court
ಮದುವೆ ನಂಬಿಸಿ ವಂಚನೆ ಪ್ರಕರಣ: ರಾಜಿ ಸಂಧಾನ ಸಂಪೂರ್ಣ ವಿಫಲ; ಮದುವೆಯಾಗಲು ಆರೋಪಿ ಶ್ರೀಕೃಷ್ಣ ಜೆ. ರಾವ್ ನಿರಾಕರಣೆ
- ಸಂತ್ರಸ್ತೆ-ಮಗುವಿನ ಪಾಲನೆಗೆ ಮಾಸಿಕ ₹75,000 | ವಿಚಾರಣೆ ಸೆ.11ಕ್ಕೆ ಮುಂದೂಡಿಕೆ
- ಬೆಂಗಳೂರು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಿಂದ ಮಧ್ಯಂತರ ಆದೇಶ ಮುಂದುವರಿಕೆ
ಬೆಂಗಳೂರು/ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಗೆ ಮಗು ಜನಿಸಿದ ಬಳಿಕ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪ ಎದುರಿಸುತ್ತಿರುವ ನಗರಸಭೆಯ ಮಾಜಿ ಸದಸ್ಯನ ಪುತ್ರ ಶ್ರೀಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.
ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೂ ಆರೋಪಿಯು ಸಂತ್ರಸ್ತೆ ಮತ್ತು ಮಗುವಿನ ಜೀವನಾಂಶ ಹಾಗೂ ಪಾಲನೆಗಾಗಿ ಪ್ರತಿ ತಿಂಗಳು ₹75,000 ಪಾವತಿಸಬೇಕು ಎಂಬ ಮಧ್ಯಂತರ ಆದೇಶವನ್ನು ನ್ಯಾಯಪೀಠ ಮುಂದುವರಿಸಿದೆ.
ರಾಜಿ ಸಂಧಾನ ಪ್ರಯತ್ನ ಸಂಪೂರ್ಣ ವಿಫಲ
ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಾಗಿ ಆರೋಪಿ ಪರ ವಕೀಲರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ, ಹೈಕೋರ್ಟ್ ಜೂನ್ 19ರಂದು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಉಲ್ಲೇಖಿಸಿತ್ತು. ಪದಾಂಕಿತ ಹಿರಿಯ ವಕೀಲೆ ಎಸ್. ಸುಶೀಲ ಅವರನ್ನು ಮಧ್ಯಸ್ಥಿಕೆದಾರರಾಗಿ ನೇಮಕ ಮಾಡಲಾಗಿತ್ತು.
ಮಧ್ಯಸ್ಥಿಕೆ ಕೇಂದ್ರದಲ್ಲಿ ಸಂತ್ರಸ್ತೆ, ಆಕೆಯ ತಾಯಿ ಹಾಗೂ ಆರೋಪಿ ಶ್ರೀಕೃಷ್ಣ ಜೆ. ರಾವ್ ಅವನ ತಂದೆ ಪಿ.ಜಿ.ಜಗನ್ನೀವಾಸ ರಾವ್ ಮತ್ತು ಚಂದ್ರಶೇಖರ ರಾವ್ ಮದ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಿದ್ದರು. ಕುಟುಂಬಸ್ಥರು ನೇರವಾಗಿ ಹಾಜರಾಗಿದ್ದರೆ, ಆರೋಪಿ ಶ್ರೀಕೃಷ್ಣ ಜೆ. ರಾವ್ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ. ಈ ವೇಳೆ ನಡೆದ ಮಾತುಕತೆಯಲ್ಲಿ ಸಂತ್ರಸ್ತೆಯನ್ನು ಮದುವೆಯಾಗಲು ಆರೋಪಿಯು ಸ್ಪಷ್ಟವಾಗಿ ನಿರಾಕರಿಸಿದ ಕಾರಣ, ರಾಜಿ ಸಂಧಾನದ ಪ್ರಯತ್ನ ವಿಫಲಗೊಂಡಿದೆ. ಈ ಕುರಿತು ಮಧ್ಯಸ್ಥಿಕೆದಾರರು ನ್ಯಾಯಪೀಠಕ್ಕೆ ಅಧಿಕೃತ ವರದಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ನಗರಸಭೆಯ ಮಾಜಿ ಸದಸ್ಯ ಪಿ.ಸಿ. ಜಗನ್ನಾಥ ರಾವ್ ಅವರ ಮಗ ಶ್ರೀಕೃಷ್ಣ ಜೆ. ರಾವ್, ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಯುವತಿ ಗರ್ಭಿಣಿಯಾಗಿದ್ದು, ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಜನಿಸಿದ ನಂತರ ಆರೋಪಿಯು ಆಕೆಯನ್ನು ಮದುವೆಯಾಗಲು ನಿರಾಕರಿಸಿ ವಂಚಿಸಿದ್ದ.
ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಕಲಂ 64(2)(M) ಹಾಗೂ ಬಿಎನ್‌ಎಸ್ ಕಾಯ್ದೆಯ ಕಲಂ 69 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಆತ ಜಾಮೀನಿನ ಮೇಲೆ ಹೊರಗಿದ್ದು, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಹೈಕೋರ್ಟ್‌ನ ಕಟ್ಟುನಿಟ್ಟಿನ ಷರತ್ತು
ತನ್ನ ವಿರುದ್ಧದ ಕ್ರಿಮಿನಲ್ ನಡಾವಳಿಗಳನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಶ್ರೀಕೃಷ್ಣ ಜೆ. ರಾವ್, ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಕಟ್ಟುನಿಟ್ಟಿನ ಷರತ್ತಿನೊಂದಿಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ನ್ಯಾಯಪೀಠದ ಪ್ರಮುಖ ವೀಕ್ಷಣೆ:
“ಒಂದು ವೇಳೆ ಈ ಪ್ರಕರಣವು ಕೇವಲ ಇಬ್ಬರ ನಡುವಿನ ಒಮ್ಮತದ ಸಂಬಂಧವಾಗಿದ್ದು, ಮಗು ಜನಿಸುವ ಹಂತಕ್ಕೆ ತಲುಪದೆ ಇದ್ದಿದ್ದರೆ ಹಾಗೂ ತಾಯಿ-ಮಗು ಸಂಕಷ್ಟಕ್ಕೆ ಸಿಲುಕದೆ ಇದ್ದಿದ್ದರೆ ಪ್ರಕರಣದ ನಡಾವಳಿಗೆ ಸಂಪೂರ್ಣ ತಡೆ ನೀಡಬಹುದಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಆರೋಪಿಯ ಕೃತ್ಯಗಳಿಂದಾಗಿ ಸಂತ್ರಸ್ತೆ ಮತ್ತು ಮಗು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಪೋಷಕರೂ ಮಗುವನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ಪ್ರಕರಣ ಇತ್ಯರ್ಥವಾಗುವವರೆಗೆ ಆರೋಪಿಯು ಸಂತ್ರಸ್ತೆ ಮತ್ತು ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು ₹75,000 ನೀಡಲೇಬೇಕು.”
ರಾಜಿ ಸಂಧಾನ ಪ್ರಕ್ರಿಯೆ ವಿಫಲವಾಗಿರುವ ಹಿನ್ನೆಲೆಯಲ್ಲಿ, ಹೈಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11ರಂದು ಸಂಜೆ 4:00ಕ್ಕೆ ನಿಗದಿಪಡಿಸಿದೆ.

Bantawala
ಬಂಟ್ವಾಳ: ಪೋಕ್ಸೋ ಪ್ರಕರಣ ಸಾಬೀತು – ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ
ಮಂಗಳೂರು: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಗಂಭೀರ ಸ್ವರೂಪದ ಪೋಕ್ಸೋ ಪ್ರಕರಣದಲ್ಲಿ ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದ್ದು, ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (FTSC-2) ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ಅಬ್ದುಲ್ ಲತಿಫ್ ಶಿಕ್ಷೆಗೊಳಗಾದ ಅಪರಾಧಿ. ಈ ಪ್ರಕರಣದಲ್ಲಿ ಒಟ್ಟು ಮೂವರ ವಿರುದ್ಧ ಆರೋಪವಿದ್ದು, ಪ್ರಮುಖ ಆರೋಪಿಯ ದೋಷವು ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಪ್ರಕರಣದ ಹಿನ್ನೆಲೆ ಮತ್ತು ತನಿಖೆ:
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಧಿಸೂಚನೆ ಸಂಖ್ಯೆ 141/2025 ರ ಅಡಿಯಲ್ಲಿ ಪೋಕ್ಸೋ ಕಾಯ್ದೆ-2012ರ ಕಲಂ: 4, 6, 8, 12, 19(1)(b), 21 ಹಾಗೂ BNS-2023ರ ಕಲಂ: 64(2)(f), 75 r/w 3(5) ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಅರಿತುಕೊಂಡ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಹಾಗೂ ತನಿಖಾಧಿಕಾರಿ ಅನಂತ ಪದ್ಮನಾಭ ಅವರು ಕೂಲಂಕಷವಾಗಿ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು:
ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (FTSC-2) ನಡೆದ ವಿಚಾರಣೆಯ ಸಂದರ್ಭದಲ್ಲಿ, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಸಾಕ್ಷಿಗಳನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಮಾನು ಕೆ.ಎಸ್. ಅವರು, ಆರೋಪಿ ಅಬ್ದುಲ್ ಲತಿಫ್‌ನ ಕೃತ್ಯವು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಿನಾಂಕ 19.09.2026 ರಂದು ಈ ಕೆಳಗಿನ ಶಿಕ್ಷೆಯನ್ನು ಪ್ರಕಟಿಸಿ ಆದೇಶಿಸಿದ್ದಾರೆ:
- ಕಾರಾಗೃಹ ವಾಸ: 20 ವರ್ಷಗಳ ಕಠಿಣ ಕಾರಾಗೃಹ ವಾಸ.
- ದಂಡದ ಮೊತ್ತ: ರೂ. 80,000/- (ಎಂಭತ್ತು ಸಾವಿರ ರೂಪಾಯಿಗಳು).
ತ್ವರಿತ ತನಿಖೆ ಮತ್ತು ಸಮರ್ಥ ವಾದ ಮಂಡನೆಯ ಮೂಲಕ ಅಪರಾಧಿಗೆ ತಕ್ಕ ಶಿಕ್ಷೆ ದೊರೆಯುವಂತೆ ಮಾಡಿದ ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
court
ಎಸ್‌ಪಿಗಳಿಗೆ ಗಡಿಪಾರು ಅಧಿಕಾರವಿಲ್ಲ: ರಾಜ್ಯ ಸರ್ಕಾರದ ಸುತ್ತೋಲೆ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಕರ್ನಾಟಕ ಪೊಲೀಸ್ ಕಾಯ್ದೆಯಡಿ ವ್ಯಕ್ತಿಗಳನ್ನು ಗಡಿಪಾರು ಮಾಡುವ ಅಧಿಕಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿ) ವಹಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಉಚ್ಚ ನ್ಯಾಯಾಲಯ ತಡೆ ನೀಡಿದ್ದು, ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ:
2025ರ ನವೆಂಬರ್ 18ರಂದು ರಾಜ್ಯ ಸರ್ಕಾರವು ಎಸ್‌ಪಿಗಳಿಗೆ ಗಡಿಪಾರು ಅಧಿಕಾರ ನೀಡಿ ಸುತ್ತೋಲೆ ಹೊರಡಿಸಿತ್ತು. ಈ ಅಧಿಸೂಚನೆಯನ್ನಾಧರಿಸಿ ಬೆಳಗಾವಿ ಎಸ್‌ಪಿ ಅವರು 2026ರ ಏಪ್ರಿಲ್ 28ರಂದು ನಿಪ್ಪಾಣಿ ತಾಲೂಕಿನ ಚಂದ್ರಕಾಂತ ಶಂಕರ ವಡ್ಡರ್ ಎಂಬುವವರನ್ನು ಗಡಿಪಾರು ಮಾಡಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರಕಾಂತ ಅವರು ಹೈಕೋರ್ಟ್ ಧಾರವಾಡ ಪೀಠದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಪ್ರಮುಖ ತೀರ್ಪು ನೀಡಿದೆ.
ಹೈಕೋರ್ಟ್ ನೀಡಿದ ಪ್ರಮುಖ ಸ್ಪಷ್ಟನೆಗಳು:
ಕಾಯ್ದೆ ಮೀರಲು ಬಾರದು: ಪೊಲೀಸ್ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ನಿರ್ದಿಷ್ಟ ಪ್ರಾಧಿಕಾರಗಳನ್ನು ಹೊರತುಪಡಿಸಿ, ಕೇವಲ ಕಾರ್ಯಾಂಗದ ಆದೇಶ/ಸುತ್ತೋಲೆಯ ಮೂಲಕ ಎಸ್‌ಪಿಗಳಿಗೆ ಗಡಿಪಾರು ಮಾಡುವ ಅಧಿಕಾರ ವರ್ಗಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಗೆಜೆಟ್ ಪ್ರಕಟಣೆಯಿಲ್ಲ: ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಅಧಿಕೃತ ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಿರಲಿಲ್ಲ. ಕಾಯ್ದೆಯ ಪ್ರಕಾರ ಗೆಜೆಟ್‌ನಲ್ಲಿ ಪ್ರಕಟಗೊಳ್ಳದ ಯಾವುದೇ ಅಧಿಸೂಚನೆಗೆ ಕಾನೂನು ಮಾನ್ಯತೆ ಇರುವುದಿಲ್ಲ. ಹೀಗಾಗಿ ಬೆಳಗಾವಿ ಎಸ್‌ಪಿ ಹೊರಡಿಸಿದ್ದ ಗಡಿಪಾರು ಆದೇಶಕ್ಕೆ ಯಾವುದೇ ಸಿಂಧುತ್ವವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಕಾನೂನಾತ್ಮಕವಾಗಿ ಗಡಿಪಾರು ಅಧಿಕಾರ ಯಾರಿಗಿದೆ?
ನ್ಯಾಯಾಲಯದ ಸ್ಪಷ್ಟನೆ ಪ್ರಕಾರ, ಪೊಲೀಸ್ ಕಾಯ್ದೆಯಡಿ ಗಡಿಪಾರು ಆದೇಶ ಹೊರಡಿಸಲು ಈ ಕೆಳಗಿನ ಅಧಿಕಾರಿಗಳಿಗೆ ಮಾತ್ರ ಶಾಸನಬದ್ಧ ಅಧಿಕಾರವಿರುತ್ತದೆ:
ಕಮಿಷನರೇಟ್ ವ್ಯಾಪ್ತಿ: ಬೆಂಗಳೂರು ನಗರ ಸೇರಿದಂತೆ ಪೊಲೀಸ್ ಕಮಿಷನರೇಟ್ ಒಳಪಡುವ ಪ್ರದೇಶಗಳಲ್ಲಿ ಪೋಲಿಸ್ ಕಮಿಷನರ್‌ಗೆ ಮಾತ್ರ ಅಧಿಕಾರವಿರುತ್ತದೆ.
ಇತರ ಜಿಲ್ಲಾ ವ್ಯಾಪ್ತಿ: ಕಮಿಷನರೇಟ್ ಹೊರತಾದ ಪ್ರದೇಶಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು (ಡಿಸಿ) ಹಾಗೂ ಉಪ ವಿಭಾಗಾಧಿಕಾರಿಗಳಿಗೆ (ಎಸಿ) ಮಾತ್ರ ಗಡಿಪಾರು ಮಾಡುವ ಅಧಿಕಾರವಿದೆ.
BJP
ಮಹಿಳಾ ಪಿಎಸ್‌ಐ ಕಪಾಳಕ್ಕೆ ಹೊಡೆದ ಬಿಜೆಪಿ ಶಾಸಕನ ಪುತ್ರಿ ಐಶ್ವರ್ಯಗೆ ನಿರೀಕ್ಷಣಾ ಜಾಮೀನು ವಜಾ
ಶ್ರೀರಂಗಪಟ್ಟಣ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶ್ರೀರಂಗಪಟ್ಟಣದ ಸ್ಥಳೀಯ ನ್ಯಾಯಾಲಯ ವಜಾಗೊಳಿಸಿದೆ.
ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯಾದೇವಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಭದ್ರತಾ ಕರ್ತವ್ಯದಲ್ಲಿದ್ದ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ಸವಿತಾ ಬಿ. ಪಾಟೀಲ್ ಅವರ ಮೇಲೆ ಈ ಹಲ್ಲೆ ನಡೆದಿತ್ತು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ದೂರು ದಾಖಲಾಗಿತ್ತು. ಬಂಧನದ ಭೀತಿಯಲ್ಲಿದ್ದ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸದ್ಯ ನ್ಯಾಯಾಲಯ ತಿರಸ್ಕರಿಸಿದೆ.
ಘಟನೆಯ ಹಿನ್ನೆಲೆ:
ಭೀಮನ ಅಮಾವಾಸ್ಯೆಯಂದು ದೇವಾಲಯಕ್ಕೆ ಭಕ್ತರ ದಂಡೇ ಹರಿದುಬಂದಿದ್ದರಿಂದ ಎಸ್‌ಐ ಸವಿತಾ ಪಾಟೀಲ್ ಭದ್ರತಾ ಕರ್ತವ್ಯದಲ್ಲಿದ್ದರು. ಸಂಜೆ ಸುಮಾರು 4 ಗಂಟೆಗೆ ದೇಗುಲಕ್ಕೆ ಆಗಮಿಸಿದ ಐಶ್ವರ್ಯ, ಗರ್ಭಗುಡಿಗೆ ನೇರವಾಗಿ ಪ್ರವೇಶ ನೀಡುವಂತೆ ಕೋರಿದ್ದರು. ಆದರೆ ಸಾಲಿನಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಧಿಕಾರಿ ಸವಿತಾ ನೇರ ದರ್ಶನಕ್ಕೆ ನಿರಾಕರಿಸಿದ್ದರು.
ಇದರಿಂದ ಕುಪಿತಗೊಂಡ ಐಶ್ವರ್ಯ, “ನಾನು ಪೊಲಿಟಿಕಲ್ ಲೀಡರ್ ಮಗಳು, ಡಿವೈಎಸ್‌ಪಿ ಹೆಂಡತಿ. ನನ್ನನ್ನೇ ಕಾಯಿಸುತ್ತೀಯಾ?” ಎಂದು ಏರುಧ್ವನಿಯಲ್ಲಿ ಗದರಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಮವಸ್ತ್ರದಲ್ಲಿದ್ದ ಮಹಿಳಾ ಅಧಿಕಾರಿಯ ಕಪಾಳಕ್ಕೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಹಿರಂಗ ಕ್ಷಮೆಯಾಚಿಸಿದ್ದ ಶಾಸಕ ಸುರೇಶ್ ಗೌಡ:
ಪುತ್ರಿಯ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಶಾಸಕ ಬಿ. ಸುರೇಶ್ ಗೌಡ ಅವರು ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. “ನನ್ನ ಮಗಳು ಸಣ್ಣ ಮಕ್ಕಳೊಂದಿಗೆ ದೇವಾಲಯಕ್ಕೆ ತೆರಳಿದ್ದಾಗ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ. ಸಾರ್ವಜನಿಕ ಜೀವನದಲ್ಲಿರುವ ನಾವು ಹೀಗೆ ವರ್ತಿಸಬಾರದಿತ್ತು. ಮಗಳ ತಪ್ಪಿಗೆ ನಾನೇ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ” ಎಂದು ಅವರು ಹೇಳಿಕೆ ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಶ್ವರ್ಯ ಅವರನ್ನು ವಿಚಾರಣೆಗೊಳಪಡಿಸಿದ್ದರೂ ಬಂಧಿಸಿರಲಿಲ್ಲ. ಇದೀಗ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದರಿಂದ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.
-
accident1 month agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
