F.I.R.
ಎಮ್ಮೆಮಾಡು: ಮದುವೆ ಸಮಾರಂಭದಲ್ಲಿ ದೈವಕ್ಕೆ ಅವಮಾನ ಆರೋಪ; ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲು
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡುವಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪೂಜನೀಯ ದೈವವನ್ನು ಅಪಹಾಸ್ಯ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಮ್ಮೆಮಾಡು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ, ಮದುಮಗನಿಗೆ ತುಳುನಾಡಿನ ದೈವ **’ಕೊರಗಜ್ಜ’**ನ ವೇಷವನ್ನು ಹೋಲುವಂತೆ ಉಡುಪು ಧರಿಸಿ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಜೊತೆಯಲ್ಲಿದ್ದ ಇತರ ಯುವಕರು ದೈವದ ಆಚರಣೆಯನ್ನು ವಿಕೃತವಾಗಿ ಅನುಕರಿಸುತ್ತಾ, ತಮ್ಮದೇ ಭಾಷೆಯಲ್ಲಿ ‘ತೆಯ್ಯ’ ಎಂದು ಕೂಗುತ್ತಾ ಅಪಹಾಸ್ಯ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್:
ಮಾರ್ಚ್ 30, 2026 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹಿಂದೂ ಧರ್ಮದ ದೈವ ನಿಂದನೆ ಹಾಗೂ ಧಾರ್ಮಿಕ ನಂಬಿಕೆಯ ಅಪಹಾಸ್ಯ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಬೆಳಕಿಗೆ ಬಂದಿದ್ದು, ವಿಡಿಯೋದಲ್ಲಿ ಹಿಂದೂ ಧರ್ಮದ ಪವಿತ್ರ ನಂಬಿಕೆಗಳನ್ನು ಮತ್ತು ಪೂರ್ವಜರ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ದೂರು ಮತ್ತು ಕ್ರಮ:
ಈ ಘಟನೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ನಾಪೋಕ್ಲುವಿನ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಡಿವೈಎಸ್ಪಿ (DYSP) ಸೂರಜ್ ಹಾಗೂ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರಿಗೆ ಅಧಿಕೃತ ದೂರು ನೀಡಲಾಗಿತ್ತು.ದೂರಿನ ಆಧಾರದ ಮೇಲೆ ಎಮ್ಮೆಮಾಡು ಗ್ರಾಮದ ಅಬ್ದುಲ್ ರಾಶಿದ್ ( ಮದುಮಗ) ಹನೀಫ್ ಸಿಎಮ್, ಲತೀಫ್ ಸಿಮ್, ಮೊಹಮ್ಮದ್ ಫೈಜಲ್, ಶಕೀರ್ ಮತ್ತು ಬಶೀರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2(BNS), 2023ರ ಕಲಂ 191(1) ಅಡಿಯಲ್ಲಿ ಎಫ್ಐಆರ್ (FIR) ದಾಖಲಾಗಿದ್ದು, ನಾಪೋಕ್ಲು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
accident
ಬೆಳ್ತಂಗಡಿ: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಬಾಗಿಲು ತೆರೆದು ರಸ್ತೆಗೆ ಬಿದ್ದ ಸಹೋದರಿಯರು; ಚಾಲಕ, ನಿರ್ವಾಹಕನ ವಿರುದ್ಧ ಕೇಸ್ ದಾಖಲು
ಬೆಳ್ತಂಗಡಿ: ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಬಾಗಿಲು ಆಕಸ್ಮಿಕವಾಗಿ ತೆರೆದ ಪರಿಣಾಮ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಸಹೋದರಿಯರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಮಾರ್ಚ್ 31ರಂದು ಬೆಳಗ್ಗೆ ಕಳಿಯ ಗ್ರಾಮದ ನಿವಾಸಿಗಳಾದ ಚರಿಷ್ಮಾ (17) ಮತ್ತು ಚದ್ಮಕಾ (15) ಎಂಬ ಸಹೋದರಿಯರು ಎಂದಿನಂತೆ ಕಾಲೇಜಿಗೆ ಹೋಗಲು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಕಳಿಯದಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿತ್ತು. ಗೇರುಕಟ್ಟೆ ಸಮೀಪ ತಲುಪುತ್ತಿದ್ದಂತೆ ಬಸ್ಸಿನ ಬಾಗಿಲು ದಿಢೀರನೆ ತೆರೆದುಕೊಂಡಿದ್ದು, ಬಾಗಿಲ ಬಳಿಯಿದ್ದ ಇಬ್ಬರೂ ವಿದ್ಯಾರ್ಥಿನಿಯರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ.
ರಸ್ತೆಗೆ ಬಿದ್ದ ಪರಿಣಾಮ ಇಬ್ಬರೂ ಸಹೋದರಿಯರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಜಾಗರೂಕತೆಯ ಆರೋಪ: ಬಸ್ ಚಾಲಕ ದಯಾನಂದ ಅವರು ವಾಹನವನ್ನು ಅತ್ಯಂತ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದರು ಮತ್ತು ನಿರ್ವಾಹಕ ಕಾಶಿನಾಥ್ ಅವರು ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಾಯಗೊಂಡ ವಿದ್ಯಾರ್ಥಿನಿ ಚರಿಷ್ಮಾ ದೂರಿನಲ್ಲಿ ತಿಳಿಸಿದ್ದಾರೆ. ಕರ್ತವ್ಯ ಲೋಪವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿಯ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೆಕ್ಷನ್ 281: ಅಜಾಗರೂಕ ಚಾಲನೆ. ಸೆಕ್ಷನ್ 125: ಜೀವಕ್ಕೆ ಅಪಾಯ ತರುವಂತಹ ನಿರ್ಲಕ್ಷ್ಯದ ಕೃತ್ಯ.ಸೆಕ್ಷನ್ 125(a): ನಿರ್ಲಕ್ಷ್ಯದಿಂದ ಗಾಯ ಉಂಟುಮಾಡುವುದು.ಸೆಕ್ಷನ್ಗಳ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ:
ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆಯ ಕೊರತೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
DEATH
ಪತ್ನಿಯ ಕಿರುಕುಳಕ್ಕೆ ಮಗ ಬಲಿ: ಸುದೀಪ್ ರೈ ತಂದೆ ದಾಮೋದರ ರೈ ಗಂಭೀರ ಆರೋಪ
ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ನಿವಾಸಿ ಸುದೀಪ್ ರೈ ಅವರ ಸಾವಿಗೆ ಅವರ ಪತ್ನಿಯೇ ಕಾರಣ ಎಂದು ಸುದೀಪ್ ಅವರ ತಂದೆ ದಾಮೋದರ ರೈ ನೆಲ್ಯಾಡಿ ಗಂಭೀರವಾಗಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಬಂಗ್ಲೆಗುಡ್ಡೆಯ ಸೌಮ್ಯಾ ಶೆಟ್ಟಿ ಎಂಬಾಕೆ ನೀಡಿದ ಮಾನಸಿಕ ಕಿರುಕುಳವೇ ತನ್ನ ಮಗನ ಸಾವಿಗೆ ನೇರ ಕಾರಣವಾಗಿದ್ದು, ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಫೇಸ್ಬುಕ್ ಪರಿಚಯ, ರಿಜಿಸ್ಟರ್ ಮದುವೆ:
ದಾಮೋದರ ರೈ ಅವರು ಘಟನೆಯ ಹಿನ್ನೆಲೆಯನ್ನು ವಿವರಿಸುತ್ತಾ, “ನನ್ನ ಮಗ ಸುದೀಪ್ ರಿಯಲ್ ಎಸ್ಟೇಟ್ ಮತ್ತು ಸೋಲಾರ್ ಪ್ಯಾನಲ್ ಅಳವಡಿಸುವ ಕೆಲಸ ಮಾಡುತ್ತಿದ್ದ. ಆತನಿಗೆ ಸೌಮ್ಯಾ ಶೆಟ್ಟಿ ಎಂಬಾಕೆಯ ಪರಿಚಯ ಫೇಸ್ಬುಕ್ ಮೂಲಕವಾಗಿತ್ತು. ಮದುವೆ ಪ್ರಸ್ತಾಪ ಬಂದಾಗ ನಾವು ಅವರ ಮನೆಗೆ ಹೋಗಿದ್ದೆವು ಮತ್ತು ಅವರು ನಮ್ಮ ಮನೆಗೆ ಬಂದಿದ್ದರು. ಫೆಬ್ರವರಿ 16ರಂದು ನಾವು ಅವರ ಮನೆಗೆ ಭೇಟಿ ನೀಡಿ ಬಂದ ಬಳಿಕ, ‘ಸದ್ಯಕ್ಕೆ ಮದುವೆ ಅರ್ಜೆಂಟ್ ಬೇಡ, ಯೋಚಿಸಿ ನಿರ್ಧಾರ ಮಾಡೋಣ’ ಎಂದು ಹೇಳಿದ್ದೆವು. ಆದರೆ ನಮಗೆ ತಿಳಿಯದಂತೆ ಮರುದಿನವೇ ಅಂದರೆ ಫೆಬ್ರವರಿ 17ರಂದು ಅವರಿಬ್ಬರು ಪುತ್ತೂರಿನ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ ಎಂಬ ವಿಷಯ ಈಗ ತಿಳಿದುಬಂದಿದೆ,” ಎಂದು ತಿಳಿಸಿದರು.

ಸಾರ್ವಜನಿಕವಾಗಿ ಅವಮಾನ ಮತ್ತು ಕಿರುಕುಳ:
ಮದುವೆಯ ನಂತರ ಸುದೀಪ್ ಉಜಿರೆಯಲ್ಲಿರುವ ಮಾವನ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಮಾರ್ಚ್ 16ರಂದು ನೆಲ್ಯಾಡಿಗೆ ಬಂದಿದ್ದ ಸೌಮ್ಯಾ, ಸುದೀಪ್ ಮತ್ತು ಅವರ ಪೋಷಕರ ಎದುರೇ ರಂಪಾಟ ಮಾಡಿದ್ದಾಳೆ. “ಫೋನ್ ತೆಗೆದಿಲ್ಲ ಎಂಬ ಕಾರಣಕ್ಕೆ ನೆಲ್ಯಾಡಿ ಪೇಟೆಯಲ್ಲಿ ಎಲ್ಲರ ಎದುರೇ ಅಸಭ್ಯವಾಗಿ ಬೈದು ನಮಗೆ ತೀವ್ರ ಅವಮಾನ ಮಾಡಿದ್ದಾಳೆ. ಆನಂತರ ಸುದೀಪ್ ಆಕೆಯ ಜೊತೆಗೇ ಹೋಗಿದ್ದ,” ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ.

ಸಾವಿನ ಬಗ್ಗೆ ಅನುಮಾನ:
ಸೌಮ್ಯಾ ಜೊತೆಗೆ ಹೋದ ಎರಡು ದಿನಗಳಲ್ಲೇ ಸುದೀಪ್ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ಕಾರ್ಕಳದ ನಿಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಇದು ಡೆಂಗ್ಯೂ ಜ್ವರ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಾವಿನ ಹಿಂದೆ ಪತ್ನಿಯ ಕಿರುಕುಳ ಮತ್ತು ಸಂಚಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ನೆಲ್ಯಾಡಿಯ ಸುದೀಪ್ ರೈ ಸಾವಿನ ಪ್ರಕರಣವು ಈಗ ಹನಿಟ್ರಾಪ್ ಮತ್ತು ಸರಣಿ ಮದುವೆ ವಂಚನೆಯ ಆಯಾಮವನ್ನು ಪಡೆದುಕೊಂಡಿದೆ. ಆರೋಪಿ ಸೌಮ್ಯಾ ಶೆಟ್ಟಿ ಕೇವಲ ಸುದೀಪ್ಗೆ ಮಾತ್ರವಲ್ಲದೆ, ಈ ಹಿಂದೆ ಹಲವು ಪುರುಷರಿಗೆ ಮದುವೆಯ ಆಮಿಷವೊಡ್ಡಿ ವಂಚಿಸಿರುವ ಗಂಭೀರ ವಿಚಾರಗಳು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿವೆ.
ಹನಿಟ್ರಾಪ್ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆಯೇ?
ಸುದೀಪ್ ಅವರ ಪೋಷಕರು ಸೌಮ್ಯಾ ಶೆಟ್ಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, “ಆಕೆ ನಾಟಕ ತಂಡದಲ್ಲಿ ಕಲಾವಿದೆಯಾಗಿದ್ದು, ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಾಳೆ. ಹಣಕ್ಕಾಗಿ ಮದುವೆಯಾಗುವ ಭರವಸೆ ನೀಡಿ ಹಲವರನ್ನು ನಂಬಿಸಿ ಮೋಸ ಮಾಡಿದ್ದಾಳೆ. ಈಕೆಯ ಹಿಂದೆ ಹನಿಟ್ರಾಪ್ ಗ್ಯಾಂಗ್ ಇರುವ ಶಂಕೆ ಇದೆ,” ಎಂದು ಕಣ್ಣೀರು ಹಾಕಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಮತ್ತೊಬ್ಬ ಸಂತ್ರಸ್ತ ಕಲಾವಿದನ ಅಳಲು:
ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಾಟಕ ಕಲಾವಿದ ಮೂಲ್ಕಿಯ ವೇಣುಗೋಪಾಲ ಶೆಟ್ಟಿ ಅವರು ಸೌಮ್ಯಾ ಶೆಟ್ಟಿಯಿಂದ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. “ಆಕೆ ನನ್ನನ್ನೂ ಮದುವೆಯಾಗುತ್ತೇನೆಂದು ಹೇಳಿ ವಿಚಿತ್ರವಾಗಿ ಹಿಂಸೆ ಕೊಟ್ಟಿದ್ದಾಳೆ. ಮದುವೆ ಫಿಕ್ಸ್ ಆಗಿದ್ದನ್ನು ನಾನು ಸ್ಟೇಟಸ್ ಹಾಕಿದಾಗ ಹಲವರು ಫೋನ್ ಮಾಡಿ ಆಕೆ ಸರಿಯಿಲ್ಲ ಎಂದು ಎಚ್ಚರಿಸಿದ್ದರು. ಸ್ವತಃ ಆಕೆಯ ಮನೆಯವರೇ ಆಕೆಯನ್ನು ಹೊರಗೆ ಹಾಕಿದ್ದರು,” ಎಂದು ತಿಳಿಸಿದರು.
ವೇಣುಗೋಪಾಲ ಶೆಟ್ಟಿ ಅವರು ಹೇಳುವಂತೆ, ಸೌಮ್ಯಾ ಈ ಹಿಂದೆ ಕನಿಷ್ಠ ಇಬ್ಬರನ್ನು ಮದುವೆಯಾಗಿ ವಂಚಿಸಿದ್ದಾಳೆ. “2024ರ ಡಿಸೆಂಬರ್ ಬಳಿಕ ಆಕೆಯ ಚರಿತ್ರೆ ತಿಳಿದು ನಾನು ಮದುವೆ ಪ್ರಸ್ತಾಪ ಕೈಬಿಟ್ಟಿದ್ದೆ. ಕೊನೆಗೆ ಆಕೆ ನನ್ನ ವಿರುದ್ಧವೇ ಪೊಲೀಸ್ ದೂರು ನೀಡಿದ್ದಳು. ಈಗ ಸುದೀಪ್ ರೈ ಅವರಂತಹ ಅಮಾಯಕ ಆಕೆಯ ಕಿರುಕುಳಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ,” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪುರುಷರಿಗೂ ಇರಲಿ ಸಾಂತ್ವನ ಕೇಂದ್ರ:
ಸೌಮ್ಯಾ ಶೆಟ್ಟಿಯ ವಂಚನಾ ಜಾಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವೇಣು ಶೆಟ್ಟಿ, ಕಾನೂನಿನ ದುರುಪಯೋಗದ ಬಗ್ಗೆ ಮಾತನಾಡಿದರು. “ಕಾನೂನು ಮಹಿಳೆಯರ ಪರವಾಗಿದೆ, ಅವರು ಸುಳ್ಳು ದೂರು ಕೊಟ್ಟರೂ ಪೊಲೀಸರು ನಮ್ಮನ್ನು ಎಳೆದೊಯ್ಯುತ್ತಾರೆ. ಆದರೆ ಅನ್ಯಾಯಕ್ಕೊಳಗಾದ ಪುರುಷರಿಗಾಗಿ ಯಾವುದೇ ಕಾನೂನಿಲ್ಲ. ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಸಾಂತ್ವನ ಕೇಂದ್ರಗಳು ಇರಬೇಕು. ಈ ರೀತಿ ಅನ್ಯಾಯಕ್ಕೊಳಗಾದ ನಮಗೆ ನ್ಯಾಯ ಕೊಡುವವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸ್ ತನಿಖೆಗೆ ಆಗ್ರಹ:
ಸೌಮ್ಯಾ ಶೆಟ್ಟಿ ಮದುವೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ಉದ್ದೇಶ ಹೊಂದಿದ್ದಳೇ? ಈಕೆಯ ಹಿಂದೆ ಯಾರಿದ್ದಾರೆ? ಮತ್ತು ಸುದೀಪ್ ರೈ ಸಾವಿನಲ್ಲಿ ಈಕೆಯ ಪಾತ್ರವೇನು? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಮತ್ತು ಸಂತ್ರಸ್ತರು ಪೊಲೀಸರಿಗೆ ಮನವಿ ಮಾಡಿದ್ದಾರೆ.

crime
ದಕ್ಷಿಣ ಕನ್ನಡ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕೊಲೆ ಆರೋಪಿ ಸೇರಿ ಮೂವರು ವಶಕ್ಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಸತತ ಕಾರ್ಯಾಚರಣೆಯಲ್ಲಿ, ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಿತ ಹೇಳಿಕೆ ನೀಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
1. ಆಂಧ್ರದ ಜೈಲಿನಲ್ಲಿದ್ದ ಕೊಲೆ ಆರೋಪಿ ಪತ್ತೆ
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ (ಅ.ಕ್ರ: 15/2012) ಹತ್ತು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಸುಳ್ಯ ಅಜ್ಜಾವರ ನಿವಾಸಿ N.M. ಅಜೀಜ್ ಎಂಬಾತನನ್ನು ಪತ್ತೆಹಚ್ಚಲಾಗಿದೆ. ಈತ 2018ರಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು, ಹೆಸರು ಬದಲಾಯಿಸಿಕೊಂಡು ಆಂಧ್ರಪ್ರದೇಶದಲ್ಲಿ ವಾಸವಾಗಿದ್ದನು. ಸದ್ಯ ಈತ ಆಂಧ್ರದ ಚಿತ್ತೂರು ಜೈಲಿನಲ್ಲಿರುವುದು ದೃಢಪಟ್ಟಿದ್ದು, ಪೊಲೀಸರು ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆಯಲಿದ್ದಾರೆ.
2. 8 ವರ್ಷಗಳ ನಂತರ ಕೇರಳದಲ್ಲಿ ಸಿಕ್ಕಿಬಿದ್ದ ಕಳ್ಳತನದ ಆರೋಪಿ
ಬಂಟ್ವಾಳ ಗ್ರಾಮಾಂತರ ಠಾಣೆಯ ಕಳ್ಳತನ ಪ್ರಕರಣವೊಂದರಲ್ಲಿ (ಅ.ಕ್ರ: 152/2017) ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೇರಳ ಪಲಕ್ಕಾಡ್ ನಿವಾಸಿ ಶಕೀಲ್ ಪಿ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿಯ ಮೇರೆಗೆ ಕೇರಳದ ತಿರೂರ್ನಲ್ಲಿ ಕಾರ್ಯಾಚರಣೆ ನಡೆಸಿದ ಹೆಡ್ ಕಾನ್ಸ್ಟೆಬಲ್ ಸಂತೋಷ್ ಮತ್ತು ಸಿಬ್ಬಂದಿ ಶಿವಾನಂದ ಮಡ್ಡಿ ಅವರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
3. ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಾಮೆಂಟ್: ಬಂಧನ
ಮಂಗಳೂರಿನ ಕಾರ್ಯಕ್ರಮವೊಂದರ ವಿಡಿಯೋಗೆ ಫೇಸ್ಬುಕ್ನಲ್ಲಿ ಕೋಮು ಪ್ರಚೋದನಾಕಾರಿ ಕಾಮೆಂಟ್ ಹಾಕಿದ್ದ ಚಾಮರಾಜನಗರ ಮೂಲದ ರಾಜೇಂದ್ರ ಸಿ (48) ಎಂಬಾತನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. 2026ರ ಜನವರಿಯಲ್ಲಿ ನಡೆದ ಸ್ಪರ್ಧೆಯ ವಿಡಿಯೋವೊಂದಕ್ಕೆ ಈತ ಅವಹೇಳನಕಾರಿ ಕಾಮೆಂಟ್ ಮಾಡಿದ್ದನು. ತನಿಖೆ ನಡೆಸಿದ ಪೊಲೀಸರು ಸಾಕ್ಷ್ಯಧಾರಗಳೊಂದಿಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

-
crime5 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 days agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
