Connect with us

national

ತಿಂಗಳಿಗೆ 28 ದಿನದ ರೀಚಾರ್ಜ್ ಯಾಕೆ?’: ಸಂಸತ್ತಿನಲ್ಲಿ ರಾಘವ್ ಚಡ್ಡಾ ಪ್ರಶ್ನೆ

Published

on

ಮೊಬೈಲ್ ಬಳಕೆದಾರರು ಎದುರಿಸುತ್ತಿರುವ ರೀಚಾರ್ಜ್ ಪ್ಲಾನ್ ಸಮಸ್ಯೆಗಳ ಕುರಿತು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಟೆಲಿಕಾಂ ಕಂಪನಿಗಳು ನೀಡುವ 28 ದಿನಗಳ ವ್ಯಾಲಿಡಿಟಿ ಪ್ಲಾನ್‌ನಿಂದಾಗಿ ಸಾಮಾನ್ಯ ಜನರಿಗೆ ಆಗುತ್ತಿರುವ ನಷ್ಟದ ಬಗ್ಗೆ ಅವರು ವಿವರವಾಗಿ ಮಾತನಾಡಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಸಂಸತ್ತಿನ ‘ಶೂನ್ಯ ವೇಳೆ’ಯಲ್ಲಿ (Zero Hour) ಈ ವಿಷಯವನ್ನು ಪ್ರಸ್ತಾಪಿಸಿದರು. ದೇಶದ ಸುಮಾರು 125 ಕೋಟಿ ಮೊಬೈಲ್ ಬಳಕೆದಾರರಲ್ಲಿ 90% ಕ್ಕಿಂತ ಹೆಚ್ಚು ಮಂದಿ ಪ್ರಿಪೇಯ್ಡ್ ಗ್ರಾಹಕರಾಗಿದ್ದಾರೆ. ಟೆಲಿಕಾಂ ಕಂಪನಿಗಳು 30 ದಿನಗಳ ಬದಲಾಗಿ 28 ದಿನಗಳ ಪ್ಲಾನ್ ನೀಡುವ ಮೂಲಕ ಗ್ರಾಹಕರಿಂದ ವರ್ಷಕ್ಕೆ ಒಂದು ಹೆಚ್ಚುವರಿ ರೀಚಾರ್ಜ್ (ಒಟ್ಟು 13 ಬಾರಿ) ಮಾಡಿಸಿಕೊಳ್ಳುತ್ತಿರುವುದನ್ನು ಅವರು ‘ಡಿಜಿಟಲ್ ಲೂಟಿ’ ಎಂದು ಕರೆದಿದ್ದಾರೆ. ಕೇವಲ ರೀಚಾರ್ಜ್ ಮುಗಿದ ತಕ್ಷಣ ಇನ್ಕಮಿಂಗ್ ಕರೆಗಳನ್ನು ನಿಲ್ಲಿಸುವುದರಿಂದ ಜನಸಾಮಾನ್ಯರಿಗೆ, ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ಆಗುವ ತೊಂದರೆಗಳ ಬಗ್ಗೆ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

30 ದಿನಗಳ ಬದಲಾಗಿ 28 ದಿನಗಳ ಪ್ಲಾನ್ ನೀಡುವ ಮೂಲಕ ಗ್ರಾಹಕರಿಂದ ವರ್ಷಕ್ಕೆ ಒಂದು ಹೆಚ್ಚುವರಿ ರೀಚಾರ್ಜ್
ವರ್ಷಕ್ಕೆ 12 ತಿಂಗಳುಗಳಿದ್ದರೂ, 28 ದಿನಗಳ ರೀಚಾರ್ಜ್ ಪ್ಲಾನ್‌ನಿಂದಾಗಿ ಗ್ರಾಹಕರು ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡಬೇಕಾದ ಪರಿಸ್ಥಿತಿ ಇದೆ. ಕಂಪನಿಗಳು 30 ದಿನಗಳ ಬದಲಾಗಿ 28 ದಿನಗಳ ಲೆಕ್ಕಾಚಾರ ಮಾಡಿ ಗ್ರಾಹಕರಿಂದ ಒಂದು ತಿಂಗಳ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿವೆ ಎಂದು ಅವರು ಆರೋಪಿಸಿದರು. ರೀಚಾರ್ಜ್ ಅವಧಿ ಮುಗಿದ ತಕ್ಷಣ ಔಟ್‌ಗೋಯಿಂಗ್ ಕರೆಗಳ ಜೊತೆಗೆ ಇನ್ಕಮಿಂಗ್ ಕರೆಗಳನ್ನು ಕೂಡ ಸ್ಥಗಿತಗೊಳಿಸುವುದು ಸರಿಯಲ್ಲ. ಫೋನ್ ಮತ್ತು ಸಿಮ್ ಕಾರ್ಡ್ ಗ್ರಾಹಕರದ್ದಾಗಿರುವಾಗ, ಇನ್ಕಮಿಂಗ್ ಸೇವೆಯನ್ನು ನಿಲ್ಲಿಸುವುದು ಜನರ ‘ಸಂವಹನ ಹಕ್ಕನ್ನು’ ಕಸಿದುಕೊಂಡಂತೆ ಎಂದು ಅವರು ಪ್ರತಿಪಾದಿಸಿದರು. ಇಂದಿನ ದಿನಗಳಲ್ಲಿ ಮೊಬೈಲ್ ಸಂಖ್ಯೆ ಎಂಬುದು ಕೇವಲ ಮಾತನಾಡುವ ಸಾಧನವಲ್ಲ, ಅದು ಬ್ಯಾಂಕ್ ಒಟಿಪಿ, ಯುಪಿಐ ಪಾವತಿ ಮತ್ತು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಒಂದು ಡಿಜಿಟಲ್ ಗುರುತಾಗಿದೆ. ರೀಚಾರ್ಜ್ ಮುಗಿದ ತಕ್ಷಣ ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.

ರಾಘವ್ ಚಡ್ಡಾ ಅವರ ಪ್ರಮುಖ ಬೇಡಿಕೆಗಳು:
ಪ್ರತಿ ರೀಚಾರ್ಜ್ ನಂತರ ಕನಿಷ್ಠ ಒಂದು ವರ್ಷದವರೆಗೆ ಇನ್ಕಮಿಂಗ್ ಸೇವೆ ಮತ್ತು ಎಸ್‌ಎಮ್‌ಎಸ್ ಸೌಲಭ್ಯ ಉಚಿತವಾಗಿರಬೇಕು. ರೀಚಾರ್ಜ್ ಮಾಡದಿದ್ದರೂ ಮೊಬೈಲ್ ಸಂಖ್ಯೆಯನ್ನು ಕನಿಷ್ಠ ಮೂರು ವರ್ಷಗಳವರೆಗೆ ಡಿಆಕ್ಟಿವೇಟ್ ಮಾಡಬಾರದು. ಕಡಿಮೆ ಆದಾಯದವರಿಗಾಗಿ ಕೇವಲ ಇನ್ಕಮಿಂಗ್ ಕರೆಗಳಿಗಾಗಿ ಕಡಿಮೆ ಬೆಲೆಯ ಪ್ಲಾನ್‌ಗಳನ್ನು (ಉದಾಹರಣೆಗೆ 10 ರೂಪಾಯಿಗೆ 180 ದಿನಗಳು) ಪರಿಚಯಿಸಬೇಕು. ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೆ ಖಾತೆ ಹೇಗೆ ರದ್ದಾಗುವುದಿಲ್ಲವೋ ಅಥವಾ ವೋಟ್ ಹಾಕದಿದ್ದರೆ ವೋಟರ್ ಐಡಿ ಹೇಗೆ ರದ್ದಾಗುವುದಿಲ್ಲವೋ, ಹಾಗೆಯೇ ಒಂದು ರೀಚಾರ್ಜ್ ಮಾಡದಿದ್ದರೆ ಮೊಬೈಲ್ ಸಂಖ್ಯೆಯನ್ನು ಕಿತ್ತುಕೊಳ್ಳುವುದು ಸರಿಯಲ್ಲ” ಎಂದು ಅವರು ಮಾರ್ಮಿಕವಾಗಿ ನುಡಿದರು.
ಕಡಿಮೆ ಬಳಕೆಯ ಗ್ರಾಹಕರು, ಹಿರಿಯ ನಾಗರಿಕರು ಅಥವಾ ವಿದೇಶದಲ್ಲಿರುವ ಜನರು ರೀಚಾರ್ಜ್ ಮಾಡುವುದನ್ನು ತಪ್ಪಿಸಿದರೆ ಸಿಮ್ ನಿಷ್ಕ್ರಿಯಗೊಳ್ಳುವ ಅಪಾಯವಿದೆ. ಡಿಜಿಟಲ್ ಪಾವತಿ ವೇದಿಕೆಗಳ ಮೇಲಿನ ಅವಲಂಬನೆಯು ಸ್ಮಾರ್ಟ್‌ಫೋನ್‌ಗಳು ಅಥವಾ ವಿಶ್ವಾಸಾರ್ಹ ಇಂಟರ್ನೆಟ್ ಇಲ್ಲದವರಿಗೆ ಪ್ರವೇಶವನ್ನು ಮಿತಿಗೊಳಿಸುತ್ತದೆ.

Continue Reading
Advertisement

Agriculture

ಪುತ್ತೂರಿನ 1,000 ಮಂದಿಗೆ ಉದ್ಯೋಗ ನೀಡಿದರೆ ಕ್ಯಾಂಪ್ಕೋಗೆ 20 ಎಕರೆ ನಿವೇಶನ ಮಂಜೂರು: ಶಾಸಕ ಅಶೋಕ್ ರೈ ಭರವಸೆ

Published

on

ವಿಟ್ಲ: ಕ್ಯಾಂಪ್ಕೋ ಸಂಸ್ಥೆಯು ಪುತ್ತೂರು ಭಾಗದ ಸುಮಾರು ಒಂದು ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಲ್ಲಿ, ಸಂಸ್ಥೆಯ ಅಭಿವೃದ್ಧಿಗಾಗಿ 20 ಎಕರೆ ನಿವೇಶನವನ್ನು ಮಂಜೂರು ಮಾಡಿಸಿಕೊಡುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಘೋಷಿಸಿದ್ದಾರೆ.

ವಿಟ್ಲದಲ್ಲಿ ಕ್ಯಾಂಪ್ಕೋ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕ್ಯಾಂಪ್ಕೋ ಇಂದು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ಜಿಲ್ಲೆಯ ನೂರಾರು ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಕರಾವಳಿಯ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಪಸರಿಸಿದೆ. ಜಿಲ್ಲೆಯ ಕೃಷಿಕರ ಹಿತರಕ್ಷಣೆಗಾಗಿ ಸಂಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಇಂದು ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿರುವುದಕ್ಕೆ ಕ್ಯಾಂಪ್ಕೋ ಸಂಸ್ಥೆಯೇ ಮುಖ್ಯ ಕಾರಣವಾಗಿದ್ದು, ಒಂದು ವೇಳೆ ಈ ಸಂಸ್ಥೆ ಇಲ್ಲದಿದ್ದರೆ ಅಡಿಕೆ ಮಾರುಕಟ್ಟೆಯ ಪರಿಸ್ಥಿತಿ ಊಹಿಸಲೂ ಸಾಧ್ಯವಿರಲಿಲ್ಲ. ಸರ್ಕಾರಿ ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ದರದಲ್ಲಿ ಅಲ್ಪ ವ್ಯತ್ಯಾಸವಿರಬಹುದಾದರೂ, ರೈತರ ಪಾಲಿಗೆ ಕ್ಯಾಂಪ್ಕೋ ಭದ್ರ ಬುನಾದಿಯಾಗಿದೆ.

ಜಿಲ್ಲೆಯಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದ್ದು, ನಮ್ಮ ಯುವಜನತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಮನಸ್ಸು ಮಾಡಿದರೆ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಿದ್ದು, ಇದಕ್ಕೆ ಅಗತ್ಯವಿರುವ ಭೂಮಿ ಹಾಗೂ ಎಲ್ಲಾ ಸಹಕಾರವನ್ನು ನೀಡಲು ತಾನು ಸಿದ್ಧ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.

Continue Reading

drugs

ಭಾರತಕ್ಕೂ ಎಂಟ್ರಿ ಕೊಟ್ಟಿತೇ ‘ಜಾಂಬಿ ಡ್ರಗ್’? ಚಂಡೀಗಢದಲ್ಲಿ ಡೆಲಿವರಿ ಬಾಯ್ ವಿಲಕ್ಷಣ ವರ್ತನೆ; ವಿಡಿಯೋ ವೈರಲ್!

Published

on

ಅಮೆರಿಕದಂತಹ ದೇಶಗಳನ್ನು ನಡುಗಿಸಿರುವ ಭೀಕರ ‘ಜಾಂಬಿ ಡ್ರಗ್’ (Zombie Drug) ಈಗ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಇದಕ್ಕೆ ಪೂರಕವೆಂಬಂತೆ ಚಂಡೀಗಢದಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಚಂಡೀಗಢದ ಸೆಕ್ಟರ್ 33B ವಸತಿ ಪ್ರದೇಶದಲ್ಲಿ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಬಾಯ್ ಒಬ್ಬರು ಸುಮಾರು 2 ರಿಂದ 2.5 ಗಂಟೆಗಳ ಕಾಲ ರಸ್ತೆಯಲ್ಲೇ ಯಾವುದೇ ಚಲನೆಯಿಲ್ಲದೆ, ಅರೆಪ್ರಜ್ಞಾವಸ್ಥೆಯಲ್ಲಿ ನಿಂತಿದ್ದ ಘಟನೆ ನಡೆದಿದೆ. ಬೆನ್ನಿನ ಮೇಲೆ ಡೆಲಿವರಿ ಬ್ಯಾಗ್ ಹೊತ್ತು, ಬಾಯಲ್ಲಿ ಬೀಡಿ ಇಟ್ಟುಕೊಂಡಿದ್ದ ಈ ಯುವಕ, ಸುತ್ತಮುತ್ತಲಿನ ಯಾವುದೇ ಅರಿವಿಲ್ಲದೆ ಕಲ್ಲಿನಂತೆ ಜಡವಾಗಿ ನಿಂತಿದ್ದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ಬಳಕೆದಾರರು ಇದನ್ನು ಅಮೆರಿಕದಲ್ಲಿ ಜನಜೀವನವನ್ನು ನಾಶಪಡಿಸುತ್ತಿರುವ ಫೆಂಟನಿಲ್ (Fentanyl) ಅಥವಾ ಜಾಂಬಿ ಡ್ರಗ್‌ನ ಪರಿಣಾಮ ಎಂದು ಬಣ್ಣಿಸಿದ್ದಾರೆ. “ಭಾರತಕ್ಕೂ ಈ ಮಾರಕ ಡ್ರಗ್ ಎಂಟ್ರಿ ಕೊಟ್ಟಿದೆಯೇ? ಇದು ನಿಜಕ್ಕೂ ಅಪಾಯಕಾರಿ ಮುನ್ಸೂಚನೆ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಯುವಕನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಏನಿದು ‘ಜಾಂಬಿ ಡ್ರಗ್’?
ಸಾಮಾನ್ಯವಾಗಿ ಪ್ರಾಣಿಗಳಿಗೆ ನೋವು ನಿವಾರಕವಾಗಿ ಬಳಸುವ ಕ್ಸೈಲಜಿನ್ (Xylazine) ಎಂಬ ಟ್ರ್ಯಾಂಕ್ವಿಲೈಜರ್ ಅನ್ನು ‘ಜಾಂಬಿ ಡ್ರಗ್’ ಎಂದು ಕರೆಯಲಾಗುತ್ತದೆ. ಇದನ್ನು ಫೆಂಟನಿಲ್, ಮಾರ್ಫಿನ್ ಅಥವಾ ಹೆರಾಯಿನ್‌ನಂತಹ ಮಾದಕ ವಸ್ತುಗಳೊಂದಿಗೆ ಬೆರೆಸಿ ಸೇವಿಸಿದಾಗ ಮನುಷ್ಯರು ತಮ್ಮ ಪ್ರಜ್ಞೆ ಕಳೆದುಕೊಂಡು, ದೇಹದ ಮೇಲೆ ಹತೋಟಿಯಿಲ್ಲದೆ ವಿಚಿತ್ರವಾಗಿ ವರ್ತಿಸುತ್ತಾರೆ. ಅಮೆರಿಕದಲ್ಲಿ ಈ ಡ್ರಗ್‌ನಿಂದಾಗಿ ಸಾವಿರಾರು ಯುವಕರು ಬೀದಿಗಳಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ವರದಿಯಾಗಿದೆ. ಚಂಡೀಗಢದ ಈ ಘಟನೆ ಮಾದಕ ವ್ಯಸನದ ಪರಿಣಾಮವೋ ಅಥವಾ ಆರೋಗ್ಯ ಸಮಸ್ಯೆಯೋ ಎಂಬುದು ವೈದ್ಯಕೀಯ ವರದಿ ಬಂದ ನಂತರವಷ್ಟೇ ತಿಳಿದುಬರಬೇಕಿದೆ. ಆದರೆ, ಈ ವಿಡಿಯೋ ಮಾತ್ರ ಭಾರತೀಯರಲ್ಲಿ ಹೊಸ ಆತಂಕವನ್ನಂತೂ ಸೃಷ್ಟಿಸಿದೆ.

Continue Reading

award

ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಮಹಿಮಾ ಆರ್. ಕೆ.ಗೆ ರಾಷ್ಟ್ರಮಟ್ಟದ ಪ್ರಥಮ ಬಹುಮಾನ

Published

on

ಧಾರವಾಡ: ಇಲ್ಲಿನ ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ಡೆವಲಪ್ಮೆಂಟ್ ರಿಸರ್ಚ್ (CMDR) ಸಂಸ್ಥೆಯು ಭಾರತ ಮತ್ತು ವಿದೇಶಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಇಂದಿನ ಬದುಕಿಗೆ ಭಾರತೀಯ ಜ್ಞಾನ ಪರಂಪರೆ’ (IKS 2.0) ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಮಹಿಮಾ ಆರ್. ಕೆ. ಪ್ರಥಮ ಸ್ಥಾನ ಗಳಿಸಿದ್ದಾರೆ.

‘ಭಾರತೀಯ ಜ್ಞಾನ ಪರಂಪರೆ ಎಂಬ ಬೆಳಕ ದೀವಟಿಗೆ: ಅವಲೋಕನ’ ಎಂಬ ಶೀರ್ಷಿಕೆಯಡಿ ಮಹಿಮಾ ಅವರು ಮಂಡಿಸಿದ ಪ್ರಬಂಧವು ಒಟ್ಟು 71.33 ಅಂಕಗಳನ್ನು ಪಡೆಯುವ ಮೂಲಕ 10,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಕೈಕ ಕನ್ನಡ ಪ್ರಬಂಧ ಎಂಬ ಹೆಗ್ಗಳಿಕೆಗೆ ಈ ಬರಹ ಪಾತ್ರವಾಗಿರುವುದು ವಿಶೇಷ. ಭಾರತೀಯ ಪರಂಪರೆಯ ಜ್ಞಾನವು ಇಂದಿನ ಆಧುನಿಕ ಬದುಕಿಗೆ ಹೇಗೆ ದೀವಟಿಗೆಯಂತೆ ದಾರಿದೀಪವಾಗಿದೆ ಎಂಬುದನ್ನು ಇವರು ತಮ್ಮ ಪ್ರಬಂಧದಲ್ಲಿ ಸವಿವರವಾಗಿ ವಿಶ್ಲೇಷಿಸಿದ್ದಾರೆ. ಭಾರತೀಯ ಜ್ಞಾನ ಪರಂಪರೆಯ ಮಹತ್ವವನ್ನು ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ವಿಶ್ಲೇಷಿಸಿದ ಇವರ ಬರಹವು ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ವಿಟ್ಲದ ರವಿಶಂಕರ ಕುಳಮರ್ವ ಹಾಗೂ ಇತ್ತಿಚೆಗೆ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ ಪ್ರತಿಷ್ಠಿತ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪಡೆದ ಡಾ. ಮೈತ್ರಿ ಭಟ್ ದಂಪತಿಯ ಪುತ್ರಿಯಾಗಿರುವ ಮಹಿಮಾ, ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Continue Reading

Trending

Copyright © 2025 Deevatige