Connect with us

Belthangady

ಸರ್ಕಾರಿ ಜಮೀನಿನಲ್ಲಿದ್ದ ಬಡ ಕುಟುಂಬದ ಮನೆ ಧ್ವಂಸ, ಸೊತ್ತುಗಳ ನಾಶ..ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಉಜಿರೆ ಕಕ್ಕರೆಬೆಟ್ಟುನಲ್ಲಿ ಮನಕಲಕುವ ಘಟನೆ..

Published

on

ಬೆಳ್ತಂಗಡಿ : ಸರ್ಕಾರಿ ಜಮೀನಲ್ಲಿ ಬಡ ಕುಟುಂಬದ ಮನೆಯನ್ನು ಧ್ವಂಸಗೈದು ಸೊತ್ತುಗಳನ್ನು ವ್ಯಕ್ತಿಯೊಬ್ಬ ನಾಶ ಮಾಡಿದ ರಾಕ್ಷಸೀ ಕೃತ್ಯ ಉಜಿರೆ ಗ್ರಾಮದಲ್ಲಿ ನಡೆದಿದೆ. ದುಷ್ಕೃತ್ಯದ ವೀಡಿಯೋ ಮಾಡಲು ಬಂದ ಅಪ್ರಾಪ್ತ ಬಾಲಕಿಗೆ ದುಷ್ಕರ್ಮಿ ಜೀವಬೆದರಿಕೆ ಹಾಕಿದ ಆತಂಕಕಾರಿ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಬೆಳ್ತಂಗಡಿ: ಉಜಿರೆ ಗ್ರಾಮದ ಸ.ನಂಬ್ರ 406/1 ರ ಸರಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ಹಲವು ಸಮಯಗಳಿಂದ ವಾಸವಿದ್ದ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ವೆಂಕಪ್ಪ ಅವರ ಪತ್ನಿ ರಾಜೀವಿ ಎಂಬವರ ಮನೆಯನ್ನು ಸ್ಥಳೀಯ ಓಡಲ ನಿವಾಸಿ ರಫೀಕ್ ಎಂಬಾತ ಮನೆಯವರಿಲ್ಲದ ಸಂದರ್ಭ ಸಂಪೂರ್ಣ ಕೆಡವಿ ಮನೆಯ ಸೊತ್ತುಗಳನ್ನು ಬೀದಿಗೆಸೆದ ಆತಂಕಕಾರಿ ಘಟನೆ ಇಂದು ನಡೆದಿದೆ.

ರಾಜೀವಿಯವರು ಸದ್ರಿ ಮನೆಯಲ್ಲಿ ಪತಿ‌ ಹಾಗೂ ಮಗಳೊಂದಿಗೆ ವಾಸವಾಗಿದ್ದರು. ಅಲ್ಲದೆ ಇದೇ ಸ್ಥಿರಾಸ್ತಿಯಲ್ಲಿ ಅಡಿಕೆ ಮತ್ತು ತೆಂಗು ಕೃಷಿಯನ್ನು ಮಾಡಿಕೊಂಡು ತಮ್ಮ ಪಾಡಿಗೆ ಬದುಕುತ್ತಿದ್ದರು. ಇಂದು ಬೆಳಗ್ಗೆ 11.00 ಗಂಟೆ ಸುಮಾರಿಗೆ ರಾಜೀವಿ ಮತ್ತು ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರಫೀಕ್ ಎಂಬವರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು ಅಕ್ರಮವಾಗಿ ಪ್ರವೇಶ ಮಾಡಿ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿರುತ್ತಾರೆ. ಅಲ್ಲದೇ ಮನೆಯಲ್ಲಿದ್ದ ಟಿ.ವಿ. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣಗಳು, ಬಟ್ಟೆ ಬರೆ, ದಿನಸಿ ಸಾಮಾನುಗಳು ಹಾಗೂ ಇನ್ನಿತರ ಎಲ್ಲಾ ಸೊಸ್ತುಗಳನ್ನೂ ಮನೆಯಿಂದ ಹೊರತೆಗೆದು ಬೀದಿಗೆ ಎಸೆದಿದ್ದಾರೆ. ಈ ಕೃತ್ಯದ ಬಗ್ಗೆ ಸುದ್ದಿ ತಿಳಿದು ದಂಪತಿಯ ಅಪ್ರಾಪ್ತ ಪ್ರಾಯದ ಮಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ರಫೀಕ್ ಅವರ ದುಷ್ಕೃತ್ಯವನ್ನು ವಿಡಿಯೋ ಮಾಡಲು ಮುಂದಾಗಿದ್ದಾಳೆ.

ಅಷ್ಟರಲ್ಲಿ ಆಕ್ರೋಶಗೊಂಡ ರಫೀಕ್ “ನೀನು ವೀಡಿಯೋ ಮಾಡಿ ಏನಾದರೂ ನನ್ನ ಬಗ್ಗೆ ದೂರು ನೀಡಿದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

ಭಯಗೊಂಡ ಅಪ್ರಾಪ್ತ ಬಾಲಕಿ ಜೋರಾಗಿ ಅಳುತ್ತಿರುವುದನ್ನು ಕೇಳಿಸಿಕೊಂಡ ನೆರೆಕರೆಯವರಾದ ತ್ಯಾಗರಾಜ್ ಮತ್ತು ಜಯ ಎಂಬವರು ತಕ್ಷಣವೇ ಸ್ಥಳಕ್ಕೆ ತೆರಳಿ ಎದ್ರಿದಾರರ ದುಷ್ಕೃತ್ಯವನ್ನು ಪ್ರಶ್ನಿಸುತ್ತಿದ್ದಂತೆ ಆತ ತ್ಯಾಗರಾಜ್ ಮತ್ತು ಜಯ ಅವರಿಬ್ಬರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ “ತನ್ನ ವಿಷಯಕ್ಕೆ ಬಂದಲ್ಲಿ ನಿಮ್ಮಿಬ್ಬರ ಮನೆಯನ್ನು ಕೂಡಾ ಒಡೆದು ಹಾಕುತ್ತೇನೆ” ಎಂದು ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಇದೀಗ ಇಡೀ ಘಟನೆಯ ದೃಷ್ಯಾವಳಿಗಳ ಸಹಿತ ಫೋಟೋ ಹೊಂದಿರುವ ಪೆನ್‌ಡ್ರೈವನ್ನು ದೂರಿನ ಜೊತೆಗೆ ಲಗತ್ತಿಸಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಇದರಿಂದಾಗಿ ನಮಗೆ ಸುಮಾರು 10 ಲಕ್ಷ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ಬಡ ಕುಟುಂಬದವರು ಅಲವತ್ತುಕೊಂಡಿದ್ದಾರೆ.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Continue Reading
Advertisement

Belthangady

ಯೂಟ್ಯೂಬರ್ ಸಮೀರ್ ಗೆ ಹೈಕೋರ್ಟ್ ರಿಲೀಫ್: ಕ್ರಿಮಿನಲ್ ಪ್ರಕರಣಕ್ಕೆ ಮಧ್ಯಂತರ ತಡೆ

Published

on

ಧರ್ಮಸ್ಥಳದ ಅಸಹಜ ಸಾವಿನ ಬಗ್ಗೆ ಕೃತಕ ಬುದ್ಧಿಮತ್ತೆ ಬಳಸಿ ಕಾಲ್ಪನಿಕ ವಿಡಿಯೋ ಹರಿಬಿಟ್ಟಿದ್ದ ಯೂಟ್ಯೂಬರ್ ಎಂ.ಡಿ.ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಮೀರ್ ಸಲ್ಲಿಸಿದ್ದರು.

ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಕುರಿತು ವಿಡಿಯೋ ಹಂಚಿಕೊಂಡಿದ್ದ ಯೂಟ್ಯೂಬರ್ ಸಮೀರ್ ಮೊಹಮ್ಮದ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮೇಲ್ನೋಟಕ್ಕೆ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ಶವಗಳನ್ನು ಹೂಳಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಒಳಗೊಂಡ ವಿಡಿಯೋವೊಂದನ್ನು ಸಮೀರ್ ಮೊಹಮ್ಮದ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ದೇವಸ್ಥಾನದ ಘನತೆಗೆ ಧಕ್ಕೆ ತರುವಂತಿದೆ. ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ (ಸೆಕ್ಷನ್ 153A) ನಡೆಸಲಾಗಿದೆ. ಸಾರ್ವಜನಿಕ ಶಾಂತಿ ಕದಡುವ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದ
ಸಮೀರ್ ಮೊಹಮ್ಮದ್ ಪರ ವಕೀಲರು ನ್ಯಾಯಪೀಠದ ಮುಂದೆ ಅರ್ಜಿದಾರರು ಕೇವಲ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯದ ಬಗ್ಗೆ ವಿಡಿಯೋ ಮಾಡಿದ್ದಾರೆ. ಇದರಲ್ಲಿ ಯಾವುದೇ ಸಮುದಾಯಗಳ ನಡುವೆ ದ್ವೇಷ ಉಂಟುಮಾಡುವ ಉದ್ದೇಶವಿಲ್ಲ. ಇದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿದೆ ಎಂದು ಬಲವಾದ ವಾದ ಮಂಡಿಸಿದರು. ವಿಚಾರಣೆ ವೇಳೆ ಸಮೀರ್ ಪರ ವಕೀಲರು, “ಯೂಟ್ಯೂಬ್‌ನಲ್ಲಿ ವಿಡಿಯೋ ಹಾಕಿದ್ದಕ್ಕೆ ಪೊಲೀಸರು ಸಾರ್ವಜನಿಕ ಶಾಂತಿ ಭಂಗದ ನೆಪದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ” ಎಂದು ವಾದಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಮಾರ್ಮಿಕವಾಗಿ ಪ್ರತಿಕ್ರಿಯಿಸಿ, “ಯಾರ ನೆಮ್ಮದಿ ಹಾಳು ಮಾಡಿದ್ದೀರಿ ಎಂದು ನಮಗೆ ತಿಳಿದಿದೆ. ಅದು ಕೇವಲ ಸಾರ್ವಜನಿಕರ ನೆಮ್ಮದಿ ಮಾತ್ರವಲ್ಲ” ಎಂದು ನಗುತ್ತಲೇ ನುಡಿದರು.

ಹೈಕೋರ್ಟ್ ನೀಡಿದ ಮಹತ್ವದ ಆದೇಶ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಗಂಭೀರ ಪುರಾವೆಗಳಿಲ್ಲ. ಯಾವುದೇ ನಿರ್ದಿಷ್ಟ ಸಮುದಾಯಗಳ ನಡುವೆ ದ್ವೇಷ ಅಥವಾ ಸಂಘರ್ಷಕ್ಕೆ ಪ್ರಚೋದನೆ ನೀಡಿದ ಅಂಶಗಳು ಈ ವಿಡಿಯೋದಲ್ಲಿ ಕಂಡುಬರುತ್ತಿಲ್ಲ. ಎಂಬ ಅಂಶಗಳನ್ನು ಗಮನಿಸಿ ಅರ್ಜಿದಾರರ ವಿರುದ್ಧದ ಮುಂದಿನ ತನಿಖೆ ಮತ್ತು ಎಲ್ಲಾ ಕಾನೂನು ಕ್ರಮಗಳಿಗೆ ನ್ಯಾಯಾಲಯ ತಡೆ ನೀಡಿದೆ.

ನ್ಯಾಯಾಲಯವು ಈ ಕುರಿತು ರಾಜ್ಯ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಮುಂದೂಡಿದೆ. ಹೈಕೋರ್ಟ್‌ನ ಈ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಧ್ವನಿ ಎತ್ತುವವರಿಗೆ ದೊಡ್ಡ ಸಮಾಧಾನ ತಂದಿದೆ.

Continue Reading

Belthangady

ಶಿಕ್ಷಕಿ ಮೇಲೆ ಅತ್ಯಾಚಾರ ಆರೋಪ: ಕೇಸ್ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್; ಮೂಡುಬಿದಿರೆ ಮಾಜಿ ಇನ್ಸ್‌ಪೆಕ್ಟರ್‌ಗೆ ಬಂಧನದ ಭೀತಿ

Published

on

ದೂರು ನೀಡಲು ಬಂದ ಮಹಿಳೆಗೆ ರಕ್ಷಣೆ ನೀಡಬೇಕಾದ ಅಧಿಕಾರಿಯೇ ಭಕ್ಷಕನಾದರೇ ಏನಾಗುತ್ತದೆ ಎಂಬುದಕ್ಕೆ ಮೂಡುಬಿದಿರೆಯ ಅಮಾನತುಗೊಂಡ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಪ್ರಕರಣವೇ ಸಾಕ್ಷಿ. ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಈ ‘ಕಾಮಪುರಾಣ’ದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಆರೋಪಿ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಶಿಕ್ಷಕಿಯೊಬ್ಬರ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಂದೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಕಿಡಿಹೊತ್ತಿಸಿದೆ.

“ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು ಅಧಿಕಾರದ ದುರುಪಯೋಗವಲ್ಲವೇ? ಇಂತಹ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗದೆ ಇನ್ನೇನು ದಾಖಲಾಗಲು ಸಾಧ್ಯ?” ಎಂದು ನ್ಯಾಯಪೀಠವು ಖಾರವಾಗಿ ಪ್ರಶ್ನಿಸಿದೆ.

ವಿಚಾರಣೆ ವೇಳೆ ಸಂದೇಶ್ ಪರ ವಕೀಲರು ವಾದ ಮಂಡಿಸಿ, “ಇದು ಇಬ್ಬರ ನಡುವಿನ ಒಪ್ಪಿತ ಸಂಬಂಧವಾಗಿತ್ತು, ಅತ್ಯಾಚಾರ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ” ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆದರೆ, ಈ ವಾದವನ್ನು ಒಪ್ಪದ ನ್ಯಾಯಾಲಯವು ಮಧ್ಯಂತರ ತಡೆ ನೀಡಲು ಸಾರಾಸಗಟಾಗಿ ನಿರಾಕರಿಸಿತು.

ಹೈಕೋರ್ಟ್ ಬಂಧನದ ವಿರುದ್ಧ ಯಾವುದೇ ಮಧ್ಯಂತರ ರಕ್ಷಣೆ ನೀಡದ ಕಾರಣ, ಸಿಐಡಿ ಪೊಲೀಸರು ಯಾವುದೇ ಕ್ಷಣದಲ್ಲಿ ಸಂದೇಶ್‌ರನ್ನು ಬಂಧಿಸುವ ಸಾಧ್ಯತೆಯಿದೆ. ಈಗಾಗಲೇ ಸಿಐಡಿ ಈ ಪ್ರಕರಣದ ಆಳವಾದ ತನಿಖೆ ನಡೆಸುತ್ತಿದ್ದು, ದಿನಕ್ಕೊಂದು ಹೊಸ ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಲಾಗಿದ್ದು, ಅಂದು ಇನ್ಸ್‌ಪೆಕ್ಟರ್ ಭವಿಷ್ಯ ನಿರ್ಧಾರವಾಗಲಿದೆ.

ರಕ್ಷಕನೇ ಭಕ್ಷಕನಾದ ಈ ಪ್ರಕರಣವು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದು, ಹೈಕೋರ್ಟ್‌ನ ಇಂದಿನ ನಿಲುವು ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗುವ ಭರವಸೆಯನ್ನು ಮೂಡಿಸಿದೆ.

Continue Reading

Belthangady

ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ: ಬೆಳ್ತಂಗಡಿಯಲ್ಲಿ ಸಿಐಡಿ ತನಿಖೆ ಆರಂಭ

Published

on

ಬೆಳ್ತಂಗಡಿ: ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಅತ್ಯಾಚಾರ ಹಾಗೂ ಸುಲಿಗೆ ಆರೋಪದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಚುರುಕುಗೊಳಿಸಿದೆ. ಇಂದು ಸಿಐಡಿ ಅಧಿಕಾರಿಗಳ ತಂಡ ಬೆಳ್ತಂಗಡಿಗೆ ಆಗಮಿಸಿ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸುವ ಮೂಲಕ ಅಧಿಕೃತವಾಗಿ ತನಿಖೆ ಆರಂಭಿಸಿದೆ.

ಪ್ರಕರಣದ ಹಿನ್ನೆಲೆ:
ಬೆಳ್ತಂಗಡಿ ತಾಲೂಕಿನ ಕಾಲೇಜೊಂದರ ಪ್ರಾಂಶುಪಾಲರೊಬ್ಬರು ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2020 ರಿಂದ 2023ರ ಅವಧಿಯಲ್ಲಿ ಜಮೀನು ವಿವಾದವೊಂದರ ವಿಚಾರಣೆಯ ನೆಪದಲ್ಲಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಕೇಸ್ ಮರುಚಾಲನೆ ಮಾಡುವ ಬೆದರಿಕೆ ಹಾಕಿ ಸುಮಾರು 16 ಲಕ್ಷ ರೂ. ನಗದು, 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮನೆ ನಿರ್ಮಾಣಕ್ಕಾಗಿ ತೇಗದ ಮರದ ದಿಮ್ಮಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.

ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸೂಚನೆಯಂತೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಈಗಾಗಲೇ ಸಂದೇಶ್ ಪಿ.ಜಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

ಮಾರ್ಚ್‌ 25ರಂದು ವೇಣೂರು ಪೊಲೀಸ್‌ ಠಾಣೆಯಿಂದ ಬೆಂಗಳೂರು ಸಿಐಡಿ ಕಚೇರಿಗೆ ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸಿದ್ದು, ಸಿಐಡಿ ಡಿವೈಎಸ್‌ಪಿ ನೇತೃತ್ವದ ತಂಡವು ಮಾರ್ಚ್‌ 31ರಂದು ಸಂಜೆ ನಾರಾವಿ ಐಬಿಗೆ ಆಗಮಿಸಿದೆ. ಇಂದು ವೇಣೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಸಿಐಡಿ ತಂಡವು ಸಂತ್ರಸ್ತೆಯ ಹೇಳಿಕೆ ಪಡೆಯುವುದು, ಸ್ಥಳಗಳ ಪರಿಶೀಲನೆ ಹಾಗೂ ಸಾಕ್ಷ್ಯಾಧಾರಗಳ ಸಂಗ್ರಹಣೆಯ ಮೇಲೆ ತನಿಖೆ ಕೈಗೆತ್ತಿಕೊಳ್ಳಲಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಸಂತ್ರಸ್ತರು ಇದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಿದೆ.

Continue Reading

Trending

Copyright © 2025 Deevatige