Connect with us

Article

ಉಬಾರ್ ಮಂಜ ಬೈದ್ಯರ ಹೋರಾಟಕ್ಕೆ ಮತ್ತೆ ಜೀವ: ಸ್ಮಾರಕ ನಿರ್ಮಾಣ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಸ್ಮರಣಾ ಸಮಿತಿ ಭಾರೀ ಆಗ್ರಹ

Published

on

ಬೆಳ್ತಂಗಡಿ: ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಸಿಡಿದೆದ್ದು, 1837ರ ಐತಿಹಾಸಿಕ ಅಮರಸುಳ್ಯ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಪ್ರತಿಮ ದೇಶಭಕ್ತ, ಕ್ರಾಂತಿವೀರ ಉಬಾರ್ ಮಂಜ ಬೈದ್ಯರ ತ್ಯಾಗ ಮತ್ತು ಬಲಿದಾನವನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ “ಕ್ರಾಂತಿವೀರ ಉಬಾರ್ ಮಂಜ ಬೈದ್ಯ ಸಂಸ್ಮರಣಾ ಸಮಿತಿ”ಯನ್ನು ರಚಿಸಲಾಗಿದೆ. ಸುವರ್ಣ ಆರ್ಕೇಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ಸಂಪತ್‌ ಬಿ. ಸುವರ್ಣ ಅವರು ಈ ಕುರಿತು ಮಾಹಿತಿ ನೀಡಿ, ಸರ್ಕಾರದ ಮುಂದೆ ಹತ್ತು ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷಗಳ ಮೊದಲೇ ನಮ್ಮ ತುಳುನಾಡಿನಲ್ಲಿ ಬ್ರಿಟಿಷರ ವಿರುದ್ಧ ರೈತರ ದಂಗೆ ನಡೆದಿತ್ತು. ಈ ಹೋರಾಟದಲ್ಲಿ ಉಪ್ಪಿನಂಗಡಿಯ ಮಂಜ ಬೈದ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬ್ರಿಟಿಷರ ಆಡಳಿತದಲ್ಲಿ ಗುಮಾಸ್ತರಾಗಿದ್ದರೂ, ಅವರ ಜನವಿರೋಧಿ ನೀತಿಗಳನ್ನು ವಿರೋಧಿಸಿ, ಖಜಾನೆ ಲೂಟಿ ಮಾಡಿ ಕ್ರಾಂತಿಕಾರಿಗಳ ನಾಯಕ ಕಲ್ಯಾಣಪ್ಪನಿಗೆ ಒಪ್ಪಿಸಿದ್ದರು . ತದನಂತರ ಬ್ರಿಟಿಷರು ಇವರನ್ನು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ಕ್ರೂರವಾಗಿ ಗಲ್ಲಿಗೇರಿಸಿದ್ದರು . ಮೇ 27ಕ್ಕೆ ಅವರು ಹುತಾತ್ಮರಾಗಿ 190 ವರ್ಷಗಳು ತುಂಬುತ್ತಿದ್ದು, ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ಅವರ ಹುತಾತ್ಮ ದಿನವನ್ನು ಆಚರಿಸಲು ಸಮಿತಿ ಕರೆ ನೀಡಿದೆ .

ಸಂಸ್ಮರಣಾ ಸಮಿತಿಯ ಪ್ರಮುಖ ಬೇಡಿಕೆಗಳು:

ಸ್ಮಾರಕ ಮತ್ತು ಪುತ್ತಳಿ ನಿರ್ಮಾಣ: ಉಪ್ಪಿನಂಗಡಿಯಲ್ಲಿ ಹಾಗೂ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಅಥವಾ ನಗರದ ಪ್ರಮುಖ ಜಾಗದಲ್ಲಿ ಮಂಜ ಬೈದ್ಯರ ಸ್ಮಾರಕ ಮತ್ತು ಕಂಚಿನ ಪುತ್ತಳಿಯನ್ನು ಸ್ಥಾಪಿಸಬೇಕು.

ಕಲ್ಲೇರಿಯಲ್ಲಿ ವೃತ್ತ ನಿರ್ಮಾಣ: ಉಪ್ಪಿನಂಗಡಿ ಮತ್ತು ಬೆಳ್ತಂಗಡಿಯ ಮಧ್ಯಭಾಗದ ಕಲ್ಲೇರಿಯಲ್ಲಿ ಮಂಜ ಬೈದ್ಯರ ಹೆಸರಿನಲ್ಲಿ ಭವ್ಯ ವೃತ್ತವನ್ನು ನಿರ್ಮಿಸಬೇಕು.

ರಸ್ತೆ ಹಾಗೂ ಕಾಲೇಜುಗಳಿಗೆ ನಾಮಕರಣ: ಉಪ್ಪಿನಂಗಡಿ-ಗುರುವಾಯನಕೆರೆ ಮುಖ್ಯ ರಸ್ತೆಗೆ ಹಾಗೂ ಅವಿಭಜಿತ ಪುತ್ತೂರು ತಾಲೂಕು ವ್ಯಾಪ್ತಿಯ ಯಾವುದಾದರೂ ಒಂದು ಮಿನಿ ವಿಧಾನಸೌಧ ಅಥವಾ ಸರ್ಕಾರಿ ಪದವಿ/ಪಿಯುಸಿ ಕಾಲೇಜಿಗೆ ಮಂಜ ಬೈದ್ಯರ ಹೆಸರನ್ನು ಇಡಬೇಕು.

ಪಠ್ಯಪುಸ್ತಕದಲ್ಲಿ ಅಳವಡಿಕೆ: ಶಾಲಾ-ಕಾಲೇಜುಗಳ ಪಠ್ಯಪುಸ್ತಕದಲ್ಲಿ ಮಂಜ ಬೈದ್ಯರ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಸೇರಿಸಿ, ಯುವ ಪೀಳಿಗೆಯಲ್ಲಿ ದೇಶಪ್ರೇಮ ಜಾಗೃತಿ ಮೂಡಿಸಬೇಕು.

ಸರ್ಕಾರಿ ಆಚರಣೆ: ಸರ್ಕಾರಿ ಮಟ್ಟದಲ್ಲಿ ಮಂಜ ಬೈದ್ಯರ ಹುಟ್ಟುಹಬ್ಬವನ್ನು ಹಾಗೂ ವೀರ ಹುತಾತ್ಮ ದಿನವನ್ನು ಅಧಿಕೃತವಾಗಿ ಆಚರಿಸಬೇಕು .

ಥೀಮ್ ಪಾರ್ಕ್ ನಿರ್ಮಾಣ: ಅವರನ್ನು ಗಲ್ಲಿಗೇರಿಸಲಾದ ಮಂಗಳೂರಿನ ಬಿಕರ್ಣಕಟ್ಟೆ ಬಳಿ ಅವರ ಹೆಸರಿನಲ್ಲಿ ಸ್ಮರಣಾರ್ಥ ‘ಥೀಮ್ ಪಾರ್ಕ್’ ನಿರ್ಮಿಸಬೇಕು.

ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಸಮಿತಿಯ ನಿಯೋಗದ ವತಿಯಿಂದ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ಸಮಿತಿ ತಿಳಿಸಿದೆ .

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರರಾದ ವೆಂಕಪ್ಪ ಪೂಜಾರಿ ಕುಕ್ಕುಜೆ, ಡಾ. ಹರ್ಷ ಸಂಪಿಗೆ, ಸಂಚಾಲಕರುಗಳಾದ ಪ್ರಭಾಕರ್ ಶೆಟ್ಟಿ, ವಿಜಯಗೌಡ ವೇಣೂರು, ರಾಘವ ಕಲ್ಮಂಜ, ಉದಯಬಂಡ, ನಿತ್ಯಾನಂದ ಹಾಗೂ ಮಂಜ ಬೈದ್ಯರ ಐದನೇ ತಲೆಮಾರಿನ ವಂಶಸ್ಥರಾದ ಜನಾರ್ಧನ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು


ಉಪ್ಪಿನಂಗಡಿಯ ಮುಖ್ಯ ರಸ್ತೆಗೆ ಅವರ ಹೆಸರು ಮತ್ತು ಗೆಜ್ಜೆಗಿರಿಯಲ್ಲಿ ಅವರ ಭವ್ಯ ಪ್ರತಿಮೆ : ಕಳೆದ ವರ್ಷ ಶಾಸಕ ಅಶೋಕ್ ಕುಮಾರ್ ರೈ ಘೋಷಣೆ

ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮಂಜ ಬೈದ್ಯ ಅವರ ನೆನಪಿನಲ್ಲಿ ಉಪ್ಪಿನಂಗಡಿಯ ಮುಖ್ಯ ರಸ್ತೆಗೆ ಅವರ ಹೆಸರನ್ನಿಡಲಾಗುವುದು ಮತ್ತು ಗೆಜ್ಜೆಗಿರಿಯಲ್ಲಿ ಅವರ ಭವ್ಯ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕಳೆದ ವರ್ಷ ಘೋಷಿಸಿದ್ದರು ಮತ್ತು ಅವರು ಮಾಧ್ಯಮದವರೊಂದಿಗೆ ಮಾತನಾಡಿ ಕೆಲವು ಮಾಹಿತಿ ನೀಡುತ್ತಾ, ಮೇ 27, 1837 ರಂದು ಬ್ರಿಟಿಷರು ಮಂಜ ಬೈದ್ಯ ಅವರನ್ನು ಮಂಗಳೂರಿನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದರು. ಬ್ರಿಟಿಷರು ಅತ್ಯಂತ ಕ್ರೂರವಾಗಿ ಅವರ ಮೃತದೇಹ ಕೊಳೆಯುವವರೆಗೂ ಗೂಟದಲ್ಲೇ ನೇತುಹಾಕಿದ್ದರು ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಅಂದು ಸುದ್ದಿಗೋಷ್ಠಿಯಲ್ಲಿ ಶಾಸಕರು ಹಂಚಿಕೊಂಡ ಪ್ರಮುಖಾಂಶಗಳನ್ನು ಮತ್ತೆ ನೀಡಲಾಗಿದೆ.

  • ಅಮರ ಕ್ರಾಂತಿಯ ನೆನಪು: 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷಗಳ ಮೊದಲೇ, ಅಂದರೆ 1837ರಲ್ಲಿ ದಕ್ಷಿಣ ಕನ್ನಡದಲ್ಲಿ ಬ್ರಿಟಿಷರ ವಿರುದ್ಧ ರೈತ ದಂಗೆ ನಡೆದಿತ್ತು. ಇದನ್ನು ‘ಕಲ್ಯಾಣಪ್ಪನ ಕಟುಕಾಯಿ’ (ಅಮರ ಸುಳ್ಯ ಬಂಡಾಯ) ಎಂದು ಕರೆಯಲಾಗುತ್ತದೆ. ಬ್ರಿಟಿಷರು ವಿಧಿಸಿದ ಅತಿಯಾದ ತೆರಿಗೆ, ನಗದು ರೂಪದಲ್ಲೇ ತೆರಿಗೆ ಪಾವತಿಸುವ ಕಠಿಣ ನಿಯಮ ಹಾಗೂ ಬೆಳೆ ತೆರಿಗೆಯ ವಿರುದ್ಧ ಈ ದಂಗೆ ಭುಗಿಲೆದ್ದಿತ್ತು. ಈ ಕ್ರಾಂತಿಯ ನೇತೃತ್ವ ವಹಿಸಿದ್ದ ಮತ್ತೊಬ್ಬ ಮಹಾನ್ ನಾಯಕ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನೂ ಸಹ ಈಗ ಅನಾವರಣಗೊಳಿಸಲಾಗುತ್ತಿದೆ.
  • 13 ದಿನಗಳ ಸ್ವಾತಂತ್ರ್ಯ: ಕಲ್ಯಾಣಪ್ಪನ ನೇತೃತ್ವದ ಕ್ರಾಂತಿಕಾರಿಗಳ ಸೈನ್ಯವು ಮುನ್ನುಗ್ಗಿ 1837ರ ಏಪ್ರಿಲ್ 5ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿತ್ತು. ಅಲ್ಲಿ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ, ಕ್ರಾಂತಿಕಾರಿ ಧ್ವಜವನ್ನು ಹಾರಿಸಿ ಭಾರತಾಂಬೆಗೆ ಜಯಘೋಷ ಮೊಳಗಿಸಿದ್ದರು. ಪರಿಣಾಮವಾಗಿ ಸತತ 13 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯು ಬ್ರಿಟಿಷರ ಆಡಳಿತದಿಂದ ಮುಕ್ತವಾಗಿ ಸ್ವತಂತ್ರವಾಗಿತ್ತು!
  • ಬ್ರಿಟಿಷರ ಕ್ರೌರ್ಯಕ್ಕೆ ಬಲಿಯಾದ ವೀರರು: ಆನಂತರ ಬ್ರಿಟಿಷ್ ಸೈನ್ಯವು ಈ ‘ಕೆನರಾ ದಂಗೆ’ಯನ್ನು ಅತ್ಯಂತ ಕ್ರೂರವಾಗಿ ಹತ್ತಿಕ್ಕಿತು. ಈ ಯುದ್ಧದಲ್ಲಿ ಅನೇಕರು ವೀರಮರಣ ಹೊಂದಿದರು, ಇನ್ನು ಹಲವರನ್ನು ಬ್ರಿಟಿಷರು ಬಂಧಿಸಿದರು. ಉಪ್ಪಿನಂಗಡಿಯ ಬಿಲ್ಲವ ಸಮುದಾಯಕ್ಕೆ ಸೇರಿದ ಮಂಜ ಬೈದ್ಯ ಅವರೂ ಬ್ರಿಟಿಷರ ಕೈಗೆ ಸಿಕ್ಕಿಬಿದ್ದರು. ಬ್ರಿಟಿಷ್ ಆಡಳಿತವು ಮಿಲಿಟರಿ ಕೋರ್ಟ್ (ಕೋರ್ಟ್ ಮಾರ್ಷಲ್) ನಡೆಸಿ ಮಂಜ ಬೈದ್ಯ, ಅಪ್ಪಯ್ಯ ಗೌಡ, ಕಲ್ಯಾಣಸ್ವಾಮಿ ಪುಟ್ಟಬಸಪ್ಪ ಮತ್ತು ನಂದಾವರ ಲಕ್ಷ್ಮಪ್ಪ ಬಂಗರಸ ಅವರಿಗೆ ಮರಣದಂಡನೆ ವಿಧಿಸಿತು.

ಮೇ 27, 1837 ರಂದು ಬ್ರಿಟಿಷರು ಮಂಜ ಬೈದ್ಯ ಅವರನ್ನು ಮಂಗಳೂರಿನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದರು. ಕರಾವಳಿಯ ಸ್ವಾತಂತ್ರ್ಯ ಸೇನಾನಿ ಉಬಾರ್‌ ಮಂಜ ಬೈದ್ಯರವರ ಅಂತಿಮ ದಿನ ಮೇ 27 ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ವಾರದಿಂದ ತುಳುವೆರ್‌ ಮದೆತಿನ ತುಳುವ ಬೊಳ್ಳಿ ಶೀರ್ಷಿಕೆಯಲ್ಲಿ ಅವರ ಕಾಲ್ಪನಿಕ ಚಿತ್ರ ಮತ್ತು ಮಾಹಿತಿಗಳು ಹರಿದಾಡುತ್ತಿರುವಾಗಲೇ “ಕ್ರಾಂತಿವೀರ ಉಬಾರ್ ಮಂಜ ಬೈದ್ಯ ಸಂಸ್ಮರಣಾ ಸಮಿತಿ”ಯನ್ನು ರಚಿಸಲಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ಸಂಪತ್‌ ಬಿ. ಸುವರ್ಣ ಅವರು ಈ ಕುರಿತು ಮಾಹಿತಿ ನೀಡಿ, ಸರ್ಕಾರದ ಮುಂದೆ ಹತ್ತು ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ


ಮಂಜ ಬೈದ್ಯ ಅವರಿಗೆ ಸಂಬಂಧಿಸಿದಂತೆ ́ಸಂಪದ ಸಾಲು ಪತ್ರಿಕೆಯ ಜೂನ್ 2023ರ ಸಂಚಿಕೆಯಲ್ಲಿ ಪ್ರಕಟವಾದ ಉಮಾಸುತ ಅವರ ಲೇಖನ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement
Click to comment

Leave a Reply

Your email address will not be published. Required fields are marked *

Article

ಆಕಾಶದ ಕಾಣುತ್ತಿದೆ ಅಚ್ಚರಿ: ಚಂದ್ರನ ಪಕ್ಕ‌ ಇಂದು ಮಿನುಗುತ್ತಿರುವ ‘ಬೆಳ್ಳಿ ಚುಕ್ಕೆ’ ಶುಕ್ರ ಗ್ರಹದ ರಹಸ್ಯ!

Published

on

ಆಕಾಶದಲ್ಲಿ ಚಂದ್ರನ ಸನಿಹದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿ ಮಿನುಗುತ್ತಿರುವುದು ಯಾವುದೇ ನಕ್ಷತ್ರವಲ್ಲ, ಬದಲಾಗಿ ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ (Venus). ಸಂಜೆಯ ಪಶ್ಚಿಮ ದಿಗಂತದಲ್ಲಿ ಬಾಲಚಂದ್ರ ಹಾಗೂ ಈ ಬೆಳ್ಳಿ ಚುಕ್ಕೆಯು ಪರಸ್ಪರ ಅತ್ಯಂತ ಹತ್ತಿರದಲ್ಲಿ ಗೋಚರಿಸುತ್ತಿರುವುದು ಎಲ್ಲೆಡೆ ಭಾರಿ ಕುತೂಹಲ ಮೂಡಿಸಿದೆ.

ಇದು ನಕ್ಷತ್ರವೇಕಲ್ಲ? ಶುಕ್ರ ಗ್ರಹದ ವಿಶೇಷತೆ

ಸ್ವಂತ ಬೆಳಕಿಲ್ಲದಿದ್ದರೂ ಕಾಂತಿ: ಸಾಮಾನ್ಯ ನಕ್ಷತ್ರಗಳು ತಮ್ಮ ಸ್ವಂತ ಬೆಳಕಿನಿಂದ ಮಿನುಗುತ್ತವೆ. ಆದರೆ ಶುಕ್ರ ಗ್ರಹಕ್ಕೆ ಸ್ವಂತ ಬೆಳಕಿಲ್ಲ. ಇದು ಸೂರ್ಯನ ಬೆಳಕನ್ನು ಅತ್ಯಧಿಕ ಪ್ರಮಾಣದಲ್ಲಿ ಪ್ರತಿಫಲಿಸುವುದರಿಂದ ರಾತ್ರಿ ಆಕಾಶದಲ್ಲಿ ಚಂದ್ರ ಬಿಟ್ಟರೆ ಅತಿ ಹೆಚ್ಚು ಕಾಂತಿಯುತವಾಗಿ ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ಇದನ್ನು ‘ಸಂಜೆ ನಕ್ಷತ್ರ’ ಅಥವಾ ‘ಬೆಳ್ಳಿ ಚುಕ್ಕೆ’ ಎಂದು ಕರೆಯಲಾಗುತ್ತದೆ.

ದಟ್ಟ ವಾತಾವರಣ: ಶುಕ್ರ ಗ್ರಹವು ಸೂರ್ಯನಿಗೆ ಹತ್ತಿರವಿರುವ ಗ್ರಹವಾಗಿದ್ದು, ಇದರ ದಟ್ಟವಾದ ವಾತಾವರಣವು ಸೂರ್ಯನ ಬೆಳಕನ್ನು ಬಲವಾಗಿ ಪ್ರತಿಫಲಿಸುತ್ತದೆ.

ಸಂಯೋಗ (Conjunction) ಮತ್ತು ಚಂದ್ರ ಮರೆಮಾಚುವಿಕೆ (Lunar Occultation)

ಗ್ರಹ-ಚಂದ್ರ ಯುತಿ: ಖಗೋಳಶಾಸ್ತ್ರದ ಪ್ರಕಾರ, ಭೂಮಿ, ಚಂದ್ರ ಮತ್ತು ಶುಕ್ರ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ನಿರ್ದಿಷ್ಟ ಸಾಪೇಕ್ಷ ಸ್ಥಾನಕ್ಕೆ ಬಂದಾಗ ಒಂದೇ ನೇರ ಸಾಲಿನಲ್ಲಿ (Conjunction) ಅತಿ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತವೆ. ಭೂಮಿಯಿಂದ ನೋಡುವಾಗ ಈ ಎರಡೂ ಆಕಾಶಕಾಯಗಳು ಅಕ್ಕಪಕ್ಕದಲ್ಲಿ ಇದ್ದಂತೆ ಭಾಸವಾಗುತ್ತವೆ.

ಚಂದ್ರ ಮರೆಮಾಚುವಿಕೆ: ಭಾರತದ ಕೆಲ ಭಾಗಗಳಲ್ಲಿ ಚಂದ್ರನು ಶುಕ್ರ ಗ್ರಹದ ಮುಂಭಾಗದಲ್ಲೇ ಹಾದುಹೋಗುವ ಅಪರೂಪದ ‘ಚಂದ್ರ ಮರೆಮಾಚುವಿಕೆ’ (Lunar Occultation) ವಿದ್ಯಮಾನವೂ ಜರಗಿದೆ. ಅಂದರೆ ಕೆಲಕಾಲ ಶುಕ್ರ ಗ್ರಹವು ಚಂದ್ರನ ಹಿಂದೆ ಮರೆಯಾಗಿ, ನಂತರ ಆಚೆ ಬಂದಿದೆ. ಇದು ಬರಿಗಣ್ಣಿಗೂ ಅತ್ಯಂತ ಆಕರ್ಷಕವಾಗಿ ಗೋಚರಿಸುವ ದೃಶ್ಯವಾಗಿದೆ.

ಚೌತಿ ಚಂದ್ರನ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ

ಪೌರಾಣಿಕ ಹಿನ್ನೆಲೆ: ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ (ಗಣೇಶ ಚತುರ್ಥಿ) ದಿನ ಚಂದ್ರನನ್ನು ನೋಡಿದರೆ ಕಳಂಕ ಅಥವಾ ಅಪವಾದ ಬರುತ್ತದೆ (ಮಣಿಭರಣ ಕಳಂಕ) ಎಂಬುದು ಜನರಲ್ಲಿ ಶತಶತಮಾನಗಳಿಂದ ರೂಢಿಯಲ್ಲಿರುವ ನಂಬಿಕೆಯಾಗಿದೆ.

ವೈಜ್ಞಾನಿಕ ಸತ್ಯ: ಖಗೋಳ ವಿಜ್ಞಾನದ ದೃಷ್ಟಿಯಿಂದ ಚಂದ್ರನನ್ನು ನೋಡುವುದರಿಂದ ಯಾವುದೇ ಶಾಪ, ಅಪವಾದ ಅಥವಾ ಕೆಟ್ಟ ಪರಿಣಾಮಗಳು ಸಂಭವಿಸುವುದಿಲ್ಲ. ಇದು ಕೇವಲ ನೈಸರ್ಗಿಕ ಉಪಗ್ರಹವಾಗಿದ್ದು, ಭೂಮಿಯ ಸುತ್ತ ನಿರಂತರವಾಗಿ ಸುತ್ತುತ್ತದೆ. ಚತುರ್ಥಿಯ ದಿನ ಚಂದ್ರನು ಭೂಮಿಗೆ ಮತ್ತು ಸೂರ್ಯನಿಗೆ ಇರುವ ಸಾಪೇಕ್ಷ ಸ್ಥಾನದಿಂದಾಗಿ ತೆಳುವಾದ ಕಮಾನು ಅಥವಾ ಅರ್ಧಚಂದ್ರಾಕಾರದಲ್ಲಿ ಗೋಚರಿಸುತ್ತಾನೆ.

ವೀಕ್ಷಣೆ ಹೇಗೆ?

ಅಮಾವಾಸ್ಯೆಯ ನಂತರದ ಆರಂಭಿಕ ದಿನಗಳಲ್ಲಿ (ಬಾಲಚಂದ್ರನಿದ್ದಾಗ) ಪಶ್ಚಿಮ ಆಕಾಶದಲ್ಲಿ ಸಂಜೆಯ ಹೊತ್ತು ಈ ಅದ್ಭುತ ದೃಶ್ಯವು ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಕಾರಣದಿಂದ ಜನರು ಇದನ್ನು ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Continue Reading

Article

ಸರ್ವರಲ್ಲೂ ಸಮಭಾವದ ಪ್ರತೀಕ ಗಣೇಶೋತ್ಸವ: ಹಬ್ಬಗಳು ಒಗ್ಗಟ್ಟಿನ ಸೇತುವೆಯಾಗಲಿ

Published

on

✍️ ಜ್ಯೋತಿಪ್ರಕಾಶ್‌ ಪುಣಚ, ಪ್ರಧಾನ ಸಂಪಾದಕರು, ದೀವಟಿಗೆ ಡಿಜಿಟಲ್‌ ಮೀಡಿಯಾ-9448441282

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧ್ರಾಮಿಕ ಆಚರಣೆಗಳಲ್ಲ, ಅವು ಮನುಕುಲವನ್ನು ಬೆಸೆಯುವ ಭಾವನಾತ್ಮಕ ಕೊಂಡಿಗಳು. ಅದರಲ್ಲಿಯೂ ಗಣೇಶ ಚತುರ್ಥಿಯು ವಿಘ್ನಗಳನ್ನು ನಿವಾರಿಸಿ, ಬುದ್ಧಿವಂತಿಕೆ ಹಾಗೂ ಸಮೃದ್ಧಿಯನ್ನು ತರುವ ಹಬ್ಬವಾಗಿ ಮಾತ್ರವಲ್ಲದೆ, ಸಮಾಜದಲ್ಲಿ ಸೌಹಾರ್ದತೆ ಮತ್ತು ಐಕ್ಯತೆಯನ್ನು ಸಾರುವ ಮಹತ್ವದ ಸಂದರ್ಭವಾಗಿದೆ.

ಪ್ರಕೃತಿಯ ವಿಸ್ಮಯವನ್ನು ಗಮನಿಸಿದರೆ ನಮಗೆ ದೊಡ್ಡ ಪಾಠ ಸಿಗುತ್ತದೆ. ಸೂರ್ಯನ ಬೆಳಕು, ಚಂದ್ರನ ತಂಪಾದ ಬೆಳಕು, ಬೀಸುವ ಗಾಳಿ ಮತ್ತು ಹರಿಯುವ ನದಿಗಳು ಎಂದಿಗೂ ಜಾತಿ, ಮತ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಪ್ರಕೃತಿಯು ಇಡೀ ಮಾನವ ಕುಲವನ್ನು ತನ್ನ ಮಕ್ಕಳಂತೆ ಸಮಾನವಾಗಿ ಕಾಣುತ್ತದೆ. ಅದೇ ರೀತಿ, ನಮ್ಮ ಹಬ್ಬಗಳ ಆಚರಣೆಯೂ ಕೂಡ ಭೇದಭಾವಗಳನ್ನು ಮರೆತು ಎಲ್ಲರನ್ನು ಅಪ್ಪಿಕೊಳ್ಳುವಂತಾಗಬೇಕು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಮುನ್ನುಡಿ ಬರೆದಾಗ, ಅದರ ಮುಖ್ಯ ಉದ್ದೇಶವೇ ಜಾತಿ-ಮತಗಳ ಗಡಿಯನ್ನು ಮೀರಿ ಇಡೀ ಸಮಾಜವನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯವನ್ನು ಬಿತ್ತುವ ಮಾಧ್ಯಮಗಳಾಗಬೇಕಿದೆ.

ಪ್ರತಿಯೊಬ್ಬರಿಗೂ ಅವರವರ ಧರ್ಮ, ನಂಬಿಕೆಗಳು ಮತ್ತು ಆಚರಣೆಗಳು ಶ್ರೇಷ್ಠವಾಗಿರುವುದು ಸಹಜ ಮತ್ತು ನೈಸರ್ಗಿಕ. ಆದರೆ, ತನ್ನ ಧರ್ಮದಷ್ಟೇ ಇತರರ ಧರ್ಮವನ್ನೂ ಗೌರವಿಸುವುದೇ ನಿಜವಾದ ಮಾನವತೆಯ ಪ್ರತೀಕ. ದ್ವೇಷ ಅಥವಾ ಅಸೂಯೆಗಾಗಿ ಒಗ್ಗೂಡುವುದಕ್ಕಿಂತ, ಸೌಹಾರ್ದತೆ ಮತ್ತು ಮಾನವೀಯತೆಗಾಗಿ ಒಂದಾಗುವುದೇ ಹಬ್ಬಗಳ ಅತಿ ದೊಡ್ಡ ಸಂದೇಶ.

ಈ ಗಣೇಶ ಚತುರ್ಥಿಯಂದು ವಿಘ್ನಹರ್ತನನ್ನು ಆರಾಧಿಸುವಾಗ, ನಮ್ಮ ಮನಸ್ಸಿನಲ್ಲಿರುವ ಅಹಂಕಾರ, ತಾರತಮ್ಯ ಮತ್ತು ದ್ವೇಷದ ಭಾವನೆಗಳನ್ನು ವಿಸರ್ಜಿಸೋಣ. ಪ್ರಕೃತಿಯಂತೆ ವಿಶಾಲವಾದ ಹೃದಯವನ್ನು ರೂಢಿಸಿಕೊಂಡು, ಎಲ್ಲರೊಂದಿಗೆ ಬೆರೆತು ಬಾಳುವ ಸಂಕಲ್ಪ ಮಾಡೋಣ. ಹಬ್ಬಗಳು ನಮ್ಮನ್ನು ವಿಭಜಿಸದೆ, ಸೌಹಾರ್ದತೆಯ ಬಂಧದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೆಸೆಯಲಿ.

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು!

Continue Reading

Article

ಚಿತ್ರದಲ್ಲಿ ತಾಯಿಯನ್ನು ಹುಡುಕಿದ ಕರು: ಪ್ರಕೃತಿಯ ಮಮತೆ ಮತ್ತು ಮಾನವನ ಕಠೋರತೆಗೆ ಹಿಡಿದ ಕನ್ನಡಿ

Published

on

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ಸಣ್ಣ ವಿಡಿಯೋ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ತಾಯಿಯ ಪ್ರೀತಿ, ಮಮತೆ ಮತ್ತು ಅಪ್ಪುಗೆಗಾಗಿ ಒಂದು ಜೀವ ಎಷ್ಟು ತವಕಿಸುತ್ತದೆ ಎಂಬುದಕ್ಕೆ ಈ ಸನ್ನಿವೇಶ ಸಾಕ್ಷಿಯಾಗಿದೆ.

ರಸ್ತೆಯ ಬದಿಯಲ್ಲಿ ನಿಂತಿದ್ದ ಹಾಲಿನ ಡೈರಿಯ ಲಾರಿಯೊಂದರ ಹಿಂಭಾಗದಲ್ಲಿ ಹಸುವಿನ ದೊಡ್ಡ ಚಿತ್ರವಿತ್ತು (ಪೋಸ್ಟರ್). ಹಾದಿಯಲ್ಲಿ ಅನಾಥವಾಗಿ ಅಲೆಯುತ್ತಿದ್ದ ಸಣ್ಣ ಕರುವೊಂದು ಆ ಚಿತ್ರವನ್ನು ಕಂಡ ತಕ್ಷಣ, ಅದು ತನ್ನದೇ ಹೆತ್ತ ತಾಯಿ ಎಂದು ಭಾವಿಸಿದೆ. ಓಡೋಡಿ ಬಂದು “ಅಂಬಾ…” ಎಂದು ಕರೆದಿದೆ. ಚಿತ್ರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ತಾಯಿಯ ಬಳಿಗೆ ಹೋಗಲು ಹಂಬಲಿಸಿ ಲಾರಿಯ ಹಿಂಭಾಗಕ್ಕೆ ತನ್ನ ಮುಂಗಾಲುಗಳನ್ನಿಟ್ಟು ನಿಂತಿದೆ. ಹಸುವಿನ ಚಿತ್ರದಲ್ಲಿದ್ದ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ನಿರಂತರ ಪ್ರಯತ್ನ ನಡೆಸಿದೆ.

ಆದರೆ, ಅದು ಕೇವಲ ನಿರ್ಜೀವ ಪೋಸ್ಟರ್ ಎಂಬ ಸತ್ಯ ಆ ಮುಗ್ಧ ಕರುವಿಗೆ ತಿಳಿಯಲಿಲ್ಲ. “ತಾಯಿ ನನ್ನನ್ನು ಏಕೆ ಹತ್ತಿರಕ್ಕೆ ಕರೆದುಕೊಳ್ಳುತ್ತಿಲ್ಲ, ಏಕೆ ಹಾಲು ನೀಡುತ್ತಿಲ್ಲ?” ಎಂದು ಅದು ನಿರಾಶೆಯಿಂದ ಗೋಗರೆಯುವ ದೃಶ್ಯ ಪ್ರತಿಯೊಬ್ಬರ ಕರುಳನ್ನು ಹಿಂಡುವಂತಿದೆ.

ಹೈನುಗಾರಿಕೆ ಮತ್ತು ನಮ್ಮ ನೈತಿಕತೆ:

ಈ ಸನ್ನಿವೇಶವು ಕೇವಲ ಒಂದು ವೈರಲ್ ವಿಡಿಯೋ ಅಲ್ಲ; ಬದಲಿಗೆ ಪ್ರಸ್ತುತ ಸಮಾಜದಲ್ಲಿ ಸಾಗುತ್ತಿರುವ ಹೈನುಗಾರಿಕೆ ಉದ್ಯಮದ ಕಠೋರ ನೈಜತೆಗೆ ಹಿಡಿದ ಕನ್ನಡಿ. ಪ್ರತಿಯೊಂದು ಪ್ರಾಣಿ-ಪಕ್ಷಿಗೂ ತಾಯಿಯ ಮಮತೆ ಅತ್ಯಗತ್ಯ. ಆದರೆ ಮನುಷ್ಯ ತನ್ನ ಸ್ವಾರ್ಥ ಮತ್ತು ಲಾಭಕ್ಕಾಗಿ ಕರು ಕುಡಿಯಬೇಕಾದ ಹಾಲನ್ನು ಸಂಪೂರ್ಣವಾಗಿ ಹಿಂಡಿ ಮಾರಾಟ ಮಾಡುತ್ತಿದ್ದಾನೆ.

ಅದರಲ್ಲೂ ವಿಶೇಷವಾಗಿ ಗಂಡು ಕರು ಹುಟ್ಟಿದರೆ, ಹಾಲು ನೀಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಅದನ್ನು ಬೀದಿಗೆ ತಳ್ಳುವುದು ಅಥವಾ ಅನಾಥವಾಗಿ ಬಿಟ್ಟುಬಿಡುವುದು ಸಮಾಜದಲ್ಲಿ ಸಾಮಾನ್ಯವಾಗಿದೆ. ತಾಯಿಯ ಹಾಲಿನಿಂದಲೂ, ತಾಯಿಯ ಪ್ರೀತಿಯಿಂದಲೂ ವಂಚಿತವಾದ ಇಂತಹ ಮುಗ್ಧ ಜೀವಿಗಳು ರಸ್ತೆ ರಸ್ತೆಗಳಲ್ಲಿ ಅಲೆಯುತ್ತಾ, ನಿರ್ಜೀವ ಚಿತ್ರಗಳಲ್ಲೂ ತಮ್ಮ ತಾಯಿಯನ್ನು ಹುಡುಕುವ ಪರಿಸ್ಥಿತಿ ಬಂದೊದಗಿರುವುದು ಅತ್ಯಂತ ಶೋಚನೀಯ.

ಈ ವಿಡಿಯೋ ನಮಗೆಲ್ಲರಿಗೂ ಒಂದು ಪ್ರಶ್ನೆಯನ್ನು ಎಸೆದಿದೆ — ಮನುಷ್ಯನ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳ ಕರುಳ ಬಳ್ಳಿಯ ಬಂಧವನ್ನು ಹೀಗೆ ತುಂಡರಿಸುವುದು ಎಷ್ಟು ಸರಿ? ಪ್ರಾಣಿಗಳ ಮೇಲಿನ ದಯೆ ಮತ್ತು ಕರುಣೆ ಕೇವಲ ಮಾತಿಗೆ ಸೀಮಿತವಾಗದೇ ಕಾರ್ಯಾಚರಣೆಗೆ ಬರಬೇಕಿದೆ

Continue Reading

Trending

Copyright © 2025 Deevatige

error: Content is protected !!