Connect with us

Bantawala

ಬಿಲ್ಲವ ಸಮಾಜಕ್ಕೆ ಅವಹೇಳನ: ಆರೋಪಿ ಮಹಿಳೆ ಅನಿತಾ ಕಾಸರಗೋಡು ವಿರುದ್ಧ ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಕಾನೂನು ಕ್ರಮಕ್ಕೆ ತೀವ್ರ ಆಗ್ರಹ

Published

on

ಬಂಟ್ವಾಳ/ಬೆಳ್ತಂಗಡಿ: ಕರಾವಳಿಯ ಪ್ರತಿಷ್ಠಿತ ಹಾಗೂ ಧೀಮಂತ ಸಮಾಜವಾದ ಬಿಲ್ಲವ ಸಮುದಾಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೀಳಾಗಿ ಮಾತನಾಡಿ, ಅತ್ಯಂತ ಅವಹೇಳನಕಾರಿ ಪದಗಳನ್ನು ಬಳಸಿ ವಿಡಿಯೋ ಹರಿಬಿಟ್ಟಿರುವ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ಧ ಕರಾವಳ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಬಿಲ್ಲವ ಸಂಘಟನೆಗಳು ದೂರು ಹಾಗೂ ಮನವಿ ಸಲ್ಲಿಸಿವೆ.

ಬಂಟ್ವಾಳದಲ್ಲಿ ಹಕ್ಕೋತ್ತಾಯ ಹಾಗೂ ಖಂಡನಾ ನಿರ್ಣಯ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಅಧ್ಯಕ್ಷ ಭುವನೇಶ್ ಪಚಿನಡ್ಕ ಇವರ ನೇತೃತ್ವದಲ್ಲಿ, ತಾಲೂಕಿನ ವಿವಿಧ ಬಿಲ್ಲವ ಸಂಘಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಬೃಹತ್ ಹಕ್ಕೋತ್ತಾಯ ಮಂಡಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ನಾಯಕ ಹರಿಕೃಷ್ಣ ಬಂಟ್ವಾಳರವರು ಆರೋಪಿ ಮಹಿಳೆಯ ವಿರುದ್ಧ ಖಂಡನಾ ನಿರ್ಣಯದ ಹಕ್ಕೋತ್ತಾಯವನ್ನು ಮಂಡಿಸಿದರು. ತದನಂತರ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರಿಗೆ ಸಮಾಜದ ಪರವಾಗಿ ಅಧಿಕೃತ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರಿಗೂ ಮನವಿ ನೀಡಿ, ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಒಂದು ಸಮುದಾಯವನ್ನು ಹೀಯಾಳಿಸುವ ಇಂತಹ ವ್ಯಕ್ತಿಗಳ ವಿರುದ್ಧ ತಕ್ಷಣವೇ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು.

ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಬೂಡಾ (BUDA) ಅಧ್ಯಕ್ಷರು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಬೇಬಿ ಕುಂದರ್, ತಾಲೂಕು ಸಂಘದ ಮಾಜಿ ಅಧ್ಯಕ್ಷರುಗಳು, ಸಿದ್ಧಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಕಾರ್ಯದರ್ಶಿ ರತ್ನಾಕರ್ ಮದಂಗೋಡಿ, ಕೋಶಾಧಿಕಾರಿ ಯೋಗೀಶ್ ಕೇರ್ನಡೆ, ಉಪಾಧ್ಯಕ್ಷ ಸತೀಶ್ ಪೂಜಾರಿ, ಜಗದೀಶ್ ಕೊಯಿಲ, ಪ್ರಭಾಕರ್ ಪೂಜಾರಿ ಮೈರೆಬೆಟ್ಟು, ಗಣೇಶ್ ಪೂಜಾರಿ ದೇವಸ, ಮಹಿಳಾ ಸಮಿತಿಯ ಜಲಜ ಡಿ. ಪೂಜಾರಿ, ಸುಶೀಲ ಸುರೇಶ್ ಕೊಳಕ್ಕೆಬೈಲ್, ಕರ್ಪೆ ಗ್ರಾಮ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ, ರಘು ಪೂಜಾರಿ ಕುಪ್ಪೆಟ್ಟು, ಉಮೇಶ್ ಪೂಜಾರಿ ಬೊಲ್ಲಿ, ದಾಮೋದರ ಪೂಜಾರಿ ಸಿದ್ಧಕಟ್ಟೆ ಸೇರಿದಂತೆ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ನೂರಾರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಬೆಳ್ತಂಗಡಿಯಲ್ಲೂ ದೂರು ದಾಖಲು: ಬಿಲ್ಲವ ಸಮಾಜಕ್ಕೆ ಅವಮಾನ ಮಾಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯಲ್ಲೂ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಲಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ವಿಡಿಯೋಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿಯ ಬಿಲ್ಲವ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.


ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಕುಳ ಕಂದಾಯ ಕಛೇರಿಯಲ್ಲಿ ಧರಣ್ ದರ್ಭಾರ್..ನಾಗರಿಕರು ಹೈರಾಣ..ಜಿಲ್ಲಾಧಿಕಾರಿಗೆ ದೂರು..

Published

on

ಬಂಟ್ವಾಳ: ತಾಲೂಕಿನ ಕುಳ ಗ್ರಾಮದ ಆಡಳಿತ ಅಧಿಕಾರಿಯ (VA) ಕಚೇರಿಯು ಸಾರ್ವಜನಿಕರ ಸೇವೆಗೆ ಇರಬೇಕಾದ ಸರ್ಕಾರಿ ಕಚೇರಿಯೋ ಅಥವಾ ಖಾಸಗಿ ವ್ಯಕ್ತಿಗಳ ಹಣ ವಸೂಲಿ ಕೇಂದ್ರವೋ ಎನ್ನುವ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕಾಡಲಾರಂಭಿಸಿದೆ. ಕಚೇರಿಯೊಳಗೆ ಧರಣ್ ಮಾಣಿ ಎಂಬ ಖಾಸಗಿ ಬ್ರೋಕರ್‌ನನ್ನು ಕಾನೂನುಬಾಹಿರವಾಗಿ ಕೂರಿಸಿಕೊಂಡು, ಅಮಾಯಕ ಗ್ರಾಮೀಣ ಜನರಿಂದ ಹಣ ಸುಲಿಗೆ ಮಾಡುತ್ತಿರುವ ಜಿಗಣೆ ದಂಧೆ ಬೆಳಕಿಗೆ ಬಂದಿದೆ.

ಕಚೇರಿ ಕೆಲಸಕ್ಕೆ ಬಂದರೆ ಜೇಬಿಗೆ ಕತ್ತರಿ!

ಕುಳ ಮತ್ತು ಇಡ್ಕಿದು ಜೋಡು ಗ್ರಾಮಗಳಾಗಿದ್ದು, ಇಲ್ಲಿನ ಕಂದಾಯ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಬಡ, ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಈ ದಲ್ಲಾಳಿ ಜಾಲ ಕಾರ್ಯಾಚರಣೆ ನಡೆಸುತ್ತಿದೆ. ಕಚೇರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಂದ ರಾಜಾರೋಷವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಬೇಡಿಕೆಯಿಟ್ಟಷ್ಟು ಹಣ ನೀಡದಿದ್ದರೆ, ಅಂತವರ ಫೈಲ್‌ಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಸಿ, ಜನ ಸಾಮಾನ್ಯರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಕುಳ ಗ್ರಾಮಸ್ಥರು ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲ್ಲಾಳಿಗೆ ಗ್ರಾಮ ಸಹಾಯಕ ರಾಘವನ ‘ಶ್ರೀರಕ್ಷೆ’!

ಈ ಇಡೀ ಅಕ್ರಮ ದಂಧೆಯ ಹಿಂದೆ ಕುಳ ಗ್ರಾಮದ ಸಹಾಯಕನಾಗಿರುವ ಇಡೀದು ಗ್ರಾಮದ ರಾಘವ ಗೌಡ ಎಂಬಾತನ ಪೂರ್ಣ ಶ್ರೀರಕ್ಷೆ ಹಾಗೂ ಶಾಮೀಲಾತಿ ಇರುವುದು ಸಾಕ್ಷ್ಯಸಮೇತ ಬಹಿರಂಗವಾಗಿದೆ. ದಿನಾಂಕ 08/06/2026 ರಂದು ಬೆಳಿಗ್ಗೆ 9:18 ರ ಸುಮಾರಿಗೆ ಸ್ಥಳೀಯ ನಾಗರಿಕರಾದ ಸಚಿನ್ ಉರಿಮಜಲು ಅವರು ಕಚೇರಿಗೆ ಭೇಟಿ ನೀಡಿದಾಗ, ಗ್ರಾಮ ಸಹಾಯಕನ ಅಧಿಕೃತ ಪೀಠದಲ್ಲೇ ಈ ಬ್ರೋಕರ್ ಧರಣ್ ಆಸೀನನಾಗಿ ದರ್ಬಾರ್ ನಡೆಸುತ್ತಿದ್ದ ದೃಶ್ಯ ಕಂಡುಬಂದಿದೆ. ಇದನ್ನು ಸಚಿನ್ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯತ್ನಿಸಿದಾಗ, ಗ್ರಾಮ ಸಹಾಯಕ ರಾಘವ ತಕರಾರು ಎಬ್ಬಿಸಿದ್ದಲ್ಲದೆ, ಕಚೇರಿಯ ಫೈಲ್/ಪುಸ್ತಕವನ್ನು ಮುಖಕ್ಕೆ ಅಡ್ಡ ಹಿಡಿದು ಅಕ್ರಮವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದಾನೆ!

ತನ್ನನ್ನು ವಿಎ (ಗ್ರಾಮ ಆಡಳಿತ ಅಧಿಕಾರಿ) ಮತ್ತು ರಾಘವ ಅವರೇ ಇಲ್ಲಿಗೆ ನೇಮಿಸಿದ್ದಾರೆ ಎಂದು ಸ್ವತಃ ದಲ್ಲಾಳಿ ಧರಣ್ ಒಪ್ಪಿಕೊಂಡಿರುವುದು ಕಂದಾಯ ಇಲಾಖೆಯೊಳಗಿನ ಭ್ರಷ್ಟಾಚಾರದ ಜಾಲವನ್ನು ಬಿಚ್ಚಿಟ್ಟಿದೆ.

ಜಾರಿಕೊಂಡ ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕುಮಾರ್!

ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬ ಕುರ್ಚಿ ಹಾಕಿ ದರ್ಬಾರ್ ನಡೆಸುತ್ತಿರುವ ಬಗ್ಗೆ ಪತ್ರಿಕೆಯು ಗ್ರಾಮ ಆಡಳಿತ ಅಧಿಕಾರಿ (VA) ಅನಿಲ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಅವರು ಜಾರಿಕೊಳ್ಳುವ ಉತ್ತರ ನೀಡಿದ್ದಾರೆ. “ನಾನು ಕುಳ ಗ್ರಾಮದಲ್ಲಿ ವಾರಕ್ಕೆ ಎರಡು ದಿನ ಮಾತ್ರ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಉಳಿದ ದಿನಗಳಲ್ಲಿ ಗ್ರಾಮ ಸಹಾಯಕ ರಾಘವ ಇರುತ್ತಾರೆ. ಕಚೇರಿಯೊಳಗೆ ದಲ್ಲಾಳಿ ಇರುವ ಬಗ್ಗೆ ನನಗೆ ತಿಳಿದಿಲ್ಲ, ನಾನು ಯಾರನ್ನೂ ನೇಮಿಸಿಲ್ಲ” ಎಂದು ದಿನಾಂಕ 10/06/2026 ರಂದು ಹೇಳಿಕೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದಲೇ ಇಂತಹ ದಲ್ಲಾಳಿಗಳು ಸರ್ಕಾರಿ ಕಚೇರಿಗಳನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.

ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು: ಹೋರಾಟದ ಎಚ್ಚರಿಕೆ

ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಬ್ರೋಕರ್ ಧರಣ್‌ನನ್ನು ತಕ್ಷಣವೇ ಕಚೇರಿಯಿಂದ ತೆರವುಗೊಳಿಸಬೇಕು ಮತ್ತು ಆತನಿಗೆ ಕಚೇರಿಯೊಳಗೆ ಅಕ್ರಮವಾಗಿ ನೆಲೆಸಲು ಆಶ್ರಯ ನೀಡಿದ ಗ್ರಾಮ ಸಹಾಯಕ ರಾಘವ ವಿರುದ್ಧ ತಕ್ಷಣವೇ ಶಿಸ್ತು ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೂರುದಾರರಾದ ಸಚಿನ್ ಉರಿಮಜಲು ಅವರು ಬಂಟ್ವಾಳ ತಹಶೀಲ್ದಾರರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಸಹಾಯಕ ಕಮಿಷನರ್‌ ಅವರಿಗೆ ಜಿಪಿಎಸ್ ಫೋಟೋ ಸಾಕ್ಷ್ಯಗಳ ಸಮೇತ ಲಿಖಿತ ದೂರು ಸಲ್ಲಿಸಿದ್ದಾರೆ.

“ಸರ್ಕಾರಿ ಕಚೇರಿಯನ್ನು ಇವರು ತಮ್ಮ ಹಿರಿಯರ ಖಾಸಗಿ ಆಸ್ತಿ ಎಂದುಕೊಂಡಿದ್ದಾರೆಯೇ? ಕೂಡಲೇ ಈ ಭ್ರಷ್ಟ ಜಾಲದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಾಧ್ಯಮ ಮಿತ್ರರನ್ನು ಕರೆಸಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ದೂರುದಾರರು ಎಚ್ಚರಿಸಿದ್ದಾರೆ.




Continue Reading

accident

ಮಾಣಿ ಸಮೀಪ ನಿಯಂತ್ರಣ ತಪ್ಪಿ ಚರಂಡಿಗೆ ಜಿಗಿದ ಇನ್ನೋವಾ ಕಾರು;ತಪ್ಪಿದ ಭೀಕರ ಪ್ರಾಣಾಪಾಯ

Published

on

ಮಾಣಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಅಳಿರಾ ಎಂಬಲ್ಲಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು (KA 19 Z 3466) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಫುಟ್‌ಪಾತ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯ ಆಳವಾದ ಚರಂಡಿಯನ್ನು ಜಿಗಿದು, ಪಕ್ಕದಲ್ಲಿದ್ದ ಬಾಳೆ ಗಿಡಗಳ ಗುಂಟೆಗೆ ಬಡಿದು ನಿಂತಿದೆ.

ಅದೃಷ್ಟವಶಾತ್ ಬಚಾವ್

ಅಪಘಾತದ ಸಮಯದಲ್ಲಿ ಕಾರಿನಲ್ಲಿ ನಾಲ್ಕು ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ, ಅಪಘಾತದ ತೀವ್ರತೆಗೆ ಇನ್ನೋವಾ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸದ್ಯ ಕ್ರೇನ್ ಮುಖಾಂತರ ಕಾರನ್ನು ಮೇಲಕ್ಕೆತ್ತಿ ರಸ್ತೆಗೆ ತರುವ ಕಾರ್ಯಾಚರಣೆ ನಡೆಯುತ್ತಿದೆ.

ಒಂದೇ ದಿನ ಎರಡು ಅಪಘಾತ: ಸವಾರರಲ್ಲಿ ಆತಂಕ

ಇದೇ ರಾಷ್ಟ್ರೀಯ ಹೆದ್ದಾರಿಯ ಕೇವಲ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಷ್ಟೇ ಮತ್ತೊಂದು ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಮಧ್ಯಾಹ್ನ ಮತ್ತೊಂದು ಭೀಕರ ಅಪಘಾತ ಸಂಭವಿಸಿರುವುದು ಸ್ಥಳೀಯ ಹಾಗೂ ಹೆದ್ದಾರಿ ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಾಣಿ ಪರಿಸರದಲ್ಲಿ ಹೆದ್ದಾರಿ ಸಂಚಾರದ ವೇಳೆ ಚಾಲಕರು ಹೆಚ್ಚಿನ ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




Continue Reading

accident

ಗಡಿಯಾರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು; ನಾಲ್ವರಿಗೆ ಗಂಭೀರ ಗಾಯ, ಚಾಲಕ ದುರ್ಮರಣ

Published

on

ಬಂಟ್ವಾಳ/ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಮತ್ತು ಉಪ್ಪಿನಂಗಡಿ ಮಧ್ಯದ ಗಡಿಯಾರ ಎಂಬಲ್ಲಿ ಇಂದು ಮಧ್ಯಾಹ್ನ ಭೀಕರ ಕಾರು ಅಪಘಾತವೊಂದು ಸಂಭವಿಸಿದ್ದು, ಚಾಲಕ ಸಾವನ್ನಪ್ಪಿದ್ದಾರೆ. ಮಂಗಳೂರಿನಿಂದ ಹಾಸನ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಹೆದ್ದಾರಿಯಲ್ಲಿ ಕೇಳಿಬಂದ ಭೀಕರ ಸದ್ದು: ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಡಿಕ್ಕಿಯ ರಭಸಕ್ಕೆ ದೊಡ್ಡ ಮಟ್ಟದ ಸದ್ದು ಕೇಳಿಬಂದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು (ನಂಬರ್: KA 12 N 6668) ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸದ್ದು ಕೇಳಿ ಸ್ಥಳೀಯರು ಹಾಗೂ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದಾರೆ.

ಹಾಸನ ಮೂಲದ ಪ್ರಯಾಣಿಕರು: ಕಾರಿನಲ್ಲಿ ಹಾಸನ ಮೂಲದ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ನಾಲ್ವರಿಗೂ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಕಾರು ಚಾಲಕನ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ಗಾಯಾಳುಗಳ ಸಂಪೂರ್ಣ ವಿವರ ಹಾಗೂ ಅಪಘಾತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.




Continue Reading

Trending

Copyright © 2025 Deevatige

error: Content is protected !!