Connect with us

DEATH

ವಾಲಿಬಾಲ್ ಆಡುತ್ತಿದ್ದಾಗಲೇ ಕುಸಿದು ಬಿದ್ದು 10ನೇ ತರಗತಿ ವಿದ್ಯಾರ್ಥಿ ದಾರುಣ ಸಾವು: ಕ್ರೀಡಾಪಟುಗಳ ಆರೋಗ್ಯ ಜಾಗೃತಿಗೆ ತಜ್ಞರ ಕರೆ

Published

on

ಸುರತ್ಕಲ್: ಸ್ನೇಹಿತರೊಂದಿಗೆ ಉತ್ಸಾಹದಿಂದ ವಾಲಿಬಾಲ್ ಆಡುತ್ತಿದ್ದ 15 ವರ್ಷದ ವಿದ್ಯಾರ್ಥಿಯೊಬ್ಬ ಹಠಾತ್ ಕುಸಿದು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುರತ್ಕಲ್ ಸಮೀಪದ ಸೂರಿಂಜೆ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮಾಧವ ಅಮೀನ್ ಅವರ ಪುತ್ರ ಲಿಖಿತ್ ಅಮೀನ್ (15) ಎಂದು ಗುರುತಿಸಲಾಗಿದೆ. ಈತ ಸೂರಿಂಜೆ ಕೋಟೆ ಬೋಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದ ಲಿಖಿತ್, ಕ್ರೀಡೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಉದಯೋನ್ಮುಖ ಕ್ರೀಡಾಪಟುವಾಗಿದ್ದ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ: ಮಾಹಿತಿಯ ಪ್ರಕಾರ, ಸೂರಿಂಜೆ ಮೈದಾನದಲ್ಲಿ ಲಿಖಿತ್ ತನ್ನ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದಾಗ ಏಕಾಏಕಿ ಅಸ್ವಸ್ಥಗೊಂಡು ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಗಮನಿಸಿದ ಸ್ನೇಹಿತರು ಹಾಗೂ ಸ್ಥಳೀಯರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಘಟನೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.

ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕಷ್ಟೇ ನಿಜವಾದ ಕಾರಣ ತಿಳಿಯಬೇಕಿದೆ. ಹಠಾತ್ ಸಂಭವಿಸಿದ ಈ ಘಟನೆಯಿಂದ ಕುಟುಂಬಸ್ಥರು, ಶಾಲಾ ಶಿಕ್ಷಕರು, ಸಹಪಾಠಿಗಳು ಹಾಗೂ ಗ್ರಾಮಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಆರೋಗ್ಯ ಜಾಗೃತಿ: ಕ್ರೀಡಾಪಟುಗಳು ಮತ್ತು ಪೋಷಕರು ಗಮನಿಸಬೇಕಾದ ಪ್ರಮುಖ ವಿಷಯಗಳು

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಹಾಗೂ ಯುವಕರಲ್ಲಿ ಹಠಾತ್ ಹೃದಯಾಘಾತ (Sudden Cardiac Arrest) ಉಂಟಾಗುವ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಜ್ಞರು ನೀಡಿರುವ ಪ್ರಮುಖ ಸಲಹೆಗಳು:

  1. ನಿಯಮಿತ ಆರೋಗ್ಯ ತಪಾಸಣೆ (Regular Health Check-ups):
  2. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಮತ್ತು ಯುವಕರು ಕಾಲಕಾಲಕ್ಕೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.
  3. ವಿಶೇಶವಾಗಿ ಇಸಿಜಿ (ECG) ಮತ್ತು ಎಕೋ (ECHO) ನಂತಹ ಹೃದಯ ಸಂಬಂಧಿ ತಪಾಸಣೆಗಳನ್ನು ಮಾಡಿಸುವುದು ಸೂಕ್ತ.
  4. ಆರಂಭಿಕ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:
  5. ಆಟವಾಡುವಾಗ ಅಥವಾ ವ್ಯಾಯಾಮ ಮಾಡುವಾಗ ಎದೆನೋವು, ತೀವ್ರ ಉಸಿರಾಟದ ತೊಂದರೆ, ತಲೆಸುತ್ತು, ತೀವ್ರ ಆಯಾಸ ಅಥವಾ ಮೂರ್ಛೆ ಬೀಳುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಆಟವನ್ನು ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಬೇಕು.
  6. ಸಿಪಿಆರ್ (CPR) ತರಬೇತಿ ಹಾಗೂ ಪ್ರಥಮ ಚಿಕಿತ್ಸೆ:
  7. ಕ್ರೀಡಾಂಗಣಗಳು, ಶಾಲೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರಿಗೂ ಸಿಪಿಆರ್ (Cardiopulmonary Resuscitation) ತರಬೇತಿ ನೀಡುವುದು ಅಗತ್ಯ.
  8. ವ್ಯಕ್ತಿ ಕುಸಿದು ಬಿದ್ದ ತಕ್ಷಣವೇ ನೀಡುವ ಸಿಪಿಆರ್ ಚಿಕಿತ್ಸೆಯು ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
  9. ದೇಹದ ನಿರ್ಜಲೀಕರಣ (Dehydration) ತಡೆಯಿರಿ:
  10. ಆಟವಾಡುವಾಗ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಿ. ಸಾಕಷ್ಟು ನೀರು ಮತ್ತು ಎಲೆಕ್ಟ್ರೋಲೈಟ್ (Electrolytes) ಸೇವನೆ ಮುನ್ನೆಚ್ಚರಿಕೆಯಾಗಿರಲಿ.
  11. ಕುಟುಂಬದ ಆರೋಗ್ಯ ಇತಿಹಾಸ:
  12. ಕುಟುಂಬದಲ್ಲಿ ಯಾರಿಗಾದರೂ ಸಣ್ಣ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿದ್ದಲ್ಲಿ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಮಕ್ಕಳ ಸಕ್ರಿಯ ಜೀವನಶೈಲಿ ಎಷ್ಟು ಮುಖ್ಯವೋ, ಅವರ ಆಂತರಿಕ ಆರೋಗ್ಯದ ಕಾಳಜಿಯೂ ಅಷ್ಟೇ ಮುಖ್ಯ ಎಂಬುದನ್ನು ಈ ದುರಂತ ಘಟನೆ ನೆನಪಿಸುತ್ತದೆ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Condolences

ವಿಡಿಯೋ ಕರೆಯಲ್ಲಿ ತಂದೆಯ ಅಂತ್ಯಕ್ರಿಯೆ: ಬರಲಾಗದ ಮಕ್ಕಳು, ಮನಕಲಕಿದ ಸೋನಿಪತ್ ಘಟನೆ; ಮಕ್ಕಳ ನಡತೆಗೆ ಬೇಸರ ವ್ಯಕ್ತಪಡಿಸಿದ ನೆಟ್ಟಿಗರು !

Published

on

 ತನ್ನ ಮೂವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರ ಪೋಷಣೆಯಲ್ಲಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ತಂದೆಯೊಬ್ಬರು ಸೋನಿಪತ್‌ನ ವೃದ್ಧಾಶ್ರಮವೊಂದರಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ. ಆದರೆ ದುರಂತವೆಂದರೆ, ಅವರ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಮಕ್ಕಳಲ್ಲಿ ಯಾರೂ ಬರಲು ಸಾಧ್ಯವಾಗಲಿಲ್ಲ. ಬದಲಾಗಿ, ನೇಪಾಳ, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿದ್ದ ಹೆಣ್ಣುಮಕ್ಕಳು ವಿಡಿಯೋ ಕರೆಯ ಮೂಲಕ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.

ಮುಂಬೈನಿಂದ ಸೋನಿಪತ್ ವೃದ್ಧಾಶ್ರಮಕ್ಕೆ
ಮೃತಪಟ್ಟವರು ಮೂಲತಃ ಮುಂಬೈ ಮೂಲದ ಶಿವಚರಣ್ ರಾಮ್ ರತನ್ ಗುಪ್ತಾ. ಮಾಜಿ ಜವಳಿ ವ್ಯಾಪಾರಿಯಾಗಿದ್ದ ಇವರು, ಸೋನಿಪತ್‌ನ ಪಶ್ಚಿಮ ರಾಮ್ ನಗರದಲ್ಲಿ ಸಮಾಜ ಕಲ್ಯಾಣ ಶಿಕ್ಷಾ ಸಮಿತಿ ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ವಾಸಿಸುತ್ತಿದ್ದರು. ತಮ್ಮ ಪತ್ನಿ ಮೀನಾ ಅವರೊಂದಿಗೆ ವೃದ್ದಾಶ್ರಮಕ್ಕೆ ಅಲ್ಲಿಗೆ ತೆರಳಿದ್ದ ಗುಪ್ತಾ, ಪತ್ನಿಯ ನಿಧನದ ನಂತರವೂ ಅಲ್ಲಿಯೇ ಉಳಿದಿದ್ದರು.

ಅನಾರೋಗ್ಯದಿಂದ ನಿಧನ, ವಿಡಿಯೋ ಕರೆಯಲ್ಲಿ ಮಕ್ಕಳು
ಗುಪ್ತಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ 3:30 ರ ಸುಮಾರಿಗೆ ಕೊನೆಯುಸಿರೆಳೆದರು. ಅವರ ಮರಣದ ನಂತರ, ವೃದ್ಧಾಶ್ರಮದ ಆಡಳಿತ ಮಂಡಳಿ ಅವರ ಮೂವರು ಹೆಣ್ಣುಮಕ್ಕಳನ್ನು ಸಂಪರ್ಕಿಸಿತು. ಆದರೆ, ಪುತ್ರಿಯರಿಗೆ ಅಂತ್ಯಕ್ರಿಯೆಗಾಗಿ ಹರಿಯಾಣದ ಸೋನಿಪತ್‌ಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಡಿಯೋ ಕರೆಯ ಮೂಲಕವೇ ಅವರು ಅಂತಿಮ ವಿಧಿಗಳಲ್ಲಿ ಭಾಗವಹಿಸಿದರು. ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತು ಸ್ಥಳೀಯ ಸಮುದಾಯದ ಸದಸ್ಯರ ಸಹಾಯದಿಂದ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

“ಬರುವುದಿಲ್ಲ” ಎಂದ ಮಕ್ಕಳು
ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಅವರ ಪ್ರಕಾರ, ಗುಪ್ತಾ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಆಗಾಗ್ಗೆ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಆದರೆ ಅವರು ಅನಾರೋಗ್ಯಕ್ಕೆ ಒಳಗಾದ ನಂತರ, ಅವರ ಫೋನ್ ಕರೆಗಳು ವಿರಳವಾಗಿದ್ದವು.

ತಂದೆಯ ಸಾವಿಗೆ ಸುಮಾರು 20 ದಿನಗಳ ಮೊದಲು ಅವರ ತಂದೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಮತ್ತು ಅವರ ಸಾವು ಬದುಕಿನ ಹೋರಾಟದ ಅಂತಿಮ ದಿನಗಳು ಸನ್ನಿಹಿತವಾಗುತ್ತಿರುವ ಬಗ್ಗೆ ಹೆಣ್ಣುಮಕ್ಕಳಿಗೆ ತಿಳಿಸಲಾಗಿತ್ತು. “ಶಿವಚರಣ್ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದರು. ಅವರು ಅನಾರೋಗ್ಯಕ್ಕೆ ಒಳಗಾದ ನಂತರ, ಅವರ ಕರೆಗಳು ನಿಂತು ಹೋದವು. ನಾವು ಅವರ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿದ್ದೇವೆ, ಆದರೆ ಅವರು ಬರಲಿಲ್ಲ” ಎಂದು ಕುಮಾರ್ ಹೇಳಿಕೊಂಡಿದ್ದಾರೆ.

ಗುಪ್ತಾ ನಿಧನರಾದ ನಂತರ, ಆಡಳಿತ ಮಂಡಳಿಯು ಮತ್ತೆ ಹೆಣ್ಣುಮಕ್ಕಳನ್ನು ಸಂಪರ್ಕಿಸಿ, ಸೋನಿಪತ್‌ಗೆ ಬಂದರೆ ವ್ಯವಸ್ಥೆ ಮಾಡಬಹುದು ಎಂದು ಹೇಳಿತು. ಆದರೆ, ಪ್ರಯಾಣಿಸಲು ಸಮಯವಿಲ್ಲ ಎಂದು ಅವರು ಹೇಳಿದರು ಎಂದು ಕುಮಾರ್ ತಿಳಿಸಿದರು.

ನಂತರ ಹೆಣ್ಣುಮಕ್ಕಳು ವಿಡಿಯೋ ಕರೆಯ ಮೂಲಕ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು ಮತ್ತು ತಮ್ಮ ತಂದೆಯ ಅಂತಿಮ ವಿಧಿಗಳನ್ನು ದೂರದಿಂದಲೇ ವೀಕ್ಷಿಸಿದರು.

₹5,100 ಕಳುಹಿಸಿದ ಮಗಳು
ನೇಪಾಳದಲ್ಲಿ ವಾಸಿಸುವ ಮತ್ತು ಶಿಕ್ಷಕಿಯಾಗಿ ಕೆಲಸ ಮಾಡುವ ಅವರ ಮಗಳು ಅನಿತಾ, ಆನ್‌ಲೈನ್‌ನಲ್ಲಿ ₹5,100 ರೂ.ಗಳನ್ನು ಕಳುಹಿಸಿದ್ದು, ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಸರಿಯಾಗಿ ನಡೆಸುವಂತೆ ವಿನಂತಿಸಿದ್ದರು.

ಚಿತಾಭಸ್ಮ ವಿಸರ್ಜನೆಗೂ ಮನವಿ
ಅಂತ್ಯಕ್ರಿಯೆಯ ನಂತರ, ಹೆಣ್ಣುಮಕ್ಕಳು ವೃದ್ಧಾಶ್ರಮಕ್ಕೆ ಅಂತ್ಯಕ್ರಿಯೆಯ ಪ್ರಕ್ರಿಯೆಯ ವಿಡಿಯೋಗಳನ್ನು ಕಳುಹಿಸಲು ಕೋರಿಕೊಂಡರು. ಅವರಲ್ಲಿ ಒಬ್ಬರು “ಇದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ( ಶವ ಸಂಸ್ಕಾರ ಕ್ರಿಯೆಗಳಿಗೆ ) ನಾವು ಊಟ ಮಾಡಬೇಕು ಮತ್ತು ಸ್ನಾನ ಮಾಡಬೇಕು” ಎಂದು ಕರೆಯ ಮೂಲಕ ಹೇಳುವುದು ಕೇಳಿಸಿತು ಎಂದು ವರದಿಯಾಗಿದೆ.

ಕುಟುಂಬವು ಆರಂಭದಲ್ಲಿ ಗುಪ್ತಾ ಅವರ ಚಿತಾಭಸ್ಮವನ್ನು ಇಡಬೇಕೆಂದು ಕೇಳಿತ್ತು. ನಂತರ ಅವರು ಸೋನಿಪತ್‌ಗೆ ಬರಲು ನಮಗೆ ಸಮಯವಿಲ್ಲ ಎಂದು ತಿಳಿಸಿ, ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ನೀವೇ ವಿಸರ್ಜಿಸಿ ಬಿಡಿ ಎಂಬಂತೆ ಆಡಳಿತ ಮಂಡಳಿಗೆ ವಿನಂತಿಸಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಅನೇಕರು ಮಕ್ಕಳ ನಡತೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಹುತೇಕ ನೆಟ್ಟಿಗರು ಹೆತ್ತು ,ಹೊತ್ತು, ಸಾಕಿ ಸಲಹಿ ಉದ್ಯೋಗ ಕರುಣಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನ ನೀಡಿದ ತಂದೆ ತಾಯಿಗಳನ್ನು, ಅವರ ಅಂತಿಮ ದಿನಗಳ ಯೋಗಕ್ಷೇಮ ನೋಡಿಕೊಳ್ಳುವುದು ಹಾಗಿರಲಿ, ಅಂತಿಮ ಸಂಸ್ಕಾರಕ್ಕಾದರೂ ಬಂದು ತಮ್ಮ ಋಣ ತೀರಿಸಿಕೊಳ್ಳಬೇಕಿತ್ತು ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

Continue Reading

Bantawala

ದಕ್ಷಿಣ ಕನ್ನಡ: ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಸಂಗಬೆಟ್ಟುವಿನಲ್ಲಿ ಪತ್ತೆ

Published

on

ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಸಮೀಪ ಶನಿವಾರ ತಡರಾತ್ರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ 48 ವರ್ಷದ ವ್ಯಕ್ತಿಯೊಬ್ಬರ ಮೃತದೇಹವು ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರಾಯಿ ನಿವಾಸಿ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಶನಿವಾರ ತಡರಾತ್ರಿ ಜೀವನ್ ಪಿಂಟೊ ಅವರು ತೋಡಿನ ಆಚೆಗಿರುವ ತಮ್ಮ ಮಾವನ ಮನೆಗೆ ತೆರಳಲು ಕಾಲುಸಂಕದ ಮೇಲೆ ನದಿ ದಾಟುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಘಟನಾ ಸ್ಥಳದಲ್ಲಿ ಅವರ ಚಪ್ಪಲಿ ಹಾಗೂ ಟಾರ್ಚ್‌ಲೈಟ್ ಪತ್ತೆಯಾಗಿದ್ದರೂ, ಅವರು ನೀರಿಗೆ ಬಿದ್ದಿದ್ದಾರೋ ಅಥವಾ ಬೇರೆಡೆ ತೆರಳಿದ್ದಾರೋ ಎಂಬುದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ.

ಸತತ ಶೋಧ ಕಾರ್ಯಾಚರಣೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ನದಿಯಲ್ಲಿ ಹರಿಯುತ್ತಿರುವ ಪ್ರಬಲ ನೀರಿನ ಸೆಳೆತದ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗುತಜ್ಞರು ಮತ್ತು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸತತ ಕಾರ್ಯಾಚರಣೆಯ ಫಲವಾಗಿ ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮೃತದೇಹವನ್ನು ನದಿಯಿಂದ ಹೊರತೆಗೆದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಹಾಗೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

Continue Reading

accident

ಉಚ್ಚಿಲ: ಜಿಒಎಸ್ ಆಫ್ ಮಾಡದೆ ಟ್ರಾನ್ಸ್‌ಫಾರ್ಮರ್ ಏರಿದ ಮೆಸ್ಕಾಂ ಲೈನ್‌ಮ್ಯಾನ್ ವಿದ್ಯುತ್ ಆಘಾತದಿಂದ ಸಾವು

Published

on

ಉಳ್ಳಾಲ: ಜಿಒಎಸ್ (ಗ್ರೂಪ್ ಆಪರೇಟೆಡ್ ಸ್ವಿಚ್) ಆಫ್ ಮಾಡದೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿಸಿ) ಏರಿದ ಮೆಸ್ಕಾಂ ಲೈನ್‌ಮ್ಯಾನ್‌ ಒಬ್ಬರು ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿರುವ ದುರಂತ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಟಣ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಅಂಬಿಕಾರೋಡ್ ಪಿಲಾರು ನಿವಾಸಿ ಶೇಖ್ ಝುಮೀರ್ (49) ಮೃತಪಟ್ಟ ದುರದೃಷ್ಟಕರ ವ್ಯಕ್ತಿ.

ಘಟನೆಯ ವಿವರ:

ಉಚ್ಚಿಲ ನಯಾಪಟ್ಟಣದ ಟ್ರಾನ್ಸ್‌ಫಾರ್ಮರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಗ್ಗೆ ಮೆಸ್ಕಾಂಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಶೇಖ್ ಝುಮೀರ್ ಹಾಗೂ ಅವರ ಸಹೋದ್ಯೋಗಿ ಸಂಗಪ್ಪ ಎಂಬುವರು ಇಂದು ಬೆಳಿಗ್ಗೆ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.

ಜಿಒಎಸ್ (GOS) ಆಫ್ ಆಗಿದೆ ಎಂದು ತಪ್ಪಾಗಿ ಗ್ರಹಿಸಿದ ಝುಮೀರ್, ಟ್ರಾನ್ಸ್‌ಫಾರ್ಮರ್ ಏರಿದ್ದಾರೆ. ಈ ವೇಳೆ ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ತೀವ್ರ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಮೃತ ಝುಮೀರ್ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Continue Reading

Trending

Copyright © 2025 Deevatige

error: Content is protected !!