Connect with us

Bantawala

ನೇರಳಕಟ್ಟೆ ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಕರ್ತವ್ಯಕ್ಕೆ ಅಡ್ಡಿ; ನ್ಯಾಯಕ್ಕಾಗಿ ಪ್ರತಿಭಟನೆ ಆರಂಭ

Published

on

ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಸಿಬ್ಬಂದಿ ವರ್ಗದವರು ಕಳೆದ 24 ವರ್ಷಗಳಿಂದ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರಕರಣ ದಾಖಲಾಗಿ ಅದಕ್ಕೆ ಆರೋಪಿಗಳ ಪರವಾಗಿ ನ್ಯಾಯಾಲಯದಿಂದ ಮದ್ಯಂತರ ತಡೆ ಸಿಕ್ಕಿದ್ದು, ಇದೀಗ ಇಂದು ನೇರಳಕಟ್ಟೆ ಸಹಕಾರಿ ಸಂಘದ ಕಚೇರಿಯ ಮುಂಭಾಗದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯುವುದರ ಮೂಲಕ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ಘಟನೆಯ ಹಿನ್ನೆಲೆ:
ನೇರಳಕಟ್ಟೆ ಸಹಕಾರಿ ಸಂಘದಲ್ಲಿ ಸುಮಾರು ಎರಡು ದಶಕಗಳಿಂದ ಕ್ಲರ್ಕ್‌ ಕೆಲಸ ಮಾಡುತ್ತಿದ್ದ ಸೇಸಮ್ಮ ಎಂಬ ಮಹಿಳೆಯ ಮೇಲೆ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ ಮತ್ತು ಪ್ರಭಾರ ಮ್ಯಾನೇಜರ್ ಯತೀಶ್ ಗೌಡ ಅವರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಜೊತೆಗೆ ಸೇಸಮ್ಮ ಅವರಿಗೆ ಕೆಲಸಕ್ಕೆ ಬರದಂತೆ ಸೂಚಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆಯೂ ದೂರಲಾಗಿತ್ತು.

ಹೈಕೋರ್ಟ್ ತಡೆಯಾಜ್ಞೆ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಧ್ಯಕ್ಷರು ಮತ್ತು ಸಿಬ್ಬಂದಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ದೂರುದಾರರ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಈ ಆದೇಶವು ಆರೋಪಿಗಳಿಗೆ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ನೀಡಿದೆ.

ಸಂಘದ ಎದುರು ಪ್ರತಿಭಟನೆ:
ಇಂದು ನೇರಳಕಟ್ಟೆ ಸಹಕಾರಿ ಸಂಘದ ಕಚೇರಿಯ ಮುಂಭಾಗದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ವಿವಿಧ ದಲಿತ ಸಂಘಟನೆಗಳು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘಟನೆಯ ಮುಖ್ಯಸ್ಥರಾದ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ಮಾತನಾಡುತ್ತಾ, “ಕೋರ್ಟ್ ಆದೇಶದ ಬಗ್ಗೆ ನಮಗೆ ಗೌರವವಿದೆ, ಆದರೆ ತನಿಖೆಗೆ ತಡೆ ನೀಡಬಾರದು. 24 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ ಮಹಿಳೆಗೆ ಅನ್ಯಾಯವಾಗಿದೆ. ಮೇಲಾಧಿಕಾರಿಗಳು ಕಛೇರಿಗೆ ಭೇಟಿ ನೀಡಿ ಸೇಸಮ್ಮ ಅವರಿಗೆ ಮೌಖಿಕವಾಗಿ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಿದ ಮೇಲೆಯೂ ಅವರಿಗೆ ಕೆಲಸ ಮಾಡಲು ಅವಕಾಶ ನೀಡದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಮತ್ತು ನೊಂದ ಮಹಿಳೆಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶವನ್ನು ನೀಡಬೇಕು ಎಂದು ಆಗ್ರಹಿಸಿದರು. ದೂರು ತಡೆಯಾಜ್ಞೆಯ ಬಗ್ಗೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಈ ಘಟನೆಯು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಹಕಾರಿ ಸಂಘದ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ವಿಟ್ಲ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಿಎಂ ಶ್ರೀ ಸರಕಾರಿ ಪ್ರೌಢಶಾಲೆಗೆ ಭರ್ಜರಿ ಫಲಿತಾಂಶ; ಐವರು ವಿದ್ಯಾರ್ಥಿಗಳಿಂದ 600ಕ್ಕೂ ಅಧಿಕ ಅಂಕಗಳ ದಾಖಲೆ!

Published

on

ವಿಟ್ಲ: 2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಟ್ಲದ ಪಿಎಂ ಶ್ರೀ ಸರಕಾರಿ ಪ್ರೌಢಶಾಲೆ (ಆರ್‌ಎಂಎಸ್ ಎ) ಅತ್ಯುತ್ತಮ ಸಾಧನೆ ಮಾಡಿದ್ದು, ಶೇ. 99.2 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 122 ವಿದ್ಯಾರ್ಥಿಗಳಲ್ಲಿ 121 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸರಕಾರಿ ಶಾಲೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳು:

ಶಾಲೆಯ ಒಟ್ಟು ಐವರು ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ:

ಶ್ರೇಯಾ: 625ರಲ್ಲಿ 612 ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಕಂಬಳಬೆಟ್ಟಿನ ಶ್ರೀಕೃಪಾ ಮತ್ತು ಮಹೇಶ್ ದಂಪತಿಯ ಪುತ್ರಿ.

ಸಾನ್ವಿ ರೈ: ಬಾಕ್ರಬೈಲ್ ಸದಾಶಿವಶೆಟ್ಟಿ ಹಾಗೂ ಪ್ರತಿಮಾ ದಂಪತಿಯ ಪುತ್ರಿಯಾದ ಇವರು 611 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಮಹ್ನಾ ಖತೀಜಾ ಖಾದರ್: ಒಕ್ಕೆತ್ತೂರಿನ ಅಬ್ದುಲ್ ಖಾದರ್ ಮತ್ತು ರಶೀದಾ ದಂಪತಿಗಳ ಪುತ್ರಿಯಾದ ಇವರು 609 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ತ್ರಿಶಾ: ಕಬ್ಬಿಣಹಿತ್ಲು ನಿವಾಸಿಗಳಾದ ಸುರೇಶ್ ಮತ್ತು ಶೋಭಾ ದಂಪತಿಯ ಪುತ್ರಿಯಾದ ಇವರು 607 ಅಂಕಗಳನ್ನು ಪಡೆದಿದ್ದಾರೆ.

ಮನಸ್ವಿ ಕೆ. ಆರ್: ಕೂಜಪಾಡಿಯ ರಾಧಾಕೃಷ್ಣ ಮತ್ತು ಮೋಹಿನಿ ದಂಪತಿಯ ಪುತ್ರಿಯಾದ ಇವರು 605 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೇಣಿವಾರು ಫಲಿತಾಂಶ:

ಶಾಲೆಯ ಒಟ್ಟು ಫಲಿತಾಂಶದಲ್ಲಿ ಗುಣಮಟ್ಟದ ಸಾಧನೆ ಎದ್ದು ಕಾಣುತ್ತಿದ್ದು, ಶ್ರೇಣಿವಾರು ವಿವರ ಹೀಗಿದೆ:

ಉನ್ನತ ಶ್ರೇಣಿ (Distinction): 33 ವಿದ್ಯಾರ್ಥಿಗಳು

ಪ್ರಥಮ ಶ್ರೇಣಿ: 54 ವಿದ್ಯಾರ್ಥಿಗಳು

ದ್ವಿತೀಯ ಶ್ರೇಣಿ: 18 ವಿದ್ಯಾರ್ಥಿಗಳು

ತೃತೀಯ ಶ್ರೇಣಿ: 16 ವಿದ್ಯಾರ್ಥಿಗಳು

ಸರಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಂಕ ಗಳಿಸಿರುವುದು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರ ಹರ್ಷಕ್ಕೆ ಕಾರಣವಾಗಿದೆ. ಸಾಧಕ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಅಭಿನಂದಿಸಲಾಗಿದೆ.

Continue Reading

Agriculture

ಕೊಳ್ನಾಡು ಅಭಿವೃದ್ಧಿಗೆ ಮತ್ತೊಂದು ಕೊಡುಗೆ;36 ಲಕ್ಷ ರೂ ವೆಚ್ಚದಲ್ಲಿ ಆಣೆಕಟ್ಟು ನವೀಕರಣ; ಶಾಸಕ ಮಂಜುನಾಥ ಭಂಡಾರಿ ಶಿಪಾರಸ್ಸು

Published

on

ವಿಟ್ಲ: ಕೊಳ್ನಾಡು ಗ್ರಾಮದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಕೊಡುಗೆಯಾಗಿ ಕಾಡುಮಠ ಬಸ್ತಿಗುಂಡಿಯ ಹಳೆಯ ಕಿಂಡಿ ಆಣೆಕಟ್ಟನ್ನು 36 ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿ ಸ್ಥಳೀಯ ಜನರ ದೀರ್ಘಕಾಲದ ಬೇಡಿಕೆಯಾಗಿದ್ದು, ಇದೀಗ ಅನುಷ್ಠಾನದ ಹಂತಕ್ಕೆ ಬಂದಿರುವುದು ಸಂತಸದ ಸಂಗತಿಯಾಗಿದೆ.

ಕಾಡುಮಠ–ಕುಡ್ತಮುಗೇರು–ಕುದ್ರಿಯಾ ಭಾಗದ ರೈತರಿಗೆ ಅನುಕೂಲವಾಗುವಂತೆ ಹಳೆಯ ಮರದ ಹಲಗೆಯನ್ನು ಬದಲಾಯಿಸಿ, ಆಧುನಿಕ ತಂತ್ರಜ್ಞಾನದೊಂದಿಗೆ ಕಬ್ಬಿಣ ಹಾಗೂ ಪೈಬರ್ ಹಲಗೆಯನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ನೀರಿನ ನಿಯಂತ್ರಣ ಸುಧಾರಿಸಿ, ಕೃಷಿಗೆ ಅಗತ್ಯವಾದ ನೀರಾವರಿ ವ್ಯವಸ್ಥೆ ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಮೂಲಕ ಕೊಳ್ನಾಡು ಕಾಂಗ್ರೆಸ್ ವಲಯಾಧ್ಯಕ್ಷರಾದ ಪವಿತ್ರ ಪೂಂಜಾ ಅವರ ಕೋರಿಕೆಯಂತೆ ಶಾಸಕ ಮಂಜುನಾಥ ಭಂಡಾರಿಯವರಿಗೆ ಸಣ್ಣ ನೀರಾವರಿ ಯೋಜನೆಯ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಅವುಗಳಲ್ಲಿ ಮೊದಲ ಹಂತವಾಗಿ ಕಾಡುಮಠ ಬಸ್ತಿಗುಂಡಿ ಕಿಂಡಿ ಆಣೆಕಟ್ಟು ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗಿದ್ದು, ಉಳಿದ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸುವುದಾಗಿ ಶಾಸಕರು ತಿಳಿಸಿದ್ದಾರೆ.

ಅನಾಥ ಪ್ರಜ್ಞೆ ದೂರ ಮಾಡಿ ಅಭಿವೃದ್ಧಿ ಕಾರ್ಯಗಳು: ನಾಯಕರಿಗೆ ನಾಗರೀಕರಿಂದ ಪ್ರಶಂಸೆ

ಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್ ಶಾಸಕರು ಇಲ್ಲದ ಪರಿಸ್ಥಿತಿಯಲ್ಲಿಯೂ, ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿವೃದ್ಧಿಯ ಕೊರತೆ ಉಂಟಾಗದಂತೆ ರಸ್ತೆ, ನೀರು, ದಾರಿದೀಪ, ಆರೋಗ್ಯ, ಶಿಕ್ಷಣ ಹಾಗೂ ನೀರಾವರಿ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಇಚ್ಚಾಶಕ್ತಿಯಿಂದ ಈಡೇರಿಸುತ್ತಿರುವ ನಾಯಕರ ಕಾರ್ಯವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಯೋಜನೆಗೆ ಕೊಳ್ನಾಡು ಪ್ರದೇಶದ ರೈತ ಬಂಧುಗಳು ಸೇರಿದಂತೆ ನೀರಿನ ಫಲಾನುಭವಿಗಳು ಹಾಗೂ ನಾಗರಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ

Continue Reading

Bantawala

ಸಾಲೆತ್ತೂರು ಸಿರಿ ವಿದ್ಯಾಲಯಕ್ಕೆ ‘ಕರ್ಣಾಟಕ ಬ್ಯಾಂಕ್’ನಿಂದ ಬಸ್ ಕೊಡುಗೆ

Published

on

ಬಂಟ್ವಾಳ: ತಾಲೂಕಿನ ಸಾಲೆತ್ತೂರು ಗ್ರಾಮದ ಸಿರಿ ವಿದ್ಯಾಲಯಕ್ಕೆ ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ದೇಶದ ಅಗ್ರಗಣ್ಯ ಹಣಕಾಸು ಸಂಸ್ಥೆ ಕರ್ಣಾಟಕ ಬ್ಯಾಂಕ್, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೂತನ ಶಾಲಾ ಬಸ್ಸನ್ನು ಕೊಡುಗೆಯಾಗಿ ನೀಡಿದೆ.

19ನೇ ವರ್ಷದ ಸಂಭ್ರಮ – ಹತ್ತನೇ ತರಗತಿ ಆರಂಭ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುವ ಮಹದೋದ್ದೇಶದೊಂದಿಗೆ 2007ರಲ್ಲಿ ಆರಂಭವಾದ ಸಿರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯು ಪ್ರಸ್ತುತ 18 ವರ್ಷಗಳನ್ನು ಪೂರೈಸಿ 19ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಕಳೆದ ಸಾಲಿನಲ್ಲಿ 9ನೇ ತರಗತಿ ಆರಂಭಿಸಲಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಹತ್ತನೇ ತರಗತಿ ಆರಂಭಗೊಳ್ಳುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ನೀಡಿದ ಬಸ್ ಕೊಡುಗೆಯು ಶಾಲೆಯ ಪ್ರಗತಿಗೆ ಸಾಕ್ಷಿಯಾಗಿದೆ.

ಬಸ್ ಕೀಲಿ ಹಸ್ತಾಂತರ: ಸಾಲೆತ್ತೂರಿನ ಸಿರಿ ವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಮಂಗಳೂರು ವಲಯದ ಮುಖ್ಯ ವ್ಯವಸ್ಥಾಪಕರು ಹಾಗೂ ಕ್ಲಸ್ಟರ್ ಮುಖ್ಯಸ್ಥರಾದ ಶ್ರೀ ಲಕ್ಷ್ಮಿನಾರಾಯಣ ಪಿ.ಎಸ್. ಅವರು ನೂತನ ಬಸ್ಸಿನ ಕೀಲಿಯನ್ನು ವಿದ್ಯಾಲಯದ ಮುಖ್ಯಸ್ಥರಾದ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಅವರಿಗೆ ಹಸ್ತಾಂತರಿಸಿದರು.

ಈ ಶುಭ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ಮಂಚಿ ಶಾಖೆಯ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಗೌಡ ಕೆ., ಪಿಎನ್‌ಬಿ ಮೆಟ್‌ಲೈಫ್‌ನ ಶ್ರೀ ಚರಣ್, ಸಿರಿ ವಿದ್ಯಾಲಯದ ಟ್ರಸ್ಟಿಗಳಾದ ಗಾಯತ್ರಿ ಶಿವರಾಮ್ ಶೆಟ್ಟಿ, ಕರುಣಾಕರ ಶೆಟ್ಟಿ ಹಾಗೂ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.

ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 16 ಜನ ಶಿಕ್ಷಕ ವೃಂದವನ್ನು ಹೊಂದಿರುವ ಈ ವಿದ್ಯಾಲಯವು, ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಕರ್ಣಾಟಕ ಬ್ಯಾಂಕ್‌ನ ಈ ಸಾಮಾಜಿಕ ಕಾಳಜಿಯ ಕಾರ್ಯಕ್ಕೆ ಸ್ಥಳೀಯರು ಹಾಗೂ ಶಾಲಾ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

Continue Reading

Trending

Copyright © 2025 Deevatige

error: Content is protected !!