Connect with us

accident

B.C. Road ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಇಬ್ಬರ ಸಾವು – ಹೆಣ್ಣುಮಗಳ ಜನ್ಮದಿನದಂದೇ ತಂದೆಯ ದುರಂತ ಅಂತ್ಯ!

Published

on

ಬಂಟ್ವಾಳ: ತಾಲ್ಲೂಕಿನ ಬಿ.ಸಿ. ರೋಡ್‌ನ ಎನ್‌ಜಿ ಸರ್ಕಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ (ಆಗಸ್ಟ್ 6) ಸಂಜೆ ಸಂಭವಿಸಿದ ಟಿಪ್ಪರ್ ಲಾರಿ ಹಾಗೂ ಆಕ್ಟಿವಾ ಸ್ಕೂಟರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸವಾರರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಮೂಲಕ ಗುರುವಾರ ನಡೆದ ಘೋರ ಅಪಘಾತವು ದ್ವಿಮರಣ ದುರಂತವಾಗಿ ಮಾರ್ಪಟ್ಟಿದ್ದು, ಇಡೀ ನರಿಕೊಂಬು ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ಮೃತರ ಗುರುತು

ಮೃತರನ್ನು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಮರ್ದೋಳಿ ನಿವಾಸಿಗಳಾದ ದಯಾನಂದ (ಆಕ್ಟಿವಾ ಸವಾರ) ಹಾಗೂ ಯಶವಂತ್ ಕುಲಾಲ್ (ಹಿಂಬದಿ ಸವಾರ) ಎಂದು ಗುರುತಿಸಲಾಗಿದೆ.

ಅಪಘಾತ ನಡೆದಿದ್ದು ಹೇಗೆ?

ಗುರುವಾರ ಸಂಜೆ ಮಂಗಳೂರು ಕಡೆಯಿಂದ ಧರ್ಮಸ್ಥಳದತ್ತ ಆಕ್ಟಿವಾ ಸ್ಕೂಟರ್‌ನಲ್ಲಿ ದಯಾನಂದ ಹಾಗೂ ಯಶವಂತ್ ಪಯಣಿಸುತ್ತಿದ್ದರು. ಈ ವೇಳೆ ಮೆಲ್ಕಾರ್ ಕಡೆಯಿಂದ ಲೊರೆಟ್ಟೊ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ, ಎನ್‌ಜಿ ಸರ್ಕಲ್ ಬಳಿ ಆಕ್ಟಿವಾಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಆಕ್ಟಿವಾ ಸವಾರರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ.

ಕಣ್ಣೀರು ತರಿಸುವ ವಿಧಿಯ ಆಟ:

ಈ ಘೋರ ದುರಂತವು ಎರಡೂ ಕುಟುಂಬಗಳನ್ನು ತೀವ್ರ ಆಘಾತಕ್ಕೆ ತಳ್ಳಿದ್ದು, ಇಡೀ ಗ್ರಾಮದಲ್ಲಿ ದುಃಖದ ವಾತಾವರಣ ಆವರಿಸಿದೆ.

ಮಗಳ ಹುಟ್ಟುಹಬ್ಬದಂದೇ ತಂದೆಯ ಸಾವು: ವೃತ್ತಿಯಲ್ಲಿ ಬಡಗಿಯಾಗಿದ್ದ ಮೃತ ಯಶವಂತ್ ಕುಲಾಲ್ ಅವರು ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಇಂದು, ಶುಕ್ರವಾರ (ಆಗಸ್ಟ್ 7) ಅವರ ಕಿರಿಯ ಮಗಳ ಜನ್ಮದಿನವಿತ್ತು. ಮನೆಯಲ್ಲಿ ಮಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ, ಸಂಭ್ರಮಿಸಬೇಕಾಗಿದ್ದ ದಿನವೇ ತಂದೆಯ ಭೌತಿಕ ದೇಹ ಮನೆಗೆ ಬರುವಂತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ತಾಯಿಯ ಅಗಲಿಕೆಯ ಬೆನ್ನಲ್ಲೇ ಮಗನೂ ಶೂನ್ಯಕ್ಕೆ: ಹುಲ್ಲು ಕತ್ತರಿಸುವ ಯಂತ್ರದ ಕೆಲಸ ಮಾಡಿಕೊಂಡಿದ್ದ ದಯಾನಂದ ಅವರ ತಾಯಿ ಕೇವಲ ಒಂದು ತಿಂಗಳ ಹಿಂದಷ್ಟೇ (ಜುಲೈನಲ್ಲಿ) ನಿಧನರಾಗಿದ್ದರು. ತಾಯಿಯ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮಗನೂ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದು ಬಂಧುಗಳು ಹಾಗೂ ಸ್ನೇಹಿತರ ಕಣ್ಣೀರಿಗೆ ಕಾರಣವಾಗಿದೆ.

ಟಿಪ್ಪರ್ ಚಾಲಕ ಕಸ್ಟಡಿಗೆ, ಪೊಲೀಸ್ ತನಿಖೆ

ಅಪಘಾತಕ್ಕೆ ಕಾರಣವಾದ ಟಿಪ್ಪರ್ ಚಾಲಕ, ಬಂಟ್ವಾಳದ ಪಲ್ಲಮಜಲು ನಿವಾಸಿ ಸಲ್ಮಾನ್ ಫಾರೂಕ್ (33) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.‌

ಗುರುವಾರ ಸಂಜೆ ಬಿ. ಸಿ. ರೋಡ್ ಮುಖ್ಯ ಸರ್ಕಲ್ ನಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ತಾಣಗಳಲ್ಲಿ ಪ್ರತ್ಯಕ್ಷದರ್ಶಿಗಳು ತಮ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಿ. ಸಿ. ರೋಡ್ ಅಪಾಯಕಾರಿ ವೃತ್ತದ ಬಳಿ ಸಂಚಾರಿ ಪೊಲೀಸರು ಪ್ರತಿನಿತ್ಯ ತಪಾಸಣೆ ನಡೆಸುತ್ತಿದ್ದಾರೆ. ಇದರಿಂದಾಗಿ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.
ಗುರುವಾರ ಸಂಜೆಯೂ ಎಂದಿನಂತೆ ತಪಾಸಣೆ ನಡೆಸುತ್ತಿದ್ದ ಸಂದರ್ಭ ಆಕ್ಟಿವಾದಲ್ಲಿ ಬಂದ ಇಬ್ಬರು ಸವಾರರು ಪೊಲೀಸರ ಸೂಚನೆಗೆ ನಿಲ್ಲಿಸದೇ ಮುಂದಕ್ಕೆ ಚಲಿಸಿದ್ದಾರೆ. ಆ ಸಂದರ್ಭ ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿ ಬೀಸಿದ್ದು ತಪ್ಪಿಸಿಕೊಳ್ಳುವ ಸಂದರ್ಭ ಆಕ್ಟಿವಾ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ತಕ್ಷಣವೇ ಸವಾರರ ಮೇಲೆ ಹಿಂಬದಿಯಲ್ಲಿದ್ದ ಟಿಪ್ಪರ್ ಲಾರಿ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರ ಅಪಘಾತಕ್ಕೆ ಕಾರಣವಾದರೆಂದು ಆರೋಪಿಸಿದ ಸ್ಥಳದಲ್ಲಿದ್ದವರು ಆಕ್ರೋಶಗೊಂಡು ಹೆಲ್ಮೆಟ್ಟಿನಿಂದ ಹಲ್ಲೆಗೂ ಮುಂದಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ವಾಹನ ತಪಾಸಣೆ (Vehicle Checking) ನಡೆಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಮತ್ತು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ (KSP) ಮಹಾನಿರ್ದೇಶಕರು (DGP) ನೀಡಿರುವ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳು ಹಾಗೂ ನಿಯಮಗಳಿವೆ.

ಸಾರ್ವಜನಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ರೀತಿಯಲ್ಲಿ ವಾಹನ ತಪಾಸಣೆ ಮಾಡುವುದು ಸಂಪೂರ್ಣವಾಗಿ ನಿಯಮಬಾಹಿರ. ಈ ಕುರಿತು ಸರ್ಕಾರದ ಮತ್ತು ಇಲಾಖೆಯ ಅಧಿಕೃತ ನಿಯಮಗಳು ಹಾಗೂ ಹೈಕೋರ್ಟ್ ನಿರ್ದೇಶನಗಳು ಹೀಗಿವೆ:

1. ತಪಾಸಣೆ ಎಲ್ಲಿ ನಡೆಸಬೇಕು? (ಸ್ಥಳದ ನಿಯಮಗಳು)

ಸ್ಪಷ್ಟವಾಗಿ ಕಾಣಿಸುವ ಸ್ಥಳದಲ್ಲಿರಬೇಕು: ವಾಹನ ತಪಾಸಣೆ ನಡೆಸುವ ಸ್ಥಳವು ಕನಿಷ್ಠ 100 ರಿಂದ 150 ಮೀಟರ್ ದೂರದಿಂದಲೇ ಸವಾರರಿಗೆ/ಚಾಲಕರಿಗೆ ಸ್ಪಷ್ಟವಾಗಿ ಕಾಣಿಸಬೇಕು.

ತಿರುವುಗಳು ಮತ್ತು ಸರ್ಕಲ್‌ಗಳಲ್ಲಿ ತಪಾಸಣೆ ನಿಷೇಧ: ಅಂಧ ತಿರುವುಗಳು (Blind curves), ರಸ್ತೆ ಮೂಲೆಗಳು, ಸರ್ಕಲ್‌ಗಳ ತೀರಾ ಹತ್ತಿರ (Junctions/Circles) ಹಾಗೂ ಮೇಲ್ಸೇತುವೆ (Flyovers) ಇಳಿಯುವ/ಹತ್ತುವ ಸ್ಥಳಗಳಲ್ಲಿ ವಾಹನಗಳನ್ನು ತಡೆಯುವುದು ಸಂಪೂರ್ಣವಾಗಿ ನಿಯಮಬಾಹಿರ.

ಸುರಕ್ಷಿತ ವಲಯ (Safe Zone): ತಪಾಸಣೆ ನಡೆಸುವ ಜಾಗದಲ್ಲಿ ವಾಹನಗಳನ್ನು ರಸ್ತೆಯ ಪಕ್ಕಕ್ಕೆ (Shoulder of the road) ಸುರಕ್ಷಿತವಾಗಿ ನಿಲ್ಲಿಸಲು ಪರ್ಯಾಯ ಜಾಗ ಇರಬೇಕು. ಇದರಿಂದ ಹಿಂಬದಿಯಿಂದ ಬರುವ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಬಾರದು.

2. ತಪಾಸಣೆಯ ವೇಳೆ ಪೊಲೀಸರು/RTO ಅಧಿಕಾರಿಗಳು ಅನುಸರಿಸಬೇಕಾದ ನಿಯಮಗಳು

ಬ್ಯಾರಿಕೇಡ್ ಮತ್ತು ಸೂಚನಾ ಫಲಕ (Signboards): ತಪಾಸಣೆ ನಡೆಸುವ ಸ್ಥಳದಲ್ಲಿ ಕಡ್ಡಾಯವಾಗಿ ಬ್ಯಾರಿಕೇಡ್‌ಗಳನ್ನು ಇಡಬೇಕು ಮತ್ತು ದೂರದಿಂದಲೇ ಕಾಣಿಸುವಂತೆ “ವಾಹನ ತಪಾಸಣೆ ನಡೆಯುತ್ತಿದೆ (Police Checking)” ಎಂಬ ಸೂಚನಾ ಫಲಕವನ್ನು ಅಳವಡಿಸಿರಬೇಕು.

ದಿಢೀರ್ ಅಡ್ಡ ಬರುವುದು ಅಪರಾಧ: ಚಲಿಸುತ್ತಿರುವ ವಾಹನದ ಮುಂದೆ ದಿಢೀರನೆ ಅಡ್ಡ ಬರುವುದು, ಲಾಠಿ ಬೀಸುವುದು, ವಾಹನದ ಕೀ ಕಿತ್ತುಕೊಳ್ಳುವುದು ಅಥವಾ ವಾಹನವನ್ನು ಚೇಸ್ (ಬೆನ್ನಟ್ಟುವುದು) ಮಾಡುವುದನ್ನು ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ.

ಬೆಳಗಿನ/ರಾತ್ರಿ ಸಮಯದ ಬೆಳಕಿನ ವ್ಯವಸ್ಥೆ: ಕತ್ತಲೆಯ ವೇಳೆ ಅಥವಾ ರಾತ್ರಿ ಸಮಯದಲ್ಲಿ ತಪಾಸಣೆ ನಡೆಸುವಾಗ ಪೊಲೀಸರು ಕಡ್ಡಾಯವಾಗಿ ‘ರಿಫ್ಲೆಕ್ಟೀವ್ ಜಾಕೆಟ್’ (Reflective Jackets) ಧರಿಸಿರಬೇಕು ಮತ್ತು ಆ ಜಾಗದಲ್ಲಿ ಬೆಳಕಿನ (Lighting) ವ್ಯವಸ್ಥೆ ಇರಬೇಕು.

ಅಧಿಕಾರಿಗಳ ದರ್ಜೆ: ವಾಹನ ತಪಾಸಣೆ ನಡೆಸುವಾಗ ಸ್ಥಳದಲ್ಲಿ ಕನಿಷ್ಠ ಎಎಸ್‌ಐ (ASI – Assistant Sub-Inspector) ಅಥವಾ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಯ ಉಪಸ್ಥಿತಿ ಕಡ್ಡಾಯ. ಹೆಡ್ ಕಾನ್ಸ್‌ಟೇಬಲ್ ಅಥವಾ ಕಾನ್ಸ್‌ಟೇಬಲ್‌ಗಳು ಏಕಾಂಗಿಯಾಗಿ ಚಲನ್ ನೀಡಲು ಅಥವಾ ವಾಹನಗಳನ್ನು ತಡೆಯಲು ನಿಯಮದಲ್ಲಿ ಅವಕಾಶವಿಲ್ಲ (ಅವರು ಅಧಿಕಾರಿಗೆ ನೆರವಾಗಬಹುದು).

3. ಹೈಕೋರ್ಟ್ ಮತ್ತು ಸರ್ಕಾರದ ನಿರ್ದೇಶನ ಏನು ಹೇಳುತ್ತದೆ?

ಕರ್ನಾಟಕ ಹೈಕೋರ್ಟ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ನೀಡಿದ ಸುತ್ತೋಲೆಯ ಪ್ರಕಾರ:

“ಸಂಚಾರ ನಿಯಮ ಉಲ್ಲಂಘನೆ ತಡೆಯುವುದು ಮತ್ತು ಸಾರ್ವಜನಿಕರ ಸುರಕ್ಷತೆ ಪೊಲೀಸರ ಮುಖ್ಯ ಉದ್ದೇಶವಾಗಿರಬೇಕೇ ವಿನಃ, ದಂಡ ವಸೂಲಿ ಮಾಡುವುದಕ್ಕಾಗಿ ಸಾರ್ವಜನಿಕರ ಪ್ರಾಣವನ್ನು ಅಪಾಯಕ್ಕೆ ತಳ್ಳಬಾರದು. ತಿರುವುಗಳಲ್ಲಿ ಅಥವಾ ಅಪಾಯಕಾರಿ ಸ್ಥಳಗಳಲ್ಲಿ ನಿಂತು ತಪಾಸಣೆ ನಡೆಸಿ ಅಪಘಾತ ಸಂಭವಿಸಿದರೆ, ಸಂಬಂಧಪಟ್ಟ ಅಧಿಕಾರಿಯೇ ನೇರ ಹೊಣೆಗಾರರಾಗುತ್ತಾರೆ.”

4. ಸಾರ್ವಜನಿಕರಿಗೆ ಇರುವ ಹಕ್ಕುಗಳು

ಪೊಲೀಸರು ನಿಯಮಬಾಹಿರವಾಗಿ (ಅಂಧ ತಿರುವುಗಳಲ್ಲಿ ಅಥವಾ ಸರ್ಕಲ್ ಬಳಿ) ನಿಂತು ಅಪಘಾತಕ್ಕೆ ಕಾರಣರಾದರೆ ಅಥವಾ ಕಿರುಕುಳ ನೀಡಿದರೆ, ಸಾರ್ವಜನಿಕರು ಅದರ ವೀಡಿಯೋ ರೆಕಾರ್ಡ್ ಮಾಡಿ ಉನ್ನತಾಧಿಕಾರಿಗಳಿಗೆ (SP/Commissioner) ಅಥವಾ ನ್ಯಾಯಾಲಯಕ್ಕೆ ದೂರು ನೀಡಬಹುದು.

ತಪಾಸಣೆ ನಡೆಸುವ ಅಧಿಕಾರಿಯ ಹೆಸರು ಮತ್ತು ಅವರ ಬ್ಯಾಡ್ಜ್ ಸಂಖ್ಯೆ (Badge Number) ಕೇಳುವ ಹಕ್ಕು ಚಾಲಕರಿಗಿದೆ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

accident

ಬಂಟ್ವಾಳ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಣೆಯಲ್ಲಿ ದುರ್ಘಟನೆ; ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳನ್ನು ಬಾವಿಗೆ ಎಸೆದ ತಾಯಿ – ಒಂದು ಮಗು ಸಾವು, ಮತ್ತೊಂದು ಮಗು ಆಸ್ಪತ್ರೆಗೆ ದಾಖಲು

Published

on

ಬಂಟ್ವಾಳ: ದಿನಾಂಕ: 19.09.2026ರಂದು ಮಧ್ಯಾಹ್ನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ಣೆ ಮೈರಕಟ್ಟೆಯಲ್ಲಿ ನಡೆದ ದೊಡ್ಡ ದುರಂತವೊಂದು ಬೆಳಕಿಗೆ ಬಂದಿದೆ. ಪೆರ್ಣೆಯಲ್ಲಿ ವಾಸ್ತವವಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ಎಂಬ ದಂಪತಿಗಳ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿದ್ದು, ಈ ವೇಳೆ ಕೋಪಗೊಂಡ ಆರೋಪಿತೆ ನೂರುನ್ನಿಸಾ ಮನೆಯಲ್ಲಿದ್ದ ಆಕೆಯ ಸುಮಾರು ಮೂರುವರೆ ವರ್ಷದ ಮಗು ಹಾಗೂ ಗಂಡನ ತಂಗಿಯ ಮಗುವನ್ನು ಮನೆ ಸಮೀಪದ ಕುಡಿಯುವ ನೀರಿನ ಬಾವಿಗೆ ಎಸೆದಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಆದರೆ, ಬೆಳಿಗ್ಗೆ ಸ್ಥಳೀಯ ವಾಹಿನಿಗಳಲ್ಲಿ ಹಾಗೂ ಆರಂಭಿಕ ವರದಿಗಳಲ್ಲಿ ಮಕ್ಕಳು ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದಿವೆ ಎಂದು ಪ್ರಸಾರವಾಗಿತ್ತು. ಪ್ರತ್ಯಕ್ಷದರ್ಶಿಗಳು ಹಾಗೂ ಆರಂಭಿಕ ಮಾಹಿತಿಯಂತೆ, ಪೆರ್ಣೆ ಮೈರಕಟ್ಟೆಯಲ್ಲಿ ಮಕ್ಕಳು ಬಾವಿಯ ಸಮೀಪವಿದ್ದ ವೇಳೆ ಆಲಿಯಾ (4) ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಿಸಿ ಮೇಲಕ್ಕೆ ಕರೆತಂದಿದ್ದರು. ಬಳಿಕ ಮತ್ತೊಂದು ಮಗು ಕೂಡ ಬಾವಿಗೆ ಬಿದ್ದಿರುವ ಬಗ್ಗೆ ಆಲಿಯಾ ಮಾಹಿತಿ ನೀಡಿದ್ದಾಳೆ ಎನ್ನಲಾಗಿದ್ದು, ಸ್ಥಳೀಯರು ಪರಿಶೀಲಿಸಿದಾಗ ರಬೀಹ್ (2) ಬಾವಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ರಬೀಹ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಸಾರವಾಗಿತ್ತು.

ನೈಜ ಸತ್ಯ ಬಯಲುಗೊಳಿಸಿದ ಪೊಲೀಸರು:

ಸ್ಥಳೀಯ ಮಾದ್ಯಮಗಳಲ್ಲಿ ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿತ್ತರವಾಗಿದ್ದರೂ, ಪೊಲೀಸ್ ತನಿಖೆಯಿಂದ ಅಸಲಿ ವಿಚಾರ ಹೊರಬಂದಿದೆ. ದಂಪತಿಗಳ ನಡುವಿನ ಫೋನ್ ಕರೆಯ ಕೌಟುಂಬಿಕ ಕಲಹದ ರಭಸದಲ್ಲಿ ಕೋಪಗೊಂಡ ಆರೋಪಿತೆ ನೂರುನ್ನಿಸಾ ತಾನೇ ಸ್ವತಃ ಮಕ್ಕಳನ್ನು ಬಾವಿಗೆ ಎಸೆದಿರುವುದು ಎಸ್‌ಪಿ ನೀಡಿರುವ ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಮೇಲಕ್ಕೆ ಎತ್ತಿದ1ರ ಪೈಕಿ ಗಂಡನ ತಂಗಿಯ ಮಗು (ರಬೀಹ್ – 3) ಮೃತಪಟ್ಟಿದ್ದು, ಆರೋಪಿತೆಯ ಮಗು (ಆಲಿಯಾ – 4) ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 121/2026 ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

accident

ಕನ್ಯಾನ: ಮದ್ಯದ ನಶೆಯಲ್ಲಿ 18 ಚಕ್ರದ ಲಾರಿ ಚಾಲನೆ – ವಿದ್ಯುತ್ ಕಂಬಕ್ಕೆ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಅನಾಹುತ

Published

on

ಕನ್ಯಾನ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಕ್ರೀಟ್ ರಸ್ತೆಯಲ್ಲಿ ನಿಯಮ ಮೀರಿ ಸಂಚರಿಸುತ್ತಿದ್ದ 18 ಚಕ್ರಗಳ ಬೃಹತ್ ಬಾಕ್ಸೈಟ್ ಸಾಗಾಟದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಎಸಗಿದ ಘಟನೆ ನಡೆದಿದೆ.


​ಕನ್ಯಾನದಿಂದ ಪಾದೆಕಲ್ಲು ಪೆರೋಡಿ ಸರವು ಪ್ರದೇಶಕ್ಕೆ ಬಾಕ್ಸೈಟ್ (ಮಣ್ಣು) ಸಾಗಿಸಲು ತೆರಳುತ್ತಿದ್ದ AP 39 VD 8043 ಸಂಖ್ಯೆಯ ಬೃಹತ್ ಲಾರಿಯನ್ನು ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮೂಲದ ನಾಗರಾಜ್ ಎಂಬಾತ ಮದ್ಯದ ನಶೆಯಲ್ಲಿ ಚಲಾಯಿಸುತ್ತಿದ್ದ ಎನ್ನಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಂಬ ಛಿದ್ರಗೊಂಡು ತಂತಿಗಳ ಸಹಿತ ಲಾರಿಯ ಮೇಲೆ ಬಿದ್ದಿದೆ. ಆದಾಗ್ಯೂ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ನಿವಾಸಿಗಳು ಮದ್ಯ ಸೇವಿಸಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
​ಗ್ರಾಮಸ್ಥರ ತೀವ್ರ ಆಕ್ರೋಶ:
ಗ್ರಾಮಾಂತರ ಕಾಂಕ್ರೀಟ್ ರಸ್ತೆಯಲ್ಲಿ 12.5 ಟನ್ ಸಾಮರ್ಥ್ಯದ (6 ಚಕ್ರಗಳ) ವಾಹನಗಳಿಗಿಂತ ಹೆಚ್ಚಿನ ಭಾರದ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ 18 ಚಕ್ರದ ಲಾರಿಗಳು ಅಕ್ರಮವಾಗಿ ಸಂಚರಿಸುತ್ತಿದ್ದರೂ ಕನ್ಯಾನ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
​ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ

Continue Reading

Trending

Copyright © 2025 Deevatige