Connect with us

FOREST

ಪುತ್ತೂರು ಬೈಪಾಸ್ ರಸ್ತೆಯಲ್ಲಿ ಪ್ರತ್ಯಕ್ಷಗೊಂಡ ಕಾಡುಕೋಣಗಳು: ಸಾರ್ವಜನಿಕರಲ್ಲಿ ಆತಂಕ, ಅರಣ್ಯ ಇಲಾಖೆಗೆ ಆಗ್ರಹ

Published

on

ಪುತ್ತೂರು, ಸೆ.11: ಪುತ್ತೂರು ಬೈಪಾಸ್ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಎರಡು ಕಾಡುಕೋಣಗಳು ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ಹಾಗೂ ವಾಹನ ಸವಾರರಲ್ಲಿ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

ಬೈಪಾಸ್ ರಸ್ತೆಯ ದುಗ್ಗಮ್ಮ-ದೇರಣ್ಣ ಹಾಲ್ ಸಮೀಪ ಎರಡು ಕಾಡುಕೋಣಗಳು ರಸ್ತೆಗೆ ಅಡ್ಡವಾಗಿ ನಿಂತು ರಾಜಾರೋಷವಾಗಿ ಸಂಚರಿಸಿರುವ ದೃಶ್ಯ ಕಂಡುಬಂದಿದೆ. ಈ ಅನಿರೀಕ್ಷಿತ ದೃಶ್ಯವನ್ನು ಗಮನಿಸಿದ ಕೌಡಿಚ್ಚಾರು ಮೂಲದ ಮುಂಬೈ ಉದ್ಯಮಿಯೊಬ್ಬರು ತಕ್ಷಣವೇ ಮಾಧ್ಯಮಗಳಿಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ.

ಮಾಣಿ-ಮೈಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾಗೂ ಸದಾ ವಾಹನಗಳು ಮತ್ತು ಸಾರ್ವಜನಿಕರ ಓಡಾಟವಿರುವ ಜನನಿಬಿಡ ಪ್ರದೇಶದಲ್ಲೇ ಕಾಡುಕೋಣಗಳು ಪ್ರತ್ಯಕ್ಷಗೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರಾಣಿಗಳು ಯಾವುದೇ ಕ್ಷಣದಲ್ಲಿ ಅಪಾಯ ತಂದೊಡ್ಡಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು, ಅರಣ್ಯ ಇಲಾಖೆಯು ಕೂಡಲೇ ಕಾರ್ಯಪ್ರವೃತ್ತರಾಗಿ ಈ ಕಾಡುಕೋಣಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಕರಿಕೆ: ಕೇರಳ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ; ಓರ್ವನ ಬಂಧನ, 40 ಕೆಜಿ ಮಾಂಸ ವಶ

Published

on

ಕರಿಕೆ ಸಮೀಪದ ಕೇರಳ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕರಿಕೆ ತೋಟಮ್ ನಿವಾಸಿ ಸಿದ್ದು (35) ಬಂಧಿತ ಆರೋಪಿ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಆರೋಪಿಗಳಾದ ಜಿ.ಎಸ್. ವಿನೀಶ್ ಮತ್ತು ವಿಮಲ್ ರಾಜ್ ಪರಾರಿಯಾಗಿದ್ದಾರೆ.

ಕರಿಕೆ ಸಮೀಪದ ತೋಟಮ್ ಬಳಿಯ ಕೇರಳ ಮೀಸಲು ಅರಣ್ಯದ ಗೇರು ತೋಟಿನ ಕಾಟೂರ್ ಕೊಪ್ಪು ಎಂಬಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಆರೋಪಿಯಿಂದ ಒಂದು ನಾಡ ಬಂದೂಕು, ಸುಮಾರು 40 ಕೆಜಿ ಕಡವೆ ಮಾಂಸ ಹಾಗೂ ಬೇಟೆಗೆ ಬಳಸಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾಸರಗೋಡು ವಲಯದ ಅರಣ್ಯ ಅಧಿಕಾರಿಗಳಾದ ರಾಜು ಎಂ.ಪಿ., ಪ್ರಕಾಶ್ ವಿ.ಪಿ. ಹಾಗೂ ಪ್ರವೀಣ್ ಕುಮಾರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿತ್ತು

Continue Reading

arrest

ಯಲ್ಲಾಪುರದಲ್ಲಿ ಅರಣ್ಯ ಸಂಚಾರಿ ದಳ ಭರ್ಜರಿ ಕಾರ್ಯಾಚರಣೆ: 16 ಕೆಜಿ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರು ಜಪ್ತಿ!

Published

on

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ಶಿರಸಿ ಅರಣ್ಯ ಸಂಚಾರಿ ದಳ (FMS) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಜಾಲವನ್ನು ಭೇದಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ವನ್ಯಜೀವಿ ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳು & ವಾಹನಗಳ ವಿವರ:

  • 15.748 ಕೆ.ಜಿ. ತೂಕದ ಪ್ಯಾಂಗೋಲಿನ್ (ಚಿಪ್ಪುಹಂದಿ) ಚಿಪ್ಪುಗಳು
  • 2 ಭಾರತೀಯ ಕಾಡೆಮ್ಮೆ ಕೊಂಬುಗಳು
  • 8 ಹುಲಿ ಉಗುರುಗಳು ಹಾಗೂ 2 ಹುಲಿ ಹಲ್ಲುಗಳು
  • 12 ಚಿರತೆ ಉಗುರುಗಳು ಹಾಗೂ 3 ಚಿರತೆ ಹಲ್ಲುಗಳು
  • 6 ಕಾಡುಹಂದಿ ಹಲ್ಲುಗಳು
  • ಸಾಗಾಟಕ್ಕೆ ಬಳಸಿದ್ದ 1 ಬೈಕ್ ಹಾಗೂ 1 ಸ್ಕೂಟರ್

ಉನ್ನತಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ: APCCF ಮನೋಜ್ ತ್ರಿಪಾಠಿ, IFS ಹಾಗೂ DCF ಸಂದೀಪ್ ಸೂರ್ಯವಂಶಿ, IFS ಅವರ ಮಾರ್ಗದರ್ಶನದಲ್ಲಿ, ACF ರಾಘವೇಂದ್ರ ನಾಯಕ್, RFO ಶಿಲ್ಪಾ ನಾಯಕ್ ಹಾಗೂ ಸಿರ್ಸಿ FMS ತಂಡದ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು: ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳ ಮೂಲ ಯಾವುದು, ಅವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಮತ್ತು ಈ ಜಾಲದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಅರಣ್ಯ ಸಂಚಾರಿ ದಳ ತನಿಖೆ ಮುಂದುವರಿಸಿದೆ. ಈ ಕೃತ್ಯದಲ್ಲಿ ಇನ್ನು ಕೆಲವರು ಭಾಗಿಯಾಗಿರುವುದು ತಿಳಿದುಬಂದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ಬಂಧಿತ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. ವನ್ಯಜೀವಿ ಕಳ್ಳಸಾಗಣೆ ಹಾಗೂ ಅಕ್ರಮ ವ್ಯಾಪಾರ ತಡೆಗೆ ಇಲಾಖೆ ಬದ್ಧವಾಗಿದ್ದು, ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

Continue Reading

Agriculture

ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ವಿರೋಧಿಸಿ ಕುಟ್ರುಪ್ಪಾಡಿ, ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆ

Published

on

ಪುತ್ತೂರು: ಕಸ್ತೂರಿ ರಂಗನ್ ವರದಿಯ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಎದುರು ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಎದುರು ಆಕ್ರೋಶ

ನೂರಾರು ಸಂಖ್ಯೆಯಲ್ಲಿ ನೆರೆದ ಸಾರ್ವಜನಿಕರು ಹಾಗೂ ರೈತರು ಪ್ರತಿಭಟನೆ ನಡೆಸಿ, ಬಳಿಕ ಕುಟ್ರುಪ್ಪಾಡಿ ಗ್ರಾಮ ಅಭಿವೃದ್ಧಿ ಅಧಿಕಾರಿ (PDO) ಗೋಪಿನಾಥ್ ಅವರ ಮುಖಾಂತರ ಸರ್ಕಾರಕ್ಕೆ ಆಕ್ಷೇಪಣಾ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರು ಮಾತನಾಡಿ, “ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟದ ಬಾಧಿತ ಪ್ರದೇಶದ ರೈತರು ಸರ್ವನಾಶವಾಗಲಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಕಸಿದುಕೊಂಡು ರೈತರನ್ನು ಒಕ್ಕಲೆಬ್ಬಿಸುವ ಈ ರೈತ ವಿರೋಧಿ ನೀತಿಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು,” ಎಂದು ಆಗ್ರಹಿಸಿದರು.

ಈ ಹಿಂದೆ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ರಾಜ್ಯ ಸರ್ಕಾರ ಬಾಧಿತ ಗ್ರಾಮಗಳಲ್ಲಿ ವಿಶೇಷ ಗ್ರಾಮಸಭೆ ಕರೆದು ಜನಾಭಿಪ್ರಾಯ ಸಂಗ್ರಹಿಸಿ, ವರದಿ ಅನುಷ್ಠಾನ ಮಾಡಬಾರದೆಂದು ನಿರ್ಣಯಿಸಿತ್ತು. ಆದರೂ ಈಗ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರ ಉಪಸ್ಥಿತಿ: ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ಮಲೆನಾಡು ಜನ ಹಿತ ರಕ್ಷಣಾ ಸಮಿತಿಯ ಮುಖಂಡ ಯೋಗೇಂದ್ರ ಬನಾರಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಪ್ರಮುಖರಾದ ಜನಾರ್ದನ ಗೌಡ ಪಣೆಮಜಲು, ಟಿ.ಎಂ. ಮ್ಯಾಥ್ಯು ಮತ್ತಿತರರು ಮಾತನಾಡಿದರು.

ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ, ನ್ಯಾಯವಾದಿಗಳಾದ ಶಿವಪ್ರಸಾದ್ ಪುತ್ತಿ, ರಾಮಚಂದ್ರ ದೇರಾಜೆ, ಪ್ರಮುಖರಾದ ರಮಾನಂದ ಎಣ್ಣೆಮಜಲು, ಸತೀಶ್ ಶೆಟ್ಟಿ ಬೀರುಕ್ಕು, ಶಶಾಂಕ್ ಗೋಖಲೆ, ಚಿದಾನಂದ ಕೊಡೆಂಕಿರಿ, ದೇವಯ್ಯ ಗೌಡ ಪನ್ಯಾಡಿ, ಲೀಲಾವತಿ ಪನ್ಯಾಡಿ, ಜಾನಕಿ ಪಟ್ಟೆ, ಅಚ್ಯುತ ಗೌಡ ದೇರಾಜೆ, ಮಹಮ್ಮದಾಲಿ, ಡಿ.ಬಿ. ಮೋಹನ ಗೌಡ ದೇರಾಜೆ ಹಾಗೂ ಧನಂಜಯ ಕೊಡಂಗೆ ಮತ್ತಿತರರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಧರಣಿ

ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ:

“ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಅಧಿಕಾರಿಗಳು ರೈತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಖಂಡನೀಯ. ರೈತರ ಹಕ್ಕುಪತ್ರ ರದ್ದತಿ ಹಾಗೂ ಒತ್ತುವರಿ ಕುರಿತು ಅಧಿಕಾರಿಗಳು ಮಾಧ್ಯಮಗಳಿಗೆ ಬಹಿರಂಗವಾಗಿ ಮಾಹಿತಿ ನೀಡಬೇಕು,” ಎಂದು ಒತ್ತಾಯಿಸಿದರು.

“ನಾವು 2013ರಿಂದ ನಿರಂತರವಾಗಿ ಪಕ್ಷಾತೀತ ಹಾಗೂ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಅದರ ಪ್ರತಿಫಲವಾಗಿ ಬಾಧಿತ ಪ್ರದೇಶದ ರೈತರ ಜೀವನಾಡಿ ಉಳಿದಿದೆ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗಬೇಕು. ಸುಮಾರು 100 ಗ್ರಾಮಗಳು ಇದರಿಂದ ಬಾಧಿತವಾಗುವ ಸಾಧ್ಯತೆಯಿದ್ದು, ಜನರಿಗೆ ಮಾರಕವಾಗುವ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು,” ಎಂದರು.

ನ್ಯಾಯಾಲಯದ ಆದೇಶಗಳ ಜೊತೆಗೆ ಅಂತಿಮವಾಗಿ ಸರ್ಕಾರದ ಸಂಪುಟದ ನಿರ್ಧಾರವೇ ಪ್ರಮುಖವಾಗಿದ್ದು, ಸರ್ಕಾರ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ಜನರ ಅಭಿಪ್ರಾಯ ಪಡೆಯದೆ ವರದಿಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ರೈತರು, ನಾನಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Continue Reading

Trending

Copyright © 2025 Deevatige

error: Content is protected !!