Connect with us

drugs

ಮಾದಕ ವಸ್ತು ಸೇವಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸವಾರನ ಬಂಧನ

Published

on

ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಮಾದಕ ವಸ್ತು ಸೇವನೆ ಮಾಡಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದಲ್ಲದೆ, ತಪಾಸಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ ಪ್ರಕರಣ ದಾಖಲಾಗಿದೆ.

ದಿನಾಂಕ 03.05.2026 ರಂದು ಮಧ್ಯಾಹ್ನ ವಿಟ್ಲ ಪೊಲೀಸ್ ಉಪ ನಿರೀಕ್ಷಕರಾದ ಬಿ. ಎಸ್. ನಾಯಕ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ, KA-19-HX-0497 ಸಂಖ್ಯೆಯ ಸ್ಕೂಟರ್‌ನಲ್ಲಿ ಬಂದ ಸವಾರ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿರುವುದು ಕಂಡುಬಂದಿದೆ. ತಪಾಸಣೆಗಾಗಿ ಪೊಲೀಸರು ವಾಹನವನ್ನು ತಡೆದಾಗ, ಸವಾರನು ಉಪ ನಿರೀಕ್ಷಕರೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

ಆರೋಪಿಯ ವರ್ತನೆಯಿಂದ ಆತ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಸಂಶಯಗೊಂಡು ವಿಚಾರಿಸಿದಾಗ, ಆತ ಬಂಟ್ವಾಳ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಎಂದು ತಿಳಿದುಬಂದಿದೆ. ತಾನು ಮಾದಕ ವಸ್ತು ಸೇವಿಸಿರುವುದಾಗಿ ಆತ ಒಪ್ಪಿಕೊಂಡಿದ್ದು, ವೈದ್ಯಕೀಯ ತಪಾಸಣೆಯಲ್ಲೂ ಅದು ದೃಢಪಟ್ಟಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ:100/2026 ರಂತೆ NDPS ಕಾಯ್ದೆ, ಬಿಎನ್‌ಎಸ್ (BNS) ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: ಮಾದಕ ವಸ್ತು ಮಾರಾಟ ದಂಧೆಕೋರರ ಜಾಲಕ್ಕೆ ಪೊಲೀಸ್ ಲಗಾಮು; ಮೂವರ ಬಂಧನ!

Published

on

ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲದ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೀವ್ರ ನಿಗಾ ಇರಿಸಿದ್ದು, ಪ್ರತ್ಯೇಕ ದಾಳಿಗಳ ಮೂಲಕ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.

ಪ್ರಕರಣ 1: ಗೂಡ್ ಶೆಡ್ಡೆ ಬಳಿ ಎಂಡಿಎಂಎ ಮಾರಾಟ ಯತ್ನ – ಇಬ್ಬರ ಬಂಧನ

ದಿನಾಂಕ 08-06-2026 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡ್ ಶೆಡ್ಡೆ ಪರಿಸರದಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಬಂಧಿತ ಆರೋಪಿಗಳು: 1. ಜನನ್ ಜಗನ್ನಾಥ್ (29 ವರ್ಷ), ತಂದೆ: ಜಗನ್ನಾಥ್, ವಾಸ: ಸಿಲ್ವ‌ರ್ ಗೇಟ್, ಕುಲಶೇಖರ, ಮಂಗಳೂರು. 2. ಪರೀಕ್ಷಿತ್ (33 ವರ್ಷ), ತಂದೆ: ಲೇ. ಜಯರಾಮ ಶೆಟ್ಟಿ, ವಾಸ: ಬೋಳಾರ, ಮಂಗಳೂರು.

ಸ್ವಾಧೀನಪಡಿಸಿಕೊಂಡ ಸೊತ್ತುಗಳು: ದಾಳಿಯ ವೇಳೆ ಪೊಲೀಸರು ಒಟ್ಟು 11.68 ಗ್ರಾಂ ಎಂಡಿಎಂಎ ಮಾದಕ ವಸ್ತು, ₹1,110 ನಗದು ಹಣ, 3 ಮೊಬೈಲ್ ಫೋನ್‌ಗಳು ಹಾಗೂ ಮಾದಕ ವಸ್ತು ತೂಕ ಮಾಡಲು ಬಳಸುತ್ತಿದ್ದ 1 ತೂಕ ಮಾಪನವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ (ಪ್ರಕರಣ ಸಂಖ್ಯೆ 122/2026) ಮೊಕದ್ದಮೆ ದಾಖಲಾಗಿದೆ.

ಪ್ರಕರಣ 2: ಡ್ರಗ್ಸ್ ಜಾಲದ ಮತ್ತೊಬ್ಬ ಆರೋಪಿ ಸುಶಾನ್ ಪೂಜಾರಿ ವಶಕ್ಕೆ

ದಿನಾಂಕ 06-06-2026 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಎನ್.ಡಿ.ಪಿ.ಎಸ್ ಪ್ರಕರಣಕ್ಕೆ (ಕ್ರೈಂ ಸಂಖ್ಯೆ 116/2026) ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ: ಸುಶಾನ್ ಪೂಜಾರಿ (27 ವರ್ಷ), ತಂದೆ: ಲೋಹಿತಾಶ್ವ, ವಾಸ: ನಳಂದ ಶಾಲೆ ಹತ್ತಿರ, ಕಾರ್ ಸ್ಟ್ರೀಟ್, ಮಂಗಳೂರು.

ಹಿನ್ನೆಲೆ: ಈ ಪ್ರಕರಣದಲ್ಲಿ ಈಗಾಗಲೇ ಪ್ರಣಮ್ ಕೋಟ್ಯಾನ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಇದೀಗ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಶಾನ್ ಪೂಜಾರಿಯನ್ನು ದಿನಾಂಕ 09-06-2026 ರಂದು ಪೊಲೀಸರು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.

ಮುಂದಿನ ಪೊಲೀಸ್ ಕ್ರಮ:

ಬಂಧಿತ ಎಲ್ಲಾ ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಮಾದಕ ವಸ್ತು ಜಾಲದ ಮೂಲ ಹಾಗೂ ಇದರ ಹಿಂದೆ ಇರುವ ಇತರ ಕಿಂಗ್‌ಪಿನ್‌ಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.




Continue Reading

arrest

ಮಂಗಳೂರು: ಮಾದಕ ವಸ್ತು ಜಾಲದ ಮೇಲೆ ಸಿಸಿಬಿ ಪೊಲೀಸರ ದಾಳಿ; ಇಬ್ಬರು ಕುಖ್ಯಾತ ಆರೋಪಿಗಳ ಬಂಧನ

Published

on

ಮಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗ (CCB) ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹16,40,000 ಮೌಲ್ಯದ 164 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರ ನಿರ್ದೇಶನದಂತೆ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಯಶಸ್ವಿ ದಾಳಿ ನಡೆಸಿದ್ದಾರೆ. ಈ ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಮೊದಲ ಕಾರ್ಯಾಚರಣೆಯಲ್ಲಿ, ಬೆಂಗಳೂರು ನಗರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿ ತಂದು ಮಂಗಳೂರಿನ ಹೊಯಿಗೆ ಬಜಾರ್ ಪರಿಸರದಲ್ಲಿರುವ ಮನೆಯಿಂದ ಮಾರಾಟ ಮಾಡುತ್ತಿದ್ದ ಆರೋಪಿ ಪ್ರಣಾಮ್ ಕೋಟ್ಯಾನ್ (30) ಎಂಬಾತನನ್ನು ಜೂನ್ 5ರಂದು ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಈತನಿಂದ ಸುಮಾರು ₹10,40,000 ಮೌಲ್ಯದ 104 ಗ್ರಾಂ ಎಂಡಿಎಂಎ ಸೇರಿದಂತೆ ಮೊಬೈಲ್ ಫೋನ್, ಜಿಪ್ ಲಾಕ್ ಕವರ್ ಹಾಗೂ ಡಿಜಿಟಲ್ ತೂಕಮಾಪನವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿ ಪ್ರಣಾಮ್ ಕೋಟ್ಯಾನ್ ವಿರುದ್ಧ ಈಗಾಗಲೇ ಮಂಗಳೂರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಬೆದರಿಕೆ, ಮಾದಕವಸ್ತು ಸೇವನೆ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಹಲವು ಹಳೆಯ ಪ್ರಕರಣಗಳು ದಾಖಲಾಗಿವೆ.

ಇದೇ ದಿನ ನಡೆದ ಎರಡನೇ ಕಾರ್ಯಾಚರಣೆಯಲ್ಲಿ, ಪದವಿನಂಗಡಿ ಪರಿಸರದ ಮುಗರೋಡಿ ಗುರುನಗರದ ಮನೆಯೊಂದರಿಂದ ಮಾದಕವಸ್ತು ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಆರೋಪಿ, ಅರ್ಕುಳ ವಳಚ್ಚಿಲ್ ನಿವಾಸಿ ಧನರಾಜ್ ಪೂಜಾರಿ ಅಲಿಯಾಸ್ ಧನು ವಳಚಿಲ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹6,00,000 ಮೌಲ್ಯದ 60 ಗ್ರಾಂ ಎಂಡಿಎಂಎ, ಜಿಪ್-ಲಾಕ್ ಕವರ್‌ಗಳು, ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕದ ಯಂತ್ರವನ್ನು ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡಲಾಗಿದೆ. ಆರೋಪಿ ಧನರಾಜ್ ಪೂಜಾರಿ ಮೇಲೆ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳು ಹಾಗೂ ಬಂಟ್ವಾಳ ಠಾಣೆಯಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಬೆದರಿಕೆ ಸೇರಿದಂತೆ ಸುಮಾರು 12 ಕ್ರಿಮಿನಲ್ ಪ್ರಕರಣಗಳಿದ್ದು, 2016ರ ಗಂಭೀರ ಹಲ್ಲೆ ಪ್ರಕರಣವೊಂದರಲ್ಲಿ ಈತನಿಗೆ 3 ವರ್ಷಗಳ ಜೈಲು ಶಿಕ್ಷೆಯೂ ವಿಧಿಸಲಾಗಿತ್ತು.





Continue Reading

arrest

ಬಂಟ್ವಾಳ: ರೂ 7.64 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಮಾದಕ ದ್ರವ್ಯ ವಶ; ಮೂವರು ಆರೋಪಿಗಳ ಬಂಧನ

Published

on

ಬಂಟ್ವಾಳ: ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್‌ಪಿ) ನೀಡಿದ ಮಾಹಿತಿ ಪ್ರಕಾರ, ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಮಾದಕ ದ್ರವ್ಯ ಸಾಗಾಟ ಜಾಲವನ್ನು ಪತ್ತೆಹಚ್ಚಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಎಂ.ಡಿ.ಎಂ.ಎ (MDMA) ಅನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ಹಿನ್ನೆಲೆ:

ದಿನಾಂಕ 04.06.2026ರಂದು ಸಂಜೆ, ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (PSI) ಸಂದೀಪ್‌ ಕುಮಾರ್‌ ಶೆಟ್ಟಿ ಮತ್ತು ಸಿಬ್ಬಂದಿಗಳು ಮೆಲ್ಕಾರ್ ಪ್ಲೈಒವರ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಂಶಯಾಸ್ಪದವಾಗಿ ಬಂದ ಕಾರೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳ ವಿವರ:

ಕಾರಿನಲ್ಲಿದ್ದ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರ ಗುರುತು ಪತ್ತೆಯಾಗಿದೆ:

  1. ಎ. ಜುಬೈರ್ (39) – ನಿವಾಸಿ: ಪುದು, ಬಂಟ್ವಾಳ.
  2. ಮೊಹಮ್ಮದ್ ಸವಾದ್ (36) – ನಿವಾಸಿ: ಸಜಿಪ ಮುನ್ನೂರು, ಬಂಟ್ವಾಳ.
  3. ಬಿ.ಎಮ್. ರಶೀದ್ ಯಾನೆ ಮಾರಿಮುತ್ತು – ನಿವಾಸಿ: ಬಿ ಮೂಡ, ಬಂಟ್ವಾಳ.

ಸ್ವಾಧೀನಪಡಿಸಿಕೊಂಡ ಸೊತ್ತುಗಳು:

  • ಎಂ.ಡಿ.ಎಂ.ಎ: 76 ಗ್ರಾಂ 40 ಮಿಲಿಗ್ರಾಂ (ಅಂದಾಜು ಮೌಲ್ಯ ರೂ. 7,64,000/-)
  • ಕಾರು: ಕೃತ್ಯಕ್ಕೆ ಬಳಸಿದ ಕೆ.ಎ. 19 ಎಮ್.ಆರ್. 1997 (KA 19 MR 1997) ನೋಂದಣಿಯ ವಾಹನ.
  • ಮೊಬೈಲ್ ಫೋನ್‌ಗಳು: ಆರೋಪಿಗಳ ಬಳಿಯಿದ್ದ 3 ಮೊಬೈಲ್ ಫೋನ್‌ಗಳು.
  • ಮಾದಕ ವಸ್ತು ಸೇವನೆ ಮಾಡಲು ಉಪಯೋಗಿಸುವ ಸಾಧನಗಳು.

ಪೊಲೀಸ್ ಕಾರ್ಯಾಚರಣೆ:

ಕಾರನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಮೊದಲು ಡ್ರಗ್ಸ್ ಸೇವನೆಗೆ ಬಳಸುವ ಸಾಧನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಆರೋಪಿಗಳು ಎಂ.ಡಿ.ಎಂ.ಎ ಮಾದಕದ್ರವ್ಯವನ್ನು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸದ್ಯ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಾದಕ ದ್ರವ್ಯ ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಅರುಣ್ ಕೆ. ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಹಾಗೂ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ ರವರ ನೇತೃತ್ವದ ತಂಡದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಕೆ.ವಿ, ಬಂಟ್ವಾಳ ನಗರ ಠಾಣಾ ಪಿ.ಎಸ್.ಐ ಸಂದೀಪ್ ಶೆಟ್ಟಿ, ಹಾಗೂ ಸಿಬ್ಬಂದಿಯವರಾದ ಉದಯ ರೆ ರಾಧಾಕೃಷ್ಣ ಕೆ, ಪ್ರವೀಣ್ ರೈ, ಸುರೇಶ್, ವಿವೇಕ್ ರ್ರೈ. ಆದರ್ಶ, ಅಜಯ್, ಸುರೇಶ್ ಉಪ್ಪಾರ್, ಸದಾಶಿವ, ಮಾಲಾಶ್ರೀ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಂಪತ್, ದಿವಾಕರ್ ರವರು ಕಾರ್ಯಾಚರಣೆಗೆ ಸಹಕರಿಸಿರುತ್ತಾರೆ.. ಈ ಕಾರ್ಯಚರಣೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.





Continue Reading

Trending

Copyright © 2025 Deevatige

error: Content is protected !!