Connect with us

PRESS MEET

ಪುತ್ತೂರು ಜಾತ್ರೆ ಅಂಗಡಿ ಹರಾಜು: ಅವ್ಯವಹಾರದ ಆರೋಪ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ

Published

on

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯು ಇದೀಗ ಪರ-ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಸಂತೆ ವ್ಯಾಪಾರಸ್ಥರೊಬ್ಬರು ಆರೋಪಿಸಿದ್ದರೆ, ದೇವಸ್ಥಾನದ ಆಡಳಿತ ಮಂಡಳಿಯು ಈ ಆರೋಪಗಳನ್ನು ತಳ್ಳಿಹಾಕಿದ್ದು, ವ್ಯಾಪಾರಿಗಳ ಹಿತದೃಷ್ಟಿಯಿಂದಲೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಭ್ರಷ್ಟಾಚಾರ ನಡೆದಿದೆ: ಮಹೇಶ್ ದಾಸ್ ಆರೋಪ

ಸಂತೆ ವ್ಯಾಪಾರಸ್ಥ ಮಹೇಶ್ ದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತ್ರಾ ಗದ್ದೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದರೂ ಕೇವಲ 320 ಅಂಗಡಿಗಳನ್ನು ಮಾತ್ರ ಹರಾಜು ಮಾಡಲಾಗಿದೆ. ಉಳಿದ ಅಂಗಡಿಗಳನ್ನು ಹರಾಜು ಮಾಡದೆ ಅಕ್ರಮವಾಗಿ ಹಣ ಪಡೆಯಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಒಂದು ಸ್ಟಾಲ್‌ನಿಂದ ಕಸ ವಿಲೇವಾರಿ ಹೆಸರಿನಲ್ಲಿ 1,000 ರೂ.ನಂತೆ ಸುಮಾರು 3.20 ಲಕ್ಷ ರೂ. ವಸೂಲಿ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಕಾನೂನು ಇಲ್ಲಿ ಪಾಲನೆಯಾಗಿಲ್ಲ ಎಂದೂ ಅವರು ದೂರಿದ್ದಾರೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದಾರೆ.

ಈಶ್ವರ ಭಟ್ ಪಂಜಿಗುಡ್ಡೆ ತೀಕ್ಷ್ಣ ಪ್ರತಿಕ್ರಿಯೆ

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗಡಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಅವರು ತಳ್ಳಿಹಾಕಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಯ ಪ್ರತಿ ಪೈಸೆಗೂ ಪಾರದರ್ಶಕವಾದ ಲೆಕ್ಕವಿದೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿ ಮಾಡಿದವರು ಮಂಗಳಾದೇವಿಯಲ್ಲಿ, ವಿಟ್ಲದಲ್ಲಿ, ಕುದ್ರೋಳಿಯಲ್ಲಿ ಮತ್ತು ಪುತ್ತೂರಿನಲ್ಲೂ ಗಲಾಟೆ ಮಾಡಿದ್ದಾರೆ. ವ್ಯಾಪಾರಸ್ಥರ ಮದ್ಯೆ ಅವರಿಗೆ ಹೊಂದಾಣಿಕೆ ಇಲ್ಲದೆ ಅವರ ವೈಯುಕ್ತಿಕ ವಿಷಯವನ್ನು ದೇವಸ್ಥಾನಕ್ಕೆ ತರುವುದು ಸರಿಯಲ್ಲ.

ನಿಯಮ ಮೀರಿ ಅಂಗಡಿ ನೀಡಲಾಗಿಲ್ಲ: ಸ್ಪಷ್ಟನೆ

ಜಾತ್ರಾ ಗದ್ದೆಯ ಹರಾಜಿನಲ್ಲಿ ಒಬ್ಬರಿಗೆ ಕೇವಲ ಒಂದು ಅಂಗಡಿ ನೀಡಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, “ದೊಡ್ಡ ವ್ಯಾಪಾರಸ್ಥರಿಗೆ ಕೇವಲ 10×10ಅಳತೆಯ ಒಂದು ಸಣ್ಣ ಅಂಗಡಿಯಲ್ಲಿ ವ್ಯಾಪಾರ ನಡೆಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಒಂದಕ್ಕಿಂತ ಹೆಚ್ಚು ಅಂಗಡಿಯನ್ನು ನೀಡಲಾಗಿದೆಯೇ ಹೊರತು ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ,” ಎಂದರು.

ಕಸ ವಿಲೇವಾರಿ ಮತ್ತು ಭಂಡಾರಕ್ಕೆ ಸೇರಿದ ಹಣ

ಅಂಗಡಿಗಳಿಂದ ಕಸ ವಿಲೇವಾರಿ ಹೆಸರಿನಲ್ಲಿ ತಲಾ 1,000 ರೂ. ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಮೊತ್ತವನ್ನು ಪ್ರತಿ ದಿನದ ಸ್ವಚ್ಛತೆ ಮತ್ತು ಕಸ ವಿಲೇವಾರಿ ವಾಹನಗಳ ನಿರ್ವಹಣೆಗಾಗಿ ಬಳಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 50,000 ರೂ. ಉಳಿತಾಯವಾಗಿದ್ದು, ಅದು ನೇರವಾಗಿ ದೇವಸ್ಥಾನದ ಭಂಡಾರಕ್ಕೆ ಸೇರಿದೆ. ಈ ಹಣ ಈಶ್ವರ ಭಟ್ ಅವರ ವೈಯಕ್ತಿಕ ಕಿಸೆಗೆ ಹೋಗುವುದಿಲ್ಲ, ಇದನ್ನು ಟೀಕಿಸುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಾಖಲೆ ಪ್ರಮಾಣದ ಆದಾಯ ಸಂಗ್ರಹ

ದೇವಸ್ಥಾನದ ಆದಾಯದ ಕುರಿತು ಅಂಕಿಅಂಶಗಳನ್ನು ನೀಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಗಣನೀಯ ಪ್ರಗತಿಯಾಗಿದೆ ಎಂದರು:

ಅಮ್ಯೂಸ್‌ಮೆಂಟ್ ಪಾರ್ಕ್: ಈ ಹಿಂದೆ 50 ಲಕ್ಷ ರೂ.ಗೆ ಹರಾಜಾಗಿದ್ದರೂ ಬಿಡ್‌ದಾರರು ಪಾವತಿಸಿದ್ದು ಕೇವಲ 35 ಲಕ್ಷ ರೂ. ಮಾತ್ರ. ಉಳಿದ ಹಣಕ್ಕಾಗಿ ದೇವಸ್ಥಾನದಿಂದ ಕೇಸ್ ದಾಖಲಿಸಲಾಗಿದೆ.

ಪ್ರಸಕ್ತ ಸಾಲಿನ ಆದಾಯ: ಈ ಬಾರಿ ಕೇವಲ 35 ಲಕ್ಷ ರೂ.ನಿಂದ ಬಿಡ್ಡಿಂಗ್ ಆರಂಭಿಸಿ, ದಾಖಲೆಯ 66 ಲಕ್ಷ ರೂ. ಗೆ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಒಟ್ಟು ಜಮೆ: ಈ ಬಾರಿ ಜಾಯಿಂಟ್ ವೀಲ್‌ನಿಂದ 66 ಲಕ್ಷ ರೂ. ಹಾಗೂ ವಿವಿಧ ಸ್ಟಾಲ್‌ಗಳಿಂದ 69.28 ಲಕ್ಷ ರೂ. ಸೇರಿ ಒಟ್ಟು 1.36 ಕೋಟಿ ರೂ. ಹಣ ದೇವಸ್ಥಾನಕ್ಕೆ ಜಮೆಯಾಗಿದೆ.

ಪಾರದರ್ಶಕ ಹರಾಜು ಪ್ರಕ್ರಿಯೆ

ಲೈಟಿಂಗ್ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ ಅವರು, ಊರಿನವರಿಗೆ ನೀಡಬೇಕೆಂಬ ಒತ್ತಾಯವಿತ್ತಾದರೂ, ಸ್ಥಳೀಯರು 6 ಲಕ್ಷ ರೂ.ಗಳಿಗೆ ಕೇಳಿದ್ದರು. ಆದರೆ ನಾವು ಅದಕ್ಕಿಂತ ಕಡಿಮೆ ದರಕ್ಕೆ ನೀಡುವ ಮೂಲಕ ಪಾರದರ್ಶಕತೆ ಕಾಪಾಡಿಕೊಂಡಿದ್ದೇವೆ. ಹರಾಜಿನ ಹೊರತಾಗಿ ಬಂದವರಿಂದ ಪಡೆದ ಪ್ರತಿಯೊಂದು ಪೈಸೆಗೂ ದೇವಸ್ಥಾನದ ವತಿಯಿಂದಲೇ ರಶೀದಿ ನೀಡಲಾಗಿದೆ ಮತ್ತು ಪ್ರತಿಯೊಬ್ಬರ ಹೆಸರು ಸಮೇತ ಲೆಕ್ಕವಿದೆ ಎಂದು ಅವರು ವಿವರಿಸಿದರು.

“ಲಕ್ಷಾಂತರ ಭಕ್ತರು ಜಾತ್ರೆಯ ಯಶಸ್ಸನ್ನು ಶ್ಲಾಘಿಸುತ್ತಿರುವಾಗ, ಕೇವಲ ಐದಾರು ಮಂದಿ ಟೀಕೆ ಮಾಡುತ್ತಿರುವುದು ವಿಷಾದನೀಯ. ಇಂತಹ ಟೀಕೆಗಳಿಗೆ ನಾವು ಕಿವಿಗೊಡುವುದಿಲ್ಲ, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ,” ಎಂದು ಈಶ್ವರ ಭಟ್ ಪಂಜಿಗುಡ್ಡೆಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

AWARNESS

ಮಂಗಳೂರಿನಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ‘ಗೋಮಾತೆಯ ಗೌರವ’ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

Published

on

ಮಂಗಳೂರು: ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕೇಂದ್ರ ಸರ್ಕಾರ ಕೂಡಲೇ ಕಾನೂನು ಜಾರಿಗೆ ತರಬೇಕು, ಗೋವನ್ನು ‘ರಾಷ್ಟ್ರಮಾತೆ’ಯಾಗಿ ಘೋಷಿಸಬೇಕು ಹಾಗೂ ಗೋವಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಗೋಮಾತೆಯ ಗೌರವ’ ಅಭಿಯಾನದ 3ನೇ ಹಂತಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ.

ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಅವರು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಅಭಿಯಾನದ ಪ್ರಮುಖ ರೂಪುರೇಷೆಗಳು:

ಸಮಿತಿಗಳ ರಚನೆ: ಅಭಿಯಾನದ ಯಶಸ್ಸಿಗಾಗಿ ಜಿಲ್ಲಾ ಮಟ್ಟದಲ್ಲಿ 108 ಸದಸ್ಯರ ಸಮಿತಿ, 9 ತಾಲೂಕುಗಳಲ್ಲಿ ತಲಾ 21 ಸದಸ್ಯರ ಸಮಿತಿ ಹಾಗೂ ಗ್ರಾಮ ಮಟ್ಟದಲ್ಲಿ 6 ಸದಸ್ಯರ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ.

ಮನೆಮನೆ ಅಭಿಯಾನ: ಮುಂದಿನ ಎರಡು ತಿಂಗಳ ಕಾಲ ಕಾರ್ಯಕರ್ತರು ನೇರವಾಗಿ ಮನೆಮನೆಗೆ ತೆರಳಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಿದ್ದಾರೆ.

ಗಣೇಶೋತ್ಸವದ ವಿಶೇಷ ಸ್ಪರ್ಶ: ಗಣೇಶೋತ್ಸವ ಸಂದರ್ಭದಲ್ಲಿ ಈ ಅಭಿಯಾನಕ್ಕೆ ವಿಶೇಷ ಚಾಲನೆ ನೀಡಲಾಗಿದ್ದು, ಪ್ರತಿ ಗಣೇಶೋತ್ಸವ ಮಂಡಳಿಯಲ್ಲಿ ಪೂಜೆ ಸಲ್ಲಿಸಿ ಅಭಿಯಾನ ಆರಂಭಿಸಲಾಗಿದೆ. ಇದರೊಂದಿಗೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಸಹಿ ಸಂಗ್ರಹಕ್ಕಾಗಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ.

ದೇಶಾದ್ಯಂತ 30 ಕೋಟಿ ಸಹಿ ಸಂಗ್ರಹ ಗುರಿ:

ಈ ಹಿಂದೆ ಪ್ರಥಮ ಹಂತದಲ್ಲಿ 5 ಕೋಟಿ ಹಾಗೂ ಎರಡನೇ ಹಂತದಲ್ಲಿ 16 ಕೋಟಿ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗಳು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಮೂರನೇ ಹಂತದಲ್ಲಿ ದೇಶಾದ್ಯಂತ ಹೆಚ್ಚುವರಿಯಾಗಿ 30 ಕೋಟಿ ಸಹಿ ಸಂಗ್ರಹಿಸುವ ಬೃಹತ್ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಶರಣ್ ಪಂಪ್‌ವೆಲ್ ವಿವರಿಸಿದರು.

ಮುಂದಿನ ಹೋರಾಟದ ಹಾದಿ:

ಡಿಸೆಂಬರ್ 17 ರಂದು ಬೃಹತ್ ಸಮಾವೇಶ: ಸಂಗ್ರಹಿಸಲಾದ ಎಲ್ಲಾ ಸಹಿಪತ್ರಗಳನ್ನು ಕ್ರೋಢೀಕರಿಸಿ ಡಿಸೆಂಬರ್ 17 ರಂದು ಮೂರು ಲಕ್ಷಕ್ಕೂ ಹೆಚ್ಚು ಗೋಪ್ರೇಮಿಗಳ ಮಹಾಸಮಾವೇಶ ನಡೆಸಿ, ರಾಜ್ಯಪಾಲರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯೊಂದರಿಂದಲೇ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ದೆಹಲಿಯಲ್ಲಿ ಉಗ್ರ ಹೋರಾಟದ ಎಚ್ಚರಿಕೆ: ಈ ಹಂತದಲ್ಲೂ ಕೇಂದ್ರ ಸರ್ಕಾರ ಸ್ಪಂದಿಸದೆ ಹೋದರೆ, ಮುಂಬರುವ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್ ಸಮಾವೇಶ ನಡೆಸಿ ರಾಷ್ಟ್ರಪತಿಗಳಿಗೆ ನೇರವಾಗಿ ಮನವಿ ಸಲ್ಲಿಸಲಾಗುವುದು. ಅಲ್ಲದೆ, ದೇಶದ ಸಾಧು-ಸಂತರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಅಭಿಯಾನದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರ, ಬಜರಂಗದಳ, ಬಿಜೆಪಿ, ಎಬಿವಿಪಿ, ಸೇವಾ ಭಾರತಿ ಸೇರಿದಂತೆ 20ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳು, ಗಣೇಶೋತ್ಸವ ಸಮಿತಿಗಳು ಮತ್ತು ಗೋಶಾಲೆಗಳು ಸಕ್ರಿಯವಾಗಿ ಕೈಜೋಡಿಸಿವೆ.

Continue Reading

crime

ಮಂಗಳೂರು: ನಂದಿನಿ ಜೀವಬೆದರಿಕೆ ಪ್ರಕರಣ — ಶೀಘ್ರ ಬಂಧನಕ್ಕೆ ವಿಹೆಚ್‌ಪಿ ಆಗ್ರಹ; ಕಾನೂನು ಪ್ರಕಾರವೇ ಕ್ರಮ ಎಂದ ಪೋಲಿಸ್ ಕಮಿಷನರ್

Published

on

ಮಂಗಳೂರು: ಮಹಿಳೆಯೊಬ್ಬರಿಗೆ ಫೋನ್ ಮೂಲಕ ಅಶ್ಲೀಲವಾಗಿ ಮಾತನಾಡಿ, ಜೀವಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನ ತಡವಾಗುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (VHP) ಪತ್ರಿಕಾಗೋಷ್ಠಿಗೆ ಕರೆ ನೀಡಿದ್ದರೆ, ಮತ್ತೊಂದೆಡೆ ಮಂಗಳೂರು ಪೊಲೀಸ್ ಕಮಿಷನರ್ ಈ ಬಗ್ಗೆ ಕಾನೂನು ಸ್ಪಷ್ಟನೆ ನೀಡಿದ್ದಾರೆ.

ವಿಹೆಚ್‌ಪಿ ಪತ್ರಿಕಾಗೋಷ್ಠಿ ಮತ್ತು ಆಗ್ರಹ: ಶ್ರೀಮತಿ ನಂದಿನಿ ಅವರಿಗೆ ಜೀವಬೆದರಿಕೆ ಹಾಕಿದ ಆರೋಪಿ ಮೊಹಮ್ಮದ್ ನೌಷಾದ್ ವಿರುದ್ಧ ದೂರು ದಾಖಲಾಗಿ ವಾರ ಕಳೆದರೂ ಪೊಲೀಸರು ಆತನನ್ನು ಬಂಧಿಸಿಲ್ಲ ಎಂದು ವಿಹೆಚ್‌ಪಿ ಆರೋಪಿಸಿದೆ. ಆರೋಪಿಯನ್ನು ತಕ್ಷಣವೇ ಬಂಧಿಸಬೇಕು ಹಾಗೂ ಸಂತ್ರಸ್ತೆ ನಂದಿನಿ ಅವರನ್ನು ಅನ್ಯಾಯವಾಗಿ ಕೆಲಸದಿಂದ ವಜಾಗೊಳಿಸಿರುವ ಜಿ.ಆರ್. ಆಸ್ಪತ್ರೆಯ ಆಡಳಿತ ಮಂಡಳಿಯ ಮೇಲೆಯೂ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಆಗಸ್ಟ್ 27ರಂದು ಸಂಜೆ 4:00 ಗಂಟೆಗೆ ವಿಶ್ವಶ್ರೀ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ವಿಹೆಚ್‌ಪಿ ಪ್ರಾಂತ ಪ್ರಚಾರ ಪ್ರಸಾರ ಸಹ ಪ್ರಮುಖ್ ಪ್ರದೀಪ್ ಸರಪಾಡಿ ತಿಳಿಸಿದ್ದಾರೆ. ಈ ಗೋಷ್ಠಿಯಲ್ಲಿ ಸಂತ್ರಸ್ತೆ ನಂದಿನಿ ಅವರೂ ಉಪಸ್ಥಿತರಿರಲಿದ್ದಾರೆ.

ಪೊಲೀಸ್ ಕಮಿಷನರ್ ನೀಡಿರುವ ಸ್ಪಷ್ಟನೆ: ಪ್ರಕರಣದ ಕುರಿತು ಮಾಧ್ಯಮಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್, ಕಾನೂನಿನ ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ:

  • ಎಫ್‌ಐಆರ್ ದಾಖಲು: ಮಹಿಳೆಗೆ ಫೋನ್‌ನಲ್ಲಿ ಬೆದರಿಕೆ ಹಾಕಿದ ಆರೋಪ ಕೇಳಿಬಂದ ತಕ್ಷಣವೇ ಸಂಬಂಧಿತ ಕಠಿಣ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.
  • ಕಾನೂನು ಪ್ರಕ್ರಿಯೆ ಮತ್ತು 35 BNSS ನೋಟೀಸ್: ದೂರವಾಣಿ ಮೂಲಕ ಬೆದರಿಕೆ ಹಾಕಿದ ಪ್ರಕರಣದಲ್ಲಿ ನಿಗದಿತ ಶಿಕ್ಷೆಯ ಅವಧಿ ಕಡಿಮೆಯಿರುವುದರಿಂದ ತಕ್ಷಣದ ಬಂಧನಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ತಲೆಮರೆಸಿಕೊಂಡಿದ್ದ ಆರೋಪಿಯ ಮನೆಗೆ BNSS 35 ಅಡಿಯಲ್ಲಿ 3 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ.
  • ಬಂಧನದ ನಿಯಮ: ನಿಯಮದಂತೆ ನೋಟೀಸ್‌ಗೆ ಸ್ಪಂದಿಸಿ ವಿಚಾರಣೆಗೆ ಬಂದಲ್ಲಿ ತಕ್ಷಣ ಬಂಧಿಸಲು ಬರುವುದಿಲ್ಲ. ಒಂದು ವೇಳೆ ನೋಟೀಸ್ ಉಲ್ಲಂಘಿಸಿದರೆ ಮಾತ್ರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
  • ಈಗ, ಈ ಪತ್ರಿಕಾಗೋಷ್ಠಿ ಮತ್ತು ನನ್ನ ಸ್ಪಷ್ಟೀಕರಣದಿಂದಾಗಿ, ಆತ ಹಾಜರಾದರೆ ಪೊಲೀಸರು ತನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಆತನಿಗೆ ತಿಳಿದಿದೆ. ನಾವು ಕಾನೂನಿನ ಪ್ರಕಾರ ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ, ದಯವಿಟ್ಟು ನಮ್ಮ ಕೆಲಸವನ್ನು ಮಾಡಲು ಬಿಡಿ.
  • ಭಾವನೆಗಳಿಗಿಂತ ಕಾನೂನೇ ಮುಖ್ಯ: ಪೊಲೀಸರು ಯಾವುದೇ ಒತ್ತಡ, ಭಾವನೆ ಅಥವಾ ಸಾರ್ವಜನಿಕ ಬೇಡಿಕೆಗಳಿಗೆ ಒಳಗಾಗದೆ ಸಂಪೂರ್ಣವಾಗಿ ಕಾನೂನು ಪ್ರಕ್ರಿಯೆಯನ್ನೇ ಅನುಸರಿಸುತ್ತಾರೆ.
  • ಸಾಮಾಜಿಕ ಮನವಿ: “ಪ್ರತಿಯೊಂದು ಸಮುದಾಯದವರೂ ತಮ್ಮ ಸಮುದಾಯದಲ್ಲಿರುವ ತಪ್ಪು ಮಾಡಿದವರನ್ನು ಪ್ರಶ್ನಿಸುವಂತಾಗಬೇಕು. ಪ್ರತಿಯೊಂದು ಘಟನೆಯನ್ನೂ ನಿಷ್ಪಕ್ಷಪಾತವಾಗಿ ನೋಡಬೇಕು” ಎಂದು ಕಮಿಷನರ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
Continue Reading

crime

ಡೇವಿಡ್‌ ಹತ್ಯೆ ಪ್ರಕರಣ : ಆರೋಪಿಗಳ ಕ್ರೈಂ ಡೈರಿ ಕೇಳಿ ಪೊಲೀಸರೇ ಶಾಕ್! ಸುಪಾರಿ ಕೊಟ್ಟವರು ಯಾರು ?

Published

on

ಉಡುಪಿ (ಆ.8): ಕಾಪು ತಾಲೂಕಿನ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತಾರಾಜ್ಯ ಶಾರ್ಪ್ ಶೂಟರ್‌ಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಹಲವು ರಾಜ್ಯಗಳಲ್ಲಿ ಕೊಲೆ, ದರೋಡೆ ಮತ್ತು ಹಲ್ಲೆಯಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಪ್ರಮುಖ ಆರೋಪಿ ರಾಜು (A1), ಅನಮೋಲ್ (A2) ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ಕ್ರೈಂ ಡೈರಿಯನ್ನು ಎಸ್.ಪಿ. ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟಿದ್ದಾರೆ.

₹2-3 ಕೋಟಿ ಗುತ್ತಿಗೆ ವ್ಯವಹಾರದ ವೈಷಮ್ಯವೇ ಹತ್ಯೆಗೆ ಕಾರಣ!

ಉಡುಪಿಯ ಯುಪಿಸಿಎಲ್ (UPCL) ಕಂಪನಿಯಲ್ಲಿ ಡೇವಿಡ್ ಡಿಸೋಜಾ ಅವರು ಗುತ್ತಿಗೆ ಕೆಲಸ ಮಾಡುತ್ತಿದ್ದರು. ಸುಮಾರು 2 ರಿಂದ 3 ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಡೇವಿಡ್ ಹಾಗೂ ಮತ್ತೊಬ್ಬ ಗುತ್ತಿಗೆದಾರನ ನಡುವೆ ತೀವ್ರ ವೈಷಮ್ಯ ಉಂಟಾಗಿತ್ತು. ಇದೇ ಕಾರಣಕ್ಕೆ ಉತ್ತರ ಭಾರತದ ವ್ಯಕ್ತಿಯೊಬ್ಬ ಸುಪಾರಿ ನೀಡಿ ಡೇವಿಡ್ ಅವರನ್ನು ಹತ್ಯೆ ಮಾಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ಎರಡು ತಿಂಗಳ ಹಿಂದೆಯೇ ಮುದರಂಗಡಿಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಸ್ಕೆಚ್ ಹಾಕಿದ್ದರು. ಕೃತ್ಯಕ್ಕೆ ಸ್ಥಳೀಯರು ಯಾರಾದರೂ ಸಹಕರಿಸಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

9mm ಪಿಸ್ತೂಲ್‌ನಿಂದ ಶೂಟೌಟ್; ಶೂಟರ್ ಖಾತೆಗೆ ₹2 ಲಕ್ಷಕ್ಕೂ ಹೆಚ್ಚು ಹಣ!

A1 ಆರೋಪಿ ರಾಜು ಎಂಬಾತ 9 mm ಪಿಸ್ತೂಲ್‌ನಿಂದ ತೀರಾ ಹತ್ತಿರದಿಂದಲೇ ಗುಂಡು ಹಾರಿಸಿ ಡೇವಿಡ್ ಅವರನ್ನು ಹತ್ಯೆ ಮಾಡಿದ್ದ. ಹತ್ಯೆಗೆ ಮುನ್ನ ಹಾಗೂ ಹತ್ಯೆಯ ಬಳಿಕ ಹಂತ ಹಂತವಾಗಿ ಶೂಟರ್ ರಾಜು ಖಾತೆಗೆ ₹2 ಲಕ್ಷಕ್ಕೂ ಹೆಚ್ಚು ಹಣ ಪಾವತಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹಣದ ಮೂಲ ಹಾಗೂ ಸುಪಾರಿ ನೀಡಿದವರ ಪತ್ತೆಗೆ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.

500ಕ್ಕೂ ಹೆಚ್ಚು ಪೊಲೀಸರಿಂದ ಭಾರಿ ನಾಕಾಬಂಧಿ: ಬಸ್‌ನಿಂದ ಇಳಿದು ಓಡಿದ ಆರೋಪಿ, PSI ಮೇಲೆ ಹಲ್ಲೆ!

ಹತ್ಯೆ ನಡೆದ ಬಳಿಕ ಆರೋಪಿಗಳು ಜಿಲ್ಲೆಯಿಂದ ಪರಾರಿಯಾಗದಂತೆ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ನಾಕಾಬಂಧಿ ಹೇರಲಾಗಿತ್ತು. 500ಕ್ಕೂ ಹೆಚ್ಚು ಪೊಲೀಸರು, ರೈಲ್ವೆ ಪೊಲೀಸರು ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಉಡುಪಿ ಮತ್ತು ಭಟ್ಕಳ ರೈಲ್ವೆ ನಿಲ್ದಾಣಗಳಲ್ಲೂ ತೀವ್ರ ಶೋಧ ನಡೆಸಲಾಗಿತ್ತು.

ಆರೋಪಿಗಳು ಪರಾರಿಯಾಗಲು ಬಳಸಿದ್ದ ಬೈಕ್ ಅನ್ನು ಎಂಆರ್‌ಪಿಎಲ್ ಬಳಿ ಬಿಟ್ಟು ಹೋಗಿದ್ದರು (ಆ ಬೈಕ್‌ನ ನಂಬರ್ ಪ್ಲೇಟ್ ನಕಲಿಯಾಗಿತ್ತು). ಬಳಿಕ ಬಸ್ ಮೂಲಕ ತರಳುತ್ತಿದ್ದಾಗ ಬೈಂದೂರಿನ ಒಟ್ಟಿನೇಣೆ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ, ಮೂವರು ಆರೋಪಿಗಳು ಬಸ್‌ನಿಂದ ಇಳಿದು ಓಡಿದ್ದಾರೆ. ಈ ವೇಳೆ ಕಾಪು ಪಿಎಸ್ಐ ತೇಜಸ್ವಿ ಅವರು ರಾಜುವನ್ನು ಬೆನ್ನಟ್ಟಿದಾಗ, ಆತ ಪಿಎಸ್ಐ ಮೇಲೆ ಹಲ್ಲೆ ನಡೆಸಿದ್ದಾನೆ.

ತಕ್ಷಣವೇ ಆತ್ಮರಕ್ಷಣೆಗಾಗಿ PSI ತೇಜಸ್ವಿ ಅವರು ರಾಜುವಿನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿ ರಾಜು ಹಾಗೂ ಹಲ್ಲೆಯಿಂದ ಗಾಯಗೊಂಡ ಪಿಎಸ್ಐ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರು ಆರೋಪಿಗಳನ್ನು ಭಟ್ಕಳ ಹಾಗೂ ಕುಮಟಾದಲ್ಲಿ ಬಂಧಿಸಲಾಗಿದೆ.

ಆರೋಪಿಗಳ ಕ್ರೈಂ ಡೈರಿ ಕೇಳಿ ಪೊಲೀಸರೇ ಶಾಕ್!

ಬಂಧಿತ ಆರೋಪಿಗಳಿಗೆ ಪರಸ್ಪರ ನೈಜ ಪರಿಚಯವೂ ಇರಲಿಲ್ಲ, ಒಬ್ಬರಿಗೊಬ್ಬರು ಸುಳ್ಳು ಹೆಸರುಗಳನ್ನು ಹೇಳಿಕೊಂಡು ಜತೆಯಾಗಿದ್ದರು. ಇವರಿಂದ 9 mm ಪಿಸ್ತೂಲ್, 3 ಮೊಬೈಲ್ ಫೋನ್‌ಗಳು ಹಾಗೂ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ರಾಜು (A1): ಈತನ ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ 5 ರಾಜ್ಯಗಳಲ್ಲಿ ಒಟ್ಟು 26 ಗಂಭೀರ ಪ್ರಕರಣಗಳು (ಕೊಲೆ, ಮಹಿಳೆಯರ ಮೇಲಿನ ಹಲ್ಲೆ, ದರೋಡೆ) ದಾಖಲಾಗಿವೆ.

ಆರೋಪಿ ಅನಮೋಲ್ (A2): ಈತನ ವಿರುದ್ಧ 2018ರ ಬಳಿಕ 4 ರಾಜ್ಯಗಳಲ್ಲಿ 8 ಪ್ರಕರಣಗಳು ಇವೆ.

ಆರೋಪಿ ಜಿಯಾವುಲ್ ವಜಿರ್ ಶೇಖ್: ಈತನ ವಿರುದ್ಧ ದರೋಡೆ, ಶೂಟೌಟ್ ಹಾಗೂ ಡಕಾಯಿತಿ ಸೇರಿದಂತೆ 12 ಪ್ರಕರಣಗಳು ದಾಖಲಾಗಿವೆ.

ಸುಪಾರಿ ಕೊಟ್ಟವರು ಯಾರು? ತನಿಖೆ ಚುರುಕು

ಡೇವಿಡ್ ಡಿಸೋಜಾ ಹತ್ಯೆಗೆ ಸುಪಾರಿ ನೀಡಿದ ಪ್ರಮುಖ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ಈಗಾಗಲೇ ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗಿದೆ. ಪಾದೂರಿನ ಯುಪಿಸಿಎಲ್ ಗುತ್ತಿಗೆ ಕೆಲಸದ ವೈಷಮ್ಯ, ಹಣದ ವ್ಯವಹಾರ ಹಾಗೂ ಸ್ಥಳೀಯವಾಗಿ ಸಹಾಯ ಮಾಡಿದವರ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ

Continue Reading

Trending

Copyright © 2025 Deevatige

error: Content is protected !!