crime
ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆ ಅಮಾನತು ; “ನಮಗೆ ಭಯ ಶುರುವಾಗಿದೆ, ನ್ಯಾಯಾಲಯ ದಯವಿಟ್ಟು ಜಾಮೀನು ರದ್ದುಗೊಳಿಸಬೇಕು” ಸಂತ್ರಸ್ತೆ ಮನವಿ
ದೇಶವನ್ನೇ ಬೆಚ್ಚಿ ಬೀಳಿಸಿದ 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತಿನಲ್ಲಿಟ್ಟಿದೆ.
ನ್ಯಾಯಾಲಯದ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಇಂಡಿಯಾ ಗೇಟ್ ಬಳಿ ಪ್ರಕರಣದ ಸಂತ್ರಸ್ತೆ, ಆಕೆಯ ತಾಯಿ ಪ್ರತಿಭಟನೆ ನಡೆಸಿ “ನ್ಯಾಯಾಲಯದ ಆದೇಶದಿಂದ ನಾವು ಭಯದಲ್ಲಿ ಬದುಕುವಂತಾಗಿದೆ. ವ್ಯವಸ್ಥೆ ನಮಗೆ ದ್ರೋಹ ಬಗೆದಿದೆ” ಎಂದು ಪ್ರತಿಭಟನೆ ವೇಳೆ ಸಂತ್ರಸ್ತೆ ಹೇಳಿದ್ದಾರೆ. ಇವರಿಗೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯೋಗಿತಾ ಭಯನಾ ಸಾಥ್ ನೀಡಿದರು.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಆಕೆ, “ಜಾಮೀನು ನೀಡಿದ ಸಮಯವು ರಾಜಕೀಯ ಪ್ರೇರಿತವಾಗಿದ್ದು. ಇದಕ್ಕೂ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಸಂಬoಧವಿದೆ ಎಂದಿದ್ದಾರೆ.

“ನಮಗೆ ಅನ್ಯಾಯ ಮಾಡಲಾಗಿದೆ. ಚುನಾವಣೆ ಬರುತ್ತಿದೆ. ಕುಲದೀಪ್ ಸಿಂಗ್ ಸೆಂಗಾರ್ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದ್ದಾರೆ. “ಇಂತಹ ಅತ್ಯಾಚಾರ ಆರೋಪಿ ಹೊರಬಂದರೆ, ನಾವು ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು? ಪ್ರಶ್ನಿಸಿದ್ದಾರೆ.
“ದೆಹಲಿ ನ್ಯಾಯಾಲಯದಿಂದ ಶಿಕ್ಷೆ ಅಮಾನತಿನಲ್ಲಿಟ್ಟ ಆದೇಶ ಹೊರಬಿದ್ದ ಬಳಿಕ ನಮಗೆ ಭಯ ಶುರುವಾಗಿದೆ. ನ್ಯಾಯಾಲಯ ದಯವಿಟ್ಟು ಜಾಮೀನು ರದ್ದುಗೊಳಿಸಬೇಕು” ಎಂದು ಸಂತ್ರಸ್ತೆ ಮನವಿ ಮಾಡಿದ್ದು, ನೋವಿನ ನಡುವೆಯೂ ಆಕೆ, “ನನಗೆ ನ್ಯಾಯಾಂಗದ ಮೇಲೆ ಇನ್ನೂ ನಂಬಿಕೆ ಇದೆ” ಎಂದು ಹೇಳಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಮೂವರನ್ನೂ ಸ್ಥಳದಿಂದ ಕರೆದೊಯ್ದರು. ಪೊಲೀಸರು ಅವರನ್ನು ತಮ್ಮ ವಾಹನಕ್ಕೆ ಹತ್ತಿಸಿದ ಮತ್ತು ಪ್ರತಿಭಟನೆಗೆ ಅವಕಾಶ ನೀಡುವಂತೆ ಅವರು ಮನವಿ ಮಾಡಿದ ವಿಡಿಯೋಗಳನ್ನು ಮಾಧ್ಯಮಗಳು ತೋರಿಸಿವೆ.
ಹೋರಾಟಗಾರ್ತಿ ಯೋಗಿತಾ ಅವರು, ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ನೀಡಿದ ಕಾರಣವನ್ನು ಪ್ರಶ್ನಿಸಿದ್ದಾರೆ. ಕಾನೂನು ಹೋರಾಟದ ವೇಳೆ ಪೂರ್ತಿಯಾಗಿ ಸಂತ್ರಸ್ತೆ ಮತ್ತು ಆಕೆಯ ತಾಯಿ ಪ್ರತ್ಯೇಕವಾಗಿ (ಏಕಾಂಗಿಯಾಗಿ) ಇದ್ದರು ಎಂದಿದ್ದಾರೆ.
ಸoತ್ರಸ್ತೆ ಮತ್ತು ಆಕೆಯ ತಾಯಿ ತುಂಬಾ ಕಷ್ಟಗಳನ್ನು ಎದುರಿಸಿ ಕಾನೂನು ಹೋರಾಟ ನಡೆಸುವ ಮೂಲಕ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರು. ಆದರೆ, ಈಗ ಏನಾಯಿತು? ಅಪರಾಧಿಗೆ ಜಾಮೀನು ಸಿಕ್ಕಿತು. ದೇಶದಲ್ಲಿ ಅತ್ಯಾಚಾರಿಗಳು ಜಾಮೀನು ಪಡೆಯುತ್ತಿದ್ದಾರೆ, ಅಮಾಯಕರು ಜೈಲಲ್ಲಿದ್ದಾರೆ. ಹೈಕೋರ್ಟ್ ಆದೇಶದ ಬಳಿಕ ಸಂತ್ರಸ್ತೆ ಮತ್ತು ಆಕೆಯ ತಾಯಿ ಭಯದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಸಂತ್ರಸ್ತೆಯ ಸಹೋದರಿ ಕೂಡ ಜಾಮೀನು ದೊರೆತಿರುವ ಕುರಿತು ಮಾತನಾಡಿದ್ದು, “ಅಪರಿಚಿತ ವ್ಯಕ್ತಿಗಳು ನಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿದ್ದಾರೆ, ನಮಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಅವನು ಸೆಂಗಾರ್ ಮೊದಲು ನನ್ನ ಚಿಕ್ಕಪ್ಪನನ್ನು ಕೊಂದ, ಬಳಿಕ ನನ್ನ ಅಪ್ಪನನ್ನು ಕೊಂದ. ನಂತರ ನನ್ನ ಸಹೋದರಿ ಮೇಲೆ ದೌರ್ಜನ್ಯ ನಡೆಯಿತು. ಎಲ್ಲಾ ಪ್ರಕರಣಗಳು ಆತನಿಗೆ ಸಂಬoಧಿಸಿದೆ. ಆದರೆ, ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಾವು ಇನ್ನೂ ಭಯದಲ್ಲಿದ್ದೇವೆ. ಕೊನೆಪಕ್ಷ ನಾವು ಜೈಲಲ್ಲಿ ಇದ್ದರೆ ಜೀವಂತ ಇರಬಹುದು” ಎಂದು ಆತಂಕ, ನೋವು ತೋಡಿಕೊಂಡಿದ್ದಾರೆ. “ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದರೆ, ನನ್ನ ಕುಟುಂಬವನ್ನು ನೆನೆದು ಸುಮ್ಮನಾದೆ” ಇದು ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ದೆಹಲಿಯ ಇಂಡಿಯಾ ಗೇಟ್ ಎದುರು ನೋವಿನಿಂದ ಹೇಳಿದ ಮಾತು.
ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯವು 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ವಿರುದ್ದ ಸೆಂಗಾರ್ ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮೇಲ್ಮನವಿ ವಿಚಾರಣೆ ಮುಗಿಯುವವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿದೆ.
ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠವು 15 ಲಕ್ಷ ರೂಪಾಯಿಗಳ ಜಾಮೀನು ಬಾಂಡ್ ಸಲ್ಲಿಸಬೇಕೆಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ.
ಆದಾಗ್ಯೂ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿಗೆ ಸಂಬoಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಸೆಂಗಾರ್‌ಗೆ ಜಾಮೀನು ಸಿಗದ ಕಾರಣ ಆತ ಸದ್ಯಕ್ಕೆ ಬಂಧನದಲ್ಲೇ ಇರುತ್ತಾರೆ. ಆ ಪ್ರಕರಣದಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯೊಂದಿಗೆ ಅವರ ಮೇಲ್ಮನವಿ ಇನ್ನೂ ದೆಹಲಿ ಹೈಕೋರ್ಟ್ನಲ್ಲಿ ಬಾಕಿ ಇದೆ.
ಬೆಚ್ಚಿ ಬೀಳಿಸಿದ ಪ್ರಕರಣ ಬಾಲಕಿಗೆ ನಿರಂತರ ಅತ್ಯಾಚಾರ; ಉನ್ನಾವೋ ಅತ್ಯಾಚಾರ ಪ್ರಕರಣ
17 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಿ ವಿಚಾರಣಾ ನ್ಯಾಯಾಲ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸೆಂಗಾರ್ ಮೇಲ್ಮನವಿ ಸಲ್ಲಿಸಿದ್ದಾರೆ.
ಸೆಂಗಾರ್ 17 ವರ್ಷದ ಬಾಲಕಿಯನ್ನು ಅಪಹರಿಸಿ 2017ರ ಜೂನ್ 11ರಿಂದ 20 ನಡುವೆ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಆಕೆಯನ್ನು 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಕೊನೆಗೆ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದರು.
ಈ ನಡುವೆ ಸೆಂಗಾರ್‌ನ ಅನತಿಯಂತೆ ಪೊಲೀಸರು ಬಾಲಕಿಗೆ ನಿರಂತರ ಬೆದರಿಕೆ ಹಾಕಿದ್ದರು. ದೌರ್ಜನ್ಯದ ವಿರುದ್ದ ಮಾತನಾಡದಂತೆ ಬಾಯಿ ಮುಚ್ಚಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಅoತಿಮವಾಗಿ ಅಲಹಾಬಾದ್ ಹೈಕೋರ್ಟ್ನ ಆದೇಶದ ಬಳಿಕ ಪೊಲೀಸರು ಸೆಂಗಾರ್ ವಿರುದ್ದ ಅಪಹರಣ, ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಆಗಸ್ಟ್ 2019ರಲ್ಲಿ, ಘಟನೆಗೆ ಸಂಬoಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿ, ದಿನನಿತ್ಯದ ವಿಚಾರಣೆ ನಡೆಸಿ 45 ದಿನಗಳಲ್ಲಿ ಪೂರ್ಣಗೊಳಿಸಬೇಕೆಂದು ಆದೇಶಿಸಿತ್ತು.
ಡಿಸೆಂಬರ್ 2019ರಲ್ಲಿ, ವಿಚಾರಣಾ ನ್ಯಾಯಾಲಯವು ಸೆಂಗಾರ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಅಲ್ಲದೆ, ಕುಟುಂಬ ಬಯಸಿದರೆ ಸುರಕ್ಷಿತ ಮನೆ ಮತ್ತು ಗುರುತಿನ ಬದಲಾವಣೆಯ ಮೂಲಕ ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಜೀವನ ಮತ್ತು ಸ್ವಾತಂತ್ರ‍್ಯವನ್ನು ರಕ್ಷಿಸಲು ಸಿಬಿಐ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯವು ನಿರ್ದೇಶಿಸಿತು.
ಸೆಂಗಾರ್‌ಗೆ ಗರಿಷ್ಠ ಶಿಕ್ಷೆ ವಿಧಿಸುವಾಗ, ವಿಚಾರಣಾ ನ್ಯಾಯಾಲಯವು ಆತನಿಗೆ ಶಿಕ್ಷೆ ಕಡಿತಗೊಳಿಸುವ ಯಾವುದೇ ಅಗತ್ಯತೆ ಇಲ್ಲ ಎಂದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಸೇವಕನಾಗಿದ್ದ ಸೆಂಗಾರ್ ಜನರ ನಂಬಿಕೆಗೆ ದ್ರೋಹ ಎಸಗಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.
ನ್ಯಾಯಾಲಯ ಸೆಂಗಾರ್‌ಗೆ ಶಿಕ್ಷೆ ವಿಧಿಸುವ ಮುನ್ನ, ನಂಬರ್ ಪ್ಲೇಟ್ ಇಲ್ಲದ ಲಾರಿಯೊಂದು ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ವಕೀಲರು ಗಂಭೀರವಾಗಿ ಗಾಯಗೊಂಡಿದ್ದರು. ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು.
ಈ ಸಂಬoಧ ಸೆಂಗಾರ್ ವಿರುದ್ದ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಆದರೆ, ಡಿಸೆಂಬರ್ 2021ರಲ್ಲಿ, ಅಪಘಾತವನ್ನು ಸೆಂಗಾರ್ ಅವರೇ ಆಯೋಜಿಸಿದ್ದಾರೆ ಎಂಬುದಕ್ಕೆ ಯಾವುದೇ ಪ್ರಾಥಮಿಕ ಪುರಾವೆಗಳು ದೊರೆಯದ ಕಾರಣ ದೆಹಲಿ ನ್ಯಾಯಾಲಯವು ಅವರನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಿತು.
crime
ಪುತ್ತೂರು: ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಅಜಿತ್ ರೈ ಹೊಸಮನೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:
- ಷರತ್ತುಬದ್ಧ ಅನುಮತಿ: ಶೋಭಾಯಾತ್ರೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
- ಸಮಯ ಮೀರಿದ ಬಳಿಕವೂ ಬಳಕೆ: ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್ನಲ್ಲಿ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು.
- ಆರೋಪವೇನು?: ಪೊಲೀಸರು ಸೂಚನೆ ನೀಡಿದರೂ, ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು ಧ್ವನಿವರ್ಧಕ ಬಂದ್ ಮಾಡದಂತೆ ತಡೆದು, ಪುನಃ ಧ್ವನಿವರ್ಧಕ ಬಳಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ:
ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ
crime
ಪುತ್ತೂರು ಮಹಿಳಾ ಠಾಣೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ
ಪುತ್ತೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ತಮ್ಮ ಹೋರಾಟಕ್ಕೆ ಜಯ ಸಿಗುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಮೂಲಗಳ ಪ್ರಕಾರ, ಬೆಳಿಗ್ಗೆ 11.30ರ ಸುಮಾರಿಗೆ ಅವರು ತಮ್ಮ ಹಳೆಯ ಕೇಸ್ ಒಂದರ ಸಂಬಂಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಅವರು ಬೇರೆ ಕಾರ್ಯ ನಿಮಿತ್ತ ಠಾಣೆಯಲ್ಲಿ ಇರಲಿಲ್ಲ. ಹೀಗಾಗಿ, ಲಿಖಿತವಾಗಿ ಹಾಜರಾದ ಬಗ್ಗೆ ಅವರಿಗೆ ನೋಟಿಸ್ ನೀಡಲಾಯಿತು. ಮುಂದಿನ ಸೂಚಿತ ದಿನಾಂಕದಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಮತ್ತೆ ಠಾಣೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ದಿನೇಶ್ ಜೈನ್ ಸೇರಿದಂತೆ ಹಲವರು ಅಭಿಮಾನಿಗಳು ಅವರ ಜೊತೆಗಿದ್ದರು.
ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರಿಗೆ ಭೇಟಿ ನೀಡಿದಾಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದೇ ಹೋಗುತ್ತಿದ್ದು, ಅದರಂತೆ ಇಂದು ಠಾಣೆಗೆ ತೆರಳಿ ಹಿಂತಿರುಗುವಾಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು ಎಂದು ಅವರ ಆಪ್ತ ವಲಯ ತಿಳಿಸಿದೆ.
crime
ಸಕಲೇಶಪುರ ಲಾಡ್ಜ್ನಲ್ಲಿ ಕರಾಳ ರಾತ್ರಿ: ಬಾತ್ರೂಮ್ನಲ್ಲಿ 23 ವರ್ಷದ ಯುವತಿ ನಿಗೂಢ ಸಾವು, ಜೊತೆಗಿದ್ದ ಯುವಕರು ಎಸ್ಕೇಪ್!
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್ ಒಂದರಲ್ಲಿ 23 ವರ್ಷದ ವರ್ಷ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಘಟನೆಯು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ವಿವರಣೆ:
ಪ್ರವಾಸಕ್ಕೆ ತೆರಳಿದ್ದ ಮೂವರು: ಬೆಂಗಳೂರು ಮೂಲದ (ನಾಗಸಂದ್ರ/ಚಿಕ್ಕಬಾಣಾವರ) 23 ವರ್ಷದ ವರ್ಷ ಎಂಬ ಯುವತಿ, ತನ್ನ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಎಂಬುವವರೊಂದಿಗೆ ಶುಕ್ರವಾರ ಪ್ರವಾಸಕ್ಕೆಂದು ಸಕಲೇಶಪುರಕ್ಕೆ ಬಂದಿದ್ದಳು.
ಪ್ರವಾಸಿ ತಾಣಗಳ ವೀಕ್ಷಣೆ: ಶನಿವಾರ, ಭಾನುವಾರ ಹಾಗೂ ಸೋಮವಾರದಂದು ಈ ಮೂವರು ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸುತ್ತಾಡಿದ್ದರು.

ಲಾಡ್ಜ್ನಲ್ಲಿ ತಂಗಿದ್ದ ದಳ: ವಳಲಹಳ್ಳಿ ಕೂಡಿಗೆಯಲ್ಲಿರುವ ಶ್ರೀದೇವು ಲಾಡ್ಜ್ನಲ್ಲಿ ಮೂವರು ಒಂದೇ ರೂಮ್ನಲ್ಲಿ ತಂಗಿದ್ದರು.
ಅನುಮಾನಾಸ್ಪದ ಸಾವು: ಮಂಗಳವಾರ ಲಾಡ್ಜ್ನ ಬಾತ್ರೂಮ್ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಅಸುನೀಗಿದ್ದಾರೆ. ಯುವತಿ ಮೃತಪಟ್ಟ ಬಳಿಕ ಜೊತೆಗಿದ್ದ ಯುವಕರು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದಾರೆ (ಕೆಲವು ಮೂಲಗಳ ಪ್ರಕಾರ ಆಸ್ಪತ್ರೆಗೆ ಕರೆತಂದು ಬಳಿಕ ತೆರಳಿದ್ದಾರೆ).
ಆಸ್ಪತ್ರೆ ಹಾಗೂ ಪೊಲೀಸ್ ತನಿಖೆ: ಕೂಡಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾತ್ರೂಮ್ನಲ್ಲಿ ಯುವತಿ ಮೃತಪಟ್ಟಿರುವುದು ಮತ್ತು ಜೊತೆಗಿದ್ದವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿಗೆ ನಿಖರವಾದ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್‌ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
