Connect with us

award

ಝೀ ಕನ್ನಡ ‘ಸರಿಗಮಪ ಲಿಟಲ್ ಚಾಂಪ್ಸ್’ ವಿಜೇತ ಅಶ್ಮಿತ್‌ ಗೆ ಪುಣಚ ಹಾಗೂ ವಿಟ್ಲದಲ್ಲಿ ಅದ್ಧೂರಿ ವಿಜಯೋತ್ಸವ ಮತ್ತು ಸನ್ಮಾನ

Published

on

ವಿಟ್ಲ/ಪುಣಚ: ಝೀ ಕನ್ನಡ ವಾಹಿನಿಯ ಪ್ರತಿಷ್ಠಿತ ‘ಸರಿಗಮಪ ಲಿಟಲ್ ಚಾಂಪ್ಸ್’ ರಿಯಾಲಿಟಿ ಶೋನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ವಿಜೇತನಾಗಿ ಹೊರಹೊಮ್ಮಿದ ಸ್ಥಳೀಯ ಪ್ರತಿಭೆ ಅಶ್ಮಿತ್ ಎ.ಜೆ. ಅವರಿಗೆ ಹುಟ್ಟೂರು ಪುಣಚ ಹಾಗೂ ಹೋಬಳಿ ಕೇಂದ್ರವಾದ ವಿಟ್ಲದಲ್ಲಿ ಅದ್ಧೂರಿ ಸ್ವಾಗತ, ಬೃಹತ್ ರೋಡ್ ಶೋ ಮತ್ತು ಸನ್ಮಾನ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಹುಟ್ಟೂರು ಪುಣಚದಲ್ಲಿ ಆತ್ಮೀಯ ಅಭಿನಂದನೆ

ಪುಣಚದ ಪರಿಯಾಲ್ದಡ್ಕದಲ್ಲಿ ಸಮಾನ ಮನಸ್ಕರು ಹಾಗೂ ಊರವರ ಸಹಕಾರದೊಂದಿಗೆ ಅಶ್ಮಿತ್ ಎ.ಜೆ. ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಪರಿಯಾಲ್ತಡ್ಕ ಮಸೀದಿ ಬಳಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಅಶ್ಮಿತ್ ಎ.ಜೆ. ಅವರನ್ನು ಪರಿಯಾಲ್ದಡ್ಕ ಮುಖ್ಯಪೇಟೆಗೆ ಕರೆತರಲಾಯಿತು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಅವರು ಅಶ್ಮಿತ್ ಎ.ಜೆ.ಗೆ ಹೂಹಾರ ಹಾಕಿ ಸ್ವಾಗತಿಸಿ, ಗ್ರಾಮಕ್ಕೆ ಕೀರ್ತಿ ತಂದ ಸಾಧಕನಿಗೆ ನಾಗರಿಕರ ಪರವಾಗಿ ಶುಭ ಹಾರೈಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಅಶ್ಮಿತ್ ಎ.ಜೆ. ಅವರ ತಂದೆ ಜಯರಾಮ, ತಾಯಿ ರೇವತಿ, ಕುಟುಂಬಸ್ಥರು ಹಾಗೂ ಊರಿನ ಹಿತೈಷಿಗಳು ಉಪಸ್ಥಿತರಿದ್ದರು.

ವಿಟ್ಲ ಪೇಟೆಯಲ್ಲಿ ಕಣ್ಣುಕೋರೈಸುವ ರೋಡ್ ಶೋ ಹಾಗೂ ಗೌರವಾರ್ಪಣೆ:

ವಿಟಿವಿ ವಿಟ್ಲ ಹಾಗೂ ಎಸ್.ಎಲ್.ವಿ. ಬುಕ್ ಹೌಸ್ ಆಶ್ರಯದಲ್ಲಿ ವಿಟ್ಲದಲ್ಲಿ ಅದ್ದೂರಿ ಗೌರವ ಸಮಾರಂಭ ಮತ್ತು ವಿಜಯೋತ್ಸವ ಮೆರವಣಿಗೆ ನಡೆಯಿತು. ವಿಟ್ಲ ನಿರೀಕ್ಷಣಾ ಕಚೇರಿಯಿಂದ ಆರಂಭಗೊಂಡ ಮೆರವಣಿಗೆಯು ಪೇಟೆಯ ಪ್ರಮುಖ ರಸ್ತೆಯ ಮೂಲಕ ಜೈನ ಬಸದಿಯವರೆಗೆ ಸಾಗಿ, ನಂತರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ವಿಜೃಂಭಣೆಯಿಂದ ಸಾಗಿತು.

ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಹಾಗೂ ವಿಟಿವಿ ಆಡಳಿತ ನಿರ್ದೇಶಕ ರಾಮ್‌ದಾಸ್ ಶೆಟ್ಟಿ ಅವರು ಅಶ್ಮಿತ್ ಎ.ಜೆ.ಗೆ ಹಾರ ಹಾಕಿ ಮೆರವಣಿಗೆಗೆ ಚಾಲನೆ ನೀಡಿದರು. ಹಾದಿಯುದ್ದಕ್ಕೂ ಅಭಿಮಾನಿಗಳು ಹಾಗೂ ಸಾರ್ವಜನಿಕರು ಶೇಕ್ ಹ್ಯಾಂಡ್ ನೀಡಿ, ಹಾರಾರ್ಪಣೆ ಮಾಡಿ ಶುಭ ಹಾರೈಸಿದರು. ಪುಟಾಣಿ ಮಕ್ಕಳು ಅಶ್ಮಿತ್ ಎ.ಜೆ.ರಿಂದ ಆಟೋಗ್ರಾಫ್ ಪಡೆದು ಸಂಭ್ರಮಿಸಿದರು.

ವಿಶೇಷ ಸನ್ಮಾನಗಳು: ಸಪ್ತ ಜ್ಯುವೆಲ್ಸ್ ವತಿಯಿಂದ ಶಾಲು ಹೊದಿಸಿ, ಫಲ-ಪುಷ್ಪ ಹಾಗೂ ದೇವರ ಚಿನ್ನದ ವಿಗ್ರಹವನ್ನು ನೀಡಿ ಗೌರವಿಸಲಾಯಿತು. ಪಂಚಮಿ ಹೋಟೆಲ್ ಮಾಲಕ ರಿತೇಶ್ ಶೆಟ್ಟಿ, ಗಣೇಶ್ ಮೆಡಿಕಲ್ ಮಾಲಕ ಸತೀಶ್ ಆಳ್ವ ಸೇರಿದಂತೆ ಹಲವು ಪ್ರಮುಖರು ಗೌರವಾರ್ಪಣೆ ಸಲ್ಲಿಸಿದರು.

ಧಾರ್ಮಿಕ ಕ್ಷೇತ್ರಗಳಲ್ಲಿ ಪೂಜೆ: ಜೈನ ಬಸದಿಯಲ್ಲಿ ಜಿತೇಶ್ ಜೈನ್, ದರ್ಶನ್ ಜೈನ್, ಡಾ. ಮಂದಾರ ಜೈನ್ ಹಾಗೂ ಶೀನಣ್ಣ ಅವರ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸನ್ಮಾನಿಸಲಾಯಿತು. ಬಳಿಕ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ದೇವಸ್ಥಾನದ ವತಿಯಿಂದ ಸ ಗೌರವಿಸಲಾಯಿತು.

ದೂರವಾಣಿ ಮೂಲಕ ಶುಭಸಂದೇಶ: ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ, ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಹಾಗೂ ವಿದೇಶದಲ್ಲಿದ್ದ ಉದ್ಯಮಿ, ಎಸ್.ಎಲ್.ವಿ. ಬುಕ್ ಹೌಸ್ ಮಾಲಕ ದಿವಾಕರ್ ದಾಸ್ ಅವರು ವೀಡಿಯೋ ಕಾಲ್ ಮೂಲಕ ಅಶ್ಮಿತ್ ಎ.ಜೆ.ಗೆ ಶುಭಾಶಯ ಕೋರಿದರು.

ಮೆರವಣಿಗೆಯ ಭದ್ರತೆಯ ಉಸ್ತುವಾರಿ ವಹಿಸಿದ್ದ ವಿಟ್ಲ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ವರ್ಗದವರು ವಿಜೇತ ಬಾಲಕನಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸುದರ್ಶನ್ ಪಡಿಯಾರ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ರವಿ ಪ್ರಕಾಶ್ ವಿಟ್ಲ, ಜಯರಾಮ್ ಬಲ್ಲಾಳ್, ರವಿ ವರ್ಮಾ, ತಿಲಕ್ ರಾಜ್ ಶೆಟ್ಟಿ, ಅಶ್ವಿನಿ ಪೆರುವಾಯಿ, ತುಳಸಿ ಶೆಟ್ಟಿ, ವಿಜಿತ್, ವಿನೋದ್ ಕಾಶಿ ಮಠ, ಮೋಹನ್ ಕಟ್ಟೆ, ಪ್ರಭಾಕರ ಅಮೈ, ಕಿಶೋರ್ ಕೋಲ್ಪೆ, ಜನಾರ್ಧನ ಕಾರ್ಯಡಿ, ಶೈಲೇಶ್ ಶೆಟ್ಟಿ, ಯತೀಶ್ ಪೆರುವಾಯಿ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

award

ಮುಂಬೈನಲ್ಲಿ ಸಾರ್ವಜನಿಕ ಸೇವೆ ಮತ್ತು ಫಿಟ್ನೆಸ್ ಸಾಧನೆಯ ಹೈರಾಕ್ಸ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಯಶಸ್ಸು

Published

on

ಮುಂಬೈ: ಆಡಳಿತದ ಬಿಡುವಿಲ್ಲದ ಜವಾಬ್ದಾರಿಗಳ ನಡುವೆಯೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಜಾಗತಿಕ ಮಟ್ಟದ ಪ್ರತಿಷ್ಠಿತ ‘ಹೈರಾಕ್ಸ್’ (HYROX) ಫಿಟ್ನೆಸ್ ರೇಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.

ಮುಂಬೈನ ಎನ್‌ಇಎಸ್‌ಸಿಒ (NESCO) ಹಾಲ್‌ನಲ್ಲಿ ಆಯೋಜನೆಗೊಂಡಿದ್ದ ಈ ಕಠಿಣ ಸ್ಪರ್ಧೆಯಲ್ಲಿ ದೇಶ-ವಿದೇಶಗಳ ಸಾವಿರಾರು ಫಿಟ್ನೆಸ್ ಉತ್ಸಾಹಿಗಳು ಭಾಗವಹಿಸಿದ್ದರು. ಈ ಸಾಹಸಮಯ ರೇಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಮಂಗಳೂರಿನ ಖ್ಯಾತ ಫಿಟ್ನೆಸ್ ತರಬೇತುದಾರ ಹಾಗೂ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಕೂಡ ಸಾಥ್ ನೀಡಿ ಯಶಸ್ಸು ಸಾಧಿಸಿದ್ದಾರೆ.

ಏನಿದು ಹೈರಾಕ್ಸ್ (HYROX)?

ವಿಶ್ವದ ಅತಿದೊಡ್ಡ ಫಿಟ್ನೆಸ್ ರೇಸ್ ಎಂದು ಖ್ಯಾತಿ ಪಡೆದಿರುವ ಹೈರಾಕ್ಸ್, ಅತ್ಯಂತ ಕಠಿಣ ಹಾಗೂ ಸವಾಲಿನ ಸ್ಪರ್ಧೆಯಾಗಿದೆ. ಇದು ಒಟ್ಟು 8 ಕಿ.ಮೀ. ಓಟ ಮತ್ತು 8 ವಿವಿಧ ಫಂಕ್ಷನಲ್ ವರ್ಕೌಟ್ ಸ್ಟೇಷನ್‌ಗಳನ್ನು ಒಳಗೊಂಡಿರುತ್ತದೆ.

ಈ ಸವಾಲಿನಲ್ಲಿ ಸ್ಪರ್ಧಾಳುಗಳು ಸ್ಕೀ ಎರ್ಗ್ (SkiErg), ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪಿ ಬ್ರಾಡ್ ಜಂಪ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್‌ಬ್ಯಾಗ್ ಲುಂಜಸ್ ಮತ್ತು ವಾಲ್ ಬಾಲ್‌ನಂತಹ ಕಠಿಣ ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಂಡಿರುವ ಈ ರೇಸ್, 2025ರ ಮೇ ತಿಂಗಳಲ್ಲಿ ಮುಂಬೈ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿತ್ತು.

ಆಡಳಿತದ ಜೊತೆ ಫಿಟ್ನೆಸ್‌ಗೆ ಒತ್ತು

2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ದರ್ಶನ್ ಎಚ್.ವಿ. ಅವರು 2025ರ ಜೂನ್ 18ರಂದು ದಕ್ಷಿಣ ಕನ್ನಡ ಜಿಲ್ಲೆಯ 134ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ದೈನಂದಿನ ಕಚೇರಿ ಕೆಲಸಗಳು, ಸಾರ್ವಜನಿಕ ಸಮಸ್ಯೆಗಳ ನಿವಾರಣೆ ಹಾಗೂ ಆಡಳಿತಾತ್ಮಕ ಬಿಡುವಿಲ್ಲದ ಒತ್ತಡದ ನಡುವೆಯೂ ಫಿಟ್ನೆಸ್ ಕಾಯ್ದುಕೊಂಡಿರುವ ಇವರ ಹೈರಾಕ್ಸ್ ಸಾಧನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಇವರೊಂದಿಗೆ ಹೆಜ್ಜೆಹಾಕಿದ ಪ್ರದೀಪ್ ಕುಮಾರ್ ಆಚಾರ್ಯ ಅವರು ಮಂಗಳೂರಿನ ಹೆಸರಾಂತ ಪವರ್‌ಲಿಫ್ಟರ್ ಆಗಿದ್ದು, ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರು. ಪ್ರಸ್ತುತ ಮಂಗಳೂರಿನಲ್ಲಿ ನೂರಾರು ಯುವಕರಿಗೆ ಫಿಟ್ನೆಸ್ ತರಬೇತುದಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಜಿಲ್ಲಾ ಆಡಳಿತದ ಚುಕ್ಕಾಣಿ ಹಿಡಿದು ಆರೋಗ್ಯಕರ ಬದುಕಿಗೆ ಮುಂಚೂಣಿಯಲ್ಲಿ ನಿಂತಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಈ ಸಾಧನೆ, ದಕ್ಷಿಣ ಕನ್ನಡ ಜಿಲ್ಲೆಯ ಯುವಜನತೆಗೆ ಫಿಟ್ನೆಸ್ ಮತ್ತು ಶಿಸ್ತಿನ ಬಗ್ಗೆ ದೊಡ್ಡ ಮಟ್ಟದ ಪ್ರೇರಣೆ ನೀಡಿದೆ

Continue Reading

award

ತುಳು ಭಾಷೆಗೆ ಅಧಿಕೃತ ಆಡಳಿತ ಭಾಷೆಯ ಮಾನ್ಯತೆ: ಸಮಸ್ತ ತುಳುವರಿಂದ ಹರ್ಷ; ನುಡಿದಂತೆ ನಡೆದ ಸರಕಾರ – ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹರ್ಷ

Published

on

ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಸರ್ಕಾರವು ನುಡಿದಂತೆ ನಡೆದುಕೊಂಡಿದ್ದು, ಜಗತ್ತಿನಾದ್ಯಂತ ನೆಲೆಸಿರುವ ತುಳು ಭಾಷಿಗರಲ್ಲಿ ಇದು ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಸುಮಾರು 3 ಸಾವಿರ ವರ್ಷಗಳ ಇತಿಹಾಸವಿರುವ ತುಳು ಭಾಷೆಗೆ ಸಿಕ್ಕಿರುವ ಈ ಮಾನ್ಯತೆ ಭಾಷೆಯ ಸಮಗ್ರ ಬೆಳವಣಿಗೆಗೆ ಮೈಲಿಗಲ್ಲಾಗಿದೆ ಎಂದಿದ್ದಾರೆ.

ಪ್ರಮುಖ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ ಅಭಿನಂದನೆ

  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು: ಶಿವರಾಜ್ ಎಸ್. ತಂಗಡಗಿ
  • ಜಿಲ್ಲಾ ಉಸ್ತುವಾರಿ ಸಚಿವರು: ಯು.ಟಿ. ಖಾದರ್
  • ಶಾಸಕರು: ಅಶೋಕ್ ರೈ ಹಾಗೂ ಕರಾವಳಿಯ ಎಲ್ಲಾ ಜನಪ್ರತಿನಿಧಿಗಳು
  • ಇತರರು: ಸರ್ಕಾರಕ್ಕೆ ನಿರಂತರ ಒತ್ತಡ ತಂದ ದೇಶ-ವಿದೇಶದ ಎಲ್ಲಾ ತುಳು ಸಂಘ-ಸಂಸ್ಥೆಗಳು

ಐತಿಹಾಸಿಕ ನಿರ್ಧಾರದ ಹಿನ್ನೆಲೆ

ಈ ಹಿಂದೆ ಡಾ. ಎಂ. ಮೋಹನ್ ಆಳ್ವ ಅವರು ಸಲ್ಲಿಸಿದ ವರದಿ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚಿಸಿದ್ದ ‘ಆಂಧ್ರಪ್ರದೇಶ ಅಧ್ಯಯನ ವರದಿ’ಯ ಆಧಾರದ ಮೇಲೆ ಈ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಗೆ ಅಧಿಕೃತ ಮಾನ್ಯತೆ ನೀಡಿದ ಕಾನೂನು ಪ್ರಕ್ರಿಯೆಗಳ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ತಮಗೆ ಅವಕಾಶ ಸಿಕ್ಕಿFತು ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ನೆನಪಿಸಿಕೊಂಡಿದ್ದಾರೆ. ಈ ವರದಿಯು ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸಿಕೊಡುವಲ್ಲಿ ಪ್ರಮುಖ ದಾಖಲೆಯಾಗಿ ಸಹಕಾರಿಯಾಗಿದೆ ಎಂದರು.

ಮುಂದಿನ ಗುರಿ: ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ

ಕರ್ನಾಟಕ ಸರ್ಕಾರದ ಈ ಚಾರಿತ್ರಿಕ ನಿರ್ಧಾರವು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ತುಳುವರ ದೀರ್ಘಕಾಲದ ಮಹತ್ವದ ಬೇಡಿಕೆ ಈಡೇರುವ ನಿಟ್ಟಿನಲ್ಲಿ ದೊಡ್ಡ ಶಕ್ತಿಯಾಗಲಿದೆ ಎಂದು ಅಕಾಡೆಮಿ ಅಧ್ಯಕ್ಷರು ಆಶಾವಾಹಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Continue Reading

award

ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಐತಿಹಾಸಿಕ ಮಾನ್ಯತೆ: ಕರಾವಳಿಯಲ್ಲಿ ಹಬ್ಬದ ವಾತಾವರಣ

Published

on

ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.

ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಬಲ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಹೊಂದಿರುವ ಅಪೂರ್ವ ಭಾಷೆಯಾಗಿದೆ. ರಾಜ್ಯ ಸರ್ಕಾರದಿಂದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಲಭಿಸಿರುವುದು, ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಹೋರಾಟಕ್ಕೆ ಮತ್ತಷ್ಟು ಪ್ರಬಲ ವೇದಿಕೆಯಾಗಲಿದೆ.

ನಿರಂತರ ಹೋರಾಟಕ್ಕೆ ಸಿಕ್ಕ ಫಲ: ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷಾ ಮಾನ್ಯತೆ ನೀಡಬೇಕೆಂದು ದಶಕಗಳಿಂದ ತುಳು ಸಾಹಿತ್ಯ ಅಕಾಡೆಮಿ, ತುಳು ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತ ಬಂದಿದ್ದರು.

ತಜ್ಞರ ಸಮಿತಿಯ ವರದಿ ಆಧಾರ: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹಿರಿಯ ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಹೊರ ರಾಜ್ಯಗಳಲ್ಲಿನ ಭಾಷಾ ನೀತಿ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ತುಳುವರ ಬಹುಕಾಲದ ಕನಸು ನನಸಾಗಿದ್ದು, ಕರಾವಳಿ ಭಾಗದಲ್ಲಿ ಹರ್ಷೋದ್ಗಾರ ವ್ಯಕ್ತವಾಗಿದೆ.

Continue Reading

Trending

Copyright © 2025 Deevatige