Connect with us

arrest

ಮಂಗಳೂರಿನಲ್ಲಿ ವೃದ್ಧೆಯ ಸರಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ; ಹ್ಯಾಂಡ್‌ಕಫ್ ಸಮೇತ ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಆರೋಪಿ! ನಗರಾದ್ಯಂತ ಹೈ ಅಲರ್ಟ್!

Published

on

ಮಂಗಳೂರು: ನಗರದಲ್ಲಿ ಇತ್ತೀಚೆಗೆ ವೃದ್ಧೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಪ್ರಕರಣವನ್ನು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿ ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಅಂತರರಾಜ್ಯ ಸರಗಳ್ಳರ ಗ್ಯಾಂಗ್‌ನ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರಾದರೂ, ಕಳ್ಳತನದ ಪ್ರಮುಖ ಸೂತ್ರಧಾರಿಯೊಬ್ಬ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಕೈಗೆ ಹ್ಯಾಂಡ್‌ಕಫ್ (ಬೇಡಿ) ಇದ್ದ ಸ್ಥಿತಿಯಲ್ಲೇ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿರುವ ರೋಮಾಂಚನಕಾರಿ ಘಟನೆ ನಡೆದಿದೆ.

ಪ್ರಕರಣದ ಹಿನ್ನೆಲೆ:

ಕಳೆದ ಜೂನ್ 14 ರಂದು ಮಧ್ಯಾಹ್ನ 12:30 ರ ಸುಮಾರಿಗೆ ಮಂಗಳೂರು ನಗರದ ಎಕ್ಕೂರು ಬಸ್ ನಿಲ್ದಾಣದಲ್ಲಿ ಇಳಿದು ಸೂಟರ್ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳುವ ನೆಪದಲ್ಲಿ ತಡೆದಿದ್ದರು. ಈ ವೇಳೆ ಏಕಾಏಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು ₹1,50,000/- ಮೌಲ್ಯದ, 12 ಗ್ರಾಂ ತೂಕದ ಲಕ್ಷ್ಮಿ ಪೆಂಡೆಂಟ್ ಹೊಂದಿದ್ದ ಬಂಗಾರದ ಸರವನ್ನು ಕಸಿದುಕೊಂಡು ಕ್ಷಣಾರ್ಧದಲ್ಲಿ ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ (ಅ.ಕ್ರ 124/2026 ಕಲಂ: 309(6) ಬಿ.ಎನ್.ಎಸ್) ಪ್ರಕರಣ ದಾಖಲಾಗಿತ್ತು.

ಮೀನುಗಾರಿಕಾ ಬಂದರಿನಲ್ಲಿ ಪೊಲೀಸರ ಖೆಡ್ಡಾಕ್ಕೆ ಬಿದ್ದ ಅಂತರರಾಜ್ಯ ಗ್ಯಾಂಗ್:

ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿಯವರ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಉತ್ತರ ಪ್ರದೇಶ ಹಾಗೂ ಬಾಗಲಕೋಟೆ ಮೂಲದ ಖತರ್ನಾಕ್ ಗ್ಯಾಂಗ್ ಮೇಲೆ ಬಲವಾದ ಶಂಕೆ ವ್ಯಕ್ತವಾಗಿತ್ತು. ಮಂಗಳೂರು, ಹೈದರಾಬಾದ್, ಬಾಗಲಕೋಟೆ, ಗದಗ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವಾಹನ ಕಳ್ಳತನ, ಸರಗಳ್ಳತನ ಹಾಗೂ ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಅಂತರರಾಜ್ಯ ಗ್ಯಾಂಗ್, ಜಪ್ಪಿನಮೊಗರು ಕೃತ್ಯದ ಬಳಿಕ ಮಂಗಳೂರು ಬಿಟ್ಟು ಪರಾರಿಯಾಗಿತ್ತು.

ಆದರೆ ಜೂನ್ 26 ರಂದು ಬೆಳಗ್ಗೆ ಈ ಗ್ಯಾಂಗ್ ಮತ್ತೆ ಮಂಗಳೂರಿನ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಬಂದಿರುವ ಖಚಿತ ಮಾಹಿತಿ ಲಭಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಪಾಂಡೇಶ್ವರ ಪೊಲೀಸರು ಮೂವರನ್ನೂ ಸುತ್ತುವರಿದು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದರು.

ರೋಸಾರಿಯೋ ಚರ್ಚ್ ರಸ್ತೆಯಲ್ಲಿ ಹ್ಯಾಂಡ್‌ಕಫ್ ಸಮೇತ ಓಡಿದ ಕಳ್ಳ!

ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ಪಾಂಡೇಶ್ವರದ ರೋಸಾರಿಯೋ ಶಾಲೆ ಹಾಗೂ ಚರ್ಚ್ ರಸ್ತೆ ಸಮೀಪದ ಮೂಲಕ ಠಾಣೆಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಘೋರ ಘಟನೆಯೊಂದು ಸಂಭವಿಸಿದೆ. ಬಂಧಿತ ಆರೋಪಿಗಳಲ್ಲೊಬ್ಬನಾದ ಬಾಗಲಕೋಟೆ ಮೂಲದ ಅಲ್ತಾಫ್ ಹುಸೈನ್ ಎಂಬಾತ ಏಕಾಏಕಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವಿನಾಯಕ ಅವರ ಮೇಲೆ ಹಲ್ಲೆ ನಡೆಸಿ, ಅವರನ್ನು ಕೆಳಗೆ ತಳ್ಳಿ, ಕೈಗೆ ಹ್ಯಾಂಡ್‌ಕಫ್ ಇದ್ದ ಸ್ಥಿತಿಯಲ್ಲೇ ಓಡಿ ಪರಾರಿಯಾಗಿದ್ದಾನೆ. ಈ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ವಿನಾಯಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಲ್ತಾಫ್ ಓಡುತ್ತಿದ್ದಂತೆ ಆತನ ಸಹಚರರಾದ ಉತ್ತರ ಪ್ರದೇಶದ ಮಹಮ್ಮದ್ ಸಿದ್ದಿಕ್ ಹಾಗೂ ರವಿ ಬೌರ್ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ, ತಕ್ಷಣ ಅಲರ್ಟ್ ಆದ ಇತರ ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಅವರಿಬ್ಬರನ್ನೂ ಧಾವಿಸಿ ಹಿಡಿದು ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳ ವಿವರ:

  1. ರವಿ ಬೌರಾ (38 ವರ್ಷ), ತಂದೆ: ರತನ್ ಸಿಂಗ್, ವಿಳಾಸ: ಮುಝಾಫರ್ ನಗರ, ಉತ್ತರ ಪ್ರದೇಶ.
  2. ಮೊಹಮ್ಮದ್ ಸಾಹೀಲ್ ಸಿದ್ದೀಖಿ @ ಮೋಹಮ್ಮದ್ ಸಾಹಿಲ್ (26 ವರ್ಷ), ತಂದೆ: ಬಾಬು ಅಹ್ಮದ್, ವಿಳಾಸ: ಗೊಂಡಾ ಜಿಲ್ಲೆ, ಉತ್ತರ ಪ್ರದೇಶ.

ಬಂಧಿತ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಜುಲೈ 6, 2026ರ ವರೆಗೆ (10 ದಿನಗಳು) ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ನಗರಾದ್ಯಂತ ರೆಡ್ ಅಲರ್ಟ್ – ಸಿಸಿಟಿವಿ ದೃಶ್ಯ ವೈರಲ್:

ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡುತ್ತಿರುವ ಖತರ್ನಾಕ್ ಕಳ್ಳ ಅಲ್ತಾಫ್ ಹುಸೈನ್ ಪತ್ತೆಗಾಗಿ ನಗರಾದ್ಯಂತ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆರೋಪಿ ಅಲ್ತಾಫ್ ಹ್ಯಾಂಡ್‌ಕಫ್ ಸಮೇತ ರಸ್ತೆಯಲ್ಲಿ ಓಡಿ ಹೋಗುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ನಗರದ ಪ್ರಮುಖ ರಸ್ತೆಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ತಪಾಸಣೆ ಚುರುಕುಗೊಳಿಸಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಆರೋಪಿಯ ವಿರುದ್ಧ ಅಕ್ರ 133/2026 ಕಲಂ 121(1), 132, 362 ಬಿಎನ್ಎರಸ್ ಪ್ರಕಾರ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು, ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ನಿಸ್ತಂತು (ವೈರ್‌ಲೆಸ್) ಮೂಲಕ ಆರೋಪಿಯ ವಿವರಗಳನ್ನು ನೆರೆಹೊರೆಯ ಜಿಲ್ಲೆ ಹಾಗೂ ರಾಜ್ಯಗಳಿಗೂ ರವಾನಿಸಲಾಗಿದೆ.

ಸಾರ್ವಜನಿಕರಲ್ಲಿ ಪೊಲೀಸರ ಮನವಿ: ಸಿಸಿಟಿವಿ ದೃಶ್ಯದಲ್ಲಿರುವಂತೆ ಹ್ಯಾಂಡ್‌ಕಫ್ ಧರಿಸಿ ಪರಾರಿಯಾಗಿರುವ ಆರೋಪಿ ಅಲ್ತಾಫ್ ಹುಸೈನ್ ಬಗ್ಗೆ ಯಾವುದೇ ಮಾಹಿತಿ ಲಭಿಸಿದಲ್ಲಿ ಸಾರ್ವಜನಿಕರು ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಸಹಕರಿಸಬೇಕಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ





ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಕಾಸರಗೋಡು: ವಿವಾಹಿತ ಮಹಿಳೆಯ ಗೆಳೆಯನ ಜೊತೆ ನಿಲ್ಲಿಸಿ ಗೂಂಡಾಗಿರಿ, ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ – ಐವರ ಬಂಧನ

Published

on

ಕಾಸರಗೋಡು: ವಿವಾಹಿತ ಮಹಿಳೆಯ ಮನೆಗೆ ಅಕ್ರಮ ಪ್ರವೇಶ ಮಾಡಿ ಗೂಂಡಾಗಿರಿ ನಡೆಸಿ, ಆಕೆ ಮತ್ತು ಆಕೆಯ ಪುರುಷ ಸ್ನೇಹಿತನನ್ನು ಬೆದರಿಸಿ ಹಣ ಮತ್ತು ಚಿನ್ನಾಭರಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮುಳಿಯಾರು ಪೊವ್ವಲ್ ನ ಬಿ. ಶರೀಫ್ (42), ಚೆಂಗಳ ಸಂತೋಷ್ ನಗರದ ಮೊಹಮ್ಮದ್ ಸಾಲಿಹ್ (22), ನಾಲ್ಕನೇ ಮೈಲ್ ನಿವಾಸಿಗಳಾದ ಉಮರ್ ಮುಖ್ತಾರ್ (18), ಮೊಹಮ್ಮದ್ ಶಿಹಾನ್ (20) ಹಾಗೂ ಆಲಂಪಾಡಿಯ ಅಬ್ದುಲ್ ರಶೀದ್ (36) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಏನು?
ಮಹಿಳೆಯ ಮನೆಗೆ ಆಕೆಯ ಪುರುಷ ಸ್ನೇಹಿತ ಬಂದಿದ್ದ ವೇಳೆ ಆರೋಪಿಗಳ ಗುಂಪು ಅಕ್ರಮವಾಗಿ ಮನೆ ಪ್ರವೇಶ ಮಾಡಿದೆ. ಇಬ್ಬರನ್ನೂ ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆದಿರುವ ಆರೋಪಿಗಳು, ಆ ಫೋಟೋವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಮೊದಲಿಗೆ ಮಹಿಳೆಯಿಂದ 2 ಪವನ್ ತೂಕದ ಚಿನ್ನದ ಸರ, ಉಂಗುರ ಹಾಗೂ 15,000 ರೂ. ನಗದನ್ನು ಕಸಿದುಕೊಂಡಿದ್ದಾರೆ. ಬಳಿಕ ಆಕೆಯ ಪುರುಷ ಸ್ನೇಹಿತನಿಂದ 40,000 ರೂ. ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರವೂ ಹೆಚ್ಚಿನ ಹಣ ಮತ್ತು ಚಿನ್ನಾಭರಣ ನೀಡುವಂತೆ ನಿರಂತರ ಬೆದರಿಕೆ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು, ಇನ್ಸ್‌ಪೆಕ್ಟರ್ ಪಿ. ಪ್ರಮೋದ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಐವರನ್ನೂ ಬಂಧಿಸಿದ್ದಾರೆ

Continue Reading

arrest

6 ವರ್ಷಗಳಿಂದ ವಿದೇಶದಲ್ಲಿದ್ದ ವಾರೆಂಟ್ ಆರೋಪಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್: ಬಂಟ್ವಾಳ ಪೊಲೀಸರ ಕಾರ್ಯಾಚರಣೆ

Published

on

ಮಂಗಳೂರು: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಬಜಾಲ್‌ನಂತೂರು ನಿವಾಸಿ ಮಹಮ್ಮದ್ ನೌಫಲ್ @ ಸಫಾರಿ ನೌಫಲ್ (34) ದಸ್ತಗಿರಿಯಾದ ಆರೋಪಿ.

ಪ್ರಕರಣದ ವಿವರ: ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ (ಅ.ಕ್ರ: 24/2020, ಐಪಿಸಿ ಕಲಂ: 143, 147, 148, 504, 323, 324, 506, 427 r/w 149 ಮತ್ತು ಕಾವಲು ಕಾಯ್ದೆ) ಸಂಬಂಧಿಸಿದಂತೆ ಈಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದ. ಈತನ ವಿರುದ್ಧ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.

ಸೆಪ್ಟೆಂಬರ್ 15, 2026ರಂದು ವಿದೇಶದಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗದ ಸಹಾಯದಿಂದ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆಪ್ಟೆಂಬರ್ 29, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Continue Reading

arrest

ಬೆಳ್ತಂಗಡಿ: ದಲಿತ ಕುಟುಂಬದ ಜಮೀನಿಗೆ ಅಕ್ರಮ ಪ್ರವೇಶಿಸಿ ಅಶ್ಲೀಲ ಪ್ರದರ್ಶನ – ಆರೋಪಿ ಬಂಧನ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಿಸಿ ಕೃತ್ಯವೆಸಗಿ, ದಲಿತ ಕುಟುಂಬದ ಮಹಿಳೆಯರ ಮುಂದೆ ಪಂಚೆ ಎತ್ತಿ ಮರ್ಮಾಂಗ ಪ್ರದರ್ಶಿಸಿ ವಿಕೃತಿ ಮೆರೆದ ವಿಲಕ್ಷಣ ಪ್ರಕರಣ ನಡೆದಿದ್ದು, ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪಟ್ಟಾಡಿ ಮನೆಯ ಅಬ್ದುಲ್ ಹನೀಫ್ ಹುಸೇನ್ (50) ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಪಡ್ಯಾರಬೆಟ್ಟು ಎಂಬಲ್ಲಿ ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸ್ತವ್ಯವಿದ್ದು ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದ ಪರಿಶಿಷ್ಟ ಜಾತಿಯ ಕುಟುಂಬದ ಸ್ವಾಧೀನದ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿ ಹಾಕಿ ಕುಟುಂಬ ಕೃಷಿ ಕಾರ್ಯದಲ್ಲಿ ತೊಡಗಿತ್ತು.

ಸೆ.7 ರಂದು ಸ್ಥಳೀಯ ನಿವಾಸಿ ಹನೀಫ್ ಎಂಬಾತ ಏಕಾಏಕಿ ಆ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ, ಜಾತಿ ನಿಂದನೆ ಮಾಡಿ ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಡ ಕುಟುಂಬ ಹಾಕಿದ್ದ ಸಿಮೆಂಟ್ ಬೇಲಿ ಕಂಬ ಹಾಗೂ ತಂತಿ ಬೇಲಿಯನ್ನು ಕಿತ್ತೆಸೆದು, ಅಡಿಕೆ ಹಾಗೂ ಬಾಳೆ ಗಿಡಗಳನ್ನು ಮುರಿದು ದಾಂಧಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಕೆಲಸದಲ್ಲಿ ತೊಡಗಿದ್ದ ದಲಿತ ಕುಟುಂಬದ ಮಹಿಳೆಯರು ದಾಂಧಲೆಯ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಆರೋಪಿ ಹನೀಫ್ ಮಹಿಳೆಯರ ಎದುರು ಬಂದು ತಾನು ಉಟ್ಟಿದ್ದ ಪಂಚೆಯನ್ನು ಎತ್ತಿ ಒಳ ಉಡುಪನ್ನು ಜಾರಿಸಿ ತನ್ನ ಗುಪ್ತಾಂಗವನ್ನು ತೋರಿಸುತ್ತಾ ಸಾರ್ವಜನಿಕವಾಗಿ ವಿಕೃತಿಯನ್ನು ಮೆರೆದಿದ್ದಾನೆ. “ನಿಮ್ಮನ್ನು ಇದರಿಂದಲೇ ಅತ್ಯಾಚಾರ ಮಾಡುತ್ತೇನೆ, ಈ ಜಾಗ ಬಿಟ್ಟು ಹೋಗದಿದ್ದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಮಹಿಳೆಯರನ್ನು ಬೆನ್ನಟ್ಟಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರು ಮತ್ತು ಬಂಧನ:

ಈತನ ವಿಕೃತಿಯಿಂದ ಭಯಗೊಂಡ ಬಡ ಕುಟುಂಬವು ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೇಣೂರು ಪೊಲೀಸ್ ಠಾಣೆಗೆ ತೆರಳಿ ವಿಡಿಯೋ ಚಿತ್ರೀಕರಣದ ದೃಶ್ಯಾವಳಿ ಸಾಕ್ಷ್ಯಾಧಾರಗಳೊಂದಿಗೆ ಸೆ.8 ರಂದು ದೂರು ನೀಡಿದೆ.

ದೂರಿನ ಅನ್ವಯ ವೇಣೂರು ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಹಾಗೂ ಬಿಎನ್ಎಸ್ 329(3), 352, 351(2), 75(1), 324(4) ರಂತೆ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ವೇಣೂರು ಪೊಲೀಸರು ಆರೋಪಿಯನ್ನು ಸಂಜೆ ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

40 ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಬಡ ಪರಿಶಿಷ್ಟ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ, ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ ಆರೋಪಿಗೆ ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಕಾನೂನಿನ ತಕ್ಕ ಪಾಠ ಕಲಿಸಿದಂತಾಗಿದ್ದು, ಈ ಹೋರಾಟಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

Trending

Copyright © 2025 Deevatige