Connect with us

Bantawala

ತ್ರಿಸ್ತರ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಸಜ್ಜಾಗಲು ಬ್ಲಾಕ್ ಕಾಂಗ್ರೆಸ್ ಜೊತೆ ಪಂಚಾಯತ್ ರಾಜ್ ಸಂಘಟನೆ ಕೈಜೋಡಿಸಲಿದೆ.-ಕುಳಾಲು ಸುಭಾಶ್ಚಂದ್ರ ಶೆಟ್ಟಿ.

Published

on

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹತ್ವದ ಸಭೆ ನಡೆಯಿತು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಶಿವರಾಂ ನೇತೃತ್ವದಲ್ಲಿ ಈ ಸಭೆ ಆಯೋಜಿಸಲಾಗಿದ್ದು, ಮುಂದಿನ ಸ್ಥಳೀಯ ಸಂಸ್ಥೆಯ ಚುನಾವಣೆಗಳ ತಯಾರಿ ಕುರಿತು ಗಂಭೀರ ಚರ್ಚೆ ನಡೆಯಿತು.
ಸಭೆಯಲ್ಲಿ ಗ್ರಾ.ಪಂಚಾಯತ್ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಪಕ್ಷದ ಸಂಘಟನೆ ಬಲಪಡಿಸುವುದು ಹಾಗೂ ಸ್ಥಳೀಯ ಮಟ್ಟದಲ್ಲಿ ಜನಪರ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ಕುರಿತು ಅಭಿಪ್ರಾಯ ವಿನಿಮಯ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸತೀಶ್ ಬಂಗೇರ ಕಾಶಿಪಟ್ನ ವಹಿಸಿದ್ದರು.

ಈ ಸಂದರ್ಭ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು, ಪಂಚಾಯತ್ ರಾಜ್ ಸಂಘಟನೆ ಚುನಾವಣೆ ಸಿದ್ಧತೆಗಾಗಿ ಕಾರ್ಯಕರ್ತರನ್ನು ಸಕ್ರಿಯಗೊಳಿಸಿ, ಪಂಚಾಯತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಕ್ರಮ ಕೈಗೊಂಡಿದ್ದು, ಕಾರ್ಯಕರ್ತರನ್ನು ತಳಮಟ್ಟದಲ್ಲಿ ಒಗ್ಗೂಡಿಸಿ ಬಲಿಷ್ಠಗೊಳಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಲ್ಲದೇ, ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ‘ಗ್ರಾಮ ಭೇಟಿ’ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವವನ್ನು ಸಭೆಗೆ ವಿವರಿಸಿದರು. ಗ್ರಾಮೀಣ ಜನರ ಸಮಸ್ಯೆಗಳನ್ನು ನೇರವಾಗಿ ಕೇಳಿ ಪರಿಹಾರ ಕಂಡುಕೊಳ್ಳುವ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಭಾಗಿಯಾಗಬೇಕು ಎಂದು ತಿಳಿಸಿದರು.
ಮತ್ತೆ ಮಾತು ಮುಂದುವರಿಸಿದ ಸುಭಾಶ್ಚಂದ್ರ ಶೆಟ್ಟಿ ಅವರು, ಕೇಂದ್ರ ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಕ್ರಮೇಣ ಕುಂಠಿತಗೊಳಿಸುತ್ತಿದ್ದು, 15ನೇ ಹಣಕಾಸು ಆಯೋಗದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ಇದೇ ರೀತಿ ಮುಂದುವರಿದರೆ,ಈ ಬಗ್ಗೆ ನಾವು ಜನರಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿ ಬಿಜೆಪಿಯ ವೈಫಲ್ಯವನ್ನು ಪ್ರಚಾರಪಡಿಸಬೇಕಾಗಿದೆ.ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೇಸ್ಸಿನೊಂದಿಗೆ ಸೇರಿಕೊಂಡು ತಾಲೂಕು ಮಟ್ಟದಲ್ಲಿ ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆ ಕೂಡ ಕೈಗೊಳ್ಳಲು ಪಂಚಾಯತ್ ರಾಜ್ ಸಂಘಟನೆ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ರಕ್ಷಿತ್ ಶಿವರಾಂ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಬಂಗೇರ ಕಾಶಿಪಟ್ನ ಅವರು ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಮಹತ್ವದ ಮಾಹಿತಿ ನೀಡಿದರು. ಬಿಜೆಪಿ ಪಕ್ಷವು ಚುನಾವಣೆ ಗೆಲ್ಲುವ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟುಮಾಡುವ ರೀತಿಯ ಷಡ್ಯಂತ್ರ ರೂಪಿಸುತ್ತಿದೆ ಎಂದು ಸಭೆಗೆ ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಪಂಚಾಯತ್ ಸದಸ್ಯರು ಹಾಗೂ ಮುಂದಿನ ದಿನಗಳಲ್ಲಿ ಗ್ರಾ.ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾದವರು ತಮ್ಮ ತಮ್ಮ ವ್ಯಾಪ್ತಿಯ ಬಿ.ಎಲ್.ಒ.ಗಳ ಸಹಾಯ ಪಡೆದು ಮತದಾರರ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಕರೆ ನೀಡಿದರು. ಯಾವುದೇ ಅಕ್ರಮಗಳು ಅಥವಾ ತಪ್ಪುಗಳಿಂದ ಪಕ್ಷಕ್ಕೆ ಹಾನಿಯಾಗದಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಸಭೆಗೆ ಸಂದೇಶ ನೀಡಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಖಲಂದರ್ ಶಾಫಿ ಸ್ವಾಗತಿಸಿ, ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರು ಸಭೆಯಲ್ಲಿ ಹಾಜರಿದ್ದರು.

Continue Reading
Advertisement

Bantawala

ವಿಟ್ಲದಲ್ಲಿ ಬಡಕಾರ್ಮಿಕೆ ರಾಜೇಶ್ವರಿಯವರ ಮನೆ ಬೆಂಕಿಗಾಹುತಿ

Published

on

ವಿಟ್ಲ ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ಕಾರ್ಮಿಕೆಯಾಗಿರುವ ರಾಜೇಶ್ವರಿ ಎಂಬವರ ಮನೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೊತ್ತಿ ಉರಿದ ಘಟನೆಯೊಂದು ಪೆ.10ರಂದು ಸಂಭವಿಸಿದ್ದು, ಬಡ ನಿರ್ಗತಿಕ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.


ಮನೆಯೊಡತಿ ರಾಜೇಶ್ವರಿ ಅವರು ಎಂದಿನಂತೆ ಬೆಳಗ್ಗೆ ಬೀಗ ಹಾಕಿ ಅಡಿಕೆ ಗಾರ್ಬನ್ ಕೆಲಸಕ್ಕೆ ಹೋಗಿದ್ದರೆ ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಭಸ್ಮ ಮಾಡಿದೆ.

ಮನೆಯಿಂದ ವಿಪರೀತ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಜಮಾಯಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿಯೇ ಮನೆಯೊಳಗಿದ್ದ ಮಕ್ಕಳ ಬಟ್ಟೆಬರೆ ಶಾಲಾ ಪುಸ್ತಕಗಳು, ಮನೆಯ ದಾಖಲೆಪತ್ರಗಳು ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಕರಟಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಬಡ ಕಾರ್ಮಿಕೆ ಗಾರ್ಬಲ್‌ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ದು, ಮನೆ ಬೆಂಕಿಗಾಹುತಿಯಾದ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

Continue Reading

accident

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..

Published

on

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.


ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Continue Reading

Bantawala

ಕುಟುಂಬದ ಯಜಮಾನರಾಗಿ ಪೂಂಜರಬೆಟ್ಟು ಕೇಶವ ಭಂಡಾರಿ; ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನಾ ಸಭೆ

Published

on

ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಕುದ್ರಿಯ ತರವಾಡಿನ ನೂತನ ಯಜಮಾನರಾಗಿ ಹಿರಿಯ ದೈವ ಚಾಕಿರಿಯವರಾದ ಪೂಂಜರಬೆಟ್ಟು ಕೇಶವ ಭಂಡಾರಿ ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳು ಮತ್ತು ಕುಟುಂಬಿಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನೆಯ ಸಭೆ ನಡೆಯಿತು.

ಹಿಂದಿನ ಟ್ರಸ್ಟಿಗಳ ಮರಣ, ರಾಜೀನಾಮೆ, ಹಾಗೂ ವಜಾಗೊಂಡ ಸದಸ್ಯರ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು. ಕುದ್ರಿಯ ಗುತ್ತು ಟ್ರಸ್ಟಿನ ನೂತನ ಗೌರವಾಧ್ಯಕ್ಷರಾಗಿ ವಿಠಲ ಮೋನಪ್ಪ ಶೆಟ್ಟಿ ನಾಂದೇಡ್, ಅಧ್ಯಕ್ಷರಾಗಿ ಚಂದ್ರಹಾಸ ಎಂ ಶೆಟ್ಟಿ ಅಳಕೆಮಜಲು, ಉಪಾಧ್ಯಕ್ಷರಾಗಿ ರೋಹಿಣಿ ರೈ ನೇರಳಕಟ್ಟೆ, ಹಾಗೂ ಚಂದ್ರಹಾಸ ರೈ ಮುಲ್ಕಾಜೆ ಮಾ ಡ, ಕಾರ್ಯದರ್ಶಿಯಾಗಿ ಗಣೇಶ್‌ ರೈ, ಕೋಶಾಧಿಕಾರಿಯಾಗಿ ಧನಂಜಯ ಶೆಟ್ಟಿ ಮುತ್ತೂರು, ಇವರನ್ನು ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರನ್ನು ಕುಟುಂಬಿಕರ ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

Continue Reading

Trending

Copyright © 2025 Deevatige