Connect with us

Educational

ಟಾಪರ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಬದಲಿಗೆ 50,000 ನಗದು

Published

on

ಟಾಪರ್ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದು ಬಂದಿದೆ. ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸಲು ಸರ್ಕಾರವು ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಬದಲಿಗೆ 50,000 ರೂಪಾಯಿಗಳ ನಗದು ಬಹುಮಾನವನ್ನು ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತು ಈಗಾಗಲೇ ಅಧಿಕೃತ ಆದೇಶ ಹೊರಬಿದ್ದಿದ್ದು, ಪ್ರತಿ ಜಿಲ್ಲೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯಲಿದೆ. ತಮಗೆ ದೊರೆತ ಬಹುಮಾನದ ಮೊತ್ತವನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬ ಸ್ವಾತಂತ್ರ‍್ಯವನ್ನು ವಿದ್ಯಾರ್ಥಿಗಳಿಗೇ ನೀಡುವ ಉದ್ದೇಶದಿಂದ ಈ ಹೊಸ ಕ್ರಮವನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಡಿ 2024-25ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ಒಟ್ಟು 758 ವಿದ್ಯಾರ್ಥಿಗಳು ನಗದು ಬಹುಮಾನ ಪಡೆಯಲು ಅರ್ಹರಾಗಿದ್ದಾರೆ. ‘ಗುಣಮಟ್ಟದ ಭರವಸೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಉಪಕ್ರಮ’ ಯೋಜನೆಯ ಅಡಿಯಲ್ಲಿ ಸರ್ಕಾರವು ಸುಮಾರು 325 ಲಕ್ಷ ರೂಪಾಯಿಗಳನ್ನು ಈ ಉದ್ದೇಶಕ್ಕಾಗಿ ಮೀಸಲಿಟ್ಟಿದೆ. ಅರ್ಹ ವಿದ್ಯಾರ್ಥಿಗಳ ವಿವರಗಳನ್ನು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಪಡೆದುಕೊಳ್ಳಲಾಗುತ್ತಿದ್ದು, ಅವರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಆಃಖಿ) ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ.

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆಯಂತೆ ಈ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಸರ್ಕಾರವೇ ಲ್ಯಾಪ್‌ಟಾಪ್‌ಗಳನ್ನು ವಿತರಿಸುತ್ತಿತ್ತು, ಆದರೆ ಈಗ ನಗದು ನೀಡುವುದರಿಂದ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಕಂಪನಿಯ ಲ್ಯಾಪ್‌ಟಾಪ್ ಖರೀದಿಸಲು ಅಥವಾ ಉನ್ನತ ಶಿಕ್ಷಣದ ಇತರ ವೆಚ್ಚಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಸರ್ಕಾರದ ಈ ನಿರ್ಧಾರವು ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಹಲ್ಲೆ: ರ‍್ಯಾಗಿಂಗ್ ಶಂಕೆ, ತನಿಖೆ ಆರಂಭ

Published

on

ಮಂಗಳೂರು ಶ್ರೀನಿವಾಸ್ ಕಾಲೇಜಿನಲ್ಲಿ ರ‍್ಯಾಗಿಂಗ್ ಶಂಕೆ – ಕಪ್ಪು ಶೂ ಧರಿಸಿದ್ದಕ್ಕೆ ಜೂನಿಯರ್‌ಗಳ ಮೇಲೆ ಸೀನಿಯರ್‌ಗಳಿಂದ ಭೀಕರ ಹಲ್ಲೆ!

ಮಂಗಳೂರು, ಆಗಸ್ಟ್ 05: ನಗರದ ಪ್ರತಿಷ್ಠಿತ ಶ್ರೀನಿವಾಸ್ ಕಾಲೇಜಿನಲ್ಲಿ ರ‍್ಯಾಗಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೇವಲ ಕಪ್ಪು ಬಣ್ಣದ ಶೂ ಧರಿಸಿದ್ದರೆಂಬ ಸಣ್ಣ ಕಾರಣಕ್ಕೆ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಸೀನಿಯರ್ ವಿದ್ಯಾರ್ಥಿಗಳ ಗುಂಪು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕಿರಿಯ ವಿದ್ಯಾರ್ಥಿಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೇಲ್ನೋಟಕ್ಕೆ ಇದು ರ‍್ಯಾಗಿಂಗ್ ಪ್ರಕರಣದಂತೆ ಕಂಡುಬರುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಘಟನೆಯ ವಿವರ:

ನಗರದ ಗುಜ್ಜರಕೇರೆ ಪ್ರದೇಶದಲ್ಲಿರುವ ಚಹಾ ಅಂಗಡಿಯೊಂದರ ಬಳಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಪ್ರಥಮ ವರ್ಷದ ಆದರ್ಶ್ ಮತ್ತು ಜಾಸಿನ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೇರಳ ಮೂಲದವರಾಗಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಿರಿಯ ವಿದ್ಯಾರ್ಥಿಗಳು ಕಪ್ಪು ಬಣ್ಣದ ಶೂ ಹಾಕಿಕೊಂಡು ಬಂದಿದ್ದನ್ನೇ ನೆಪವಾಗಿಸಿಕೊಂಡ ದ್ವಿತೀಯ ವರ್ಷದ ಲಾಜಿಸ್ಟಿಕ್ಸ್ ವಿಭಾಗದ ವಿದ್ಯಾರ್ಥಿಗಳ ಗುಂಪು, ಅವರೊಂದಿಗೆ ಗಲಾಟೆ ಮತ್ತು ವಾಗ್ವಾದ ನಡೆಸಿದೆ. ಮಾತಿಗೆ ಮಾತು ಬೆಳೆದು ಸೀನಿಯರ್‌ಗಳು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು – ತನಿಖೆ ಚುರುಕು:

ವಿಷಯ ತಿಳಿಯುತ್ತಿದ್ದಂತೆ ಪಾಂಡೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವಿದ್ಯಾರ್ಥಿಗಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ದ್ವಿತೀಯ ವರ್ಷದ ಲಾಜಿಸ್ಟಿಕ್ಸ್ ವಿಭಾಗದ ಆರು ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಕೇವಲ ವೈಯಕ್ತಿಕ ವೈಷಮ್ಯದಿಂದ ನಡೆದ ಗಲಾಟೆಯೋ ಅಥವಾ ರ‍್ಯಾಗಿಂಗ್‌ಗೆ ಸಂಬಂಧಿಸಿದ ಘಟನೆಯೋ ಎಂಬ ಕುರಿತು ಎಲ್ಲಾ ಆಯಾಮಗಳಲ್ಲೂ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ.

ಪೋಷಕರಲ್ಲಿ ಆತಂಕ – ಸಾರ್ವಜನಿಕರ ಆಕ್ರೋಶ:

ನಗರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತೆ ರ‍್ಯಾಗಿಂಗ್ ಭೂತ ತಲೆಎತ್ತುತ್ತಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಲ್ಲೆ ನಡೆಸಿದ ಆರೋಪಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮತ್ತು ಪೋಷಕರು ತೀವ್ರವಾಗಿ ಆಗ್ರಹಿಸಿದ್ದಾರೆ

Continue Reading

Bantawala

ವಿಟ್ಲ ಪಿಎಂಶ್ರೀ ಸರಕಾರಿ ಪ್ರೌಢಶಾಲೆ ಸಹಶಿಕ್ಷಕಿ ಅಮಾನತು: ಆದೇಶದ ಪ್ರತಿ ಲಭ್ಯ, KAT ಮೊರೆ ಹೋದ ಶಿಕ್ಷಕಿ ಅನ್ನಪೂರ್ಣ

Published

on

ವಿಟ್ಲ / ಮಂಗಳೂರು (ಜುಲೈ 31): ಬಂಟ್ವಾಳ ತಾಲೂಕಿನ ಐತಿಹಾಸಿಕ ಹಾಗೂ ಪ್ರತಿಷ್ಠಿತ ವಿಟ್ಲ ಪಿಎಂಶ್ರೀ ಸರ್ಕಾರಿ ಪ್ರೌಢ ಶಾಲೆಯ (ಆರ್‌ಎಂಎಸ್‌ಎ) ಸಹಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಮಾನತು ಆದೇಶದ ಪ್ರತಿ ಇದೀಗ ಲಭ್ಯವಾಗಿದ್ದು, ಈ ಘಟನೆ ಸ್ಥಳೀಯವಾಗಿ ಹಾಗೂ ಶಾಲಾ ಪೋಷಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಮಾನತು ಆದೇಶದ ಪ್ರಮುಖ ಮುಖ್ಯಾಂಶಗಳು

ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ/ಶಿಸ್ತು ಪ್ರಾಧಿಕಾರಿ ಜಿ.ಎಸ್. ಶಶಿಧರ್ ಅವರು ದಿನಾಂಕ 28-07-2026 ರಂದು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

ದೂರಿನ ಹಿನ್ನೆಲೆ: ಶಾಲಾಭಿವೃದ್ಧಿ ಸಮಿತಿಯ (SDMC) ಪ್ರಾಥಮಿಕ ವಿಭಾಗದ ಅಧ್ಯಕ್ಷ ರವಿಶಂಕರ್ ಸಿ. (06-11-2025) ಹಾಗೂ ಪ್ರೌಢಶಾಲಾ ವಿಭಾಗದ ಉಪಾಧ್ಯಕ್ಷ ಸದಾಶಿವ ಭಟ್ (15-11-2025) ಅವರು ಶಿಕ್ಷಕಿ ವಿರುದ್ಧ ಕರ್ತವ್ಯ ಲೋಪದ ದೂರು ನೀಡಿದ್ದರು.

ವಿಚಾರಣಾ ವರದಿ: ದೂರಿನ ಅನ್ವಯ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ (ದಿನಾಂಕ: 05-01-2026 ಮತ್ತು 24-02-2026) ಶಿಕ್ಷಕಿ ವಿರುದ್ಧ ಸಲ್ಲಿಕೆಯಾಗಿದ್ದ 11 ಅಂಶಗಳ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ವಿಚಾರಣಾಧಿಕಾರಿಗಳು ವರದಿ ನೀಡಿದ್ದಾರೆ.

ನಿಯಮಾವಳಿ ಉಲ್ಲಂಘನೆ: ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021ರ ಉಪನಿಯಮ 3(i)(ii) ರಂತೆ ಶಿಕ್ಷಕಿ ಅನ್ನಪೂರ್ಣ ಅವರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ.

ಅಮಾನತು ಕ್ರಮ: ಕರ್ನಾಟಕ ನಾಗರಿಕ ಸೇವಾ ನಿಯಮ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 2021ರ ಉಪನಿಯಮ 10(1)ಡಿ ರಂತೆ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಷರತ್ತುಗಳು: ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ನಿಯಮಾನುಸಾರ ಜೀವನಾಂಶ ಭತ್ಯೆಗೆ ಅವರು ಅರ್ಹರಿರುತ್ತಾರೆ.

ನ್ಯಾಯಮಂಡಳಿ (KAT) ಮೊರೆ ಹೋದ ಶಿಕ್ಷಕಿ

ತಮ್ಮ ಮೇಲಿನ ಅಮಾನತು ಆದೇಶವನ್ನು ಪ್ರಶ್ನಿಸಿ ಪುತ್ತೂರು ನಿವಾಸಿಯಾಗಿರುವ ಶಿಕ್ಷಕಿ ಅನ್ನಪೂರ್ಣ ಅವರು ಬೆಂಗಳೂರಿನ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದಾರೆ. ತಮ್ಮ ಮೇಲಿನ 11 ಆರೋಪಗಳು ಸಂಪೂರ್ಣ ಆಧಾರರಹಿತ ಹಾಗೂ ಅಪವಾದದಿಂದ ಕೂಡಿವೆ ಎಂದು ಅವರು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಅಮಾನತಾದ ಶಿಕ್ಷಕಿಯು ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ/ಶಿಸ್ತು ಪ್ರಾಧಿಕಾರಿ ಜಿ.ಎಸ್. ಶಶಿಧರ್, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಶಾಲಾಭಿವೃದ್ಧಿ ಸಮಿತಿಯ (SDMC) ಪ್ರಾಥಮಿಕ ವಿಭಾಗದ ಅಧ್ಯಕ್ಷ ರವಿಶಂಕರ್ ಸಿ. ಮತ್ತು ಇತರರ ವಿರುದ್ಧ ಕಾನೂನು ಸಮರ ಸಾರಿದ್ದಾರೆ.

ಒಳ ರಾಜಕೀಯದ ಆರೋಪ: ಪೋಷಕರಲ್ಲಿ ಅಸಮಾಧಾನ

ಒಂದು ಕಾಲದಲ್ಲಿ ‘ಸರ್ಕಾರಿ ಮಾದರಿ ಶಾಲೆ’ ಎನಿಸಿಕೊಂಡು ಶತಮಾನೋತ್ಸವ ಆಚರಿಸಿರುವ ಈ ಸಂಸ್ಥೆಯಲ್ಲಿ 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಏಕಾಏಕಿ ಶಿಕ್ಷಕಿಯ ಅಮಾನತಿನಿಂದ ಪೋಷಕರು ಮತ್ತು ಸಾರ್ವಜನಿಕರ ಕಡೆಯಿಂದ ಪರವಿರೋಧ ಚರ್ಚೆಗಳು ಆರಂಭವಾಗಿದೆ.

ಶಾಲಾ ಅಭಿವೃದ್ಧಿ ಸಮಿತಿಯ ಒಳಗಿನ ಒಳ ರಾಜಕೀಯ ಹಾಗೂ ಸ್ವಯಂಘೋಷಿತ ನಾಯಕರ ಒಣ ಪ್ರತಿಷ್ಠೆಗೆ ನೇರ ನಡೆ-ನುಡಿಯ ಶಿಕ್ಷಕಿ ಬಲಿಯಾಗಿದ್ದಾರೆ ಎಂಬ ಚರ್ಚೆಯೂ ಸ್ಥಳೀಯವಾಗಿ ಕೇಳಿಬರುತ್ತಿದೆ. ಶಿಕ್ಷಕರ ನಡುವಿನ ವೈಮನಸ್ಸಿನಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಹೀಗಾಗಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪೋಷಕರು ಕೂಡಾ ಆಗ್ರಹಿಸಿದ್ದಾರೆ.

ನ್ಯಾಯಮಂಡಳಿಯಲ್ಲಿ (KAT) ಅರ್ಜಿ ವಿಚಾರಣೆಗೆ ಬರಲಿದ್ದು, ಮುಂದಿನ ತೀರ್ಪಿನ ಮೇಲೆ ಇಲಾಖೆಯ ಮುಂದಿನ ನಡೆ ನಿರ್ಧಾರವಾಗಲಿದೆ.

Continue Reading

Bantawala

ಶಾಲಾ ವಾಹನಗಳ ದಾಖಲೆ ನವೀಕರಣಕ್ಕೆ ಆಡಳಿತ ಮಂಡಳಿಗಳ ನಿರ್ಲಕ್ಷ್ಯ: ಇಲಾಖೆಗಳ ದಿಢೀರ್ ದಾಳಿ, 4 ಬಸ್‌ಗಳು ವಶ!

Published

on

ಬಂಟ್ವಾಳ: ಇತ್ತೀಚೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಮಂದಿರದ ಶಾಲಾ ಬಸ್ ಮೇಲೆ ಮರ ಬಿದ್ದು ಕಂದಮ್ಮನೊಬ್ಬಳು ಜೀವ ಕಳೆದುಕೊಂಡ ದುರಂತದ ಬಳಿಕವೂ ಶಾಲಾ ಆಡಳಿತ ಮಂಡಳಿಗಳು ಎಚ್ಚೆತ್ತುಕೊಂಡಂತಿಲ್ಲ. ಅಂದು ಮರ ಬಿದ್ದು ಜಖಂಗೊಂಡ ಶಾಲಾ ಬಸ್ಸಿನ ಪ್ರಮುಖ ದಾಖಲೆಗಳೆಲ್ಲವೂ ನವೀಕರಣಗೊಳ್ಳದೆ ಕಾಲಾವಧಿ ಮುಗಿದಿತ್ತು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿ, ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದಾಗ್ಯೂ, ಜಿಲ್ಲೆಯ ಹಲವು ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುವ ತಮ್ಮ ಬೇಜವಾಬ್ದಾರಿತನವನ್ನು ಮುಂದುವರಿಸಿರುವುದು ಬೆಳಗಿನ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಬಿ.ಸಿ. ರೋಡ್‌ನಲ್ಲಿ ದಿಢೀರ್ ತಪಾಸಣೆ: 4 ಶಾಲಾ ಬಸ್‌ಗಳು ಜಪ್ತಿ

ಸೋಮವಾರ ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಬಿ. ಸಿ. ರೋಡ್ ವೃತ್ತದ ಬಳಿ ಬಂಟ್ವಾಳ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು. ತಪಾಸಣೆ ವೇಳೆ ಅಗತ್ಯ ದಾಖಲೆಗಳಿಲ್ಲದೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಮಂಗಳೂರಿನ ಬರಾಕಾ ವಿದ್ಯಾಸಂಸ್ಥೆಗೆ ಸೇರಿದ 3 ಶಾಲಾ ಬಸ್‌ಗಳು ಹಾಗೂ ಬಂಟ್ವಾಳ ಬಡಕಬೈಲು ಮಜ್ಲಿಸ್ ವಿದ್ಯಾಸಂಸ್ಥೆಯ 1 ಬಸ್ ಸೇರಿದಂತೆ ಒಟ್ಟು 4 ಶಾಲಾ ವಾಹನಗಳನ್ನು ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ವಿಟ್ಲದಲ್ಲಿ ಬಂಟ್ವಾಳ ಸಾರಿಗೆ ಇಲಾಖೆ ಅಧಿಕಾರಿ ಚರಣ್ ನೇತೃತ್ವದ ತಂಡ ಇದೇ ರೀತಿ ಕಾರ್ಯಾಚರಣೆ ನಡೆಸಿ, ದಾಖಲೆಗಳಿಲ್ಲದ 4 ಮಿನಿ ಬಸ್‌ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿತ್ತು. ಆದರೂ ಆಡಳಿತ ಮಂಡಳಿಗಳು ಪಾಠ ಕಲಿತಿಲ್ಲ ಎಂಬುದು ಸ್ಪಷ್ಟವಾಗಿದೆ.

ಆಡಳಿತ ಮಂಡಳಿಗಳ ಸುಲಿಗೆ ಕೋರತನ: ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ವಿದ್ಯಾರ್ಜನೆಯ ಸೋಗಿನಲ್ಲಿ ಎಲ್ಲೆಂದರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಾಲಾ ಬಸ್ ಸೌಲಭ್ಯ ನೀಡುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಆಡಳಿತ ಮಂಡಳಿಗಳ ನೈಜ ಬಣ್ಣ ಈಗ ಬಯಲಾಗಿದೆ. ವಿದ್ಯಾರ್ಥಿಗಳಿಂದ ಪ್ರತೀ ತಿಂಗಳು ಸಾರಿಗೆ ವೆಚ್ಚದ ಹೆಸರಿನಲ್ಲಿ ನಿರ್ದಿಷ್ಟ ಮೊತ್ತವನ್ನು ವಸೂಲಿ ಮಾಡುವ ಆಡಳಿತ ಮಂಡಳಿಗಳಿಗೆ, ವಾಹನಗಳ ರಸ್ತೆ ತೆರಿಗೆ, ಪರವಾನಗಿ (Permit), ವಿಮಾ ಪತ್ರ (Insurance), ಎಫ್‌ಸಿ (Fitness Certificate) ಹಾಗೂ ಚಾಲಕರ ಚಾಲನಾ ಪರವಾನಗಿಯನ್ನು ಸರಿಯಾಗಿಡುವುದು ಜವಾಬ್ದಾರಿಯಲ್ಲವೇ? ಹಣ ಸುಲಿಗೆ ಮಾಡುವುದರಲ್ಲಷ್ಟೇ ಗಮನ ಹರಿಸುವ ಸಂಸ್ಥೆಗಳು ಮಕ್ಕಳ ಭವಿಷ್ಯ ಹಾಗೂ ಜೀವದ ಜೊತೆ ಆಟವಾಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿಶೇಷ ಮನವಿ: ಜಿಲ್ಲೆಯಾದ್ಯಂತ ಪ್ರತಿಯೊಂದು ಶಾಲಾ ವಾಹನ ತಪಾಸಣೆಗೆ ಆದೇಶಿಸಿ

ಸಾರಿಗೆ ಸಚಿವರು, ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಮೇಲಾಧಿಕಾರಿಗಳಲ್ಲಿ ಮನವಿ: ಕೇವಲ ದುರಂತಗಳು ಸಂಭವಿಸಿದಾಗ ಅಥವಾ ಬಿಡಿಬಿಡಿ ಕಾರ್ಯಾಚರಣೆ ನಡೆಸಿದರೆ ಸಾಲದು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾರ್ಯಾಚರಿಸುವ ಪ್ರತಿಯೊಂದು ಶಾಲಾ-ಕಾಲೇಜು ವಾಹನಗಳ ದಾಖಲೆಗಳು, ತಾಂತ್ರಿಕ ಸ್ಥಿತಿಗತಿ ಹಾಗೂ ಚಾಲಕರ ಅರ್ಹತೆಯನ್ನು ಸಮಗ್ರವಾಗಿ ತಪಾಸಣೆ ಮಾಡಲು ಸಂಬಂಧಪಟ್ಟ ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ಕಟ್ಟುನಿಟ್ಟಿನ ಆದೇಶ ನೀಡಬೇಕಿದೆ.

ನಿಯಮ ಉಲ್ಲಂಘಿಸುವ ಮತ್ತು ಸೂಕ್ತ ದಾಖಲೆಗಳಿಲ್ಲದೆ ಮಕ್ಕಳನ್ನು ಕರೆದೊಯ್ಯುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ತಕ್ಕ ಶಾಸ್ತಿ ಮಾಡುವ ಮೂಲಕ ಬಿಸಿ ಮುಟ್ಟಿಸಬೇಕಿದೆ. ಇನ್ನು ಮುಂದೆ ಯಾವುದೇ ಮಗುವಿನ ಜೀವ ಈ ರೀತಿಯ ನಿರ್ಲಕ್ಷ್ಯಕ್ಕೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಇಲಾಖೆ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ

Continue Reading

Trending

Copyright © 2025 Deevatige

error: Content is protected !!