Connect with us

Article

ಜಗದ ಸಮನ್ವಯತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು; 172ನೇ ಗುರು ಜಯಂತಿ ಸಂಭ್ರಮ

Published

on

ವಿಶೇಷ ಲೇಖನ

✍️ ಜ್ಯೋತಿಪ್ರಕಾಶ್‌ ಪುಣಚ, ಪ್ರಧಾನ ಸಂಪಾದಕರು, ದೀವಟಿಗೆ ಡಿಜಿಟಲ್‌ ಮೀಡಿಯಾ-9448441282

18ನೇ ಶತಮಾನ !
ನಮ್ಮ ದೇಶದ ಬಹುತೇಕ ಗ್ರಾಮೀಣ ಪ್ರದೇಶಗಳು ಸಾಮಾಜಿಕ ಪಿಡುಗುಗಳಿಂದ ತತ್ತರಿಸುತ್ತಿದ್ದ ಕಾಲವದು. ಆ ಸಂದರ್ಭಕ್ಕೆ ಕೇರಳ ರಾಜ್ಯದಲ್ಲಿರುವ ಇಂತಹ ಒಂದು ಸ್ಥಳಕ್ಕೆ ಬೇಟಿ ನೀಡಿದ ಜಗತ್ ಚಿಂತಕ ಮಹಾಪುರುಷ ಸ್ವಾಮೀ ವಿವೇಕಾನಂದರು “ ಇದೊಂದು ಜಾತೀಯತೆಯ ಹುಚ್ಚರುಗಳ ಸಂತೆ “ ಎಂದು ನುಡಿದಿದ್ದರು. ಉಚ್ಛ ಜಾತಿ, ನೀಚ ಜಾತಿ, ಸ್ಪರ್ಶಕ್ಕೆ ಅಯೋಗ್ಯರು, ಸಹಪಂಕ್ತಿಗೆ ಸೇರದವರು, ಕಾಣಲಿಕ್ಕಾಗದವರು, ಕೆರೆಯಲ್ಲಿ ಸ್ನಾನ ಮಾಡಲು ಅನರ್ಹರು, ಬಾವಿ ಮುಟ್ಟಲಿಕ್ಕಾಗದವರು, ದೇವರನ್ನು ಪೂಜಿಸಲಿಕ್ಕಾಗದವರು, ದೇವಾಲಯದ ಹತ್ತಿರಕ್ಕಾದರೂ ಹೋಗಲಿಕ್ಕೆ ನಿಷೇಧ ಹೇರಳ್ಪಟ್ಟವರು ಹೀಗೆ ಜಾತಿ ಎಂಬ ದುಷ್ಟ ಶಕ್ತಿಯ ಕಪಿ ಮುಷ್ಠಿಯೊಳಗೆ ಚಿತ್ರ ಹಿಂಸೆ ಪಡುತ್ತಾ, ಈ ಜಗತ್ತಿನಲ್ಲಿ ಬದುಕುವುದೇ ಘೋರ ಅಪರಾಧವೆಂದು ಸಾವಿಗೆ ಶರಣಾಗುತ್ತಾ, ಬದುಕುಳಿದವರು ಮತಾಂತರಗೊಂಡು ಕದ್ದುಮುಚ್ಚಿ ಜೀವನ ನಡೆಸುತ್ತಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಈಳವ ದಂಪತಿಗಳಾದ ಮಾಧವ ಆಶಾನ್ ಮತ್ತು ಕುಟ್ಟಿಯಮ್ಮಾಳ್ ದಂಪತಿಗಳಿಗೆ ನಾಲ್ಕನೇ ಮಗುವಾಗಿ 1854 ಅಗಸ್ಟ್ 20ರ ಸಿಂಹಮಾಸ ಶತಭಿಷಾ ನಕ್ಷತ್ರದ ತಿರುವೊಣಂ ಶುಭದಿನದಂದು ಕೇರಳ ರಾಜ್ಯದ ಚೆಂಬಳಂತಿ ಎಂಬ ಪುಟ್ಟ ಹಳ್ಳಿಯ ವಯಲ್‌ವಾರಂ ಎಂಬ ಮನೆಯಲ್ಲಿ ‘ನಾಣಿ’ ಎಂಬ ಜಗದೋದ್ಧಾರಕನ ಜನನವಾಯಿತು.
ಜಾತೀಯತೆಯ ಕಗ್ಗತ್ತಲಿನಲ್ಲಿದ್ದ ಸಮಾಜಕ್ಕೆ ನಿಜವಾದ ಮಾನವೀಯ ಆದರ್ಶಗಳ ಬೆಳಕು ತೋರಿಸಿ ಶೋಷಿತ, ದಲಿತರ ಉದ್ಧಾರಗೈದ ಮಹಾಕ್ರಾಂತಿ ಪುರುಷ ಸಮಾಜ ಸುಧಾರಕ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಗಳು ಭಗವಂತನ ಸೃಷ್ಠಿಯಲ್ಲಿ ಸಮಾನತೆ ಪಡೆದುಕೊಂಡು ಬಂದಿರುವ ಮಾನವ ಕುಲಕ್ಕೆ ಸಮಾಜದಲ್ಲಿ ಸಮಾನರಾಗಿ ಜೀವಿಸಲು ಸ್ವಾತಂತ್ರ್ಯವನ್ನು ನೀಡಿದೆ. ಆ ಮಹಾನ್ ಕ್ರಾಂತಿ ಪುರುಷನ 172ನೇ ಜಯಂತಿಯು ಜಗತ್ತಿನೆಲ್ಲೆಡೆ ಆಚರಿಸಲ್ಪಡುತ್ತಿದೆ.
ಸಮಾಜದಲ್ಲಿ ಹಿಂದುಳಿದವರು, ಅಶ್ಪೃಶ್ಯರು, ಹೀನ ಜಾತಿಯವರು, ಜೀತದಾಳುಗಳು, ಅವಲಂಬಿತರು ಹೀಗೆ ಹಲವು ರೀತಿಯಲ್ಲಿ ಮೈಲಿಗೆಯವರೆಂದು ಗುರುತಿಸಿಕೊಂಡವರ ಮೇಲೆ ನಿತ್ಯ ನಿರಂತರವಾಗಿ ನಡೆಯುತ್ತಿದ್ದ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗಳು ಎಳವೆಯಲ್ಲಿಯೇ ನಾಣಿಯ ಮನಸ್ಸಿನ ಮೇಲೆ ವಿಶೇಷ ಪರಿಣಾಮ ಬೀರಿತು. ಈ ಸಮಾಜದಲ್ಲಿ ಹೊಕ್ಕಿರುವ ಅನಿಷ್ಠಗಳನ್ನು ಬೇರು ಸಹಿತ ಕಿತ್ತೊಗೆಯುವ ಸಂಕಲ್ಪಕ್ಕೆ ತನ್ನನ್ನು ಮುಡಿಪಾಗಿರಿಸಿದರು.
1877ರಿಂದ 1884ರ ತನಕ ಶ್ರೀ ರಾಮನ್ ಪಿಳ್ಳೆ ಆಶಾನ್, ಮೂತ್ತಾಪಿಳ್ಳೆ ಆಶಾನ್ ಮೊದಲಾದ ಪಂಡಿತರ ಬಳಿ ಸಮಗ್ರ ವೇದ ಶಾಸ್ತ್ರಗಳನ್ನು ಅಧ್ಯಯನ ಮಾಡಿದ ನಾಣಿ ಕೆಲ ಸಮಯ ಶಿಕ್ಷಕನಾಗಿ ಸಮಾಜದಲ್ಲಿ ಅಂಟಿಕೊಂಡಿರುವ ಪಿಡುಗುಗಳನ್ನು ಅಧ್ಯಯನ ಮಾಡಿದರು. ಲೌಕಿಕ ಬದುಕಿನ ಸುಖದ ಅನುಭವ ನನಗೊಬ್ಬನಿಗೆ ಬೇಡ ಎಂದರಿತು ತನ್ನ ಗುರಿ ಸಾಧನೆಗಾಗಿ ಪರಿವ್ರಾಜಕರಾಗಿ ಸಂಚಾರ ಹೊರಟರು. ಚಟ್ಟಾಂಬಿ ಸ್ವಾಮಿ, ತಯ್ಯಾಟು ಅಯ್ಯಾವು ಮೊದಲಾದ ಆಧ್ಯಾತ್ಮಿಕ ಸಾಧಕರಲ್ಲಿ ಶಿಷ್ಯರಾಗಿ ಆಧ್ಯಾತ್ಮ ಸಾಧನೆಯ ಮಾರ್ಗವನ್ನನುಸರಿಸಿ ಮರುತ್ವಾ ಮಲೆಯಲ್ಲಿ ಆರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಯೋಗ ಸಿದ್ಧಿಯನ್ನು ಮೈಗೂಡಿಸಿ ಮಹಾತ್ಮರಾದರು. ನಾರಾಯಣ ಗುರುಗಳಾಗಿ ತಮ್ಮ ಪೂರ್ಣ ಜೀವಿತವನ್ನು ದೀನದಲಿತರ, ಶೋಷಿತರ ಆಕ್ರಂದನ ರೋದನೆಗಳಿಗೆ ಸಾಂತ್ವನವೀಯಲು, ಮಾರ್ಗದರ್ಶನ ಮಾಡಲು ಮೀಸಲಿರಿಸಿದರು.
1888ರ ಶಿವರಾತ್ರಿಯಂದು ‘ ಅರವೀಪುರಂ’ ಎಂಬಲ್ಲಿ ‘ ಶಿವಲಿಂಗ’ವೊಂದನ್ನು ಪ್ರತಿಷ್ಠಾಪಿಸಿ ಮೇಲ್ವರ್ಗದವರಿಗೆ ಮಾತ್ರ ಸೀಮಿತವೆನಿಸಿದ್ದ ದೇವಸ್ಥಾನ ಪ್ರವೇಶಕ್ಕೆ ಪ್ರತಿಯಾಗಿ ಶೂದ್ರರಿಗೂ ದೇವಾಲಯ ಪ್ರವೇಶದ ಹಕ್ಕನ್ನು ತೋರಿಸಿ ಬ್ರಹ್ಮ ಶ್ರೀ ನಾರಾಯಣ ಗುರುಗಳಾದರು. ಈ ದೇವಾಲಯದ ಸ್ಥಾಪನೆ ದೀನದಲಿತ ಬಡಜನರ ಕೀಳರಿಮೆಯ ಭಾವನೆಗಳನ್ನು ತೊಡೆದುಹಾಕಿ ನವಚೈತನ್ಯವನ್ನು ಮೂಡಿಸಿ ‘ಸಮಾನತೆ’ ಎಂಬ ಶಬ್ದಕ್ಕೆ ಅರ್ಥ ನೀಡಿತು. ಅಂದಿನ ಕಾಲದಲ್ಲಿ ಶಿವಾಲಯ ಸ್ಥಾಪನೆಗೆ ಉಚ್ಛ ಜಾತಿಯವರ ಬಲವಾದ ಆಕ್ಷೇಪಣೆಗಳು ಎದುರಾದಾಗ ‘ ನಾನು ಶೂದ್ರರ ಶಿವನನ್ನು ಪ್ರತಿಷ್ಠಾಪಿಸಿರುವುದು’ ಎಂಬ ಮಾರ್ಮಿಕ ಉತ್ತರ ಉಚ್ಛ ಜಾತಿಯವರೆಂದು ಹೇಳಿ ಕೊಳ್ಳುತ್ತಿರುವ ವರ್ಗದವರಿಗೆ ನುಂಗಲಾರದ ತುತ್ತಾಗಿ ಬಲವಾದ ಹೊಡೆತ ನೀಡಿತು.
ನಿರಕ್ಷರ ಕುಕ್ಷಿಗಳಾಗಿದ್ದ, ಪ್ರಾಣಿಗಳಂತೆ ಜೀವಿಸುತ್ತಿದ್ದ, ಮೌಢ್ಯ, ಅಂದಾನುಕರಣೆ, ಕಂದಾಚಾರಗಳಲ್ಲಿ ಶತಶತಮಾನಗಳಿಂದ ಬಳಲುತ್ತಿದ್ದ ಮಾನವ ಜೀವಿಗಳನ್ನು ವಿದ್ಯೆ ಹಾಗೂ ಸಂಘಟನಾ ಶಕ್ತಿಗಳಿಂದ ಮಾತ್ರ ಸುಸಂಸ್ಕೃತರನ್ನಾಗಿಸಲು ಸಾಧ್ಯ ಎಂದು ಚಿಂತಿಸಿದ ಗುರುಗಳು “ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ಸಾರ್ವಕಾಲಿಕ ಅಮರ ಸಂದೇಶವನ್ನು ಜಗತ್ತಿಗೆ ಸಾರಿದರು ಮತ್ತು ಅದರ ಅನುಷ್ಠಾನಕ್ಕೆ ಪಣತೊಟ್ಟು ಯಶಸ್ವಿಯಾದರು.
1902ರಲ್ಲಿ “ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ “ ಎಂಬ ಸಾಮಾಜಿಕ ಸೇವಾ ಸಂಘವನ್ನು ಸ್ಥಾಪಿಸಿ ಬಡವರ್ಗದ ಸೇವೆಯಲ್ಲಿ ಸಮಾಜದ ಅಭಿವೃದ್ಧಿಯನ್ನು ಕಂಡರು. ಉಚ್ಛ ಜಾತಿಯವರ ಆಡಳಿತದಲ್ಲಿದ್ದ ದೇವಾಲಯದೊಳಗೆ ದೀನದಲಿತರಿಗೆ ಪ್ರವೇಶ ಇಲ್ಲದಿರುವುದನ್ನು ಮನಗಂಡ ಗುರುಗಳು ಕೇರಳ ಕರ್ನಾಟಕ ತಮಿಳುನಾಡು ಹಾಗೂ ಶ್ರೀಲಂಕಾದಲ್ಲಿ ದಲಿತ ವರ್ಗದವರಿಗಾಗಿಯೇ ಹಲವಾರು ದೇವಾಲಯಗಳನ್ನು ಸ್ಥಾಪಿಸಿದರು. ದೇಗುಲದೊಳಗೆ ಮೂರ್ತಿಯ ಬದಲು ಕನ್ನಡಿ, ದೀಪಗಳನ್ನು ಪ್ರತಿಷ್ಠಾಪಿಸಿ ನಿಮ್ಮಲ್ಲಿಯೇ ದೇವರಿದ್ದಾನೆ. ಆ ದೇವರಿಗೆ ಪೂಜೆ ಸಲ್ಲಿಸಿರಿ. ದೇವರೊಬ್ಬನೇ ಎಂದು ಜಗತ್ತಿಗೆ ಸಾರಿದರು. ಜಾತಿ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕೆಂದು ಸಮನ್ವತೆಯ ಸಂದೇಶ ಸಾರಿ ಹಿಂಸೆ ಅಶಾಂತಿ ಸಂಘರ್ಷದಿಂದ ಕೂಡಿದ್ದ ಸಮಾಜವನ್ನು ಸಾಮರಸ್ಯ, ಅಹಿಂಸೆ ಮತ್ತು ಸಂಸ್ಕೃತಿಯಿಂದ ಗೆಲ್ಲ ಬಹುದು ಎಂದು ತಿಳಿಸಿ ಆ ಮೂಲಕ ಪರಿವರ್ತನೆ ಮಾಡಿದರು.
ಬ್ರಹ್ಮ ಶ್ರೀ ನಾರಾಯಣ ಗುರುಗಳು ಆಧ್ಯಾತ್ಮದ ಶಿಖರಾಗ್ರವನ್ನು ಏರಿದ್ದರೂ ತಮ್ಮ ಪವಾಡಗಳನ್ನು ಪಾರದರ್ಶಕವಾಗಿ ಸಮಾಜದ ಒಳಿತಿಗಾಗಿ ವಿನಿಯೋಗಿಸಿದರು. ಗುರುಗಳ ಪರಿವರ್ತನಾ ಪವಾಡಗಳು ಮಹಾತ್ಮಾ ಗಾಂಧಿ, ಆಚಾರ್ಯ ವಿನೋಭಾ ಬಾವೆಯಂತಹ ಮಹಾ ಪುರುಷರನ್ನು ಆಕರ್ಷಿಸಿ ಅವರಿಗೆ ಮಾರ್ಗದರ್ಶನ ನೀಡಿತು. ಮಾನವೀಯತೆಯ ನೆಲೆಯನ್ನು ಕಡಿದುಕೊಂಡು ನರಳಾಡುತ್ತಿದ್ದ ಸಮಾಜವನ್ನು ಆಧ್ಯಾತ್ಮಿಕ ಶಕ್ತಿ , ಧೀಶಕ್ತಿ, ಸಾಹಿತ್ಯಗಳ ಮೂಲಕ ಪರಿವರ್ತನೆಗೈದರು. ತನ್ನ ಜೀವನವನ್ನು ಶೋಷಿತ ವರ್ಗದ ಪರಿವರ್ತನೆಗಾಗಿ ಸವೆಸಿ ಸಮಾಜದಲ್ಲಿ ಸಮಾನತೆಯ ವ್ಯವಸ್ಥೆಯನ್ನು ರೂಪಿಸಿ ಜಗತ್ತಿನ ಸಮನ್ವಯತೆಯ ಹರಿಕಾರರಾಗಿ ಅವರ ಆದರ್ಶಗಳು ಬದುಕಿನ ಸೂತ್ರವಾಗಿ ಉಳಿಯಿತು. ಗುರುಗಳ ಸಾರ್ವಕಾಲಿಕ ಸಂದೇಶಗಳು ಕಾಲಾನುಕಾಲಕ್ಕೆ ಅನುಷ್ಠಾನಗೊಂಡು ಶಾಂತಿ ಸಮನ್ವಯತೆಯ ಸಮಾಜ ನಿರ್ಮಾಣ ಗೊಂಡಾಗ ಸಮಾನತೆ ಸ್ಥಾಪನೆಗೊಂಡು ಸಮಭಾವನೆಯ ಹೃದಯಗಳು ಸಮ್ಮೀಳನಗೊಂಡು ಸಮಬಾಳು ನೆಲೆಸಿದರೆ ಗುರುಗಳ ಜಯಂತಿಗೆ ಗೌರವ ಸಲ್ಲುತ್ತದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಆಕಾಶದ ಕಾಣುತ್ತಿದೆ ಅಚ್ಚರಿ: ಚಂದ್ರನ ಪಕ್ಕ‌ ಇಂದು ಮಿನುಗುತ್ತಿರುವ ‘ಬೆಳ್ಳಿ ಚುಕ್ಕೆ’ ಶುಕ್ರ ಗ್ರಹದ ರಹಸ್ಯ!

Published

on

ಆಕಾಶದಲ್ಲಿ ಚಂದ್ರನ ಸನಿಹದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿ ಮಿನುಗುತ್ತಿರುವುದು ಯಾವುದೇ ನಕ್ಷತ್ರವಲ್ಲ, ಬದಲಾಗಿ ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ (Venus). ಸಂಜೆಯ ಪಶ್ಚಿಮ ದಿಗಂತದಲ್ಲಿ ಬಾಲಚಂದ್ರ ಹಾಗೂ ಈ ಬೆಳ್ಳಿ ಚುಕ್ಕೆಯು ಪರಸ್ಪರ ಅತ್ಯಂತ ಹತ್ತಿರದಲ್ಲಿ ಗೋಚರಿಸುತ್ತಿರುವುದು ಎಲ್ಲೆಡೆ ಭಾರಿ ಕುತೂಹಲ ಮೂಡಿಸಿದೆ.

ಇದು ನಕ್ಷತ್ರವೇಕಲ್ಲ? ಶುಕ್ರ ಗ್ರಹದ ವಿಶೇಷತೆ

ಸ್ವಂತ ಬೆಳಕಿಲ್ಲದಿದ್ದರೂ ಕಾಂತಿ: ಸಾಮಾನ್ಯ ನಕ್ಷತ್ರಗಳು ತಮ್ಮ ಸ್ವಂತ ಬೆಳಕಿನಿಂದ ಮಿನುಗುತ್ತವೆ. ಆದರೆ ಶುಕ್ರ ಗ್ರಹಕ್ಕೆ ಸ್ವಂತ ಬೆಳಕಿಲ್ಲ. ಇದು ಸೂರ್ಯನ ಬೆಳಕನ್ನು ಅತ್ಯಧಿಕ ಪ್ರಮಾಣದಲ್ಲಿ ಪ್ರತಿಫಲಿಸುವುದರಿಂದ ರಾತ್ರಿ ಆಕಾಶದಲ್ಲಿ ಚಂದ್ರ ಬಿಟ್ಟರೆ ಅತಿ ಹೆಚ್ಚು ಕಾಂತಿಯುತವಾಗಿ ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ಇದನ್ನು ‘ಸಂಜೆ ನಕ್ಷತ್ರ’ ಅಥವಾ ‘ಬೆಳ್ಳಿ ಚುಕ್ಕೆ’ ಎಂದು ಕರೆಯಲಾಗುತ್ತದೆ.

ದಟ್ಟ ವಾತಾವರಣ: ಶುಕ್ರ ಗ್ರಹವು ಸೂರ್ಯನಿಗೆ ಹತ್ತಿರವಿರುವ ಗ್ರಹವಾಗಿದ್ದು, ಇದರ ದಟ್ಟವಾದ ವಾತಾವರಣವು ಸೂರ್ಯನ ಬೆಳಕನ್ನು ಬಲವಾಗಿ ಪ್ರತಿಫಲಿಸುತ್ತದೆ.

ಸಂಯೋಗ (Conjunction) ಮತ್ತು ಚಂದ್ರ ಮರೆಮಾಚುವಿಕೆ (Lunar Occultation)

ಗ್ರಹ-ಚಂದ್ರ ಯುತಿ: ಖಗೋಳಶಾಸ್ತ್ರದ ಪ್ರಕಾರ, ಭೂಮಿ, ಚಂದ್ರ ಮತ್ತು ಶುಕ್ರ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ನಿರ್ದಿಷ್ಟ ಸಾಪೇಕ್ಷ ಸ್ಥಾನಕ್ಕೆ ಬಂದಾಗ ಒಂದೇ ನೇರ ಸಾಲಿನಲ್ಲಿ (Conjunction) ಅತಿ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತವೆ. ಭೂಮಿಯಿಂದ ನೋಡುವಾಗ ಈ ಎರಡೂ ಆಕಾಶಕಾಯಗಳು ಅಕ್ಕಪಕ್ಕದಲ್ಲಿ ಇದ್ದಂತೆ ಭಾಸವಾಗುತ್ತವೆ.

ಚಂದ್ರ ಮರೆಮಾಚುವಿಕೆ: ಭಾರತದ ಕೆಲ ಭಾಗಗಳಲ್ಲಿ ಚಂದ್ರನು ಶುಕ್ರ ಗ್ರಹದ ಮುಂಭಾಗದಲ್ಲೇ ಹಾದುಹೋಗುವ ಅಪರೂಪದ ‘ಚಂದ್ರ ಮರೆಮಾಚುವಿಕೆ’ (Lunar Occultation) ವಿದ್ಯಮಾನವೂ ಜರಗಿದೆ. ಅಂದರೆ ಕೆಲಕಾಲ ಶುಕ್ರ ಗ್ರಹವು ಚಂದ್ರನ ಹಿಂದೆ ಮರೆಯಾಗಿ, ನಂತರ ಆಚೆ ಬಂದಿದೆ. ಇದು ಬರಿಗಣ್ಣಿಗೂ ಅತ್ಯಂತ ಆಕರ್ಷಕವಾಗಿ ಗೋಚರಿಸುವ ದೃಶ್ಯವಾಗಿದೆ.

ಚೌತಿ ಚಂದ್ರನ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ

ಪೌರಾಣಿಕ ಹಿನ್ನೆಲೆ: ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ (ಗಣೇಶ ಚತುರ್ಥಿ) ದಿನ ಚಂದ್ರನನ್ನು ನೋಡಿದರೆ ಕಳಂಕ ಅಥವಾ ಅಪವಾದ ಬರುತ್ತದೆ (ಮಣಿಭರಣ ಕಳಂಕ) ಎಂಬುದು ಜನರಲ್ಲಿ ಶತಶತಮಾನಗಳಿಂದ ರೂಢಿಯಲ್ಲಿರುವ ನಂಬಿಕೆಯಾಗಿದೆ.

ವೈಜ್ಞಾನಿಕ ಸತ್ಯ: ಖಗೋಳ ವಿಜ್ಞಾನದ ದೃಷ್ಟಿಯಿಂದ ಚಂದ್ರನನ್ನು ನೋಡುವುದರಿಂದ ಯಾವುದೇ ಶಾಪ, ಅಪವಾದ ಅಥವಾ ಕೆಟ್ಟ ಪರಿಣಾಮಗಳು ಸಂಭವಿಸುವುದಿಲ್ಲ. ಇದು ಕೇವಲ ನೈಸರ್ಗಿಕ ಉಪಗ್ರಹವಾಗಿದ್ದು, ಭೂಮಿಯ ಸುತ್ತ ನಿರಂತರವಾಗಿ ಸುತ್ತುತ್ತದೆ. ಚತುರ್ಥಿಯ ದಿನ ಚಂದ್ರನು ಭೂಮಿಗೆ ಮತ್ತು ಸೂರ್ಯನಿಗೆ ಇರುವ ಸಾಪೇಕ್ಷ ಸ್ಥಾನದಿಂದಾಗಿ ತೆಳುವಾದ ಕಮಾನು ಅಥವಾ ಅರ್ಧಚಂದ್ರಾಕಾರದಲ್ಲಿ ಗೋಚರಿಸುತ್ತಾನೆ.

ವೀಕ್ಷಣೆ ಹೇಗೆ?

ಅಮಾವಾಸ್ಯೆಯ ನಂತರದ ಆರಂಭಿಕ ದಿನಗಳಲ್ಲಿ (ಬಾಲಚಂದ್ರನಿದ್ದಾಗ) ಪಶ್ಚಿಮ ಆಕಾಶದಲ್ಲಿ ಸಂಜೆಯ ಹೊತ್ತು ಈ ಅದ್ಭುತ ದೃಶ್ಯವು ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಕಾರಣದಿಂದ ಜನರು ಇದನ್ನು ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Continue Reading

Article

ಸರ್ವರಲ್ಲೂ ಸಮಭಾವದ ಪ್ರತೀಕ ಗಣೇಶೋತ್ಸವ: ಹಬ್ಬಗಳು ಒಗ್ಗಟ್ಟಿನ ಸೇತುವೆಯಾಗಲಿ

Published

on

✍️ ಜ್ಯೋತಿಪ್ರಕಾಶ್‌ ಪುಣಚ, ಪ್ರಧಾನ ಸಂಪಾದಕರು, ದೀವಟಿಗೆ ಡಿಜಿಟಲ್‌ ಮೀಡಿಯಾ-9448441282

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧ್ರಾಮಿಕ ಆಚರಣೆಗಳಲ್ಲ, ಅವು ಮನುಕುಲವನ್ನು ಬೆಸೆಯುವ ಭಾವನಾತ್ಮಕ ಕೊಂಡಿಗಳು. ಅದರಲ್ಲಿಯೂ ಗಣೇಶ ಚತುರ್ಥಿಯು ವಿಘ್ನಗಳನ್ನು ನಿವಾರಿಸಿ, ಬುದ್ಧಿವಂತಿಕೆ ಹಾಗೂ ಸಮೃದ್ಧಿಯನ್ನು ತರುವ ಹಬ್ಬವಾಗಿ ಮಾತ್ರವಲ್ಲದೆ, ಸಮಾಜದಲ್ಲಿ ಸೌಹಾರ್ದತೆ ಮತ್ತು ಐಕ್ಯತೆಯನ್ನು ಸಾರುವ ಮಹತ್ವದ ಸಂದರ್ಭವಾಗಿದೆ.

ಪ್ರಕೃತಿಯ ವಿಸ್ಮಯವನ್ನು ಗಮನಿಸಿದರೆ ನಮಗೆ ದೊಡ್ಡ ಪಾಠ ಸಿಗುತ್ತದೆ. ಸೂರ್ಯನ ಬೆಳಕು, ಚಂದ್ರನ ತಂಪಾದ ಬೆಳಕು, ಬೀಸುವ ಗಾಳಿ ಮತ್ತು ಹರಿಯುವ ನದಿಗಳು ಎಂದಿಗೂ ಜಾತಿ, ಮತ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಪ್ರಕೃತಿಯು ಇಡೀ ಮಾನವ ಕುಲವನ್ನು ತನ್ನ ಮಕ್ಕಳಂತೆ ಸಮಾನವಾಗಿ ಕಾಣುತ್ತದೆ. ಅದೇ ರೀತಿ, ನಮ್ಮ ಹಬ್ಬಗಳ ಆಚರಣೆಯೂ ಕೂಡ ಭೇದಭಾವಗಳನ್ನು ಮರೆತು ಎಲ್ಲರನ್ನು ಅಪ್ಪಿಕೊಳ್ಳುವಂತಾಗಬೇಕು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಮುನ್ನುಡಿ ಬರೆದಾಗ, ಅದರ ಮುಖ್ಯ ಉದ್ದೇಶವೇ ಜಾತಿ-ಮತಗಳ ಗಡಿಯನ್ನು ಮೀರಿ ಇಡೀ ಸಮಾಜವನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯವನ್ನು ಬಿತ್ತುವ ಮಾಧ್ಯಮಗಳಾಗಬೇಕಿದೆ.

ಪ್ರತಿಯೊಬ್ಬರಿಗೂ ಅವರವರ ಧರ್ಮ, ನಂಬಿಕೆಗಳು ಮತ್ತು ಆಚರಣೆಗಳು ಶ್ರೇಷ್ಠವಾಗಿರುವುದು ಸಹಜ ಮತ್ತು ನೈಸರ್ಗಿಕ. ಆದರೆ, ತನ್ನ ಧರ್ಮದಷ್ಟೇ ಇತರರ ಧರ್ಮವನ್ನೂ ಗೌರವಿಸುವುದೇ ನಿಜವಾದ ಮಾನವತೆಯ ಪ್ರತೀಕ. ದ್ವೇಷ ಅಥವಾ ಅಸೂಯೆಗಾಗಿ ಒಗ್ಗೂಡುವುದಕ್ಕಿಂತ, ಸೌಹಾರ್ದತೆ ಮತ್ತು ಮಾನವೀಯತೆಗಾಗಿ ಒಂದಾಗುವುದೇ ಹಬ್ಬಗಳ ಅತಿ ದೊಡ್ಡ ಸಂದೇಶ.

ಈ ಗಣೇಶ ಚತುರ್ಥಿಯಂದು ವಿಘ್ನಹರ್ತನನ್ನು ಆರಾಧಿಸುವಾಗ, ನಮ್ಮ ಮನಸ್ಸಿನಲ್ಲಿರುವ ಅಹಂಕಾರ, ತಾರತಮ್ಯ ಮತ್ತು ದ್ವೇಷದ ಭಾವನೆಗಳನ್ನು ವಿಸರ್ಜಿಸೋಣ. ಪ್ರಕೃತಿಯಂತೆ ವಿಶಾಲವಾದ ಹೃದಯವನ್ನು ರೂಢಿಸಿಕೊಂಡು, ಎಲ್ಲರೊಂದಿಗೆ ಬೆರೆತು ಬಾಳುವ ಸಂಕಲ್ಪ ಮಾಡೋಣ. ಹಬ್ಬಗಳು ನಮ್ಮನ್ನು ವಿಭಜಿಸದೆ, ಸೌಹಾರ್ದತೆಯ ಬಂಧದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೆಸೆಯಲಿ.

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು!

Continue Reading

Article

ಚಿತ್ರದಲ್ಲಿ ತಾಯಿಯನ್ನು ಹುಡುಕಿದ ಕರು: ಪ್ರಕೃತಿಯ ಮಮತೆ ಮತ್ತು ಮಾನವನ ಕಠೋರತೆಗೆ ಹಿಡಿದ ಕನ್ನಡಿ

Published

on

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ಸಣ್ಣ ವಿಡಿಯೋ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ತಾಯಿಯ ಪ್ರೀತಿ, ಮಮತೆ ಮತ್ತು ಅಪ್ಪುಗೆಗಾಗಿ ಒಂದು ಜೀವ ಎಷ್ಟು ತವಕಿಸುತ್ತದೆ ಎಂಬುದಕ್ಕೆ ಈ ಸನ್ನಿವೇಶ ಸಾಕ್ಷಿಯಾಗಿದೆ.

ರಸ್ತೆಯ ಬದಿಯಲ್ಲಿ ನಿಂತಿದ್ದ ಹಾಲಿನ ಡೈರಿಯ ಲಾರಿಯೊಂದರ ಹಿಂಭಾಗದಲ್ಲಿ ಹಸುವಿನ ದೊಡ್ಡ ಚಿತ್ರವಿತ್ತು (ಪೋಸ್ಟರ್). ಹಾದಿಯಲ್ಲಿ ಅನಾಥವಾಗಿ ಅಲೆಯುತ್ತಿದ್ದ ಸಣ್ಣ ಕರುವೊಂದು ಆ ಚಿತ್ರವನ್ನು ಕಂಡ ತಕ್ಷಣ, ಅದು ತನ್ನದೇ ಹೆತ್ತ ತಾಯಿ ಎಂದು ಭಾವಿಸಿದೆ. ಓಡೋಡಿ ಬಂದು “ಅಂಬಾ…” ಎಂದು ಕರೆದಿದೆ. ಚಿತ್ರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ತಾಯಿಯ ಬಳಿಗೆ ಹೋಗಲು ಹಂಬಲಿಸಿ ಲಾರಿಯ ಹಿಂಭಾಗಕ್ಕೆ ತನ್ನ ಮುಂಗಾಲುಗಳನ್ನಿಟ್ಟು ನಿಂತಿದೆ. ಹಸುವಿನ ಚಿತ್ರದಲ್ಲಿದ್ದ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ನಿರಂತರ ಪ್ರಯತ್ನ ನಡೆಸಿದೆ.

ಆದರೆ, ಅದು ಕೇವಲ ನಿರ್ಜೀವ ಪೋಸ್ಟರ್ ಎಂಬ ಸತ್ಯ ಆ ಮುಗ್ಧ ಕರುವಿಗೆ ತಿಳಿಯಲಿಲ್ಲ. “ತಾಯಿ ನನ್ನನ್ನು ಏಕೆ ಹತ್ತಿರಕ್ಕೆ ಕರೆದುಕೊಳ್ಳುತ್ತಿಲ್ಲ, ಏಕೆ ಹಾಲು ನೀಡುತ್ತಿಲ್ಲ?” ಎಂದು ಅದು ನಿರಾಶೆಯಿಂದ ಗೋಗರೆಯುವ ದೃಶ್ಯ ಪ್ರತಿಯೊಬ್ಬರ ಕರುಳನ್ನು ಹಿಂಡುವಂತಿದೆ.

ಹೈನುಗಾರಿಕೆ ಮತ್ತು ನಮ್ಮ ನೈತಿಕತೆ:

ಈ ಸನ್ನಿವೇಶವು ಕೇವಲ ಒಂದು ವೈರಲ್ ವಿಡಿಯೋ ಅಲ್ಲ; ಬದಲಿಗೆ ಪ್ರಸ್ತುತ ಸಮಾಜದಲ್ಲಿ ಸಾಗುತ್ತಿರುವ ಹೈನುಗಾರಿಕೆ ಉದ್ಯಮದ ಕಠೋರ ನೈಜತೆಗೆ ಹಿಡಿದ ಕನ್ನಡಿ. ಪ್ರತಿಯೊಂದು ಪ್ರಾಣಿ-ಪಕ್ಷಿಗೂ ತಾಯಿಯ ಮಮತೆ ಅತ್ಯಗತ್ಯ. ಆದರೆ ಮನುಷ್ಯ ತನ್ನ ಸ್ವಾರ್ಥ ಮತ್ತು ಲಾಭಕ್ಕಾಗಿ ಕರು ಕುಡಿಯಬೇಕಾದ ಹಾಲನ್ನು ಸಂಪೂರ್ಣವಾಗಿ ಹಿಂಡಿ ಮಾರಾಟ ಮಾಡುತ್ತಿದ್ದಾನೆ.

ಅದರಲ್ಲೂ ವಿಶೇಷವಾಗಿ ಗಂಡು ಕರು ಹುಟ್ಟಿದರೆ, ಹಾಲು ನೀಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಅದನ್ನು ಬೀದಿಗೆ ತಳ್ಳುವುದು ಅಥವಾ ಅನಾಥವಾಗಿ ಬಿಟ್ಟುಬಿಡುವುದು ಸಮಾಜದಲ್ಲಿ ಸಾಮಾನ್ಯವಾಗಿದೆ. ತಾಯಿಯ ಹಾಲಿನಿಂದಲೂ, ತಾಯಿಯ ಪ್ರೀತಿಯಿಂದಲೂ ವಂಚಿತವಾದ ಇಂತಹ ಮುಗ್ಧ ಜೀವಿಗಳು ರಸ್ತೆ ರಸ್ತೆಗಳಲ್ಲಿ ಅಲೆಯುತ್ತಾ, ನಿರ್ಜೀವ ಚಿತ್ರಗಳಲ್ಲೂ ತಮ್ಮ ತಾಯಿಯನ್ನು ಹುಡುಕುವ ಪರಿಸ್ಥಿತಿ ಬಂದೊದಗಿರುವುದು ಅತ್ಯಂತ ಶೋಚನೀಯ.

ಈ ವಿಡಿಯೋ ನಮಗೆಲ್ಲರಿಗೂ ಒಂದು ಪ್ರಶ್ನೆಯನ್ನು ಎಸೆದಿದೆ — ಮನುಷ್ಯನ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳ ಕರುಳ ಬಳ್ಳಿಯ ಬಂಧವನ್ನು ಹೀಗೆ ತುಂಡರಿಸುವುದು ಎಷ್ಟು ಸರಿ? ಪ್ರಾಣಿಗಳ ಮೇಲಿನ ದಯೆ ಮತ್ತು ಕರುಣೆ ಕೇವಲ ಮಾತಿಗೆ ಸೀಮಿತವಾಗದೇ ಕಾರ್ಯಾಚರಣೆಗೆ ಬರಬೇಕಿದೆ

Continue Reading

Trending

Copyright © 2025 Deevatige

error: Content is protected !!