Connect with us

Politics

ರಸ್ತೆ ಅಭಿವೃದ್ಧಿ ಮಾಡಬೇಕೆಂಬ ಕನಸಿದೆ, ಆದರೆ ನಿಮ್ಮ ವಿರೋಧದ ನಡುವೆ ಮಾಡಬೇಕೆಂಬ ಹಠವಿಲ್ಲ: ಶಾಸಕ ಅಶೋಕ್ ಕುಮಾರ್ ರೈ

Published

on

ವಿಟ್ಲದ ಪ್ರಮುಖ ನಾಲ್ಕು ರಸ್ತೆಗಳ ಅಗಲೀಕರಣ ಹಿನ್ನೆಲೆ: ಶಾಸಕರ ನೇತೃತ್ವದಲ್ಲಿ ಕಟ್ಟಡ ಮಾಲೀಕರ ಸಭೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಲ್ಕು ಪ್ರಮುಖ ರಸ್ತೆಗಳ ಅಗಲೀಕರಣ ಕುರಿತು ಸಾಧಕ-ಬಾಧಕಗಳನ್ನು ಚರ್ಚಿಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ವರ್ತಕರು ಮತ್ತು ಕಟ್ಟಡ ಮಾಲೀಕರ ಸಭೆ ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು,

1. ಸರ್ಕಾರದ ಸುತ್ತೋಲೆ ಏನಿದೆ?
ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ. PWD ರಸ್ತೆಯ ಪಕ್ಕದಲ್ಲಿರುವ ಕಂಜೆಸ್ಟೆಡ್ ಜಾಗಗಳನ್ನು ಸರ್ವೆ ಮಾಡಿ, ಸರಿಯಾದ ವರದಿಯನ್ನು ಸರ್ಕಾರಕ್ಕೆ ಮಂಡಿಸಬೇಕು. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದರೆ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಆದೇಶ ಬಂದಿದೆ.

2. ಎಷ್ಟು ಅನುದಾನ?
ಕಬಕ – ವಿಟ್ಲ ರಸ್ತೆಯನ್ನು ಫೋರ್ ಲೇನ್ ಮಾಡಲು ಈಗಾಗಲೇ 30 ಕೋಟಿ ರೂ. ಮಂಜೂರಾಗಿದೆ, ಇನ್ನೂ 10 ಕೋಟಿ ರೂ. ಬರಲಿದೆ. ಒಟ್ಟು 40 ಕೋಟಿ ರೂ. ನಲ್ಲಿ 7.5 ಕಿ.ಮೀ ರಸ್ತೆ ಅಭಿವೃದ್ಧಿಯಾಗಲಿದೆ. ಇದು ವಿಟ್ಲದ ಅಭಿವೃದ್ಧಿಗೆ ಪೂರಕ.

3. 22 ಮೀಟರ್ ಬೇಡ, 15 ಮೀಟರ್ ಸಾಕು:
ಮೂಲ ಯೋಜನೆಯಲ್ಲಿ 22 ಮೀಟರ್ ಅಗಲೀಕರಣ ಪ್ರಸ್ತಾವ ಇತ್ತು. ಆದರೆ ವರ್ತಕರಿಗೆ ತೊಂದರೆಯಾಗುತ್ತದೆ ಎಂದು ಚರ್ಚಿಸಿ ಅದನ್ನು 15 ಮೀಟರ್ ಗೆ ಇಳಿಸಿ, ಫುಟ್‌ಪಾತ್ ಸಹಿತ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

4. ಪರಿಹಾರ ಹೇಗೆ?
ರಸ್ತೆಗೆ ಜಾಗ ಬಿಟ್ಟುಕೊಡುವವರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯ ದರದ 3 ಪಟ್ಟು ಪರಿಹಾರ ನೀಡಲಾಗುವುದು. ಸರಿಯಾದ ಸರ್ವೆ ಮಾಡಿ, ನಿಗದಿತ ಹಣ ನೀಡಿದ ಬಳಿಕವೇ ಅಗಲೀಕರಣ. ಸರ್ಕಾರಿ ಜಾಗದಲ್ಲಿ ಅನುಮತಿ ಇಲ್ಲದೆ ಕಟ್ಟಿದ ಕಟ್ಟಡಗಳಿಗೆ ಯಾವುದೇ ಪರಿಹಾರ ಇಲ್ಲ.

5. ವಿಟ್ಲದ ಭವಿಷ್ಯ:
ಕುಡಿಯುವ ನೀರಿಗೆ 6 ಕೋಟಿ ರೂ. ಯೋಜನೆ ಬಂದಿದೆ, ಇನ್ನೂ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿದೆ. ಡ್ರೈನೇಜ್, UGD ವ್ಯವಸ್ಥೆ ಬಂದರೆ ಮಾತ್ರ ನಗರ ಬೆಳೆಯಲು ಸಾಧ್ಯ. ವಿಟ್ಲವು ಕೇರಳ, ಮಂಗಳೂರು, ಪುತ್ತೂರು ಸಂಪರ್ಕಿಸುವ ಸಿಟಿ. ಇಲ್ಲಿ ರಸ್ತೆ ಅಭಿವೃದ್ಧಿಯಾದರೆ ಬ್ಯುಸಿನೆಸ್ ಡೆವಲಪ್ ಆಗುತ್ತದೆ. ಹಳೆಯ ಕಟ್ಟಡಗಳು ಮುಂದಿನ ದಿನಗಳಲ್ಲಿ ಬೀಳುತ್ತವೆ, ಆಗ ಮಾರ್ಜಿನ್ ಬಿಟ್ಟೇ ಕಟ್ಟಬೇಕು.

ಎಲ್ಲಾ ಕಡೆ ನಗರಗಳು ಬೆಳೆಯುತ್ತಿವೆ. ಇಲ್ಲಿ ಕಾಂಗ್ರೆಸ್-ಬಿಜೆಪಿ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವವ ನಾನಲ್ಲ. ನಿಮ್ಮೆಲ್ಲರ ವಿಶ್ವಾಸ ತೆಗೆದುಕೊಂಡು ಮುಂದುವರೆಯೋಣ. ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್ ಇದ್ದರೆ ಅದರ ಓನರ್ ಶಿಪ್ ನಲ್ಲಿ ಅಂಗಡಿ ಪಡೆದಿರುತ್ತಾರೆ, ಆಗ ರಸ್ತೆ ಅಗಲೀಕರಣಕ್ಕೆ ಬೇಕಾಗುವ ಒಟ್ಟು ಜಾಗದ ವ್ಯಾಲ್ಯೂ ಮೇಲೆ ಎಲ್ಲರಿಗೂ ಸಮಾನವಾಗಿ ಪರಿಹಾರ ಸಿಗುತ್ತದೆ. ಎಲ್ಲರೂ ಜೊತೆಯಾಗಿ ಸೇರಿ ಅಭಿವೃದ್ಧಿ ಮಾಡುವ ಕೆಲಸ ಮಾಡೋಣ ರಸ್ತೆಯನ್ನು ಅಭಿವೃದ್ಧಿ ಮಾಡಬೇಕೆಂಬ ಕನಸಿದೆ. ಆದರೆ ನಿಮ್ಮ ವಿರೋಧದ ನಡುವೆ ಮಾಡಬೇಕೆಂಬ ಹಠವಿಲ್ಲ” – ಅಶೋಕ್ ಕುಮಾರ್ ರೈ, ಶಾಸಕರು

ರಸ್ತೆ ಅಗಲೀಕರಣ ಅತ್ಯಗತ್ಯ, ಜಾಗದ ಮಾಲೀಕರ ಮನವೊಲಿಸಿ ಸಹಕಾರ ಪಡೆಯುತ್ತೇವೆ: ಅಧ್ಯಕ್ಷ ಕರುಣಾಕರ ನಾಯ್ತೊಟ್ಟ

ಸಭೆಯಲ್ಲಿ ಮಾತನಾಡಿದ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರು,”ವಿಟ್ಲ ಪೇಟೆಗೆ ಈಗ ಅಗಲೀಕರಣ ಬಹಳ ಅಗತ್ಯವಿದೆ ಎಂಬುದನ್ನು ಶಾಸಕರು ಈಗಾಗಲೇ ಉಲ್ಲೇಖಿಸಿದ್ದಾರೆ. ಇದು ನಿಜ. ಜಾಗದ ಮಾಲೀಕರು, ವರ್ತಕರ ಅಭಿಪ್ರಾಯವನ್ನು ಪಡೆದುಕೊಂಡು ಮುಂದೆ ಯಾವ ರೀತಿ ಮಾಡಬಹುದು ಎಂದು ಅವರ ಮನಸ್ಸಿನ ಅಭಿಪ್ರಾಯವನ್ನು ತಿಳಿದುಕೊಳ್ಳಲು ಈ ಸಭೆ ಕರೆಯಲಾಗಿದೆ. ಅಂಗಡಿ ಮಾಲಕರು, ವರ್ತಕರ ಅಭಿಪ್ರಾಯ ಪಡೆದು ಮುಂದುವರಿಯಬೇಕು ವಿಟ್ಲ ಪೇಟೆಯ ಅಭಿವೃದ್ಧಿಗೆ ಅಗಲೀಕರಣ ಅತ್ಯಗತ್ಯ. ಜಾಗದ ಮಾಲೀಕರಿಗೆ ಒಳ್ಳೆಯ ಮನಸ್ಸು, ಬುದ್ಧಿ ಬಂದು ಅಗಲೀಕರಣಕ್ಕೆ ಸಹಕರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ನಿಮ್ಮೆಲ್ಲರ ಸಹಕಾರವನ್ನು ನಾನು ಬಯಸುತ್ತೇನೆ. ನನ್ನ ಕಡೆಯಿಂದ ಸಾಧ್ಯವಾದಷ್ಟು ಮನವೊಲಿಸುವ ಕೆಲಸವನ್ನು ಮಾಡಿ, ಪಂಚಾಯತ್ ವತಿಯಿಂದ ಪೂರ್ಣ ಸಹಕಾರ ನೀಡುತ್ತೇನೆ” ಎಂದರು

ವಿಟ್ಲ ಅಭಿವೃದ್ಧಿಗೆ ಶಾಸಕರ ಸಹಕಾರಕ್ಕೆ ಅಭಿನಂದನೆ – ಅಶೋಕ್ ಕುಮಾರ್ ಶೆಟ್ಟಿ
“ಶಾಸಕ ಅಶೋಕ್ ಕುಮಾರ್ ರೈ ಅವರು ಬಹಳ ಕ್ರಿಯಾಶೀಲರು. ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು, ಕಬಕ-ವಿಟ್ಲ ರಸ್ತೆಗೆ 40 ಕೋಟಿ ಅನುದಾನ, ಎರಡು ಹಳೆಯ ಬ್ರಿಟಿಷ್ ಕಾಲದ ಸೇತುವೆಗಳ ನವೀಕರಣ, ವಿಟ್ಲ ಪಟ್ಟಣ ಪಂಚಾಯತಿಗೆ 5 ಕೋಟಿ ಅನುದಾನ ನೀಡಿದ್ದಾರೆ. ರಾಜಕೀಯೇತರವಾಗಿ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ.”
ನಾವು ಜನಪ್ರತಿನಿಧಿಗಳು ಇಂದು ಇರುತ್ತೇವೆ, ನಾಳೆ ಇರುವುದಿಲ್ಲ, ಆದರೆ ಮಾಡಿದ ಕೆಲಸ ಉಳಿಯುತ್ತದೆ. ವಿಟ್ಲದ ಅಭಿವೃದ್ಧಿಗೆ ಪಟ್ಟಣ ಪಂಚಾಯತ್ ವತಿಯಿಂದ ಶಾಸಕರಿಗೆ ಪೂರ್ಣ ಸಹಕಾರ ನೀಡುತ್ತೇವೆ. ಶಾಸಕರು ಕೈ ಹಾಕಿದ ಕೆಲಸಗಳೆಲ್ಲ ಆಗುತ್ತಿದೆ, ಇದು ಒಂದೇ ಸಭೆಯಲ್ಲ, ಮುಂದೆ ಹಲವು ಸಭೆ ನಡೆಸಿ ಎಲ್ಲರಿಗೂ ನ್ಯಾಯಯುತ ಪರಿಹಾರ ಕೊಡುವ ಕೆಲಸವಾಗಲಿ ಎಂದು ಅವರು ಹೇಳಿದರು.

ಇತರರ ಅಭಿಪ್ರಾಯ:

ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೊಪ್ಪಳ: ರಸ್ತೆ ಅಗಲೀಕರಣಕ್ಕೆ ನಮ್ಮ ಸಂಘದ ಸಹಮತ ಇರುವುದಿಲ್ಲ. ರಸ್ತೆ ಅಗಲೀಕರಣ ನಡೆದರೆ ಇಲ್ಲಿನ ವ್ಯಾಪಾರ ವಹಿವಾಟುಗಳು ತಾಳ ತಪ್ಪಲಿದೆ. ಬೈಪಾಸ್ ರಸ್ತೆ ನಿರ್ಮಾಣ ಮಾತ್ರ ಸಮಸ್ಯೆಗೆ ಪರಿಹಾರ.

ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ: ಇಲ್ಲಿರುವ ಅಂಗಡಿ ಕಟ್ಟಡಗಳ ಸ್ಥಿತಿ ಮತ್ತು ಕನ್ವರ್ಶನ್ ಜಾಗದ ಪರಿಹಾರದ ಬಗ್ಗೆ ಪ್ರಶ್ನಿಸಿದರು.

ಜಾಗದ ಮಾಲಕ ಸುರೇಶ್ ಬನಾರಿ: ಅಗಲೀಕರಣ ನಡೆದರೆ ವಿಟ್ಲ ಪೇಟೆಯೇ ಇರಲಿಕ್ಕಿಲ್ಲ, ಜಾಗದ ಮಾಲೀಕರಿಗೆ ನೋಟಿಸ್ ನೀಡಿ, ಎಷ್ಟು ಜಾಗ ಬೇಕು ಎಂದು ತಿಳಿಸಬೇಕು ಎಂದರು.

ನಿವೃತ್ತ ಅಧ್ಯಾಪಕರಾದ ಮಾಧವ ಕುದ್ರೆತ್ತಾಯರವರು: ಪರ್ಯಾಯ ರೀತಿಯಲ್ಲಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್, ಜಾಗದ ಮಾಲಕರಾದ ವಿ.ಎ.ರಶೀದ್, ಪ್ರಮುಖರಾದ ಇಕ್ಬಾಲ್ ಹೋನೆಸ್ಟ್, ನೀಲಪ್ಪ ಗೌಡ, ಸಂಜೀವ ಪೂಜಾರಿ ಮತ್ತಿತರರು ಅಭಿಪ್ರಾಯವನ್ನು ತಿಳಿಸಿದರು.

ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಸಂಗೀತಾ‌ ಪಣೆಮಜಲು , ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಎಇ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್, ಮುಖ್ಯಾಧಿಕಾರಿ ಕರುಣಾಕರ ವಿ. ಮೊದಲಾದವರು ಉಪಸ್ಥಿತರಿದ್ದರು

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

CONGRESS

ಸಚಿವ ಸ್ಥಾನ ಸಿಗದ್ದಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಬಂಡಾಯ: ಶಾಸಕ ಸ್ಥಾನಕ್ಕೆ ಬೇಳೂರು ಗೋಪಾಲಕೃಷ್ಣ, ಯಶವಂತರಾಯಗೌಡ ಪಾಟೀಲ್ ರಾಜೀನಾಮೆ!

Published

on

ಬೆಂಗಳೂರು: ರಾಜ್ಯದಲ್ಲಿ ನೂತನ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಬೆಂಕಿ ಭುಗಿಲೆದ್ದಿದೆ. ಬಯಸಿದ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಹಿರಿಯ ಶಾಸಕರಾದ ಸಾಗರ ಕ್ಷೇತ್ರದ ಬೇಳೂರು ಗೋಪಾಲಕೃಷ್ಣ ಹಾಗೂ ಇಂಡಿ ಕ್ಷೇತ್ರದ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ನನಗೆ ಅನ್ಯಾಯವಾಗಿದೆ, ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ: ಬೇಳೂರು ಗೋಪಾಲಕೃಷ್ಣ ಆಕ್ರೋಶ

ಸಚಿವ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, “ಸಂಪುಟ ವಿಸ್ತರಣೆ ಹೆಸರಿನಲ್ಲಿ ನನಗೆ ತೀವ್ರ ಅನ್ಯಾಯವಾಗಿದೆ. ಕೊನೆಯ ಕ್ಷಣದವರೆಗೂ ಪಟ್ಟಿಯಲ್ಲಿದ್ದ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ” ಎಂದು ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಗಾಡ್‌ಫಾದರ್ ಹಾಗೂ ಪ್ರಭಾವ ಇರುವವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತಿದೆ. ನಿಷ್ಠಾವಂತ ಶಾಸಕರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಸಹಿಸಿಕೊಂಡು ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ತಳೆದಿದ್ದೇನೆ” ಎಂದು ತಿಳಿಸಿರುವ ಅವರು, ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಮೂರು ಬಾರಿ ಶಾಸಕರಾಗಿದ್ದರೂ ಕೈತಪ್ಪಿದ ಸಚಿವ ಸ್ಥಾನ: ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ಇತ್ತ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಮೂರು ಬಾರಿಯ ಶಾಸಕ ಯಶವಂತರಾಯಗೌಡ ಪಾಟೀಲ್ ಅವರೂ ಸಹ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷಕ್ಕಾಗಿ ಸತತವಾಗಿ ಶ್ರಮಿಸಿದರೂ ಹಾಗೂ ಹಿರಿಯ ಶಾಸಕರಾಗಿದ್ದರೂ ತಮಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡದಿರುವುದು ಅವರ ಬೆಂಬಲಿಗರು ಮತ್ತು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರಕ್ಕೆ ಹೆಚ್ಚಿದ ರಾಜಕೀಯ ಬಿಸಿ

ಸಂಪುಟ ವಿಸ್ತರಣೆಯ ಬೆನ್ನಲ್ಲೇ ಒಂದೇ ಬಾರಿಗೆ ಇಬ್ಬರು ಪ್ರಮುಖ ಶಾಸಕರು ರಾಜೀನಾಮೆ ನಿರ್ಧಾರ ಕೈಗೊಂಡಿರುವುದು ಕಾಂಗ್ರೆಸ್ ಸರ್ಕಾರ ಹಾಗೂ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ಅಸಮಾಧಾನಿತ ಶಾಸಕರು ಒಗ್ಗೂಡುತ್ತಿರುವ ಸುಳಿವು ಸಿಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಮುಂದಿನ ನಡೆ ಕುತೂಹಲ ಮೂಡಿಸಿದೆ.

Continue Reading

Kadaba

ನೂಜಿಬಾಳ್ತಿಲ: ಬಾಲೆಮಾರು-ಕುರ್ನೂಜಿಯಲ್ಲಿ ಮಳೆಗಾಲದಲ್ಲಿ ಹೊಳೆದಾಟಲು ಪರದಾಟ; ಸೇತುವೆ ನಿರ್ಮಾಣಕ್ಕೆ ಭರವಸೆ ನೀಡಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ

Published

on

ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ಇಚ್ಲಂಪಾಡಿ ಸಂಪರ್ಕಿಸುವ ರಸ್ತೆಯ ಬಾಲೆಮಾರು-ಕುರ್ನೂಜಿ ಎಂಬಲ್ಲಿ ಹರಿಯುವ ಹೊಳೆ ದಾಟಲು ಗ್ರಾಮಸ್ಥರು ಮಳೆಗಾಲದಲ್ಲಿ ತೀವ್ರ ಪರದಾಟ ನಡೆಸುತ್ತಿದ್ದಾರೆ. ಇಲ್ಲಿನ ಗ್ರಾಮಸ್ಥರ ದಶಕಗಳ ಸಂಕಷ್ಟವನ್ನು ಆಲಿಸಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ರಾಮಕುಂಜ ಅವರು ಆಃ 2ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೇತುವೆ ನಿರ್ಮಾಣಕ್ಕೆ ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ತೆಪ್ಪವೇ ಆಸರೆ: ಗ್ರಾಮಸ್ಥರ ಮುಗಿಯದ ಸಂಕಷ್ಟ!

ಬೇಸಿಗೆ ಕಾಲದಲ್ಲಿ ಗ್ರಾಮಸ್ಥರೇ ಸ್ವತಃ ಪಾಲ (ಕಾಲುಸಂಕ) ರಚಿಸಿಕೊಂಡು ಹೊಳೆ ದಾಟುತ್ತಾರೆ. ಆದರೆ ಮಳೆಗಾಲದಲ್ಲಿ ಗುಂಡ್ಯ ಹೊಳೆಯು ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾದಾಗ, ಈ ಹೊಳೆಯಲ್ಲೂ ನೀರು ಆವರಿಸಿ ಪಾಲ ಮುಳುಗಡೆಯಾಗುತ್ತದೆ. ಇದರಿಂದ ಸುತ್ತಮುತ್ತಲಿನ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ.

ತೆಪ್ಪವೇ ಆಸರೆ: ಪಾಲ ಮುಳುಗಡೆಯಾದಾಗ ಅಪಾಯಕಾರಿ ರೀತಿಯಲ್ಲಿ ತೆಪ್ಪವನ್ನೇ ಬಳಸಿಕೊಂಡು ಗ್ರಾಮಸ್ಥರು ಹೊಳೆ ದಾಟಬೇಕಾದ ದುಸ್ಥಿತಿ ಇದೆ.

ಸಾಕಷ್ಟು ಕುಟುಂಬಗಳಿಗೆ ತೊಂದರೆ: ಈ ಭಾಗದಲ್ಲಿ 25ಕ್ಕೂ ಹೆಚ್ಚು ಮನೆಗಳಿದ್ದು, ದಿನನಿತ್ಯ ಶಾಲಾ-ಕಾಲೇಜು ಮಕ್ಕಳು ಹಾಗೂ ಗ್ರಾಮಸ್ಥರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಈ ಹೊಳೆ ದಾಟಿಯೇ ತಮ್ಮ ದೈನಂದಿನ ಕೆಲಸಗಳಿಗೆ ತೆರಳಬೇಕಾಗಿದೆ.

ಹಲವು ವರ್ಷಗಳ ಬೇಡಿಕೆ: ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಭರವಸೆಗಳು ಸಿಕ್ಕಿವೆಯೇ ಹೊರತು ಸೇತುವೆ ಭಾಗ್ಯ ಮಾತ್ರ ಇಂದಿಗೂ ಸಿಕ್ಕಿಲ್ಲ ಎಂಬುದು ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಥಳಕ್ಕೆ ಜಿ.ಕೃಷ್ಣಪ್ಪ ಭೇಟಿ, ಪರಿಶೀಲನೆ

ಇಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಕಾಂಗ್ರೆಸ್ ಮುಖಂಡ ಕರುಣಾಕರ ಗೌಡ ದೊಡ್ಡಉರ್ಕ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಜಿ.ಕೃಷ್ಣಪ್ಪ ರಾಮಕುಂಜ ಅವರು ಕರುಣಾಕರ ಗೌಡ ಅವರೊಂದಿಗೆ ಬಾಲೆಮಾರು-ಕುರ್ನೂಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪಿಡಬ್ಲ್ಯುಡಿ ಇಂಜಿನಿಯರ್‌ಗೆ ಸೂಚನೆ:

ಸ್ಥಳೀಯರೊಂದಿಗೆ ಸಂಕಷ್ಟ ಆಲಿಸಿದ ಜಿ.ಕೃಷ್ಣಪ್ಪ ಅವರು, ಸೇತುವೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಅಲ್ಲದೆ, ಸ್ಥಳದಿಂದಲೇ ಲೋಕೋಪಯೋಗಿ ಇಲಾಖೆಯ (PWD) ಇಂಜಿನಿಯರ್ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣವೇ ಸೇತುವೆ ನಿರ್ಮಾಣಕ್ಕೆ ಅಂದಾಜುಪಟ್ಟಿ (Estimate) ತಯಾರಿಸುವಂತೆ ಸೂಚನೆ ನೀಡಿದರು.

ಭೇಟಿ ವೇಳೆಯಲ್ಲಿದ್ದ ಪ್ರಮುಖರು

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶೀನಪ್ಪ ಗೌಡ ಕುರ್ನೂಜಿ, ಶೇಖರ ಗೌಡ ಬಾಲೆಮಾರು, ಧನಂಜಯ ಗೌಡ ಬಳ್ಳೇರಿ, ಪ್ರಮೋದ್ ಗೌಡ ಬಳ್ಳೇರಿ, ಚಂದ್ರಶೇಖರ ಗೌಡ ಬಳ್ಳೇರಿ, ಚೇತನ್ ಬಳ್ಳೇರಿ, ಬಾಲಕೃಷ್ಣ ಬಳ್ಳೇರಿ, ಬಾಲಕ್ಕ ಕುರ್ನೂಜಿ, ನಳಿನಿ ಕುರ್ನೂಜಿ, ರಾಮಕ್ಕ ಬಾಲೆಮಾರು, ದೇಜಪ್ಪ ಗೌಡ ಬಾಲೆಮಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

Politics

ನರಿಮೊಗರು ಗ್ರಾ.ಪಂ ಎದುರು ‘ಪುತ್ತಿಲ ಪರಿವಾರ’ ಬೃಹತ್ ಪ್ರತಿಭಟನೆ: 15 ದಿನಗಳಲ್ಲಿ ರಸ್ತೆ ದುರಸ್ತಿ ಭರವಸೆ

Published

on

ಪುತ್ತೂರು: ಪುರಷರಕಟ್ಟೆ–ಶಾಂತಿಗೋಡು ಸಂಪರ್ಕ ರಸ್ತೆಯ ದುಸ್ಥಿತಿಯನ್ನು ಖಂಡಿಸಿ ಹಾಗೂ ತಕ್ಷಣ ರಸ್ತೆ ದುರಸ್ತಿಗೆ ಆಗ್ರಹಿಸಿ ನರಿಮೊಗರು ಗ್ರಾಮ ಪಂಚಾಯಿತಿ ಕಚೇರಿ ಎದುರು ಗುರುವಾರ ‘ಪುತ್ತಿಲ ಪರಿವಾರ’ದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅಧಿಕಾರಿಗಳು 15 ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಲಿಖಿತ/ಮೌಖಿಕ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಪುರಷರಕಟ್ಟೆ–ಶಾಂತಿಗೋಡು ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಮಾರು ಒಂದು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ವಾಹನ ಸಂಚಾರ ತೀವ್ರ ದುಸ್ತರವಾಗಿದೆ. ಇದರಿಂದಾಗಿ ಸ್ಥಳೀಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ದಿನನಿತ್ಯ ಪರದಾಡುವಂತಾಗಿದೆ. ರಸ್ತೆ ಸರಿಪಡಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿಂದೆ ಗ್ರಾ.ಪಂ ಕಾರ್ಯದರ್ಶಿ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ನೀಡಿದ್ದ ಭರವಸೆಯೂ ಹುಸಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪುತ್ತಿಲ ಪರಿವಾರದ ಕಾರ್ಯಕರ್ತರು ಮತ್ತೆ ಬೀದಿಗಿಳಿದು ಧರಣಿ ನಡೆಸಿದರು.

ಅಧಿಕಾರಿಗಳು ನೆಪ ಹೇಳುವುದು ಬಿಡಲಿ: ಅರುಣ್ ಕುಮಾರ್ ಪುತ್ತಿಲ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, “ಅಧಿಕಾರಿಗಳು ಅನುದಾನದ ಕೊರತೆಯನ್ನು ನೆಪವಾಗಿ ಹೇಳಿ ಜಾರಿಕೊಳ್ಳುವುದು ಸರಿಯಲ್ಲ. ಸಾರ್ವಜನಿಕರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ಅಗತ್ಯ ಕಾಮಗಾರಿ ನಡೆಸುವುದು ಅಧಿಕಾರಿಗಳ ಪ್ರಥಮ ಕರ್ತವ್ಯ” ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ನಾರಾಯಣ ಪ್ರಕಾಶ್ ಮಾತನಾಡಿ, “ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ಭಾಗಕ್ಕೆ ಸಮರ್ಪಕ ರಸ್ತೆ ಹಾಗೂ ಬಸ್‌ ಸೌಲಭ್ಯ ಸಿಕ್ಕಿಲ್ಲದಿರುವುದು ದುರಂತ. ಅಧಿಕಾರಿಗಳು ಅಹಂಕಾರ ಬಿಟ್ಟು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಬೇಕು. ಕೊಟ್ಟ ಭರವಸೆಯಂತೆ 15 ದಿನಗಳೊಳಗೆ ಕಾಮಗಾರಿ ಆರಂಭವಾಗದಿದ್ದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.

15 ದಿನಗಳಲ್ಲಿ ಕಾಮಗಾರಿ ಪೂರ್ಣ: ತಾಪಂ ಇಒ ಭರವಸೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಇಒ ನವೀನ್ ಭಂಡಾರಿ, “ಚರಂಡಿ ದುರಸ್ತಿ ಕಾಮಗಾರಿಯನ್ನು ತಕ್ಷಣವೇ ಆರಂಭಿಸಲಾಗುವುದು. ರಸ್ತೆ ದುರಸ್ತಿಯನ್ನು ಮುಂದಿನ 15 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು. ಸದ್ಯ ಚರಂಡಿ ಕಾಮಗಾರಿಗಾಗಿ ಗ್ರಾಮ ಪಂಚಾಯಿತಿ ಅನುದಾನದಿಂದ ₹20 ಸಾವಿರ ಮೀಸಲಿರಿಸಲಾಗಿದೆ” ಎಂದು ಸ್ಪಷ್ಟನೆ ನೀಡಿದರು. ಅಧಿಕಾರಿಗಳ ಸ್ಪಂದನೆಯ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಪುತ್ತಿಲ ಪರಿವಾರದ ನೂರಾರು ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Continue Reading

Trending

Copyright © 2025 Deevatige

error: Content is protected !!