Connect with us

government

ಆಹಾರ ಭದ್ರತೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ: ಹೋಟೆಲ್, ಮೆಡಿಕಲ್ ಸ್ಟೋರ್‌ಗಳಲ್ಲಿ ಇನ್ಮುಂದೆ QR ಕೋಡ್ ಮೂಲಕ ನೇರ ದೂರು ಸೌಲಭ್ಯ

Published

on

ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ, ಸಾರ್ವಜನಿಕರು ಸೇವೆ ಪಡೆಯುವ ಸ್ಥಳಗಳಲ್ಲಿ ನೇರವಾಗಿ ದೂರು ಸಲ್ಲಿಸಲು QR ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಹೋಟೆಲ್‌ಗಳು, ಮೆಡಿಕಲ್ ಸ್ಟೋರ್‌ಗಳು, ಪಿಜಿ ಹಾಗೂ ಕ್ಯಾಂಟೀನ್‌ಗಳಲ್ಲಿ ಕಳಪೆ ಆಹಾರ ಅಥವಾ ಸೇವಾ ಲೋಪ ಕಂಡುಬಂದಲ್ಲಿ, ಗ್ರಾಹಕರು QR ಕೋಡ್ ಸ್ಕ್ಯಾನ್ ಮಾಡಿ ತಕ್ಷಣವೇ ಅಧಿಕೃತ ದೂರು ನೀಡಬಹುದು. ಕರ್ನಾಟಕದಲ್ಲಿ ಈ ರೀತಿಯ ತಂತ್ರಜ್ಞಾನ ಆಧಾರಿತ ದೂರು ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಆಹಾರ ಇಲಾಖೆಯು ಇತ್ತೀಚೆಗೆ ನಡೆಸಿದ ಸರಣಿ ತಪಾಸಣೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಈ ನಿರ್ಧಾರದ ಜೊತೆಗೆ, ಹೋಟೆಲ್‌ಗಳಲ್ಲಿ ಸಿಸಿಟಿವಿ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಮರುಪರಿಶೀಲಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸರ್ಕಾರವನ್ನು ಆಗ್ರಹಿಸಿದೆ.

ತಪಾಸಣೆ ವಿಸ್ತರಣೆ:

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಖಾಸಗಿ ಹಾಸ್ಟೆಲ್‌ಗಳು, ಪಿಜಿಗಳು, ಬಸ್ ನಿಲ್ದಾಣಗಳು, ಮದುವೆ ಮನೆಗಳು, ರೈಲ್ವೆ ಕ್ಯಾಂಟೀನ್‌ಗಳು ಹಾಗೂ ವಿಮಾನಗಳಲ್ಲಿ ನೀಡಲಾಗುವ ಆಹಾರದ ಮೇಲೆಯೂ ನಿರಂತರ ನಿಗಾ ವಹಿಸಲಾಗುತ್ತದೆ. ಪಿಜಿಗಳಲ್ಲಿ ಕಳಪೆ ಆಹಾರ ನೀಡುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

ಬೃಹತ್ ಕಾರ್ಯಾಚರಣೆ ಹಾಗೂ ಆಹಾರ ಜಪ್ತಿ:

ಆಹಾರ ಸುರಕ್ಷತಾ ಅಧಿಕಾರಿಗಳ ನೇತೃತ್ವದ 30 ತಂಡಗಳು ಬೆಂಗಳೂರಿನಲ್ಲಿ ನಡೆಸಿದ ದಿಢೀರ್ ತಪಾಸಣೆಯಲ್ಲಿ ಬೃಹತ್ ಪ್ರಮಾಣದ ಕಳಪೆ ಮತ್ತು ಅವಧಿ ಮೀರಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ವಸ್ತುಗಳುಪ್ರಮಾಣ / ವಿವರಪ್ರಮುಖ ಲೋಪಗಳು
ಮಟನ್ / ಚಿಕನ್378 ಕೆಜಿ + 51 ಕೆಜಿತಪ್ಪು ಲೇಬಲ್, ಎಕ್ಸ್‌ಪೈರಿ ದಿನಾಂಕ ಇಲ್ಲದಿರುವುದು & ಅವಧಿ ಮೀರಿದ್ದು
ಮೀನು203 ಕೆಜಿಅತಿಯಾದ ಅವಧಿ ಮೀರಿದ ಮತ್ತು ಕಳಪೆ ಸ್ಥಿತಿ
ಸಸ್ಯಾಹಾರಿ ಆಹಾರ200 ಕೆಜಿಮಾಂಸಾಹಾರದ ಜೊತೆಗೆ ಅಸಮರ್ಪಕ ಸಂಗ್ರಹಣೆ
ತರಕಾರಿ76 ಕೆಜಿಕೊಳೆತ ಮತ್ತು ಫಂಗಸ್‌ಯುಕ್ತ ತರಕಾರಿಗಳು
ಹಾಲು / ಮೊಸರು45 ಲೀಟರ್ಅವಧಿ ಮೀರಿದ ಉತ್ಪನ್ನಗಳು
ಬಳಸಿದ ಅಡುಗೆ ಎಣ್ಣೆ49 ಲೀಟರ್ಪುನರಾವರ್ತಿತ ಮತ್ತು ನಿಯಮಬಾಹಿರ ಬಳಕೆ
ಇತರ ಉತ್ಪನ್ನಗಳುಬೇಕರಿ (12 ಕೆಜಿ), ಧಾನ್ಯಗಳು (67 ಕೆಜಿ)ಲೇಬಲ್ ಲೋಪ ಮತ್ತು ಎಕ್ಸ್‌ಪೈರಿ ದಿನಾಂಕ ಮುಕ್ತಾಯ

ಮಾದರಿಗಳ ಪ್ರಯೋಗಾಲಯ ಪರೀಕ್ಷೆ:

ಹಾಲು ಮತ್ತು ಉತ್ಪನ್ನಗಳು: 25 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ ಒಂದು ಮಾದರಿ ‘ಕಳಪೆ’ (Substandard) ಎಂದು ವರದಿಯಾಗಿದೆ.

ಶಾಲಾ-ಕಾಲೇಜು ಕ್ಯಾಂಟೀನ್: 124 ಶಾಲೆ-ಕಾಲೇಜುಗಳ ಆಹಾರ ಘಟಕಗಳನ್ನು ಪರಿಶೀಲಿಸಿ 53 ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಮೆಯೋನೈಸ್: 36 ಎಗ್ ಮೆಯೋನೈಸ್ (Egg Mayonnaise) ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲಾಗಿದೆ.

ಆಹಾರ ನೈರ್ಮಲ್ಯ ಕಾಪಾಡದ ಮತ್ತು ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಉದ್ಯಮಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕಾರ್ಯಾಚರಣೆಯನ್ನು ಮುಂದುವರಿಸಲಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

government

ಉಪ್ಪಿನಂಗಡಿ ಗ್ರಾ.ಪಂ. ಮೇಲೆ ಲೋಕಾಯುಕ್ತ ದಾಳಿ; ಪಿಡಿಒ ವಿರುದ್ಧ ಲಂಚದ ಆರೋಪಗಳ ಸುರಿಮಳೆ

Published

on

ಉಪ್ಪಿನಂಗಡಿ, ಸೆ. 9: ವ್ಯಾಪಕ ಭ್ರಷ್ಟಾಚಾರ ಮತ್ತು ಅವ್ಯವಹಾರದ ದೂರುಗಳ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಲೋಕಾಯುಕ್ತ ಡಿವೈಎಸ್ಪಿ ಗಾನ ಕುಮಾರಿ ನೇತೃತ್ವದ ತಂಡವು ಕಚೇರಿಗೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿತು. ದಾಳಿಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ವರ್ತಕರು, ಬಾರ್ ಮಾಲಕರು ಮತ್ತು ಸಾರ್ವಜನಿಕರು ತಮ್ಮ ಅಳಲನ್ನು ಲೋಕಾಯುಕ್ತರ ಮುಂದೆ ತೋಡಿಕೊಂಡರು.

ಪೆಟ್ರೋಲ್ ಪಂಪ್ ಪರವಾನಿಗೆ ನವೀಕರಣಕ್ಕೆ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ, ಕಟ್ಟಡ ತೆರಿಗೆ ಕಟ್ಟಲು ಹೋದರೂ ತೆಗೆದುಕೊಳ್ಳುತ್ತಿಲ್ಲ. ಪಿಡಿಒ ಹೇಳದೆ ಯಾವ ಕೆಲಸವೂ ಆಗುವುದಿಲ್ಲ, ಲಂಚ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ ಎಂದು ಪಂಜಳದ ಉದ್ಯಮಿ ಚಂದ್ರಶೇಖರ ತಾಳಜೆ ಆರೋಪಿಸಿದರು.

1987ರಿಂದ ಬಾರ್ ನಡೆಸುತ್ತಿದ್ದೇನೆ, ಈ ಬಾರಿ ನನ್ನ ಬಾರ್ ಲೈಸೆನ್ಸ್ ನವೀಕರಣಕ್ಕೂ ಅರ್ಜಿ ತೆಗೆದುಕೊಳ್ಳುತ್ತಿಲ್ಲ ಎಂದು ಉಲ್ಲಾಸ್ ಬಾರ್ ಮಾಲಕ ಕರುಣಾಕರ ಸುವರ್ಣ, ನಿರಾಲ ಬಾರ್‌ನ ನವೀನ ರೈ, ಕಾರ್ತಿಕ್ ಬಾರ್‌ನ ಆದಿತ್ಯ ಭಟ್ ಅವರು ದೂರು ನೀಡಿದರು.

ಗ್ರಾ.ಪಂ. ಕಟ್ಟಡಗಳ ಹರಾಜು ಅವಧಿ ಮುಗಿದರೂ ಮರು ಹರಾಜು ನಡೆಸದೆ, ಹಳೆಯದವರಿಂದಲೇ ಹೆಚ್ಚುವರಿ ಹಣ ಪಡೆದು ಮುಂದುವರಿಸಲಾಗುತ್ತಿದೆ. ರಾತ್ರಿ ವೇಳೆ ಪಿಡಿಒ ಮತ್ತು ಕೆಲ ಸಿಬ್ಬಂದಿಗಳು ಮಧ್ಯವರ್ತಿಗಳೊಂದಿಗೆ ಕಚೇರಿಯಲ್ಲಿ ರಹಸ್ಯ ಸಭೆ ನಡೆಸುತ್ತಾರೆ, ಸಿಸಿ ಕ್ಯಾಮರಾ ಪರಿಶೀಲಿಸಿ ಎಂದು ಸಾಮಾಜಿಕ ಕಾರ್ಯಕರ್ತ ರಹಿಮಾನ್ ಪೊರುಂಕಾಜೆ ಒತ್ತಾಯಿಸಿದರು.

ಈ ವೇಳೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಡಿವೈಎಸ್ಪಿ ಗಾನ ಕುಮಾರಿ, ಪಿಡಿಒ ಅರ್ಜಿ ತೆಗೆದುಕೊಳ್ಳಬೇಡಿ ಎಂದರೂ ಅದು ನಿಮ್ಮ ಕರ್ತವ್ಯವಲ್ಲ. ಬಂದ ಎಲ್ಲಾ ಅರ್ಜಿಗಳಿಗೆ ಹಿಂಬರಹ ನೀಡಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ಎಂದು ಸೂಚಿಸಿದರು. ದಾಳಿ ವೇಳೆ ಪ್ರಭಾರ ಪಿಡಿಒ ವಿಲ್ಯಡ್ ಲಾರೆನ್ಸ್ ರೊಡ್ರಿಗಸ್ ಕಚೇರಿಯಲ್ಲಿ ಗೈರಾಗಿದ್ದರು.

ಸಾರ್ವಜನಿಕರ ಎಲ್ಲಾ ದೂರುಗಳನ್ನು ಪರಿಶೀಲಿಸಿ ಸೂಕ್ತ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ದೂರು ನೀಡಲು ಬಾಕಿ ಇರುವವರು ಇಂದು ಸಂಜೆ 4 ಗಂಟೆಗೆ ಗ್ರಾ.ಪಂ. ಸಭಾಂಗಣಕ್ಕೆ ಬರುವಂತೆ ಕರೆ ನೀಡಿದ್ದಾರೆ.

Continue Reading

DEATH

ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿಧನ : ಇಂದು ತಿಪಟೂರಿನಲ್ಲಿ ಅಂತಿಮ ಸಂಸ್ಕಾರ

Published

on

ಬೆಂಗಳೂರು: ಮಾಜಿ ಶಿಕ್ಷಣ ಸಚಿವ, ತಿಪಟೂರು ಕ್ಷೇತ್ರದ ಹಿರಿಯ ರಾಜಕಾರಣಿ ಬಿ.ಸಿ. ನಾಗೇಶ್ (67) ಅವರು ತೀವ್ರ ಅನಾರೋಗ್ಯದಿಂದ ಮಂಗಳವಾರ (ಆಗಸ್ಟ್ 18) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕಳೆದ ಒಂದು ವರ್ಷದಿಂದ ತೀವ್ರತರದ ಬ್ರೈನ್ ಟ್ಯೂಮರ್ (ಮಿದುಳಿನ ಗಂಟು) ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಈಗಾಗಲೇ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬೆಂಗಳೂರಿನಲ್ಲಿರುವ ಮಗಳ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಅವರು, ಕೊನೆಯುಸಿರೆಳೆದಿದ್ದಾರೆ. ಮೃತರು ಓರ್ವ ಮಗ ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.

ಆಗಸ್ಟ್ 19ರಂದು (ಬುಧವಾರ) ಅವರ ಸ್ವಂತ ಊರಾದ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸಾರ್ವಜನಿಕ ದರ್ಶನ ಹಾಗೂ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎಬಿವಿಪಿಯಿಂದ ರಾಜಕೀಯ ಜೀವನ ಆರಂಭ:

1959ರ ಜುಲೈ 1ರಂದು ಜನಿಸಿದ ಬಿ.ಸಿ. ನಾಗೇಶ್ ಅವರು, ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪೂರ್ಣಕಾಲಿಕ ಪ್ರಚಾರಕರಾಗಿ ಹಲವು ವರ್ಷಗಳ ಕಾಲ ಸಂಘಟನಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

1984ರಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ (BJP) ಸೇರ್ಪಡೆಯಾದ ಅವರು, ಪಕ್ಷದ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಂಡು ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಎರಡು ಬಾರಿ ಶಾಸಕ, ಪ್ರಾಥಮಿಕ ಶಿಕ್ಷಣ ಸಚಿವರಾಗಿ ಸೇವೆ:

ಶಾಸಕರಾಗಿ: 2008ರಲ್ಲಿ ಮೊದಲ ಬಾರಿಗೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಾಗೇಶ್, 2018ರಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. (2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು).

ಸಚಿವರಾಗಿ: 2021ರಿಂದ 2023ರವರೆಗಿನ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ‘ಸಕಾಲ’ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಸಚಿವರಾಗಿದ್ದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಶಾಲಾ ಕಾಂಪೌಂಡ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಸುದ್ದಿಯಲ್ಲಿದ್ದರು.

ಗಣ್ಯರ ಕಂಬನಿ:

ಬಿ.ಸಿ. ನಾಗೇಶ್ ಅವರ ಅಗಲಿಕೆಗೆ ರಾಜ್ಯದ ಪ್ರಮುಖ ರಾಜಕೀಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರು ತೀವ್ರ ಕಂಬನಿ ಮಿಡಿದಿದ್ದಾರೆ. ‘ನಿಷ್ಠಾವಂತ ಸಂಘಟಕ ಹಾಗೂ ಸರಳ ರಾಜಕಾರಣಿಯನ್ನು ರಾಜ್ಯ ಕಳೆದುಕೊಂಡಂತಾಗಿದೆ’ ಎಂದು ಸಂತಾಪ ಸೂಚಿಸಿದ್ದಾರೆ.

Continue Reading

DEATH

ಕಾವೇರಿ ವನ್ಯಧಾಮದಲ್ಲಿ ಭೀಕರ ಎನ್‌ಕೌಂಟರ್: ಅರಣ್ಯ ಸಿಬ್ಬಂದಿ ಕಾರ್ಯಾಚರಣೆಗೆ 3 ಬೇಟೆಗಾರರು ಬಲಿ! ವಾತಾವರಣ ಉದ್ವಿಗ್ನ

Published

on

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಈ ಘಟನೆ ಸಂಭವಿಸಿದೆ. ವನ್ಯಜೀವಿಗಳ ಬೇಟೆಗೆ ಅರಣ್ಯಕ್ಕೆ ನುಗ್ಗಿದ್ದ ಬೇಟೆಗಾರರ ಗುಂಪಿನ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ತೆರಳಿದ್ದರು. ಈ ವೇಳೆ ಬೇಟೆಗಾರರು ಅರಣ್ಯ ಸಿಬ್ಬಂದಿಯ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲು ಮುಂದಾಗಿದ್ದು, ಸಿಬ್ಬಂದಿ ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಬೇಟೆಗಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಪ್ರಮುಖ ವಿವರಗಳು:

  • ಮೃತಪಟ್ಟವರು: ಅಂತೋಣಿಸ್ವಾಮಿ, ಪೀಟರ್ ಮತ್ತು ಕುಮಾರ್.
  • ಸಿಬ್ಬಂದಿಗೆ ಗಾಯ: ಗುಂಡಿನ ಚಕಮಕಿಯಲ್ಲಿ ಒಬ್ಬ ಅರಣ್ಯ ಸಿಬ್ಬಂದಿಗೂ ಗಾಯಗಳಾಗಿದ್ದು, ಅವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
  • ಒಬ್ಬ ಪರಾರಿ: ಘಟನಾ ಸ್ಥಳದಲ್ಲಿದ್ದ ಮತ್ತೊಬ್ಬ ಬೇಟೆಗಾರ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
  • ವಶಪಡಿಸಿಕೊಂಡ ವಸ್ತುಗಳು: ಕಾರ್ಯಾಚರಣೆಯ ಸ್ಥಳದಿಂದ ಒಂದು ನಾಡಬಂದೂಕು ಹಾಗೂ ಬೇಟೆಯಾಡಿದ್ದ ಜಿಂಕೆಯ ಮೃತದೇಹವನ್ನು ಇಲಾಖೆ ವಶಕ್ಕೆ ಪಡೆದುಕೊಂಡಿದೆ.
  • ಮರಣೋತ್ತರ ಪರೀಕ್ಷೆ: ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಗಮನದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಸ್ಥಳೀಯರ ಆಕ್ರೋಶ – ಅರಣ್ಯ ಕಚೇರಿ ಧ್ವಂಸ:

ಈ ಎನ್‌ಕೌಂಟರ್ ಬೆನ್ನಲ್ಲೇ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಲಾಖೆಯ ಸಿಬ್ಬಂದಿ ಬೇಟೆಗಾರರನ್ನು ಮೊದಲು ವಶಕ್ಕೆ ಪಡೆದು, ಬಳಿಕ ಅತ್ಯಂತ ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ” ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಅರಣ್ಯ ಇಲಾಖೆ, ಕಾರ್ಯಾಚರಣೆಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲೇ ಈ ಸಾವುಗಳು ಸಂಭವಿಸಿವೆ ಎಂದು ಸ್ಪಷ್ಟಪಡಿಸಿದೆ.

ಕೋಪಗೊಂಡ ಸ್ಥಳೀಯರು ಶಾಗ್ಯದಲ್ಲಿರುವ ಉಪವಲಯ ಅರಣ್ಯಾಧಿಕಾರಿಗಳ ಕಚೇರಿಗೆ ನುಗ್ಗಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಕಚೇರಿಯ ಪೀಠೋಪಕರಣಗಳು, ಬೈಕ್ ಹಾಗೂ ಇತರ ವಸ್ತುಗಳನ್ನು ಜಖಂಗೊಳಿಸಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸದ್ಯ ಶಾಗ್ಯ ಅರಣ್ಯ ಪ್ರದೇಶದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ನಮ್ಮವರು ಬೇಟೆಗಾರರಲ್ಲ, ರೈತರು: ಮೃತರ ಸಂಬಂಧಿ ವಿಜಯ್ ಆಂಥೋನಿ ಆಕ್ರೋಶ

ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಮೃತದೇಹಗಳನ್ನು ವೀಕ್ಷಿಸಲು ಬಂದ ಮೃತರ ನಿಕಟ ಸಂಬಂಧಿ ವಿಜಯ್ ಆಂಥೋನಿ ಮಾಧ್ಯಮಗಳೊಂದಿಗೆ ಮಾತನಾಡಿ ಅರಣ್ಯ ಇಲಾಖೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ಮೃತಪಟ್ಟ ಮೂವರೂ (ಅಂತೊಣಿಸ್ವಾಮಿ, ಪೀಟರ್ ಹಾಗೂ ಕುಮಾರ್) ನನಗೆ ಸ್ವಂತ ಮಾವಂದಿರು. ಅವರ್ಯಾರೂ ಬೇಟೆಗಾರರಲ್ಲ. ಎಲ್ಲರೂ ಕೃಷಿ ಮಾಡಿಕೊಂಡು, ಹಸು-ಎಮ್ಮೆಗಳನ್ನು ಸಾಕಿಕೊಂಡಿದ್ದ ಸಾಧಾರಣ ರೈತರು. ದನಕರುಗಳು ಕಾಡಿಗೆ ಮೇಯಲು ಹೋದಾಗ, ಅವು ರಾತ್ರಿಯಾದರೂ ಮನೆಗೆ ಬರದಿದ್ದರೆ ಹುಡುಕಿಕೊಂಡು ಹೋಗುವುದು ನಮಗೆ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಇವರ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ವೇಳೆ ಅವರ ಬಳಿ ಆಯುಧವೇ ಇದ್ದರೂ, ನೇರವಾಗಿ ಜೀವ ತೆಗೆಯುವಂತೆ ಶೂಟ್ ಮಾಡುವ ಅಗತ್ಯ ಏನಿತ್ತು? ಗುಂಡು ಹೊಡೆಯುವಾಗ ಕನಿಷ್ಠ ಕಾಲಿನ ಕೆಳಭಾಗಕ್ಕಾದರೂ ಹೊಡೆದು ಬಂಧಿಸಬಹುದಿತ್ತಲ್ಲವೇ? ನಮ್ಮವರು ಫೈರಿಂಗ್ ಮಾಡಿದ್ದಾರೆ ಎಂದು ಇಲಾಖೆ ಹೇಳುತ್ತಿದೆಯಲ್ಲ, ಹಾಗಾದರೆ ಯಾವ ಅರಣ್ಯ ಸಿಬ್ಬಂದಿಗೆ ಗುಂಡು ತಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ! ಎಂದು ಆಕ್ರೋಶಿತರಾಗಿದ್ದಾರೆ.

Continue Reading

Trending

Copyright © 2025 Deevatige

error: Content is protected !!