Connect with us

court

ಆಸ್ತಿ, ಮನೆ ಮಕ್ಕಳು ಇದ್ದರೂ ತಮ್ಮನ್ನು ಆರೈಕೆ ಮಾಡುವವರಿಲ್ಲ; ವೃದ್ಧ ದಂಪತಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Published

on

ಹಾಸನ: ನಗರದ ಕರೀಗೌಡ ಕಾಲೋನಿಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ರೈಲಿಗೆ ಸಿಲುಕಿ ವೃದ್ಧ ದಂಪತಿ ಸಾ*ವನ್ನಪ್ಪಿದ್ದಾರೆ. ಇಳಿ ವಯಸ್ಸಿನಲ್ಲಿ ಮಕ್ಕಳಿಬ್ಬರು ತಮ್ಮನ್ನು ಆರೈಕೆ ಮಾಡುತ್ತಿಲ್ಲವೆಂದು ಜಿಗುಪ್ಸೆಗೊಂಡು ವೃದ್ಧ ದಂಪತಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ಶನಿವಾರ ರಾತ್ರಿ ನಡೆದಿದೆ

ಕತ್ತಲಾದ ಸಮಯದಲ್ಲಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ರೈಲು ಹರಿದ ರಭಸಕ್ಕೆ ದಂಪತಿಯ ದೇಹಗಳು ತುಂಡಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಅರೆಹೊಸೂರು ಗ್ರಾಮದ ವೃದ್ದ ದಂಪತಿ ಡೇವಿಡ್ (80) ಮತ್ತು ಮೇರಿ (73) ಎಂಬವರೇ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು

ಶನಿವಾರ ರಾತ್ರಿ 10.30ರ ಸಮಯದಲ್ಲಿ ರೈಲು ಬರುವ ಸಂದರ್ಭದಲ್ಲಿ ಹಳಿಗಳ ಮೇಲೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ತಿ, ಮನೆ ಇದ್ದರೂ ತಮ್ಮನ್ನು ಆರೈಕೆ ಮಾಡುವವರಿಲ್ಲ ಎಂದು ಮನನೊಂದು ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ.

ಮೃತ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬರು ಬೆಂಗಳೂರಿನಲ್ಲಿ, ಮತ್ತೊಬ್ಬ ಅರೆಹೊಸೂರು ಗ್ರಾಮದಲ್ಲಿಯೇ ನೆಲೆಸಿದ್ದಾರೆ. ಮೇರಿ ಅವರಿಗೆ ಅನಾರೋಗ್ಯವಿತ್ತು. ಯಾರಾದರೂ ಒಬ್ಬರು ಸತ್ತರೂ ಮತ್ತೊಬ್ಬರು ಅನಾಥರಾಗಿಬಿಡ್ತೇವೆ ಎಂದು ನಿರ್ಧರಿಸಿ ಜೀವ ಕಳೆದುಕೊಂಡಿರಬಹುದು ಎನ್ನಲಾಗಿದೆ.

Continue Reading
Advertisement

Belthangady

ಶಿಕ್ಷಕಿ ಮೇಲೆ ಅತ್ಯಾಚಾರ ಆರೋಪ: ಕೇಸ್ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್; ಮೂಡುಬಿದಿರೆ ಮಾಜಿ ಇನ್ಸ್‌ಪೆಕ್ಟರ್‌ಗೆ ಬಂಧನದ ಭೀತಿ

Published

on

ದೂರು ನೀಡಲು ಬಂದ ಮಹಿಳೆಗೆ ರಕ್ಷಣೆ ನೀಡಬೇಕಾದ ಅಧಿಕಾರಿಯೇ ಭಕ್ಷಕನಾದರೇ ಏನಾಗುತ್ತದೆ ಎಂಬುದಕ್ಕೆ ಮೂಡುಬಿದಿರೆಯ ಅಮಾನತುಗೊಂಡ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಪ್ರಕರಣವೇ ಸಾಕ್ಷಿ. ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಈ ‘ಕಾಮಪುರಾಣ’ದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಆರೋಪಿ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಶಿಕ್ಷಕಿಯೊಬ್ಬರ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಂದೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಕಿಡಿಹೊತ್ತಿಸಿದೆ.

“ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು ಅಧಿಕಾರದ ದುರುಪಯೋಗವಲ್ಲವೇ? ಇಂತಹ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗದೆ ಇನ್ನೇನು ದಾಖಲಾಗಲು ಸಾಧ್ಯ?” ಎಂದು ನ್ಯಾಯಪೀಠವು ಖಾರವಾಗಿ ಪ್ರಶ್ನಿಸಿದೆ.

ವಿಚಾರಣೆ ವೇಳೆ ಸಂದೇಶ್ ಪರ ವಕೀಲರು ವಾದ ಮಂಡಿಸಿ, “ಇದು ಇಬ್ಬರ ನಡುವಿನ ಒಪ್ಪಿತ ಸಂಬಂಧವಾಗಿತ್ತು, ಅತ್ಯಾಚಾರ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ” ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆದರೆ, ಈ ವಾದವನ್ನು ಒಪ್ಪದ ನ್ಯಾಯಾಲಯವು ಮಧ್ಯಂತರ ತಡೆ ನೀಡಲು ಸಾರಾಸಗಟಾಗಿ ನಿರಾಕರಿಸಿತು.

ಹೈಕೋರ್ಟ್ ಬಂಧನದ ವಿರುದ್ಧ ಯಾವುದೇ ಮಧ್ಯಂತರ ರಕ್ಷಣೆ ನೀಡದ ಕಾರಣ, ಸಿಐಡಿ ಪೊಲೀಸರು ಯಾವುದೇ ಕ್ಷಣದಲ್ಲಿ ಸಂದೇಶ್‌ರನ್ನು ಬಂಧಿಸುವ ಸಾಧ್ಯತೆಯಿದೆ. ಈಗಾಗಲೇ ಸಿಐಡಿ ಈ ಪ್ರಕರಣದ ಆಳವಾದ ತನಿಖೆ ನಡೆಸುತ್ತಿದ್ದು, ದಿನಕ್ಕೊಂದು ಹೊಸ ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಲಾಗಿದ್ದು, ಅಂದು ಇನ್ಸ್‌ಪೆಕ್ಟರ್ ಭವಿಷ್ಯ ನಿರ್ಧಾರವಾಗಲಿದೆ.

ರಕ್ಷಕನೇ ಭಕ್ಷಕನಾದ ಈ ಪ್ರಕರಣವು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದು, ಹೈಕೋರ್ಟ್‌ನ ಇಂದಿನ ನಿಲುವು ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗುವ ಭರವಸೆಯನ್ನು ಮೂಡಿಸಿದೆ.

Continue Reading

Belthangady

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ: ಎಸಿ ಗೆ ಸತತ ಮೂರನೇ ಬಾರಿ ಮುಖಭಂಗ!

Published

on

ಬೆಳ್ತಂಗಡಿ: ಸೌಜನ್ಯಾ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ದೊಡ್ಡ ಮಟ್ಟದ ಸಮಾಧಾನ ನೀಡಿದೆ. ಪುತ್ತೂರು ಸಹಾಯಕ ಕಮಿಷನರ್ (AC) ನೀಡಿದ್ದ ಮೂರನೇ ಗಡಿಪಾರು ಆದೇಶಕ್ಕೆ ಹೈಕೋರ್ಟ್ ಮಾರ್ಚ್ 24 ರಂದು ತಡೆಯಾಜ್ಞೆ ನೀಡಿದೆ.

ಘಟನೆಯ ವಿವರ:
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ (AC) ಸ್ಟೆಲ್ಲಾ ವರ್ಗೀಸ್ ಅವರು ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿ ಮಹತ್ವದ ತೀರ್ಪು ಪ್ರಕಟಿಸಿದೆ.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಗಡಿಪಾರು ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತಲ್ಲದೆ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ , ಬಂಟ್ವಾಳ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜಾರಿಗೊಳಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಸತತ ಮೂರನೇ ಬಾರಿ ಮುಖಭಂಗ:
ಗಮನಾರ್ಹ ಸಂಗತಿಯೆಂದರೆ, ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಎಸಿ ಸ್ಟೆಲ್ಲಾ ವರ್ಗೀಸ್ ಅವರು ಗಡಿಪಾರು ಆದೇಶ ಹೊರಡಿಸುತ್ತಿರುವುದು ಇದು ಮೂರನೇ ಬಾರಿ. ಈ ಹಿಂದಿನ ಎರಡು ಬಾರಿಯೂ ನ್ಯಾಯಾಲಯವು ಆ ಆದೇಶಗಳನ್ನು ವಜಾಗೊಳಿಸಿತ್ತು ಅಥವಾ ತಡೆ ನೀಡಿತ್ತು. ಈಗ ಮೂರನೇ ಬಾರಿಯೂ ಹೈಕೋರ್ಟ್ ತಡೆ ನೀಡಿರುವುದರಿಂದ ಸರ್ಕಾರಿ ಅಧಿಕಾರಿಗೆ ಕಾನೂನುಬದ್ಧವಾಗಿ ಸತತ ಮೂರನೇ ಬಾರಿ ಹಿನ್ನಡೆಯಾದಂತಾಗಿದೆ.

ಹೋರಾಟ ಮತ್ತು ಗಡಿಪಾರು ರಾಜಕೀಯ
ಧರ್ಮಸ್ಥಳದ ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ಮತ್ತು ನೈಜ ಆರೋಪಿಗಳ ಬಂಧನಕ್ಕಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರು ರಾಜ್ಯಾದ್ಯಂತ ಬೃಹತ್ ಹೋರಾಟ ಸಂಘಟಿಸುತ್ತಿದ್ದಾರೆ. ಈ ಹೋರಾಟವು ಜನಮನ್ನಣೆ ಗಳಿಸುತ್ತಿದ್ದಂತೆಯೇ, ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂಬ ಕಾರಣ ನೀಡಿ ಆಡಳಿತ ಯಂತ್ರವು ಅವರ ಮೇಲೆ ಗಡಿಪಾರು ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿತ್ತು. ಪ್ರತಿ ಬಾರಿಯೂ ಗಡಿಪಾರು ಆದೇಶ ಬಂದಾಗ ತಿಮರೋಡಿ ಅವರು ಇದು “ರಾಜಕೀಯ ಪ್ರೇರಿತ” ಮತ್ತು “ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ” ಎಂದು ಆರೋಪಿಸುತ್ತಾ ಬಂದಿದ್ದಾರೆ. ಹೈಕೋರ್ಟ್‌ನ ಈ ತಡೆಯಾಜ್ಞೆಯು ತಿಮರೋಡಿ ಬೆಂಬಲಿಗರಲ್ಲಿ ಹರ್ಷ ತಂದಿದ್ದು, ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ಸಂದೇಶ ರವಾನೆಯಾದಂತಾಗಿದೆ.

Continue Reading

court

ಗ್ರಾಮ ಪಂಚಾಯಿತಿ ಚುನಾವಣೆ ಮತ್ತಷ್ಟು ವಿಳಂಬ: ಹೈಕೋರ್ಟ್‌ಗೆ ಕಾಲಾವಕಾಶ ಕೇಳಿದ ಸರ್ಕಾರ

Published

on

ಬೆಂಗಳೂರು: ರಾಜ್ಯದ 5,950 ಗ್ರಾಮ ಪಂಚಾಯಿತಿಗಳ ಚುನಾವಣೆ ಮತ್ತಷ್ಟು ವಿಳಂಬವಾಗುವುದು ಬಹುತೇಕ ಖಚಿತವಾಗಿದೆ. ಚುನಾವಣೆ ನಡೆಸಲು ಅಗತ್ಯವಿರುವ ಮೀಸಲು ಪಟ್ಟಿ ಅಂತಿಮಗೊಳಿಸಲು ಕನಿಷ್ಠ ಮೂರು ತಿಂಗಳು ಕಾಲಾವಕಾಶ ಬೇಕೆಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೌಖಿಕವಾಗಿ ತಿಳಿಸಿದೆ. ಇದರಿಂದಾಗಿ ಸದ್ಯಕ್ಕೆ ಚುನಾವಣೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ.

ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ವಸ್ತುಸ್ಥಿತಿ ವರದಿಯನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ.

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸದ್ಯ 96 ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಹೊಸದಾಗಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸದಸ್ಯರ ಸಂಖ್ಯೆ ಗುರುತಿಸಲು ನಾಲ್ಕು ವಾರಗಳ ಸಮಯ ಬೇಕಾಗುತ್ತದೆ. ಅದಾದ ನಂತರ ಮೀಸಲು ಪ್ರಕ್ರಿಯೆ ಪೂರ್ಣಗೊಳಿಸಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಕನಿಷ್ಠ 3 ತಿಂಗಳು ಬೇಕಾಗುತ್ತದೆ ಎಂದು ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಕೋರ್ಟ್‌ಗೆ ತಿಳಿಸಿದ್ದಾರೆ.

ಈಗಾಗಲೇ ಜನಗಣತಿ ಆಧಾರಿಸಿ ಪ್ರತಿ ಪಂಚಾಯಿತಿಗೆ ಎಷ್ಟು ಸದಸ್ಯರಿರಬೇಕೆಂದು ನಿರ್ಧರಿಸಲು ಕ್ಷೇತ್ರ ಮರುವಿಂಗಡಣಾ ಆಯೋಗಕ್ಕೆ ಸೂಚಿಸಲಾಗಿದ್ದು, 15 ದಿನಗಳಲ್ಲಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವಿಚಾರಕ್ಕೆ ಬಂದರೆ, 187 ಸಂಸ್ಥೆಗಳ ಪೈಕಿ 167 ಸಂಸ್ಥೆಗಳ ವಾರ್ಡ್‌ ಮರುವಿಂಗಡಣೆ ಮುಗಿದಿದ್ದು, 21 ಮಾತ್ರ ಬಾಕಿ ಇವೆ ಎಂದು ಸರ್ಕಾರ ವರದಿಯಲ್ಲಿ ವಿವರಿಸಿದೆ. ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿರುವುದರಿಂದ ಏಪ್ರಿಲ್ ಅಂತ್ಯದವರೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿ ಕಂಡುಬರುವ ಸಾಧ್ಯತೆ ಇಲ್ಲ.

Continue Reading

Trending

Copyright © 2025 Deevatige