Connect with us

Article

ಕಲ್ಲಡ್ಕ ಜಂಕ್ಷನ್‌ನಲ್ಲಿ ತಪ್ಪದ ನರಕಯಾತನೆ: ಫ್ಲೈಓವರ್ ಬಂದರೂ ಮುಗಿಯದ ಟ್ರಾಫಿಕ್ ಕಿರಿಕಿರಿ!

Published

on

ಕಲ್ಲಡ್ಕ / ಗೋಳ್ತಮಜಲು: ದಶಕಗಳ ಬೇಡಿಕೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಯಿತು, ಫ್ಲೈ ಓವರ್ ಕಾಮಗಾರಿಯೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೆ ಕಲ್ಲಡ್ಕ ಜಂಕ್ಷನ್‌ನಲ್ಲಿ ಸಾರ್ವಜನಿಕರ ನರಕಯಾತನೆ ಮಾತ್ರ ಮುಗಿಯುವ ಲಕ್ಷಣ ಕಾಣುತ್ತಿಲ್ಲ! ರಸ್ತೆ ಬದಿಯ ಅಕ್ರಮ ವ್ಯಾಪಾರ, ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಹಾಗೂ ಹೆದ್ದಾರಿ ಜಾಗದ ಒತ್ತುವರಿಯಿಂದಾಗಿ ಇಡೀ ಕಲ್ಲಡ್ಕ ಪೇಟೆ ದಿನೇ ದಿನೇ ಅವ್ಯವಸ್ಥೆಯ ತಾಣವಾಗುತ್ತಿದೆ.

ಸಮಸ್ಯೆಯ ತೀವ್ರತೆ: ಸಾರ್ವಜನಿಕರು ಎದುರಿಸುತ್ತಿರುವ ಮೂರು ಮುಖ್ಯ ತೊಡಕುಗಳು

1. ರಸ್ತೆಯಲ್ಲೇ ವ್ಯಾಪಾರ – ಅಸ್ತವ್ಯಸ್ತಗೊಳ್ಳುತ್ತಿರುವ ಟ್ರಾಫಿಕ್

ಕಲ್ಲಡ್ಕ ಜಂಕ್ಷನ್ ಹಾಗೂ ಪ್ರಮುಖ ರಸ್ತೆ ಬದಿಗಳಲ್ಲೇ ವಾಹನಗಳನ್ನು ನಿಲ್ಲಿಸಿ ತರಕಾರಿ, ಹಣ್ಣು-ಹಂಪಲು ಹಾಗೂ ಕೋಳಿ ಕ್ರೇಟ್‌ಗಳನ್ನು ಇಟ್ಟು ವ್ಯಾಪಾರ ನಡೆಸಲಾಗುತ್ತಿದೆ. ಇದರೊಂದಿಗೆ ಆಟೋ ರಿಕ್ಷಾಗಳು ಹಾಗೂ ಖಾಸಗಿ ವಾಹನಗಳನ್ನು ನಿಯಮಬಾಹಿರವಾಗಿ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.

2. ಪಂಚಾಯತ್ ಮತ್ತು ಪೊಲೀಸರ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಅಕ್ರಮಗಳನ್ನು ತಡೆಯಬೇಕಾದ ಗೋಳ್ತಮಜಲು ಗ್ರಾಮ ಪಂಚಾಯತ್ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇತ್ತ ಸಂಚಾರಿ ಪೊಲೀಸರು ಮೂಲೆಯಲ್ಲಿ ನಿಂತು ಹೆಲ್ಮೆಟ್, ಸೀಟ್ ಬೆಲ್ಟ್ ಹೆಸರಿನಲ್ಲಿ ದಂಡ ವಸೂಲಿ ಮಾಡುವುದಕ್ಕಷ್ಟೇ ಸೀಮಿತರಾಗಿದ್ದಾರೆ ವಿನಃ, ಕಲ್ಲಡ್ಕ ಜಂಕ್ಷನ್‌ನಲ್ಲಿ ಪ್ರತಿದಿನ ಸಂಭವಿಸುತ್ತಿರುವ ದಟ್ಟಣೆ ಮತ್ತು ಅಸ್ತವ್ಯಸ್ತ ಪಾರ್ಕಿಂಗ್ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ನೇರ ಆರೋಪ.

3. ಹೆದ್ದಾರಿ ಜಾಗ ಆಕ್ರಮಿಸಿ ಅಕ್ರಮ ಕಟ್ಟಡ ನಿರ್ಮಾಣ!

ಹೆದ್ದಾರಿ ಬದಿಯ ಸಾರ್ವಜನಿಕ ಪಾರ್ಕಿಂಗ್ ಸ್ಥಳ ಹಾಗೂ ರಸ್ತೆಯ ಭಾಗವನ್ನು ಆಕ್ರಮಿಸಿಕೊಂಡು ಕಟ್ಟಡವೊಂದರ ಮಾಲೀಕ ತಡೆಬೇಲಿ (Green Sheet) ಹಾಕಿ ಕಾಮಗಾರಿ ನಡೆಸುತ್ತಿದ್ದಾನೆ. ಸಾರ್ವಜನಿಕ ಆಸ್ತಿಯನ್ನು ನುಂಗಿ ನಡೆಸುತ್ತಿರುವ ಈ ಅಕ್ರಮ ಕಾಮಗಾರಿಗೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ.

ಕಾನೂನು ಏನು ಹೇಳುತ್ತದೆ? (ಎಚ್ಚರಿಕೆಯ ಸಂದೇಶ)

ಸಾರ್ವಜನಿಕ ರಸ್ತೆ ಮತ್ತು ಹೆದ್ದಾರಿಗಳನ್ನು ಆಕ್ರಮಿಸಿಕೊಳ್ಳುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ:

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಹಾಗೂ ಸ್ಥಳೀಯ ಸೌಲಭ್ಯ ನಿಯಮಗಳು: ರಸ್ತೆ ಬದಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಅಧಿಕೃತ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವುದು ಸಂಪೂರ್ಣ ಅಕ್ರಮ.

ಭಾರತೀಯ ಮೋಟಾರು ವಾಹನ ಕಾಯ್ದೆ (Motor Vehicles Act): ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡುವುದು ಅಥವಾ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವುದಕ್ಕೆ ಭಾರೀ ದಂಡ ಹಾಗೂ ವಾಹನ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.

ರಾಷ್ಟ್ರೀಯ ಹೆದ್ದಾರಿ ಕಾಯ್ದೆ (National Highways Act, 1956): ಹೆದ್ದಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ಅಥವಾ ತಡೆಬೇಲಿ ನಿರ್ಮಿಸುವುದು ಗುರುತರ ಅಪರಾಧ. ಇಂತಹ ಅಕ್ರಮ ನಿರ್ಮಾಣಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ತೆರವುಗೊಳಿಸಲು ಅಧಿಕಾರಿಗಳಿಗೆ ಪೂರ್ಣ ಅಧಿಕಾರವಿದೆ.

ಸಾರ್ವಜನಿಕರ ಆಗ್ರಹ ಹಾಗೂ ಜಿಲ್ಲಾ ಎಸ್ಪಿಯವರಿಗೆ ಮನವಿ

“ಸಾಮಾನ್ಯ ಜನರ ದಿನನಿತ್ಯದ ನರಳಾಟವನ್ನು ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹಾಗೂ ಸಂಬಂಧಪಟ್ಟ ತಾಲೂಕು/ಪಂಚಾಯತ್ ಆಡಳಿತ ತಕ್ಷಣವೇ ಮಧ್ಯಪ್ರವೇಶಿಸಬೇಕು. ಕಲ್ಲಡ್ಕ ಜಂಕ್ಷನ್‌ನಲ್ಲಿ ರಸ್ತೆ ಆಕ್ರಮಿಸಿಕೊಂಡಿರುವ ವ್ಯಾಪಾರಿಗಳು, ನಿಯಮಬಾಹಿರ ಪಾರ್ಕಿಂಗ್ ಮಾಡುವವರು ಹಾಗೂ ಹೆದ್ದಾರಿ ಜಾಗ ಒತ್ತುವರಿ ಮಾಡಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು.”

— ಪ್ರಜ್ಞಾವಂತ ನಾಗರಿಕರು, ಕಲ್ಲಡ್ಕ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಕರಾವಳಿ ರಾಜಕೀಯದ ಹೊಸ ಸಂಚಲನ – ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಯಾರು ? ಆಡಿಯೋ ವಿವಾದ ಮತ್ತು ಪರಿವಾರದ ಹಿನ್ನೆಲೆ

Published

on

ಕಲ್ಲಡ್ಕ ಪ್ರಭಾಕರ ಭಟ್‌ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಸೌಜನ್ಯ ಮನೆ ಮತ್ತು ತಿಮರೋಡಿ ಮನೆಗೆ ಭೇಟಿ ನೀಡಿ ಸೌಜನ್ಯ ಹೋರಾಟಕ್ಕೆ ಧ್ವನಿಯೆತ್ತಿ ಬೆಂಬಲ ಘೋಷಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ
ಮಂಗಳೂರು: ಕರ್ನಾಟಕದ ಕರಾವಳಿ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಸಂಘ ಪರಿವಾರದ ಪ್ರಮುಖ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ವೈರಲ್ ಆಡಿಯೋ ಒಂದು ತೀವ್ರ ಚರ್ಚೆಗೆ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಬಿರುಸಿಗೆ ಕಾರಣವಾಗಿದೆ. ಬಂಟ್ವಾಳದಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ವಿಎಚ್‌ಪಿ ಮತ್ತು ಬಜರಂಗದಳದಿಂದ ನಡೆದ ಪ್ರತಿಭಟನಾ ಸಭೆಯು ಈ ಎಲ್ಲಾ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಈ ಹಿನ್ನೆಲೆಯಲ್ಲಿ, ಕರಾವಳಿ ರಾಜಕೀಯದ ಪ್ರಮುಖ ಮುಖಂಡರಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ರಾಜಕೀಯ ಮತ್ತು ಸಾಂಸ್ಥಿಕ ಹಿನ್ನೆಲೆ ಏನು, ಈ ವಿವಾದ ಸೃಷ್ಟಿಯಾಗಲು ಕಾರಣವಾದ ಅಂಶಗಳೇನು ಮತ್ತು ಪಕ್ಷದ ಹಿತದೃಷ್ಟಿಯಿಂದ ಅವರು ಎತ್ತಿರುವ ಗಂಭೀರ ಪ್ರಶ್ನೆಗಳೇನು ? ಅವರು ಪ್ರಶ್ನಿಸಲು ಸಮರ್ಥರೇ ? ಪಕ್ಷದಲ್ಲಿ ಅವರು ಏನು ? ಎಂಬ ಸಂಪೂರ್ಣ ನೋಟ ಇಲ್ಲಿದೆ.

ಈ ವಿವಾದದ ಕೇಂದ್ರಬಿಂದುವಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ಪಕ್ಷ ಹಾಗೂ ಸಂಘ ಪರಿವಾರಕ್ಕಾಗಿ ಮೂರು ದಶಕಗಳಿಗೂ ಅಧಿಕ ಕಾಲದಿಂದ ಪ್ರಾಮಾಣಿಕವಾಗಿ ಶ್ರಮಿಸಿರುವ ಧೀಮಂತ ವ್ಯಕ್ತಿಯಾಗಿದ್ದಾರೆ. 1989ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಾಖಾ ಶಿಕ್ಷಕರಾಗಿ ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ ಇವರು, 1990ರ ಅಯೋಧ್ಯೆ ರಾಮಜನ್ಮ ಭೂಮಿ ಮುಕ್ತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತರ ಪ್ರದೇಶದಲ್ಲಿ 15 ದಿನಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದಾರೆ. 1991-92ರಲ್ಲಿ ಕುರ್ನಾಡು ಮಂಡಲದಲ್ಲಿ ಸಂಘದ ವಿಸ್ತಾರಕನಾಗಿ, 1992ರ ಅಯೋಧ್ಯೆ ಕರಸೇವೆಯಲ್ಲಿ, ಮತ್ತು 1992-93ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಗೋಳ್ತಮಜಲು ಮಂಡಲ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ 1993-94ರಲ್ಲಿ ಬಾಳ್ತಿಲ ಗ್ರಾಮ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರಾಗಿಯೂ, 2022ರಿಂದ 3 ವರ್ಷಗಳ ಕಾಲ ಕೇಂದ್ರ ಸರಕಾರದ ದಿಶಾ ಸಮಿತಿಯ ಸದಸ್ಯರಾಗಿಯೂ ಜನ ಸೇವೆಗೈದಿದ್ದಾರೆ.

ಮಾಜಿ ಶಾಸಕ ರುಕ್ಮಯ ಪೂಜಾರಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾಗಿದ್ದ ರಾಧಕೃಷ್ಣ ಅಡ್ಯಂತಾಯರು, ದಿವಂಗತ ಕಲ್ಲಡ್ಕ ರಾಮಪ್ಪ ಪೂಜಾರಿ ಏಳ್ತಿಮಾರ್‌, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸೇರಿದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರವರೆಗಿನ ಎಲ್ಲರ ನೇತೃತ್ವದಲ್ಲಿ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಸಂಚಾಲಕರಾಗಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ಅನುಯಾಯಿಯಾಗಿರುವ ಇವರು, ನೇರ ನಡೆನುಡಿಗೆ ಹೆಸರಾಗಿದ್ದಾರೆ.

ಈ ವಿವಾದ ಪ್ರಸ್ತಾವವಾಗಲು ಮತ್ತು ಕಲ್ಲಡ್ಕ ಅವರ ಆಡಿಯೋ ವೈರಲ್ ಆಗಲು ಬಂಟ್ವಾಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಡೆದ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿವೆ. ಸದರಿ ಸಭೆಯಲ್ಲಿ ಭಾಗವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಅವರು, “ಕರಾವಳಿ ತೀರದವರು ಅವಲಕ್ಕಿ ಪ್ರಿಯರು. ನಮ್ಮ ಬಾಯಲ್ಲಿ ಅವಲಕ್ಕಿ ಇಟ್ಟಂತೆ ನಮ್ಮ ಶಾಸಕರು ಮತ್ತು ಸಂಸದರೂ ಬಾಯಲ್ಲಿ ಅವಲಕ್ಕಿ ತುಂಬಿಕೊಂಡಿದ್ದಾರೆ” ಎಂದು ಸ್ಥಳೀಯ ಜನಪ್ರತಿನಿಧಿಗಳನ್ನು ಕಟುವಾಗಿ ಟೀಕಿಸಿದ್ದರು. ಕರಾವಳಿ ಭಾಗದ ನಾಯಕರ ವಿರುದ್ಧ ಹೊರಗಿನಿಂದ ಬಂದು ಪಾಠ ಮಾಡುವುದನ್ನು ಖಂಡಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಇಷ್ಟು ವರ್ಷಗಳಿಂದ ಸಂಘಪರಿವಾರಕ್ಕಾಗಿ ದುಡಿದ ನಳಿನ್ ಕುಮಾರ್ ಕಟೀಲ್, ಸತ್ಯಜಿತ್ ಹಾಗೂ ಅರುಣ್ ಕುಮಾರ್ ಪುತ್ತಿಲರಂತಹ ನಾಯಕರನ್ನು ಕಡೆಗಣಿಸುತ್ತಿರುವುದನ್ನು ಪ್ರಶ್ನಿಸಿದ್ದರು. ಮುಂದುವರಿದು, ಕಲ್ಲಡ್ಕ ಪ್ರಭಾಕರ ಭಟ್‌ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಅಗ್ರಹ ಮಾಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಅವರ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ದಿಢೀರ್ ಭೇಟಿ ನೀಡಿ ನ್ಯಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಈ ಎಲ್ಲಾ ಬೆಳವಣಿಗೆಗಳ ಮುಂದುವರಿದ ಭಾಗವಾಗಿ, ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ವೈರಲ್ ಆಗಿರುವ ಆಡಿಯೋ ಮೂಲಕ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಕರಾವಳಿ ನಾಯಕರನ್ನು ಹಗುರವಾಗಿ ಮಾತನಾಡಿರುವ ಬಗ್ಗೆ ನನಗೆ ನೋವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಆಂತರಿಕ ವಿಚಾರಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಮುಖಂಡರ ಮೂಲಕ ಬಗೆಹರಿಸಿ ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ನೋಡಿಕೊಂಡಿರುವ ಕಲ್ಲಡ್ಕ ಅವರ ಈ ನೇರ ಎಚ್ಚರಿಕೆಯು, ಕರಾವಳಿ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕುವ ಮತ್ತು ಹೊರಗಿನವರ ಹಸ್ತಕ್ಷೇಪವನ್ನು ಸಹಿಸದ ಆಕ್ರೋಶದ ಪ್ರತಿಬಿಂಬವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Continue Reading

Article

ದೀಪಾವಳಿ ಸಂಭ್ರಮ: ನ.8ರಂದು ಪುತ್ತೂರಿನಲ್ಲಿ ಬೃಹತ್ ‘ಅಶೋಕ ಜನಮನ-2026’ ಕಾರ್ಯಕ್ರಮ

Published

on

  • ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕಳೆಗಟ್ಟಿದ ಪೂರ್ವಭಾವಿ ಸಭೆ
  • ಉಡುಗೊರೆ ಆಯ್ಕೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ: ತಟ್ಟೆ, ಸೀರೆ ಅಥವಾ ಬೆಡ್‌ಶೀಟ್ ಪಡೆಯಬಹುದು
  • ಕಳೆದ 14 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಜನಪ್ರಿಯ ಕಾರ್ಯಕ್ರಮ

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ನವೆಂಬರ್ 8ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅತಿ ವಿಜೃಂಭಣೆಯಿಂದ ‘ಅಶೋಕ ಜನಮನ-2026’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಶಾಸಕರ ಕಚೇರಿ ಸಭಾ ಭವನದಲ್ಲಿ ಸೋಮವಾರ ಶಾಸಕರ ನೇತೃತ್ವದಲ್ಲಿ ನಡೆದ ಟ್ರಸ್ಟ್‌ನ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಲಾಯಿತು.

ಮುಖ್ಯಾಂಶಗಳು:

ಉಡುಗೊರೆಗಳ ವೈವಿಧ್ಯತೆ ಹಾಗೂ ಆಯ್ಕೆ ಸ್ವಾತಂತ್ರ್ಯ: ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ದೀಪಾವಳಿ ವಿಶೇಷ ಉಡುಗೊರೆಯನ್ನು ನೀಡಲಾಗುತ್ತದೆ. ವಿಶೇಷವೆಂದರೆ, ಸಾರ್ವಜನಿಕರು ತಮಗೆ ಇಷ್ಟವಾದ ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ತಟ್ಟೆ, ಸೀರೆ ಮತ್ತು ಬೆಡ್‌ಶೀಟ್‌ಗಳು ಲಭ್ಯವಿದ್ದು, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು.

ಮನೆಮನೆಗೂ ಆಮಂತ್ರಣ: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಖುದ್ದಾಗಿ ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಟ್ರಸ್ಟ್‌ನ ಸದಸ್ಯರು ಗ್ರಾಮಗಳಿಗೆ ತೆರಳಿ ಪ್ರತಿಯೊಬ್ಬರಿಗೂ ಗೌರವಪೂರ್ವಕ ಆಹ್ವಾನ ನೀಡಲಿದ್ದಾರೆ.

ಜಾತಿ-ಮತ-ಪಕ್ಷಾತೀತ ಸಮಾರಂಭ: ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಭೇದಭಾವವಿಲ್ಲದೆ ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿ ಹಬ್ಬವನ್ನು ಆಚರಿಸಬೇಕು ಎಂದು ಶಾಸಕ ಅಶೋಕ್ ರೈ ಸಾರ್ವಜನಿಕರಲ್ಲಿ ಸೌಹಾರ್ದತೆಯ ಮನವಿ ಮಾಡಿದರು.

14 ವರ್ಷಗಳ ಸಾರ್ಥಕ ಸೇವೆ ಮತ್ತು ಜನಮೆಚ್ಚುಗೆ

ಕಳೆದ 14 ವರ್ಷಗಳಿಂದ ನಿರಂತರವಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈ ಎಸ್ಟೇಟ್ಸ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಜನಪರ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರಲಾಗಿದೆ. ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭವಾದ ಈ ನೇರ ಸೇವಾ ಕಾರ್ಯಕ್ರಮ, ಇಂದು ಲಕ್ಷಾಂತರ ಮಂದಿ ಜನಸ್ತೋಮ ಸೇರುವ ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಸಾಂಸ್ಕೃತಿಕ ಹಾಗೂ ಹಬ್ಬದ ಕೂಟವಾಗಿ ಬೆಳೆದು ನಿಂತಿರುವುದು ಶಾಸಕರ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ.

ಗ್ರಾಮ ಸಮಿತಿಗಳ ರಚನೆ ಹಾಗೂ ವ್ಯಾಪಕ ಪ್ರಚಾರ

ಕಾರ್ಯಕ್ರಮದ ಯಶಸ್ಸಿಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ ಸಮಿತಿಗಳು ಹಾಗೂ ಮಹಿಳಾ ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಲ್ಲದೆ, ಪಕ್ಷಭೇದ ಮರೆತು ಸ್ಥಳೀಯ ಗ್ರಾಮಸ್ಥರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. ಅಲ್ಲದೆ, ಪ್ರತಿಯೊಂದು ದೇವಸ್ಥಾನ, ದೈವಸ್ಥಾನ, ಮಸೀದಿ ಮತ್ತು ಚರ್ಚ್‌ಗಳ ವ್ಯಾಪ್ತಿಯಲ್ಲೂ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.

ಪೂರ್ವಭಾವಿ ಸಭೆಯಲ್ಲಿ ಟ್ರಸ್ಟ್‌ನ ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಪದ್ಮನಾಭ ಪೂಜಾರಿ ಸಣ್ಣಗುತ್ತು, ನಿಹಾಲ್ ಪಿ. ಶೆಟ್ಟಿ, ಡಾ. ರಾಜರಾಮ್ ಕೆ.ಬಿ., ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರು, ರಾಮಣ್ಣ ಪಿಳಿಂಜ, ಯೋಗೀಶ್ ಸಾಮಾನಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Continue Reading

Article

ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ ದುಸ್ಥಿತಿ: ಹೆಸರಿಗಷ್ಟೇ ತಾಲೂಕು ಆಸ್ಪತ್ರೆ, ಆಧುನಿಕ ಶೈತ್ಯಾಗಾರ, ಮೂಲಭೂತ ಸೌಕರ್ಯಗಳೇ ಇಲ್ಲದ ಶವಾಗಾರ.!

Published

on

ಬಂಟ್ವಾಳ: ಹೆಸರಿಗೇನೋ ತಾಲೂಕು ಸರ್ಕಾರಿ ಆಸ್ಪತ್ರೆ, ಆದರೆ ಮೂಲಭೂತ ಸೌಕರ್ಯವಿಲ್ಲದೇ ಮೃತರ ವಾರಸುದಾರರು, ಪೊಲೀಸ್ ಸಿಬ್ಬಂದಿ ನರಕಯಾತನೆ ಅನುಭವಿಸುತ್ತಿರುವ ದುಸ್ಥಿತಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ್ದು.

ಪ್ರತಿನಿತ್ಯ ಅಪಘಾತ, ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದರೆ ಮರಣೋತ್ತರ ಪರೀಕ್ಷೆ ನಡೆಯುವುದು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿಯೇ. ಆದರೆ ಇಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ವರದಿ ಬರೆಯಲು ಕುಳಿತುಕೊಳ್ಳಲು ಒಂದು ಬೆಂಚ್ ಕೂಡ ಇಲ್ಲ. ಮೃತರ ಸಂಬಂಧಿಕರು ಗಂಟೆಗಟ್ಟಲೆ ನಿಂತುಕೊಂಡೇ ಕಾಲಹರಣ ಮಾಡಬೇಕಾದ ಸ್ಥಿತಿ.

ಪೊಲೀಸರು ವರದಿ ಬರೆಯಬೇಕಾದರೆ ನೆಲದಲ್ಲಿ ಕುಳಿತುಕೊಳ್ಳಬೇಕು, ಇಲ್ಲದಿದ್ದರೆ ಸಹೋದ್ಯೋಗಿಯ ಬೆನ್ನ ಮೇಲೆ ಫೈಲ್ ಇಟ್ಟು ಬರೆಯುವ ಅನಿವಾರ್ಯತೆ ಇದೆ. ಗ್ರಾಮೀಣ ಆಸ್ಪತ್ರೆಗಳ ಶವಾಗಾರದ ಮುಂದೆ ಕನಿಷ್ಠ ತಗಡಿನ ಮೇಲ್ಛಾವಣಿ, ಕಲ್ಲಿನ ಬೆಂಚ್ ಆದರೂ ಇರುತ್ತದೆ. ಆದರೆ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಅದೂ ಇಲ್ಲ ಎಂದು ಮೃತರ ಸಂಬಂಧಿಕರು ಶಾಸಕರು, ವೈದ್ಯಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ವಠಾರದಲ್ಲಿ ಹುಲ್ಲು, ಗಿಡ-ಪೊದೆಗಳು ಬೆಳೆದು ಇದೇನು ಸಫಾರಿಗೆ ಹೋಗುವ ಮೃಗಾಲಯವೋ ಆಥವಾ ತಾಲೂಕು ಸರ್ಕಾರಿ ಆಸ್ಪತ್ರೆಯೋ ಎಂಬುದು ಅರ್ಥವಾಗುತ್ತಿಲ್ಲ. ಡ್ರೈನೇಜ್ ಕಚಳಚೆ ನೀರು ರಸ್ತೆಯ ಮೇಲೆಯೇ ಬಂದು ಬೀಳುತ್ತಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವುದು ವೈದ್ಯರೋ ಅಥವಾ ಅನಕ್ಷರಸ್ಥರೋ ಎಂಬುದು ಪ್ರಶ್ನಿಸುವಂತಾಗಿದೆ.

ಇಂತಹ ಅವ್ಯವಸ್ಥೆಯ ಬಗ್ಗೆ ಈವರೆಗೆ ಬೆಳಕು ಚೆಲ್ಲದ ಮಾಧ್ಯಮಗಳ ವಿರುದ್ಧವೂ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ತಾಲೂಕು ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶವಾಗಾರದ ಮುಂದೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡುತ್ತಾರೋ ಕಾದು ನೋಡಬೇಕಾಗಿದೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!