದ ಜನಸಾಮಾನ್ಯರ ಪಾಲಿಗೆ ಇಂದಿನ ಇಬ್ಬರು ಅಧಿಕಾರಿಗಳು ಹೀರೋ ಎನಿಸಿಕೊಂಡಿರುವುದು ಅತಿಶಯೋಕ್ತಿಯಲ್ಲ .
ಕರಾವಳಿಯ ಜನತೆ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿರುವಾಗಲೇ ಅಕ್ರಮ ದಂಧೆಕೋರರು ಮಾಫಿಯಾಗಳು ಕೆಲವೊಂದು ಉದ್ಯಮಿಗಳು ಈಗ ನೀರಿನಿಂದ ಮೇಲೆ ಬಿದ್ದ ಮೀನಿನಂತೆ ಚಡಪಡಿಸುತ್ತಾ ವರ್ಗಾವಣೆ ಮಾಡಿಸಲು ಇಲ್ಲಸಲ್ಲದ ಪ್ರಯತ್ನಕ್ಕೆ ಕೈಹಾಕಿ ಇದೀಗ ಕೈಸುಟ್ಟುಕೊಂಡು ಈ ಅಧಿಕಾರಿಗಳ ವರ್ಗಾವಣೆ ಸಮಯಕ್ಕೆ ದಿನ ಎಣಿಸುತ್ತಿದ್ದಾರೆ,

ಕರಾವಳಿ ದ್ವೇಷದ ದಳ್ಳುರಿಗೆ ಕರಟಿ ಹೋಗಿತ್ತು. ಎಲ್ಲಿ ಏನಾಗುವುದೋ ಎಂಬ ಭೀತಿಯಲ್ಲಿ ಜನ ಭಯಭೀತರಾಗಿದ್ದರು.ವಾಟ್ಸಾಪ್ ಸಂದೇಶಗಳೇ ದೇವರ ಆದೇಶವೆಂಬoತೆ ಪರಿಪಾಲನೆಯಾಗಿ ಅಮಾಯಕರ ಬಲಿದಾನವಾಗುತ್ತಿತ್ತು. ಧರ್ಮ ಧರ್ಮಗಳ ಮದ್ಯೆ ಬೆಂಕಿ ಹೊಗೆಯಾಡಿ ದ್ವೇಷ ಸಾಧನೆ ಪ್ರತಿಫಲಿಸುತ್ತಿತ್ತು. ಮನುಕುಲವೇ ನಾಚಿಸುವಂತಹ ಅಘೋರ ಕೃತ್ಯಗಳು, ಪ್ರತಿಕಾರಕ್ಕೆ ಪ್ರತಿಕಾರ ನಡೆದೇ ಹೋಗುತ್ತಿತ್ತು. ಭೀಬತ್ಸ ಘಟನೆಗಳು ನಡೆದಾಗ ಅವರವರ ಧರ್ಮಕ್ಕೆ ಆಚಾರಗಳಿಗೆ ಬೆಂಬಲವಾಗಿ ಅವರವರ ಜನಪ್ರತಿನಿಧಿಗಳು ಓಡಿಬಂದು ಸಾಂತ್ವಾನ ನುಡಿಯುವುದು, ಪ್ರತಿಕಾರವನ್ನು ಘೋಷಿಸುವುದು ಆ ಮೂಲಕ ತಮ್ಮ ಪಕ್ಷವನ್ನು ಬಲಪಡಿಸುವುದು ನಡೆಯುತ್ತಲೇ ಇತ್ತು. ಸಾಮರಸ್ಯದ ಮಾತು ಶಾಂತಿ ಸಭೆಯಲ್ಲಿಯೂ ಇಲ್ಲದಾಗಿತ್ತು. ಕರಾವಳಿಯಲ್ಲಿ ಹಿಂದೆ ತಾವು ನಡೆದದ್ದೇ ದಾರಿ ಎಂದು ಜನಪ್ರತಿನಿಧಿಗಳು ಆಡಿದ ಆಟಕ್ಕೆ ಅದೆಷ್ಟೋ ಬಡಪಾಯಿ ಸಂಸಾರಗಳು ಜೈಲುಪಾಲಾಗಿದ್ದರು. ಧರ್ಮಾಂಧತೆಯ ಕಪಿಮುಷ್ಠಿಯಲ್ಲಿ ನಲುಗಿ ಪ್ರಾಣ ಕಳೆದುಕೊಂಡವರೆಷ್ಟೋ? ಜೈಲುಪಾಲಾದವರೆಷ್ಠೋ ? ಬಡಜೀವಗಳು ಲೆಕ್ಕ ಹಾಕುತ್ತಲೇ ಜೀವನ ಕಳೆಯುವಂತಾಯಿತು. ಇದರ ನಿಯಂತ್ರಣ ದಾರಿ ಇಲ್ಲವೇ ಎಂದಾಗ ದೈವದೇವರಿಗೂ ಇಲ್ಲಿನ ಅರಾಜಕತೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲೇ ಇಲ್ಲ. 2006ರ ಸುರತ್ಕಲ್ ಸುಖಾನಂದ ಶೆಟ್ಟಿ ಕೊಲೆಯಿಂದ 2025ರ ಕೊಳ್ತಮಜಲು ರಹಿಮಾನ್ ಕೊಲೆತನಕ ಧರ್ಮದ ನಾಡಿನಲ್ಲಿ ಪ್ರತಿಕಾರದ ಪರ್ವ ಮುಂದುವರಿಯುತ್ತಲೇ ಇತ್ತು.

ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಶಾಂತಿ ಸೌಹಾರ್ದತೆಯನ್ನು ಮತ್ತೆ ಕರಾವಳಿಯಲ್ಲಿ ಸ್ಥಾಪಿಸಲು ಪಣ ತೊಟ್ಟ ಖಾಕಿಗಳಿಬ್ಬರು ಕಾನೂನಿನ ಪರಿಚಯವನ್ನು ಜನಸಾಮಾನ್ಯರಿಗೂ ತಲುಪಿಸುವ ಆ ಮೂಲಕ ನೆಮ್ಮದಿಯ ಜೀವನಕ್ಕೆ ಶ್ರೀ ರಕ್ಷೆಯಾಗಿ ನಿಂತಿರುವುದು ಕರಾವಳಿ ಜನತೆಯ ಸೌಭಾಗ್ಯವೇ ಸರಿ, ಆದರೆ ಅಧಿಕಾರಿಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕು, ನಾವು ಹೇಳಿದಂತೆ ತಲೆಯಾಡಿಸಬೇಕು ಕೇಳದಿದ್ದರೆ ಎತ್ತಂಗಡಿ ಮಾಡಲೇ ಬೇಕಾಗಿರುವುದು. ಅದು ನಮ್ಮ ಮಾರ್ಯಾದೆಯ ಪ್ರಶ್ನೆ ಎಂದೆಲ್ಲ ಯೋಚಿಸುತ್ತಿರುವವರಿಗೆ ಆಘಾತ ಎದುರಾಗಿದೆ. ಆಡಳಿತ ಪಕ್ಷದವರಿಂದ ಮೊದಲಾಗಿ ವಿರೋಧ ಪಕ್ಷದವರು ಕೂಡಾ ಜೊತೆಯಾಗಿ ಅವರ ವರ್ಗಾವಣೆಯ ವಿಚಾರಕ್ಕೆ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಸಿಎಂ, ಉಸ್ತುವಾರಿ ಮತ್ತು ಡಿಜಿಯವರು ಕರಾವಳಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಗರಂ ಆಗಿರುವುದರಿಂದ ‘ವರ್ಗಾವಣೆ ನವೆಂಬರ್‌ನಲ್ಲಿ ಆಗುತ್ತದೆ,, ಡಿಸೆಂಬರ್‌ನಲ್ಲಿ ಪಕ್ಕಾ… ಈಗ ಜನವರಿ ಕೊನೆಗೆ ಗ್ಯಾರಂಟಿ ಎಂಬಲ್ಲಿಗೆ ಬಂದು ನಿಂತಿದೆ. ಯಾವಾಗ ಎಂಬ ಅವರ ಹಿಂಬಾಲಕರ ಪ್ರಶ್ನೆಗೆ ದಿನಾಂಕ ಮುಂದುವರಿಯುತ್ತಲೇ ಇದೆ.


ಈಗ ಹೇಗಾದರೂ ಮಾಡಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಲೇ ಬೇಕು ಎನ್ನುವ ಸಂಧರ್ಭಕ್ಕೆ ಧಾರ್ಮಿಕ ಅಸ್ತçವೊಂದು ದುಷ್ಕರ್ಮಿಗಳಿಗೆ ಸಿಕ್ಕಿಯೇ ಬಿಟ್ಟಿದೆ. ಇದು ಅಂತಿoತಹ ಅಸ್ತçವಲ್ಲ. ಇದು ಧರ್ಮಾಸ್ತçವಂತೆ ! ಇದರ ಪ್ರಯೋಗದಿಂದ ಅಧಿಕಾರಿಗಳು ಇಲ್ಲಿಂದ ಹೋಗಲೇ ಬೇಕು. ಕಾನೂನು ಪಾಲನೆಯನ್ನು ಜನತಾ ಸೇವೆಯೆಂದು ಪರಿಗಣಿಸಿ ಅಕ್ರಮ ಕೋಳಿ ಕಾದಾಟಕ್ಕೆ ಬ್ರೇಕ್ ಹಾಕಿದ್ದನ್ನು ದೈವ ದೇವರ ಸಂಪ್ರದಾಯಕ್ಕೆ ಅಡ್ಡಿಪಡಿಸಿದರೆಂದು ಆರಂಭವಾದ ತೆರೆಮರೆಯ ಹೋರಾಟ ಕರಾವಳಿಯಾದ್ಯಂತ ಪಸರಿಸಿದೆ. ಕಂಕನಾಡಿ ಬೈದ್ಯರುಗಳ ನೇಮೋತ್ಸವದ ಬಳಿಕ ಼ಶರತ್ತುಬದ್ದ ಅಂಕಕ್ಕೆ ಬದ್ದರಾಗದೆ ದೈವಗಳ ಮುಂದೆ ಪ್ರಾರ್ಥನೆಯೂ ನಡೆದಿದೆ. ಮುಂದೆ ಎಲ್ಲಾ ಕಡೆಯಲ್ಲಿಯೂ ಪ್ರಾರ್ಥನೆಗಳು ನಡೆಯಬಹುದು ಅಂದರೆ ಒಂದು ರೀತಿಯ ಧಾರ್ಮಿಕ ಕ್ರಾಂತಿ ಕಾನೂನನ್ನು ಮೀರಿ ನಡೆಯುವ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಯಿಂದಾಗಿ ಅಧಿಕಾರಿಗಳ ತಲೆದಂಡವಾಗಬಹುದು ಎಂಬುವುದು ಜನಸಾಮಾನ್ಯರ ತಲೆಗೆ ಹೊಕ್ಕಿದೆ.. ಇದರ ಹಿಂದೆ ಇರುವ ದುಷ್ಕರ್ಮಿಗಳ ಮೀಸೆ ಮುಂದಕ್ಕೆ ಚಾಚುತ್ತಲೇ ಇರುವುದನ್ನು ಅಡಳಿತ ಗಮನಿಸುತ್ತಲೇ ಇದೆ. ಸಂಪ್ರದಾಯದ ಬದ್ದತೆಗಾಗಿ ಇಲಾಖೆ ಸಹಕಾರವನ್ನು ನೀಡಿದಾಗಲೂ ತಿರಸ್ಕಾರ ಮಾಡುವ ಮೂಲಕ ಶ್ರದ್ಧಾಕೇಂದ್ರವನ್ನು ಎತ್ತಿಕಟ್ಟಿ ಜಿಲ್ಲೆಯ ಸುವ್ಯವಸ್ಥೆಗೆ ಭಂಗ ತರುವ ಹುನ್ನಾರ ಯಾರದು ಎಂಬುವುದರ ಜಾಡನ್ನು ಹಿಡಿಯಲೇ ಬೇಕು. ಮತ್ತೆ ಹಿಂದಿನ ಕಾಲಾವಧಿಯ ಅಧಿಕಾರಿಗಳ ಎಂಟ್ರಿಗೆ ಚಾಪೆ ಹಾಸಲು ಸಿದ್ಧತೆ ನಡೆಸುತ್ತಿರುವವರು ಯಾರು? ನಮ್ಮ ಕರಾವಳಿಗೆ ಧಕ್ಷ ಅಧಿಕಾರಿಗಳ ಸೇವೆ ಬೇಕಾದರೆ ಅವರನ್ನು ಉಳಿಸಿ ಕೊಳ್ಳುವ ಕೆಲಸವೂ ನಮ್ಮಿಂದಲೇ ಆಗಬೇಕಾಗಿದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಸುಧೀರ್ ಕುಮಾರ್ ರೆಡ್ಡಿ ಮಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕವೂ ಗುರುತಿಸಿಕೊಂಡಿದ್ದಾರೆ. ಯಾವುದೇ ಕಾಲೇಜು ಕ್ಯಾಂಪಸ್ ಗಳಲ್ಲೂ ಮಾದಕ ವಸ್ತುಗಳು ಪೂರೈಕೆಯಾಗದ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಡ್ರಗ್ಗ್ ಪೆಡ್ಲರ್‌ಗಳ ಹೆಡೆಮುರಿಕಟ್ಟುವ ಮೂಲಕ ಡ್ರಗ್ಗ್ ಸಾಗಾಣಿಕೆಗೆ ಕಡಿವಾಣ ಹಾಕಿದ್ದಾರೆ.ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಕಳ್ಳತನ ದೊಂಬಿ ಯಾವುದೇ ಅಪರಾಧಿಕ ಕೃತ್ಯಗಳಿಗೆ ಮಾದಕ ಸೇವನೆಯೇ ಪ್ರಮುಖ ಕಾರಣವೆಂದು ಕಂಡುಕೊAಡ ಆಧಿಕಾರಿಗಳು ಆ ಜಾಲದ ಹಿಂದೆ ಬಿದ್ದಿದ್ದಾರೆ. ಪ್ರಮುಖ ಕುಳಗಳ ಅಡ್ಡೆಯನ್ನು, ಸಾಗಿ ಬರುವ ದಾರಿಯನ್ನೂ ಪತ್ತೆಹಚ್ಚಿ ವ್ಯಸನಕ್ಕೆ ಬಲಿ ಬೀಳುವ ಯುವಜನತೆಗೆ ದೈರ್ಯ ಮತ್ತು ಸಂದೇಶದ ಮೂಲಕ ಜಾಗೃತಿಯನ್ನು ನೀಡುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದೆ ಕಮಿಷನರ್ ಅವರು ವ್ಯಸನ ವಿರೋಧಿ ಜಾಗೃತಿ ಸಂದೇಶವನ್ನು ಕನ್ನಡದಲ್ಲಿ ಮಾಡದೆ ತುಳು ಭಾಷೆಯಲ್ಲಿ ನೀಡುವುದರ ಮೂಲಕ ತುಳುವರ ಮನಸ್ಸನ್ನು ಮುಟ್ಟುವ ಉತ್ತಮವಾದ ಕೆಲಸ ಮಾಡಿ ಅದರಿಂದ ಉತ್ತಮವಾದ ನಿರೀಕ್ಷೆಯಲ್ಲಿದ್ದಾರೆ.


ವ್ಯಸನ ಆಶ್ರಯಿತ ಕೋಮುದಳ್ಳುರಿಯಿಂದ ಧಗಧಗಿಸುತ್ತಿದ್ದ ಕರಾವಳಿಯನ್ನು ಸೌಹಾರ್ದತೆಯ ಶ್ರದ್ಧಾಕೇಂದ್ರವಾಗಿ ನಿರ್ಮಿಸಲು ತಮ್ಮ ಕರ್ತವ್ಯದ ಅವಧಿಯನ್ನೂ ಮೀರಿ ಶ್ರಮಿಸುತ್ತಿರುವ ಅಧಿಕಾರಿಗಳ ದಕ್ಷತೆಗೆ ನಮ್ಮ ನಿಮ್ಮೆಲ್ಲರ ಸಹಕಾರ ಬೇಕಾಗಿದೆ.

Continue Reading
Advertisement

Bantawala

ವಿಟ್ಲದಲ್ಲಿ ಬಡಕಾರ್ಮಿಕೆ ರಾಜೇಶ್ವರಿಯವರ ಮನೆ ಬೆಂಕಿಗಾಹುತಿ

Published

on

ವಿಟ್ಲ ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ಕಾರ್ಮಿಕೆಯಾಗಿರುವ ರಾಜೇಶ್ವರಿ ಎಂಬವರ ಮನೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೊತ್ತಿ ಉರಿದ ಘಟನೆಯೊಂದು ಪೆ.10ರಂದು ಸಂಭವಿಸಿದ್ದು, ಬಡ ನಿರ್ಗತಿಕ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.


ಮನೆಯೊಡತಿ ರಾಜೇಶ್ವರಿ ಅವರು ಎಂದಿನಂತೆ ಬೆಳಗ್ಗೆ ಬೀಗ ಹಾಕಿ ಅಡಿಕೆ ಗಾರ್ಬನ್ ಕೆಲಸಕ್ಕೆ ಹೋಗಿದ್ದರೆ ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಭಸ್ಮ ಮಾಡಿದೆ.

ಮನೆಯಿಂದ ವಿಪರೀತ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಜಮಾಯಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿಯೇ ಮನೆಯೊಳಗಿದ್ದ ಮಕ್ಕಳ ಬಟ್ಟೆಬರೆ ಶಾಲಾ ಪುಸ್ತಕಗಳು, ಮನೆಯ ದಾಖಲೆಪತ್ರಗಳು ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಕರಟಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಬಡ ಕಾರ್ಮಿಕೆ ಗಾರ್ಬಲ್‌ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ದು, ಮನೆ ಬೆಂಕಿಗಾಹುತಿಯಾದ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

Continue Reading

accident

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..

Published

on

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.


ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Continue Reading

Bantawala

ಕುಟುಂಬದ ಯಜಮಾನರಾಗಿ ಪೂಂಜರಬೆಟ್ಟು ಕೇಶವ ಭಂಡಾರಿ; ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನಾ ಸಭೆ

Published

on

ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಕುದ್ರಿಯ ತರವಾಡಿನ ನೂತನ ಯಜಮಾನರಾಗಿ ಹಿರಿಯ ದೈವ ಚಾಕಿರಿಯವರಾದ ಪೂಂಜರಬೆಟ್ಟು ಕೇಶವ ಭಂಡಾರಿ ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳು ಮತ್ತು ಕುಟುಂಬಿಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನೆಯ ಸಭೆ ನಡೆಯಿತು.

ಹಿಂದಿನ ಟ್ರಸ್ಟಿಗಳ ಮರಣ, ರಾಜೀನಾಮೆ, ಹಾಗೂ ವಜಾಗೊಂಡ ಸದಸ್ಯರ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು. ಕುದ್ರಿಯ ಗುತ್ತು ಟ್ರಸ್ಟಿನ ನೂತನ ಗೌರವಾಧ್ಯಕ್ಷರಾಗಿ ವಿಠಲ ಮೋನಪ್ಪ ಶೆಟ್ಟಿ ನಾಂದೇಡ್, ಅಧ್ಯಕ್ಷರಾಗಿ ಚಂದ್ರಹಾಸ ಎಂ ಶೆಟ್ಟಿ ಅಳಕೆಮಜಲು, ಉಪಾಧ್ಯಕ್ಷರಾಗಿ ರೋಹಿಣಿ ರೈ ನೇರಳಕಟ್ಟೆ, ಹಾಗೂ ಚಂದ್ರಹಾಸ ರೈ ಮುಲ್ಕಾಜೆ ಮಾ ಡ, ಕಾರ್ಯದರ್ಶಿಯಾಗಿ ಗಣೇಶ್‌ ರೈ, ಕೋಶಾಧಿಕಾರಿಯಾಗಿ ಧನಂಜಯ ಶೆಟ್ಟಿ ಮುತ್ತೂರು, ಇವರನ್ನು ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರನ್ನು ಕುಟುಂಬಿಕರ ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

Continue Reading

Trending

Copyright © 2025 Deevatige