Connect with us

Bantawala

ಬಡವರ ಮರಣಶಾಸನವಾದ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ತೀರ್ಮಾನ: ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

Published

on

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ (MoU) ಮಾಡಿಕೊಳ್ಳುವ ಮೂಲಕ ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದ ಈ ನಡೆ ಬಡಜನರ ಪಾಲಿಗೆ ಮರಣಶಾಸನವಾಗಿದೆ ಎಂದು ಸಮಿತಿಯ ಬೆಳ್ತಂಗಡಿ ಸಂಚಾಲಕರಾದ ಶೇಖರ್ ಎಲ್. ಅವರು ಕಿಡಿಕಾರಿದ್ದಾರೆ.

ಆರೋಗ್ಯ ಇಲಾಖೆಯ ಇತ್ತೀಚಿನ ಆದೇಶದಂತೆ, ಬಂಟ್ವಾಳ ತಾಲ್ಲೂಕು ಆಸ್ಪತ್ರೆಯನ್ನು ಎ.ಜೆ ವೈದ್ಯಕೀಯ ಕಾಲೇಜಿನೊಂದಿಗೆ, ವಿಟ್ಲ ಆರೋಗ್ಯ ಕೇಂದ್ರವನ್ನು ಯನೋಪೋಯಾ ಸಂಸ್ಥೆಯೊಂದಿಗೆ ಹಾಗೂ ಬೆಳ್ತಂಗಡಿ ಮತ್ತು ಮೂಡಬಿದ್ರೆ ಕೇಂದ್ರಗಳನ್ನು ಆಳ್ವಾಸ್‌ ಹೆಲ್ತ್ ಸೆಂಟರ್‌ನೊಂದಿಗೆ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ.

ಬಡರೋಗಿಗಳ ಸುಲಿಗೆಗೆ ದಾರಿ:

ಜನಸಾಮಾನ್ಯರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದ ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿಗೆ ವರದಾನವಾಗಿದ್ದವು. ಆದರೆ ಈಗ ಏಕಾಏಕಿ ಖಾಸಗಿ ಸಂಸ್ಥೆಗಳೊಂದಿಗೆ ಕರಾರು ಮಾಡಿಕೊಳ್ಳುವ ಮೂಲಕ ಸರ್ಕಾರಿ ಆಸ್ಪತ್ರೆಗಳನ್ನು ಬಡಜನರ ಸುಲಿಗೆ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬಡರೋಗಿಗಳನ್ನು ಖಾಸಗಿ ಸಂಸ್ಥೆಗಳ ಪ್ರಯೋಗಶಾಲೆಯಲ್ಲಿ ಗುರಾಣಿಯಂತೆ ಬಳಸಿಕೊಳ್ಳಲು ಈ ಮೂಲಕ ಅವಕಾಶ ಮಾಡಿಕೊಡಲಾಗಿದೆ. ಇದು ಸರ್ಕಾರದ ಅವಿವೇಕತನದ ತೀರ್ಮಾನವಾಗಿದ್ದು, ಸಂವಿಧಾನಬದ್ಧವಾಗಿ ಉಚಿತ ಆರೋಗ್ಯ ಸೇವೆ ನೀಡಲು ತನಗೆ ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ ಎಂದು ಶೇಖರ್ ಎಲ್. ಟೀಕಿಸಿದ್ದಾರೆ.

ಖಾಸಗಿ ಸಂಸ್ಥೆಗಳ ಹಿತಾಸಕ್ತಿ ರಕ್ಷಣೆ:

ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರುಗೊಳಿಸಿ ಖಾಸಗಿ ಮೆಡಿಕಲ್ ಕಾಲೇಜ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಈಗ ಅವರನ್ನು ಸಂತೋಷಪಡಿಸಲು ಜಿಲ್ಲೆಯ ಬಡಜನರನ್ನು ಬಲಿಕೊಡುತ್ತಿದೆ. ಸರ್ಕಾರಿ ಆಸ್ಪತ್ರೆಗಳನ್ನೇ ಖಾಸಗಿಯವರಿಗೆ ಮಾರಲು ಹೊರಟಿರುವ ಈ ಕ್ರಮವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಮಿತಿ ಎಚ್ಚರಿಸಿದೆ.

ಹೋರಾಟದ ಎಚ್ಚರಿಕೆ:

ಯಾವುದೇ ಕಾರಣಕ್ಕೂ ಬಡವರ ಜೀವನದಲ್ಲಿ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಸರ್ಕಾರ ಈ ಒಪ್ಪಂದದಿಂದ ತಕ್ಷಣ ಹಿಂದೆ ಸರಿಯದಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಸಚಿವರು ಜಿಲ್ಲೆಯಲ್ಲಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಘೇರಾವ್ ಹಾಕಲಾಗುವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ್ ಎಲ್. ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸರಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಮುನೀರ್ ಕಾಟಿಪಳ್ಳ ತೀವ್ರ ವಿರೋಧ
ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಒಪ್ಪಿಸುವ ಸರಕಾರದ ತೀರ್ಮಾನವನ್ನು ‘ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ಯ ಸಂಚಾಲಕ ಮುನೀರ್ ಕಾಟಿಪಳ್ಳ ಕಟುವಾಗಿ ಟೀಕಿಸಿದ್ದಾರೆ.
ಬೆಳ್ತಂಗಡಿ, ಮೂಡಬಿದ್ರೆ, ವಿಟ್ಲ ಹಾಗೂ ಬಂಟ್ವಾಳ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಆದೇಶವು ಜಿಲ್ಲೆಯ ಮಟ್ಟಿಗೆ ಒಂದು ‘ಕರಾಳ ಆದೇಶ’ವಾಗಿದೆ. ಈಗಾಗಲೆ ವೆನ್ಲಾಕ್ ಜಿಲ್ಲಾಸ್ಪತ್ರೆ ಮಣಿಪಾಲ್ ಗುಂಪಿಗೂ, ಉಳ್ಳಾಲ ಸಮುದಾಯ ಆಸ್ಪತ್ರೆ ಯೆನಪೋಯ ಗುಂಪಿಗೂ ಹಸ್ತಾಂತರಗೊಂಡಿದೆ. ರಾಜ್ಶ ಸರಕಾರದ ಈ ತೀರ್ಮಾನ ಖಾಸಗಿ ಆಸ್ಪತ್ರೆಗಳ ಸುಲಿಗೆ ನೀತಿಯಿಂದ ಕಂಗೆಟ್ಟಿರುವ ಜನಸಾಮಾನ್ಯರ ಸಂಕಟಗಳನ್ನು ಮತ್ತಷ್ಟು ತೀವ್ರಗೊಳಿಸಿದೆ. ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ತೆರಳುವವರು ಇನ್ನು ಮುಂದೆ ಗುಣಮಟ್ಟದ ಚಿಕಿತ್ಸೆ ನಿರೀಕ್ಷಿಸುವಂತಿಲ್ಲ
ಜನಸಾಮಾನ್ಯರ ಆರೋಗ್ಯ ಈಗ ಪೂರ್ಣಪ್ರಮಾಣದಲ್ಲಿ ವ್ಯಾಪಾರದ ಸರಕಾಗುತ್ತಿದೆ. ಸರಕಾರಿ ಆಸ್ಪತ್ರೆಗೆ ಬರುವ ಬಡವರು ಕೇವಲ ಖಾಸಗಿ ಮೆಡಿಕಲ್ ವಿದ್ಯಾರ್ಥಿಗಳ ‘ಕಲಿಕಾ ಸಾಧನ’ವಾಗುವ ಭೀತಿ ಎದುರಾಗಿದೆ. ಆಡಳಿತಾರೂಢ ಸರಕಾರದ ಈ ಜನವಿರೋಧಿ ನೀತಿಯ ವಿರುದ್ಧ ವಿರೋಧ ಪಕ್ಷದ ಶಾಸಕರೂ ಸೊಲ್ಲೆತ್ತುತ್ತಿಲ್ಲ. ಇವರೆಲ್ಲರೂ ಖಾಸಗಿ ಮೆಡಿಕಲ್ ಲಾಬಿಯ ಪರವಾಗಿದ್ದಾರೆ. ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ನಾಶಪಡಿಸುವ ಈ ನಿರ್ಧಾರವನ್ನು ಸರಕಾರ ತಕ್ಷಣ ಹಿಂಪಡೆಯಬೇಕು. ಈ ಕುರಿತು ಜಿಲ್ಲೆಯಾದ್ಯಂತ ಬೃಹತ್ ಜನಹೋರಾಟ ಸಂಘಟಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ

,

Continue Reading
Advertisement

Article

ಹಿರಿಯ ಪತ್ರಕರ್ತ ಗೋಪಾಲ್ ಅಂಚನ್ ಎತ್ತಿದ ತೀಕ್ಷ್ಣ ಪ್ರಶ್ನೆಗಳು ? ಬಂಟ್ವಾಳ ಸಾಹಿತ್ಯ ಸಮ್ಮೇಳನ ಮತ್ತು ಪತ್ರಿಕೋದ್ಯಮದ ಆತ್ಮಾವಲೋಕನ!

Published

on

ಬಂಟ್ವಾಳ: ಇತ್ತೀಚೆಗೆ ನಡೆದ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಪತ್ರಕರ್ತರ ಕಡೆಗಣನೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಹಿರಿಯ ಪತ್ರಕರ್ತ ಹಾಗೂ ‘ಜಾಗೃತ ಸಮಾಜ’ದ ಸಂಪಾದಕ ಗೋಪಾಲ್ ಅಂಚನ್ ಅವರು ಪತ್ರಿಕಾ ರಂಗದ ನೈಜ ಸ್ಥಿತಿಯ ಬಗ್ಗೆ ಕನ್ನಡಿ ಹಿಡಿಯುವಂತಹ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಪತ್ರಿಕೋದ್ಯಮದ ಮೌಲ್ಯಗಳ ಕುರಿತಾದ ಅವರ ಈ ವಿಚಾರಧಾರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಬಂಟ್ವಾಳದ ಪತ್ರಕರ್ತರನ್ನು ಕಡೆಗಣಿಸಿದವರು ಯಾರು ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ ಇವರ ಬರಹ, ಪತ್ರಿಕೋದ್ಯಮದ ಇಂದಿನ ನಡೆಯನ್ನು ಗಂಭೀರವಾಗಿ ಪ್ರಶ್ನಿಸಿದೆ. ಹಿಂದೆ ನಡೆದ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಕ್ರಮಗಳಿಗೆ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಎಷ್ಟು ಮಂದಿ ಪತ್ರಕರ್ತರು ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದ್ದಾರೆ? ಕೇವಲ ವೇದಿಕೆಗಳಲ್ಲಿ ಗೌರವ ಸಿಗದಿದ್ದಾಗ ಮಾತ್ರ ಧ್ವನಿ ಎತ್ತುವುದು ಸರಿಯೇ ಎನ್ನುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಂಟ್ವಾಳದ ಇಂದಿನ ಪರಿಸ್ಥಿತಿಯಲ್ಲಿ ಸಮಾಜದ ಹಿತವನ್ನು ಬಯಸುವ “ನೈಜ ಮಾನವ ಪತ್ರಕರ್ತರು” ಎಷ್ಟು ಜನರಿದ್ದಾರೆ ಎನ್ನುವ ತೀಕ್ಷ್ಣ ಪ್ರಶ್ನೆಯನ್ನು ಅವರು ಸಮಾಜದ ಮುಂದಿಟ್ಟಿದ್ದಾರೆ. ಪತ್ರಿಕೋದ್ಯಮ ಎನ್ನುವುದು ಕೇವಲ ಸುದ್ದಿಗಾಗಿ ಅಲ್ಲ, ಅದು ಸಮಾಜದ ಹಿತಕ್ಕಾಗಿ ಇರಬೇಕು. ಸಾರ್ವಜನಿಕ ಹಿತಾಸಕ್ತಿಯ ಕಾರ್ಯಕ್ರಮಗಳಿಗೆ ಸ್ಪಂದಿಸದವರು ಈಗ ಗೌರವಕ್ಕಾಗಿ ಹಪಹಪಿಸುವುದು ಎಷ್ಟು ಸರಿ ಎನ್ನುವುದು ಈ ಲೇಖನದ ಪ್ರಮುಖ ಆಶಯವಾಗಿದೆ.

ಈ ಬರಹವು ಪತ್ರಕರ್ತರ ವಲಯದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದ್ದು, ಪತ್ರಿಕಾ ರಂಗವು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸಾರಿ ಹೇಳುತ್ತಿದೆ.

ಕೃಪೆ: ಗೋಪಾಲ್ ಅಂಚನ್ (ಸಂಪಾದಕರು, ಜಾಗೃತ ಸಮಾಜ ನ್ಯೂಸ್ ಕರ್ನಾಟಕ)

ಬಂಟ್ವಾಳದಲ್ಲಿ “ನೈಜ ಮಾನವ ಪತ್ರಕರ್ತರು” ಎಷ್ಠಿದ್ದಾರೆ?.
✍🏻ಗೋಪಾಲ ಅಂಚನ್
ಸಂಪಾದಕ,ಜಾಗೃತಸಮಾಜ ನ್ಯೂಸ್ ಕರ್ನಾಟಕ

Continue Reading

Bantawala

ಕಟ್ಟತ್ತಿಲ: ಮಠ-ಮಸೀದಿ ಸಂಪರ್ಕಿಸುವ ‘ಸೌಹಾರ್ದ ಪಥ’ ಲೋಕಾರ್ಪಣೆ

Published

on

ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕಟ್ಟತ್ತಿಲ ಎಂಬ ಪುಣ್ಯಭೂಮಿ ಇಂದು ಕೇವಲ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಮಾತ್ರವಲ್ಲದೆ, ಕೋಮು ಸೌಹಾರ್ದತೆಯ ಭವ್ಯ ಪ್ರತೀಕವಾಗಿಯೂ ಇಡೀ ಜಿಲ್ಲೆಗೆ ಮಾದರಿಯಾಗಿ ನಿಂತಿದೆ. ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ದರ್ಗಾ ಮತ್ತು ಕಟ್ಟತ್ತಿಲ ಮಠವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯು ಇಂದು ನವವಧುವಿನಂತೆ ಸಿಂಗಾರಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಭಾವನಾತ್ಮಕ ಬೆಸುಗೆಯಾಗಿರುವ ಕಟ್ಟತ್ತಿಲ ಮಠ ಮತ್ತು ದರ್ಗಾಕ್ಕೆ ಹೋಗುವ ಹಾದಿ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹೋಗಿತ್ತು. ರಸ್ತೆಯಿಲ್ಲದೆ ಭಕ್ತಾದಿಗಳು ಹಾಗೂ ಸ್ಥಳೀಯ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದರು. ಧಾರ್ಮಿಕ ಕೇಂದ್ರಗಳಿಗೆ ಸರಿಯಾದ ರಾಜಮಾರ್ಗವೇ ಇಲ್ಲದ ಸಮಯದಲ್ಲಿ, ಸ್ಥಳೀಯ ಖಾಸಗಿ ಜಮೀನಿನ ಮಾಲೀಕರನ್ನು ಮನವೊಲಿಸಿ, ಎರಡು ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಕಾಪಾಡಿಕೊಂಡು ಕಚ್ಚಾ ರಸ್ತೆ ನಿರ್ಮಾಣ ಮಾಡಲು ಈ ಹಿಂದೆ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಮುಂಚೂಣಿಯಲ್ಲಿ ನಿಂತು ಪ್ರಮುಖ ಪಾತ್ರ ವಹಿಸಿದ್ದರು. ಆ ಕಾಲದಲ್ಲಿ ಹಲವಾರು ನೂತನ ಕಚ್ಚಾ ರಸ್ತೆ ನಿರ್ಮಾಣ ಮಾಡುವಲ್ಲಿ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಬದ್ಧತೆ ಇಂದಿಗೂ ಜನಮನದಲ್ಲಿ ಹಚ್ಚಹಸಿರಾಗಿ ಉಳಿದಿದೆ. ಅದರಲ್ಲಿ ಕಟ್ಟತ್ತಿಲ ಮಸೀದಿ-ಮಠ ಸಂಪರ್ಕ ರಸ್ತೆಯೂ ಒಂದಾಗಿದೆ.

ಆನಂತರ ಜಿ.ಪಂ. ಸದಸ್ಯರಾಗಿದ್ದ ಎಂ.ಎಸ್. ಮಹಮ್ಮದ್ ಅವರು ಈ ರಸ್ತೆಯ ಅಭಿವೃದ್ಧಿಗೆ ಡಾಮರೀಕರಣ ಅನುದಾನ ಒದಗಿಸಿ ಎರಡನೇ ಹಂತದ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಇದಕ್ಕೆ ಮುಂದುವರಿದಂತೆ, ಸುಭಾಶ್ಚಂದ್ರ ಶೆಟ್ಟಿಯವರ ಅವಧಿಯಲ್ಲಿ ಉಳಿದ ಭಾಗಕ್ಕೆ ಕಾಂಕ್ರೀಟಿಕರಣ ಕಾರ್ಯ ಕೈಗೊಳ್ಳಲಾಗಿದ್ದು, ನಂತರ ನಿಕಟಪೂರ್ವ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು ಅವರ ಅವಧಿಯಲ್ಲಿ ಈ ಭಾಗದ ರಸ್ತೆ ಅಭಿವೃದ್ಧಿ ಇನ್ನಷ್ಟು ಬಲಗೊಂಡಿತು.

ಇದೀಗ, ರಸ್ತೆ ಉದ್ದವಾದ ಸಂಪರ್ಕ ಮಾರ್ಗವಾಗಿರುವ ಹಿನ್ನೆಲೆಯಲ್ಲಿ, ನಾಗರಿಕರ ಬೇಡಿಕೆಗೆ ಓಗೊಟ್ಟು ಸಾಲೆತ್ತೂರು ಗ್ರಾ.ಪಂಚಾಯತ್ ಮಾಜಿ ಅಧ್ಯಕ್ಷರಾದ ಹಸೈನಾರ್ ಡಿ.ಕೆ. ಹಾಗೂ ಕೊಳ್ನಾಡು ಅಧ್ಯಕ್ಷರಾಗಿದ್ದ ಅಶ್ರಪ್ ಸಾಲೆತ್ತೂರು ಅವರು ವಿಶೇಷ ಮನವಿ ಸಲ್ಲಿಸಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಶ್ರೀ ಸುಭಾಶ್ಚಂದ್ರ ಶೆಟ್ಟಿಯವರು, ವಿಧಾನಪರಿಷತ್ ಶಾಸಕರಾದ ಡಾ. ಮಂಜುನಾಥ ಭಂಡಾರಿಯವರ ಗಮನಕ್ಕೆ ತಂದು ಅವರ ವಿಶೇಷ ಅನುದಾನದಲ್ಲಿ ರಸ್ತೆಯ ಸಂಪೂರ್ಣ ಡಾಮರೀಕರಣ ಕಾರ್ಯವನ್ನು ನೆರವೇರಿಸಿದ್ದಾರೆ.

ಕೇವಲ ರಸ್ತೆ ಮಾತ್ರವಲ್ಲದೆ, ಹೈಮಾಸ್ಕ್ ದೀಪಗಳ ಅಳವಡಿಕೆಯಿಂದಾಗಿ ಇಂದು ರಾತ್ರಿ ವೇಳೆಯೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಈ ಹಿಂದೆ ಮಸೀದಿ ಬಳಿ ಮಾಜಿ ಸಚಿವರಾದ ಬಿ. ರಮನಾಥ ರೈ ಅವರ ಅವಧಿಯಲ್ಲಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಕೂಡ ಇದೇ ಸಂದರ್ಭದಲ್ಲಿ ದುರಸ್ತಿ ಮಾಡಲಾಗಿದ್ದು, ಸಾರ್ವಜನಿಕ ಬಳಕೆಗೆ ಮತ್ತಷ್ಟು ವೇಗ ನೀಡಿದೆ. ಈ ಅಭಿವೃದ್ಧಿ ಕಾರ್ಯಗಳು ವಿಶೇಷವಾಗಿ ಕಟ್ಟತ್ತಿಲ ಊರೂಸು ಸಮಾರಂಭದ ಸುಸಂದರ್ಭದಲ್ಲೇ ಪೂರ್ಣಗೊಂಡಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಿನಲ್ಲಿ, ಕಟ್ಟತ್ತಿಲ ದರ್ಗಾ–ಮಠ ಸಂಪರ್ಕ ರಸ್ತೆ ಇಂದು ಸೌಹಾರ್ದದ ಹಾದಿಯಾಗಿ ಹೊರಹೊಮ್ಮಿದೆ. ರಾಜಕೀಯ ಮತ್ತು ಜಾತಿ ಭೇದ ಮರೆತು ಈ ರಸ್ತೆಯ ಅಭಿವೃದ್ಧಿಯ ಹಿಂದೆ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರ ಸೇವೆಯನ್ನು ಸ್ಥಳೀಯರು ಹಾಗೂ ಮಸೀದಿ-ಮಂದಿರದ ಆಡಳಿತ ಮಂಡಳಿಯವರು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ. ಇದು ಜಿಲ್ಲೆಯ ಸೌಹಾರ್ದ ಪರಂಪರೆಗೆ ಮತ್ತೊಂದು ಗರಿ ಎಂದರೆ ತಪ್ಪಾಗಲಾರದು.

Continue Reading

Bantawala

ವಿಟ್ಲ: ಸಿಡಿಪಿಒ ಕಚೇರಿಯಲ್ಲಿ ದಾಂಧಲೆ; ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಪೀಠೋಪಕರಣ ಧ್ವಂಸ

Published

on

ವಿಟ್ಲ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) ಕಚೇರಿಯಲ್ಲಿ ದಂಪತಿಗಳ ನಡುವಿನ ಮನಸ್ತಾಪದ ಕುರಿತು ಆಪ್ತ ಸಮಾಲೋಚನೆ (COUNSELING) ನಡೆಯುತ್ತಿದ್ದ ವೇಳೆ, ಪತಿಯ ಕಡೆಯವರು ಏಕಾಏಕಿ ದಾಂಧಲೆ ನಡೆಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ಬುಧವಾರ ವಿಟ್ಲದ ಬಸವನಗುಡಿ ರಸ್ತೆಯಲ್ಲಿ ಸಂಭವಿಸಿದೆ.

ಘಟನೆಯ ವಿವರ: ವಿಟ್ಲದ ಬಸವನಗುಡಿ ರಸ್ತೆಯಲ್ಲಿರುವ ಕುಲಾಲ ಭವನದಲ್ಲಿ ಕಾರ್ಯಾಚರಿಸುತ್ತಿರುವ ಸಿಡಿಪಿಒ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ. ಇರಾ ಮೂಲದ ಪತ್ನಿ ಹಾಗೂ ಉಳ್ಳಾಲ ಮೂಲದ ಪತಿಯ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಪತ್ನಿಯ ಕಡೆಯವರು ನೀಡಿದ ದೂರಿನ ಮೇರೆಗೆ ಇಲಾಖೆಯು ಎರಡೂ ತಂಡಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಬುಧವಾರ ಮಧ್ಯಾಹ್ನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಆಪ್ತ ಸಮಾಲೋಚನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇತ್ತಂಡಗಳ ನಡುವೆ ವಾದ-ಪ್ರತಿವಾದ ತಾರಕಕ್ಕೇರಿದೆ. ಈ ವೇಳೆ ರೊಚ್ಚಿಗೆದ್ದ ಪತಿಯ ಕಡೆಯವರು ಪತ್ನಿಯ ಕಡೆಯವರ ಮೇಲೆ ನೂಕಾಟ-ತಳ್ಳಾಟ ನಡೆಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕಚೇರಿ ಆಸ್ತಿ ಪಾಸ್ತಿ ಧ್ವಂಸ: ಗಲಾಟೆ ನಿಯಂತ್ರಿಸಲು ಕಚೇರಿಯ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಯತ್ನಿಸಿದರಾದರೂ, ಉದ್ರಿಕ್ತ ಗುಂಪು ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಬಡಿದು ಧ್ವಂಸಗೊಳಿಸಿದೆ. ಇಷ್ಟಕ್ಕೇ ಸುಮ್ಮನಾಗದ ಗುಂಪು, ಕೌನ್ಸಿಲಿಂಗ್ ಕೇಂದ್ರದಿಂದ ಹೊರಗೆ ಬಂದು ಕೇಕೆ ಹಾಕುತ್ತಾ ಆರ್ಭಟಿಸಿದೆ. ಅಲ್ಲದೆ, ಕಚೇರಿಯ ಶಟರ್ ಎಳೆದು ಬೆದರಿಕೆ ಹಾಕಿದ್ದರಿಂದ ಕಚೇರಿ ಸಿಬ್ಬಂದಿಗಳು ತೀವ್ರ ಭಯಭೀತರಾಗಿ ಬೊಬ್ಬೆ ಹೊಡೆದಿದ್ದಾರೆ.

“ಪತಿ-ಪತ್ನಿಯರ ನಡುವಿನ ಸಣ್ಣ ವಿಚಾರದ ಮನಸ್ತಾಪವನ್ನು ಆಪ್ತ ಸಮಾಲೋಚನೆಯ ಮೂಲಕ ಬಗೆಹರಿಸಬಹುದಾಗಿತ್ತು. ಆದರೆ, ಕೌನ್ಸಿಲಿಂಗ್‌ಗೆ ಎರಡೂ ಕಡೆಯಿಂದ ಸಂಬಂಧವಿಲ್ಲದ ಅನಗತ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದೇ ಈ ಗಲಾಟೆಗೆ ಮುಖ್ಯ ಕಾರಣ” ಎಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ

ಸರ್ಕಾರಿ ಕಚೇರಿಯೊಳಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಈ ಘಟನೆ ವಿಟ್ಲ ಪರಿಸರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.


Continue Reading

Trending

Copyright © 2025 Deevatige