Connect with us

crime

ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟಿ ಕೋಟಿ ವಂಚನೆ: ಶೋಕಿ ಲೈಫ್ ನಡೆಸುತಿದ್ದ ‘ಅಸ್ತ್ರ’ ಲಂಚುಲಾಲ್ ಕಾಲ್ಬುಡಕ್ಕೆ ಬಿಸಿ, ದುಬೈಗೆ ಪರಾರಿ?

Published

on

ಮಂಗಳೂರು: ಅದೃಷ್ಟದ ಲಕ್ಕಿ ಸ್ಕೀಮ್, ಆಕರ್ಷಕ ಆಫರ್‌ಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಶೋಕಿ ಜೀವನ ನಡೆಸುತ್ತಿದ್ದ ‘ಅಸ್ತ್ರ ಗ್ರೂಪ್’ ಸಂಸ್ಥೆಯ ಮಾಲೀಕ ಲಂಚುಲಾಲ್ ಎಂಬಾತ ಇದೀಗ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ಚೊಂಬು ಹಸ್ತಾಂತರಿಸಿ ನಾಪತ್ತೆಯಾಗಿದ್ದಾನೆ.

ಕಳೆದ 3-4 ವರ್ಷಗಳಿಂದ ಮಂಗಳೂರು ಸೇರಿದಂತೆ ವಿವಿಧೆಡೆ ‘ಅಸ್ತ್ರ’ ಹೆಸರಿನಲ್ಲಿ ಮೂರು ಸೀಸನ್‌ಗಳ ಲಕ್ಕಿ ಸ್ಕೀಮ್ ನಡೆಸಿದ್ದ ಈತ, ಸುಮಾರು 50 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ತಿಂಗಳ ಕಂತಿನ ರೂಪದಲ್ಲಿ ಕೋಟ್ಯಂತರ ರೂ. ಹಣ ವಸೂಲಿ ಮಾಡಿದ್ದ. ಸ್ಕೀಮ್ ಅವಧಿ ಮುಗಿದ ಮೇಲೆಯೂ ಏಜೆಂಟರ ಮೂಲಕ ಗ್ರಾಹಕರನ್ನು ಮುಂದಿನ ಸೀಸನ್‌ಗೆ ವರ್ಗಾಯಿಸಿ ಹಣ ಹಿಂತಿರುಗಿಸದೆ ವಂಚಿಸಲಾಗುತ್ತಿತ್ತು ಎನ್ನಲಾಗಿದೆ.

ನವಭಾರತ್ ಸರ್ಕಲ್‌ನಲ್ಲಿ ನೂರಾರು ಸಂತ್ರಸ್ತರ ಆಕ್ರೋಶ

ಮೂರು ದಿನಗಳಿಂದ ಲಂಚುಲಾಲ್ ಯಾರಿಗೂ ಸಿಗದೆ ನಾಪತ್ತೆಯಾಗಿದ್ದು, ಆತ ದುಬೈಗೆ ಕಾಲು ಕಿತ್ತಿದ್ದಾನೆ ಎಂಬ ವದಂತಿಗಳು ಹರಡಿವೆ. ಇದರಿಂದ ಆತಂಕಗೊಂಡ ನೂರಾರು ಹೂಡಿಕೆದಾರರು ಹಾಗೂ ಸಾರ್ವಜನಿಕರು ಇಂದು (ಜುಲೈ 24) ಬೆಳಗ್ಗಿನಿಂದಲೇ ಮಂಗಳೂರಿನ ನವಭಾರತ್ ಸರ್ಕಲ್‌ನಲ್ಲಿರುವ ‘ಅಸ್ತ್ರ ಗ್ರೂಪ್’ ಕಚೇರಿಗೆ ಮುತ್ತಿಗೆ ಹಾಕಿ ಏಜೆಂಟರನ್ನು ತಳೆದುಹಾಕಿ ತೀವ್ರ ಗಲಾಟೆ ನಡೆಸಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಜುವೆಲ್ಲರಿ ಶೋರೂಂ ತೆರೆದಿರುವುದಾಗಿ ಈತ ಪ್ರಚಾರ ಗಿಟ್ಟಿಸಿಕೊಂಡಿದ್ದ ಜಾಗಕ್ಕೆ ಹೋಗಿ ನೋಡಿದ ಗ್ರಾಹಕರಿಗೆ ಬರೀ ಖಾಲಿ ಮಳಿಗೆ ಮಾತ್ರ ಕಂಡುಬಂದಿದೆ!

ಬ್ಯಾಂಕ್ ಖಾತೆ ಫ್ರೀಜ್ ನಾಟಕ!

ಇತ್ತೀಚೆಗಷ್ಟೇ ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲೂ ಜಾಲ ವಿಸ್ತರಿಸಿ ಮೂರನೇ ಸೀಸನ್ ಆರಂಭಿಸಿದ್ದ ಈತ, ಹಣ ಕೇಳಲು ಬಂದ ಮಂಗಳೂರಿನ ಏಜೆಂಟರಿಗೆ “ನನ್ನ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ, ಸ್ವಲ್ಪ ದಿನ ಕಾಯಿರಿ” ಎಂದು ಕಥೆ ಕಟ್ಟುತ್ತಿದ್ದ. ಹಣ ಕೇಳಿ ಗಲಾಟೆ ಮಾಡಿದ ಕೆಲವರಿಗೆ ಮಾತ್ರ ಒಂದಿಷ್ಟು ಹಣ ಕೊಟ್ಟು ಕಳುಹಿಸುತ್ತಿದ್ದ ಎನ್ನಲಾಗಿದೆ. ಆದರೆ ಐಟಿ, ಇಡಿ ಅಥವಾ ಪೊಲೀಸ್ ಎಫ್‌ಐಆರ್ ಆದಾಗ ಮಾತ್ರ ಖಾತೆ ಫ್ರೀಜ್ ಆಗುತ್ತದೆ ಎಂಬ ಸತ್ಯ ಗೊತ್ತಿದ್ದರೂ, ಹಣ ಕಳೆದುಕೊಳ್ಳುವ ಭೀತಿಯಿಂದ ಜನರು ಈತನ ಸುಳ್ಳನ್ನು ನಂಬುತ್ತಾ ಬಂದಿದ್ದರು.

ಹತ್ತಕ್ಕೆ 15 ಲಕ್ಷದ ‘ಕುರಿ ಫಂಡ್’ ಜಾಲ & ಸಿನಿಮಾ ಶೋಕಿ!

ಕೇವಲ ತಿಂಗಳ ಲಕ್ಕಿ ಸ್ಕೀಮ್ ಮಾತ್ರವಲ್ಲದೆ, ‘ಕುರಿ ಫಂಡ್’ ಮಾದರಿಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 15 ತಿಂಗಳಲ್ಲಿ 15 ಲಕ್ಷ ರೂ. ಹಿಂತಿರುಗಿಸುವುದಾಗಿ ನಂಬಿಸಿ ಮಂಗಳೂರು ಆಸುಪಾಸಿನ ದೊಡ್ಡ ದೊಡ್ಡ ಕುರಿಗಳಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ.

ಈ ಹಣದಲ್ಲೇ ಈತ ತುಳು ಸಿನಿಮಾಗಳಿಗೆ ಹಣ ಹೂಡಿ, ಬಂಗಾರದ ಬಣ್ಣದ ಬಳೆಗಳನ್ನು ಹಾಕಿಕೊಂಡು ಶೋಕಿ ಜೀವನ ನಡೆಸುತ್ತಿದ್ದ. ಕೇರಳ ಗಡಿಯ ತಲಪಾಡಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿಕೊಡುವುದಾಗಿಯೂ ನಂಬಿಸಿದ್ದ. ಇತ್ತೀಚೆಗೆ ಸಾವಿರ ರೂಪಾಯಿ ಕಟ್ಟುಪಾವತಿದಾರರ ಸಂಖ್ಯೆ ಮಿತಿಮೀರಿ ವಹಿವಾಟು ಕಷ್ಟವಾದಾಗ ಸಂಪೂರ್ಣ ಜಾಲ ಬಂದ್ ಮಾಡಿ ಪರಾರಿಯಾಗಿದ್ದಾನೆ.

ಪೊಲೀಸ್ ಇಲಾಖೆಯ ಧೋರಣೆಗೆ ಜನರ ಆಕ್ರೋಶ! ಒಂದು ವರ್ಷದ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸುಧೀರ್ ರೆಡ್ಡಿ ಇದ್ದಾಗ ಇಂತಹ ಲಕ್ಕಿ ಸ್ಕೀಮ್‌ಗಳ ವಿರುದ್ಧ ಸಮರ ಸಾರಿದ್ದರು. ಆಗ ಲಂಚುಲಾಲ್ ಠಾಣೆಗೆ 5 ಕೋಟಿ ರೂಪಾಯಿ ಬಾಂಡ್ ನೀಡಿದ್ದ ಎನ್ನಲಾಗಿದೆ. ಪೊಲೀಸರು ಸ್ಕೀಂ ಬಗ್ಗೆ ಸೂಕ್ತ ತನಿಖೆ ನಡೆಸದೆ ಲಂಚುಲಾಲ್ ಇಷ್ಟೊಂದು ದೊಡ್ಡ ಮಟ್ಟದ ವಂಚನೆ ಎಸಗಿ ಪರಾರಿಯಾಗಲು ಕಾರಣವಾಯಿತು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ದ. ಕ. ಜಿಲ್ಲೆಯನ್ನು ಕೇಂದ್ರೀಕರಿಸಿ ಲಕ್ಕಿ ಸ್ಕೀಮ್ ಗಳದ್ದೇ ಕಾರುಬಾರು

‘ಬಣ್ಣದ ಬಲೆಗೆ ಬೀಳದಿರಿ’: ಆಸೆಯ ಆಮಿಷ, ವಂಚಕರ ಸಂಚು ಮತ್ತು ಸುಲಭ ಹಣದ ದುರಂತ!

ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಮಂಗಳೂರು, ಮಡಿಕೇರಿ, ಹಾಸನ, ಪುತ್ತೂರು, ಮೂಡಬಿದ್ರೆ ಹಾಗೂ ವಿಟ್ಲ ಸೇರಿದಂತೆ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಕ್ರಮ ‘ಲಕ್ಕಿ ಸ್ಕೀಮ್’ಗಳು ಅಣಬೆಗಳಂತೆ ತಲೆಎತ್ತಿವೆ. ಬಣ್ಣ ಬಣ್ಣದ ಜಾಹೀರಾತುಗಳು, ಕಾರು-ಬಂಗಾರದ ಆಸೆ ಹಾಗೂ ಐಷಾರಾಮಿ ಬದುಕಿನ ಆಮಿಷವೊಡ್ಡಿ ಮುಗ್ಧ ಸಾರ್ವಜನಿಕರನ್ನು ಕತ್ತಲಲ್ಲಿಟ್ಟು ಮುಂಡಾಮೋಚುವ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದೆ.

ವಿಐಪಿಗಳ ‘ಸಾಕ್ಷಿ’ಯಾಗಿಸಿ ಜನರ ಕಣ್ಣಿಗೆ ಮಣ್ಣು!

ಈ ವ್ಯವಸ್ಥಿತ ವಂಚನಾ ಜಾಲ ಎಷ್ಟರಮಟ್ಟಿಗೆ ಬಲವಾಗಿದೆ ಎಂದರೆ, ತಮ್ಮ ಯೋಜನೆಯ ಉದ್ಘಾಟನಾ ಸಮಾರಂಭಗಳಿಗೆ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ಸ್ವಾಮೀಜಿಗಳನ್ನು ಅತಿಥಿಗಳಾಗಿ ಕರೆಸಿ ಶೋಕಿ ಪ್ರದರ್ಶನ ಮಾಡುತ್ತವೆ. ಸಮಾಜದ ಹಿರಿಯರೇ ವೇದಿಕೆಯಲ್ಲಿದ್ದಾರೆ ಎಂದಮೇಲೆ ಈ ಸ್ಕೀಮ್ ನಿಜವಿರಬಹುದು ಎಂದು ನಂಬುವ ಸಾರ್ವಜನಿಕರು, ಕಣ್ಣು ಮುಚ್ಚಿಕೊಂಡು ತಮ್ಮ ಕಷ್ಟದ ಹಣವನ್ನು ಹೂಡಿಕೆ ಮಾಡಿ ಈಗ ಬೀದಿಗೆ ಬೀಳುತ್ತಿದ್ದಾರೆ.

ವಂಚಕರಿಗೆ ರಾತ್ರೋರಾತ್ರಿ ಕೋಟಿ, ಗ್ರಾಹಕರಿಗೆ ಚೊಂಬು!

ಈ ಇಡೀ ಜಾಲ ನಡೆಯುತ್ತಿರುವುದೇ ಎರಡು ಅಪಾಯಕಾರಿ ಮನಸ್ಥಿತಿಗಳ ಮೇಲೆ:

ವಂಚಕರ ಸಂಚು: ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧೀಶ್ವರರಾಗಿ, ಜನರ ಹಣದೊಂದಿಗೆ ವಿದೇಶಕ್ಕೋ ಅಥವಾ ಬೇರೆಡೆಗೋ ಕಾಲು ಕೀಳುವುದು.

ಸಾರ್ವಜನಿಕರ ಆತುರ: ಕಷ್ಟಪಡದೆ ಸುಲಭವಾಗಿ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಿ ಐಷಾರಾಮಿ ಜೀವನ ನಡೆಸಬೇಕೆಂಬ ಹಂಬಲ.

    ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳು ಎಷ್ಟೇ ಜಾಗೃತಿ ಮೂಡಿಸಿದರೂ, “ನನಗೆ ಅದೃಷ್ಟ ಒಲಿಯುತ್ತದೆ” ಎಂಬ ಭ್ರಮೆಯಲ್ಲಿ ಜನರು ಮತ್ತೆ ಮತ್ತೆ ಅದೇ ಗುಂಡಿಗೆ ಬೀಳುತ್ತಿದ್ದಾರೆ. ಹಣ ಕಟ್ಟಿಸಿಕೊಂಡವರು ದಿಢೀರ್ ನಾಪತ್ತೆಯಾದಾಗ, ತಲೆಮೇಲೆ ಕೈಹೊತ್ತು ಸಿಸ್ಟಮ್‌ಗೆ ಹಾಗೂ ವಂಚಕರಿಗೆ ಹಿಡಿಶಾಪ ಹಾಕುವುದು ಮಾತ್ರ ಸಂತ್ರಸ್ತರ ಪಾಲಾಗುತ್ತಿದೆ.

    ಸಾರ್ವಜನಿಕರ ಗಮನಕ್ಕೆ: ಇನ್ನಾದರೂ ಎಚ್ಚೆತ್ತುಕೊಳ್ಳಿ!

    ಉಚಿತವಾಗಿ ಅಥವಾ ಸುಲಭವಾಗಿ ಏನೂ ಸಿಗುವುದಿಲ್ಲ: ಕಷ್ಟಪಟ್ಟು ದುಡಿದ ಹಣಕ್ಕೆ ಮಾತ್ರ ನಿಜವಾದ ಮೌಲ್ಯವಿದೆ. ತಿಂಗಳಿಗೆ ಸಾವಿರ ಕಟ್ಟಿ ಲಕ್ಷ ಪಡೆಯುವ ಕಲ್ಪನೆ ಕೇವಲ ಹಗಲುಗನಸು.

    ಸರಕಾರದ ಮಾನ್ಯತೆ ಪರಿಶೀಲಿಸಿ: ಯಾವುದೇ ಕಂಪನಿ ಅಥವಾ ಸ್ಕೀಮ್‌ಗೆ ಆರ್‌ಬಿಐ (RBI), SEBI ಅಥವಾ ಸರಕಾರದ ಮಾನ್ಯತೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

    ವೇದಿಕೆಯ ರಂಗು ನೋಡಿ ಮರುಳಾಗಬೇಡಿ: ಉದ್ಘಾಟನೆಗೆ ಯಾರು ಬಂದಿದ್ದಾರೆ ಎಂಬುದಕ್ಕಿಂತ, ಆ ಸ್ಕೀಮ್‌ನ ಕಾಯ್ದೆ-ಕಾನೂನು ಚೌಕಟ್ಟು ಏನು ಎಂಬುದ ಮುಖ್ಯ.

    ಕೊನೆ ಮಾತು: ಆಸೆಯೇ ದುಃಖಕ್ಕೆ ಮೂಲ. ವಂಚಕರು ನಿಮ್ಮ ದುರಾಸೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ. ಕಷ್ಟಪಟ್ಟು ದುಡಿದ ನಿಮ್ಮ ಹಣವನ್ನು ಇಂತಹ ಅಕ್ರಮ ಲಕ್ಕಿ ಸ್ಕೀಮ್‌ಗಳಿಗೆ ಸುರಿದು ಕುಟುಂಬವನ್ನು ಬೀದಿಗೆ ತಳ್ಳಬೇಡಿ. ಬಣ್ಣದ ಮಾತುಗಳಿಗೆ ಮರುಳಾಗದೆ, ಇನ್ನಾದರೂ ಎಚ್ಚೆತ್ತುಕೊಳ್ಳಿ!

    ads (2)
    ads (3)
    ads (4)
    ads (5)
    ads (6)
    ads (1)
    ads (8)
    ads (7)
    ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
    Advertisement

    crime

    ಪುತ್ತೂರು: ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಅಜಿತ್ ರೈ ಹೊಸಮನೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು

    Published

    on

    ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಕರಣದ ಹಿನ್ನೆಲೆ:

    • ಷರತ್ತುಬದ್ಧ ಅನುಮತಿ: ಶೋಭಾಯಾತ್ರೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
    • ಸಮಯ ಮೀರಿದ ಬಳಿಕವೂ ಬಳಕೆ: ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು.
    • ಆರೋಪವೇನು?: ಪೊಲೀಸರು ಸೂಚನೆ ನೀಡಿದರೂ, ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು ಧ್ವನಿವರ್ಧಕ ಬಂದ್ ಮಾಡದಂತೆ ತಡೆದು, ಪುನಃ ಧ್ವನಿವರ್ಧಕ ಬಳಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ:

    ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

    ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ

    Continue Reading

    crime

    ಪುತ್ತೂರು ಮಹಿಳಾ ಠಾಣೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ

    Published

    on

    ಪುತ್ತೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ತಮ್ಮ ಹೋರಾಟಕ್ಕೆ ಜಯ ಸಿಗುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು

    ಮೂಲಗಳ ಪ್ರಕಾರ, ಬೆಳಿಗ್ಗೆ 11.30ರ ಸುಮಾರಿಗೆ ಅವರು ತಮ್ಮ ಹಳೆಯ ಕೇಸ್ ಒಂದರ ಸಂಬಂಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ಬಂದಿದ್ದರು ಎಂದು ತಿಳಿದುಬಂದಿದೆ.

    ಈ ಸಂದರ್ಭದಲ್ಲಿ ಮಹಿಳಾ ಠಾಣಾ ಇನ್‌ಸ್ಪೆಕ್ಟರ್‌ ಸುನಿಲ್ ಕುಮಾರ್ ಅವರು ಬೇರೆ ಕಾರ್ಯ ನಿಮಿತ್ತ ಠಾಣೆಯಲ್ಲಿ ಇರಲಿಲ್ಲ. ಹೀಗಾಗಿ, ಲಿಖಿತವಾಗಿ ಹಾಜರಾದ ಬಗ್ಗೆ ಅವರಿಗೆ ನೋಟಿಸ್ ನೀಡಲಾಯಿತು. ಮುಂದಿನ ಸೂಚಿತ ದಿನಾಂಕದಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಮತ್ತೆ ಠಾಣೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ದಿನೇಶ್ ಜೈನ್ ಸೇರಿದಂತೆ ಹಲವರು ಅಭಿಮಾನಿಗಳು ಅವರ ಜೊತೆಗಿದ್ದರು.

    ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರಿಗೆ ಭೇಟಿ ನೀಡಿದಾಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದೇ ಹೋಗುತ್ತಿದ್ದು, ಅದರಂತೆ ಇಂದು ಠಾಣೆಗೆ ತೆರಳಿ ಹಿಂತಿರುಗುವಾಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು ಎಂದು ಅವರ ಆಪ್ತ ವಲಯ ತಿಳಿಸಿದೆ.

    Continue Reading

    crime

    ಸಕಲೇಶಪುರ ಲಾಡ್ಜ್‌ನಲ್ಲಿ ಕರಾಳ ರಾತ್ರಿ: ಬಾತ್‌ರೂಮ್‌ನಲ್ಲಿ 23 ವರ್ಷದ ಯುವತಿ ನಿಗೂಢ ಸಾವು, ಜೊತೆಗಿದ್ದ ಯುವಕರು ಎಸ್ಕೇಪ್!

    Published

    on

    ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್‌ ಒಂದರಲ್ಲಿ 23 ವರ್ಷದ ವರ್ಷ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಘಟನೆಯು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಘಟನೆಯ ವಿವರಣೆ:

    ಪ್ರವಾಸಕ್ಕೆ ತೆರಳಿದ್ದ ಮೂವರು: ಬೆಂಗಳೂರು ಮೂಲದ (ನಾಗಸಂದ್ರ/ಚಿಕ್ಕಬಾಣಾವರ) 23 ವರ್ಷದ ವರ್ಷ ಎಂಬ ಯುವತಿ, ತನ್ನ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಎಂಬುವವರೊಂದಿಗೆ ಶುಕ್ರವಾರ ಪ್ರವಾಸಕ್ಕೆಂದು ಸಕಲೇಶಪುರಕ್ಕೆ ಬಂದಿದ್ದಳು.

    ಪ್ರವಾಸಿ ತಾಣಗಳ ವೀಕ್ಷಣೆ: ಶನಿವಾರ, ಭಾನುವಾರ ಹಾಗೂ ಸೋಮವಾರದಂದು ಈ ಮೂವರು ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸುತ್ತಾಡಿದ್ದರು.

    ಲಾಡ್ಜ್‌ನಲ್ಲಿ ತಂಗಿದ್ದ ದಳ: ವಳಲಹಳ್ಳಿ ಕೂಡಿಗೆಯಲ್ಲಿರುವ ಶ್ರೀದೇವು ಲಾಡ್ಜ್‌ನಲ್ಲಿ ಮೂವರು ಒಂದೇ ರೂಮ್‌ನಲ್ಲಿ ತಂಗಿದ್ದರು.

    ಅನುಮಾನಾಸ್ಪದ ಸಾವು: ಮಂಗಳವಾರ ಲಾಡ್ಜ್‌ನ ಬಾತ್‌ರೂಮ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಅಸುನೀಗಿದ್ದಾರೆ. ಯುವತಿ ಮೃತಪಟ್ಟ ಬಳಿಕ ಜೊತೆಗಿದ್ದ ಯುವಕರು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದಾರೆ (ಕೆಲವು ಮೂಲಗಳ ಪ್ರಕಾರ ಆಸ್ಪತ್ರೆಗೆ ಕರೆತಂದು ಬಳಿಕ ತೆರಳಿದ್ದಾರೆ).

    ಆಸ್ಪತ್ರೆ ಹಾಗೂ ಪೊಲೀಸ್ ತನಿಖೆ: ಕೂಡಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಾತ್‌ರೂಮ್‌ನಲ್ಲಿ ಯುವತಿ ಮೃತಪಟ್ಟಿರುವುದು ಮತ್ತು ಜೊತೆಗಿದ್ದವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿಗೆ ನಿಖರವಾದ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

    Continue Reading

    Trending

    Copyright © 2025 Deevatige

    error: Content is protected !!