Connect with us

accident

ಚಾಲನೆ ವೇಳೆ ಮೊಬೈಲ್ ಬಳಕೆ: ಖಾಸಗಿ ಬಸ್ ಚಾಲಕನ ಬೇಜವಾಬ್ದಾರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸಜ್ಜಾದ ಸಂಚಾರ ಪೊಲೀಸ್

Published

on

ಮಂಗಳೂರು: ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿ, ಪ್ರಯಾಣಿಕರ ಪ್ರಾಣದ ಜೊತೆ ಆಟವಾಡುತ್ತಿದ್ದ ಖಾಸಗಿ ಬಸ್ ಚಾಲಕನ ವಿರುದ್ಧ ಮಂಗಳೂರು ಸಂಚಾರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಆಗಸ್ಟ್ 23ರಂದು ಸಂಜೆ 4:20ರ ಸುಮಾರಿಗೆ ಮಂಗಳೂರಿನ ನಂತೂರಿನಿಂದ ನೀರುಮಾರ್ಗ ಕಡೆಗೆ ಸಂಚರಿಸುತ್ತಿದ್ದ ರೂಟ್ ನಂಬರ್ 4E (ನೊಂದಣಿ ಸಂಖ್ಯೆ: KA 19 D 9468) ಖಾಸಗಿ ಬಸ್ಸಿನ ಚಾಲಕ, ವಾಹನ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಮಾತನಾಡುತ್ತಾ ಅಪಾಯಕಾರಿ ರೀತಿಯಲ್ಲಿ ಚಾಲನೆ (Dangerous Driving) ಮಾಡಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಚಾಲಕನ ಈ ಬೇಜವಾಬ್ದಾರಿ ವರ್ತನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರ ಭೀತಿಯಲ್ಲೇ ಪ್ರಯಾಣಿಸುವಂತಾಗಿತ್ತು.

ಘಟನೆ ಗಮನಕ್ಕೆ ಬಂದ ತಕ್ಷಣವೇ ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಮಾಹಿತಿ ನೀಡಲಾಗಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಪೂರ್ವ ಸಂಚಾರ ವಿಭಾಗದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಅವರಿಗೆ ಸೂಚಿಸಲಾಗಿದೆ.

ಜಾಗೃತಿ ಮತ್ತು ಜವಾಬ್ದಾರಿ: ಪ್ರಾಣಕ್ಕಿಂತ ಫೋನ್ ಸಂಭಾಷಣೆ ಮುಖ್ಯವೇ?

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಹಾಗೂ ರಸ್ತೆ ಸಂಚಾರಿಗಳ ಸುರಕ್ಷತೆಗೆ ಮೊದಲ ಆದ್ಯತೆ. ಚಾಲನೆ ಮಾಡುವಾಗ ಕೆಲವೇ ಕ್ಷಣಗಳ ಗಮನವಿಚಲನೆ (Distracted Driving) ಮಹಾದೊಡ್ಡ ದುರಂತಕ್ಕೆ ದಾರಿ ಮಾಡಿಕೊಡಬಹುದು. ನೂರಾರು ಜನರ ಜೀವ ಹಿಡಿದು ವಾಹನ ಚಲಾಯಿಸುವಾಗ ಇಂತಹ ಬೇಜವಾಬ್ದಾರಿತನ ಅಕ್ಷಮ್ಯ ಅಪರಾಧ.

ಕಾನೂನು ತಕ್ಕ ಶಿಕ್ಷೆ: ಮೋಟಾರು ವಾಹನ ಕಾಯ್ದೆಯಡಿ ಚಾಲನೆ ವೇಳೆ ಮೊಬೈಲ್ ಬಳಕೆ ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ಮಾತ್ರವಲ್ಲದೆ ಚಾಲನಾ ಪರವಾನಗಿ (DL) ರದ್ದುಗೊಳಿಸಲು ಅವಕಾಶವಿದೆ.

ಮೊಬೈಲ್‌ ಡ್ರೈವಿಂಗ್‌ ವಿಡಿಯೋ ನೋಡಲು ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

https://deevatigenews.com/wp-content/uploads/2026/08/WhatsApp-Video-2026-08-24-at-13.10.19.mp4

ವಿಶೇಷ ಕಾರ್ಯಾಚರಣೆ: ಇಂತಹ ಸಾರಿಗೆ ನಿಯಮ ಉಲ್ಲಂಘಿಸುವ ಬಸ್‌ಗಳು ಹಾಗೂ ಚಾಲಕರ ವಿರುದ್ಧ ಮಂಗಳೂರು ನಗರ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ವಿಶೇಷ ತನಿಖೆ ಹಾಗೂ ಕಾರ್ಯಾಚರಣೆ ಮುಂದುವರಿಯಲಿದೆ.

ಸಾರ್ವಜನಿಕರು ಕೂಡ ಇಂತಹ ಅಪಾಯಕಾರಿ ಚಾಲನೆ ಕಂಡ ತಕ್ಷಣ ವೀಡಿಯೋ ಸಾಕ್ಷ್ಯಗಳೊಂದಿಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಸಂಭಾವ್ಯ ಅನಾಹುತಗಳನ್ನು ತಡೆಯಲು ಸಹಕರಿಸಬೇಕಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

accident

ಬಂಟ್ವಾಳ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಣೆಯಲ್ಲಿ ದುರ್ಘಟನೆ; ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳನ್ನು ಬಾವಿಗೆ ಎಸೆದ ತಾಯಿ – ಒಂದು ಮಗು ಸಾವು, ಮತ್ತೊಂದು ಮಗು ಆಸ್ಪತ್ರೆಗೆ ದಾಖಲು

Published

on

ಬಂಟ್ವಾಳ: ದಿನಾಂಕ: 19.09.2026ರಂದು ಮಧ್ಯಾಹ್ನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ಣೆ ಮೈರಕಟ್ಟೆಯಲ್ಲಿ ನಡೆದ ದೊಡ್ಡ ದುರಂತವೊಂದು ಬೆಳಕಿಗೆ ಬಂದಿದೆ. ಪೆರ್ಣೆಯಲ್ಲಿ ವಾಸ್ತವವಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ಎಂಬ ದಂಪತಿಗಳ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿದ್ದು, ಈ ವೇಳೆ ಕೋಪಗೊಂಡ ಆರೋಪಿತೆ ನೂರುನ್ನಿಸಾ ಮನೆಯಲ್ಲಿದ್ದ ಆಕೆಯ ಸುಮಾರು ಮೂರುವರೆ ವರ್ಷದ ಮಗು ಹಾಗೂ ಗಂಡನ ತಂಗಿಯ ಮಗುವನ್ನು ಮನೆ ಸಮೀಪದ ಕುಡಿಯುವ ನೀರಿನ ಬಾವಿಗೆ ಎಸೆದಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಆದರೆ, ಬೆಳಿಗ್ಗೆ ಸ್ಥಳೀಯ ವಾಹಿನಿಗಳಲ್ಲಿ ಹಾಗೂ ಆರಂಭಿಕ ವರದಿಗಳಲ್ಲಿ ಮಕ್ಕಳು ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದಿವೆ ಎಂದು ಪ್ರಸಾರವಾಗಿತ್ತು. ಪ್ರತ್ಯಕ್ಷದರ್ಶಿಗಳು ಹಾಗೂ ಆರಂಭಿಕ ಮಾಹಿತಿಯಂತೆ, ಪೆರ್ಣೆ ಮೈರಕಟ್ಟೆಯಲ್ಲಿ ಮಕ್ಕಳು ಬಾವಿಯ ಸಮೀಪವಿದ್ದ ವೇಳೆ ಆಲಿಯಾ (4) ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಿಸಿ ಮೇಲಕ್ಕೆ ಕರೆತಂದಿದ್ದರು. ಬಳಿಕ ಮತ್ತೊಂದು ಮಗು ಕೂಡ ಬಾವಿಗೆ ಬಿದ್ದಿರುವ ಬಗ್ಗೆ ಆಲಿಯಾ ಮಾಹಿತಿ ನೀಡಿದ್ದಾಳೆ ಎನ್ನಲಾಗಿದ್ದು, ಸ್ಥಳೀಯರು ಪರಿಶೀಲಿಸಿದಾಗ ರಬೀಹ್ (2) ಬಾವಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ರಬೀಹ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಸಾರವಾಗಿತ್ತು.

ನೈಜ ಸತ್ಯ ಬಯಲುಗೊಳಿಸಿದ ಪೊಲೀಸರು:

ಸ್ಥಳೀಯ ಮಾದ್ಯಮಗಳಲ್ಲಿ ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿತ್ತರವಾಗಿದ್ದರೂ, ಪೊಲೀಸ್ ತನಿಖೆಯಿಂದ ಅಸಲಿ ವಿಚಾರ ಹೊರಬಂದಿದೆ. ದಂಪತಿಗಳ ನಡುವಿನ ಫೋನ್ ಕರೆಯ ಕೌಟುಂಬಿಕ ಕಲಹದ ರಭಸದಲ್ಲಿ ಕೋಪಗೊಂಡ ಆರೋಪಿತೆ ನೂರುನ್ನಿಸಾ ತಾನೇ ಸ್ವತಃ ಮಕ್ಕಳನ್ನು ಬಾವಿಗೆ ಎಸೆದಿರುವುದು ಎಸ್‌ಪಿ ನೀಡಿರುವ ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಮೇಲಕ್ಕೆ ಎತ್ತಿದ1ರ ಪೈಕಿ ಗಂಡನ ತಂಗಿಯ ಮಗು (ರಬೀಹ್ – 3) ಮೃತಪಟ್ಟಿದ್ದು, ಆರೋಪಿತೆಯ ಮಗು (ಆಲಿಯಾ – 4) ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 121/2026 ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

accident

ಕನ್ಯಾನ: ಮದ್ಯದ ನಶೆಯಲ್ಲಿ 18 ಚಕ್ರದ ಲಾರಿ ಚಾಲನೆ – ವಿದ್ಯುತ್ ಕಂಬಕ್ಕೆ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಅನಾಹುತ

Published

on

ಕನ್ಯಾನ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಕ್ರೀಟ್ ರಸ್ತೆಯಲ್ಲಿ ನಿಯಮ ಮೀರಿ ಸಂಚರಿಸುತ್ತಿದ್ದ 18 ಚಕ್ರಗಳ ಬೃಹತ್ ಬಾಕ್ಸೈಟ್ ಸಾಗಾಟದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಎಸಗಿದ ಘಟನೆ ನಡೆದಿದೆ.


​ಕನ್ಯಾನದಿಂದ ಪಾದೆಕಲ್ಲು ಪೆರೋಡಿ ಸರವು ಪ್ರದೇಶಕ್ಕೆ ಬಾಕ್ಸೈಟ್ (ಮಣ್ಣು) ಸಾಗಿಸಲು ತೆರಳುತ್ತಿದ್ದ AP 39 VD 8043 ಸಂಖ್ಯೆಯ ಬೃಹತ್ ಲಾರಿಯನ್ನು ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮೂಲದ ನಾಗರಾಜ್ ಎಂಬಾತ ಮದ್ಯದ ನಶೆಯಲ್ಲಿ ಚಲಾಯಿಸುತ್ತಿದ್ದ ಎನ್ನಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಂಬ ಛಿದ್ರಗೊಂಡು ತಂತಿಗಳ ಸಹಿತ ಲಾರಿಯ ಮೇಲೆ ಬಿದ್ದಿದೆ. ಆದಾಗ್ಯೂ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ನಿವಾಸಿಗಳು ಮದ್ಯ ಸೇವಿಸಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
​ಗ್ರಾಮಸ್ಥರ ತೀವ್ರ ಆಕ್ರೋಶ:
ಗ್ರಾಮಾಂತರ ಕಾಂಕ್ರೀಟ್ ರಸ್ತೆಯಲ್ಲಿ 12.5 ಟನ್ ಸಾಮರ್ಥ್ಯದ (6 ಚಕ್ರಗಳ) ವಾಹನಗಳಿಗಿಂತ ಹೆಚ್ಚಿನ ಭಾರದ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ 18 ಚಕ್ರದ ಲಾರಿಗಳು ಅಕ್ರಮವಾಗಿ ಸಂಚರಿಸುತ್ತಿದ್ದರೂ ಕನ್ಯಾನ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
​ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ

Continue Reading

Trending

Copyright © 2025 Deevatige

error: Content is protected !!