Connect with us

fire

ಚಿಕನ್ ಸೆಂಟರ್‌ನಲ್ಲಿ ತಡರಾತ್ರಿ ಬೆಂಕಿ ಆಕಸ್ಮಿಕ – ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Published

on

ವಿಟ್ಲ: ಇಲ್ಲಿನ ಬೊಬ್ಬೆಕೇರಿಯ ದೇವಸ್ಥಾನದ ಒಳರಸ್ತೆಯಲ್ಲಿರುವ ‘ಜನಪ್ರಿಯ ಚಿಕನ್ ಸೆಂಟರ್’ನಲ್ಲಿ ತಡರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸ್ಥಳೀಯರ ತುರ್ತು ಕಾರ್ಯಾಚರಣೆಯಿಂದಾಗಿ ದೊಡ್ಡ ಮಟ್ಟದ ಅಪಾಯವೊಂದು ತಪ್ಪಿದ ಘಟನೆ ನಡೆದಿದೆ.

ಇಸ್ಮಾಯಿಲ್ ಎಂಬವರ ಮಾಲೀಕತ್ವದ ಈ ಚಿಕನ್ ಸೆಂಟರ್‌ನಲ್ಲಿ ಭಾನುವಾರ ತಡರಾತ್ರಿ ಸುಮಾರು 1 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಸಮಾರಂಭವೊಂದಕ್ಕಾಗಿ ಕೋಳಿ ಮಾಂಸದ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ, ಗ್ಯಾಸ್ ಒಲೆಯಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಅಂಗಡಿಯಾದ್ಯಂತ ವ್ಯಾಪಿಸತೊಡಗಿತ್ತು.

ರಕ್ಷಣಾ ಕಾರ್ಯಾಚರಣೆ: ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ‘ಫ್ರೆಂಡ್ಸ್ ವಿಟ್ಲ’ ತಂಡದ ಮುರಳೀಧರ ವಿಟ್ಲ ಅವರು ಕೂಡಲೇ ತಮ್ಮ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಮುಂದಾದರು. ಇದೇ ಸಂದರ್ಭದಲ್ಲಿ ಆಸಿಫ್ ಪೆರುವಾಯಿ, ನವೀದ್ ವಿಟ್ಲ ಮತ್ತು ಅನ್ಸಾರ್ ಪೆರುವಾಯಿ ಅವರು ಹತ್ತಿರದ ಬೊಬ್ಬೆಕೇರಿ ಪೆಟ್ರೋಲ್ ಬಂಕ್‌ನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್‌ಗಳನ್ನು ತಂದು ಬೆಂಕಿ ಹರಡದಂತೆ ತಡೆದರು. ಇವರ ಸಮಯಪ್ರಜ್ಞೆ ಮತ್ತು ಸಾಹಸಮಯ ಕಾರ್ಯದಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬಂದು, ಪಕ್ಕದ ಕಟ್ಟಡಗಳಿಗೆ ಹಾನಿಯಾಗುವುದು ತಪ್ಪಿದಂತಾಗಿದೆ.

ಘಟನೆಯಲ್ಲಿ ಚಿಕನ್ ಸೆಂಟರ್‌ನ ಕೆಲವು ಸಾಮಗ್ರಿಗಳು ಹಾನಿಗೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


Continue Reading
Advertisement

DEATH

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಭೀಕರ ಅಗ್ನಿ ಅವಘಡ: ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Published

on

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವು ಜನರನ್ನು ಬೆಚ್ಚಿಬೀಳಿಸಿದೆ. ಎಲೆಕ್ಟ್ರಿಕ್ ವಾಹನ (EV) ಚಾರ್ಜ್ ಮಾಡುತ್ತಿದ್ದ ವೇಳೆ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡು, ಒಂದೇ ಕುಟುಂಬದ ಏಳು ಮಂದಿ ಸಜೀವ ದಹನವಾಗಿರುವ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ನಗರದ ಬ್ರಿಜೇಶ್ವರಿ ಅನೆಕ್ಸ್ ವಸತಿ ಪ್ರದೇಶದಲ್ಲಿ ಬೆಳಗ್ಗಿನ ಜಾವ ನಡೆದಿದೆ. ಘಟನೆ ಸಂಭವಿಸಿದ ಸಮಯದಲ್ಲಿ ಮನೆಯಲ್ಲಿದ್ದ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು ಎಂದು ತಿಳಿದುಬಂದಿದೆ. ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಕಾರು ಚಾರ್ಜ್ ಆಗುತ್ತಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಾರಿಗೆ ಬೆಂಕಿ ತಗುಲಿತು. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಮನೆಯನ್ನು ಆವರಿಸಿತು.

ಬೆಂಕಿಯ ತೀವ್ರತೆ ಅಷ್ಟರ ಮಟ್ಟಿಗೆ ಇತ್ತು, ಮನೆಯವರು ಎಚ್ಚರವಾಗುವಷ್ಟರಲ್ಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿಕೊಂಡಿದ್ದು, ಒಳಗಿದ್ದವರಿಗೆ ಹೊರಬರಲು ಯಾವುದೇ ಅವಕಾಶ ಸಿಗಲಿಲ್ಲ.

ಘಟನೆಯನ್ನು ಇನ್ನಷ್ಟು ಭೀಕರಗೊಳಿಸಿದ ಅಂಶವೆಂದರೆ ಮನೆಯೊಳಗೆ ಸಂಗ್ರಹಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು. ಮೂಲಗಳ ಪ್ರಕಾರ, ಮನೆಯಲ್ಲಿ ಸುಮಾರು 15 ಗ್ಯಾಸ್ ಸಿಲಿಂಡರ್‌ಗಳನ್ನು ಇಡಲಾಗಿದ್ದು, ಅವುಗಳಲ್ಲಿ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಈ ಸ್ಫೋಟಗಳ ಪರಿಣಾಮವಾಗಿ ಬೆಂಕಿ ಮತ್ತಷ್ಟು ವ್ಯಾಪಕವಾಗಿ ಹರಡಿದ್ದು, ಸುತ್ತಮುತ್ತಲಿನ ಮನೆಗಳಿಗೂ ಕಂಪನ ಉಂಟಾಗಿದೆ.

ಅಪಘಾತದ ವೇಳೆ ಮನೆಯಲ್ಲಿ ಕುಟುಂಬ ಸಭೆ ನಡೆಯುತ್ತಿದ್ದು, ಅನೇಕ ಸಂಬಂಧಿಕರು ಒಂದೇ ಕಡೆ ಸೇರಿದ್ದರಿಂದ ಹಾನಿ ಹೆಚ್ಚಾಗಿದೆ. ಸಂತೋಷದ ಕ್ಷಣಗಳು ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿದ್ದು, ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿದರೂ, ಬೆಂಕಿಯ ತೀವ್ರತೆ ಹಾಗೂ ಕಿರಿದಾದ ರಸ್ತೆಗಳ ಕಾರಣದಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು. ಬಹಳ ಸಮಯದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಮನೆ ಸಂಪೂರ್ಣವಾಗಿ ಭಸ್ಮವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಗ್ನಿ ಅವಘಡದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಆಡಳಿತವೂ ಗಮನಹರಿಸಿದ್ದು, ಇಂತಹ ಅವಘಡಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಲಾಗಿದೆ.

Continue Reading

Bantawala

ವಿಟ್ಲದಲ್ಲಿ ಗ್ಯಾಸ್ ಲೀಕ್ ಆತಂಕ!” ಸಿಎನ್‌ಜಿ ಬಂಕ್‌ನಲ್ಲಿ ತಾಂತ್ರಿಕ ದೋಷ – ಅನಿಲ ಸೋರಿಕೆಯ ವಿಡಿಯೋ ವೈರಲ್

Published

on

ವಿಟ್ಲದ ಕಾಶಿಮಠದ ಸಿಎನ್‌ಜಿ ಆಟೋ ಗ್ಯಾಸ್ ಬಂಕ್‌ನಲ್ಲಿ ಇಂದು ಬೆಳಿಗ್ಗೆ ಗ್ಯಾಸ್ ತಂದಿದ್ದ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅನಿಲ ಸೋರಿಕೆಯಾಗಿದೆ. ವಿಡಿಯೋದಲ್ಲಿ ಕಾಣುವಂತೆ ಅನಿಲವು ದಟ್ಟವಾಗಿ ಆವರಿಸಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿತ್ತು. ಗ್ಯಾಸ್ ಸಂಪೂರ್ಣವಾಗಿ ಖಾಲಿಯಾದ ನಂತರವಷ್ಟೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ವಿಟ್ಲದ ಕಾಶಿಮಠ ಸಮೀಪವಿರುವ ಸಿಎನ್‌ಜಿ ಆಟೋ ಗ್ಯಾಸ್ ಬಂಕ್‌ನಲ್ಲಿ ಇಂದು ಬೆಳಿಗ್ಗೆ ಅನಿಲ ಸೋರಿಕೆಯಾದ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಸಿತ್ತು.

ಗ್ಯಾಸ್ ತುಂಬಿಸಿಕೊಂಡು ಬಂದಿದ್ದ ವಾಹನವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಈ ಸೋರಿಕೆ ಉಂಟಾಗಿದೆ ಎಂದು ತಿಳಿದುಬಂದಿದೆ. ಸೋರಿಕೆಯ ತೀವ್ರತೆ ಕಂಡು ಸ್ಥಳೀಯರು ಹಾಗೂ ಬಂಕ್ ಸಿಬ್ಬಂದಿ ಗಾಬರಿಗೊಂಡಿದ್ದರು. ತಾಂತ್ರಿಕ ದೋಷವನ್ನು ಸರಿಪಡಿಸಲು ಮತ್ತು ಸೋರಿಕೆಯನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಯಿತು.

ಸುಮಾರು ಸಮಯದವರೆಗೆ ಮುಂದುವರಿದ ಈ ಸೋರಿಕೆಯು, ವಾಹನದಲ್ಲಿದ್ದ ಅನಿಲ ಸಂಪೂರ್ಣವಾಗಿ ಖಾಲಿಯಾದ ಬಳಿಕವಷ್ಟೇ ನಿಂತಿದೆ. ಗ್ಯಾಸ್ ಖಾಲಿಯಾದ ನಂತರ ಪರಿಸ್ಥಿತಿ ತಿಳಿಗೊಂಡಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

Continue Reading

accident

ಬೆಳ್ತಂಗಡಿ ಸಂತೆಕಟ್ಟೆಯಲ್ಲಿ KAF ಕ್ರಿಯೇಟಿವ್ ಆರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಬೆಂಕಿ ಅವಘಡ ; ಅಂಗಡಿ ಸಂಪೂರ್ಣ ಭಸ್ಮ

Published

on

ಬೆಳ್ತಂಗಡಿ: ಬಲೂನ್‌ಗಳಿಗೆ ಗ್ಯಾಸ್ ತುಂಬುವ ವೇಳೆ ಹೀಲಿಯಂ ಗ್ಯಾಸ್ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಶನಿವಾರ ಬೆಳಗ್ಗೆ ಬೆಳ್ತಂಗಡಿ ಪಟ್ಟಣದಲ್ಲಿ ನಡೆದಿದೆ.


ಸಂತೆಕಟ್ಟೆ ಪ್ರದೇಶದಲ್ಲಿರುವ ಹೇರಾಜೆ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಮುಹಮ್ಮದ್ ಸಮೀಲ್ ಮಾಲಕತ್ವದ KAF ಕ್ರಿಯೇಟಿವ್ ಆರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಫೆ.14ರಂದು ಬೆಳಗ್ಗೆ ಸುಮಾರು 7:30ಕ್ಕೆ ಕಾರ್ಯಕ್ರಮವೊಂದಕ್ಕಾಗಿ ಬಲೂನ್‌ಗಳಿಗೆ ಗ್ಯಾಸ್ ತುಂಬುವ ವೇಳೆ ಹೀಲಿಯಂ ಗ್ಯಾಸ್ ಸೋರಿಕೆಯಾಗಿದ್ದು, ಬಳಿಕ ಸ್ಪೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ.

ಪರಿಣಾಮ ನಿಯಂತ್ರಣಕ್ಕೆ ಬಾರದ ಕಾರಣ ಬೆಂಕಿ ಆವರಿಸಿಕೊಂಡು ಅಗ್ನಿಯ ತೀವ್ರತೆ ಜಾಸ್ತಿಯಾಗಿ ಅಂಗಡಿಗೆ ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಘಟನೆ ಸಂದರ್ಭ ಅಂಗಡಿಯೊಳಗೆ ಇಬ್ಬರು ಕೆಲಸದವರು ಇದ್ದು, ಅವರು ತಕ್ಷಣ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಕೆಲವು ಅಂಗಡಿಗಳಿಗೆ ಸಹ ಹಾನಿ ಸಂಭವಿಸಿದೆ. ಗ್ಯಾಸ್ ಸೋರಿಕೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.


ಘಟನೆಯನ್ನು ವೀಕ್ಷಿಸಲು ನೂರಾರು ಮಂದಿ ಜಮಾಯಿಸಿದ್ದರಿಂದ ರಸ್ತೆ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಸಂಚಾರವನ್ನು ಸುಗಮಗೊಳಿಸಿದರು.

ಇದೇ ವೇಳೆ ಬೆಂಕಿ ಅವಘಡವನ್ನು ವೀಕ್ಷಿಸುತ್ತಿದ್ದ ಅಂಗಡಿ ಕೆಲಸದಾಕೆಯೊಬ್ಬರು ಮೂರ್ಛೆ ಹೋಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Continue Reading

Trending

Copyright © 2025 Deevatige