Connect with us

Dakshina Kannada

ದಕ್ಷಿಣ ಕನ್ನಡದಲ್ಲಿ ‘ಟೋಲ್’ ಅನ್ಯಾಯ: ಮತ್ತೆ ವಸೂಲಿಗೆ ಸಿದ್ದವಾಗುವ 3 ಟೋಲ್‌ ಗೇಟ್‌ ? ನಿಯಮ ಗಾಳಿಗೆ ತೂರಿ ಜನಸಾಮಾನ್ಯರ ಸುಲಿಗೆ!

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು “60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೇ ಟೋಲ್ ಪ್ಲಾಜಾ ಇರಬೇಕು” ಎಂದು ಸಂಸತ್ತಿನಲ್ಲಿ ಘೋಷಿಸಿದ್ದರೂ, ದಕ್ಷಿಣ ಕನ್ನಡದಲ್ಲಿ ಮಾತ್ರ ಪರಿಸ್ಥಿತಿ ತದ್ವಿರುದ್ಧವಾಗಿದೆ. ಈಗಾಗಲೇ ಇರುವ 3 ಟೋಲ್‌ಗಳ ನಡುವೆಯೇ ಹೊಸದಾಗಿ 3 ಟೋಲ್ ಗೇಟ್ ನಿರ್ಮಿಸುವ ಸರ್ಕಾರದ ನಿರ್ಧಾರ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
60 ಕಿ.ಮೀ ವ್ಯಾಪ್ತಿ.. 6 ಟೋಲ್ ಗೇಟ್ : ಹಗಲು ದರೋಡೆಯ ಎಚ್ಚರಿಕೆ!
ಪ್ರಸ್ತುತ ಜಿಲ್ಲೆಯಲ್ಲಿ 3 ಟೋಲ್ ಪ್ಲಾಜಾಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಹೊಸ ಪ್ರಸ್ತಾವನೆಯಂತೆ ಇನ್ನೂ 3 ಟೋಲ್‌ಗಳು ಸೇರ್ಪಡೆಯಾದರೆ ಜಿಲ್ಲೆಯ ಒಟ್ಟು ಟೋಲ್‌ಗಳ ಸಂಖ್ಯೆ 6ಕ್ಕೆ ಏರಲಿದೆ. ಹೋರಾಟಗಾರ ಮುನೀರ್ ಕಾಟಿಪಳ್ಳ ಅವರ ಪ್ರಕಾರ, ಇದು ಕೇವಲ ನಿಯಮ ಉಲ್ಲಂಘನೆಯಲ್ಲ, ಜಿಲ್ಲೆಯ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದ ಮೇಲೆ ನಡೆಸುತ್ತಿರುವ ಗಂಭೀರ ಪ್ರಹಾರವಾಗಿದೆ. ಹೊಸದಾಗಿ ಪ್ರಸ್ತಾಪಿಸಲಾಗಿರುವ ಟೋಲ್ ಪ್ಲಾಜಾಗಳು ಅಂತರದ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿವೆ.


ಗಂಜಿಮಠ (NH 169): ಮಂಗಳೂರು-ಮೂಡುಬಿದಿರೆ ಹೆದ್ದಾರಿಯ ಸೂರಲ್ಪಾಡಿ ಬಳಿ ನಿರ್ಮಾಣವಾಗುತ್ತಿರುವ ಈ ಟೋಲ್, ಮಂಗಳೂರಿನಿಂದ ಕೇವಲ 17 ಕಿ.ಮೀ ದೂರದಲ್ಲಿದೆ. ಇದು ಅಸ್ತಿತ್ವದಲ್ಲಿರುವ ಇತರ ಟೋಲ್‌ಗಳಿಂದ ಕೇವಲ 30 ಕಿ.ಮೀ ಅಂತರದಲ್ಲಿದೆ.
ವಳಾಲು (NH 75): ಬ್ರಹ್ಮರಕೂಟ್ಲು ಟೋಲ್‌ನಿಂದ ಕೇವಲ 35 ಕಿ.ಮೀ ಅಂತರದ ಉಪ್ಪಿನಂಗಡಿ ಸಮೀಪದ ವಳಾಲು ಎಂಬಲ್ಲಿ ಹೊಸ ಟೋಲ್ ಸಂಗ್ರಹಕ್ಕೆ ಸಿದ್ಧವಾಗಿ ನಿಂತಿದೆ.


ಪಣಪಿಲ: ಕಾರ್ಕಳ ರಸ್ತೆಯ ಪಣಪಿಲ ಎಂಬಲ್ಲಿಯೂ ಮತ್ತೊಂದು ಟೋಲ್ ಸ್ಥಾಪನೆಯ ಪ್ರಸ್ತಾವನೆಯಿದೆ.

ಬ್ರಹ್ಮರಕೂಟ್ಲು: ಅವಧಿ ಮುಗಿದರೂ ನಿಲ್ಲದ ವಸೂಲಿ
ಇನ್ನು ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ ವಿಚಾರದಲ್ಲಿ ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದೆ. ಕಳೆದ 23 ವರ್ಷಗಳಿಂದ ಇಲ್ಲಿ ಹಣ ಸಂಗ್ರಹಿಸಲಾಗುತ್ತಿದ್ದರೂ, ತುರ್ತು ವಾಹನಗಳಿಗಾಗಿ ಪ್ರತ್ಯೇಕ ಲೇನ್ ಅಥವಾ ಆಂಬ್ಯುಲೆನ್ಸ್ ಸಂಚಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೆ ನಿತ್ಯ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ರಸ್ತೆಯನ್ನು ಎತ್ತರಿಸಿದ ಕಾರಣಕ್ಕೆ ಟೋಲ್ ವಸೂಲಿ ಮಾಡುವುದು ಕಾನೂನುಬಾಹಿರ ಎಂದು ಸ್ಥಳೀಯರು ಆರೋಪಿಸಿದ್ದು, ರಸ್ತೆಗಾಗಿ ಜಮೀನು ನೀಡಿದವರಿಗೂ ರಿಯಾಯಿತಿ ನೀಡದೆ ದಂಡ ವಸೂಲಿ ಮಾಡುತ್ತಿರುವುದು ದರೋಡೆಯಂತಿದೆ ಎಂದು ಹೋರಾಟಗಾರರು ದೂರಿದ್ದಾರೆ.

ಅವಧಿ ಮುಗಿದಿದ್ದರೂ ನವೀಕರಣದ ಹೆಸರಲ್ಲಿ ಹಣ ಪೀಕುತ್ತಿರುವ ಈ ಅವೈಜ್ಞಾನಿಕ ಟೋಲ್ ಪ್ಲಾಜಾಗಳು ಜಿಲ್ಲೆಯ ವ್ಯಾಪಾರ ಮತ್ತು ಕೈಗಾರಿಕಾ ರಂಗದ ಮೇಲೆ ತೀವ್ರ ಪೆಟ್ಟು ನೀಡುತ್ತಿವೆ. ಈ ಅನ್ಯಾಯದ ವಿರುದ್ಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಈಗ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿದೆ.
ಜಿಲ್ಲೆಯ ಪ್ರಸ್ತುತ ಟೋಲ್ ಸ್ಥಿತಿ:
ಈಗಾಗಲೇ ನಿಯಮ ಮೀರಿ ಬ್ರಹ್ಮರಕೂಟ್ಲು NH 75 (ಮಂಗಳೂರು-ಬೆಂಗಳೂರು) ತಲಪಾಡಿ NH 66 (ಕೇರಳ ಗಡಿ) ಮತ್ತು ಹೆಜಮಾಡಿ NH 66 (ಉಡುಪಿ ಗಡಿ) ಚಾಲ್ತಿಯಲ್ಲಿದೆ. ಗಂಜಿಮಠ NH 169 (ಮಂಗಳೂರು-ಕಾರ್ಕಳ) ಪ್ರಸ್ತಾವಿತ/ನಿರ್ಮಾಣ ವಳಾಲುNH 75 (ಉಪ್ಪಿನಂಗಡಿ ಬಳಿ) ಮತ್ತು ಪಣಪಿಲNH 169 ಪ್ರಸ್ತಾವಿತ ನಿರ್ಮಾಣದಲ್ಲಿದೆ. ಹೋರಾಟದ ಹಾದಿಯಲ್ಲಿ ಸಾರ್ವಜನಿಕರು ಈಗಾಗಲೇ ಸುರತ್ಕಲ್ ಟೋಲ್ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದ ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ’ ಈಗ ಮತ್ತೆ ಸಕ್ರಿಯವಾಗಿದೆ. ಕೇಂದ್ರ ಸರ್ಕಾರದ 60 ಕಿ.ಮೀ ನಿಯಮವನ್ನು ಪಾಲಿಸದಿದ್ದರೆ ಮತ್ತು ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವ ಟೋಲ್‌ಗಳನ್ನು ಮುಚ್ಚದಿದ್ದರೆ ಜಿಲ್ಲೆಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.ಜಿಲ್ಲೆಯ ಆರ್ಥಿಕತೆಯ ಮೇಲೆ ಹೊರೆಯಾಗಲಿರುವ ಈ “ಟೋಲ್ ಸಂಸ್ಕೃತಿ”ಗೆ ಬ್ರೇಕ್ ಬೀಳುವುದೇ ಅಥವಾ ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದನ್ನು ಮುಂದುವರಿಸುವುದೇ ಎಂದು ಕಾದು ನೋಡಬೇಕಿದೆ.


Continue Reading
Advertisement

award

ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್ ಕೆ. ಮತ್ತು ಎಸಿಪಿ ನಜ್ಮಾ ಫಾರೂಕಿ ಸೇರಿದಂತೆ ಜಿಲ್ಲೆಯ ಹಲವು ಪೊಲೀಸರಿಗೆ ಮುಖ್ಯಮಂತ್ರಿ ಚಿನ್ನದ ಪದಕದ ಗೌರವ

Published

on

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ (SP) ಡಾ. ಅರುಣ್ ಕೆ. ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ಅವರೊಂದಿಗೆ ಮಂಗಳೂರು ನಗರದ ಸಂಚಾರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ನಜ್ಮಾ ಫಾರೂಕಿ ಅವರಿಗೂ ಚಿನ್ನದ ಪದಕ ಪ್ರಕಟಗೊಂಡಿದೆ.


ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕದ ಗರಿ ಪ್ರಕಟಗೊಂಡಿದ್ದು, ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಈ ಗೌರವವನ್ನು ಘೋಷಿಸಿದೆ.
ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸ್ಪೆಷಲ್ ಎಆರ್‌ಎಸ್‌ಐ, 7ನೇ ಪಡೆ ಕೆಎಸ್‌ಆರ್‌ಪಿಯ ಕೆ.ಎಂ. ಶಿವಶೇಖರ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಡಿಎಆರ್ ವಿಭಾಗದ ಎಎಸ್‌ಐ ತಿಲಕ್ ರಾಜ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಲ್ಲದೆ, ಬಂಟ್ವಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಇರ್ಷಾದ್ ಪಿ. , ಮಂಗಳೂರು ನಗರದ ಊರ್ವ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಲಲಿತಾಲಕ್ಷ್ಮಿ , ಬೆಳ್ತಂಗಡಿ ಗ್ರಾಮಾಂತರ ಠಾಣೆಯ ವಿಜಯ ಕುಮಾರ್ ರೈ , ಕಂಕನಾಡಿ ನಗರ ಠಾಣೆಯ ಜಯಾನಂದ ಎನ್., ಮತ್ತು ಮಂಗಳೂರು ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳಾದ ಮಣಿ ಎಂ.ಎನ್. ಹಾಗೂ ಸತೀಶ್ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಈ ಪದಕ ಪ್ರದಾನ ಸಮಾರಂಭವು ಏಪ್ರಿಲ್ 02, 2026 ರಂದು ಬೆಂಗಳೂರಿನಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಪದಕ ವಿಜೇತ ಅಧಿಕಾರಿಗಳು ಮಾರ್ಚ್ 29 ರಿಂದಲೇ ಬೆಂಗಳೂರಿನ ಕೆಎಸ್‌ಆರ್‌ಪಿ 3ನೇ ಪಡೆಯಲ್ಲಿ ನಡೆಯುವ ಪೂರ್ವಾಭ್ಯಾಸದಲ್ಲಿ ಭಾಗವಹಿಸಲಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕರ ಕಚೇರಿ ತಿಳಿಸಿದೆ.

Continue Reading

accident

ತೊಕ್ಕೊಟ್ಟು ಫ್ಲೈಓವರ್ ಮೇಲೆ ರೌಡಿಶೀಟರ್ ಆರಿಫ್ ಭೀಕರ ಹತ್ಯೆ: ಸಿನಿಮೀಯ ಶೈಲಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ

Published

on

ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲೆ ಶುಕ್ರವಾರ ಮುಂಜಾನೆ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ತಲಪಾಡಿಯ ಮುಳ್ಳುಗುಡ್ಡೆ ಹೌಸ್ ನಿವಾಸಿ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ (46) ಎಂದು ಗುರುತಿಸಲಾಗಿದೆ. ಧಕ್ಕೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದ ಆರಿಫ್, ಪ್ರತಿದಿನದಂತೆ ಇಂದು ಮುಂಜಾನೆ ತನ್ನ ಬೈಕ್‌ನಲ್ಲಿ ಮಂಗಳೂರಿನತ್ತ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಇಂದು ದುಷ್ಕರ್ಮಿಗಳು ಆರಿಫ್ ಗಾಗಿ ಫೈಓವರ್‌ ಮೇಲೆಯೇ ಕಾಯುತ್ತ ಕುಳಿತಿದ್ದು, ಆರಿಫ್‌ ಪ್ರಯಾಣಿಸುತ್ತಿದ್ದ ಬೈಕ್ ಅನ್ನು ಅಡ್ಡಗಟ್ಟಿ, ಬಳಿಕ ತಲೆ ಭಾಗಕ್ಕೆ ಗಂಭೀರವಾಗಿ ಕಡಿದು ಕೊಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್‌ನಲ್ಲಿ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದಾಗ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅತಿ ವೇಗವಾಗಿ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಆರಿಫ್ ರಸ್ತೆಗೆ ಬೀಳುತ್ತಿದ್ದಂತೆ, ಕಾರಿನಿಂದ ಇಳಿದು ಬಂದ ತಂಡವು ತಲವಾರ್ ಸೇರಿದಂತೆ ಮಾರಕಾಸ್ತ್ರಗಳಿಂದ ತಲೆ ಮತ್ತು ದೇಹದ ಭಾಗಕ್ಕೆ ಮನಬಂದಂತೆ ಕಡಿದು ಸಿನಿಮೀಯ ರೀತಿಯಲ್ಲಿ ಕೊಲೆಗೈದು ಪರಾರಿಯಾಗಿದೆ. ತೀವ್ರ ರಕ್ತಸ್ರಾವದಿಂದಾಗಿ ಆರಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ತೊಡಗಿಸಿ ಕೊಂಡಿದ್ದ ಆರಿಫ್ ನನ್ನು ವೈಯಕ್ತಿಕ ದ್ವೇಷ ದಿಂದ ಹತ್ಯೆ ಗೈದಿರುವ ಶಂಕೆ ವ್ಯಕ್ತ ಪಡಿಸಿದ್ದಾರೆ.ಆರಿಫ್ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ದೀರ್ಘಕಾಲ ಯಾವುದೇ ಪ್ರಕರಣಗಳಿರಲಿಲ್ಲ.


2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಆತನ ಮೇಲೆ ಒಮ್ಮೆ ಕೊಲೆ ಯತ್ನ ನಡೆದಿತ್ತು, ಆ ಪ್ರಕರಣದಲ್ಲಿ ನೌಫಾಲ್ ಹಾಗೂ ತಂಡವನ್ನು ಪೊಲೀಸರು ಬಂಧಿಸಿದ್ದರು. ಹಳೆಯ ವೈಯಕ್ತಿಕ ದ್ವೇಷವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.’ ಹತ್ಯೆಗೆ ಸ್ಪಷ್ಟ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಸದ್ಯಕ್ಕೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Continue Reading

cyber crime

AI ತಂತ್ರಜ್ಞಾನ ಬಳಸಿ ಕೋಮುದ್ವೇಷ ಹರಡುವ ವಿಡಿಯೋ ಹಂಚಿಕೆ: ಮಂಗಳೂರಿನ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

Published

on

ಮಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ವಿಡಿಯೋ ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಟ್ವಾಳ ಮೂಲದ ವ್ಯಕ್ತಿಯೊಬ್ಬನನ್ನು ಕಂಕನಾಡಿ ನಗರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕುಡೆಲ್ ಹೌಸ್ ನಿವಾಸಿ ಮಹಮ್ಮದ್ ರಫೀಕ್ (38) ಎಂದು ಗುರುತಿಸಲಾಗಿದೆ. ಈತ ಫೇಸ್‌ಬುಕ್‌ನಲ್ಲಿ “ನಝೀರ ಮಂಗಳೂರು” ಎಂಬ ಹೆಸರಿನ ಖಾತೆಯ ಮೂಲಕ ವಿವಾದಾತ್ಮಕ ಕೃತ್ಯ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

2025ರ ಅಕ್ಟೋಬರ್‌ನಲ್ಲಿ ಆರೋಪಿಯು ತನ್ನ ಫೇಸ್‌ಬುಕ್ ಖಾತೆಯಲ್ಲಿ AI ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದನು. ಇದು ಸಮಾಜದಲ್ಲಿ ಶಾಂತಿ ಕದಡುವ ಮತ್ತು ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಉದ್ದೇಶ ಹೊಂದಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196, 353(1), ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 22, 2026 ರಂದು ಬೆಂಗಳೂರಿನಲ್ಲಿ ಆತನನ್ನು ದಸ್ತಗಿರಿ ಮಾಡಿದ್ದಾರೆ. ಬಳಿಕ ಆತನನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Continue Reading

Trending

Copyright © 2025 Deevatige