Connect with us

manglore police

ಮಂಗಳೂರು: ಜಗಳದ ಬೆನ್ನಲ್ಲೇ ನಿದ್ರಿಸುತ್ತಿದ್ದ ಸ್ವಂತ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ ಮಾಡಿದ ಅಣ್ಣ!

Published

on

ಮಂಗಳೂರು: ಸಣ್ಣ ವಿಷಯಕ್ಕೆ ಆರಂಭವಾದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು, ನಿದ್ರೆಯಲ್ಲಿದ್ದ ಸ್ವಂತ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಅಣ್ಣನೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್‌ನ ಚೊಕ್ಕಬೆಟ್ಟು ಮಠದ ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತೆಗ್ಯಾಳು ಗ್ರಾಮದ ಮೂಲದ ಮಲ್ಲಿಕಾರ್ಜುನ (20) ಕೊಲೆಯಾದ ದುರ್ದೈವಿ. ಕೊಲೆ ಎಸಗಿದ ಆತನ ಅಣ್ಣ ಸೋಮನಾಥ (21) ಎಂಬುವವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಕೊಲೆಯಾದ ಮಲ್ಲಿಕಾರ್ಜುನ ಹಾಗೂ ಆರೋಪಿ ಸೋಮನಾಥ ಚೊಕ್ಕಬೆಟ್ಟು ಮಠದ ಬಳಿ ರೇಖಾ ಎಂಬವರ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು. ಇತ್ತೀಚೆಗಷ್ಟೇ ತಾಯಿ ಸ್ವಗ್ರಾಮಕ್ಕೆ ತೆರಳಿದ್ದರಿಂದ ಮನೆಯಲ್ಲಿ ಸಹೋದರರಿಬ್ಬರೇ ಇದ್ದರು.

ಭಾನುವಾರ ರಾತ್ರಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ತೀವ್ರ ಗಲಾಟೆ ನಡೆದಿದೆ. ಜಗಳದ ಬಳಿಕ ಮಲ್ಲಿಕಾರ್ಜುನ ಕೊಠಡಿಯಲ್ಲಿ ಮಲಗಿದ್ದ. ಆಕ್ರೋಶ ತಣಿಯದ ಅಣ್ಣ ಸೋಮನಾಥ, ತಡರಾತ್ರಿ ತಮ್ಮ ಗಾಢ ನಿದ್ರೆಯಲ್ಲಿದ್ದಾಗ ಭಾರಿ ಗಾತ್ರದ ಕಲ್ಲನ್ನು ಆತನ ತಲೆಗೆ ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮಲ್ಲಿಕಾರ್ಜುನ ಸ್ಥಳದಲ್ಲೇ ಅಸಹಾಯಕವಾಗಿ ಕೊನೆಯುಸಿರೆಳೆದಿದ್ದಾನೆ.

ತಮ್ಮ ಏಳುತ್ತಿಲ್ಲವೆಂದು ನಾಟಕ ಆಡಿದ ಆರೋಪಿ!

ಕೃತ್ಯ ಎಸಗಿದ ಬಳಿಕ ಆರೋಪಿ ಸೋಮನಾಥ ಅತ್ಯಂತ ಚಾಲಾಕಿತನದಿಂದ ನಡೆದುಕೊಂಡಿದ್ದಾನೆ. ಸೋಮವಾರ ಬೆಳಿಗ್ಗೆ ಎದ್ದು ನೆರೆಹೊರೆಯವರ ಬಳಿ ಹೋಗಿ, “ನನ್ನ ತಮ್ಮ ನಿದ್ರೆಯಿಂದ ಏಳುತ್ತಲೇ ಇಲ್ಲ” ಎಂದು ನಾಟಕವಾಡಿದ್ದಾನೆ. ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ವಿಚಾರಣೆ ವೇಳೆ ಕೃತ್ಯ ಒಪ್ಪಿಕೊಂಡ ಅಣ್ಣ

ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಸುರತ್ಕಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, “ರಾತ್ರಿ ಇಬ್ಬರ ನಡುವೆ ಜಗಳ ನಡೆದಿತ್ತು. ಕೋಪದ ಕೈಗೆ ಬುದ್ಧಿಕೊಟ್ಟು ತಾನೇ ತಮ್ಮನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:

ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎಂ., ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್ ಹಾಗೂ ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ಹಾಗೂ ವಿಧಿವಿಜ್ಞಾನ ತಜ್ಞರ (FSL) ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

AWARNESS

ಮಂಗಳೂರು: ಸಚಿವ ಸಂಪುಟ ಸಭೆ ಹಿನ್ನೆಲೆ – ನಗರದಲ್ಲಿ ಸಂಚಾರ ವ್ಯತ್ಯಯ; ಪ್ರಮುಖ ರಸ್ತೆಗಳಲ್ಲಿ ಬದಲಿ ಮಾರ್ಗ ವ್ಯವಸ್ಥೆ

Published

on

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆಯು ಸೆಪ್ಟೆಂಬರ್ 18, 2026 ರಂದು ಮಂಗಳೂರು ನಗರದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ (ಪ್ರಜಾಸೌಧ)ಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಚಿವರು ಮಂಗಳೂರಿಗೆ ಆಗಮಿಸುತ್ತಿದ್ದು, ಗಣ್ಯರ ಭದ್ರತೆ ಮತ್ತು ನಗರದ ಸುಗಮ ಸಂಚಾರದ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯು ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಹಾಗೂ ನಿಷೇಧವನ್ನು ಜಾರಿಗೊಳಿಸಿದೆ.

ಯಾವ ದಿನ ಯಾವ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ?

ಸೆಪ್ಟೆಂಬರ್ 17 (ಸಂಜೆ) ಮತ್ತು ಸೆಪ್ಟೆಂಬರ್ 19 (ಬೆಳಿಗ್ಗೆ): ಬಜಪೆ ವಿಮಾನ ನಿಲ್ದಾಣದಿಂದ ಕಾವೂರು, ಬೋಂದೆಲ್, ಮೇರಿಹಿಲ್, ಕೆ.ಪಿ.ಟಿ., ಕದ್ರಿ ಕಂಬಳ, ಬಂಟ್ಸ್ಹಾಸ್ಟೆಲ್, ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್, ಹಂಪನಕಟ್ಟೆ, ಕ್ಲಾಕ್ ಟವರ್ ಮೂಲಕ ಹ್ಯಾಮಿಲ್ಟನ್ ಜಂಕ್ಷನ್‌ವರೆಗೆ ಗಣ್ಯರ ಸಂಚಾರವಿರುವುದರಿಂದ ಈ ಮಾರ್ಗದಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸಬೇಕು.

ಸೆಪ್ಟೆಂಬರ್ 18 (ಬೆಳಿಗ್ಗೆ): ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಆರಂಭವಾಗಿ ಕ್ಲಾಕ್ ಟವರ್, ಹಂಪನಕಟ್ಟೆ, ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್, ಕೆ.ಪಿ.ಟಿ., ನಂತೂರು ವೃತ್ತ, ಪಂಪುವೆಲ್, ನಾಗುರಿ, ಬಜಾಲ್ ಕ್ರಾಸ್ (ಪ್ರಜಾಸೌಧ) ಮೂಲಕ ಪಡೀಲ್ ಜಂಕ್ಷನ್‌ವರೆಗೆ ಗಣ್ಯರ ಓಡಾಟವಿರುತ್ತದೆ.

ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳು:

ಬದ್ರಿಯಾ ಜಂಕ್ಷನ್ – ಹ್ಯಾಮಿಲ್ಟನ್ ಜಂಕ್ಷನ್: ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಬದ್ರಿಯಾ ಜಂಕ್ಷನ್ – ನಿಲೇಶ್ವರ ರಸ್ತೆ – ರೋಸಾರಿಯೋ ರಸ್ತೆ ಹಾಗೂ ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಬೇಕು.

ಪಂಪುವೆಲ್ – ಪಡೀಲ್: ಪಂಪುವೆಲ್‌ನಿಂದ ಪಡೀಲ್‌ಗೆ ತೆರಳುವವರು ನಂತೂರು ವೃತ್ತ – ಕೈಕಂಬ – ಮರೋಳಿ ಅಥವಾ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳ್ಯಾರ್ – ಮೆಲ್ಕಾರ್ ಮಾರ್ಗವನ್ನು ಬಳಸಬಹುದು.

ಬಜಾಲ್ ಕ್ರಾಸ್ ಮತ್ತು ಕಂಕನಾಡಿ: ಪ್ರಜಾಸೌಧದ ಬಳಿಯ ಬಜಾಲ್ ಕ್ರಾಸ್ ಮುಚ್ಚಿರುವ ಕಾರಣ ವಾಹನಗಳು ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಜಪ್ಪಿನಮೊಗರು ದ್ವಾರ – ಬಜಾಲ್ ಮಾರ್ಗವಾಗಿ ಸಂಚರಿಸಬೇಕು.

ತೊಕ್ಕೊಟ್ಟು ಕಡೆಯಿಂದ: ತೊಕ್ಕೊಟ್ಟಿನಿಂದ ಬರುವ ವಾಹನಗಳು ಮಹಾಕಾಳಿಪಡ್ಪು – ಮಂಗಳಾದೇವಿ ಮೂಲಕ ನಗರ ಪ್ರವೇಶಿಸಬೇಕು.

ವಿಶೇಷ ಸೂಚನೆಗಳು:

  • ಗಣ್ಯರ ಸಂಚಾರವಿರುವ ರಸ್ತೆಗಳ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶವಿಲ್ಲ.
  • ಆಂಬ್ಯುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ.
  • ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ನಿಗದಿತ ಪರ್ಯಾಯ ಮಾರ್ಗಗಳನ್ನು ಬಳಸಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
Continue Reading

cyber crime

ಮಂಗಳೂರು: ಇನ್‌ಸ್ಟಾಗ್ರಾಮ್ ಸ್ನೇಹ ಬಲೆಗೆ ಬಿದ್ದ 19ರ ಯುವಕನಿಗೆ ಮಾರ್ಫ್ ಫೋಟೋ ತೋರಿಸಿ 5.24 ಲಕ್ಷ ರೂ. ಸುಲಿಗೆ!

Published

on

ಮಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹ ಬೆಳೆಸಿ, ಯುವಕನ ಫೋಟೋವನ್ನು ಅಶ್ಲೀಲವಾಗಿ ಮಾರ್ಫ್ (Morph) ಮಾಡಿ ಬ್ಲ್ಯಾಕ್‌ಮೇಲ್ ಮಾಡಿ ಒಟ್ಟು 5.24 ಲಕ್ಷ ರೂ. ಗೂ ಅಧಿಕ ಹಣವನ್ನು ಸೈಬರ್ ವಂಚಕರು ಸುಲಿಗೆ ಮಾಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರು ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

19 ವರ್ಷದ ಪಿಯು ವಿದ್ಯಾರ್ಥಿಯೊಬ್ಬರು ಇನ್‌ಸ್ಟಾಗ್ರಾಮ್ ಬಳಸುತ್ತಿದ್ದಾಗ ‘ಜಮ್‌ಶೇದ್’ ಎಂಬ ಹೆಸರಿನ ಖಾತೆಯಿಂದ ವ್ಯಕ್ತಿಯೊಬ್ಬ ಕಮೆಂಟ್ ಮೂಲಕ ಪರಿಚಯವಾಗಿದ್ದಾನೆ. ಬಳಿಕ ವಾಟ್ಸಾಪ್‌ನಲ್ಲಿ ಚಾಟ್ ಮಾಡಲು ನಂಬರ್ ಪಡೆದುಕೊಂಡಿದ್ದಾನೆ.

ಜೂನ್ 19, 2026ರಂದು ವಾಟ್ಸಾಪ್ ಚಾಟ್ ಆರಂಭವಾದಾಗ, ಆರೋಪಿಯು ಮೊದಲು 300 ರೂ. ಹಣ ನೀಡುವಂತೆ ಕೇಳಿದ್ದಾನೆ. ಯುವಕ ನಿರಾಕರಿಸಿದರೂ, ಆರೋಪಿ ಪದೇ ಪದೇ ಫೋನ್ ಮಾಡಿ ಗೋಗರೆದಿದ್ದರಿಂದ ಆತ ಕಳುಹಿಸಿದ ಕ್ಯೂಆರ್ ಕೋಡ್‌ಗೆ 300 ರೂ. ಫೋನ್‌ಪೇ ಮಾಡಲಾಗಿದೆ.

ಬ್ಲ್ಯಾಕ್‌ಮೇಲ್ ಮತ್ತು ಹಣ ಸುಲಿಗೆ:

300 ರೂ. ಪಡೆದ ಬಳಿಕ ಆರೋಪಿಯ ಬೇಡಿಕೆ ಹೆಚ್ಚಾಗಿದ್ದು, ವಿವಿಧ ವಾಟ್ಸಾಪ್ ನಂಬರ್‌ಗಳಿಂದ ನಿರಂತರವಾಗಿ ಹಣಕ್ಕಾಗಿ ಪೀಡಿಸಲು ಶುರು ಮಾಡಿದ್ದಾನೆ. ಯುವಕ ಹಣ ನೀಡಲು ಒಪ್ಪದಿದ್ದಾಗ, ಆತನ ಮುಖದ ಭಾವಚಿತ್ರವನ್ನು ಅಶ್ಲೀಲ ಚಿತ್ರದೊಂದಿಗೆ ಮಾರ್ಫ್ ಮಾಡಿ ಯುವಕನಿಗೆ ಕಳುಹಿಸಿ ಬೆದರಿಕೆ ಹಾಕಲಾಗಿದೆ.

“ಹೇಳಿದಷ್ಟು ಹಣ ನೀಡದಿದ್ದರೆ ಈ ಅಶ್ಲೀಲ ಫೋಟೋಗಳನ್ನು ನಿನ್ನ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗೆ ಕಳುಹಿಸಿ ಸಮಾಜದಲ್ಲಿ ಮಾನ ಹರಾಜು ಹಾಕುತ್ತೇನೆ” ಎಂದು ವಂಚಕರು ಬೆದರಿಸಿದ್ದಾರೆ.

ಮಾನಹಾನಿಗೆ ಹೆದರಿ ಕಂಗೆಟ್ಟ ವಿದ್ಯಾರ್ಥಿ, ಜೂನ್ 19 ರಿಂದ ಜುಲೈ 23, 2026ರವರೆಗೆ ವಂಚಕರು ಸೂಚಿಸಿದ ವಿವಿಧ ಕ್ಯೂಆರ್ ಕೋಡ್‌ಗಳಿಗೆ ತನ್ನ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,24,712 ರೂ. ಹಣವನ್ನು ವರ್ಗಾಯಿಸಿದ್ದಾನೆ. ಇಷ್ಟೆಲ್ಲಾ ಹಣ ನೀಡಿದರೂ ವಂಚಕರ ಬ್ಲ್ಯಾಕ್‌ಮೇಲ್ ನಿಲ್ಲದ ಕಾರಣ, ಅಂತಿಮವಾಗಿ ಯುವಕ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Continue Reading

drugs

ಕಾಲೇಜು ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ವ್ಯಸನ ತಡೆಗೆ ಪೊಲೀಸ್ ಇಲಾಖೆಯ ಯಶಸ್ವಿ ಕಾರ್ಯಾಚರಣೆ: ಶೇ. 80ರಷ್ಟು ವಿದ್ಯಾರ್ಥಿಗಳು ವ್ಯಸನ ಮುಕ್ತ!

Published

on

ಮಂಗಳೂರು: ನಗರದ ವಿವಿಧ ಕಾಲೇಜುಗಳಲ್ಲಿ ಡ್ರಗ್ಸ್ ಬಳಕೆ ವಿರುದ್ಧ ಪೊಲೀಸ್ ಇಲಾಖೆ ಮತ್ತು ಕಾಲೇಜು ಆಡಳಿತ ಮಂಡಳಿ ಜಂಟಿಯಾಗಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಾಚರಣೆ ಸಕಾರಾತ್ಮಕ ಫಲಿತಾಂಶ ನೀಡುತ್ತಿದ್ದು, ಶೇ. 80ರಷ್ಟು ವಿದ್ಯಾರ್ಥಿಗಳು ಡ್ರಗ್ಸ್ ಚಟದಿಂದ ಸಂಪೂರ್ಣವಾಗಿ ಹೊರಬಂದಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಮಂಗಳೂರು ನಗರದ 150 ಕಾಲೇಜುಗಳಲ್ಲಿ ಒಟ್ಟು 8,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪರೀಕ್ಷೆ (ಡ್ರಗ್ ಟೆಸ್ಟ್) ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ 98 ಜನ ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರೆಲ್ಲರಿಗೂ ಕೌನ್ಸೆಲಿಂಗ್ ನೀಡಲಾಗಿತ್ತು.

ನಂತರ, ಕೌನ್ಸೆಲಿಂಗ್ ಪಡೆದಿದ್ದ ವಿದ್ಯಾರ್ಥಿಗಳ ಸ್ಥಿತಿಗತಿ ಹಾಗೂ ಫಲಿತಾಂಶವನ್ನು ಪರಿಶೀಲಿಸಲು ಇತ್ತೀಚೆಗೆ ವಿಶೇಷ ಡ್ರಗ್ ಟೆಸ್ಟ್ ಅಭಿಯಾನ ನಡೆಸಲಾಗಿದ್ದು, ಈ ವೇಳೆ ಮೊದಲ ಹಂತದಲ್ಲಿ ಪಾಸಿಟಿವ್ ಬಂದಿದ್ದ 50 ವಿದ್ಯಾರ್ಥಿಗಳನ್ನು ಮರುಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ ಶೇ. 80ರಷ್ಟು ಅಂದರೆ 38 ಜನ ವಿದ್ಯಾರ್ಥಿಗಳು ಸಂಪೂರ್ಣವಾಗಿ ನೆಗೆಟಿವ್ ಬಂದಿದ್ದು, ತಾವು ಇನ್ನು ಮುಂದೆ ಡ್ರಗ್ಸ್ ಸೇವಿಸುವುದಿಲ್ಲ ಎಂದು ತಿಳಿಸಿ ವ್ಯಸನ ಮುಕ್ತರಾಗಿರುವುದು ದೃಢಪಟ್ಟಿದೆ.

ಉಳಿದ 12 ವಿದ್ಯಾರ್ಥಿಗಳ ಮೇಲೂ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಯು ನಿರಂತರ ನಿಗಾ ವಹಿಸಿ, ಹೆಚ್ಚಿನ ಕೌನ್ಸೆಲಿಂಗ್ ಹಾಗೂ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಶೇ. 80ರಷ್ಟು ಡ್ರಗ್ಸ್ ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿ ಮಾಡಲು ಸಾಧ್ಯವಾಗಿದ್ದು, ಮುಂದೆಯೂ ಎಲ್ಲರ ಸಹಕಾರವನ್ನು ಪೊಲೀಸ್ ಇಲಾಖೆ ಕೋರುತ್ತದೆ

Continue Reading

Trending

Copyright © 2025 Deevatige

error: Content is protected !!