theft
ವಿಟ್ಲ ವ್ಯಾಪ್ತಿಯಲ್ಲಿ ಮತ್ತೆ ಬ್ಯಾಟರಿ ಕಳ್ಳರ ಅಟ್ಟಹಾಸ: ಒಂದೇ ರಾತ್ರಿ 4 ಲಾರಿಗಳ ಬ್ಯಾಟರಿ ಕಳ್ಳತನ!
ವಿಟ್ಲ: ಮಳೆಗಾಲ ಆರಂಭವಾಗುತ್ತಿದ್ದಂತೆ ರಾತ್ರಿ ಹೊತ್ತು ರಸ್ತೆಬದಿ ಹಾಗೂ ಮೈದಾನಗಳಲ್ಲಿ ನಿಲ್ಲಿಸುವ ವಾಹನಗಳ ಬ್ಯಾಟರಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುವ ಖದೀಮರ ಗ್ಯಾಂಗ್ ವಿಟ್ಲ ಪರಿಸರದಲ್ಲಿ ಮತ್ತೆ ಸಕ್ರಿಯವಾಗಿದೆ. ಭಾನುವಾರ ರಾತ್ರಿ ಒಂದೇ ದಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಪ್ರತ್ಯೇಕ ವಾಹನಗಳ ಬ್ಯಾಟರಿಗಳನ್ನು ಚೋರರು ಕದ್ದೊಯ್ದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸಾಲೆತ್ತೂರು ಮತ್ತು ಕುಡ್ತಮುಗೇರಿನಲ್ಲಿ ರಾತ್ರಿ ಹೊತ್ತು ನಿಲ್ಲಿಸಿದ್ದ ಪಿಕಪ್ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಇದೀಗ ಮತ್ತೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಅಳಕೆಮಜಲಿನಲ್ಲಿ ಎರಡು ಲಾರಿಗಳ ಬ್ಯಾಟರಿ ಕಳವು:
ಅಳಕೆಮಜಲು ಮಸೀದಿ ಆವರಣದ ಹೊರಗಡೆ ಎಂದಿನಂತೆ ಭಾನುವಾರ ರಾತ್ರಿ ನಿಲ್ಲಿಸಲಾಗಿದ್ದ ಎರಡು ಲಾರಿಗಳ ಬ್ಯಾಟರಿಗಳನ್ನು ಚೋರರು ಎಗರಿಸಿದ್ದಾರೆ. ಪ್ರವೀಣ್ ಶೆಟ್ಟಿ ಎಂಬವರಿಗೆ ಸೇರಿದ ಗೂಡ್ಸ್ ಲಾರಿ ಹಾಗೂ ಸೋನಾ ಸಾಗರ್ ಇಬ್ರಾಹಿಂ ಎಂಬವರ ಲಾರಿಗಳ ಬ್ಯಾಟರಿಗಳು ಕಳವಾಗಿವೆ. ಸೋಮವಾರ ಬೆಳಗ್ಗೆ ಚಾಲಕರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮತ್ತೆರಡು ಕಡೆ ಕಳ್ಳತನ:
ಇದೇ ರಾತ್ರಿ ಅಳಕೆಮಜಲು ಜಂಕ್ಷನ್ನಿಂದ ಸ್ವಲ್ಪ ಮುಂದಕ್ಕೆ ನಿನ್ನಿಕಲ್ಲು ಸಂಪರ್ಕಿಸುವ ಅಡ್ಡರಸ್ತೆ ಬಳಿ ನಿಲ್ಲಿಸಲಾಗಿದ್ದ ಕೋಳಿ ಸಾಗಾಟದ ಲಾರಿಯಿಂದಲೂ ಬ್ಯಾಟರಿಯನ್ನು ಕದಿಯಲಾಗಿದೆ. ಇದರೊಂದಿಗೆ ಉಕ್ಕುಡ ಚೆಕ್ಪೋಸ್ಟ್ ಸಮೀಪದ ಮಸೀದಿ ಬಳಿಯ ಮೈದಾನದಲ್ಲಿ ನಿಲ್ಲಿಸಿದ್ದ ಮತ್ತೊಂದು ಲಾರಿಯ ಬ್ಯಾಟರಿಯನ್ನೂ ಖದೀಮರು ಹೊತ್ತೊಯ್ದಿದ್ದಾರೆ.
ನಾಲ್ಕು ತಿಂಗಳ ಹಿಂದೆಯೂ ನಡೆದಿತ್ತು ಸರಣಿ ಕಳ್ಳತನ:
ವಿಟ್ಲ ಪರಿಸರದಲ್ಲಿ ಬ್ಯಾಟರಿ ಕಳ್ಳರ ಕಾಟ ಇದೇ ಮೊದಲಲ್ಲ. ಇನ್ನು ಸುಮಾರು 4 ತಿಂಗಳ ಹಿಂದೆಯೂ (ಫೆಬ್ರವರಿ ತಿಂಗಳಲ್ಲಿ) ಇದೇ ರೀತಿ ಕಳ್ಳರು ಸರಣಿ ಕಳ್ಳತನ ನಡೆಸಿ ಅಟ್ಟಹಾಸ ಮೆರೆದಿದ್ದರು. ಕೇವಲ 3 ದಿನಗಳ ಅವಧಿಯಲ್ಲಿ ವಿಟ್ಲದ ಕಲ್ಯಾಣಿ ರಸ್ತೆ, ಜಯನಗರ, ಒಕ್ಕೆತ್ತೂರು ಸೇರಿದಂತೆ ವಿಟ್ಲ ಕಸಬಾ ಮತ್ತು ಪೆರುವಾಯಿ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಒಟ್ಟು 9 ವಾಹನಗಳ ಬ್ಯಾಟರಿಗಳನ್ನು ಕಳ್ಳರು ಲೂಟಿ ಮಾಡಿದ್ದರು. ಆಗಲೂ ಲಾರಿ, ಟಿಪ್ಪರ್, ಪಿಕಪ್ ಹಾಗೂ ಜೆಸಿಬಿ ವಾಹನಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡಲಾಗಿತ್ತು.
ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಕಳ್ಳರು ಅದೇ ಚಾಳಿಯನ್ನು ಮುಂದುವರಿಸಿರುವುದು ವಾಹನ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ – ಪೊಲೀಸರಿಗೆ ದೂರು:
ವಿಟ್ಲ ವ್ಯಾಪ್ತಿಯಲ್ಲಿ ಭಾನುವಾರ ಒಂದೇ ರಾತ್ರಿ ಒಟ್ಟು ನಾಲ್ಕು ವಾಹನಗಳ ಬ್ಯಾಟರಿ ಕಳ್ಳತನ ನಡೆದಿರುವ ಬಗ್ಗೆ ಲಾರಿ ಚಾಲಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರ ಕರಾಮತ್ತು ಸ್ಥಳೀಯ ಸಿಸಿಟಿವಿ (CC Camera) ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಪೊಲೀಸರು ಈ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.
ವಿಶೇಷ ಸೂಚನೆ (ವಾಹನ ಸವಾರರ ಗಮನಕ್ಕೆ): ಮಳೆಗಾಲದ ಕತ್ತಲನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದರಿಂದ, ವಾಹನ ಮಾಲೀಕರು ರಾತ್ರಿ ವೇಳೆ ಜನಸಂದಣಿ ಇರುವ ಅಥವಾ ಸಿ.ಸಿ. ಕ್ಯಾಮರಾ ನಿಗಾ ಇರುವ ಸುರಕ್ಷಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವಂತೆ ವಿನಂತಿಸಲಾಗಿದೆ.



Belthangady
ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು – ಕಾರ್ಮಿಕರ ಮೇಲೆ ಅನುಮಾನ
ಬೆಳ್ತಂಗಡಿ: ಮನೆಯವರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ.
ಆಲಂದಿಲ ನಿವಾಸಿ ನೌಫಾಲ್ ಬಿ.ಎಂ. (34) ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.
ಘಟನೆಯ ವಿವರ:
ಅವರು ನೀಡಿದ ದೂರಿನಂತೆ ಸೆ. 13 ರಂದು ಮಧ್ಯಾಹ್ನ ಸುಮಾರು 1.45ಕ್ಕೆ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಗುರುವಾಯನಕೆರೆಗೆ ಕಳುಹಿಸಿದ ಬಳಿಕ ನೌಫಾಲ್ ಕೂಡ ಮನೆಗೆ ಬೀಗ ಹಾಕಿ ತರಕಾರಿ ವ್ಯಾಪಾರದ ಕೆಲಸಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು.
ಸೆ.14 ರಂದು ಫಾಲ್ಸ್ ಸೀಲಿಂಗ್ ವೈರಿಂಗ್ ಕೆಲಸಕ್ಕಾಗಿ ಕಾರ್ಮಿಕರನ್ನು ಮನೆಗೆ ಕರೆಸಲಾಗಿತ್ತು. ಮದ್ದಡ್ಕದ ಫಾರೂಕ್ ಎಂಬವರು ಕುದ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ಅವರನ್ನು ಕರೆದುಕೊಂಡು ಬಂದು ಮನೆಯಲ್ಲಿ ಕೆಲಸ ಮಾಡಿದ್ದರು. ಈ ವೇಳೆ ನೌಫಾಲ್ ಅವರ ತಮ್ಮ ಮಹಮ್ಮದ್ ನೌಷಾದ್ ಮನೆಯಲ್ಲಿದ್ದರು.
ಅದೇ ದಿನ ರಾತ್ರಿ ಸುಮಾರು 8.30ಕ್ಕೆ ನೌಫಾಲ್ ಕುಟುಂಬದೊಂದಿಗೆ ಮನೆಗೆ ವಾಪಸ್ ಬಂದಾಗ, ಬೆಡ್ರೂಂನ ಗೋದ್ರೇಜ್ನಲ್ಲಿ ಇಟ್ಟಿದ್ದ ಚಿನ್ನದ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಪರಿಶೀಲನೆ ನಡೆಸಿದಾಗ 32 ಗ್ರಾಂ ಮತ್ತು 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಚಿನ್ನದ ಸರ, ಕಾಲುಚೈನು, ಬ್ರೇಸ್ಲೆಟ್ ಸೇರಿದಂತೆ 15 ಲಕ್ಷ 82 ಸಾವಿರ ರೂ. ಮೌಲ್ಯದ ಒಟ್ಟು 113 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.
ಇದಲ್ಲದೆ ನೌಫಾಲ್ ಅವರ ತಾಯಿಯ ಗೋದ್ರೇಜ್ನಲ್ಲಿದ್ದ ಒಟ್ಟು 7 ಗ್ರಾಂ ತೂಕದ ಮೂರು ಉಂಗುರಗಳೂ ಕಾಣೆಯಾಗಿರುವುದು ಪತ್ತೆಯಾಗಿದೆ.
ಮನೆಯ ಗೋದ್ರೇಜ್ನ ಕೀ ಗೋದ್ರೇಜ್ನಲ್ಲಿಯೇ ಇದ್ದು, ಮನೆಯವರು ಹೊರಗಿದ್ದ ಅವಧಿಯಲ್ಲಿ ಯಾರೋ ಮನೆಗೆ ಪ್ರವೇಶಿಸಿ ಗೋದ್ರೇಜ್ ತೆರೆದು ಕಳವು ಮಾಡಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ವೈರಿಂಗ್ ಕೆಲಸಕ್ಕೆ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆ ಅನುಮಾನವಿರುವುದಾಗಿ ನೌಫಾಲ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆ.15 ರಂದು ಕಲಂ 331(3), 331(4), 305 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
arrest
ಮಂಗಳೂರು: ಮುಲ್ಕಿ ಕಿಲ್ಪಾಡಿ ದೈವಸ್ಥಾನ ಕಳವು ಪ್ರಕರಣ ಭೇದಿಸಿದ ಪೊಲೀಸರು; ಅಂತರಜಿಲ್ಲಾ ಕಳ್ಳರ ಬಂಧನ, 17.20 ಲಕ್ಷ ಮೌಲ್ಯದ ಸ್ವತ್ತು ವಶ!
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುವ ಮಂಗಳೂರು ನಗರ ಪೊಲೀಸರು, ನಾಲ್ವರು ಕುಖ್ಯಾತ ಅಂತರಜಿಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹17.20 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ಹಿನ್ನೆಲೆ:
ಕಳೆದ ಸೆಪ್ಟೆಂಬರ್ 01, 2026ರ ಮಧ್ಯರಾತ್ರಿ ಮುಲ್ಕಿ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಮುಖ್ಯ ದ್ವಾರದ ಬೀಗ ಮುರಿದು, ಗರ್ಭಗುಡಿಯಲ್ಲಿದ್ದ ಬೆಲೆಬಾಳುವ ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಪ್ಟೆಂಬರ್ 331(3), 331(4), 305ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಚುರುಕಾದ ತನಿಖೆ ಮತ್ತು ಬಂಧನ:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ:
- ಸೆಪ್ಟೆಂಬರ್ 06, 2026: ಆರೋಪಿಗಳಾದ ಜಾಹೀದ್ ಸಿನಾನ್ ಹಾಗೂ ಯಾಸೀನ್ ಎಂಬಾತನನ್ನು ಮುಲ್ಕಿ ಕಾರ್ನಾಡು ಎಂಬಲ್ಲಿ ಬಂಧಿಸಲಾಗಿದೆ.
- ಸೆಪ್ಟೆಂಬರ್ 07, 2026: ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಗಳಾದ ಮಹಮದ್ ಅಫ್ರಿದಿ ಹಾಗೂ ಎಸ್.ಕೆ. ಅಬ್ದುಲ್ ಜುಮ್ಮಾನ್ ಎಂಬಾತನನ್ನು ದಾವಣಗೆರೆಯಲ್ಲಿ ಪತ್ತೆಹಚ್ಚಿ ದಸ್ತಗಿರಿ ಮಾಡಲಾಗಿದೆ.

ಬಂಧಿತ ಆರೋಪಿಗಳ ವಿವರ:
- ಜಾಹೀದ್ ಸಿನಾನ್ (36 ವರ್ಷ): ಹೆಚ್.ಕೆ. ಮಂಜಿಲ್, ಎಸ್.ಎಸ್. ರಸ್ತೆ, ಹೆಜಮಾಡಿ ಗ್ರಾಮ, ಪಡುಬಿದ್ರೆ, ಉಡುಪಿ ಜಿಲ್ಲೆ.
- ಯಾಸೀನ್ (36 ವರ್ಷ): ಪಡ್ಡೆ ಅಂಗಡಿ ಹವಸ್, ನಿಟ್ಟೆ ಪೋಸ್ಟ್, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.
- ಮಹಮದ್ ಅಫ್ರಿದಿ (26 ವರ್ಷ): ಗೋಕುಲನಗರ, ಛಲವಾದಿಕೇರಿ, ದಾವಣಗೆರೆ.
- ಎಸ್.ಕೆ. ಅಬ್ದುಲ್ ಜುಮ್ಮಾನ್ (26 ವರ್ಷ): ಜಾಲಿನಗರ, ದಾವಣಗೆರೆ.
ವಶಪಡಿಸಿಕೊಳ್ಳಲಾದ ಸ್ವತ್ತುಗಳು:
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಿದಾಗ, ಅವರಿಂದ ಅಪಾರ ಪ್ರಮಾಣದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ:
- ಚಿನ್ನಾಭರಣ: ಸುಮಾರು 34.820 ಗ್ರಾಂ ತೂಕದ ಚಿನ್ನ.
- ಬೆಳ್ಳಿ ವಸ್ತುಗಳು: ಸುಮಾರು 4 ಕೆ.ಜಿ. 521 ಗ್ರಾಂ ತೂಕದ ಬೆಳ್ಳಿ ಹಾಗೂ ದೈವದ ಮೂರ್ತಿಗಳು (ಅಂದಾಜು ಮೌಲ್ಯ ₹11,20,000/-).
- ವಾಹನಗಳು: ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಾರು (ಅಂದಾಜು ಮೌಲ್ಯ ₹6,00,000/-).
- ಒಟ್ಟು ವಶಪಡಿಸಿಕೊಂಡ ಸೊತ್ತಿನ ಮೌಲ್ಯ: ₹17,20,000/-.
ಪತ್ತೆಯಾದ ಇತರ ಪ್ರಕರಣಗಳು:
ಬಂಧಿತ ಆರೋಪಿಗಳ ವಿಚಾರಣೆ ವೇಳೆ ಕೇವಲ ಮುಲ್ಕಿ ಮಾತ್ರವಲ್ಲದೆ, ಇತರೆಡೆಗಳಲ್ಲಿ ನಡೆದಿದ್ದ ದೇವಸ್ಥಾನ ಕಳವು ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ:
- ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನದ ಕಳವು ಪ್ರಕರಣ.
- ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಕಳವು ಪ್ರಕರಣ.
ಅಲ್ಲದೆ, ಈ ಪ್ರಕರಣದ ಪ್ರಮುಖ ಆರೋಪಿ ಜಾಹೀದ್ ಸಿನಾನ್ ವಿರುದ್ಧ ಈ ಹಿಂದೆ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಮಂಗಳೂರು ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಅಪರಾಧ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಕಾರ್ಯಾಚರಣೆಯ ಯಶಸ್ಸು:
ಮಂಗಳೂರು ಉತ್ತರ ಉಪ ವಿಭಾಗದ ಎ.ಸಿ.ಪಿ ಶ್ರೀ ಶ್ರೀಕಾಂತ್ ಕೆ. ಅವರ ನೇತೃತ್ವದಲ್ಲಿ, ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್, ಮುಲ್ಕಿ ಠಾಣಾ ಪಿ.ಎಸ್.ಐ ರಾಘವೇಂದ್ರ ನಾಯಕ್ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
crime
ಬೆಳ್ಳಾರೆ: ಸರ್ಕಾರಿ ವಿದ್ಯಾರ್ಥಿನಿ ನಿಲಯದಲ್ಲಿ ಬಟ್ಟೆ ಕಳವು – ಪುತ್ತೂರು ಮೂಲದ ಆರೋಪಿ ಬಂಧನ, ನ್ಯಾಯಾಂಗ ಬಂಧನಕ್ಕೆ ಸಲ್ಲಿಕೆ
ಬೆಳ್ಳಾರೆ: ಇಲ್ಲಿನ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರಿನ ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಬಂಧಿತ ಆರೋಪಿ.
ಪ್ರಕರಣದ ವಿವರ: ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಬಟ್ಟೆಗಳು ಸೆಪ್ಟೆಂಬರ್ 02ರಂದು ಬೆಳಿಗ್ಗೆ ನೋಡಿದಾಗ ಕಾಣೆಯಾಗಿದ್ದವು. ಈ ವಿಷಯವನ್ನು ವಿದ್ಯಾರ್ಥಿನಿಯರು ನಿಲಯದ ಮೇಲ್ವಿಚಾರಕಿಯ ಗಮನಕ್ಕೆ ತಂದಿದ್ದಾರೆ. ಬಳಿಕ ಮೇಲ್ವಿಚಾರಕಿಯವರು ವಸತಿ ನಿಲಯದ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸೆ. 02ರಂದು ಬೆಳಗ್ಗಿನ ಜಾವ ಅಪರಿಚಿತ ಯುವಕನೋರ್ವ ಅಕ್ರಮವಾಗಿ ನಿಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ, ಒಣಗಹಾಕಿದ್ದ ಬಟ್ಟೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ವಸತಿ ನಿಲಯದ ಮೇಲ್ವಿಚಾರಕಿ ನೀಡಿದ ದೂರಿನನ್ವಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 54/2026, ಕಲಂ: 331(4), 305 BNS-2023 ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸೆಪ್ಟೆಂಬರ್ 07ರಂದು ಆರೋಪಿ ಕೆ. ರಾಮಚಂದ್ರನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಸೆಪ್ಟೆಂಬರ್ 15ರವರೆಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿ ಆದೇಶಿಸಿದೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
