Connect with us

government

ಕುಳ ಕಂದಾಯ ಕಚೇರಿ ವಿವಾದ: ದಲ್ಲಾಳಿ ಆರೋಪಕ್ಕೆ ಹರಿನಾಮ ಸಂಕೀರ್ತನಕಾರ ಧರಣ್‌ ಮಾಣಿ ಸ್ಪಷ್ಟನೆ

Published

on

ಮಾಣಿ: ಕುಳ ಗ್ರಾಮದ ಕಂದಾಯ ಕಚೇರಿಯಲ್ಲಿ ತಾವು ಯಾವುದೇ ದಲ್ಲಾಳಿ ಕೆಲಸ ಮಾಡಿಲ್ಲ, ಕೇವಲ ಗೆಳೆತನ ಹಾಗೂ ಗ್ರಾಮದ ಕೆಲಸದ ನಿಮಿತ್ತ ಅಲ್ಲಿಗೆ ಹೋಗುತ್ತಿದ್ದೆ ಎಂದು ಹರಿನಾಮ ಸಂಕೀರ್ತನಕಾರ ಮತ್ತು ರಾಜ್ಯ ಮಟ್ಟದ ಕಲಾವಿದ ಎಲ್. ಕೆ. ಧರಣ್‌ ಮಾಣಿ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಕುಳ ಕಂದಾಯ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯಲ್ಲಿ ತಮ್ಮ ಹೆಸರನ್ನು ಬಳಸಿ ದಲ್ಲಾಳಿ ಎಂದು ಬಿಂಬಿಸಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಯ ಹಿನ್ನೆಲೆ ಮತ್ತು ಸ್ಪಷ್ಟನೆ: “ನಾನು ಕಳೆದ 30 ವರ್ಷಗಳಿಂದ ರಾಜ್ಯ ಮಟ್ಟದ ಕಲಾವಿದನಾಗಿ ಗುರುತಿಸಿಕೊಂಡು ಗೌರವಯುತ ಜೀವನ ನಡೆಸುತ್ತಿದ್ದೇನೆ. ಕಳೆದ 6 ವರ್ಷಗಳಿಂದ ಕುಳ ಗ್ರಾಮದ ಬೆಳೆ ಸಮೀಕ್ಷೆಯನ್ನು ಸಿದ್ಧಪಡಿಸಿ ಗ್ರಾಮ ಕರಣಿಕರಿಗೆ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೆ. ಈ ಕಾರಣದಿಂದಾಗಿ ಅಲ್ಲಿನ ಗ್ರಾಮ ಕರಣಿಕರು ಹಾಗೂ ಗ್ರಾಮ ಸೇವಕರ ಪರಿಚಯ ಮತ್ತು ಆತ್ಮೀಯತೆ ಇರುವುದು ನಿಜ. ಆದರೆ, ನಾನು ಅಲ್ಲಿ ಯಾವುದೇ ರೀತಿಯ ದಲ್ಲಾಳಿ ಅಥವಾ ಬ್ರೋಕರ್ ಕೆಲಸ ಮಾಡಿಲ್ಲ” ಎಂದು ಧರಣ್ ಮಾಣಿ ತಿಳಿಸಿದ್ದಾರೆ.

“ಸರಕಾರಿ ಉದ್ಯೋಗಿ ರಾಘವ ಅವರಿಂದ ತೊಂದರೆಗೊಳಗಾದ ಸಾರ್ವಜನಿಕರ ಪರವಾಗಿ ಸಚಿನ್ ಎಂಬುವವರು ಫೋಟೋ ತೆಗೆದು ಮೇಲಾಧಿಕಾರಿಗಳಿಗೆ ಹಾಗೂ ಮಾಧ್ಯಮಗಳಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ನಾನು ಕಚೇರಿಯಲ್ಲಿದ್ದದ್ದು ನಿಜ. ರಾಘವ ಅವರ ಪರಿಚಯದ ಹಿನ್ನೆಲೆಯಲ್ಲಿ ನಾನು ಅಲ್ಲಿಗೆ ಹೋಗುತ್ತಿದ್ದೆ. ಆದರೆ ದೂರುದಾರ ಸಚಿನ್ ಮತ್ತು ರಾಘವ ಅವರು ಸಮೀಪದ ಬಂಧುಗಳಾಗಿದ್ದು, ಅವರೊಳಗೆ ವೈಯಕ್ತಿಕ ವೈಷಮ್ಯಕ್ಕೆ ಅವರು ನೀಡಿದ ದೂರಿನಲ್ಲಿ ನನ್ನ ಹೆಸರನ್ನೂ ಸೇರಿಸಿ, ನಾನು ದಲ್ಲಾಳಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಆರೋಪ ಮಾಡಿರುವುದು ತಮಗೆ ತೀವ್ರ ಬೇಸರ ತಂದಿದೆ” ಎಂದು ಅವರು ಹೇಳಿದ್ದಾರೆ.

ದೂರಿಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ

ಕುಳ ಗ್ರಾಮ ಆಡಳಿತಾಧಿಕಾರಿ ಕಛೇರಿಯೊಳಗೆ ಖಾಸಗಿ ವ್ಯಕ್ತಿ ಹಾಗೂ ಗ್ರಾಮ ಸಹಾಯಕ ಜೊತೆಯಾಗಿ ಗ್ರಾಮಸ್ಥರಿಗೆ ಹಿಂಸೆ, ಕಿರುಕುಳ ಹಾಗೂ ಹಣಕ್ಕಾಗಿ ಸತಾಯಿಸುತ್ತಿದ್ದಾರೆ ಎಂಬ ವಿಚಾರದಲ್ಲಿ ಸಚಿನ್ ಎಂಬವರು ದೂರು ನೀಡಿದ್ದರು. ಬಂಟ್ವಾಳ ತಹಶೀಲ್ದಾರ್, ಸಹಾಯಕ ಕಮಿಷನರ್, ದ. ಕ.ಜಿಲ್ಲಾಧಿಕಾರಿ, ಕಂದಾಯ ಸಚಿವರು, ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳಿಗೆ ನೀಡಿದ ದೂರಿಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದ್ದು, ಇದರ ಬೆನ್ನಲ್ಲೇ ಧರಣ್ ಮಾಣಿ ನನಗೂ ಈ ದೂರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾರ್ವಜನಿಕರ ಅನುಮಾನ & ಧರಣ್ ಮಾಣಿ ನಿರ್ಧಾರ: ಗ್ರಾಮಸೇವಕನ ಜೊತೆ ಗೆಳೆತನ ಮಾಡಿದ್ದಕ್ಕೆ ಸಾರ್ವಜನಿಕರು ಧರಣ್ ಮಾಣಿ ಅವರ ಮೇಲೂ ಅನುಮಾನ ವ್ಯಕ್ತಪಡಿಸುವಂತಾಗಿತ್ತು. ಈ ಕುರಿತು ಮಾತನಾಡಿದ ಅವರು, “ರಾಘವ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪಗಳು ಇವೆ ಎಂದು ನನಗೆ ಮನವರಿಕೆಯಾದ ತಕ್ಷಣವೇ, ನಾನು ಇನ್ನು ಮುಂದೆ ಆ ಕಚೇರಿಗೆ ಹೋಗುವುದಿಲ್ಲ ಮತ್ತು ಅಂತಹ ವ್ಯಕ್ತಿಗಳ ಸಂಪರ್ಕದಿಂದ ದೂರವಿರಲು ತೀರ್ಮಾನಿಸಿದ್ದೇನೆ. ಸಾರ್ವಜನಿಕರಲ್ಲಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತಿರುವುದು ವಿಷಾದನೀಯ. ನಾನು ನನ್ನ ಗೌರವಯುತ ಕಲಾ ಸೇವೆಯಲ್ಲಿಯೇ ಮುಂದುವರಿಯಲಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Educational

NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯಲ್ಲಿ ಅಭಿಜಿತ್ ದೀಪ್ಕೆ ಶಾಂತಿಯುತ ಪ್ರತಿಭಟನೆ

Published

on

ನವದೆಹಲಿ: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಕ್ಷ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್ 6 ರಂದು ಭಾರತಕ್ಕೆ ಮರಳುತ್ತಿರುವುದಾಗಿ ಸೋಮವಾರ ಘೋಷಿಸಿದ್ದಾರೆ.

ಹಿನ್ನೆಲೆ: ‘ಜಿರಳೆ’ ಪದದ ವಿಡಂಬನಾತ್ಮಕ ಚಳವಳಿ

ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ವಿಚಾರಣೆಗಳ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಉಲ್ಲೇಖಿಸಿ “ಜಿರಳೆಗಳು” ಎಂಬ ಪದವನ್ನು ಬಳಸಿದ್ದರು. ತಾವು ಬಳಸಿದ ಪದವು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸಿಜೆಐ ಸ್ಪಷ್ಟಪಡಿಸಿದರಾದರೂ, ಇದು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಬೋಸ್ಟನ್‌ನಲ್ಲಿರುವ ತಂತ್ರಜ್ಞ ಅಭಿಜಿತ್ ದೀಪ್ಕೆ ಅವರು ಇದೇ ಸಂದರ್ಭವನ್ನು ಬಳಸಿಕೊಂಡು, ‘ಜಿರಳೆ’ ಪದವನ್ನು ಯುವ ಕ್ರಿಯಾಶೀಲತೆಯ ಸಂಕೇತವಾಗಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ತರುವ ಅಭಿಯಾನವಾಗಿ ಪರಿವರ್ತಿಸಿದರು. ಸಿಜೆಪಿ (Cockroach Janata Party) ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿಯನ್ನು ಪ್ರಾರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದರು.

ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರಗೊಂಡ ಅಭಿಯಾನ

ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, ನೀಟ್ ಪತ್ರಿಕೆ ಸೋರಿಕೆ ಮತ್ತು ತದನಂತರದ ಅಡಚಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

“ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಅಭಿಯಾನವನ್ನು ತೀವ್ರಗೊಳಿಸಲು ನಾನು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ ನಾವೆಲ್ಲರೂ ಒಟ್ಟಾಗಿ ಸೇರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಲು ಶಾಂತಿಯುತವಾಗಿ ಧ್ವನಿ ಎತ್ತುವ ಸಮಯ ಬಂದಿದೆ.” – ಅಭಿಜಿತ್ ದೀಪ್ಕೆ

ಪ್ರತಿಭಟನೆಯ ನಿಖರವಾದ ಕಾರಣಗಳು, ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಶಿಕ್ಷಣ ಇಲಾಖೆಯ ಇತ್ತೀಚಿನ ವಿದ್ಯಮಾನಗಳ ಸುತ್ತ ಇರಲಿದ್ದು, ದೇಶದ ವಿವಿಧ ಭಾಗಗಳಿಂದ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.




Continue Reading

government

ಸುಬ್ರಹ್ಮಣ್ಯದಲ್ಲಿ ‘ಅನಧಿಕೃತ ಪೂಜೆ’ಗಳ ಹಾವಳಿ: ಭಕ್ತರೇ, ಧಾರ್ಮಿಕ ಮಾಫಿಯಾ ಬಗ್ಗೆ ಎಚ್ಚರ!

Published

on

ಸುಬ್ರಹ್ಮಣ್ಯ: ರಾಜ್ಯದ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡು ಕೋಟಿಗಟ್ಟಲೆ ಲೂಟಿ ಮಾಡುವ ಧಾರ್ಮಿಕ ಮಾಫಿಯಾವೊಂದು ಸದ್ದಿಲ್ಲದೆ ತಲೆಎತ್ತಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಈ ಅನಧಿಕೃತ ಪೂಜೆಗಳ ಜಾಲವು ಭಕ್ತರ ಕಿಸೆಗೆ ಕತ್ತರಿ ಹಾಕುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಕ್ಷೇತ್ರಕ್ಕೆ ಬರುವ ಭಕ್ತರು ಇಲ್ಲಿ ಮುಖ್ಯವಾಗಿ ಎರಡು ರೀತಿಯ ಪೂಜಾ ಪದ್ಧತಿಗಳನ್ನು ಗಮನಿಸಬೇಕಾಗಿದೆ.

೧. ಅಧಿಕೃತ ಪೂಜೆ (ಕ್ಷೇತ್ರದ ಸನ್ನಿಧಿಯಲ್ಲಿ ನಡೆಯುವ ಸೇವೆಗಳು)

ದೇವಸ್ಥಾನದ ಕಚೇರಿಯಿಂದ ರಶೀದಿ (ಚೀಟಿ) ಪಡೆದು, ದೇವಸ್ಥಾನದ ಆವರಣದೊಳಗೇ ಅಧಿಕೃತ ವೈದಿಕರ ಮುಖಾಂತರ ಶಾಸ್ತ್ರೋಕ್ತವಾಗಿ ನಡೆಯುವ ಪೂಜೆಗಳಿವು.

ಪ್ರಯೋಜನ: ಈ ಪೂಜೆಗಳಿಗೆ ಭಕ್ತರು ನೀಡುವ ಹಣ ನೇರವಾಗಿ ದೇವಸ್ಥಾನದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ.

ವಿಶ್ವಾಸಾರ್ಹತೆ: ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಮಹತ್ವಾಕಾಂಕ್ಷೆಯ ಪೂಜೆಗಳು ಸುಬ್ರಹ್ಮಣ್ಯ ಸ್ವಾಮಿಗೆ ನೇರವಾಗಿ ತಲುಪಬೇಕಾದರೆ ಅಧಿಕೃತ ಪೂಜೆಗಳನ್ನೇ ಆಶ್ರಯಿಸಬೇಕು.

೨. ಅನಧಿಕೃತ ಪೂಜೆ (ಖಾಸಗಿ ಲೂಟಿ ಕೇಂದ್ರಗಳು)

ದೇವಸ್ಥಾನದ ಆಡಳಿತ ಮಂಡಳಿಗೂ ಇವರಿಗೂ ಯಾವುದೇ ಸಂಬಂಧವಿರುವುದಿಲ್ಲ. ನಿವೃತ್ತ ವೈದಿಕರು, ದೇವಸ್ಥಾನದಿಂದ ಹೊರಹಾಕಲ್ಪಟ್ಟವರು, ಸಾಲದ ಸುಳಿಗೆ ಸಿಲುಕಿ ಹಣದ ಅಗತ್ಯವಿರುವವರು ಹಾಗೂ ಶೀಘ್ರವಾಗಿ ಶ್ರೀಮಂತರಾಗಲು ಬಯಸುವ ಕೆಲವು ಖಾಸಗಿ ವ್ಯಕ್ತಿಗಳು ಈ ಅನಧಿಕೃತ ಪೂಜೆಗಳ ಸೂತ್ರಧಾರರಾಗಿದ್ದಾರೆ.

ಗ್ಯಾರೇಜ್, ಪಾರ್ಕಿಂಗ್ ಲಾಡ್ಜ್ ಗಳಲ್ಲಿಯೂ ಹೋಮ-ಹವನ!

ಇತ್ತೀಚಿನ ದಿನಗಳಲ್ಲಿ ಸುಬ್ರಹ್ಮಣ್ಯದಲ್ಲಿ ಇಂತಹ ಅಣಬೆ ಪೂಜಾ ಕೇಂದ್ರಗಳು ಮಿತಿಮೀರಿವೆ. ನಂಬಲಾಗದ ಸಂಗತಿಯೆಂದರೆ:

ಗ್ಯಾರೇಜ್‌ಗಳಲ್ಲಿ ಪೂಜೆ: ಸುಸ್ಥಿತಿಯಲ್ಲಿದ್ದ ವಾಹನ ಗ್ಯಾರೇಜ್‌ಗಳನ್ನು ಮುಚ್ಚಿ, ಅಲ್ಲಿ ಭಕ್ತರನ್ನು ವಂಚಿಸುವ ಪೂಜಾ ಕೇಂದ್ರಗಳನ್ನು ತೆರೆಯಲಾಗಿದೆ.

ಕಾರ್ ಪಾರ್ಕಿಂಗ್‌ನಲ್ಲಿ ಹೋಮ: ಕಾಶಿಕಟ್ಟೆ ಬಳಿಯ ಲಾಡ್ಜ್ ಒಂದರ ಕಾರ್ ಪಾರ್ಕಿಂಗ್ ಜಾಗದಲ್ಲೂ ಅಂಡಿಗುಂಡಿ ಪೂಜೆಗಳನ್ನು ನಡೆಸಿ ಭಕ್ತರನ್ನು ಯಾಮಾರಿಸಲಾಗುತ್ತಿದೆ.

ಖಾಸಗಿ ಮಂದಿರಗಳ ದುರ್ಬಳಕೆ: ಸುಜ್ಞಾನ ಮಂದಿರ, ಶಾರದಾ ಮಂದಿರ, ಶಿವ ಸದನ, ಹಾಗೂ ಕೆಲವು ಖಾಸಗಿ ಮನೆಗಳಲ್ಲೂ ಶಾಸ್ತ್ರೋಕ್ತವಲ್ಲದ, ಕೇವಲ “ಹೊಗೆ ಎಬ್ಬಿಸುವ” ನಾಮಕಾವಸ್ತೆ ಪೂಜೆಗಳನ್ನು ನಡೆಸಿ ಭಕ್ತರ ಕಿಸೆ ಖಾಲಿ ಮಾಡಲಾಗುತ್ತಿದೆ.

ಅಡುಗೆ ಭಟ್ಟರ ಮನೆಯಲ್ಲಿಯೂ ಸೇವೆ : ದೇವಸ್ಥಾನದ ಅಡುಗೆ ಭಟ್ಟರೊಬ್ಬರ ಮನೆಯಲ್ಲಿಯೂ ಹೋಮದ ಹೊಗೆ ಹೊರಬರುತ್ತಿದೆ.

ಸರ್ವರ್‌ ಈಶನ ವಿಶೇಷ ನಾಗಾರಾಧನೆ : ಇವರೂ ಖಾಸಗೀಯಾಗಿ ಅನಧಿಕೃತ ಸಂಸ್ಕಾರ ಮಾಡುತ್ತಿದ್ದಾರೆ

ಬಳ್ಪದ ಭಟ್ರವರಿಂದಲೂ ಅನಧಿಕೃತ ಪೂಜೆ : ಆದಿ ಸುಬ್ರಹ್ಮಣ್ಯ ದೇಗುಲದ ದಾರಿಯಲ್ಲಿ ಇವರ ಅನಧಿಕೃತ ಪೂಜೆ ನಡೆಯುತ್ತಿದೆ.

ವಿಶೇಷವೆಂದರೆ ಕೇರಳದ ಭಟ್ರವರಿಂದಲೂ ಪೂಜೆ ಆರಂಭ : ಸ್ಥಳೀಯರು ನಮ್ಮ ಜಿಲ್ಲೆಯವರು ಬಿಟ್ಟು ಈಗ ಕೇರಳದ ಭಟ್ರು ಕೂಡಾ ಪೂಜೆ ಮಾಡಲು ಶುರು ಮಾಡಿದ್ದು, ಇನ್ನೂ ಯಾವ ರಾಜ್ಯದವರು ಬರುತ್ತಾರೋ ಗೊತ್ತಿಲ್ಲ.

ಆನ್‌ಲೈನ್‌ನಲ್ಲೂ ಸುಬ್ರಹ್ಮಣ್ಯನ ಹೆಸರಿನಲ್ಲಿ ‘ಟ್ರೇಡಿಂಗ್’!

ಈ ದಲ್ಲಾಳಿಗಳು ಈಗ ಡಿಜಿಟಲ್ ರೂಪದಲ್ಲೂ ಭಕ್ತರಿಗೆ ಜಾಲ ಬೀಸುತ್ತಿದ್ದಾರೆ. “ದೇವಸ್ಥಾನಕ್ಕಿಂತ ಕಡಿಮೆ ವೆಚ್ಚ”, “ರಶ್ ಇರುವುದಿಲ್ಲ”, “ಉಚಿತ ಊಟ-ವಸತಿ” ಎಂಬ ಆಕರ್ಷಕ ಜಾಹೀರಾತುಗಳನ್ನು ನೀಡಿ ಆನ್‌ಲೈನ್ ಮೂಲಕ ಭಕ್ತರನ್ನು ಬುಕ್ ಮಾಡಲಾಗುತ್ತಿದೆ. ಕುಮಾರಧಾರ ನದಿಯ ದಾಟಿದ ತಕ್ಷಣ, “ಇಲ್ಲಿ ಎಲ್ಲಿ ಪೂಜೆ ಮಾಡಿದರೂ ದೇವರಿಗೆ ತಲುಪುತ್ತದೆ” ಎಂದು ಅಮಾಯಕ ಜನರನ್ನು ಮಂಗ ಮಾಡಲಾಗುತ್ತಿದೆ.

ಕಾನೂನಾತ್ಮಕ ತೊಡಕು: ಇವೆಲ್ಲವೂ ಖಾಸಗಿ ಜಾಗಗಳಲ್ಲಿ, ವೈಯಕ್ತಿಕ ನಂಬಿಕೆಯ ಹೆಸರಿನಲ್ಲಿ ನಡೆಯುತ್ತಿರುವುದರಿಂದ “ಧಾರ್ಮಿಕ ಸ್ವಾತಂತ್ರ್ಯ”ದ ಅಡಿಯಲ್ಲಿ ಪೊಲೀಸರಾಗಲಿ ಅಥವಾ ದೇವಸ್ಥಾನದ ಮಂಡಳಿಯಾಗಲಿ ತಕ್ಷಣ ಕ್ರಮ ಕೈಗೊಳ್ಳಲು ಕಾನೂನಾತ್ಮಕ ಅಡೆತಡೆಗಳಿವೆ.

ಒಟ್ಟಾಗಿ ಹೇಳುವುದಾದರೆ ಇದಕ್ಕೆ ಕಡಿವಾಣ ಬೀಳದೆ ಇದ್ದರೆ ಮುಂದೊಂದು ದಿನ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಭಕ್ತರ ಸಂಖ್ಯೆಯೆ ಇಲ್ಲದಿರಬಹುದು. ಮಾನ್ಯ ಧಾರ್ಮಿಕ ಖಾತೆಯ ಮಂತ್ರಿಗಳು ಇತ್ತ ಗಮನಹರಿಸಲೇ ಬೇಕು.

ಭಕ್ತರಿಗೆ ನಮ್ಮ ಮನವಿ ಮತ್ತು ಜಾಗೃತಿ:

ಭಕ್ತರೇ, ನಿಮ್ಮ ಕಷ್ಟ ನಿವಾರಣೆಗೆ ಹಾಗೂ ದೇವರಿಗೆ ಸಲ್ಲಿಸುವ ಸೇವೆ ಸಾರ್ಥಕವಾಗಬೇಕಾದರೆ ಎಚ್ಚರಿಕೆಯಿಂದ ಇರಿ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವಾಗ ಕೇವಲ ದೇವಸ್ಥಾನದ ಅಧಿಕೃತ ಕೌಂಟರ್‌ಗಳು ಅಥವಾ ಅಧಿಕೃತ ವೆಬ್‌ಸೈಟ್ ಮೂಲಕವೇ ಪೂಜೆಗಳನ್ನು ಕಾಯ್ದಿರಿಸಿ.

ಮಧ್ಯವರ್ತಿಗಳ, ದಲ್ಲಾಳಿಗಳ ಹಾಗೂ ಕಡಿಮೆ ವೆಚ್ಚದ ಆಮಿಷ ಒಡ್ಡುವ ಆನ್‌ಲೈನ್ ವಂಚಕರ ಮಾತುಗಳಿಗೆ ಮರುಳಾಗಬೇಡಿ.

ಗ್ಯಾರೇಜ್, ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ನಡೆಯುವ ಪೂಜೆಗಳಿಂದ ದೇವರಿಗೂ ಪ್ರೀತಿಯಾಗುವುದಿಲ್ಲ, ನಿಮಗೂ ಫಲ ಸಿಗುವುದಿಲ್ಲ; ಕೇವಲ ವಂಚಕರ ಕಿಸೆ ತುಂಬುತ್ತದೆ ಅಷ್ಟೇ.

    “ಬೋಧಿಸುವ ಸ್ಥಳದಲ್ಲಿ ಬೋಳಿಸುವವರಿದ್ದಾರೆ, ನಿಮ್ಮ ಭಕ್ತಿ ನಿಮ್ಮ ಎಚ್ಚರಿಕೆಯಲ್ಲಿರಲಿ.”

    Continue Reading

    government

    ಸುಳ್ಯ ಕೇಂದ್ರಿತ ‘ಆನೆ ಕಾರ್ಯಪಡೆ’ಗೆ ಚಾಲನೆ: ಕಾಡಾನೆ ಹಾವಳಿಗೆ ಅಂಕುಶ; ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ರೈತರಿಗೆ ಸಿಹಿ ಸುದ್ದಿ!

    Published

    on

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಭರ್ಜರಿ ಕ್ರಮ ಕೈಗೊಂಡಿದೆ. ಜಿಲ್ಲೆಯ ಕೃಷಿಕರ (Farmers) ಬಹು ಕಾಲದ ಸಮಸ್ಯೆ ಮತ್ತು ತಲೆನೋವಾಗಿದ್ದ ಕಾಡಾನೆ ಹಾವಳಿ ತಡೆಗಟ್ಟಲು ಸುಳ್ಯ ಕೇಂದ್ರಸ್ಥಾನವಾಗಿಸಿ (Center) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ 28 ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ ಆನೆ ಕಾರ್ಯಪಡೆ ರಚಿಸಿ ಸರಕಾರ ಆದೇಶ ಹೊರಡಿಸಿದೆ. ಈ ಕ್ರಮಕ್ಕೆ ಅರಣ್ಯ ಭಾಗದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಮಂಗಳೂರು/ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಭರ್ಜರಿ ಕ್ರಮ ಕೈಗೊಂಡಿದೆ. ಸುಳ್ಯದಲ್ಲಿ ಕೇಂದ್ರ ಕಚೇರಿಯನ್ನು ಹೊಂದಲಿರುವ ನೂತನ ಆನೆ ಕಾರ್ಯಪಡೆಗೆ ಒಟ್ಟು 28 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಈ ವಿಶೇಷ ತಂಡವು ಅತ್ಯಾಧುನಿಕ ಉಪಕರಣಗಳು ಮತ್ತು ವಾಹನಗಳೊಂದಿಗೆ ಸಜ್ಜಿತವಾಗಲಿದ್ದು, ಆನೆಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಲಿದೆ. ತಂಡದಲ್ಲಿ 4 ಉಪ ವಲಯ ಅರಣ್ಯಾಧಿಕಾರಿಗಳು (DRFO) 8 ಅರಣ್ಯ ರಕ್ಷಕರು (Forest Guards) 16 ಮಂದಿ ಹೊರಗುತ್ತಿಗೆ ಸಿಬ್ಬಂದಿ (DRM) (ಆನೆ ಓಡಿಸುವ ನೈಪುಣ್ಯತೆ ಹೊಂದಿರುವವರು) ಇರುತ್ತಾರೆ.

    ತಂಡದ ಕಾರ್ಯಚಟುವಟಿಕೆಗಳು:
    ಆನೆಗಳು ನಾಡಿಗೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಅವುಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯವನ್ನು ತ್ವರಿತವಾಗಿ ಮಾಡುವುದು, ಕಾಡಂಚಿನ ಗ್ರಾಮಗಳಲ್ಲಿ 24×7 ಗಸ್ತು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವುದು.ಸ್ಥಳೀಯ ರೈತರು ಮತ್ತು ಅರಣ್ಯ ಇಲಾಖೆಯ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು. ಆನೆಗಳಿಗೆ ಅಳವಡಿಸಲಾದ ರೇಡಿಯೋ ಕಾಲರ್ ಸಿಗ್ನಲ್‌ಗಳನ್ನು ಗಮನಿಸಿ ಮುನ್ನೆಚ್ಚರಿಕೆ ನೀಡುವುದು. ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನವಸತಿ ಪ್ರದೇಶ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್‌ ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸುವುದು ಹಾಗೂ ಹಿಮ್ಮೆಟ್ಟಿಸುವುದು, ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದು ಇತ್ಯಾದಿ ಕೆಲಸಗಳನ್ನು ಕಾರ್ಯಪಡೆ ಮಾಡಲಿದೆ.

    ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಈ ಹಿಂದೆ ಅವುಗಳನ್ನು ಹಿಮ್ಮೆಟ್ಟಿಸಲು ಮಡಿಕೇರಿ ವಿಭಾಗದಿಂದ ಆನೆ ಕಾರ್ಯಪಡೆಯನ್ನು ಕರೆಸಬೇಕಾಗಿತ್ತು. ಇದರಿಂದ ತುಂಬಾ ವಿಳಂಬ ಆಗುತ್ತಿರುವ ಮಂಗಳೂರು ವಿಭಾಗಕ್ಕೆ ಹೊಸದಾಗಿ ಆನೆ ಕಾರ್ಯಪಡೆಯನ್ನು ರಚಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಅರಣ್ಯ ಮತ್ತು ಪರಿಸರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆನೆ ಕಾರ್ಯಪಡೆ ರಚಿಸಿ ಆದೇಶಿಸಿದ್ದಾರೆ. ಕೇಂದ್ರಸ್ಥಾನದಲ್ಲಿ ಕಂಟ್ರೋಲ್ ರೂಂ (ನಿಯಂತ್ರಣ ಕಾರ್ಯಕೊಠಡಿ) ಕಾರ್ಯನಿರ್ವಹಿಸಲಿದೆ. ಇಲಾಖೆಯ ಈ ಕ್ರಮಕ್ಕೆ ಜಿಲ್ಲೆಯ ಅರಣ್ಯ ಭಾಗದಲ್ಲಿರುವ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಪಡೆಯಿಂದಲಾದರೂ ತಮ್ಮ ಸಮಸ್ಯೆಗೆ ಮುಕ್ತಿ ದೊರಕಲಿದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ಸುಳ್ಯ ಮತ್ತು ಕಡಬ ಭಾಗದಲ್ಲಿ ಆನೆ ದಾಳಿಯಿಂದಾಗಿ ಪ್ರಾಣಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾರ್ಯಪಡೆ ಬೇಕೆಂಬ ಸಾರ್ವಜನಿಕರ ಒತ್ತಾಯಕ್ಕೆ ಸರ್ಕಾರ ಈಗ ಸ್ಪಂದಿಸಿದೆ.

    Continue Reading

    Trending

    Copyright © 2025 Deevatige

    error: Content is protected !!