Connect with us

crime

ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಂದ ಅಪ್ಪ !

Published

on

ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಅಧಿಕಾರ ದಾಹಕ್ಕಾಗಿ ತನ್ನ 6 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ನಾಗರೀಕ ಸಮಾಜವನ್ನು ಬೆಚ್ಚಿ ಬೀಳಿಸಿದೆ

ಮುಂಬೈ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಪಾಂಡುರಂಗ ಕೊಂಡ್ಮಂಗಲೆ ಎಂಬ ವ್ಯಕ್ತಿಗೆ ಮೂವರು ಮಕ್ಕಳು. ಆತನಿಗೆ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಆಸೆಯಾಗಿತ್ತು. ಆದರೆ, ಈ ಚುನಾವಣೆಗೂ ಮೊದಲೇ ಆತನ 6 ವರ್ಷದ ಮಗಳು ಕೊಲೆಯಾಗಿದ್ದಳು. ಆ ಮಗುವಿನ ಸಾವಿನ ಕಾರಣ ಹುಡುಕುತ್ತಾ ಹೊರಟ ಪೊಲೀಸರಿಗೆ ಅಚ್ಚರಿ ಕಾದಿತ್ತು. ಆ ಮಗುವಿನ ಹಂತ ಯಾರಿರಬಹುದು ಎಂಬ ಕುತೂಹಲ ಊರಿನವರಿಗೂ ಇತ್ತು. ಆದರೆ, ಆ ಮಗುವಿನ ಅಪ್ಪನೇ ಕೊಲೆಗಾರ (Killer) ಎಂದು ತಿಳಿದು ಪೊಲೀಸರು, ಊರಿನವರಿಗೆ ಮಾತ್ರವಲ್ಲ ಆತನ ಮನೆಯವರಿಗೂ ಶಾಕ್ ಆಗಿತ್ತು.

ಮುಂಬರುವ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಆ ವ್ಯಕ್ತಿಗೆ 2 ಅಥವಾ 2ಕ್ಕಿಂತ ಕಡಿಮೆ ಮಕ್ಕಳಿರಬೇಕು ಎಂದು ನಿಯಮವಿತ್ತು. ಆದರೆ, ಪಾಂಡುರಂಗನಿಗೆ ಮೂವರು ಮಕ್ಕಳಿದ್ದರು. ಹೀಗಾಗಿ, ತನ್ನ ಮಕ್ಕಳ ಕಾರಣದಿಂದ ತಾನು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶದಿಂದ ವಂಚಿತನಾಗುವುದು ಆತನಿಗೆ ಇಷ್ಟವಿರಲಿಲ್ಲ. ಹೀಗಾಗಿ, ಕೊನೆಯ ಮಗಳಾದ 6 ವರ್ಷದ ಪ್ರಾಚಿಯನ್ನು ಕೊಂದುಬಿಟ್ಟರೆ ತನಗೆ ಇಬ್ಬರೇ ಮಕ್ಕಳು ಉಳಿಯುತ್ತಾರೆ. ಆಗ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ತಾನು ಕೂಡ ಅರ್ಹನಾಗುತ್ತೇನೆ ಎಂದು ಯೋಚಿಸಿದ ಆತ ಕೊಲೆಯ ಪ್ಲಾನ್ ಮಾಡಿದ್ದ.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲ್ಲೂಕಿನ ಕೆರೂರ್ ಗ್ರಾಮದ ನಿವಾಸಿ 28 ವರ್ಷದ ಪಾಂಡುರಂಗ ಕೊಂಡ್ಮಂಗಲೆ ತನ್ನ 6 ವರ್ಷದ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದ. ನಿಜಾಮಾಬಾದ್ ಪೊಲೀಸರು ಪ್ರಕರಣದ ಆರೋಪಿ ಪಾಂಡುರಂಗ ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ, ಕೆಲವು ದಿನಗಳ ಹಿಂದೆ ಯೆಡಪಲ್ಲಿಯ ನಿಜಾಮ ಸಾಗರ್ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.

ಹಲವು ದಿನಗಳಾದರೂ ನಾಪತ್ತೆಯಾಗಿದ್ದ ಪ್ರಾಚಿ ಪತ್ತೆಯಾಗಿರಲಿಲ್ಲ. ಹೀಗಾಗಿ, ಪೊಲೀಸರು ಆಕೆಯ ತಂದೆಯನ್ನು ವಿಚಾರಣೆಗಾಗಿ ಕರೆದೊಯ್ದಿದ್ದರು. ಆಗ ಆಕೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ತನಿಖಾಧಿಕಾರಿ ವಿಚಾರಣೆ ನಡೆಸಿದಾಗ, ತಾನು ಮಗುವನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದ.

ತನ್ನ ಗ್ರಾಮದಲ್ಲಿ ಕ್ಷೌರಿಕನ ಅಂಗಡಿ ನಡೆಸುತ್ತಿರುವ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದ. ಅವನಿಗೆ 3 ವರ್ಷದ ಗಂಡು ಮಗು ಮತ್ತು 6 ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಆದರೆ, ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 2 ಮಕ್ಕಳ ಮಾನದಂಡವಿತ್ತು. ಹೀಗಾಗಿ ಅವನು ಸ್ಪರ್ಧಿಸಲು ಅನರ್ಹನಾಗಿದ್ದನು.

ಹೀಗಾಗಿ, ಅವನು ತನ್ನ ಸ್ನೇಹಿತ ಮತ್ತು ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ಶಿಂಧೆ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದ. ಆಗ ಆತ ಅವನ ಅವಳಿ ಮಕ್ಕಳಲ್ಲಿ ಒಬ್ಬಳನ್ನು ಕೊಂದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸಲಹೆ ನೀಡಿದ್ದ. ಇದಕ್ಕೆ ಆತ ಮೊದಲು ಒಪ್ಪಿರಲಿಲ್ಲ. ಸಾಯಿಸುವ ಬದಲು ಒಂದು ಮಗುವನ್ನು ಯಾರಿಗಾದರೂ ದತ್ತು ನೀಡಿದರಾಯಿತು ಎಂದು ನಿರ್ಧರಿಸಿದ್ದ. ಆದರೆ, ದತ್ತು ನೀಡಿದರೂ ಕೂಡ ಆ ಮಗುವಿನ ಜನನ ಪ್ರಮಾಣಪತ್ರದಲ್ಲಿ ಆಕೆ ಆತನ ಮಗುವೇ ಎಂದು ರಿಜಿಸ್ಟರ್ ಆಗಿರುತ್ತಿತ್ತು.

ಹೀಗಾಗಿ, ಕೊನೆಗೆ ಆತ ತನ್ನ ಗೆಳೆಯನ ಸಲಹೆಯಂತೆ ಮಗುವನ್ನು ಕೊಲ್ಲುವ ನಿರ್ಧಾರ ಮಾಡಿದ್ದ. ಮಗುವನ್ನು ಕೊಂದು ಅದನ್ನು ಅಪಘಾತದಂತೆ ಕಾಣುವಂತೆ ಮಾಡಲು ಸಂಚು ರೂಪಿಸಿದ್ದ. ನಿಜಾಮಾಬಾದ್ ಜಿಲ್ಲೆ ತನ್ನ ಗ್ರಾಮದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವುದರಿಂದ ಪಾಂಡುರಂಗ ಪ್ರಾಚಿಯನ್ನು ಬೈಕ್​ನಲ್ಲಿ ನಿಜಾಮ್ ಸಾಗರ್ ಕಾಲುವೆಗೆ ಕರೆದೊಯ್ದ. ಅಲ್ಲಿ ಅವನು ಅವಳನ್ನು ಕಾಲುವೆಗೆ ತಳ್ಳಿ ಓಡಿಹೋದ.

ಆ ವೇಳೆ ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಗ್ರಾಮಸ್ಥರು ನೀರಿಗೆ ಏನೋ ಬೀಳುವ ಶಬ್ದ ಕೇಳಿ ಅಲ್ಲಿಗೆ ಬಂದು ನೋಡಿದಾಗ ಆ ಬಾಲಕಿಯ ಶವ ಕಾಲುವೆಯಲ್ಲಿ ತೇಲುತ್ತಿರುವುದನ್ನು ಕಂಡರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತನಿಖೆ ಆರಂಭಿಸಿದರು. ಆ ಬಾಲಕಿಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಮಹಾರಾಷ್ಟ್ರ ಗ್ರಾಮದ ಯಾರೋ ಒಬ್ಬರು ಪ್ರಾಚಿಯ ಫೋಟೋವನ್ನು ನೋಡಿದಾಗ ಆಕೆಯನ್ನು ಗುರುತಿಸಿದರು. ತಕ್ಷಣ ಪೊಲೀಸ್ ತಂಡ ಗ್ರಾಮಕ್ಕೆ ತಲುಪಿ ತನಿಖೆಯನ್ನು ಪ್ರಾರಂಭಿಸಿತು. ಇದರಿಂದ ಪಾಂಡುರಂಗ ಸಿಕ್ಕಿಬಿದ್ದ.

Continue Reading
Advertisement

crime

ಕಂಟೇನರ್‌ನಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ 18ಕ್ಕೂ ಹೆಚ್ಚು ಗೋವುಗಳ ರಕ್ಷಣೆ; ಕಡಬ ಪೊಲೀಸರ ಮಿಂಚಿನ ಕಾರ್ಯಾಚರಣೆ

Published

on

ಕಡಬ: ಹಾಸನ ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಕಡಬ ಪೊಲೀಸರು ಭೇದಿಸಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಂಟೇನರ್ ಲಾರಿಯಲ್ಲಿ ಅತೀ ಕ್ರೂರವಾಗಿ ತುಂಬಿದ್ದ 18ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಹಾಸನ ಮಾರ್ಗವಾಗಿ ಕೇರಳಕ್ಕೆ ಕಂಟೇನರ್ ಲಾರಿಯೊಂದರಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು, ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲದ ಕಣ್ಣಾರೆ ಎಂಬಲ್ಲಿ ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದರು. ಈ ವೇಳೆ ಕಂಟೇನರ್ ಒಳಗೆ ಗೋವುಗಳನ್ನು ಅತೀ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಕಂಡುಬಂದಿದೆ.

ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯ ವೇಳೆ ಹೊಸೂರು ಮೂಲದ ಅಕ್ರಮ್ ಪಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಾರಿಯಲ್ಲಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೊಲೀಸರು ಅಕ್ರಮ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ವಶಪಡಿಸಿಕೊಂಡ ಗೋವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Continue Reading

Bantawala

ಕಬಕ: ಅಕ್ರಮ ಕೇರಳ ಲಾಟರಿ ಮಾರಾಟ ಜಾಲಕ್ಕೆ ಪೊಲೀಸರ ಲಗ್ಗೆ – ಮಂಗಳೂರು ತಂಡದಿಂದ ಮಿಂಚಿನ ದಾಳಿ

Published

on

ಪುತ್ತೂರು: ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಷೇಧಿತವಾಗಿರುವ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರ ವಿಶೇಷ ತಂಡ ಭೇದಿಸಿದೆ. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಜಂಕ್ಷನ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಪಾನ್ ಬೀಡಾ ಅಂಗಡಿಯ ಮೇಲೆ ದಾಳಿ ನಡೆಸಿದ ಪೊಲೀಸರು, ಮಾಲೀಕ ಸೇರಿದಂತೆ ಗ್ರಾಹಕರನ್ನು ವಶಕ್ಕೆ ಪಡೆದಿದ್ದಾರೆ.

ಕಬಕ ಜಂಕ್ಷನ್‌ನಲ್ಲಿರುವ ಪಾನ್ ಬೀಡಾ ಅಂಗಡಿಯೊಂದರಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ, ಗುಪ್ತವಾಗಿ ಕೇರಳ ಲಾಟರಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಗಡಿ ಭಾಗಗಳಲ್ಲಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಮಂಗಳೂರಿನಿಂದ ಆಗಮಿಸಿದ ವಿಶೇಷ ತಂಡವು ಕಾರ್ಯಾಚರಣೆ ರೂಪಿಸಿತ್ತು.

ಕಾರ್ಯಾಚರಣೆ ನಡೆದ ರೀತಿ:
ನಿಗಾ ಇರಿಸಿದ ತಂಡ: ಮಂಗಳೂರಿನಿಂದ ಬಂದ ವಿಶೇಷ ತಂಡದ ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾಮಾನ್ಯ ನಾಗರಿಕರಂತೆ ಪಾನ್ ಬೀಡಾ ಅಂಗಡಿಯ ಮಾಲೀಕನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಇದೇ ಸಂದರ್ಭದಲ್ಲಿ ಇಬ್ಬರು ಯುವಕರು ಲಾಟರಿ ಖರೀದಿಸಲು ಬಂದಾಗ, ಪೊಲೀಸರು ಹಠಾತ್ ದಾಳಿ ನಡೆಸಿ ಲಾಟರಿ ಟಿಕೆಟ್‌ಗಳ ಸಮೇತ ಮಾಲೀಕ ಮತ್ತು ಗ್ರಾಹಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ಕಬಕ ವಿದ್ಯಾಪುರ ನಿವಾಸಿ ಜಗದೀಶ ಯಾನೆ ಜಗ್ಗ ಎಂದು ಗುರುತಿಸಲಾಗಿದೆ. ಈತ ತನ್ನ ಅಂಗಡಿಯಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದ ಬಗ್ಗೆ ಸ್ಥಳೀಯರು ಹಿರಿಯ ಅಧಿಕಾರಿಗಳಿಗೆ ನೀಡಿದ ದೂರು ಕಾರ್ಯಾಚರಣೆಗೆ ಪ್ರಮುಖ ಕಾರಣವಾಗಿದೆ.

ಕಾನೂನು ಕ್ರಮ ಮತ್ತು ತನಿಖೆ:
ದಾಳಿಯ ವೇಳೆ ಅಂಗಡಿಯಲ್ಲಿದ್ದ ಅಕ್ರಮ ಕೇರಳ ಲಾಟರಿ ಟಿಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಲಾಟರಿ ಮಾರಾಟ ಮಾಡುವುದು ಕಾನೂನುಬಾಹಿರ. ಗಡಿ ಭಾಗದ ಮೂಲಕ ಅಕ್ರಮವಾಗಿ ಲಾಟರಿ ತಂದು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿಗಳು ಅಥವಾ ದೊಡ್ಡ ವಿತರಕರು ಇದ್ದಾರೆಯೇ ಎಂಬ ಬಗ್ಗೆ ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯು ಗಡಿ ಭಾಗದ ಅಕ್ರಮ ದಂಧೆಕೋರರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

Continue Reading

crime

ದೈವಕ್ಕೆ ಅವಮಾನ: ಎಮ್ಮೆಮಾಡು ಜಮಾಅತ್‌ನಿಂದ ತಪ್ಪಿತಸ್ಥರಿಗೆ ಎಚ್ಚರಿಕೆ ಹಾಗೂ ಕ್ಷಮಾಪಣೆ

Published

on

ಮಡಿಕೇರಿ: ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭವೊಂದರಲ್ಲಿ ಸ್ಥಳೀಯ ದೈವವೊಂದಕ್ಕೆ ಅವಮಾನ ಮಾಡಿದ ಘಟನೆ ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಎಮ್ಮೆಮಾಡುವಿನ ತಾಜೂಲ್ ಇಸ್ಲಾಂ ಮುಸ್ಲಿಂ ಜಮಾಅತ್, ಘಟನೆಯಲ್ಲಿ ಭಾಗಿಯಾದವರಿಗೆ ಕಠಿಣ ಎಚ್ಚರಿಕೆ ನೀಡಿದೆ.

ಘಟನೆಯ ಹಿನ್ನೆಲೆ ಮತ್ತು ಜಮಾಅತ್ ಕ್ರಮ

ಮದುವೆ ಸಮಾರಂಭ ಮುಗಿದ ನಂತರ ಕೆಲವು ಯುವಕರು ದೈವದ ಆಚರಣೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ವರ್ತಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಎಮ್ಮೆಮಾಡು ಜಮಾಅತ್ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಯಿತು. ಈ ಕುರಿತು ಪ್ರಧಾನ ಕಾರ್ಯದರ್ಶಿ ಸೈಯದ್ ಝಕರಿಯ ಸಅದಿ ಅಲ್ ಐದರೂಸಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ:

ಸಭೆಯ ಬಳಿಕ ಜಮಾಅತ್ ಪ್ರಧಾನ ಕಾರ್ಯದರ್ಶಿ ಸೈಯದ್ ಝಕರಿಯ ಸಅದಿ ಅಲ್ ಐದರೂಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ “ಮದುವೆ ಸಮಾರಂಭ ಮುಗಿದ ಬಳಿಕ ಸ್ನೇಹಿತರೆಲ್ಲರೂ ಒಗ್ಗೂಡಿದಾಗ ಕೇವಲ ತಮಾಷೆಗಾಗಿ ಈ ರೀತಿ ವರ್ತಿಸಿದ್ದೇವೆ ಎಂದು ಯುವಕರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಯಾವುದೇ ಜಾತಿ, ಧರ್ಮ ಅಥವಾ ಧಾರ್ಮಿಕ ಆಚರಣೆಗಳನ್ನು ನಿಂದಿಸುವ ಉದ್ದೇಶ ತಮಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ನಡವಳಿಕೆಯಿಂದ ತಪ್ಪಾಗಿರುವುದನ್ನು ಅರಿತ ಯುವಕರು ಜಮಾಅತ್ ಮುಂದೆ ಸಭೆಯಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಇದರಿಂದ ಯಾರ ಮನಸ್ಸಾದರೂ ನೊಂದಿದ್ದರೆ ಅವರೆಲ್ಲರಲ್ಲೂ ಯುವಕರು ಕ್ಷಮೆಯನ್ನ ಕೋರಿದ್ದಾರೆ. ಎಂದು ತಿಳಿಸಿದ್ದು, ಯುವಕರು ಈಗಾಗಲೇ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿರುವುದರಿಂದ, ಸಾರ್ವಜನಿಕರು ಕೂಡ ಅವರಿಗೆ ಕ್ಷಮೆಯನ್ನು ನೀಡಿ ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕೆಂದು ಸೈಯದ್ ಝಕರಿಯ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಜಮಾಅತ್ ನೀಡಿದ ಕಠಿಣ ಎಚ್ಚರಿಕೆ

ಈ ಪ್ರಕರಣವನ್ನು ಇಲ್ಲಿಗೆ ಅಂತ್ಯಗೊಳಿಸದ ಜಮಾಅತ್ ಮಂಡಳಿಯು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

“ಯಾವುದೇ ಧರ್ಮ ಅಥವಾ ದೈವದ ಬಗ್ಗೆ ಅವಹೇಳನ ಮಾಡುವುದು ಜಮಾಅತ್‌ನ ಆಶಯಕ್ಕೆ ವಿರುದ್ಧವಾಗಿದೆ. ಇನ್ನು ಮುಂದೆ ಎಮ್ಮೆಮಾಡು ಜಮಾಅತ್ ವ್ಯಾಪ್ತಿಯಲ್ಲಿ ಇಂತಹ ಕೃತ್ಯಗಳು ನಡೆದರೆ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಜಮಾಅತ್ ನಿಯಮಾವಳಿಗಳ ಪ್ರಕಾರ ಕಠಿಣ ನಿಯಮಗಳನ್ನು ಎದುರಿಸಬೇಕಾಗುತ್ತದೆ.”

ಸೈಯದ್ ಝಕರಿಯ ಸಅದಿ ಅಲ್ ಐದರೂಸಿ,

ಪ್ರಧಾನ ಕಾರ್ಯದರ್ಶಿ.

ಕೋಮು ಸೌಹಾರ್ದತೆಗೆ ಆದ್ಯತೆ

ಜಿಲ್ಲೆಯಲ್ಲಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಮಾಅತ್ ತೆಗೆದುಕೊಂಡ ಈ ತ್ವರಿತ ನಿರ್ಧಾರವು ಮಹತ್ವದ್ದಾಗಿದೆ. ಈ ಮಹತ್ವದ ಸಭೆಯಲ್ಲಿ ಜಮಾಅತ್ ಅಧ್ಯಕ್ಷರಾದ ಹುಸೈನ್ ಸಖಾಫಿ, ಸಹ ಕಾರ್ಯದರ್ಶಿ ಹನೀಫಾ ಸೇರಿದಂತೆ ಜಮಾಅತ್‌ನ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು., ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವಂತೆ ಸಮುದಾಯದ ಯುವಕರಿಗೆ ಕರೆ ನೀಡಿದರು.

Continue Reading

Trending

Copyright © 2025 Deevatige