Connect with us

BANK

₹923 ಕೋಟಿ ವ್ಯವಹಾರ, ₹2.85 ಕೋಟಿ ಲಾಭ,12% ಡಿವಿಡೆಂಟ್‌, 4 ಅಮೃತ ಯೋಜನೆ: ಇಡ್ಕಿದು ಸಹಕಾರಿ ಸಂಘದ ದಾಖಲೆ ಸಾಧನೆ; ಕೇವಲ ಲಾಭಗಳಿಕೆಯಲ್ಲ, ಬದುಕಿನೊಂದಿಗೆ ಬೆಸೆದುಕೊಂಡ ಸಹಕಾರ

Published

on

ಆರೋಗ್ಯ, ಶಿಕ್ಷಣ, ಜಲ, ಉದ್ಯೋಗ: ‘ನಾಲ್ಕು ಅಮೃತ’ ಯೋಜನೆಗಳ ಮೂಲಕ ದಕ್ಷಿಣ ಕನ್ನಡದ ಸಹಕಾರಿ ಕ್ಷೇತ್ರದಲ್ಲಿ ಇಡ್ಕಿದು ಹೊಸ ಕ್ರಾಂತಿ! ಠೇವಣಿಗೆ ಭದ್ರತೆ, ಬದುಕಿಗೆ ನೆರವು: ₹2.85 ಕೋಟಿ ಲಾಭದೊಂದಿಗೆ ಸದಸ್ಯರಿಗೆ ಶೇಕಡಾ12 ಡಿವಿಡೆಂಟ್ ನೀಡುವ ಮೂಲಕ ಮಾದರಿಯಾದ ಇಡ್ಕಿದು ಸೇವಾ ಸಹಕಾರಿ ಸಂಘ.

ಇಡ್ಕಿದು (ಬಂಟ್ವಾಳ): “ಸಂಘವು ಕೇವಲ ಲಾಭ ಗಳಿಸುವ ಸಂಸ್ಥೆಯಾಗಿರದೆ, ಸದಸ್ಯರ ಬದುಕಿನೊಂದಿಗೆ ಬೆಸೆದುಕೊಂಡಿರುವ ಜನಪರ ಸಂಸ್ಥೆಯಾಗಬೇಕು ಎಂಬುದು ನಮ್ಮ ಆಶಯ. ಬ್ಯಾಂಕಿಂಗ್‌ ವ್ಯವಹಾರದ ಜೊತೆಗೆ ಸಾಮಾಜಿಕ ಬದ್ಧತೆಯನ್ನೂ ಸಮನ್ವಯಗೊಳಿಸಿಕೊಂಡು ಮುನ್ನಡೆಯುವುದೇ ನಮ್ಮ ನಿಜವಾದ ಬಂಡವಾಳ” ಎಂದು ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು ಪ್ರತಿಪಾದಿಸಿದ್ದಾರೆ.

ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿ ಶತಾಮೃತದಲ್ಲಿ ನಡೆದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ಶಿಸ್ತು ಹಾಗೂ ಸದಸ್ಯರ ನಿರಂತರ ವಿಶ್ವಾಸದಿಂದ ಸಂಘವು ಈ ಬಾರಿ ಗಮನಾರ್ಹ ಸಾಧನೆ ದಾಖಲಿಸಿದೆ ಎಂದರು.

107 ವರ್ಷಗಳ ಇತಿಹಾಸ, ಅಪೆಕ್ಸ್ ಬ್ಯಾಂಕ್‌ ಪ್ರಶಸ್ತಿಯ ಗರಿ!

ಸಂಘದ ಐತಿಹಾಸಿಕ ಪಯಣವನ್ನು ಸ್ಮರಿಸಿದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು, “107 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸಂಘವು ಪ್ರಸ್ತುತ 4,185 ‘ಎ’ ತರಗತಿಯ ಸದಸ್ಯರನ್ನು ಹೊಂದಿದೆ. ಬ್ಯಾಂಕಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಸಾಧಿಸಿದ ಅತ್ಯುತ್ತಮ ಪ್ರಗತಿ ಹಾಗೂ ಸಾಮಾಜಿಕ ಸೇವೆಗಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಿಂದ ‘ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ’ ಲಭಿಸಿದೆ. ಜೊತೆಗೆ ಹಲವು ವರ್ಷಗಳಿಂದ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರಶಸ್ತಿಯನ್ನೂ ಪಡೆದುಕೊಂಡಿರುವ ಹೆಗ್ಗಳಿಕೆ ನಮ್ಮ ಸಂಸ್ಥೆಯದ್ದಾಗಿದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲೇ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದಲ್ಲಿ ‘ಸಹಕಾರಿ ಪಥ’ ಎಂಬ ಸರ್ವಋತು ರಸ್ತೆಯನ್ನು ನಿರ್ಮಿಸಿದ ಕೀರ್ತಿಯೂ ಇಡ್ಕಿದು ಸಂಘಕ್ಕೆ ಸಲ್ಲುತ್ತದೆ” ಎಂದರು.

₹923 ಕೋಟಿಗೂ ಅಧಿಕ ಬೃಹತ್ ವ್ಯವಹಾರ: ಸಾಧನೆಯ ಹೆಜ್ಜೆ

ಸಂಘವು ಪ್ರಸ್ತುತ 2025-26ನೇ ಸಾಲಿನಲ್ಲಿ ₹923.42 ಕೋಟಿ ಒಟ್ಟು ವ್ಯವಹಾರ ನಡೆಸಿ, ₹2.85 ಕೋಟಿ ನಿವ್ವಳ ಲಾಭ ಗಳಿಸಿದೆ. ಜೊತೆಗೆ ₹121 ಕೋಟಿ ಠೇವಣಿ ಹಾಗೂ ₹4.45 ಕೋಟಿ ಷೇರು ಬಂಡವಾಳ ಹಾಗೂ ವಿವಿಧ ಮೀಸಲು ವಿಧಿಗಳಲ್ಲಿ 8,76, ಕೋಟಿ ಹೊಂದುವ ಮೂಲಕ ಅತ್ಯಂತ ಭದ್ರ ಆರ್ಥಿಕ ಅಡಿಪಾಯವನ್ನು ಪ್ರದರ್ಶಿಸಿದೆ. ಸಂಘವು ಇಡ್ಕಿದು ಮತ್ತು ಕುಳ ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಿತ್ತೂರು, ಸೂರ್ಯ, ಕುಳ ಹಾಗೂ ಕಬಕ ಅಡ್ಯಾಲುಕರೆಯಲ್ಲಿ 4 ಶಾಖೆಗಳನ್ನು ಹೊಂದಿದೆ. ವಿಶೇಷವೆಂದರೆ ಈ ಎಲ್ಲಾ ಶಾಖೆಗಳೂ ಸ್ವಂತ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿವೆ. “ಸದಸ್ಯರು ವಿಶ್ವಾಸವಿಟ್ಟು ಇಟ್ಟಿರುವ ಠೇವಣಿ ಹಣವನ್ನು ಸುರಕ್ಷಿತವಾಗಿ, ನಿಯಮಬದ್ಧವಾಗಿ ಮತ್ತು ಜವಾಬ್ದಾರಿಯಿಂದ ನಿರ್ವಹಿಸುವುದೇ ಆಡಳಿತ ಮಂಡಳಿಯ ಮೊದಲ ಆದ್ಯತೆ” ಎಂದು ಅವರು ಸ್ಪಷ್ಟಪಡಿಸಿ, ಸಂಸ್ಥೆಯ ಈ ಶರವೇಗದ ಬೆಳವಣಿಗೆಯ ಹಿಂದೆ ಹಿರಿಯರು ಹಾಕಿಕೊಟ್ಟ ಅಡಿಪಾಯ, ನಿರ್ದೇಶಕ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಪರಿಶ್ರಮ ಪ್ರಮುಖ ಪಾತ್ರ ವಹಿಸಿದೆ ಎಂದು ಅಧ್ಯಕ್ಷರು ಸ್ಮರಿಸಿದರು.

ಇಡ್ಕಿದು ಸೇವಾ ಸಹಕಾರಿ ಸಂಘವು ಆರ್ಥಿಕ ಪ್ರಗತಿಯ ಜೊತೆಗೆ ‘ಆರೋಗ್ಯಾಮೃತ’, ‘ವಿದ್ಯಾಮೃತ’, ‘ಜಲಜಾಗೃತಿ’ ಮತ್ತು ‘ಉದ್ಯೋಗಾಮೃತ’ ಎಂಬ ನಾಲ್ಕು ಕ್ರಾಂತಿಕಾರಿ ಯೋಜನೆಗಳ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿದೆ

ಬ್ಯಾಂಕಿಂಗ್ ಸೇವೆಗಳ ಜೊತೆಗೆ ಯಶಸ್ವಿನಿ ಆರೋಗ್ಯ ವಿಮೆ, ಬೆಳೆ ವಿಮೆ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸಕಾಲದಲ್ಲಿ ಸದಸ್ಯರಿಗೆ ತಲುಪಿಸುತ್ತಿರುವ ಇಡ್ಕಿದು ಸೇವಾ ಸಹಕಾರಿ ಸಂಘವು, ಆರ್ಥಿಕ ಬೆಳವಣಿಗೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಾ ಜಿಲ್ಲೆಯಲ್ಲೇ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಸಹಕಾರಿ ಪಥಕ್ಕೆ ಮೆಚ್ಚುಗೆ: ಸದಸ್ಯರಿಂದ ಹಲವು ಮಹತ್ವದ ಸಲಹೆಗಳು

ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರು ಇಡ್ಕಿದು ಸೇವಾ ಸಹಕಾರಿ ಸಂಘದ ವಿವಿಧ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಪಡಿಸುವ ಹಲವು ಮಹತ್ವದ ಸಲಹೆಗಳನ್ನು ನೀಡಿದರು.
ಸಂಘದ ಸದಸ್ಯರಾದ ಡಾ. ಕೃಷ್ಣ ಭಟ್ ಕೊಂಕೋಡಿ ಮಾತನಾಡಿ, ಇಡ್ಕಿದು ಸೇವಾ ಸಹಕಾರಿ ಸಂಘವು ರಾಜ್ಯದಲ್ಲೇ ಪ್ರಥಮ ಬಾರಿಗೆ ‘ಸಹಕಾರಿ ಪಥ’ ಎಂಬ ಪರಿಕಲ್ಪನೆಯಡಿ ಗ್ರಾಮದ ಪ್ರಮುಖ ರಸ್ತೆಗೆ ಕಾಂಕ್ರೀಟೀಕರಣ ಮಾಡಿ ಜನರಿಗೆ ಶಾಶ್ವತ ರಸ್ತೆ ನಿರ್ಮಿಸಿಕೊಟ್ಟಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು. ಈ ಮಹತ್ವದ ಸೇವಾ ಕಾರ್ಯದ ಸ್ಮರಣೆಯನ್ನು ಮುಂದಿನ ಪೀಳಿಗೆಯೂ ಉಳಿಸಿಕೊಳ್ಳುವಂತಾಗಲು ರಸ್ತೆಯ ಬಳಿ ಸೂಕ್ತವಾದ ನಾಮಫಲಕ ಅಳವಡಿಸಬೇಕು ಎಂದು ಸಲಹೆ ನೀಡಿದರು. ಸಂಘದ ಈ ಅಪೂರ್ವ ಸಾಮಾಜಿಕ ಕಾರ್ಯಕ್ಕಾಗಿ ಆಡಳಿತ ಮಂಡಳಿಯನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸಿದರು.

ಎಟಿಎಂ ಹಾಗೂ ಆಧುನಿಕ ಸೂಪರ್ ಬಜಾರ್‌ಗೆ ಸಲಹೆ
ಸದಸ್ಯ ಕೇಶವ ಮುಂಡರಬೈಲು ಅವರು ಸಂಘದ ಕೇಂದ್ರ ಕಚೇರಿಯಲ್ಲಿ ಎಟಿಎಂ ಸೌಲಭ್ಯ ಆರಂಭಿಸುವಂತೆ ಸಲಹೆ ನೀಡಿದರು. ಸಂಘದ ಸೂರ್ಯ ಶಾಖೆಯಲ್ಲಿ ರೇಷನ್ ವಿಭಾಗ ತೆರೆದು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕು ಎಂದರು.
ಸದಸ್ಯ ರಮಾನಂದ ಶರ್ಮ ಅವರು ದಿನಸಿ ವಿಭಾಗವನ್ನು ಸುಸಜ್ಜಿತ ಗೊಳಿಸಲು ಸಲಹೆ ನೀಡಿದರು.
ಸಾಲದ ಮಿತಿ ಹೆಚ್ಚಿಸಲು ಮನವಿ
ಸದಸ್ಯ ಜಗನ್ನಾಥ ಸೂರ್ಯ ಅವರು ಮಾತನಾಡಿ, ಸಂಘದ ಸಾಲದ ಮಿತಿಯನ್ನು ಪ್ರಸ್ತುತ ಇರುವ ₹50 ಲಕ್ಷಕ್ಕಿಂತ ಹೆಚ್ಚಿಸಬೇಕು ಎಂದು ವಿನಂತಿಸಿದರು. ಚಿನ್ನಾಭರಣ ಸಾಲ ಹಾಗೂ ಅಡಮಾನ ಸಾಲವನ್ನು ಹೊರತುಪಡಿಸಿ ಇತರ ಸಾಲಗಳ ಮಿತಿಯನ್ನು ಹೆಚ್ಚಿಸುವ ಮೂಲಕ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದರು
ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು, ಸಂಘದ ಅಭಿವೃದ್ಧಿಯ ಪಥದಲ್ಲಿ ಸಾಗಿ ದಾಖಲೆಯ ಲಾಭಾಂಶ ಪಡೆದುದಕ್ಕಾಗಿ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಯಶಸ್ವಿನಿ ಆರೋಗ್ಯ ವಿಮೆ ಪರಿಣಾಮಕಾರಿಯಾಗಲಿ
ಪಂಚಾಯತ್ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ಸಂಪೂರ್ಣ ಪ್ರಯೋಜನ ದೊರೆಯುವಂತೆ ಸಂಘದಲ್ಲಿ ಕೋ-ಆರ್ಡಿನೇಟರ್‌ರನ್ನು ನೇಮಕಗೊಳಿಸಿ, ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಪ್ರಪುಲ್ಲ ಚಂದ್ರ ಪಿ.ಜಿ. ಕೋಲ್ಪೆ ಅವರು ಮಾತನಾಡಿ, ನಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮೂಲಭೂತ ಅವಶ್ಯಕತೆಗಳಿಗೆ ನೆರವಾಗವುಂತೆ ಸಲಹೆ ನೀಡಿದರು.
ಸಂಘದ ಅಭಿವೃದ್ಧಿಗೆ ಮೆಚ್ಚುಗೆ
ಸದಸ್ಯರಾದ ಸುಬ್ರಮಣ್ಯ ಭಟ್ ಮಿತ್ತೂರು ಹಾಗೂ ಶ್ರೀರಂಗ ಭಟ್ ಮಿತ್ತೂರು ಅವರು ಮಾತನಾಡಿ, ಸಂಘವು ಕೈಗೊಂಡಿರುವ ಜಲ ಜಾಗೃತಿ ಯೋಜನೆ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ನಿರ್ದೇಶಕ ಶಿವಪ್ರಕಾಶ್ ರವರು CET ತರಬೇತಿಯನ್ನು ನೀಡಲು ಮುಂದಾಗಬೇಕು ಎಂದರು.
ಚಿದಾನಂದ ಪೆಲತ್ತಿಂಜರವರು ಕುಳ ಗ್ರಾಮದ ಅಭಿವೃದ್ಧಿಗೆ 10 ಲಕ್ಷ ನೀಡಿರುವುದಕ್ಕೆ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸಿದರು.
ಮಹಾಸಭೆಯಲ್ಲಿ ಸದಸ್ಯರಿಂದ ಬಂದ ಈ ಸಲಹೆ–ಅಭಿಪ್ರಾಯಗಳು ಸಂಘದ ಮುಂದಿನ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವಂತಿದ್ದು, ಸಹಕಾರದ ಮೂಲಕ ಆರ್ಥಿಕ ಪ್ರಗತಿಯ ಜೊತೆಗೆ ಗ್ರಾಮಾಭಿವೃದ್ಧಿಗೂ ಕೈಜೋಡಿಸುವ ಇಡ್ಕಿದು ಸೇವಾ ಸಹಕಾರಿ ಸಂಘದ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿವೆ.

ಸಾಧಕರಿಗೆ ಸನ್ಮಾನ – ಪದಾಧಿಕಾರಿಗಳ ಉಪಸ್ಥಿತಿ

ಮಹಾಸಭೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಅತ್ಯುತ್ತಮವಾಗಿ ವ್ಯವಹಾರ ನಡೆಸಿದ ನವೋದಯ ಗುಂಪುಗಳು, ಮಕ್ಕಳ ಗುಂಪು, ವ್ಯಾಪಾರ ಮತ್ತು ಕ್ಯಾಂಪ್ಕೋ (CAMPCO) ವಿಭಾಗದಲ್ಲಿ ಹೆಚ್ಚಿನ ವಹಿವಾಟು ನಡೆಸಿದವರನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಇಡ್ಕಿದು-ಕುಳ ಗ್ರಾಮದ ಸ್ವಚ್ಛ ಭಾರತ ಸಿಬ್ಬಂದಿಗಳನ್ನೂ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ವಾರ್ಷಿಕ ವರದಿ ಮಂಡಿಸಿದರೆ, ರಾಜೇಶ್ ಕಾರ್ಯಡಿ ಸನ್ಮಾನಿಸಲ್ಪಟ್ಟವರ ವಿವರ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ರಾಮ್‌ಭಟ್ ನೀರಪಳಿಕೆ, ನಿರ್ದೇಶಕರಾದ ಚಂದ್ರಹಾಸ ಕೇಂದೇಲು, ಜಯಂತ ಕಂಪ, ನವೀನ ಕೆ.ಪಿ, ಉಮೇಶ ವಡ್ಡರ್ಪೆ, ಲೋಹಿತಾಶ್ವ ಎಂ, ಸತೀಶ ಕೆ, ಆನಂದ ಕೆ, ಹೃಷಿಕೇಶ ಕೆ.ಎಸ್, ಪದ್ಮಾವತಿ ಕೂವೆತ್ತಿಲ, ವಿದ್ಯಾ ವಿ. ಹಾಗೂ ಯೋಗೀಶ ಹೆಚ್ ಉಪಸ್ಥಿತರಿದ್ದರು. ಹರ್ಷಿತಾ ಪ್ರಾರ್ಥಿಸಿ, ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರಾಮ್‌ಭಟ್ ನೀರಪಳಿಕೆ ಧನ್ಯವಾದ ಸಮರ್ಪಿಸಿದರು.

ಇಡ್ಕಿದು ಸೇವಾ ಸಹಕಾರಿ ಸಂಘವು ಕೇವಲ ಠೇವಣಿ ಸಂಗ್ರಹಣೆ ಹಾಗೂ ಸಾಲ ವಿತರಣೆಗೆ ಸೀಮಿತವಾಗಿರದೆ, ಗ್ರಾಮೀಣ ಜನರ ದಿನನಿತ್ಯದ ಅಗತ್ಯಗಳಿಗೆ ನೇರವಾಗಿ ಸ್ಪಂದಿಸುವ ದೃಷ್ಟಿಯಿಂದ ನಾಲ್ಕು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಗ್ಯ, ಶಿಕ್ಷಣ, ಜಲ ಸಂರಕ್ಷಣೆ ಹಾಗೂ ಮಹಿಳಾ ಸ್ವಾವಲಂಬನೆಗೆ ಒತ್ತು ನೀಡುವ ಈ ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿವೆ. ಈ ನಾಲ್ಕು ಪ್ರಮುಖ ಯೋಜನೆಗಳ ವಿಸ್ತೃತ ವಿವರಣೆ ಇಲ್ಲಿದೆ:

  1. ಆರೋಗ್ಯಾಮೃತ: ಆರೋಗ್ಯ ಸೇವೆಗೆ ಮಾನವೀಯ ಸ್ಪರ್ಶ

ಗ್ರಾಮೀಣ ಭಾಗದ ಜನರಿಗೆ ಕಷ್ಟದ ಸಮಯದಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕು ಎಂಬ ಸದುದ್ದೇಶದಿಂದ ‘ಆರೋಗ್ಯಾಮೃತ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಜನೌಷಧಿ ಕೇಂದ್ರದ ಸೇವೆ: ಸಂಘದ ವತಿಯಿಂದ ನಡೆಸಲ್ಪಡುವ ಜನೌಷಧಿ ಕೇಂದ್ರದ ಮೂಲಕ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಅಗತ್ಯ ಔಷಧಿಗಳನ್ನು ಒದಗಿಸಲಾಗುತ್ತಿದ್ದು, ಪ್ರತಿದಿನ ಸರಾಸರಿ 25 ರಿಂದ 30 ಮಂದಿ ಇದರ ನೇರ ಪ್ರಯೋಜನ ಪಡೆಯುತ್ತಿದ್ದಾರೆ.

ಕೇವಲ ₹10 ಕ್ಕೆ ತಜ್ಞ ವೈದ್ಯರ ತಪಾಸಣೆ: ಪ್ರತೀ ಗುರುವಾರ ಸಂಸ್ಥೆಯ ಆವರಣದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಆಯೋಜಿಸಲಾಗುತ್ತಿದ್ದು, ರೋಗಿಗಳಿಂದ ಕೇವಲ ₹10 ರ ಸಾಂಕೇತಿಕ ನೋಂದಣಿ ಶುಲ್ಕ ಮಾತ್ರ ಪಡೆಯಲಾಗುತ್ತಿದೆ.

ಆಸ್ಪತ್ರೆ ಮಾರ್ಗದರ್ಶನ ಹಾಗೂ ಆರ್ಥಿಕ ನೆರವು: ಗಂಭೀರ ಸ್ವರೂಪದ ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ ಉನ್ನತ ದರ್ಜೆಯ ಆಸ್ಪತ್ರೆಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಜೊತೆಗೆ, ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬಗಳ ಗಂಭೀರ ಅನಾರೋಗ್ಯದ ಚಿಕಿತ್ಸಾವೆಚ್ಚಕ್ಕೆ ಸಂಘದ ವತಿಯಿಂದ ಅಗತ್ಯ ಸಂದರ್ಭಗಳಲ್ಲಿ ನೇರ ಆರ್ಥಿಕ ನೆರವನ್ನು ಒದಗಿಸುವ ಮಾನವೀಯ ಕಾರ್ಯ ಮಾಡಲಾಗುತ್ತಿದೆ.

  1. ವಿದ್ಯಾಮೃತ: ಮಕ್ಕಳ ಕನಸುಗಳಿಗೆ ರೆಕ್ಕೆ

“ಒಬ್ಬ ಮಗುವಿನ ಶಿಕ್ಷಣಕ್ಕೆ ನೆರವಾಗುವುದು ಎಂದರೆ ಒಂದು ಇಡೀ ಕುಟುಂಬದ ಭವಿಷ್ಯವನ್ನು ಬದಲಿಸುವುದು” ಎಂಬ ಆಶಯದೊಂದಿಗೆ ‘ವಿದ್ಯಾಮೃತ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಧುನಿಕ ಶಿಕ್ಷಣ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ: ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಗ್ರಾಮೀಣ ಶಾಲಾ ಮಕ್ಕಳು ಡಿಜಿಟಲ್ ಶಿಕ್ಷಣ ಪಡೆಯಲು ನೆರವಾಗುವಂತೆ 2 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಟಿವಿಗಳನ್ನು ಕೊಡುಗೆಯಾಗಿ ನೀಡಲಾಗಿದೆ.

10 ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ (ಪ್ರೌಢ ಶಿಕ್ಷಣದವರೆಗೆ): ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಆರ್ಥಿಕವಾಗಿ ಹಿಂದುಳಿದ 10 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರು ತಮ್ಮ 10ನೇ ತರಗತಿ (ಪ್ರೌಢ ಶಿಕ್ಷಣ) ಮುಗಿಸುವವರೆಗಿನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವ ಜವಾಬ್ದಾರಿಯನ್ನು ಸಂಘ ವಹಿಸಿಕೊಂಡಿದೆ.

ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ: ಶೈಕ್ಷಣಿಕವಾಗಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಧನದೊಂದಿಗೆ ಪುರಸ್ಕರಿಸಲಾಗುತ್ತಿದೆ.

ಓದಿನ ಹವ್ಯಾಸ ಹಾಗೂ ಶಿಕ್ಷಕರಿಗೆ ಗೌರವ: ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ದಿನನಿತ್ಯದ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಸೂರ್ಯ ಶಾಲೆಗೆ ಉಚಿತವಾಗಿ ದಿನಪತ್ರಿಕೆಯನ್ನು ಪೂರೈಸಲಾಗುತ್ತಿದೆ. ಇದಲ್ಲದೆ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಗೌರವ ಶಿಕ್ಷಕರ ಸೇವೆಯನ್ನು ಗುರುತಿಸಿ ಅವರಿಗೆ ಗೌರವಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

  1. ಜಲಜಾಗೃತಿ: ನೀರಿದ್ದರೆ ನಾಳೆ

ಸಂಘದ ಕಾರ್ಯಾಚರಣೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅಂತರ್ಜಲ ಮಟ್ಟದ ಕುರಿತು ತೀವ್ರ ಕಾಳಜಿ ವಹಿಸಿರುವ ಸಂಸ್ಥೆಯು, ಮುಂದಿನ ಪೀಳಿಗೆಯ ಜಲಭದ್ರತೆಗಾಗಿ ‘ಜಲಜಾಗೃತಿ’ ಅಭಿಯಾನವನ್ನು ಕೈಗೆತ್ತಿಕೊಂಡಿದೆ.

ಅಂತರ್ಜಲ ಮರುಪೂರಣ: “ನೀರಿದ್ದರೆ ನಾಳೆ – ನೀರು ಉಳಿಸಿದರೆ ಬದುಕು” ಎಂಬ ಜಾಗೃತಿ ಸಂದೇಶದೊಂದಿಗೆ ಗ್ರಾಮೀಣ ಭಾಗದಲ್ಲಿ ಸಣ್ಣ ಕಟ್ಟಗಳ (ಕಿರು ಅಣೆಕಟ್ಟು) ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.

ಮಳೆನೀರು ಕೊಯ್ಲು ಮತ್ತು ಬೋರ್‌ವೆಲ್ ರೀಚಾರ್ಜ್: ಮಳೆನೀರನ್ನು ಭೂಮಿಗೆ ಇಂಗಿಸುವ ಮಳೆನೀರು ಕೊಯ್ಲು ಪದ್ಧತಿ ಹಾಗೂ ಕೊಳವೆಬಾವಿಗಳ ಸುತ್ತ ವೈಜ್ಞಾನಿಕ ರೀಚಾರ್ಜ್ ವ್ಯವಸ್ಥೆ ನಿರ್ಮಿಸುವ ಕುರಿತು ರೈತರಿಗೆ ಮತ್ತು ಸಾರ್ವಜನಿಕರಿಗೆ ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಂಘ ರೂಪಿಸಿದೆ.

ವೈಜ್ಞಾನಿಕ ನೀರಿನ ಬಳಕೆ: ಕೃಷಿ ಮತ್ತು ಗೃಹಬಳಕೆಗೆ ನೀರನ್ನು ವ್ಯರ್ಥ ಮಾಡದೆ ವೈಜ್ಞಾನಿಕವಾಗಿ ಹೇಗೆ ಬಳಸಬೇಕು ಎಂಬ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

  1. ಉದ್ಯೋಗಾಮೃತ: ಕೌಶಲ್ಯದಿಂದ ಸ್ವಾವಲಂಬನೆ

ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಹಾಗೂ ಸ್ವಂತ ಉದ್ಯೋಗ ಕಂಡುಕೊಳ್ಳಲು ನೆರವಾಗುವ ಉದ್ದೇಶದಿಂದ ‘ಉದ್ಯೋಗಾಮೃತ’ ಯೋಜನೆಯನ್ನು ರೂಪಿಸಲಾಗಿದೆ.

ಮಲ್ಲಿಗೆ ಕೃಷಿ ಉತ್ತೇಜನ ಹಾಗೂ ಅಧ್ಯಯನ ಪ್ರವಾಸ: ಕರಾವಳಿ ಭಾಗದಲ್ಲಿ ಅಪಾರ ಬೇಡಿಕೆ ಹೊಂದಿರುವ ಮಲ್ಲಿಗೆ ಕೃಷಿಯಲ್ಲಿ ಆಧುನಿಕ ವಿಧಾನಗಳು, ಉತ್ತಮ ತಳಿಗಳ ಆಯ್ಕೆ, ಇಳುವರಿ ಹೆಚ್ಚಳ, ಮಾರುಕಟ್ಟೆ ಜೋಡಣೆ ಹಾಗೂ ಮೌಲ್ಯವರ್ಧನೆ ಕುರಿತು ರೈತರಿಗೆ ಮತ್ತು ಮಹಿಳೆಯರಿಗೆ ಮಾಹಿತಿನೀಡಲು ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ.

ಕೌಶಲ್ಯಾಧಾರಿತ ತರಬೇತಿ ಕಾರ್ಯಾಗಾರಗಳು: ಗ್ರಾಮೀಣ ಮಹಿಳೆಯರ ಆಸಕ್ತಿಗೆ ಅನುಗುಣವಾಗಿ ಕೃಷಿ ಆಧಾರಿತ ಉದ್ಯೋಗ, ಆಹಾರ ಸಂಸ್ಕರಣೆ, ಗೃಹೋದ್ಯಮ, ಕರಕುಶಲ ವಸ್ತುಗಳ ತಯಾರಿಕೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿ ಉಚಿತ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ಸ್ವಾವಲಂಬನೆಗೆ ಹಾದಿ: “ಕೌಶಲ್ಯದಿಂದ ಉದ್ಯೋಗ, ಉದ್ಯೋಗದಿಂದ ಸ್ವಾವಲಂಬನೆ, ಸ್ವಾವಲಂಬನೆಯಿಂದ ಕುಟುಂಬದ ಸಮೃದ್ಧಿ” ಎಂಬ ತತ್ವದಡಿ ಪ್ರತಿಯೊಂದು ಕುಟುಂಬವೂ ಆರ್ಥಿಕವಾಗಿ ಸ್ವತಂತ್ರವಾಗಲು ಈ ಯೋಜನೆ ಚಾಲನೆ ನೀಡಿದೆ.

ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿ ಶತಾಮೃತದಲ್ಲಿ ನಡೆದ ಮಹಾಸಭೆಯು ಬಾರಿ ಜನಸ್ತೋಮದೊಂದಿಗೆ ನಮ್ಮೂರ ಹಬ್ಬದಂತೆ ಸೌಹಾರ್ದಯುತವಾಗಿ ನೆರವೇರಿದ್ದು, ಆಡಳಿತ ಮಂಡಳಿಯ ಪಾರದರ್ಶಕತೆ ಮತ್ತು ನುಡಿದಂತೆ ನಡೆದ ಹಾದಿಗೆ ಸಾಕ್ಷಿಯಾಗಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

BANK

ಕ್ಯಾಂಪ್ಕೊದಿಂದ ದಾಖಲೆಯ ಸಾಧನೆ: 2025-26ನೇ ಸಾಲಿನಲ್ಲಿ ₹3,735 ಕೋಟಿ ವಹಿವಾಟು ಹಾಗೂ ₹49.62 ಕೋಟಿ ಲಾಭ

Published

on

ಮಂಗಳೂರು: ಅಡಿಕೆ ಮಾರುಕಟ್ಟೆಯ ಏರಿಳಿತ ಹಾಗೂ ಕೊಕ್ಕೊ ವಲಯದ ಸವಾಲುಗಳ ನಡುವೆಯೂ ಕರಾವಳಿಯ ಸಹಕಾರಿ ದಿಗ್ಗಜ ‘ಕ್ಯಾಂಪ್ಕೊ’ (CAMPCO) ಸಂಸ್ಥೆಯು 2025-26ನೇ ಆರ್ಥಿಕ ವರ್ಷದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಸಂಸ್ಥೆಯು ಒಟ್ಟು ₹3,735 ಕೋಟಿ ವಹಿವಾಟು ನಡೆಸಿದ್ದು, ₹49.62 ಕೋಟಿ ತೆರಿಗೆಪೂರ್ವ ಲಾಭ ಗಳಿಸಿದೆ. ಅಲ್ಲದೆ, ಸದಸ್ಯರಿಗೆ ಶೇ. 14ರಷ್ಟು ಡಿವಿಡೆಂಡ್ (ಲಾಭಾಂಶ) ನೀಡಲು ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವಾರ್ಷಿಕ ಸಾಧನೆಯ ವಿವರಗಳನ್ನು ಹಂಚಿಕೊಂಡ ಅವರು, ಪ್ರಮುಖ ಮುಖ್ಯಾಂಶಗಳನ್ನು ವಿವರಿಸಿದರು:

ಅಡಿಕೆ ವಹಿವಾಟು: 2025-26ನೇ ಸಾಲಿನಲ್ಲಿ ಒಟ್ಟು ₹2,924.32 ಕೋಟಿ ಮೌಲ್ಯದ 58,742.76 ಮೆಟ್ರಿಕ್ ಟನ್ ಅಡಿಕೆಯನ್ನು ಖರೀದಿಸಲಾಗಿದ್ದು, ₹2,985.19 ಕೋಟಿ ಮೌಲ್ಯದ 59,088.64 ಮೆಟ್ರಿಕ್ ಟನ್ ಅಡಿಕೆಯನ್ನು ಮಾರಾಟ ಮಾಡಲಾಗಿದೆ.

ಅಡಿಕೆ ಬೆಳೆಗಾರರ ಹಿತರಕ್ಷಣೆ: ಆಮದು ಅಡಿಕೆಯಿಂದ ದೇಶೀಯ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ತಪ್ಪು ವರ್ಗೀಕರಣ ಹಾಗೂ ಆಮದು ಅಡಿಕೆಯನ್ನು ದೇಶೀಯ ಉತ್ಪನ್ನದೊಂದಿಗೆ ಮಿಶ್ರಣ ಮಾಡುವ ಅಕ್ರಮ ಚಟುವಟಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ. ಜೊತೆಗೆ, ಉತ್ತರ ಪ್ರದೇಶದ ಮಂಡಿ ತೆರಿಗೆ ವಿಚಾರವನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ಮಂಡಿಸಲಾಗಿದೆ.

ಕೊಕ್ಕೊ ಮತ್ತು ಚಾಕೊಲೇಟ್ ವಲಯ: ಕೊಕ್ಕೊ ಹಾಗೂ ಚಾಕೊಲೇಟ್ ವಿಭಾಗದಲ್ಲೂ ಸಂಸ್ಥೆ ಗಣನೀಯ ಸಾಧನೆ ಮಾಡಿದ್ದು, ರೈತರಿಗೆ ಪ್ರೋತ್ಸಾಹಿಸಲು ರಿಯಾಯಿತಿ ದರದಲ್ಲಿ 1,16,275 ಕೊಕ್ಕೊ ಸಸಿಗಳನ್ನು ವಿತರಿಸಲಾಗಿದೆ.

ರೈತ ಕಲ್ಯಾಣ ಯೋಜನೆಗಳು: ಸದಸ್ಯರ ವಿವಿಧ ಕಲ್ಯಾಣ ಯೋಜನೆಗಳಡಿ ಒಟ್ಟು 120 ಫಲಾನುಭವಿಗಳಿಗೆ ₹86.42 ಲಕ್ಷ ಆರ್ಥಿಕ ನೆರವು ನೀಡಲಾಗಿದೆ.

ಡಿಜಿಟಲ್ ಸೇವೆಗಳು ಮತ್ತು ವಿಸ್ತರಣೆ: ತಂತ್ರಜ್ಞಾನ ಆಧಾರಿತ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ‘ಕ್ಯಾಂಪ್ಕೊ ಕಿಸಾನ್ ಮಿತ್ರ’ ಆ್ಯಪ್ ಹಾಗೂ ‘ಕ್ಯಾಂಪ್ಕೊ ಕಾರ್ಟ್’ ಸೇವೆಗಳಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ ರೈತರ ಅನುಕೂಲಕ್ಕಾಗಿ ರಿಪ್ಪನ್‌ಪೇಟೆ, ಚೇಳೂರು ಹಾಗೂ ಸರಪಾಡಿಯಲ್ಲಿ ಹೊಸ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆ: ಭಾರತೀಯ ಅಡಿಕೆಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ 130 ಮೆಟ್ರಿಕ್ ಟನ್ ಅಡಿಕೆಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲಾಗಿದೆ.

ಮುಂದಿನ ವರ್ಷದ ಗುರಿಗಳು (2026-27): ಹೊಸ ಆರ್ಥಿಕ ವರ್ಷದಲ್ಲಿ ಸಂಸ್ಥೆಯ ಖರೀದಿ ಜಾಲವನ್ನು ಮತ್ತಷ್ಟು ವಿಸ್ತರಿಸುವುದು, ಒಂದು ಲಕ್ಷ ಕೊಕ್ಕೊ ಸಸಿಗಳನ್ನು ವಿತರಿಸುವುದು, ಚಾಕೊಲೇಟ್ ಉತ್ಪಾದನೆಯನ್ನು ಹೆಚ್ಚಿಸುವುದು, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ವಿಸ್ತರಿಸುವುದು ಹಾಗೂ ರೈತಪರ ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸತೀಶ್ಚಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ನಿರ್ದೇಶಕ ಪುರುಷೋತ್ತಮ ಭಟ್, ಡೆಪ್ಯುಟಿ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಗೋವಿಂದ ಭಟ್ ಹಾಗೂ ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ ಉಪಸ್ಥಿತರಿದ್ದರು.

Continue Reading

BANK

ಮಂಕುಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ಣಾಟಕ ಬ್ಯಾಂಕ್‌ನಿಂದ ಶಾಲಾ ವಾಹನ ಕೊಡುಗೆ: ಅದ್ದೂರಿ ಲೋಕಾರ್ಪಣೆ

Published

on

ಬಂಟ್ವಾಳ: ತಾಲೂಕಿನ ಕೊಳ್ನಾಡು ಗ್ರಾಮದ ಮಂಕುಡೆಯಲ್ಲಿರುವ ದ. ಕ. ಜಿ. ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸುಲಭ ಸಂಚಾರಕ್ಕಾಗಿ ಕರ್ಣಾಟಕ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯಡಿ ಕೊಡುಗೆಯಾಗಿ ನೀಡಿದ ನೂತನ ಶಾಲಾ ವಾಹನದ ಲೋಕಾರ್ಪಣೆ ಸಮಾರಂಭವು ಶಾಲಾ ವಠಾರದಲ್ಲಿ ಸಂಭ್ರಮದಿಂದ ಜರುಗಿತು.

ಮಂಗಳೂರಿನ ಕರ್ಣಾಟಕ ಬ್ಯಾಂಕ್ ರೀಜಿನಲ್ ಆಫೀಸ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) ವಿಶ್ವನಾಥ್ S.R. ಅವರು ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತಾ ಡಿಸಿಲ್ವಾ ಅವರಿಗೆ ವಾಹನದ ಕೀಲಿಕೈ ಹಸ್ತಾಂತರಿಸಿ ಶುಭ ಹಾರೈಸಿದರು.

ಬಳಿಕ ನಡೆದ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ AGM ವಿಶ್ವನಾಥ್ S.R. ಅವರು, “ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದಾತ್ತ ಉದ್ದೇಶದಿಂದ ಬ್ಯಾಂಕ್ ಈ ವಾಹನವನ್ನು ಕೊಡುಗೆಯಾಗಿ ನೀಡಿದೆ. ಬ್ಯಾಂಕಿನ ಏಳಿಗೆಗೆ ಸಾರ್ವಜನಿಕರು ಮತ್ತಷ್ಟು ಬೆಂಬಲ ನೀಡಿದರೆ, ಮುಂಬರುವ ದಿನಗಳಲ್ಲಿ ಇಂತಹ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಎಲ್. ಚಂದ್ರಪ್ಪ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕರ್ಣಾಟಕ ಬ್ಯಾಂಕ್ ಆಸರೆಯಾಗಿ ನಿಂತಿರುವುದು ಶ್ಲಾಘನೀಯ. ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಬ್ಯಾಂಕ್‌ನ ಇಂತಹ ಸಾಮಾಜಿಕ ಬದ್ಧತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿನಂದನೆ ಸಲ್ಲಿಸಿದರು.

ಗಣ್ಯರ ಉಪಸ್ಥಿತಿ: ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ಪುತ್ತೂರು ಕ್ಲಸ್ಟರ್ ಮುಖ್ಯಸ್ಥರಾದ ಪೂರ್ಣಪ್ರಜ್ಞ, ಕುಡ್ತಮುಗೇರು ಶಾಖೆಯ ಮ್ಯಾನೇಜರ್ ಉದಯ ಶಂಕರ್, ಪತ್ರಕರ್ತ ವಿ.ಟಿ. ಪ್ರಸಾದ್, SDMC ಅಧ್ಯಕ್ಷರಾದ ಹರೀಶ ಆಚಾರಿ, ಉಪಾಧ್ಯಕ್ಷೆ ಸುಪ್ರೀತಾ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜಾರಾಮ ಹೆಗ್ಡೆ, ಹರೀಶ್ ಟೈಲರ್ ಮಂಕುಡೆ, ಪವಿತ್ರ ಪೂಂಜಾ ಕೊಡಂಗೆ, ದಾನಿಗಳಾದ ಲಕ್ಷ್ಮೀ ನಾರಾಯಣ ಅಡ್ಯಂತಾಯ, ವಾಸು ನಾಯ್ಕ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರಾದ ರಮೇಶ್ ಮಂಕುಡೆ ಉಪಸ್ಥಿತರಿದ್ದರು.

ಅಲ್ಲದೆ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಯಪ್ರಕಾಶ್, ಕೃಷ್ಣಪ್ಪ ಪೂಜಾರಿ, ಬಿ.ಆರ್. ಉಮ್ಮರ್, ಹರಿಪ್ರಸಾದ್ ಹಾಗೂ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಶಿಕ್ಷಕ ಬಿ. ತಿಮ್ಮಪ್ಪ ನಾಯ್ಕ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು. GPT ಶಿಕ್ಷಕ ರಘು N. ವಂದನಾರ್ಪಣೆ ಮಾಡಿದರು

Continue Reading

award

ವಿಟ್ಲ ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ

Published

on

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕ್‌ನಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಿಟ್ಲದ ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ‘ಸಾಧನಾ ಪ್ರಶಸ್ತಿ’ ಲಭಿಸಿದೆ. ಸಂಘವು ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುತ್ತಿರುವುದು ಇದೇ ಮೊದಲು.

2025-26ನೇ ಆರ್ಥಿಕ ಸಾಲಿನಲ್ಲಿ ಸಂಘವು ಅತ್ಯುತ್ತಮ ಆರ್ಥಿಕ ಸಾಧನೆಗೈದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಒಲಿದುಬಂದಿದೆ.

ಆರ್ಥಿಕ ಸಾಧನೆಯ ವಿವರ:

  • ಒಟ್ಟು ವ್ಯವಹಾರ: ರೂ. 294.84 ಕೋಟಿ
  • ಠೇವಣಿ ಸಂಗ್ರಹ: ರೂ. 24.37 ಕೋಟಿ
  • ಸಾಲ ವಿತರಣೆ: ರೂ. 21.94 ಕೋಟಿ
  • ನಿವ್ವಳ ಲಾಭ: ರೂ. 48.51 ಲಕ್ಷ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಎನ್. ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ್ ಪಿ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಸಂಘದ ನಿರ್ದೇಶಕರುಗಳಾದ ಸಂಜೀವ ಪೂಜಾರಿ ಎಂ.ಎಸ್., ಪ್ರಕಾಶ್ ಕೆ. ವಿಟ್ಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Continue Reading

Trending

Copyright © 2025 Deevatige

error: Content is protected !!