Connect with us

Bantawala

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಹನೀಫ್ ಬಗ್ಗುಮೂಲೆ ಅರ್ಜಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಸಾರಥ್ಯ ವಹಿಸಲು ಪಕ್ಷದ ಹಿರಿಯ, ನಿಷ್ಠಾವಂತ ಹಾಗೂ ನೇರ ನಡೆ-ನುಡಿಯ ಪ್ರಭಾವಿ ನಾಯಕ ಹನೀಫ್ ಬಗ್ಗುಮೂಲೆ ಅವರು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಪಕ್ಷ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣ

ಬಂಟ್ವಾಳ ತಾಲೂಕು ಕುಳ ಗ್ರಾಮದ ಬಗ್ಗುಮೂಲೆ ನಿವಾಸಿಯಾಗಿರುವ ಹನೀಫ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಿರಂತರವಾಗಿ ಶ್ರಮಿಸಿದವರು. ಬಾಲ್ಯದಿಂದಲೇ ಸಾಮಾಜಿಕ ಕಳಕಳಿ ಬೆಳೆಸಿಕೊಂಡಿದ್ದ ಇವರು, ಪಕ್ಷದ ಧ್ವಜದಡಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್‌ಗಳು, ರಕ್ತದಾನ ಶಿಬಿರಗಳು, ಕ್ರೀಡಾ ಕೂಟಗಳು ಹಾಗೂ ಧಾರ್ಮಿಕ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜನಮಾನಸದಲ್ಲಿ ಆಪತ್ಬಾಂಧವನಾಗಿ ನೆಲೆಸಿದ್ದಾರೆ.

ಸಂಸ್ಥಾಪನಾ ಹೆಜ್ಜೆಗಳು ಮತ್ತು ವಹಿಸಿದ ಜವಾಬ್ದಾರಿಗಳು

ಇವರ ನಿಸ್ಪಕ್ಷಪಾತ ಸೇವೆ ಮತ್ತು ಸಂಘಟನಾ ಚತುರತೆಯನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ, ಇವರಿಗೆ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ: ಅಧ್ಯಕ್ಷರಾಗಿ 3 ವರ್ಷಗಳ ಕಾಲ ಯಶಸ್ವಿ ಸೇವೆ.

ಜಿಲ್ಲಾ ಕಾಂಗ್ರೆಸ್ ಸೇವಾದಳ: ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ತಳಮಟ್ಟದ ಸಂಘಟನೆ.

ಕೆಪಿಸಿಸಿ (KPCC): ರಾಜ್ಯ ಮಟ್ಟದ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ಶ್ರಮಿಕರ ಪರ ಧ್ವನಿ.

ರಾಷ್ಟ್ರೀಯ ರಾಜೀವ ಗಾಂಧಿ ಜ್ಯೋತಿಯಾತ್ರೆ ಸಮಿತಿ: ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ಹಾಗೂ ಪಕ್ಷದ ಸಿದ್ಧಾಂತಗಳ ಪ್ರಚಾರ.

ಪ್ರಶಸ್ತಿ ಹಾಗೂ ಪುರಸ್ಕಾರ

ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಜನಸೇವೆ ಸಲ್ಲಿಸಿರುವ ಹನೀಫ್ ಬಗ್ಗುಮೂಲೆ ಅವರ ನಿರಂತರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ “ಗಡಿನಾಡ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ತಮ್ಮ ಅನುಭವ ಮತ್ತು ಬದ್ಧತೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದೊಂದಿಗೆ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ದಕ್ಷಿಣ ಕನ್ನಡ: ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಸಂಗಬೆಟ್ಟುವಿನಲ್ಲಿ ಪತ್ತೆ

Published

on

ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಸಮೀಪ ಶನಿವಾರ ತಡರಾತ್ರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ 48 ವರ್ಷದ ವ್ಯಕ್ತಿಯೊಬ್ಬರ ಮೃತದೇಹವು ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರಾಯಿ ನಿವಾಸಿ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಶನಿವಾರ ತಡರಾತ್ರಿ ಜೀವನ್ ಪಿಂಟೊ ಅವರು ತೋಡಿನ ಆಚೆಗಿರುವ ತಮ್ಮ ಮಾವನ ಮನೆಗೆ ತೆರಳಲು ಕಾಲುಸಂಕದ ಮೇಲೆ ನದಿ ದಾಟುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಘಟನಾ ಸ್ಥಳದಲ್ಲಿ ಅವರ ಚಪ್ಪಲಿ ಹಾಗೂ ಟಾರ್ಚ್‌ಲೈಟ್ ಪತ್ತೆಯಾಗಿದ್ದರೂ, ಅವರು ನೀರಿಗೆ ಬಿದ್ದಿದ್ದಾರೋ ಅಥವಾ ಬೇರೆಡೆ ತೆರಳಿದ್ದಾರೋ ಎಂಬುದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ.

ಸತತ ಶೋಧ ಕಾರ್ಯಾಚರಣೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ನದಿಯಲ್ಲಿ ಹರಿಯುತ್ತಿರುವ ಪ್ರಬಲ ನೀರಿನ ಸೆಳೆತದ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗುತಜ್ಞರು ಮತ್ತು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸತತ ಕಾರ್ಯಾಚರಣೆಯ ಫಲವಾಗಿ ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮೃತದೇಹವನ್ನು ನದಿಯಿಂದ ಹೊರತೆಗೆದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಹಾಗೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

Continue Reading

Bantawala

ಬಸ್‌ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್‌ ದಾಖಲು!

Published

on

ಬಂಟ್ವಾಳ: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಜುಲೈ 30ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 2.10ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ ಏರಿದ್ದ ಸುಮಾರು 60–70 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಚಾಲಕನ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದ. ಪ್ರಯಾಣದ ವೇಳೆ ಎದುರಿನ ಸೀಟಿನಲ್ಲಿದ್ದ ಮಹಿಳೆಯರಿಗೆ ಕಾಣುವಂತೆ ಅಸಭ್ಯವಾಗಿ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ.

ಮಹಿಳೆಯ ಧೈರ್ಯ, ವೈರಲ್ ವೀಡಿಯೋ:

ವೃದ್ಧನ ನೀಚ ಕೃತ್ಯವನ್ನು ಕಂಡು ಆಕ್ರೋಶಗೊಂಡ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಆತನ ವಿಕೃತಿಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನು ಗಮನಿಸಿದ ವೃದ್ಧ, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಗಾಬರಿಯಿಂದ ಬಸ್‌ನಿಂದ ಇಳಿದು ಪರಾರಿಯಾಗಿದ್ದ. ಬಳಿಕ ಈ ವಿಷಯ ಬಸ್ ಚಾಲಕನ ಗಮನಕ್ಕೂ ಬಂದಿತ್ತು. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಆತ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ ಹಾಗೂ ವೃತ್ತಿಯಲ್ಲಿ ಅರ್ಚಕ ಎಂದು ತಿಳಿದುಬಂದಿದೆ.

ಬಂಟ್ವಾಳ ಠಾಣೆಯಲ್ಲಿ ದೂರು:

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Bantawala

ಕರಾವಳಿಯಲ್ಲಿ ಭೋರ್ಗರೆಯುತ್ತಿರುವ ಮುಂಗಾರು: ನದಿಗಳ ಆರ್ಭಟಕ್ಕೆ ಕಂಗೆಟ್ಟ ದಕ್ಷಿಣ ಕನ್ನಡ, ರೈತರಲ್ಲಿ ಹರ್ಷ – ಜನರಲ್ಲಿ ನೆರೆ ಆತಂಕ

Published

on

ದಕ್ಷಿಣ ಕನ್ನಡ: ಕರಾವಳಿ ಹಾಗೂ ಪಶ್ಚಿಮ ಘಟ್ಟ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಘಟ್ಟ ಪ್ರದೇಶದಲ್ಲಿ ಮಳೆ ಧಾರೆ ಎರೆಯುತ್ತಿರುವುದರಿಂದ ನದಿ, ಕಳೆಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಒಂದೆಡೆ ದೀರ್ಘಾವಧಿಯ ನಂತರ ನದಿಗಳು ತುಂಬಿ ಹರಿಯುತ್ತಿರುವುದು ಕೃಷಿಕರಲ್ಲಿ ಹರ್ಷ ತಂದಿದ್ದರೆ, ಇನ್ನೊಂದೆಡೆ ಪ್ರವಾಹ, ಸೇತುವೆ ಕೊಚ್ಚಿಹೋಗಿರುವುದು ಹಾಗೂ ಮನೆ ಹಾನಿಯಂತಹ ಸಾಲು ಸಾಲು ದುರಂತಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿವೆ.

1. ಸುಬ್ರಹ್ಮಣ್ಯ: ಕುಮಾರಧಾರಾ ಆರ್ಭಟ, ಮುಳುಗಿದ ಸ್ನಾನಘಟ್ಟ

ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಎಡೆಬಿಡದ ಮಳೆಯಿಂದಾಗಿ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದೆ.

ಸ್ನಾನಘಟ್ಟ ಮುಳುಗಡೆ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಪರ್ಯಾಯ ವ್ಯವಸ್ಥೆ: ಭಕ್ತರು ನದಿಗೆ ಇಳಿಯದಂತೆ ಪೊಲೀಸರು ಹಾಗೂ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕಾವಲು ಕಾಯುತ್ತಿದ್ದು, ಪ್ರವಾಸಿಗರ ಭದ್ರತೆಗಾಗಿ ದೊಡ್ಡ ಡ್ರಮ್‌ಗಳಲ್ಲಿ ನೀರು ತುಂಬಿಸಿ ಪರ್ಯಾಯ ಸ್ನಾನದ ವ್ಯವಸ್ಥೆ ಕಲ್ಪಿಸಲಾಗಿದೆ.

2. ಜೀವ ಕಳೆ ಪಡೆದ ನೇತ್ರಾವತಿ

ಬಂಟ್ವಾಳ ಹಾಗೂ ಧರ್ಮಸ್ಥಳ ಭಾಗದಲ್ಲಿ ನೇತ್ರಾವತಿ ನದಿ ಈ ವರ್ಷದಲ್ಲಿಯೇ ಮೊದಲ ಬಾರಿಗೆ ಭಾರೀ ಮಟ್ಟದಲ್ಲಿ ಏರಿಕೆ ಕಂಡಿದೆ.

ಬಂಟ್ವಾಳದ ಕಂಚಿಕಾರಪೇಟೆಯಲ್ಲಿ ನದಿಯ ಮಟ್ಟ 5.6 ರಿಂದ 5.88 ಮೀಟರ್‌ಗೆ ಏರಿಕೆಯಾಗಿದ್ದು (ಅಪಾಯದ ಮಟ್ಟ: 8.5 ರಿಂದ 9.0 ಮೀ), ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬಂಟ್ವಾಳದ ಎಎಂಆರ್ (AMR) ಡ್ಯಾಂ ಗರಿಷ್ಠ ಮಟ್ಟ (18.90 ಮೀ) ತಲುಪಿದ್ದು, ತುಂಬೆ ಡ್ಯಾಂನ 8 ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ.

ಉಪ್ಪಿನಂಗಡಿ ಸಂಗಮಕ್ಕೆ ಇನ್ನೆರಡು ದಿನ ಬೇಕು

ಪ್ರಸಿದ್ಧ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಿದ್ದರೂ, ಕುಮಾರಧಾರಾದಲ್ಲಿ ನೀರು ಕಡಿಮೆಯಿರುವುದರಿಂದ ‘ಸಂಗಮ’ಕ್ಕೆ ಇನ್ನು ಎರಡು ದಿನಗಳ ನಿರಂತರ ಮಳೆಯ ಅಗತ್ಯವಿದೆ. ಈಗ ಸುರಿಯುತ್ತಿರುವಂತೆಯೇ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದರೆ ಇನ್ನೆರಡು ದಿನಗಳಲ್ಲಿ ಸಂಗಮದ ಸೂಚನೆ ಸಿಗಬಹುದು.

3. ಬೆಳ್ತಂಗಡಿಯಲ್ಲಿ ನೆರೆ ಅಭಯ: ಮುಳುಗಿದ ದೇವಾಲಯಗಳು, ಕಡಿತಗೊಂಡ ಸಂಪರ್ಕ

ಬೆಳ್ತಂಗಡಿ ತಾಲೂಕಿನಲ್ಲಿ ಮುಂಗಾರಿನ ಆರ್ಭಟ ತೀವ್ರವಾಗಿದ್ದು, ಕಪಿಲ, ಫಲ್ಗುಣಿ, ಮೃತ್ಯುಂಜಯ ಹಾಗೂ ಸೋಮವತಿ ನದಿಗಳು ಉಕ್ಕಿ ಹರಿಯುತ್ತಿವೆ.

ದೇವಸ್ಥಾನಗಳು ಜಲಾವೃತ: ಕಪಿಲ ನದಿ ಉಕ್ಕಿ ಹರಿದ ಪರಿಣಾಮ ಪ್ರಸಿದ್ಧ ಶ್ರೀ ಶಿಶಿಲೇಶ್ವರ ದೇವಸ್ಥಾನ ಹಾಗೂ ಅಮ್ಮುಂಜೆ ದೇವಸ್ಥಾನಗಳು ಜಲಾವೃತಗೊಂಡಿವೆ.

ಸೇತುವೆ ಕೊಚ್ಚಿ ಸಾವು-ನೋವಿನ ಭೀತಿ: ಉಜಿರೆ-ಕನ್ಯಾಡಿ ವ್ಯಾಪ್ತಿಯ ಅಂಬಡಬೆಟ್ಟದಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಸಾಕಷ್ಟು ಕುಟುಂಬಗಳ ಸಂಪರ್ಕ ಕಡಿತಗೊಂಡಿದೆ. ಮಾಲಾಡಿ ಸೊಣಂದೂರಿನಲ್ಲಿ ಕಿರು ಸೇತುವೆ ಕುಸಿದಿದೆ.

ಅಣೆಕಟ್ಟು ಹಲಗೆ ತೆರವು ಮಾಡದೆ ಅನಾಹುತ: ಪಜಿರಡ್ಕ ಕಿಂಡಿ ಅಣೆಕಟ್ಟಿನಲ್ಲಿ ಹಲಗೆಗಳನ್ನು ಸರಿಯಾದ ಸಮಯಕ್ಕೆ ತೆರವುಗೊಳಿಸದ ಕಾರಣ 5 ಕಿ.ಮೀ ವ್ಯಾಪ್ತಿಯಲ್ಲಿ ಕಾಯರ್ತೋಡಿ, ಕುಡೆಂಚಿ, ಆನಂಗಳ್ಳಿ ಸೇರಿದಂತೆ ಹಲವು ತೋಟಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.

ವೇಣೂರಿನಲ್ಲಿ ಹಲವು ಬಸ್‌ಗಳು ನೆರೆ ನೀರಿನಲ್ಲಿ ಸಿಲುಕಿಕೊಂಡರೆ, ಗಾಳಿ-ಮಳೆಗೆ ನೂರಾರು ಅಡಕೆ, ರಬ್ಬರ್ ಮರಗಳು ಧರಾಶಾಹಿಯಾಗಿವೆ.

4. ಸಾಲು ಸಾಲು ಮನೆ ಕುಸಿತ, ವಿದ್ಯುತ್ ವ್ಯತ್ಯಯ

ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರಿನ ಜಯ ಸಪಲ್ಯ, ರಾಯಿ ಗ್ರಾಮದ ಸೀತಾವತಿ ವಿಶ್ವನಾಥ ಪೂಜಾರಿ ಹಾಗೂ ನರಿಕೊಂಬುವಿನ ಪ್ರಶಾಂತ್ ಎಂಬುವವರ ಮನೆಗಳ ಮೇಲೆ ಚಾವಣಿ ಮತ್ತು ತೆಂಗಿನ ಮರಗಳು ಬಿದ್ದು ಮನೆಗಳಿಗೆ ಹಾನಿಯಾಗಿದೆ. ಸುदैವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

🚨 ಭಾರೀ ಮಳೆ ಮುನ್ಸೂಚನೆ: ತುರ್ತು ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಕಟ್ಟುನಿಟ್ಟಿನ ಸೂಚನೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ, ಎಲ್ಲ ತಾಲೂಕು ಆಡಳಿತಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಸೂಚಿಸಿದ್ದಾರೆ. ಹವಾಮಾನ ಇಲಾಖೆಯು ದಕ್ಷಿಣ ಕನ್ನಡ,ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ರೆಡ್‌ ಆಲರ್ಟ್‌ ಘೋಷಿಸಿದೆ

ಶನಿವಾರ (ಆಗಸ್ಟ್ 1) ಅಧಿಕಾರಿಗಳೊಂದಿಗೆ ಆನ್‌ಲೈನ್ ಮೂಲಕ ಪರಿಶೀಲನಾ ಸಭೆ ನಡೆಸಿದ ಅವರು, ಮಳೆ ಅನಾಹುತಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಲು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು.

🚨 ಜಿಲ್ಲಾಧಿಕಾರಿಗಳು ನೀಡಿದ ಪ್ರಮುಖ ಅಭಯ ಹಾಗೂ ಕಟ್ಟುನಿಟ್ಟಿನ ಸೂಚನೆಗಳು:

24 ಗಂಟೆ ಕಂಟ್ರೋಲ್ ರೂಂ ಸಕ್ರಿಯ: ಮಳೆ ಅನಾಹುತಗಳನ್ನು ನಿವರ್ಹಿಸಲು ಜಿಲ್ಲೆಯ ಎಲ್ಲ ತಾಲೂಕು ಆಡಳಿತಗಳು ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕು. ಕಂಟ್ರೋಲ್ ರೂಂಗಳು ದಿನಪೂರ್ತಿ ಕಾರ್ಯನಿರ್ವಹಿಸಬೇಕು.

ಗುಡ್ಡ ಕುಸಿತ ಸ್ಥಳಗಳಲ್ಲಿ ನಿಗಾ – ಜನರ ಸ್ಥಳಾಂತರ: ಜಿಲ್ಲೆಯಲ್ಲಿ ಗುಡ್ಡ ಕುಸಿತ ಮತ್ತು ಮಣ್ಣು ಜರಿತ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಗುರುತಿಸಿರುವ ಸಂಭಾವ್ಯ ಕುಸಿತ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಬೇಕು. ಅಪಾಯದ ಸಾಧ್ಯತೆ ಇರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಮುಂಜಾಗ್ರತಾ ಕ್ರಮವಾಗಿ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು.

ತಾತ್ಕಾಲಿಕ ತಡೆಗೋಡೆ ವ್ಯವಸ್ಥೆ: ಮಣ್ಣು ಜರಿಯುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಮರಳು ಚೀಲಗಳನ್ನು ಇಟ್ಟು ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ಖಾಸಗಿ ಜಮೀನುಗಳಲ್ಲೂ ಇಂತಹ ತುರ್ತು ಕ್ರಮಗಳನ್ನು ಕೈಗೊಳ್ಳಬಹುದು.

24 ಗಂಟೆಯೊಳಗೆ ಪರಿಹಾರ ವಿತರಣೆ: ಪ್ರಾಕೃತಿಕ ವಿಕೋಪದಿಂದ ಸಾವುನಪ್ಪಿದವರ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ಚೆಕ್ ನೀಡಬೇಕು. ಮಳೆ ಅನಾಹುತದಿಂದ ಸ್ಥಳಾಂತರಗೊಂಡ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗಮನಹರಿಸಬೇಕು.

ಹೆದ್ದಾರಿ ತಡೆ ತೆರವಿಗೆ ಜೆಸಿಬಿ/ಯಂತ್ರೋಪಕರಣ ಸಿದ್ಧ: ಚಾರ್ಮಾಡಿ, ಸಂಪಾಜೆ, ಶಿರಾಡಿ ಸೇರಿದಂತೆ ಜಿಲ್ಲೆಯ ಪ್ರಮುಖ ಹೆದ್ದಾರಿಗಳಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಪ್ರಕರಣಗಳು ಸಂಭವಿಸಿದಲ್ಲಿ ತಕ್ಷಣವೇ ರಸ್ತೆ ತೆರವುಗೊಳಿಸಲು ಅಗತ್ಯ ಯಂತ್ರೋಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. (ಇದುವರೆಗೆ ಜಿಲ್ಲೆಯಲ್ಲಿ ಹೆದ್ದಾರಿ ತಡೆಯಾದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಡಿಸಿ ತಿಳಿಸಿದ್ದಾರೆ).

ರಕ್ಷಣಾ ಪಡೆಗಳು ಹೈ ಅಲರ್ಟ್: ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ (SDRF) ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು.

ರಕ್ಷಣಾ ಪಡೆ ರಂಗಕ್ಕೆ: ಮುಳುಗು ತಜ್ಞರು, NDRF ಹಾಗೂ SDRF ನ 65 ಸಿಬ್ಬಂದಿಗಳನ್ನು 28 ಬೋಟ್‌ಗಳೊಂದಿಗೆ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಎಚ್ಚರಿಕೆ ಸಂದೇಶ: ನದಿ ತೀರದ ನಿವಾಸಿಗಳು, ಮೀನುಗಾರರು ಮತ್ತು ಪ್ರವಾಸಿಗರು ಸಮುದ್ರ ಹಾಗೂ ಜಲಾಶಯದ ಕಡೆಗೆ ತೆರಳದಂತೆ ಕಟ್ಟುನಿಟ್ಟಿನ ಆಡಳಿತಾತ್ಮಕ ಸೂಚನೆ ನೀಡಲಾಗಿದೆ.

ಮುನ್ಸೂಚನೆ: ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಸಭೆಯಲ್ಲಿ ಉಪಸ್ಥಿತಿ: ಈ ಆನ್‌ಲೈನ್ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ , ಅಪರ ಜಿಲ್ಲಾಧಿಕಾರಿ ರಾಜು ಕೆ. ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು

Continue Reading

Trending

Copyright © 2025 Deevatige

error: Content is protected !!