Connect with us

Bantawala

ಅಕ್ರಮ ಕಲ್ಲುಕ್ವಾರಿಗೆ ತಹಶೀಲ್ದಾರ್ ತಂಡದಿಂದ ಮಿಂಚಿನ ದಾಳಿ.! ಸರ್ಕಾರಿ ಜಮೀನಿನಲ್ಲಿ ರಾಜಾರೋಷವಾಗಿ ಮೈನಿಂಗ್ ಮಾಫಿಯಾ.!

Published

on

ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿ ವ್ಯಾಪ್ತಿಯ ಅಳಿಕೆ ಗ್ರಾಮದ ಕೋಟೆತ್ತಡ್ಕ ಎಂಬಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪು ಕಲ್ಲು ಕ್ವಾರಿಗೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ನಕಲಿ ದಾಖಲೆ ಸೃಷ್ಟಿಸಿ, ಗಣಿ ಇಲಾಖೆಯ ಅಧಿಕಾರಿಯೊಬ್ಬರ ಕುಮ್ಮಕ್ಕಿನಿಂದ ನಡೆಯುತ್ತಿದ್ದ ಈ ದಂಧೆಯನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಘಟನೆಯ ಹಿನ್ನೆಲೆ:
ಅಳಿಕೆ ಗ್ರಾಮದ ನೆಗಳಗುಳಿ ನಿವಾಸಿ ಕೃಷ್ಣ ಕುಡಿಯ ಅವರ ಪುತ್ರ ಚಂದ್ರ ಕುಡಿಯ ಎಂಬವರಿಗೆ 1994ರಲ್ಲಿ ಸರ್ವೆ ನಂ. 377/2ರಲ್ಲಿ 3.15 ಎಕರೆ ಹಾಗೂ 410/1ಬಿಯಲ್ಲಿ 0.80 ಎಕರೆ ಸರ್ಕಾರಿ ಜಮೀನು ಮಂಜೂರಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಚಂದ್ರ ಕುಡಿಯ ಅವರು ಕಾರ್ಕಳ ಪರಿಸರದಲ್ಲಿ ವಾಸವಿದ್ದರು. ಈ ನಡುವೆ, ಕಳೆದ ಎರಡು ವಾರಗಳಿಂದ ಕೋಟೆತ್ತಡ್ಕ ಮುಳಿಯ ಎಂಬಲ್ಲಿನ ಮಂಜೂರಾದ ಸರ್ಕಾರಿ ಜಮೀನಿನಲ್ಲಿ ಏಕಾಏಕಿ ಬೃಹತ್ ಮಟ್ಟದ ಕೆಂಪು ಕಲ್ಲಿನ ಗಣಿಗಾರಿಕೆ ಆರಂಭವಾಗಿತ್ತು.

ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ:
ಸ್ಥಳೀಯರು ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಹಾಗೂ ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ರವಿ ಎಂ.ಎನ್. ಮತ್ತು ತಂಡ ಸ್ಥಳಕ್ಕೆ ದಾಳಿ ನಡೆಸಿತು. ದಾಳಿಯ ವೇಳೆ ಸ್ಥಳದಲ್ಲಿ ಕಲ್ಲು ಕಡಿಯುವ ಯಂತ್ರಗಳು ಹಾಗೂ ಜೆಸಿಬಿಗಳು ಪತ್ತೆಯಾಗಿವೆ. ಭೂಮಾಪನಾ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಮೋಜಣೆಯಲ್ಲಿ, ಗಣಿಗಾರಿಕೆ ನಡೆಯುತ್ತಿದ್ದ ಭೂಮಿ ಸಂಪೂರ್ಣವಾಗಿ ಸರ್ಕಾರಿ ಜಮೀನು ಎಂಬುದು ಸಾಬೀತಾಗಿದೆ.

ಈ ಅಕ್ರಮ ಕ್ವಾರಿಯ ಹಿಂದೆ ದೊಡ್ಡ ಮಟ್ಟದ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, 1994ರಲ್ಲಿ ಜಮೀನು ಮಂಜೂರಾತಿ ಪಡೆದಿದ್ದ ಚಂದ್ರ ಕುಡಿಯ ಎಂಬವರು ‘ಚಂದ್ರೇ ಗೌಡ’ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇದಕ್ಕೆ ಪೂರಕವಾಗಿ ಗಣಿ ಇಲಾಖೆಯ ಅಧಿಕಾರಿ ಮಹದೇಶ ಎಂಬುವವರು ಕಂದಾಯ ಇಲಾಖೆಗೆ ಯಾವುದೇ ಮಾಹಿತಿ ನೀಡದೆ, ಸ್ವಹಿತಾಸಕ್ತಿಯಿಂದ ಈ ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿರುವುದು ಇಲಾಖೆಯ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಹಶೀಲ್ದಾರ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ, ಕಲ್ಲು ಕಡಿಯುವ ನಾಲ್ಕು ಯಂತ್ರಗಳು ಸೇರಿದಂತೆ ಇತರೆ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಅಳಿಕೆ ಗ್ರಾಮದ ಕೋಟೆತ್ತಡ್ಕ ಮುಳಿಯ ಎಂಬಲ್ಲಿ ಸರ್ಕಾರಿ ಜಮೀನಿನಲ್ಲಿ ನಕಲಿ ದಾಖಲೆ ಬಳಸಿ ನಡೆಸುತ್ತಿದ್ದ ಈ ದಂಧೆಯನ್ನು ಕಂದಾಯ ಮತ್ತು ಭೂಮಾಪನಾ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಪತ್ತೆಹಚ್ಚಲಾಗಿದ್ದು, ಅಕ್ರಮಕ್ಕೆ ಸಾಥ್ ನೀಡಿದ ಗಣಿ ಅಧಿಕಾರಿ ಮಹದೇಶ ವಿರುದ್ಧವೂ ಕಾನೂನು ಉರುಳು ಬಿಗಿಯಾಗುವ ಸಾಧ್ಯತೆ ದಟ್ಟವಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

75 ವರ್ಷಗಳ ರಸ್ತೆ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು – ಉಕ್ಕುಡ ಕಲ್ಲಜರಿಯಲ್ಲಿ ಅಕ್ರಮ ಗೇಟ್ ತೆರವು.

Published

on

​ವಿಟ್ಲ : ಕಸಬಾ ಗ್ರಾಮದ ಉಕ್ಕುಡ ಕಲ್ಲಜರಿ ಪ್ರದೇಶದಲ್ಲಿ ಕಳೆದ 75 ವರ್ಷಗಳಿಂದ ಸಂಪರ್ಕ ರಸ್ತೆಯಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಮೂರು ಬಡ ಕುಟುಂಬಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಸರ್ಕಾರಿ ಜಮೀನಿನಲ್ಲಿ ಹಾದುಹೋಗುತ್ತಿದ್ದ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಗೇಟ್ ಅಳವಡಿಸಿ ತಡೆಯೊಡ್ಡಿದ್ದ ಗೇಟನ್ನು ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ. ​ದೂರಿನ ಹಿನ್ನೆಲೆ:​ಸ್ಥಳೀಯ ನಿವಾಸಿ ಶ್ರೀಮತಿ ಜಯಂತಿ ಎಂಬುವರು ಈ ಅಕ್ರಮ ತಡೆಯ ತೆರವಿಗಾಗಿ ವಿಟ್ಲ ಪಟ್ಟಣ ಪಂಚಾಯತಿಗೆ ಅಗತ್ಯ ದಾಖಲೆಗಳ ಸಹಿತ ದೂರು ನೀಡಿದ್ದರು. ದೂರಿನ ಗಂಭೀರತೆಯನ್ನು ಪರಿಗಣಿಸಿದ ಪಟ್ಟಣ ಪಂಚಾಯತ್ ಆಡಳಿತವು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ವಿನಂತಿಸಿತ್ತು.

​ತಹಶೀಲ್ದಾರ್ ಆದೇಶ ಮತ್ತು ಪರಿಶೀಲನೆ:​ಮನವಿಗೆ ತಕ್ಷಣ ಸ್ಪಂದಿಸಿದ ಬಂಟ್ವಾಳ ತಹಶೀಲ್ದಾರರು, ಸ್ಥಳ ತನಿಖೆ ನಡೆಸಿ ಅಕ್ರಮ ಗೇಟ್ ತೆರವುಗೊಳಿಸುವಂತೆ ವಿಟ್ಲ ಕಂದಾಯ ನಿರೀಕ್ಷಕರಿಗೆ ಹಾಗೂ ಭೂ ಮಾಪಕರಿಗೆ ಅಧಿಕೃತ ಆದೇಶ ನೀಡಿದ್ದರು. ​ಅಧಿಕಾರಿಗಳು ನಡೆಸಿದ ಸಮೀಕ್ಷೆ ಹಾಗೂ ಕಂದಾಯ ನಿರೀಕ್ಷಕರ ವರದಿಯ ಪ್ರಕಾರ, ಸರ್ವೇ ನಂ. 727/1ರಲ್ಲಿ ಬರುವ ರಸ್ತೆಯು ಸರ್ಕಾರಿ ಜಮೀನಿನಲ್ಲಿದೆ ಎಂಬುದು ದೃಢಪಟ್ಟಿದೆ. ​ರಸ್ತೆ ಅಭಿವೃದ್ಧಿಗೆ ಮಾತ್ರ ಅವಕಾಶ:​ಈ ಜಮೀನನ್ನು ರಸ್ತೆಯನ್ನು ಅಭಿವೃದ್ಧಿಪಡಿಸಲು ಮತ್ತು ಸಾರ್ವಜನಿಕರ ರಸ್ತೆ ಸಂಪರ್ಕಕ್ಕಾಗಿ ಮಾತ್ರ ಬಳಸಿಕೊಳ್ಳಲು ತಹಶೀಲ್ದಾರ್ ಕಚೇರಿಯಿಂದ ಸ್ಪಷ್ಟ ಆದೇಶ ನೀಡಲಾಗಿದೆ. ಬೇರೆ ಯಾವುದೇ ಉದ್ದೇಶಕ್ಕಾಗಿ ಈ ಸರ್ಕಾರಿ ಜಮೀನನ್ನು ಬಳಸಲು ಅವಕಾಶವಿರುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ​

ಅಕ್ರಮ ಗೇಟ್ ತೆರವು – ಕುಟುಂಬಗಳ ಕೃತಜ್ಞತೆ:​ತಹಶೀಲ್ದಾರ್ ಆದೇಶದಂತೆ ಇಂದು ಕಂದಾಯ ಅಧಿಕಾರಿಗಳು ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಿ, ಅರ್ಜಿದಾರರಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ​ದಶಕಗಳಿಂದ ಅನುಭವಿಸುತ್ತಿದ್ದ ನರಕಯಾತನೆಗೆ ಮುಕ್ತಿ ದೊರೆತಿದ್ದರಿಂದ ಹರ್ಷ ವ್ಯಕ್ತಪಡಿಸಿರುವ ಬಡ ಕುಟುಂಬಗಳು, ಸಕಾಲದಲ್ಲಿ ಸ್ಪಂದಿಸಿ ನ್ಯಾಯ ಒದಗಿಸಿದ ಅಧಿಕಾರಿಗಳಿಗೆ ಹಾಗೂ ಪಟ್ಟಣ ಪಂಚಾಯತ್ ಆಡಳಿತಕ್ಕೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿವೆ.

Continue Reading

Bantawala

ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತಕ್ಕೆ ಬಲಿ: ವಾರದೊಳಗೆ ಇಬ್ಬರು ಮುಖ್ಯಶಿಕ್ಷಕಿಯರ ಸಾವು!

Published

on

ಬಂಟ್ವಾಳ: ಶಿಕ್ಷಣ ಕ್ಷೇತ್ರಕ್ಕೆ ಆಘಾತಕಾರಿ ಸುದ್ದಿ. ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ (58) ಅವರು ಹೃದಯಾಘಾತದಿಂದ ನ.2ರಂದು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶೇಷವೆಂದರೆ, ವಾರದ ಹಿಂದಷ್ಟೇ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಇದೀಗ ಮತ್ತೋರ್ವ ಮುಖ್ಯಶಿಕ್ಷಕಿಯ ಸಾವು ಶಿಕ್ಷಣ ವಲಯದಲ್ಲಿ ತೀವ್ರ ಶೋಕ ಮೂಡಿಸಿದೆ.

ಗುರುಪುರ ಕೈಕಂಬದ ಕಂದಾವರ ಬೈಲು ನಿವಾಸಿಯಾಗಿದ್ದ ವನಿತಾ ಶೆಟ್ಟಿಗಾರ್ ಅವರು ನ.2ರಂದು ಎಂದಿನಂತೆ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಗೆ ಮರಳಿದ್ದರು. ರಾತ್ರಿ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು, ಬಳಿಕ ವಾಂತಿಯಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

34 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದ ವನಿತಾ ಶೆಟ್ಟಿಗಾರ್ ಅವರು ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಅವರ ನಿಧನದಿಂದ ಶಿಕ್ಷಕ ವಲಯದಲ್ಲಿ ಶೋಕ ಆವರಿಸಿದೆ. ಸಹೋದ್ಯೋಗಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದಕ್ಕೂ ಮೊದಲು ಅಕ್ಟೋಬರ್ 27ರಂದು ಕೆಲಿಂಜ ಶಾಲೆಯ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಈ ಘಟನೆ ನಡೆದು ವಾರ ಕಳೆಯುವ ಮುನ್ನವೇ ಮತ್ತೊಂದು ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಅವರು ಹೃದಯಾಘಾತಕ್ಕೆ ಬಲಿಯಾಗಿರುವುದು ಸ್ಥಳೀಯ ಶಿಕ್ಷಣ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.

ವಾರದ ಅಂತರದಲ್ಲಿ ಇಬ್ಬರು ಶಾಲಾ ಮುಖ್ಯಸ್ಥೆಯರನ್ನು ಕಳೆದುಕೊಂಡಿರುವುದು ಶಿಕ್ಷಕ ಸಮುದಾಯದಲ್ಲಿ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

Continue Reading

Bantawala

ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Published

on

ವಿಟ್ಲದ ಖ್ಯಾತ ವೈದ್ಯ, ಪುಷ್ಪಾಕ್ ಹೆಲ್ತ್ ಸೆಂಟರ್ ಸಂಸ್ಥಾಪಕ *ಡಾ. ವಿ.ಕೆ. ಹೆಗ್ಡೆ* ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1987 ರಿಂದ ವಿಟ್ಲದಲ್ಲಿ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ವಿ.ಕೆ. ಹೆಗ್ಡೆ ಅವರ ವೃತ್ತಿಪರ ಪಯಣವು ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದ ಪ್ರಾಥಮಿಕ ಆರೋಗ್ಯ ಸೇವೆಯ ನಿರಂತರ ಅಧ್ಯಾಯವಾಗಿದೆ.ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವ ಮಾನವೀಯ ಸೇವೆಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ, ವೈಯಕ್ತಿಕ ವೈದ್ಯಕೀಯ ಕಾಳಜಿ ಮತ್ತು ಮಾನವೀಯ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ.ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿಯೂ ದೀರ್ಘಕಾಲದ ಕೊಡುಗೆ ನೀಡಿದ್ದಾರೆ.ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಅವಧಿಯಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿ, ಅಗತ್ಯವಿರುವ ರೋಗಿಗಳಿಗೆ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಮತ್ತು ಸೂಕ್ತ ರೆಫರಲ್ ನೆರವು ನೀಡಿದ ಅವರ ಸೇವಾ ಬದ್ಧತೆಯು ಈ ನಾಮನಿರ್ದೇಶನದ ಪ್ರಮುಖ ಅಂಶವಾಗಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!