Connect with us

accident

ವಿಟ್ಲ: ಕೂದಲೆಳೆಯ ಅಂತರದಲ್ಲಿ ತಪ್ಪಿದ ಭೀಕರ ದುರಂತ! ಪ್ರಪಾತದ ಅಂಚಿನಲ್ಲಿ ನಿಂತ ಶಾಲಾ ಬಸ್; ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಚಾವ್; ಭಾರಿ ಅನಾಹುತ ತಪ್ಪಿಸಿದ ರಜಿತ್‌ ಆಳ್ವ

Published

on

ವಿಟ್ಲ: ಇಪ್ಪತ್ತಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್‌ವೊಂದು ಬ್ರೇಕ್ ವೈಫಲ್ಯಗೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ದುರಂತದ ಅಂಚಿನಲ್ಲಿ ನಿಂತ ಭಯಾನಕ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಸ್ಥಳೀಯ ಮುಖಂಡರ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸದೆ ಭಾರಿ ಅನಾಹುತವೊಂದು ತಪ್ಪಿದೆ.

ನಡೆದದ್ದೇನು?

ಕೊಳ್ನಾಡು ಗ್ರಾಮದ ಬೊಲ್ಪಾದೆಯಿಂದ ಹೊರಟ ‘KA 53 A 3000’ ಸಂಖ್ಯೆಯ ಮಿನಿ ಬಸ್, ವಿಟ್ಲದ ಸೈಂಟ್ ರೀಟಾ, ಜೇಸಿ ಮತ್ತು ಪಿಎಂಶ್ರೀ ಶಾಲೆಯ ಪುಟಾಣಿಗಳನ್ನು ಕರೆದೊಯ್ಯುತ್ತಿತ್ತು. ಅಲ್ಫೋನ್ಸ್ ಎಂಬವರು ಚಲಾಯಿಸುತ್ತಿದ್ದ ಈ ಬಸ್ ಕುಂಟುಕುಡೇಲು ಒಳರಸ್ತೆಯಲ್ಲಿ ಸಾಗುತ್ತಿದ್ದಾಗ ದಿಢೀರ್ ಬ್ರೇಕ್ ಫೇಲ್ ಆಗಿದೆ. ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಪ್ರಪಾತಕ್ಕೆ ಪಲ್ಟಿ ಹೊಡೆಯುವ ಕೇವಲ ಒಂದಡಿ ಅಂತರದಲ್ಲಿ ಅದೃಷ್ಟವಶಾತ್ ನಿಂತಿದೆ!

ಮೆಚ್ಚುಗೆಗೆ ಪಾತ್ರವಾದ ರಜಿತ್ ಆಳ್ವ ಅವರ ಸಮಯಪ್ರಜ್ಞೆ:

ಅಪಘಾತದ ತೀವ್ರತೆಗೆ ವಿದ್ಯುತ್ ತಂತಿಗಳು ಬಸ್ಸಿಗೆ ತಾಗಲು ಕೇವಲ ಅರ್ಧದಿಂದ ಒಂದಡಿ ಅಂತರ ಮಾತ್ರ ಬಾಕಿ ಇತ್ತು. ಅಪಾಯದ ಗಂಭೀರತೆಯನ್ನು ತಕ್ಷಣವೇ ಅರಿತ ಸ್ಥಳೀಯ ನಿವಾಸಿ ಹಾಗೂ ವಿಟ್ಲ ವಲಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎರ್ಮೆನಿಲೆ ರಜಿತ್ ಆಳ್ವ ಅವರು ತಕ್ಷಣವೇ ಓಡಿಬಂದು, ಪಕ್ಕದ ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ಸಂಪರ್ಕವನ್ನು ಆಫ್ ಮಾಡಿದ್ದಾರೆ. ಅವರ ಈ ಕ್ಷಿಪ್ರ ಕಾರ್ಯದಿಂದಾಗಿ ಬಸ್‌ನಲ್ಲಿದ್ದ 21ಕ್ಕೂ ಹೆಚ್ಚು ಮಕ್ಕಳು ಮತ್ತು ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ರಜಿತ್ ಆಳ್ವ ಅವರ ಈ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪದೇ ಪದೇ ಅಪಘಾತ: ಪೋಷಕರ ತೀವ್ರ ಆಕ್ರೋಶ

ಈ ಶಾಲಾ ಬಸ್ ತಾಂತ್ರಿಕ ವೈಫಲ್ಯದಿಂದ ಅಪಘಾತಕ್ಕೀಡಾಗುತ್ತಿರುವುದು ಇದೇ ಮೊದಲೇನಲ್ಲ!

ಇದೇ ಶಾಲಾ ಬಸ್ ಈ ಹಿಂದೆಯೂ ತಾಂತ್ರಿಕ ವೈಫಲ್ಯದಿಂದ ಅಪಘಾತಕ್ಕೆ ಕಾರಣವಾಗಿತ್ತು. ಕೆಲ ದಿನಗಳ ಹಿಂದಷ್ಟೇ ಸಂಜೆ ಹೊತ್ತು ಕುಡ್ತಮುಗೇರು-ಕುಳಾಲು ಸಂಪರ್ಕ ರಸ್ತೆಯ ಬೊಲ್ಪಾದೆ ಏರುವ ರಸ್ತೆಯಲ್ಲಿ ಶಾಲಾ ಮಕ್ಕಳ ಕರೆದೊಯ್ಯುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿತ್ತು. ಎದುರಿನಿಂದ ಬರುತ್ತಿದ್ದ ಕಲ್ಲು ಸಾಗಾಟದ ಲಾರಿಗೆ ಸೈಡ್ ಕೊಡುವ ಸಂದರ್ಭ ಚಾಲಕ ಅಲ್ಪೋನ್ಸ್ ತನ್ನ ವಾಹನವನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಬ್ರೇಕ್ ಸಿಗದೇ ಐವತ್ತು ಅಡಿಗಳಷ್ಟು ದೂರಕ್ಕೆ ಸಂಚರಿಸಿ ರಸ್ತೆ ಪಕ್ಕದ ಚರಂಡಿಗೆ ಹಿಮ್ಮುಖವಾಗಿ ಬಿದ್ದಿದೆ. ಬಳಿಕ ಸ್ಥಳೀಯರು ಇನ್ನೊಂದು ವಾಹನಕ್ಕೆ ಹಗ್ಗ ಕಟ್ಟಿ ಮೇಲಕ್ಕೆತ್ತುವ ಮೂಲಕ ಮಾನವೀಯತೆ ಮೆರೆದಿದ್ದರು.

ಮಿತಿಮೀರುವಷ್ಟು ಮಕ್ಕಳ ಸಾಗಾಟ, ಪೋಷಕರ ಆಕ್ರೋಶ..
ಬೊಲ್ಪಾದೆಯಿಂದ ಹೊರಡುವ ಸದ್ರಿ ಬಸ್ಸಿನಲ್ಲಿ ಕುಂಟುಕುಡೇಲು ತಲುವಷ್ಟರಲ್ಲಿ ಇಪ್ಪತ್ತೊಂದು ಪುಟಾಣಿಗಳಿದ್ದರು. ಆ ಬಳಿಕ ಮತ್ತಷ್ಟು ಮಕ್ಕಳು ಅದೆ ಬಸ್ಸಿನಲ್ಲಿ ಹೋಗುವುದಕ್ಕಾಗಿ ಕಾಯುತ್ತಿದ್ದರು. ವಿಟ್ಲ ತಲುಪುವಷ್ಟರಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳನ್ನು ಇದೇ ಬಸ್ ಸಾಗಾಟ ಮಾಡುತ್ತಿದೆ. ಈ ಬಸ್ಸಿನಲ್ಲಿ ಸಾಮರ್ಥ್ಯಕ್ಕೂ ಮೀರಿ ಮಕ್ಕಳನ್ನು ತುರುಕಿ ಕರೆದೊಯ್ಯಲಾಗುತ್ತಿತ್ತು ಎಂದು ತಿಳಿದುಬಂದಿದ್ದು, “ನಮ್ಮ ಮಕ್ಕಳ ಜೀವದ ಜೊತೆ ಆಟವಾಡಲಾಗುತ್ತಿದೆ” ಎಂದು ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಹಳೆಯ ತಂತ್ರಜ್ಞಾನದ ಬ್ರೇಕ್: 2011ರ ಮಾಡೆಲ್‌ನ ಈ ಸ್ವರಾಜ್ ಮಜ್ದಾ ಬಸ್ಸು ಪ್ಲೈವುಡ್ ಬ್ರೇಕ್ ಹೊಂದಿದ್ದು, ತುರ್ತು ಸಂದರ್ಭದಲ್ಲಿ ತಕ್ಷಣ ನಿಲ್ಲಿಸಲು ಅಸಾಧ್ಯ. ಶಾಲಾ ವಾಹನಗಳಿಗೆ ಏರ್ ಬ್ರೇಕ್ ವ್ಯವಸ್ಥೆ ಅತ್ಯಗತ್ಯ ಎಂದು ಮೆಕ್ಯಾನಿಕ್‌ಗಳು ಸ್ಪಷ್ಟಪಡಿಸಿದ್ದಾರೆ.

ಜಾಗೃತಿ ಕರೆ: ಶಾಲಾ ವಾಹನ ಚಾಲಕರು ಮತ್ತು ಆಡಳಿತ ಮಂಡಳಿಯ ಗಮನಕ್ಕೆ!

“ಮಕ್ಕಳ ಸುರಕ್ಷತೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ!”

  1. ದಿನನಿತ್ಯದ ತಾಂತ್ರಿಕ ತಪಾಸಣೆ ಕಡ್ಡಾಯ: ಶಾಲಾ ಬಸ್ಸುಗಳನ್ನು ರಸ್ತೆಗೆ ಇಳಿಸುವ ಮುನ್ನ ಪ್ರತಿದಿನ ಬೆಳಿಗ್ಗೆ ಬ್ರೇಕ್, ಟೈರ್ ಹಾಗೂ ಸ್ಟೀರಿಂಗ್ ವ್ಯವಸ್ಥೆಯನ್ನು ಚಾಲಕರು ಕಡ್ಡಾಯವಾಗಿ ತಪಾಸಣೆ ಮಾಡಬೇಕು.
  2. ಫಿಟ್‌ನೆಸ್ ಪ್ರಮಾಣಪತ್ರ (FC) ಪರಿಶೀಲನೆ: ಹಳೆಯ ಮಾಡೆಲ್‌ನ ಹಾಗೂ ಪ್ಲೈವುಡ್ ಬ್ರೇಕ್‌ನಂತಹ ಹಳೆಯ ತಂತ್ರಜ್ಞಾನದ ವಾಹನಗಳನ್ನು ಶಾಲಾ ಮಕ್ಕಳ ಸಾಗಾಟಕ್ಕೆ ಬಳಸುವುದು ಅತ್ಯಂತ ಅಪಾಯಕಾರಿ. ತಕ್ಷಣವೇ ಏರ್ ಬ್ರೇಕ್ ಸೌಲಭ್ಯವಿರುವ ಸುಸ್ಥಿತಿಯಲ್ಲಿರುವ ವಾಹನಗಳನ್ನು ಬಳಸಬೇಕು.
  3. ಮಿತಿಮೀರಿದ ಸಾಗಾಟಕ್ಕೆ ಬ್ರೇಕ್ ಹಾಕಿ: ನಿಯಮದಂತೆ ನಿಗದಿತ ಆಸನ ಸಂಖ್ಯೆಗೆ ತಕ್ಕಂತೆ ಮಾತ್ರ ಮಕ್ಕಳನ್ನು ಕರೆದೊಯ್ಯಬೇಕು. ಲಾಭದಾಸೆಗೆ ಮಕ್ಕಳ ಪ್ರಾಣವನ್ನು ಪಣಕ್ಕಿಡುವುದು ಕ್ಷಮಾರ್ಹವಲ್ಲ.
  4. ಸಾರಿಗೆ ಇಲಾಖೆಯ ಕಟ್ಟುನಿಟ್ಟಿನ ಕ್ರಮ ಅಗತ್ಯ: ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಲ್ಲಾ ಶಾಲಾ ವಾಹನಗಳ ತಾಂತ್ರಿಕ ಸ್ಥಿತಿಗತಿಯನ್ನು ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

accident

ಬಂಟ್ವಾಳ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಣೆಯಲ್ಲಿ ದುರ್ಘಟನೆ; ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳನ್ನು ಬಾವಿಗೆ ಎಸೆದ ತಾಯಿ – ಒಂದು ಮಗು ಸಾವು, ಮತ್ತೊಂದು ಮಗು ಆಸ್ಪತ್ರೆಗೆ ದಾಖಲು

Published

on

ಬಂಟ್ವಾಳ: ದಿನಾಂಕ: 19.09.2026ರಂದು ಮಧ್ಯಾಹ್ನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ಣೆ ಮೈರಕಟ್ಟೆಯಲ್ಲಿ ನಡೆದ ದೊಡ್ಡ ದುರಂತವೊಂದು ಬೆಳಕಿಗೆ ಬಂದಿದೆ. ಪೆರ್ಣೆಯಲ್ಲಿ ವಾಸ್ತವವಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ಎಂಬ ದಂಪತಿಗಳ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿದ್ದು, ಈ ವೇಳೆ ಕೋಪಗೊಂಡ ಆರೋಪಿತೆ ನೂರುನ್ನಿಸಾ ಮನೆಯಲ್ಲಿದ್ದ ಆಕೆಯ ಸುಮಾರು ಮೂರುವರೆ ವರ್ಷದ ಮಗು ಹಾಗೂ ಗಂಡನ ತಂಗಿಯ ಮಗುವನ್ನು ಮನೆ ಸಮೀಪದ ಕುಡಿಯುವ ನೀರಿನ ಬಾವಿಗೆ ಎಸೆದಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಆದರೆ, ಬೆಳಿಗ್ಗೆ ಸ್ಥಳೀಯ ವಾಹಿನಿಗಳಲ್ಲಿ ಹಾಗೂ ಆರಂಭಿಕ ವರದಿಗಳಲ್ಲಿ ಮಕ್ಕಳು ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದಿವೆ ಎಂದು ಪ್ರಸಾರವಾಗಿತ್ತು. ಪ್ರತ್ಯಕ್ಷದರ್ಶಿಗಳು ಹಾಗೂ ಆರಂಭಿಕ ಮಾಹಿತಿಯಂತೆ, ಪೆರ್ಣೆ ಮೈರಕಟ್ಟೆಯಲ್ಲಿ ಮಕ್ಕಳು ಬಾವಿಯ ಸಮೀಪವಿದ್ದ ವೇಳೆ ಆಲಿಯಾ (4) ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಿಸಿ ಮೇಲಕ್ಕೆ ಕರೆತಂದಿದ್ದರು. ಬಳಿಕ ಮತ್ತೊಂದು ಮಗು ಕೂಡ ಬಾವಿಗೆ ಬಿದ್ದಿರುವ ಬಗ್ಗೆ ಆಲಿಯಾ ಮಾಹಿತಿ ನೀಡಿದ್ದಾಳೆ ಎನ್ನಲಾಗಿದ್ದು, ಸ್ಥಳೀಯರು ಪರಿಶೀಲಿಸಿದಾಗ ರಬೀಹ್ (2) ಬಾವಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ರಬೀಹ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಸಾರವಾಗಿತ್ತು.

ನೈಜ ಸತ್ಯ ಬಯಲುಗೊಳಿಸಿದ ಪೊಲೀಸರು:

ಸ್ಥಳೀಯ ಮಾದ್ಯಮಗಳಲ್ಲಿ ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿತ್ತರವಾಗಿದ್ದರೂ, ಪೊಲೀಸ್ ತನಿಖೆಯಿಂದ ಅಸಲಿ ವಿಚಾರ ಹೊರಬಂದಿದೆ. ದಂಪತಿಗಳ ನಡುವಿನ ಫೋನ್ ಕರೆಯ ಕೌಟುಂಬಿಕ ಕಲಹದ ರಭಸದಲ್ಲಿ ಕೋಪಗೊಂಡ ಆರೋಪಿತೆ ನೂರುನ್ನಿಸಾ ತಾನೇ ಸ್ವತಃ ಮಕ್ಕಳನ್ನು ಬಾವಿಗೆ ಎಸೆದಿರುವುದು ಎಸ್‌ಪಿ ನೀಡಿರುವ ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಮೇಲಕ್ಕೆ ಎತ್ತಿದ1ರ ಪೈಕಿ ಗಂಡನ ತಂಗಿಯ ಮಗು (ರಬೀಹ್ – 3) ಮೃತಪಟ್ಟಿದ್ದು, ಆರೋಪಿತೆಯ ಮಗು (ಆಲಿಯಾ – 4) ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 121/2026 ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

accident

ಕನ್ಯಾನ: ಮದ್ಯದ ನಶೆಯಲ್ಲಿ 18 ಚಕ್ರದ ಲಾರಿ ಚಾಲನೆ – ವಿದ್ಯುತ್ ಕಂಬಕ್ಕೆ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಅನಾಹುತ

Published

on

ಕನ್ಯಾನ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಕ್ರೀಟ್ ರಸ್ತೆಯಲ್ಲಿ ನಿಯಮ ಮೀರಿ ಸಂಚರಿಸುತ್ತಿದ್ದ 18 ಚಕ್ರಗಳ ಬೃಹತ್ ಬಾಕ್ಸೈಟ್ ಸಾಗಾಟದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಎಸಗಿದ ಘಟನೆ ನಡೆದಿದೆ.


​ಕನ್ಯಾನದಿಂದ ಪಾದೆಕಲ್ಲು ಪೆರೋಡಿ ಸರವು ಪ್ರದೇಶಕ್ಕೆ ಬಾಕ್ಸೈಟ್ (ಮಣ್ಣು) ಸಾಗಿಸಲು ತೆರಳುತ್ತಿದ್ದ AP 39 VD 8043 ಸಂಖ್ಯೆಯ ಬೃಹತ್ ಲಾರಿಯನ್ನು ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮೂಲದ ನಾಗರಾಜ್ ಎಂಬಾತ ಮದ್ಯದ ನಶೆಯಲ್ಲಿ ಚಲಾಯಿಸುತ್ತಿದ್ದ ಎನ್ನಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಂಬ ಛಿದ್ರಗೊಂಡು ತಂತಿಗಳ ಸಹಿತ ಲಾರಿಯ ಮೇಲೆ ಬಿದ್ದಿದೆ. ಆದಾಗ್ಯೂ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ನಿವಾಸಿಗಳು ಮದ್ಯ ಸೇವಿಸಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
​ಗ್ರಾಮಸ್ಥರ ತೀವ್ರ ಆಕ್ರೋಶ:
ಗ್ರಾಮಾಂತರ ಕಾಂಕ್ರೀಟ್ ರಸ್ತೆಯಲ್ಲಿ 12.5 ಟನ್ ಸಾಮರ್ಥ್ಯದ (6 ಚಕ್ರಗಳ) ವಾಹನಗಳಿಗಿಂತ ಹೆಚ್ಚಿನ ಭಾರದ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ 18 ಚಕ್ರದ ಲಾರಿಗಳು ಅಕ್ರಮವಾಗಿ ಸಂಚರಿಸುತ್ತಿದ್ದರೂ ಕನ್ಯಾನ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
​ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ

Continue Reading

Trending

Copyright © 2025 Deevatige

error: Content is protected !!