Connect with us

Bantawala

ವಿಟ್ಲ: ಬೈಕ್ ರಿಪೇರಿ ಮಾಡುತ್ತಿದ್ದ ಯುವಕರ ಮೇಲೆ ಹಲ್ಲೆ; ಮೂವರ ವಿರುದ್ಧ ಪ್ರಕರಣ ದಾಖಲು

Published

on

ವಿಟ್ಲ: ದ್ವಿಚಕ್ರ ವಾಹನ ಕೆಟ್ಟುಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿ ದುರಸ್ತಿ ಮಾಡುತ್ತಿದ್ದ ಯುವಕರನ್ನು ತಡೆದು, ಅನಗತ್ಯವಾಗಿ ವಿಚಾರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ ಹಾಗೂ ಕಾಲುಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಜುಲೈ 7 ರಂದು ಸಂಜೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಗಾಯಾಳು ಯುವಕರು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ.

ಆರೋಪಿಗಳ ವಿವರ:

ವಿವೇಕ್ ಶೆಟ್ಟಿ (A1), ಉಮೇಶ್ (A2) ಮತ್ತು ಶಿವರಾಮ ಶೆಟ್ಟಿ (A3) ಎಂಬುವವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ದೂರುದಾರರು ಮತ್ತು ಗಾಯಾಳುಗಳು:

ಮಹಮ್ಮದ್ ನಸೀಫ್ (22 ವರ್ಷ): ತಂದೆ ಮಹಮ್ಮದ್ ಅಥಾವುಲ್ಲಾ, ಸಾಫಾ ಮಂಜಿಲ್ ಪ್ಲಾಟ್, ಮಣಿ ಗ್ರಾಮ, ಬಂಟ್ವಾಳ ತಾಲೂಕು. (ವೃತ್ತಿಯಲ್ಲಿ ಪೇಂಟರ್).

ಮಹಮ್ಮದ್ ಜಾಹಿದ್ ಡಿ: ನಸೀಫ್ ಅವರ ಸ್ನೇಹಿತ (ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಯುವಕ).

ಮಹಮ್ಮದ್ ರೂಹಿದ್: ಗಲಾಟೆ ಬಿಡಿಸಲು ಬಂದ ನಸೀಫ್ ಅವರ ಸ್ನೇಹಿತ

ಎಫ್‌ಐಆರ್‌ನಲ್ಲಿರುವ ಘಟನೆಯ ಸಂಪೂರ್ಣ ವಿವರ:

ದೂರುದಾರರಾದ ಮಹಮ್ಮದ್ ನಸೀಫ್ ಅವರು ಪೇಂಟಿಂಗ್ ಕೆಲಸ ಮುಗಿಸಿ, ಜುಲೈ 7 ರಂದು ತನ್ನ ಅಜ್ಜಿಯ ಮನೆಯಾದ ಕೊಳಂಬೆಗೆ ಹೋಗಿ, ಅಲ್ಲಿಂದ ಮರಳಿ ತನ್ನ KA-21-S-3294 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್‌ನಲ್ಲಿ ಕೊಳಂಬೆಟ್ಟು-ಮಾಮೇಶ್ವರ ಮಾರ್ಗವಾಗಿ ಮನೆಗೆ ಬರುತ್ತಿದ್ದರು. ಸಂಜೆ ಸುಮಾರು 7:00 ಗಂಟೆಯ ವೇಳೆಗೆ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬ ಸ್ಥಳದ ಬಳಿ ತಲುಪಿದಾಗ, ಬೈಕ್‌ನ ಚೈನ್ ಸ್ಪ್ರಾಕೆಟ್‌ನಲ್ಲಿ ಶಬ್ದ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಸೀಫ್ ಅವರು ಬೈಕನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಪರಿಶೀಲಿಸುತ್ತಿದ್ದರು.

ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ತನ್ನ KA-70-J-1606 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಬರುತ್ತಿದ್ದ ನಸೀಫ್ ಅವರ ಸ್ನೇಹಿತ ಮಹಮ್ಮದ್ ಜಾಹಿದ್ ಡಿ ಎಂಬಾತನು, ನಸೀಫ್ ರಸ್ತೆ ಬದಿ ನಿಂತಿರುವುದನ್ನು ನೋಡಿ ಸಹಾಯ ಮಾಡಲು ತನ್ನ ಸ್ಕೂಟರ್ ನಿಲ್ಲಿಸಿದ್ದಾನೆ.

ಅಡ್ಡಗಟ್ಟಿ ನಿಂದನೆ, ಹಲ್ಲೆ: ಇಬ್ಬರು ಯುವಕರು ಬೈಕ್ ಪರಿಶೀಲಿಸುತ್ತಿದ್ದಾಗ, ಸಂಜೆ ಸುಮಾರು 7:15 ರ ವೇಳೆಗೆ ಅನಂತಾಡಿ ಕಡೆಯಿಂದ ಬಂದ KA-70-A-2671 ನೋಂದಣಿ ಸಂಖ್ಯೆಯ ಆಟೋ ರಿಕ್ಷಾವನ್ನು ಆರೋಪಿಗಳು ಯುವಕರ ಮೋಟಾರ್ ಸೈಕಲ್ ಮುಂದೆ ಅಡ್ಡಲಾಗಿ ತಂದು ನಿಲ್ಲಿಸಿದ್ದಾರೆ. ಆಟೋ ರಿಕ್ಷಾದಲ್ಲಿದ್ದ ವಿವೇಕ್ ಶೆಟ್ಟಿ, ಉಮೇಶ್ ಮತ್ತು ಶಿವರಾಮ ಶೆಟ್ಟಿ ಎಂಬ ಮೂವರು ಯುವಕರನ್ನು ನೋಡಿ, “ನೀವು ಯಾಕೆ ಇಲ್ಲಿ ನಿಂತಿರುವುದು? ನೀವು ಬ್ಯಾರೀಸ್, ನಿಮಗೆ ಇಲ್ಲಿ ಏನು ಕೆಲಸ?” ಎಂದು ಅನಗತ್ಯವಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಯುವಕರು “ಮೋಟಾರ್ ಸೈಕಲ್ ಹಾಳಾಗಿದೆ, ಅದಕ್ಕೆ ರಸ್ತೆಯಲ್ಲಿ ನಿಲ್ಲಿಸಿದ್ದೇವೆ” ಎಂದು ಉತ್ತರಿಸಿದ್ದಾರೆ.

ಆದರೆ ಆರೋಪಿಗಳು ಇಷ್ಟಕ್ಕೆ ಸುಮ್ಮನಾಗದೆ ಬ್ಯಾರಿ ಕೋಮು ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇದರಿಂದ ಗಾಬರಿಗೊಂಡ ನಸೀಫ್ ಮತ್ತು ಆತನ ಸ್ನೇಹಿತ ತಮ್ಮ ಮೋಟಾರ್ ಸೈಕಲ್‌ನಲ್ಲಿ ಅಲ್ಲಿಂದ ಹೊರಡಲು ಪ್ರಾರಂಭಿಸಿದಾಗ, ಆರೋಪಿಗಳು ತಮ್ಮ ಆಟೋ ರಿಕ್ಷಾದಿಂದ ಕೆಳಗಿಳಿದು ಬಂದು ಯುವಕರನ್ನು ತಡೆದಿದ್ದಾರೆ.

ಆರೋಪಿಗಳಾದ ವಿವೇಕ್ ಶೆಟ್ಟಿ ಮತ್ತು ಉಮೇಶ್ ಅವರು ಮಹಮ್ಮದ್ ನಸೀಫ್‌ನನ್ನು ಕೈಯಿಂದ ಎಡ ಕೆನ್ನೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಗುದ್ದಿ, ಕಾಲಿನಿಂದ ಒದ್ದು ಗಾಯಗೊಳಿಸಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ನಸೀಫ್ ಅವರ ಮತ್ತೊಬ್ಬ ಸ್ನೇಹಿತ ಮಹಮ್ಮದ್ ರೂಹಿದ್ ಎಂಬಾತ ಬಂದಾಗ, ಮೂರನೇ ಆರೋಪಿ ಶಿವರಾಮ ಶೆಟ್ಟಿ ಆತನ ಕುತ್ತಿಗೆಗೆ ಕೈಯಿಂದ ಚುಚ್ಚಿ (ಹೊಡೆದು), ಶರ್ಟ್ ಕಾಲರ್ ಹಿಡಿದು ಎಳೆದು ಹರಿದು ಹಾಕಿದ್ದಾನೆ. ಅಲ್ಲದೆ, “ಇನ್ನೊಮ್ಮೆ ಈ ಸ್ಥಳಕ್ಕೆ ಬಂದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.

ಬಳಿಕ ಸ್ಥಳಕ್ಕೆ ಸಾರ್ವಜನಿಕರು ಬರುವುದನ್ನು ಕಂಡು ಮೂವರು ಆರೋಪಿಗಳು ತಾವು ಬಂದ ಆಟೋ ರಿಕ್ಷಾದಲ್ಲಿಯೇ ಅಲ್ಲಿಂದ ಪರಾರಿಯಾಗಿದ್ದಾರೆ.

ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲು:

ಹಲ್ಲೆಯಿಂದಾಗಿ ನೋವಿನಿಂದ ನರಳುತ್ತಿದ್ದ ಮಹಮ್ಮದ್ ನಸೀಫ್ ಮತ್ತು ಮಹಮ್ಮದ್ ರೂಹಿದ್ ಅವರು ತಕ್ಷಣವೇ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆಯ ಬಳಿಕ, ಜುಲೈ 8 ರಂದು ರಾತ್ರಿ ವಿಟ್ಲ ಪೊಲೀಸ್ ಠಾಣೆಗೆ ಬಂದು ಅಧಿಕೃತ ದೂರು ನೀಡಿದ್ದಾರೆ. ತಡವಾಗಿ ದೂರು ನೀಡಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದೇ ಕಾರಣ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ಕ್ರಮ:

ಯುವಕರು ನೀಡಿದ ಲಿಖಿತ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿ (SHO) ಶ್ರೀಕುಮಾರ್ ಅವರು ಜುಲೈ 8 ರಂದು ರಾತ್ರಿ 22:30 ಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಅಪರಾಧ ಸಂಖ್ಯೆ: 152/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 126(2), 115(2), 352, 351(2) ಜೊತೆಗೆ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ. ಎಫ್‌ಐಆರ್ ಪ್ರತಿಯನ್ನು ಕೋರ್ಟ್‌ಗೆ ರವಾನಿಸಲಾಗಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಹನೀಫ್ ಬಗ್ಗುಮೂಲೆ ಅರ್ಜಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಸಾರಥ್ಯ ವಹಿಸಲು ಪಕ್ಷದ ಹಿರಿಯ, ನಿಷ್ಠಾವಂತ ಹಾಗೂ ನೇರ ನಡೆ-ನುಡಿಯ ಪ್ರಭಾವಿ ನಾಯಕ ಹನೀಫ್ ಬಗ್ಗುಮೂಲೆ ಅವರು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಪಕ್ಷ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣ

ಬಂಟ್ವಾಳ ತಾಲೂಕು ಕುಳ ಗ್ರಾಮದ ಬಗ್ಗುಮೂಲೆ ನಿವಾಸಿಯಾಗಿರುವ ಹನೀಫ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಿರಂತರವಾಗಿ ಶ್ರಮಿಸಿದವರು. ಬಾಲ್ಯದಿಂದಲೇ ಸಾಮಾಜಿಕ ಕಳಕಳಿ ಬೆಳೆಸಿಕೊಂಡಿದ್ದ ಇವರು, ಪಕ್ಷದ ಧ್ವಜದಡಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್‌ಗಳು, ರಕ್ತದಾನ ಶಿಬಿರಗಳು, ಕ್ರೀಡಾ ಕೂಟಗಳು ಹಾಗೂ ಧಾರ್ಮಿಕ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜನಮಾನಸದಲ್ಲಿ ಆಪತ್ಬಾಂಧವನಾಗಿ ನೆಲೆಸಿದ್ದಾರೆ.

ಸಂಸ್ಥಾಪನಾ ಹೆಜ್ಜೆಗಳು ಮತ್ತು ವಹಿಸಿದ ಜವಾಬ್ದಾರಿಗಳು

ಇವರ ನಿಸ್ಪಕ್ಷಪಾತ ಸೇವೆ ಮತ್ತು ಸಂಘಟನಾ ಚತುರತೆಯನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ, ಇವರಿಗೆ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ: ಅಧ್ಯಕ್ಷರಾಗಿ 3 ವರ್ಷಗಳ ಕಾಲ ಯಶಸ್ವಿ ಸೇವೆ.

ಜಿಲ್ಲಾ ಕಾಂಗ್ರೆಸ್ ಸೇವಾದಳ: ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ತಳಮಟ್ಟದ ಸಂಘಟನೆ.

ಕೆಪಿಸಿಸಿ (KPCC): ರಾಜ್ಯ ಮಟ್ಟದ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ಶ್ರಮಿಕರ ಪರ ಧ್ವನಿ.

ರಾಷ್ಟ್ರೀಯ ರಾಜೀವ ಗಾಂಧಿ ಜ್ಯೋತಿಯಾತ್ರೆ ಸಮಿತಿ: ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ಹಾಗೂ ಪಕ್ಷದ ಸಿದ್ಧಾಂತಗಳ ಪ್ರಚಾರ.

ಪ್ರಶಸ್ತಿ ಹಾಗೂ ಪುರಸ್ಕಾರ

ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಜನಸೇವೆ ಸಲ್ಲಿಸಿರುವ ಹನೀಫ್ ಬಗ್ಗುಮೂಲೆ ಅವರ ನಿರಂತರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ “ಗಡಿನಾಡ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ತಮ್ಮ ಅನುಭವ ಮತ್ತು ಬದ್ಧತೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದೊಂದಿಗೆ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ.

Continue Reading

Bantawala

ದಕ್ಷಿಣ ಕನ್ನಡ: ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಸಂಗಬೆಟ್ಟುವಿನಲ್ಲಿ ಪತ್ತೆ

Published

on

ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಸಮೀಪ ಶನಿವಾರ ತಡರಾತ್ರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ 48 ವರ್ಷದ ವ್ಯಕ್ತಿಯೊಬ್ಬರ ಮೃತದೇಹವು ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರಾಯಿ ನಿವಾಸಿ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಶನಿವಾರ ತಡರಾತ್ರಿ ಜೀವನ್ ಪಿಂಟೊ ಅವರು ತೋಡಿನ ಆಚೆಗಿರುವ ತಮ್ಮ ಮಾವನ ಮನೆಗೆ ತೆರಳಲು ಕಾಲುಸಂಕದ ಮೇಲೆ ನದಿ ದಾಟುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಘಟನಾ ಸ್ಥಳದಲ್ಲಿ ಅವರ ಚಪ್ಪಲಿ ಹಾಗೂ ಟಾರ್ಚ್‌ಲೈಟ್ ಪತ್ತೆಯಾಗಿದ್ದರೂ, ಅವರು ನೀರಿಗೆ ಬಿದ್ದಿದ್ದಾರೋ ಅಥವಾ ಬೇರೆಡೆ ತೆರಳಿದ್ದಾರೋ ಎಂಬುದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ.

ಸತತ ಶೋಧ ಕಾರ್ಯಾಚರಣೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ನದಿಯಲ್ಲಿ ಹರಿಯುತ್ತಿರುವ ಪ್ರಬಲ ನೀರಿನ ಸೆಳೆತದ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗುತಜ್ಞರು ಮತ್ತು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸತತ ಕಾರ್ಯಾಚರಣೆಯ ಫಲವಾಗಿ ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮೃತದೇಹವನ್ನು ನದಿಯಿಂದ ಹೊರತೆಗೆದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಹಾಗೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

Continue Reading

Bantawala

ಬಸ್‌ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್‌ ದಾಖಲು!

Published

on

ಬಂಟ್ವಾಳ: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಜುಲೈ 30ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 2.10ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ ಏರಿದ್ದ ಸುಮಾರು 60–70 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಚಾಲಕನ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದ. ಪ್ರಯಾಣದ ವೇಳೆ ಎದುರಿನ ಸೀಟಿನಲ್ಲಿದ್ದ ಮಹಿಳೆಯರಿಗೆ ಕಾಣುವಂತೆ ಅಸಭ್ಯವಾಗಿ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ.

ಮಹಿಳೆಯ ಧೈರ್ಯ, ವೈರಲ್ ವೀಡಿಯೋ:

ವೃದ್ಧನ ನೀಚ ಕೃತ್ಯವನ್ನು ಕಂಡು ಆಕ್ರೋಶಗೊಂಡ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಆತನ ವಿಕೃತಿಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನು ಗಮನಿಸಿದ ವೃದ್ಧ, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಗಾಬರಿಯಿಂದ ಬಸ್‌ನಿಂದ ಇಳಿದು ಪರಾರಿಯಾಗಿದ್ದ. ಬಳಿಕ ಈ ವಿಷಯ ಬಸ್ ಚಾಲಕನ ಗಮನಕ್ಕೂ ಬಂದಿತ್ತು. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಆತ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ ಹಾಗೂ ವೃತ್ತಿಯಲ್ಲಿ ಅರ್ಚಕ ಎಂದು ತಿಳಿದುಬಂದಿದೆ.

ಬಂಟ್ವಾಳ ಠಾಣೆಯಲ್ಲಿ ದೂರು:

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Trending

Copyright © 2025 Deevatige

error: Content is protected !!