Connect with us

SOCIAL SERVICE

ಇಂದಿನಿಂದ ರಾಜ್ಯಾದ್ಯಂತ ಮತ ಪಟ್ಟಿ ಪರಿಷ್ಕರಣೆ : ನಿಮ್ಮ ಹೆಸರಿದೆಯೇ ಎಂದು ಇಂದೇ ಪರಿಶೀಲಿಸಿ!

Published

on

ಬೆಂಗಳೂರು: ಅರ್ಹ ನಾಗರಿಕರಿಗೆ ಮತದಾನದ ಹಕ್ಕು ಕಲ್ಪಿಸುವ ಹಾಗೂ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಇಂದಿನಿಂದ (ಜೂನ್ 30) ರಾಜ್ಯಾದ್ಯಂತ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (Special Summary Revision – SSR) ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಇಂದಿನಿಂದ ಸಾರ್ವಜನಿಕರು ತಮ್ಮ ಹೆಸರುಗಳನ್ನು ಸೇರಿಸಲು, ತಿದ್ದುಪಡಿ ಮಾಡಲು ಹಾಗೂ ಮೃತಪಟ್ಟ ಅಥವಾ ವಲಸೆ ಹೋದವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಅವಕಾಶ ಕಲ್ಪಿಸಲಾಗಿದೆ.

ಮತದಾರರ ಗೊಂದಲ ನಿವಾರಣೆಗೆ ವಿಶೇಷ ಜಾಗೃತಿ ಮಾರ್ಗದರ್ಶಿ

ಮತದಾರರ ಪಟ್ಟಿ ಪರಿಷ್ಕರಣೆ ಎಂದ ತಕ್ಷಣ ಸಾರ್ವಜನಿಕರಲ್ಲಿ ಹಲವು ಗೊಂದಲಗಳು ಉಂಟಾಗುವುದು ಸಹಜ. ಅವುಗಳಿಗೆ ಇಲ್ಲಿದೆ ಸರಳ ಪರಿಹಾರ:

ಗೊಂದಲ 1: ನನ್ನ ಹತ್ತಿರ ವೋಟರ್ ಐಡಿ ಕಾರ್ಡ್ ಇದೆ, ಆದರೂ ನಾನು ಪರಿಶೀಲಿಸಬೇಕೇ?

ಸ್ಪಷ್ಟನೆ: ಹೌದು, ಖಂಡಿತವಾಗಿ ಪರಿಶೀಲಿಸಬೇಕು! ನಿಮ್ಮ ಕೈಯಲ್ಲಿ ಗುರುತಿನ ಚೀಟಿ (Voter ID) ಇದ್ದ ತಕ್ಷಣ ನಿಮ್ಮ ಹೆಸರು ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಅಥವಾ ನೀವು ಮನೆ ಬದಲಾಯಿಸಿದಾಗ ಹೆಸರು ಬಿಟ್ಟು ಹೋಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಟ್ಟಿಯಲ್ಲಿ ಹೆಸರಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಗೊಂದಲ 2: ಹೊಸದಾಗಿ ಹೆಸರು ಸೇರಿಸಲು ಯಾರೆಲ್ಲಾ ಅರ್ಹರು?

ಸ್ಪಷ್ಟನೆ: 18 ವರ್ಷ ತುಂಬುತ್ತಿರುವ ಪ್ರತಿಯೊಬ್ಬ ಯುವಕ-ಯುವತಿಯರು ಹೆಸರು ನೋಂದಾಯಿಸಬಹುದು. ಕೇವಲ ಅಷ್ಟೇ ಅಲ್ಲದೆ, ಈ ಹಿಂದೆ ಹೆಸರು ಬಿಟ್ಟುಹೋಗಿರುವ ಯಾವುದೇ ವಯಸ್ಸಿನ ಅರ್ಹ ನಾಗರಿಕರು ಕೂಡ ಹೊಸದಾಗಿ ಅರ್ಜಿ ಸಲ್ಲಿಸಬಹುದು.

ಗೊಂದಲ 3: ನಾನು ಇತ್ತೀಚೆಗಷ್ಟೇ ಮನೆ ಬದಲಾಯಿಸಿದ್ದೇನೆ, ಹಳೇ ವೋಟರ್ ಐಡಿಯಲ್ಲೇ ವೋಟ್ ಮಾಡಬಹುದೇ?

ಸ್ಪಷ್ಟನೆ: ಇಲ್ಲ, ನೀವು ವಾಸವಿರುವ ಪ್ರಸ್ತುತ ವಿಳಾಸದ ವ್ಯಾಪ್ತಿಯಲ್ಲೇ ಮತದಾನ ಮಾಡುವುದು ಕಾನೂನುಬದ್ಧ. ಆದ್ದರಿಂದ ತಕ್ಷಣವೇ ನಿಮ್ಮ ಹೊಸ ವಿಳಾಸಕ್ಕೆ ವೋಟರ್ ಐಡಿಯನ್ನು ವರ್ಗಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿ. ಇಲ್ಲದಿದ್ದರೆ ಹಳೇ ಮತಗಟ್ಟೆಯಲ್ಲಿ ನಿಮ್ಮ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ.

ಯಾವ ಕೆಲಸಕ್ಕೆ ಯಾವ ಫಾರ್ಮ್ (Form) ಬಳಸಬೇಕು?

ನಿಮ್ಮ ಅಗತ್ಯಕ್ಕೆ ತಕ್ಕಂತೆ ಕೆಳಗಿನ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ:

ಫಾರ್ಮ್ 6 (Form 6): ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು.

ಫಾರ್ಮ್ 7 (Form 7): ಮೃತಪಟ್ಟವರ ಅಥವಾ ವಲಸೆ ಹೋದವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಆಕ್ಷೇಪಣೆ ಸಲ್ಲಿಸಲು.

ಫಾರ್ಮ್ 8 (Form 8): ವಿಳಾಸ ಬದಲಾವಣೆ, ಹೆಸರಿನ ಸ್ಪೆಲ್ಲಿಂಗ್ ತಿದ್ದುಪಡಿ, ಭಾವಚಿತ್ರ ಬದಲಾವಣೆ ಅಥವಾ ವೋಟರ್ ಐಡಿ ಕಳೆದುಹೋಗಿದ್ದರೆ ಹೊಸ ಕಾರ್ಡ್ ಪಡೆಯಲು.

ಅರ್ಜಿ ಸಲ್ಲಿಸುವುದು ಹೇಗೆ? (ಆನ್‌ಲೈನ್ ಮತ್ತು ಆಫ್‌ಲೈನ್ ವಿವರ)

ಸಾರ್ವಜನಿಕರು ಕಚೇರಿಗಳಿಗೆ ಅಲೆಯದೆಯೇ ಮನೆಯಲ್ಲೇ ಕುಳಿತು ಸುಲಭವಾಗಿ ಪ್ರಕ್ರಿಯೆ ಮುಗಿಸಬಹುದು:

ಆನ್‌ಲೈನ್ ಮೂಲಕ: ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ voters.eci.gov.in ಅಥವಾ ಮೊಬೈಲ್‌ನಲ್ಲಿ Voter Helpline App ಡೌನ್‌ಲೋಡ್ ಮಾಡಿಕೊಂಡು ಸುಲಭವಾಗಿ ಫಾರ್ಮ್ ಭರ್ತಿ ಮಾಡಬಹುದು.

ಆಫ್‌ಲೈನ್ ಮೂಲಕ: ನಿಮ್ಮ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು (BLO – Booth Level Officer) ಭೇಟಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಭೌತಿಕವಾಗಿ ಅರ್ಜಿ ಸಲ್ಲಿಸಬಹುದು.

ಮುಖ್ಯ ದಾಖಲೆಗಳು: ವಯಸ್ಸಿನ ಪುರಾವೆ (SSLC ಮಾರ್ಕ್ಸ್‌ಕಾರ್ಡ್/ಆಧಾರ್/ಬರ್ತ್ ಸರ್ಟಿಫಿಕೇಟ್) ಮತ್ತು ಪ್ರಸ್ತುತ ವಾಸವಿರುವ ವಿಳಾಸದ ಪುರಾವೆ (ಆಧಾರ್ ಕಾರ್ಡ್/ಕರೆಂಟ್ ಬಿಲ್/ಬ್ಯಾಂಕ್ ಪಾಸ್‌ಬುಕ್) ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

ನೆನಪಿಡಿ: ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಹೌದು. ಕೊನೆಯ ದಿನದ ಗಡಿಬಿಡಿಯ ತನಕ ಕಾಯದೆ, ಇಂದೇ ನಿಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿ ಜಾಗೃತರಾಗಿರಿ.





ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ಮಾನವೀಯತೆಯ ಸಾಕ್ಷಾತ್ಕಾರ: ಮರಣದಂಚಿನಲ್ಲಿದ್ದ ಅನಾಥ ವೃದ್ಧನಿಗೆ ‘ಮರುಜನ್ಮ’ ನೀಡಿದ ಸಾಲೆತ್ತೂರಿನ ಯುವಕರ ಪಡೆ!

Published

on

ವಿಟ್ಲ (ವಿಶೇಷ ವರದಿ): “ಶಕ್ತಿ ಇದ್ದಾಗ ಜೊತೆಗಿರುವ ಜಗತ್ತು, ದೇಹ ತಣ್ಣಗಾದಾಗ ತಿರುಗಿಯೂ ನೋಡಲ್ಲ…” – ಇದು ಇಂದಿನ ಬದ್ಧತೆಯಿಲ್ಲದ ಸ್ವಾರ್ಥ ಸಮಾಜದ ಕಹಿ ವಾಸ್ತವ. ಆದರೆ, ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದೇ ನಡೆದ ಅಪರೂಪದ ಮಾನವೀಯ ಘಟನೆಯೊಂದು ಸಮಾಜಕ್ಕೆ ಆಶಾದಾಯಕ ಬೆಳಕಾಗಿ ಮೂಡಿಬಂದಿದೆ. ಅನಾಥರಂತೆ ಮರಣದಂಚಿನಲ್ಲಿ ಬಿದ್ದಿದ್ದ ವೃದ್ಧರೊಬ್ಬರನ್ನು ರಕ್ಷಿಸಿ, ಶುಚಿಗೊಳಿಸಿ, ಚಿಕಿತ್ಸೆಗೆ ದಾಖಲಿಸುವ ಮೂಲಕ ಸ್ಥಳೀಯ ಯುವಕರ ತಂಡವೊಂದು ನಿಜವಾದ ‘ಮಾಧವ ಸೇವೆ’ಯನ್ನು ಮಾಡಿ ಸಾರ್ಥಕತೆ ಮೆರೆದಿದೆ.

ಸಂಸಾರ, ಧರ್ಮ, ಜಾತಿ ಎಲ್ಲವೂ ಇದ್ದರೂ ನೆರಳಿಲ್ಲದ ಜೀವನ!

ಸಾಲೆತ್ತೂರು ಪಾಲ್ತಾಜೆ ನಿವಾಸಿಯಾಗಿರುವ ಆನಂದ ಪೂಜಾರಿ (62) ಅವರು ಸ್ಥಳೀಯರಲ್ಲಿ ‘ನಕ್ಕೀರನ್’ ಎಂದೇ ಚಿರಪರಿಚಿತರು. ಪತ್ನಿ, ಪುತ್ರ, ಪುತ್ರಿ, ಬಂಧು-ಬಳಗ ಹಾಗೂ ಸಮುದಾಯ – ಹೀಗೆ ಎಲ್ಲವೂ ಇದ್ದರೂ ವಿಧಿಯಾಟಕ್ಕೆ ಸಿಲುಕಿ ಅವರೆಲ್ಲರಿಂದಲೂ ದೂರವಾಗಿದ್ದರು. ಊರಿನ ಬಸ್ ತಂಗುದಾಣ, ಅಂಗಡಿಗಳ ಜಗುಲಿ ಹಾಗೂ ಸಮಾಜ ಮಂದಿರದ ಕೋಣೆಗಳೇ ಇವರಿಗೆ ಆಸರೆಯಾಗಿದ್ದವು. ಪರಿಚಿತರು ನೀಡುತ್ತಿದ್ದ ಸಣ್ಣಪುಟ್ಟ ಕೆಲಸಗಳನ್ನು ಮಾಡಿ, ಸಿಕ್ಕ ಹಣದಲ್ಲಿ ದಿನ ದೂಡುತ್ತಿದ್ದ ಇವರ ಜೀವನ ಸಂಪೂರ್ಣವಾಗಿ ಹಾದಿತಪ್ಪಿತ್ತು.

ಕತ್ತಲ ಕೋಣೆಯಲ್ಲಿ ಮರಣದಂಚಿನಲ್ಲಿದ್ದ ‘ನಕ್ಕೀರನ್’

ಕಳೆದ ಐದು ದಿನಗಳಿಂದ ಸಾಲೆತ್ತೂರು ಮೈದಾನದ ಬಳಿಯ ಸಮಾಜ ಮಂದಿರದ ಕತ್ತಲ ಕೋಣೆಯಲ್ಲಿ, ದುರ್ನಾತ ಬೀರುವ ತ್ಯಾಜ್ಯಗಳ ರಾಶಿಯ ನಡುವೆ ನಕ್ಕೀರನ್ ಅವರು ಅಸಹಾಯಕರಾಗಿ ಬಿದ್ದುಕೊಂಡಿದ್ದರು. ತೀವ್ರ ಅನಾರೋಗ್ಯದಿಂದ ಎದ್ದು ನಿಲ್ಲಲೂ ಆಗದೆ, ಮಲ-ಮೂತ್ರ ವಿಸರ್ಜನೆ ಹಾಗೂ ವಾಂತಿಯ ನಡುವೆಯೇ ಅಸ್ಥಿಪಂಜರದಂತಾಗಿದ್ದರು. ಅವರ ಉಸಿರು ಯಾವುದೇ ಕ್ಷಣದಲ್ಲಿ ನಿಲ್ಲುವ ಹಂತಕ್ಕೆ ತಲುಪಿತ್ತು.

ವಾಲಿಬಾಲ್ ಆಟ ಬದಿಗೊತ್ತಿ ‘ಮಾಧವ ಸೇವೆ’ಗಿಳಿದ ಯುವಕರು

ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಹಿರಿಯ ಪತ್ರಕರ್ತ ದೀವಟಿಗೆ ಡಿಜಿಟಲ್‌ ಮೀಡಿಯಾದ ಸಂಪಾದಕ ವಿ. ಟಿ. ಪ್ರಸಾದ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಿದರು. ತಕ್ಷಣವೇ ಅವರು ಸ್ಥಳೀಯ ಯುವಕರಾದ ರಮೇಶ್ ನಂದರಬೈಲು, ಸುಕೇಶ್ ಬರಿಮಾರು, ಜಯಂತ್, ಕಾರ್ತಿಕ್, ಹರೀಶ್ ಕಲ್ಲಮಜಲು ಹಾಗೂ ‘ಜಯಂತ್ ಲೈಟಿಂಗ್ಸ್’ ತಂಡದವರೊಂದಿಗೆ ಮಾತುಕತೆ ನಡೆಸಿದರು.

ವಿಶೇಷವೆಂದರೆ, ಅದೇ ಸಮಯದಲ್ಲಿ ಪಕ್ಕದಲ್ಲೇ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಅದ್ಧೂರಿ ವಾಲಿಬಾಲ್ ಪಂದ್ಯಾಟ ನಡೆಯುತ್ತಿತ್ತು. ಆದರೆ, ಆ ಸಂಭ್ರಮ-ಆಟವನ್ನು ಬದಿಗೊತ್ತಿದ ಈ ಯುವಕರ ಪಡೆ, ನಕ್ಕೀರನ್ ಅವರ ಜೀವ ರಕ್ಷಣೆಯಲ್ಲಿಯೇ ಶ್ರೀಕೃಷ್ಣನ ಸಾಕ್ಷಾತ್ಕಾರ ಕಂಡುಕೊಂಡರು.

ಪ್ರಾಥಮಿಕ ಶುಚಿತ್ವ ಮತ್ತು ಆಸ್ಪತ್ರೆಗೆ ದಾಖಲು

ಕತ್ತಲ ಕೋಣೆಯಿಂದ ಅವರನ್ನು ಹೊರಗೆ ತಂದ ಯುವಕರು, ಬಕೆಟ್ ಹಾಗೂ ಪೈಪ್ ನೀರು ಹಾಕಿ ಸಂಪೂರ್ಣ ದೇಹವನ್ನು ಶುಚಿಗೊಳಿಸಿದರು. ಶಾಂಪೂ, ಸೋಪು ಹಚ್ಚಿ ಕಷ್ಟಪಟ್ಟು ತೊಳೆಯುವುದರ ಜೊತೆಗೆ, ಅವರ ತಲೆಗೂದಲು, ಮೀಸೆ ಹಾಗೂ ಗಡ್ಡವನ್ನು ಬೋಳಿಸಿ (ಶೇವ್ ಮಾಡಿ) ನೈರ್ಮಲ್ಯಗೊಳಿಸಿದರು. ನಂತರ ಹೊಸ ಬಟ್ಟೆಗಳನ್ನು ತೊಡಿಸಿ ನವಜೀವನದ ಸ್ಪರ್ಶ ನೀಡಿದರು.

ಬಳಿಕ ಸಾಲೆತ್ತೂರು ಗಣೇಶೋತ್ಸವ ಸಮಿತಿಯ ಅಂಬ್ಯುಲೆನ್ಸ್ ಹಾಗೂ ಫ್ರೆಂಡ್ಸ್ ವಿಟ್ಲ ಮುರಳೀಧರ ತಂಡದ ಸಕ್ರಿಯ ಸಹಕಾರದೊಂದಿಗೆ ಅವರನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ವೈದ್ಯರ ತಂಡ ಅವರಿಗೆ ತುರ್ತು ಚಿಕಿತ್ಸೆ ಒದಗಿಸುತ್ತಿದೆ.

ನಾಡು ಮೆಚ್ಚಿದ ಮಾನವೀಯತೆ!

ಕಷ್ಟದಲ್ಲಿದ್ದ ಜೀವಕ್ಕೆ ಆಸರೆಯಾಗಿ ನಿಂತು, ಸ್ವಚ್ಛತೆ ಮತ್ತು ನೈಜ ಕಾಳಜಿಯ ಮೂಲಕ ಮರುಜನ್ಮ ನೀಡಿದ ಸಾಲೆತ್ತೂರಿನ ಈ ಯುವಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ. ನಕ್ಕೀರನ್ ಆನಂದ ಪೂಜಾರಿ ಅವರು ಶೀಘ್ರ ಗುಣಮುಖರಾಗಲಿ ಎಂದು ಊರಿನ ಸಮಸ್ತ ನಾಗರಿಕರು ಹಾರೈಸಿದ್ದಾರೆ

Continue Reading

DEATH

ಶತಾಯುಷಿ, ನಿವೃತ್ತ ತಹಶೀಲ್ದಾರ್, ಸಹಕಾರಿ ಭೀಷ್ಮ ಬಿ.ಎಸ್. ಕುಲಾಲ್ ನಿಧನ

Published

on

ಪುತ್ತೂರು: ಕುಲಾಲ ಸಮಾಜ ರತ್ನ, ನಿವೃತ್ತ ತಹಶೀಲ್ದಾರ್, ಸಹಕಾರಿ ಭೀಷ್ಮ ಹಾಗೂ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ (ನಿ.) ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾಗಿದ್ದ ಶತಾಯುಷಿ ಬಿ.ಎಸ್. ಕುಲಾಲ್ (100) ಅವರು ಆ. 30ರಂದು ನಿಧನರಾದರು.

ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಆಗಿ ದೀರ್ಘಕಾಲ ದಕ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬಿ.ಎಸ್. ಕುಲಾಲ್ ಅವರು, ಸಹಕಾರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದರು.

ಇಂದು ಸಂಜೆ ಅಂತ್ಯಕ್ರಿಯೆ: ಮೃತರ ಭೌತಿಕ ಶರೀರದ ಅಂತಿಮ ಸಾರ್ವಜನಿಕ ದರ್ಶನಕ್ಕೆ ಆ. 30ರಂದು ಮಧ್ಯಾಹ್ನ ನಂತರ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ದರ್ಶನದ ಬಳಿಕ ಸಂಜೆ ಪುತ್ತೂರು ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಭಾಸ್ಕ‌ರ್ ಪೆರುವಾಯಿ ತಿಳಿಸಿದ್ದಾರೆ.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆ, ಅಳಿಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬಿ.ಎಸ್. ಕುಲಾಲ್ ಅವರ ನಿಧನಕ್ಕೆ ಸಹಕಾರ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

Continue Reading

Puttur

ಪುತ್ತೂರು: 2026–27ನೇ ಸಾಲಿನ ‘ಈದ್ ಮಿಲಾದ್ ಸಮಿತಿ’ ರಚನೆ – ಅಧ್ಯಕ್ಷರಾಗಿ ಹನೀಫ್ ಬಗ್ಗುಮೂಲೆ ಆಯ್ಕೆ

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ.), ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಲೋಕನಾಯಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1501ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ 2026–2027ನೇ ಸಾಲಿನ ‘ಪುತ್ತೂರು ತಾಲೂಕು ಈದ್ ಮಿಲಾದ್ ಸಮಿತಿ’ಯನ್ನು ನೂತನವಾಗಿ ರಚಿಸಲಾಗಿದೆ.

ನೂತನ ಸಮಿತಿಯ ಅಧ್ಯಕ್ಷರಾಗಿ ದ.ಕ. ಜಿಲ್ಲಾ ಐಕ್ಯ ವೇದಿಕೆಯ ಅಧ್ಯಕ್ಷ ಹನೀಫ್ ಬಗ್ಗುಮೂಲೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ವಿವರ:

  • ಅಧ್ಯಕ್ಷರು: ಹನೀಫ್ ಬಗ್ಗುಮೂಲೆ
  • ಉಪಾಧ್ಯಕ್ಷರು: ಮೂಸಾ ಕರೀಂ ಮಾಣಿ
  • ಪ್ರಧಾನ ಕಾರ್ಯದರ್ಶಿ: ನೌಷಾದ್ ಹಾಜಿ ಬೋಳ್ವಾರ್
  • ಜೊತೆ ಕಾರ್ಯದರ್ಶಿಗಳು: ಶರೀಫ್ ಬಲ್ನಾಡ್ ಹಾಗೂ ಬಾತಿಷಾ ಬಡಕ್ಕೋಡಿ
  • ಸಂಘಟನಾ ಕಾರ್ಯದರ್ಶಿಗಳು: ಅಶ್ರಫ್ ಕೆ.ಜಿ.ಎನ್., ಹಮೀದ್ ಮೌಲಾ, ಸಿದ್ದೀಕ್ ಬೀಟಿಗೆ ಹಾಗೂ ಹಂಝ ಕಬಕ
  • ಕೋಶಾಧಿಕಾರಿ: ಸಿದ್ದೀಕ್ ಸೂರ್ಯ
  • ಪತ್ರಿಕಾ ಕಾರ್ಯದರ್ಶಿ: ಇಫಾಝ್ ಬನ್ನೂರು

ಪದಾಧಿಕಾರಿಗಳ ಜೊತೆಗೆ ಕಾರ್ಯಕಾರಿ ಸಮಿತಿಗೆ ವಿವಿಧ ಜವಾಬ್ದಾರಿಗಳಿಗಾಗಿ 33 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಬೃಹತ್ ಮಿಲಾದ್ ಜಾಥಾ ಹಾಗೂ ಸಮಾವೇಶ

ಸಭೆಯಲ್ಲಿ ಮುಂಬರುವ ಈದ್ ಮಿಲಾದ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ, ಶಾಂತಿಯುತವಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ತೀರ್ಮಾನಿಸಲಾಯಿತು.

ಮಿಲಾದ್ ಜಾಥಾ: ವರ್ಷಪ್ರತಿಯಂತೆ ಈ ಬಾರಿಯೂ ದರ್ಬೆ ಸರ್ಕಲ್‌ನಿಂದ ಕಿಲ್ಲೆ ಮೈದಾನದವರೆಗೆ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ನಡೆಯಲಿದೆ.

ಸಾಂಸ್ಕೃತಿಕ ಪ್ರದರ್ಶನ: ಜಾಥಾದಲ್ಲಿ ವಿವಿಧ ದಫ್ ಪ್ರದರ್ಶನ, ಸ್ಕೌಟ್ ಪ್ರದರ್ಶನ ಹಾಗೂ ಇಸ್ಲಾಮಿಕ್ ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ವೈವಿಧ್ಯಮಯ ಪ್ರದರ್ಶನಗಳು ಕಂಗೊಳಿಸಲಿವೆ.

ಸಮಾವೇಶ: ಜಾಥಾದ ಮುಕ್ತಾಯದ ನಂತರ ಕಿಲ್ಲೆ ಮೈದಾನದಲ್ಲಿ ಬೃಹತ್ ಮಿಲಾದ್ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ತಿನ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ಹಾಗೂ ರಾಜ್ಯ ಸಂಚಾಲಕ ನ್ಯಾಯವಾದಿ ಎಂ.ಪಿ. ಅಬೂಬಕ್ಕರ್ ಹಾಜಿ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ತಾಲೂಕು ಮುಸ್ಲಿಂ ಯುವಜನ ಪರಿಷತ್ ಸಂಚಾಲಕರಾದ ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರ ಹಾಗೂ ಕಾಸಿಂ ಹಾಜಿ ಮಿತ್ತೂರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Continue Reading

Trending

Copyright © 2025 Deevatige

error: Content is protected !!