Connect with us

crime

ಆದಾಯ ಮೀರಿ ಆಸ್ತಿ ಗಳಿಕೆ: ಮಂಗಳೂರು ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Published

on

ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಾದೇಶಿಕ ಉಪ ಔಷಧ ನಿಯಂತ್ರಕರ ಕಚೇರಿಯ ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಒಟ್ಟು 6 ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ. ಬಾಬು ಬಿ.ಎನ್. ಅವರಿಗೆ ಸಂಬಂಧಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ವಾಸದ ಮನೆ ಹಾಗೂ ವಾಣಿಜ್ಯ ಮಳಿಗೆಗಳು, ಬೆಂಗಳೂರಿನ ಫ್ಲಾಟ್ ಮತ್ತು ವಾಸದ ಮನೆಗಳು ಹಾಗೂ ಮಂಗಳೂರಿನಲ್ಲಿರುವ ವಾಸ್ತವ್ಯದ ಮನೆ ಮತ್ತು ಕಚೇರಿಗಳ ಮೇಲೆ ಈ ಕಾರ್ಯಾಚರಣೆ ನಡೆದಿದೆ.

ಪತ್ತೆಯಾದ ಆಸ್ತಿ ಪಾಸ್ತಿ: ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಕೆ.ಎನ್. ಅವರು ನೀಡಿದ ಸೋರ್ಸ್ ವರದಿ ಆಧಾರದ ಮೇಲೆ ಏಪ್ರಿಲ್ 6ರಂದು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇಂದಿನ ದಾಳಿಯಲ್ಲಿ ಅಧಿಕಾರಿಗೆ ಸೇರಿದ ಒಟ್ಟು 3,37,04,000 ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳ ಪೈಕಿ ಬೆಂಗಳೂರಿನ ವಾಸದ ಮನೆಯಲ್ಲಿ 23,64,000 ರೂಪಾಯಿ ನಗದು ಹಾಗೂ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಈ ದಾಳಿ ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ವಿಭಾಗದ ಡಿವೈಎಸ್‌ಪಿಗಳಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ್, ಭಾರತಿ ಜಿ., ಶಿವರಾಜ್‌ಕುಮಾರ್, ರಾಜೇಂದ್ರ ನಾಯ್ಕ್ ಮತ್ತು ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಲೋಕಾಯುಕ್ತ ಸಿಬ್ಬಂದಿಗಳು ಭಾಗವಹಿಸಿದ್ದರು. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.

Continue Reading
Advertisement

crime

ಕಾರ್ಕಳ: ಬೆಳ್ತಂಗಡಿ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ – ಪತ್ನಿ ಸೌಮ್ಯ ಶೆಟ್ಟಿ ಅರೆಸ್ಟ್

Published

on

ಕಾರ್ಕಳ: ಇಡೀ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಬೆಳ್ತಂಗಡಿಯ ಯುವ ಉದ್ಯಮಿ ಸುದೀಪ್ ರೈ (36) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಅವರ ಪತ್ನಿ ಕಾರ್ಕಳದ ಸೌಮ್ಯ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ನೆಲ್ಯಾಡಿ ಮೂಲದ ಉದ್ಯಮಿ ಸುದೀಪ್ ರೈ ಅವರು ಕಾರ್ಕಳದ ಕಜೆ ನಿವಾಸಿ ಸೌಮ್ಯ ಶೆಟ್ಟಿ ಎಂಬುವವರನ್ನು ಮನೆಯವರಿಗೆ ತಿಳಿಸದೆ ಕಳೆದ ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಾದ ಕೇವಲ ಒಂದು ತಿಂಗಳಲ್ಲೇ, ಅಂದರೆ ಮಾರ್ಚ್ 17ರಂದು ಸೌಮ್ಯ ಶೆಟ್ಟಿಯವರ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಸಾವನ್ನಪ್ಪಿದ್ದರು.

ಟ್ವಿಸ್ಟ್ ನೀಡಿದ ತನಿಖೆ:

ಸುದೀಪ್ ಅವರ ಸಾವಿನ ಹಿಂದೆ ಸೌಮ್ಯ ಶೆಟ್ಟಿಯವರ ಕಿರುಕುಳ ಹಾಗೂ ವಂಚನೆಯಿದೆ ಎಂದು ಸುದೀಪ್ ಅವರ ತಂದೆ ದಾಮೋದರ ರೈ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆಯ ವೇಳೆ ಸೌಮ್ಯ ಶೆಟ್ಟಿಯವರ ಮೇಲೆ ಹನಿಟ್ರ್ಯಾಪ್ ಹಾಗೂ ಹಲವು ಮದುವೆಯಾಗಿರುವ ಗಂಭೀರ ಆರೋಪಗಳು ಕೇಳಿಬಂದಿದ್ದವು.

  • ಆರೋಪಗಳು: ಸೌಮ್ಯ ಶೆಟ್ಟಿ ಈ ಹಿಂದೆ ಹಲವರನ್ನು ವಿವಾಹವಾಗಿ ವಂಚಿಸಿದ್ದಾರೆ ಎಂಬ ಆರೋಪಗಳು ಮತ್ತು ಹಳೆಯ ಪ್ರಿಯತಮನ ಹೇಳಿಕೆಗಳು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದವು.
  • ಬಂಧನ: ಸುದೀಪ್ ರೈ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಾಗೂ ದೂರಿನಲ್ಲಿ ಉಲ್ಲೇಖಿಸಲಾದ ಗಂಭೀರ ಅಂಶಗಳನ್ನು ಆಧರಿಸಿ ಕಾರ್ಕಳ ಪೊಲೀಸರು ಸೌಮ್ಯ ಶೆಟ್ಟಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಪ್ರಕರಣವು ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಿದ್ದು, ಪೊಲೀಸರು ಈಕೆಯ ಇತರ ವಂಚನೆ ಜಾಲಗಳ ಬಗ್ಗೆಯೂ ತನಿಖೆ ಚುರುಕುಗೊಳಿಸಿದ್ದಾರೆ.

Continue Reading

crime

‘ರುದ್ರಾಕ್ಷಿ ಬೆಡಗಿ’ ಮೊನಾಲಿಸಾ ಮದುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿ ಫರ್ಮನ್ ವಿರುದ್ಧ ಪೋಕ್ಸೋ ಕೇಸ್ ದಾಖಲು!

Published

on

ಸಾಮಾಜಿಕ ಜಾಲತಾಣಗಳಲ್ಲಿ ‘ರುದ್ರಾಕ್ಷಿ ಬೆಡಗಿ’ ಎಂದೇ ಜನಪ್ರಿಯರಾಗಿದ್ದ ಮೊನಾಲಿಸಾ ಭೋಸಲೆ ಅವರ ವಿವಾಹ ಪ್ರಕರಣ ಇದೀಗ ಕಾನೂನು ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಮೊನಾಲಿಸಾ ಅವರು ವಿವಾಹದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದರು ಎಂಬುದು ಅಧಿಕೃತ ತನಿಖೆಯಲ್ಲಿ ದೃಢಪಟ್ಟಿದ್ದು, ಈ ಸಂಬಂಧ ಅವರ ಪತಿ ಫರ್ಮನ್ ವಿರುದ್ಧ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಿದ್ದಾರೆ.

ವಯಸ್ಸಿನ ವಂಚನೆ ಬಯಲಾಗಿದ್ದು ಹೇಗೆ?
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಆಘಾತಕಾರಿ ಸತ್ಯಗಳು ಹೊರಬಿದ್ದಿವೆ. ಆಸ್ಪತ್ರೆಯ ಅಧಿಕೃತ ದಾಖಲೆಗಳ ಪ್ರಕಾರ ಮೊನಾಲಿಸಾ ಅವರ ಜನ್ಮ ದಿನಾಂಕ ಡಿಸೆಂಬರ್ 30, 2009.

ನಕಲಿ ದಾಖಲೆ: ಮದುವೆಯ ನೋಂದಣಿಗಾಗಿ ಮಹೇಶ್ವರ ಪುರಸಭೆಯ ಹೆಸರಿನಲ್ಲಿ ನಕಲಿ ಜನನ ಪ್ರಮಾಣಪತ್ರ ಸೃಷ್ಟಿಸಲಾಗಿತ್ತು. ಅದರಲ್ಲಿ ಜನ್ಮ ದಿನಾಂಕವನ್ನು ಜನವರಿ 1, 2008 ಎಂದು ಸುಳ್ಳಾಗಿ ತೋರಿಸಲಾಗಿತ್ತು. ಮಾರ್ಚ್ 11 ರಂದು ಕೇರಳದಲ್ಲಿ ಮದುವೆ ನಡೆದಾಗ ಮೊನಾಲಿಸಾ ಅವರಿಗೆ ಕೇವಲ 16 ವರ್ಷ 2 ತಿಂಗಳು ವಯಸ್ಸಾಗಿತ್ತು.

ದೇವಸ್ಥಾನದ ಸಮಜಾಯಿಷಿ ಮತ್ತು ಕಾನೂನು ಕ್ರಮ
ಕೇರಳದ ನೈನಾರ್ ದೇವಾಲಯದಲ್ಲಿ ಈ ವಿವಾಹ ನೆರವೇರಿತ್ತು. ಆಧಾರ್ ಕಾರ್ಡ್ ನೋಡಿ ಮದುವೆ ಮಾಡಿಸಿದ್ದೇವೆ ಎಂದು ದೇವಾಲಯದ ಮಂಡಳಿ ಹೇಳಿಕೊಂಡಿದ್ದರೂ, ಬಳಸಲಾದ ದಾಖಲೆಗಳೇ ನಕಲಿ ಎಂದು ಸಾಬೀತಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಸದ್ಯ ಖಗೋಣ್ ಪೊಲೀಸರು ಆರೋಪಿ ಫರ್ಮನ್ ವಿರುದ್ಧ ಪೋಕ್ಸೋ (POCSO) ಕಾಯ್ದೆ (ಅಪ್ರಾಪ್ತೆಯ ಮೇಲೆ ದೌರ್ಜನ್ಯ) ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, ಕ್ರಿಮಿನಲ್ ಪಿತೂರಿ, ಅಕ್ರಮ ವಿವಾಹ ಕಾಯ್ದೆಗಳಡಿ ಕೇಸ್ ದಾಖಲಿಸಿದ್ದಾರೆ

ಡಿಜಿಪಿಗಳಿಗೆ ಸಮನ್ಸ್ ನೀಡಿದ ಆಯೋಗ
ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು, ಏಪ್ರಿಲ್ 22 ರಂದು ನವದೆಹಲಿಯ ಕಚೇರಿಗೆ ಹಾಜರಾಗುವಂತೆ ಕೇರಳ ಮತ್ತು ಮಧ್ಯಪ್ರದೇಶದ ಡಿಜಿಪಿ (DGP) ಗಳಿಗೆ ಸಮನ್ಸ್ ಜಾರಿ ಮಾಡಿದೆ. ಅಷ್ಟೇ ಅಲ್ಲದೆ, ಪ್ರಕರಣದ ಪ್ರಗತಿಯ ವರದಿಯನ್ನು ಪ್ರತಿ ಮೂರು ದಿನಕ್ಕೊಮ್ಮೆ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಆರಂಭದಲ್ಲಿ ತನ್ನ ಪೋಷಕರ ವಿರುದ್ಧವೇ ತಿರುಗಿಬಿದ್ದು ಪ್ರೇಮ ವಿವಾಹವಾಗಿದ್ದ ಮೌನಾಲಿಸಾ ಅವರಿಗೆ, ಈಗ ಅಸಲಿ ವಯಸ್ಸಿನ ದಾಖಲೆಗಳು ಮತ್ತು ನಕಲಿ ಪ್ರಮಾಣಪತ್ರದ ಹಗರಣವು ದೊಡ್ಡ ಕಾನೂನುಬದ್ಧ ಹಿನ್ನಡೆಯನ್ನು ತಂದೊಡ್ಡಿದೆ.

Continue Reading

crime

ಕಡಬ: ಜಾತಿ ನಿಂದನೆ ಹಾಗೂ ಯುವತಿಯರ ಮೇಲೆ ಹಲ್ಲೆ – ಪ್ರತ್ಯೇಕ ಪ್ರಕರಣ ದಾಖಲು

Published

on

ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಬೇರೆ ಬೇರೆ ಹಲ್ಲೆ ಮತ್ತು ದೌರ್ಜನ್ಯದ ಪ್ರಕರಣಗಳು ವರದಿಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಟ್ರುಪ್ಪಾಡಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯ ಮೇಲೆ ಜಾತಿ ನಿಂದನೆ ನಡೆದರೆ, ಬಲ್ಯದಲ್ಲಿ ಮಾರಾಟ ಪ್ರತಿನಿಧಿಗಳಾಗಿ ಬಂದಿದ್ದ ಯುವತಿಯರ ಮೇಲೆ ಅಸಭ್ಯ ವರ್ತನೆ ತೋರಿದ ಘಟನೆ ನಡೆದಿದೆ.

ಪ್ರಕರಣ 1: ರಸ್ತೆ ಹಾನಿ ಪ್ರಶ್ನಿಸಿದ ಮಹಿಳೆಗೆ ಜಾತಿ ನಿಂದನೆ, ಹಲ್ಲೆ

ಕುಟ್ರುಪ್ಪಾಡಿ ನಿವಾಸಿ ಮೋನಮ್ಮ (55) ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏಪ್ರಿಲ್ 8ರಂದು ಮೋನಮ್ಮ ಅವರು ತಾವು ಕೆಲಸ ಮಾಡುತ್ತಿದ್ದ ಮನೆಯ ಬಳಿ ಜೆಸಿಬಿ ಮೂಲಕ ರಸ್ತೆ ಕೆಲಸ ನಡೆಯುತ್ತಿರುವುದನ್ನು ಗಮನಿಸಿದರು. ಈ ವೇಳೆ ರಸ್ತೆಗೆ ಹಾನಿಯಾಗುತ್ತಿರುವುದನ್ನು ಕಂಡು, ಜಾಗದ ಮಾಲಿಕರ ಉಪಸ್ಥಿತಿಯಲ್ಲಿ ಕೆಲಸ ಮಾಡುವಂತೆ ಅಲ್ಲಿದ್ದವರಿಗೆ ಸೂಚಿಸಿದರು.

ಇದರಿಂದ ಕೆರಳಿದ ಆರೋಪಿಗಳಾದ ರುಕ್ಮಯ್ಯ, ನೊಣಯ್ಯ, ಬಾಲಕೃಷ್ಣ ಮತ್ತು ಹರಿಪ್ರಸಾದ್ ಎಂಬುವವರು ಮೋನಮ್ಮ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಅವರ ಜಾತಿಯನ್ನು ಹಿಡಿದು ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

  • ದಾಖಲಾದ ಕಲಂಗಳು: ಅ.ಕ್ರ: 44/2026, ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ (SC/ST Act) ಹಾಗೂ BNS ಸೆಕ್ಷನ್ 118(1), 352, 351(2).

ಪ್ರಕರಣ 2: ಮಾರಾಟ ಪ್ರತಿನಿಧಿ ಯುವತಿಯರ ಮೇಲೆ ಅಸಭ್ಯ ವರ್ತನೆ

ಇನ್ನೊಂದು ಘಟನೆಯಲ್ಲಿ, ಸಂಸ್ಥೆಯ ಉತ್ಪನ್ನಗಳ ಮಾರಾಟಕ್ಕಾಗಿ ಬಲ್ಯ ದೇರಾಜೆಗೆ ತೆರಳಿದ್ದ ಬೆಳ್ತಂಗಡಿ ಮೂಲದ ಯುವತಿಯರ ಮೇಲೆ ಹಲ್ಲೆ ನಡೆದಿದೆ. ಏಪ್ರಿಲ್ 8ರಂದು ಮಧ್ಯಾಹ್ನ ಯುವತಿಯು ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಕೆಲಸದಲ್ಲಿದ್ದಾಗ, ಸ್ಥಳೀಯ ನಿವಾಸಿಯೊಬ್ಬರು ಅಸಭ್ಯವಾಗಿ ವರ್ತಿಸಿದ್ದಾರೆ.

ಇದನ್ನು ಪ್ರಶ್ನಿಸಲು ಬಂದ ಯುವತಿಯ ಸಹೋದ್ಯೋಗಿಗಳಿಗೂ ಆರೋಪಿಯು ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • ದಾಖಲಾದ ಕಲಂಗಳು: ಅ.ಕ್ರ: 43/2026, BNS ಸೆಕ್ಷನ್ 74, 79, 115(2), 352, 351(2).

ಈ ಎರಡೂ ಪ್ರಕರಣಗಳ ಕುರಿತು ಕಡಬ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Continue Reading

Trending

Copyright © 2025 Deevatige