Connect with us

Kadaba

ಕಡಬ ತಾಲೂಕಿನ ನೆಲ್ಯಾಡಿ, ಶಿರಾಡಿ, ಸವಣೂರು, ಮರ್ದಾಳ ಗ್ರಾ.ಪಂ.ಗಳಿಗೆ ಲೋಕಾಯುಕ್ತ ದಿಢೀರ್ ದಾಳಿ: ಕಡತಗಳ ತೀವ್ರ ಪರಿಶೀಲನೆ

Published

on

ನೆಲ್ಯಾಡಿ / ಕಡಬ: ರಾಜ್ಯ ಲೋಕಾಯುಕ್ತರ ಆದೇಶದಂತೆ ಕಡಬ ತಾಲೂಕಿನ ನೆಲ್ಯಾಡಿ, ಶಿರಾಡಿ, ಸವಣೂರು ಹಾಗೂ ಬಂಟ್ರ ಮರ್ದಾಳ ಗ್ರಾಮ ಪಂಚಾಯತ್ ಕಚೇರಿಗಳಿಗೆ ನಿನ್ನೆ (ಸೆ. 1) ಲೋಕಾಯುಕ್ತ ಪೊಲೀಸರ ಪ್ರತ್ಯೇಕ ತಂಡಗಳು ದಿಢೀರ್ ಭೇಟಿ ನೀಡಿ ಕಡತ ಹಾಗೂ ದಾಖಲೆಗಳ ತೀವ್ರ ಪರಿಶೀಲನೆ ನಡೆಸಿವೆ.

ನೆಲ್ಯಾಡಿ ಹಾಗೂ ಶಿರಾಡಿ ಗ್ರಾ.ಪಂ.ನಲ್ಲಿ ಪರಿಶೀಲನೆ: ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಲಾಮೂರ್ತಿ ರಾವ್ ಅವರ ನೇತೃತ್ವದಲ್ಲಿ ಅಧಿಕಾರಿಗಳಾದ ನಾಗರಾಜ್, ಪ್ರಸನ್ನ, ಸುದೀಪ್ ಹಾಗೂ ಜಲಾಲ್ ಅವರನ್ನೊಳಗೊಂಡ ತಂಡವು ನಿನ್ನೆ ಬೆಳಿಗ್ಗೆ 10.30ಕ್ಕೆ ನೆಲ್ಯಾಡಿ ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿ ರಾತ್ರಿ 7.45ರ ವರೆಗೆ ಸುದೀರ್ಘ ಪರಿಶೀಲನೆ ನಡೆಸಿತು. ಹಾಗೆಯೇ ಮಂಗಳೂರಿನ ಲೋಕಾಯುಕ್ತ ಪೊಲೀಸರ ತಂಡವು ಶಿರಾಡಿ ಗ್ರಾಮ ಪಂಚಾಯತ್ ಕಚೇರಿಗೆ ಬೆಳಿಗ್ಗೆ 10.30ಕ್ಕೆ ಆಗಮಿಸಿ ರಾತ್ರಿ 7.30ರ ವರೆಗೆ ಕಡತಗಳನ್ನು ತಪಾಸಣೆಗೊಳಪಡಿಸಿತು.

ಸವಣೂರು ಮತ್ತು ಮರ್ದಾಳ ಗ್ರಾ.ಪಂ. ಮೇಲೆಯೂ ದಾಳಿ: ಇತ್ತ ಸವಣೂರು ಗ್ರಾಮ ಪಂಚಾಯತ್‌ನಲ್ಲೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿತು. ಪಂಚಾಯತ್ ಆಡಳಿತದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ (Suo Moto) ದೂರು ದಾಖಲಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಇನ್ನು ಬಂಟ್ರ ಮರ್ದಾಳ ಗ್ರಾಮ ಪಂಚಾಯತ್‌ಗೆ 10 ಜನರ ಲೋಕಾಯುಕ್ತ ಪೊಲೀಸರ ತಂಡ ಭೇಟಿ ನೀಡಿ ಬೆಳಿಗ್ಗೆ 10.30ರಿಂದ ರಾತ್ರಿ ಸುಮಾರು 8 ಗಂಟೆಯವರೆಗೆ ದಾಖಲೆಗಳನ್ನು ತಡಕಾಡಿದೆ.

ಪರಿಶೀಲಿಸಿದ ಪ್ರಮುಖ ದಾಖಲೆಗಳು: ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುದಾನ ಬಳಕೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಬಿಲ್ ಪಾವತಿ, ಸಾರ್ವಜನಿಕ ಅರ್ಜಿಗಳ ವಿಲೇವಾರಿ, ಕಟ್ಟಡ ನಿರ್ಮಾಣ ಪರವಾನಗಿ, 9/11 ಹಾಗೂ ಖಾತಾ ಬದಲಾವಣೆ, ನಗದು ವ್ಯವಹಾರ ಮತ್ತು ಕಚೇರಿ ಹಾಜರಾತಿ ಪುಸ್ತಕಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ತನಿಖೆಗೆ ಒಳಪಡಿಸಿದರು.

ಪರಿಶೀಲನೆ ವೇಳೆ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳು ಅಗತ್ಯ ಮಾಹಿತಿ ಹಾಗೂ ಪೂರಕ ದಾಖಲೆಗಳನ್ನು ಒದಗಿಸಿದರು. ಎಲ್ಲ ದಾಖಲೆಗಳನ್ನು ಕ್ಲಪ್ತ ಸಮಯದಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಲೋಕಾಯುಕ್ತ ಪೊಲೀಸರು ಸೂಚನೆ ನೀಡಿದ್ದಾರೆ. ಲೋಕಾಯುಕ್ತರ ಈ ದಿಢೀರ್ ಭೇಟಿಯಿಂದ ಪಂಚಾಯತ್‌ಗಳಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Agriculture

ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ವಿರೋಧಿಸಿ ಕುಟ್ರುಪ್ಪಾಡಿ, ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆ

Published

on

ಪುತ್ತೂರು: ಕಸ್ತೂರಿ ರಂಗನ್ ವರದಿಯ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಎದುರು ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಎದುರು ಆಕ್ರೋಶ

ನೂರಾರು ಸಂಖ್ಯೆಯಲ್ಲಿ ನೆರೆದ ಸಾರ್ವಜನಿಕರು ಹಾಗೂ ರೈತರು ಪ್ರತಿಭಟನೆ ನಡೆಸಿ, ಬಳಿಕ ಕುಟ್ರುಪ್ಪಾಡಿ ಗ್ರಾಮ ಅಭಿವೃದ್ಧಿ ಅಧಿಕಾರಿ (PDO) ಗೋಪಿನಾಥ್ ಅವರ ಮುಖಾಂತರ ಸರ್ಕಾರಕ್ಕೆ ಆಕ್ಷೇಪಣಾ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರು ಮಾತನಾಡಿ, “ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟದ ಬಾಧಿತ ಪ್ರದೇಶದ ರೈತರು ಸರ್ವನಾಶವಾಗಲಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಕಸಿದುಕೊಂಡು ರೈತರನ್ನು ಒಕ್ಕಲೆಬ್ಬಿಸುವ ಈ ರೈತ ವಿರೋಧಿ ನೀತಿಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು,” ಎಂದು ಆಗ್ರಹಿಸಿದರು.

ಈ ಹಿಂದೆ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ರಾಜ್ಯ ಸರ್ಕಾರ ಬಾಧಿತ ಗ್ರಾಮಗಳಲ್ಲಿ ವಿಶೇಷ ಗ್ರಾಮಸಭೆ ಕರೆದು ಜನಾಭಿಪ್ರಾಯ ಸಂಗ್ರಹಿಸಿ, ವರದಿ ಅನುಷ್ಠಾನ ಮಾಡಬಾರದೆಂದು ನಿರ್ಣಯಿಸಿತ್ತು. ಆದರೂ ಈಗ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರ ಉಪಸ್ಥಿತಿ: ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ಮಲೆನಾಡು ಜನ ಹಿತ ರಕ್ಷಣಾ ಸಮಿತಿಯ ಮುಖಂಡ ಯೋಗೇಂದ್ರ ಬನಾರಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಪ್ರಮುಖರಾದ ಜನಾರ್ದನ ಗೌಡ ಪಣೆಮಜಲು, ಟಿ.ಎಂ. ಮ್ಯಾಥ್ಯು ಮತ್ತಿತರರು ಮಾತನಾಡಿದರು.

ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ, ನ್ಯಾಯವಾದಿಗಳಾದ ಶಿವಪ್ರಸಾದ್ ಪುತ್ತಿ, ರಾಮಚಂದ್ರ ದೇರಾಜೆ, ಪ್ರಮುಖರಾದ ರಮಾನಂದ ಎಣ್ಣೆಮಜಲು, ಸತೀಶ್ ಶೆಟ್ಟಿ ಬೀರುಕ್ಕು, ಶಶಾಂಕ್ ಗೋಖಲೆ, ಚಿದಾನಂದ ಕೊಡೆಂಕಿರಿ, ದೇವಯ್ಯ ಗೌಡ ಪನ್ಯಾಡಿ, ಲೀಲಾವತಿ ಪನ್ಯಾಡಿ, ಜಾನಕಿ ಪಟ್ಟೆ, ಅಚ್ಯುತ ಗೌಡ ದೇರಾಜೆ, ಮಹಮ್ಮದಾಲಿ, ಡಿ.ಬಿ. ಮೋಹನ ಗೌಡ ದೇರಾಜೆ ಹಾಗೂ ಧನಂಜಯ ಕೊಡಂಗೆ ಮತ್ತಿತರರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಧರಣಿ

ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ:

“ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಅಧಿಕಾರಿಗಳು ರೈತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಖಂಡನೀಯ. ರೈತರ ಹಕ್ಕುಪತ್ರ ರದ್ದತಿ ಹಾಗೂ ಒತ್ತುವರಿ ಕುರಿತು ಅಧಿಕಾರಿಗಳು ಮಾಧ್ಯಮಗಳಿಗೆ ಬಹಿರಂಗವಾಗಿ ಮಾಹಿತಿ ನೀಡಬೇಕು,” ಎಂದು ಒತ್ತಾಯಿಸಿದರು.

“ನಾವು 2013ರಿಂದ ನಿರಂತರವಾಗಿ ಪಕ್ಷಾತೀತ ಹಾಗೂ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಅದರ ಪ್ರತಿಫಲವಾಗಿ ಬಾಧಿತ ಪ್ರದೇಶದ ರೈತರ ಜೀವನಾಡಿ ಉಳಿದಿದೆ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗಬೇಕು. ಸುಮಾರು 100 ಗ್ರಾಮಗಳು ಇದರಿಂದ ಬಾಧಿತವಾಗುವ ಸಾಧ್ಯತೆಯಿದ್ದು, ಜನರಿಗೆ ಮಾರಕವಾಗುವ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು,” ಎಂದರು.

ನ್ಯಾಯಾಲಯದ ಆದೇಶಗಳ ಜೊತೆಗೆ ಅಂತಿಮವಾಗಿ ಸರ್ಕಾರದ ಸಂಪುಟದ ನಿರ್ಧಾರವೇ ಪ್ರಮುಖವಾಗಿದ್ದು, ಸರ್ಕಾರ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ಜನರ ಅಭಿಪ್ರಾಯ ಪಡೆಯದೆ ವರದಿಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ರೈತರು, ನಾನಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Continue Reading

crime

ಕಡಬ: ಅಂದರ್-ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ; ಓರ್ವನ ಬಂಧನ, ಕಾರು-ಬೈಕ್ ವಶ

Published

on

ಕಡಬ: ಕಾನೂನುಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಆಟವಾಡುತ್ತಿದ್ದ ಅಡ್ಡೆಯೊಂದರ ಮೇಲೆ ಕಡಬ ಪೊಲೀಸರು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿ, ವಾಹನಗಳು ಹಾಗೂ ನಗದನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಘಟನೆಯ ವಿವರ: ದಿನಾಂಕ 28.08.2026 ರಂದು ಸಂಜೆ ಕಡಬ ಠಾಣಾ ವ್ಯಾಪ್ತಿಯ ಕಡಬ ಹಳೆನೆರೆಂಕಿ ಗ್ರಾಮದ ‘ಕುನ್ನಿಕು’ ಎಂಬಲ್ಲಿ ಮೋಹನದಾಸ್ ರೈ ಎಂಬವರ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಆಟವಾಡಲಾಗುತ್ತಿದೆ ಎಂಬ ಬಗ್ಗೆ ಕಡಬ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಜಂಬುರಾಜ್ ಮಹಾಜನ್ ಅವರಿಗೆ ಸಾರ್ವಜನಿಕರಿಂದ ಖಚಿತ ಮಾಹಿತಿ ಲಭಿಸಿತ್ತು.

ಮಾಹಿತಿಯನ್ನಾಧರಿಸಿ ಉಪನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ತಕ್ಷಣ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ಈ ವೇಳೆ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬಹುತೇಕರು ಪೊಲೀಸರನ್ನು ಕಂಡು ಸ್ಥಳದಿಂದ ಓಡಿ ಪರಾರಿಯಾಗಿದ್ದು, ಕಡಬ ಕುದ್ಮಾರು ನಿವಾಸಿ ಗುರುವ (44) ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳು: ಆಟವಾಡುತ್ತಿದ್ದ ಸ್ಥಳವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಇಸ್ಪೀಟ್ ಕಾರ್ಡ್‌ಗಳು, ಪಣಕ್ಕಿಟ್ಟಿದ್ದ ನಗದು ರೂ. 1,700/- ಹಾಗೂ ಪರಾರಿಯಾದ ಆರೋಪಿಗಳು ಬಿಟ್ಟು ಹೋಗಿದ್ದ 02 ದ್ವಿಚಕ್ರ ವಾಹನಗಳು ಮತ್ತು 01 ಕಾರನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 102/2026, ಕಲಂ 78, 80 KP Act ಮತ್ತು 112 BNS-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Agriculture

ಐತೂರು ರಬ್ಬರ್ ತೋಟದಲ್ಲಿ 6 ಕಾಡಾನೆಗಳ ಹಿಂಡು ಪ್ರತ್ಯಕ್ಷ: ಕಡಬದ ಜನವಸತಿ ಪ್ರದೇಶದಲ್ಲಿ ಆತಂಕ

Published

on

ಕಡಬ: ಬಳ್ಪ ಪರಿಸರದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪಕ್ಕದ ಐತೂರು ಗ್ರಾಮಕ್ಕೆ ಲಗ್ಗೆಯಿಟ್ಟಿದ್ದು, ಕೊರಿಯರ್ ಸಮೀಪದ ರಬ್ಬರ್ ತೋಟದಲ್ಲಿ ಬೀಡುಬಿಟ್ಟಿದೆ. ಇದರಿಂದಾಗಿ ಸ್ಥಳೀಯ ಕೃಷಿಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಭೀತಿ ವ್ಯಕ್ತವಾಗಿದೆ.

ಒಂದು ಮರಿ ಆನೆ ಸೇರಿದಂತೆ ಒಟ್ಟು ಆರು ಕಾಡಾನೆಗಳು ಈ ಹಿಂಡಿನಲ್ಲಿರುವುದು ಕಂಡುಬಂದಿದೆ. ಆರಂಭದಲ್ಲಿ ಬಳ್ಪ ಗ್ರಾಮದ ಪಠೋಳಿ ಭಾಗದಲ್ಲಿ ಕಾಡಾನೆಗಳು ಸಂಚರಿಸಿದ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಬಳಿಕ ಪಠೋಳಿಯಿಂದ ಕಲ್ಕಲ್ ಭಾಗದತ್ತ ತೆರಳಿದ ಆನೆಗಳು, ದಾರಿಯುದ್ದಕ್ಕೂ ಬೈನೆ ಮರಗಳನ್ನು ಮುರಿದು ಹಾಕಿ ಹಾನಿಯುಂಟು ಮಾಡಿದ್ದವು.

ಅಲ್ಲಿಂದ ಮುಂದೆ ಸಾಗಿದ ಆನೆಗಳ ಹಿಂಡು ಎಣ್ಣೆಮಜಲು ಬಳಿಯ ಬೀರಿಕಾಡು ಪ್ರದೇಶದಲ್ಲಿ ಸಂಚರಿಸಿ, ರಾತ್ರಿ ನದಿಯನ್ನು ದಾಟಿ ಐತೂರು ಗ್ರಾಮದ ಏನ್ ಕೂಪ್ ಕ್ವಾಟರ್ಸ್ ಹಾಗೂ ಓಟಕಜೆ ಪರಿಸರದಲ್ಲಿ ಸಮೀಪವಿರುವ ಅರಣ್ಯ ಇಲಾಖೆಯ ರಬ್ಬರ್ ತೋಟಕ್ಕೆ ಪ್ರವೇಶಿಸಿ ಠಿಕಾಣಿ ಹೂಡಿವೆ.

ಸ್ಥಳೀಯರಲ್ಲಿ ಆತಂಕ – ಕಾಡಿಗೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ: ಜನವಸತಿ ಹಾಗೂ ಕೃಷಿ ತೋಟಗಳಿರುವ ಪ್ರದೇಶದಲ್ಲೇ ಕಾಡಾನೆಗಳು ಬೀಡುಬಿಟ್ಟಿರುವುದರಿಂದ ತೋಟದ ಕೆಲಸಗಳಿಗೆ ತೆರಳುವ ಕಾರ್ಮಿಕರು, ಕೃಷಿಕರು ಹಾಗೂ ಶಾಲಾ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಂಟಿಯಾಗಿ ಸಂಚರಿಸದಂತೆ ಹಾಗೂ ಸೂಕ್ತ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಪರಸ್ಪರ ಸಂದೇಶ ರವಾನಿಸುತ್ತಿದ್ದಾರೆ.

ವಿಷಯ ತಿಳಿದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಈಟಿಎಫ್ (ETF) ಪಡೆ ಸ್ಥಳಕ್ಕೆ ಆಗಮಿಸಿದ್ದು, ಕಾಡಾನೆಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಹಿಮ್ಮೆಟ್ಟಿಸಲು ಅಗತ್ಯ ಕಾರ್ಯಾಚರಣೆ ಕೈಗೊಂಡಿದ್ದಾರೆ.

Continue Reading

Trending

Copyright © 2025 Deevatige

error: Content is protected !!