crime
ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟಿ ಕೋಟಿ ವಂಚನೆ: ಶೋಕಿ ಲೈಫ್ ನಡೆಸುತಿದ್ದ ‘ಅಸ್ತ್ರ’ ಲಂಚುಲಾಲ್ ಕಾಲ್ಬುಡಕ್ಕೆ ಬಿಸಿ, ದುಬೈಗೆ ಪರಾರಿ?
ಮಂಗಳೂರು: ಅದೃಷ್ಟದ ಲಕ್ಕಿ ಸ್ಕೀಮ್, ಆಕರ್ಷಕ ಆಫರ್‌ಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಶೋಕಿ ಜೀವನ ನಡೆಸುತ್ತಿದ್ದ ‘ಅಸ್ತ್ರ ಗ್ರೂಪ್’ ಸಂಸ್ಥೆಯ ಮಾಲೀಕ ಲಂಚುಲಾಲ್ ಎಂಬಾತ ಇದೀಗ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ಚೊಂಬು ಹಸ್ತಾಂತರಿಸಿ ನಾಪತ್ತೆಯಾಗಿದ್ದಾನೆ.
ಕಳೆದ 3-4 ವರ್ಷಗಳಿಂದ ಮಂಗಳೂರು ಸೇರಿದಂತೆ ವಿವಿಧೆಡೆ ‘ಅಸ್ತ್ರ’ ಹೆಸರಿನಲ್ಲಿ ಮೂರು ಸೀಸನ್‌ಗಳ ಲಕ್ಕಿ ಸ್ಕೀಮ್ ನಡೆಸಿದ್ದ ಈತ, ಸುಮಾರು 50 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ತಿಂಗಳ ಕಂತಿನ ರೂಪದಲ್ಲಿ ಕೋಟ್ಯಂತರ ರೂ. ಹಣ ವಸೂಲಿ ಮಾಡಿದ್ದ. ಸ್ಕೀಮ್ ಅವಧಿ ಮುಗಿದ ಮೇಲೆಯೂ ಏಜೆಂಟರ ಮೂಲಕ ಗ್ರಾಹಕರನ್ನು ಮುಂದಿನ ಸೀಸನ್‌ಗೆ ವರ್ಗಾಯಿಸಿ ಹಣ ಹಿಂತಿರುಗಿಸದೆ ವಂಚಿಸಲಾಗುತ್ತಿತ್ತು ಎನ್ನಲಾಗಿದೆ.

ನವಭಾರತ್ ಸರ್ಕಲ್‌ನಲ್ಲಿ ನೂರಾರು ಸಂತ್ರಸ್ತರ ಆಕ್ರೋಶ
ಮೂರು ದಿನಗಳಿಂದ ಲಂಚುಲಾಲ್ ಯಾರಿಗೂ ಸಿಗದೆ ನಾಪತ್ತೆಯಾಗಿದ್ದು, ಆತ ದುಬೈಗೆ ಕಾಲು ಕಿತ್ತಿದ್ದಾನೆ ಎಂಬ ವದಂತಿಗಳು ಹರಡಿವೆ. ಇದರಿಂದ ಆತಂಕಗೊಂಡ ನೂರಾರು ಹೂಡಿಕೆದಾರರು ಹಾಗೂ ಸಾರ್ವಜನಿಕರು ಇಂದು (ಜುಲೈ 24) ಬೆಳಗ್ಗಿನಿಂದಲೇ ಮಂಗಳೂರಿನ ನವಭಾರತ್ ಸರ್ಕಲ್‌ನಲ್ಲಿರುವ ‘ಅಸ್ತ್ರ ಗ್ರೂಪ್’ ಕಚೇರಿಗೆ ಮುತ್ತಿಗೆ ಹಾಕಿ ಏಜೆಂಟರನ್ನು ತಳೆದುಹಾಕಿ ತೀವ್ರ ಗಲಾಟೆ ನಡೆಸಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಜುವೆಲ್ಲರಿ ಶೋರೂಂ ತೆರೆದಿರುವುದಾಗಿ ಈತ ಪ್ರಚಾರ ಗಿಟ್ಟಿಸಿಕೊಂಡಿದ್ದ ಜಾಗಕ್ಕೆ ಹೋಗಿ ನೋಡಿದ ಗ್ರಾಹಕರಿಗೆ ಬರೀ ಖಾಲಿ ಮಳಿಗೆ ಮಾತ್ರ ಕಂಡುಬಂದಿದೆ!
ಬ್ಯಾಂಕ್ ಖಾತೆ ಫ್ರೀಜ್ ನಾಟಕ!
ಇತ್ತೀಚೆಗಷ್ಟೇ ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲೂ ಜಾಲ ವಿಸ್ತರಿಸಿ ಮೂರನೇ ಸೀಸನ್ ಆರಂಭಿಸಿದ್ದ ಈತ, ಹಣ ಕೇಳಲು ಬಂದ ಮಂಗಳೂರಿನ ಏಜೆಂಟರಿಗೆ “ನನ್ನ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ, ಸ್ವಲ್ಪ ದಿನ ಕಾಯಿರಿ” ಎಂದು ಕಥೆ ಕಟ್ಟುತ್ತಿದ್ದ. ಹಣ ಕೇಳಿ ಗಲಾಟೆ ಮಾಡಿದ ಕೆಲವರಿಗೆ ಮಾತ್ರ ಒಂದಿಷ್ಟು ಹಣ ಕೊಟ್ಟು ಕಳುಹಿಸುತ್ತಿದ್ದ ಎನ್ನಲಾಗಿದೆ. ಆದರೆ ಐಟಿ, ಇಡಿ ಅಥವಾ ಪೊಲೀಸ್ ಎಫ್‌ಐಆರ್ ಆದಾಗ ಮಾತ್ರ ಖಾತೆ ಫ್ರೀಜ್ ಆಗುತ್ತದೆ ಎಂಬ ಸತ್ಯ ಗೊತ್ತಿದ್ದರೂ, ಹಣ ಕಳೆದುಕೊಳ್ಳುವ ಭೀತಿಯಿಂದ ಜನರು ಈತನ ಸುಳ್ಳನ್ನು ನಂಬುತ್ತಾ ಬಂದಿದ್ದರು.
ಹತ್ತಕ್ಕೆ 15 ಲಕ್ಷದ ‘ಕುರಿ ಫಂಡ್’ ಜಾಲ & ಸಿನಿಮಾ ಶೋಕಿ!
ಕೇವಲ ತಿಂಗಳ ಲಕ್ಕಿ ಸ್ಕೀಮ್ ಮಾತ್ರವಲ್ಲದೆ, ‘ಕುರಿ ಫಂಡ್’ ಮಾದರಿಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 15 ತಿಂಗಳಲ್ಲಿ 15 ಲಕ್ಷ ರೂ. ಹಿಂತಿರುಗಿಸುವುದಾಗಿ ನಂಬಿಸಿ ಮಂಗಳೂರು ಆಸುಪಾಸಿನ ದೊಡ್ಡ ದೊಡ್ಡ ಕುರಿಗಳಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ.
ಈ ಹಣದಲ್ಲೇ ಈತ ತುಳು ಸಿನಿಮಾಗಳಿಗೆ ಹಣ ಹೂಡಿ, ಬಂಗಾರದ ಬಣ್ಣದ ಬಳೆಗಳನ್ನು ಹಾಕಿಕೊಂಡು ಶೋಕಿ ಜೀವನ ನಡೆಸುತ್ತಿದ್ದ. ಕೇರಳ ಗಡಿಯ ತಲಪಾಡಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿಕೊಡುವುದಾಗಿಯೂ ನಂಬಿಸಿದ್ದ. ಇತ್ತೀಚೆಗೆ ಸಾವಿರ ರೂಪಾಯಿ ಕಟ್ಟುಪಾವತಿದಾರರ ಸಂಖ್ಯೆ ಮಿತಿಮೀರಿ ವಹಿವಾಟು ಕಷ್ಟವಾದಾಗ ಸಂಪೂರ್ಣ ಜಾಲ ಬಂದ್ ಮಾಡಿ ಪರಾರಿಯಾಗಿದ್ದಾನೆ.
ಪೊಲೀಸ್ ಇಲಾಖೆಯ ಧೋರಣೆಗೆ ಜನರ ಆಕ್ರೋಶ! ಒಂದು ವರ್ಷದ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸುಧೀರ್ ರೆಡ್ಡಿ ಇದ್ದಾಗ ಇಂತಹ ಲಕ್ಕಿ ಸ್ಕೀಮ್‌ಗಳ ವಿರುದ್ಧ ಸಮರ ಸಾರಿದ್ದರು. ಆಗ ಲಂಚುಲಾಲ್ ಠಾಣೆಗೆ 5 ಕೋಟಿ ರೂಪಾಯಿ ಬಾಂಡ್ ನೀಡಿದ್ದ ಎನ್ನಲಾಗಿದೆ. ಪೊಲೀಸರು ಸ್ಕೀಂ ಬಗ್ಗೆ ಸೂಕ್ತ ತನಿಖೆ ನಡೆಸದೆ ಲಂಚುಲಾಲ್ ಇಷ್ಟೊಂದು ದೊಡ್ಡ ಮಟ್ಟದ ವಂಚನೆ ಎಸಗಿ ಪರಾರಿಯಾಗಲು ಕಾರಣವಾಯಿತು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ದ. ಕ. ಜಿಲ್ಲೆಯನ್ನು ಕೇಂದ್ರೀಕರಿಸಿ ಲಕ್ಕಿ ಸ್ಕೀಮ್ ಗಳದ್ದೇ ಕಾರುಬಾರು
‘ಬಣ್ಣದ ಬಲೆಗೆ ಬೀಳದಿರಿ’: ಆಸೆಯ ಆಮಿಷ, ವಂಚಕರ ಸಂಚು ಮತ್ತು ಸುಲಭ ಹಣದ ದುರಂತ!
ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಮಂಗಳೂರು, ಮಡಿಕೇರಿ, ಹಾಸನ, ಪುತ್ತೂರು, ಮೂಡಬಿದ್ರೆ ಹಾಗೂ ವಿಟ್ಲ ಸೇರಿದಂತೆ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಕ್ರಮ ‘ಲಕ್ಕಿ ಸ್ಕೀಮ್’ಗಳು ಅಣಬೆಗಳಂತೆ ತಲೆಎತ್ತಿವೆ. ಬಣ್ಣ ಬಣ್ಣದ ಜಾಹೀರಾತುಗಳು, ಕಾರು-ಬಂಗಾರದ ಆಸೆ ಹಾಗೂ ಐಷಾರಾಮಿ ಬದುಕಿನ ಆಮಿಷವೊಡ್ಡಿ ಮುಗ್ಧ ಸಾರ್ವಜನಿಕರನ್ನು ಕತ್ತಲಲ್ಲಿಟ್ಟು ಮುಂಡಾಮೋಚುವ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದೆ.
ವಿಐಪಿಗಳ ‘ಸಾಕ್ಷಿ’ಯಾಗಿಸಿ ಜನರ ಕಣ್ಣಿಗೆ ಮಣ್ಣು!
ಈ ವ್ಯವಸ್ಥಿತ ವಂಚನಾ ಜಾಲ ಎಷ್ಟರಮಟ್ಟಿಗೆ ಬಲವಾಗಿದೆ ಎಂದರೆ, ತಮ್ಮ ಯೋಜನೆಯ ಉದ್ಘಾಟನಾ ಸಮಾರಂಭಗಳಿಗೆ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ಸ್ವಾಮೀಜಿಗಳನ್ನು ಅತಿಥಿಗಳಾಗಿ ಕರೆಸಿ ಶೋಕಿ ಪ್ರದರ್ಶನ ಮಾಡುತ್ತವೆ. ಸಮಾಜದ ಹಿರಿಯರೇ ವೇದಿಕೆಯಲ್ಲಿದ್ದಾರೆ ಎಂದಮೇಲೆ ಈ ಸ್ಕೀಮ್ ನಿಜವಿರಬಹುದು ಎಂದು ನಂಬುವ ಸಾರ್ವಜನಿಕರು, ಕಣ್ಣು ಮುಚ್ಚಿಕೊಂಡು ತಮ್ಮ ಕಷ್ಟದ ಹಣವನ್ನು ಹೂಡಿಕೆ ಮಾಡಿ ಈಗ ಬೀದಿಗೆ ಬೀಳುತ್ತಿದ್ದಾರೆ.
ವಂಚಕರಿಗೆ ರಾತ್ರೋರಾತ್ರಿ ಕೋಟಿ, ಗ್ರಾಹಕರಿಗೆ ಚೊಂಬು!
ಈ ಇಡೀ ಜಾಲ ನಡೆಯುತ್ತಿರುವುದೇ ಎರಡು ಅಪಾಯಕಾರಿ ಮನಸ್ಥಿತಿಗಳ ಮೇಲೆ:
ವಂಚಕರ ಸಂಚು: ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧೀಶ್ವರರಾಗಿ, ಜನರ ಹಣದೊಂದಿಗೆ ವಿದೇಶಕ್ಕೋ ಅಥವಾ ಬೇರೆಡೆಗೋ ಕಾಲು ಕೀಳುವುದು.
ಸಾರ್ವಜನಿಕರ ಆತುರ: ಕಷ್ಟಪಡದೆ ಸುಲಭವಾಗಿ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಿ ಐಷಾರಾಮಿ ಜೀವನ ನಡೆಸಬೇಕೆಂಬ ಹಂಬಲ.
ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳು ಎಷ್ಟೇ ಜಾಗೃತಿ ಮೂಡಿಸಿದರೂ, “ನನಗೆ ಅದೃಷ್ಟ ಒಲಿಯುತ್ತದೆ” ಎಂಬ ಭ್ರಮೆಯಲ್ಲಿ ಜನರು ಮತ್ತೆ ಮತ್ತೆ ಅದೇ ಗುಂಡಿಗೆ ಬೀಳುತ್ತಿದ್ದಾರೆ. ಹಣ ಕಟ್ಟಿಸಿಕೊಂಡವರು ದಿಢೀರ್ ನಾಪತ್ತೆಯಾದಾಗ, ತಲೆಮೇಲೆ ಕೈಹೊತ್ತು ಸಿಸ್ಟಮ್‌ಗೆ ಹಾಗೂ ವಂಚಕರಿಗೆ ಹಿಡಿಶಾಪ ಹಾಕುವುದು ಮಾತ್ರ ಸಂತ್ರಸ್ತರ ಪಾಲಾಗುತ್ತಿದೆ.
ಸಾರ್ವಜನಿಕರ ಗಮನಕ್ಕೆ: ಇನ್ನಾದರೂ ಎಚ್ಚೆತ್ತುಕೊಳ್ಳಿ!
ಉಚಿತವಾಗಿ ಅಥವಾ ಸುಲಭವಾಗಿ ಏನೂ ಸಿಗುವುದಿಲ್ಲ: ಕಷ್ಟಪಟ್ಟು ದುಡಿದ ಹಣಕ್ಕೆ ಮಾತ್ರ ನಿಜವಾದ ಮೌಲ್ಯವಿದೆ. ತಿಂಗಳಿಗೆ ಸಾವಿರ ಕಟ್ಟಿ ಲಕ್ಷ ಪಡೆಯುವ ಕಲ್ಪನೆ ಕೇವಲ ಹಗಲುಗನಸು.
ಸರಕಾರದ ಮಾನ್ಯತೆ ಪರಿಶೀಲಿಸಿ: ಯಾವುದೇ ಕಂಪನಿ ಅಥವಾ ಸ್ಕೀಮ್‌ಗೆ ಆರ್‌ಬಿಐ (RBI), SEBI ಅಥವಾ ಸರಕಾರದ ಮಾನ್ಯತೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ವೇದಿಕೆಯ ರಂಗು ನೋಡಿ ಮರುಳಾಗಬೇಡಿ: ಉದ್ಘಾಟನೆಗೆ ಯಾರು ಬಂದಿದ್ದಾರೆ ಎಂಬುದಕ್ಕಿಂತ, ಆ ಸ್ಕೀಮ್‌ನ ಕಾಯ್ದೆ-ಕಾನೂನು ಚೌಕಟ್ಟು ಏನು ಎಂಬುದ ಮುಖ್ಯ.
ಕೊನೆ ಮಾತು: ಆಸೆಯೇ ದುಃಖಕ್ಕೆ ಮೂಲ. ವಂಚಕರು ನಿಮ್ಮ ದುರಾಸೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ. ಕಷ್ಟಪಟ್ಟು ದುಡಿದ ನಿಮ್ಮ ಹಣವನ್ನು ಇಂತಹ ಅಕ್ರಮ ಲಕ್ಕಿ ಸ್ಕೀಮ್‌ಗಳಿಗೆ ಸುರಿದು ಕುಟುಂಬವನ್ನು ಬೀದಿಗೆ ತಳ್ಳಬೇಡಿ. ಬಣ್ಣದ ಮಾತುಗಳಿಗೆ ಮರುಳಾಗದೆ, ಇನ್ನಾದರೂ ಎಚ್ಚೆತ್ತುಕೊಳ್ಳಿ!
arrest
ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ!
ಮಂಗಳೂರು: ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾರ್ಯಾಚರಣೆಯ ವಿವರ:
ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಹಣವನ್ನು ದೂರುದಾರರಿಗೆ ಬಿಡುಗಡೆ ಮಾಡಲು ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಒಟ್ಟು ₹25,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಪೈಕಿ ಈಗಾಗಲೇ ₹15,000 ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದ ಇನ್ಸ್‌ಪೆಕ್ಟರ್, ಬಳಿಕ ಹೆಚ್ಚುವರಿಯಾಗಿ ಮತ್ತೊಮ್ಮೆ ₹5,000 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಬೇಸತ್ತ ಫಿರ್ಯಾದುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಅನ್ವಯ ಸೆಪ್ಟೆಂಬರ್ 21ರ ಸಂಜೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ದೂರುದಾರರಿಂದ ₹5,000 ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.
ಹಿನ್ನೆಲೆ ಮತ್ತು ಹಳೆಯ ಆರೋಪಗಳು:
ಈ ಹಿಂದೆ ಉಳ್ಳಾಲ ಠಾಣೆಯಲ್ಲಿದ್ದಾಗಲೂ ಬಾಲಕೃಷ್ಣ ಅವರ ಮೇಲೆ ಭ್ರಷ್ಟಾಚಾರದ ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು:
ಕಳ್ಳತನ ಪ್ರಕರಣದಲ್ಲಿ ಲಂಚ: ಉಳ್ಳಾಲದ ಮನೆಯೊಂದರಲ್ಲಿ ₹15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಪ್ರಕರಣದಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಳ್ಳುವಾಗಲೂ ಲಂಚ ಪಡೆದ ಆರೋಪವಿತ್ತು.
ಪ್ರಕರಣ ಮುಚ್ಚಿಹಾಕಲು ದಂಧೆ:
ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿಯಿಂದ ಪ್ರಕರಣ ಮುಚ್ಚಿಹಾಕಲು ₹3 ಲಕ್ಷ ರೂಪಾಯಿ ಪೀಕಿಸಿದ್ದಲ್ಲದೆ, ಮಗನ ಚಿನ್ನಾಭರಣ ಎಗರಿಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ಅಂದಿನ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾಗ, ಇಲಾಖಾ ವಿಚಾರಣೆ ವೇಳೆ ದೂರುದಾರ ಮಹಿಳೆಗೆ ₹4.5 ಲಕ್ಷ ರೂಪಾಯಿ ನೀಡಿ ಕೇಸ್ ಹಿಂಪಡೆಯುವಂತೆ ಮಾಡಿದ್ದರೆನ್ನಲಾಗಿದೆ.
ವರ್ಗಾವಣೆ ನಾಟಕ: ಉಳ್ಳಾಲದ ಮರಳು ದಂಧೆಕೋರರ ಸಾಲಿಗೆ ಸಿಲುಕಿ ವರ್ಗಾವಣೆಯಾಗಿದ್ದ ಇವರು, ಬಳಿಕ ಪಾಂಡೇಶ್ವರ ಮಹಿಳಾ ಠಾಣೆಗೆ ಸೇರಿ, ಪ್ರಸ್ತುತ ಬಜ್ಜೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮುಖ್ಯಮಂತ್ರಿ ಪದಕದ ವಿವಾದ.! ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇತರೆ ತಂಡಗಳು ಶ್ರಮವಹಿಸಿ ಆರೋಪಿಗಳನ್ನು ಬಂಧಿಸಿದ್ದರೂ, ಅದರ ನೆಪದಲ್ಲಿ ಅಂದಿನ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರ ಹೆಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಿದ್ದು ಭಾರೀ ಸುದ್ದಿಯಾಗಿತ್ತು.
court
ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಮರುತನಿಖೆಗೆ ಐತಿಹಾಸಿಕ ಆದೇಶ
ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಮತ್ತು ದಶಕಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆದಿದ್ದ ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಹಾಗೂ ಐತಿಹಾಸಿಕ ಆದೇಶ ಹೊರಡಿಸಿದೆ. ಪ್ರಕರಣವನ್ನು ಮರುತನಿಖೆ ನಡೆಸುವಂತೆ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯ, ಹೊಸದಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ನಿರ್ದೇಶಿಸಿದೆ. ಅಲ್ಲದೆ, ಕೇವಲ ಮೂರು ತಿಂಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಗಡುವು ವಿಧಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರನ್ನು ಹೊಸ ಎಸ್‌ಐಟಿ ಮರುತನಿಖೆ ಮಾಡುವಂತಿಲ್ಲ ಅಥವಾ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದು ಮಹತ್ವದ ಆದೇಶ ಹೊರಡಿಸಿದೆ
ಪ್ರಕರಣದ ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖ ಮುಖ್ಯಾಂಶಗಳು:
ಘಟನೆಯ ಹಿನ್ನೆಲೆ: 2012ರ ಅಕ್ಟೋಬರ್‌ನಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಕಾಲೇಜಿನಿಂದ ಮನೆಗೆ ಮರಳುವಾಗ ನಾಪತ್ತೆಯಾಗಿದ್ದರು. ಅಕ್ಟೋಬರ್ 10ರಂದು ಧರ್ಮಸ್ಥಳದ ಮಣ್ಣಸಂಕ ಎಂಬಲ್ಲಿ ಆಕೆಯ ಅರ್ಧನಗ್ನ ಮೃತದೇಹ ಪತ್ತೆಯಾಗಿತ್ತು.
ತನಿಖಾ ವೈಫಲ್ಯ ಮತ್ತು ಆಕ್ರೋಶ: ಸ್ಥಳೀಯ ಪೊಲೀಸರು ಮಾನಸಿಕ ಅಸ್ವಸ್ಥ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಆದರೆ ಇದು ಪ್ರಭಾವಿಗಳನ್ನು ರಕ್ಷಿಸಲು ನಡೆಸಿದ ನಾಟಕ ಎಂದು ಸಾರ್ವಜನಿಕರು ಮತ್ತು ಸೌಜನ್ಯಾ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸಾರ್ವಜನಿಕ ಪ್ರತಿಭಟನೆಯ ಬಳಿಕ ಪ್ರಕರಣವು ಸಿಐಡಿ ಹಾಗೂ ನಂತರ ಸಿಬಿಐ ತನಿಖೆಗೆ ಹಸ್ತಾಂತರಗೊಂಡಿತ್ತು. ಆದರೆ ಸಿಬಿಐ ಕೂಡ ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಹೈಕೋರ್ಟ್ ಆದೇಶ ಹಾಗೂ ಸುಪ್ರೀಂ ಮೆಟ್ಟಿಲು: ಸಿಬಿಐ ತೀರ್ಪನ್ನು ಪ್ರಶ್ನಿಸಿ ಹಾಗೂ ಮರುತನಿಖೆಗೆ ಕೋರಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ (SLP) ದಾಖಲಿಸಿದ್ದರು.
ಸಿಬಿಐ ತನಿಖೆಗೆ ತೀವ್ರ ತರಾಟೆ: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರನ್ನೊಳಗೊಂಡ ಪೀಠವು, ಸಿಬಿಐ ತನಿಖೆಯ ಕಳಪೆ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. “ಸಿಬಿಐ ತನಿಖಾಧಿಕಾರಿ ನ್ಯಾಯಾಧೀಶರಂತೆ ವರ್ತಿಸಿದ್ದು, ಯಾವುದೇ ಸ್ವತಂತ್ರ ತನಿಖೆ ನಡೆಸದೆ ಹಿಂದಿನ ತನಿಖೆಯನ್ನೇ ಆಧರಿಸಿ ವರದಿ ಸಲ್ಲಿಸಿದ್ದಾರೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿ ತೀರ್ಪು ಕಾಯ್ದಿರಿಸಿತ್ತು.
ಹೊಸ ತಿರುವು ಹಾಗೂ ಮುಂದಿನ ಹೆಜ್ಜೆಗಳು:
ಹೊಸ ತನಿಖೆ: 2012ರ ಧರ್ಮಸ್ಥಳದ 17 ವರ್ಷದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.
ಎಸ್‌ಐಟಿ (SIT) ರಚನೆ: ಈ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕು ಮತ್ತು ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಲಾಗಿದೆ.
ಸಿಬಿಐ ಹಾಗೂ ಹಳೇ ಸಿಬ್ಬಂದಿಗೆ ನಿರ್ಬಂಧ: ಈ ಹಿಂದೆ ತನಿಖೆ ನಡೆಸಿದ್ದ ಸಿಬಿಐ (CBI) ಅಥವಾ ಹಿಂದಿನ ತನಿಖಾ ತಂಡದಲ್ಲಿದ್ದ ಯಾವುದೇ ಪೊಲೀಸರನ್ನು ಹೊಸ ಎಸ್‌ಐಟಿಗೆ ನೇಮಿಸುವಂತಿಲ್ಲ.
ಸಂತೋಷ್ ರಾವ್ ವಿಚಾರಣೆಗೆ ತಡೆ: ಈ ಪ್ರಕರಣದಲ್ಲಿ ಈಗಾಗಲೇ ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರನ್ನು ಹೊಸ ಎಸ್‌ಐಟಿ ಮರುತನಿಖೆ ಮಾಡುವಂತಿಲ್ಲ ಅಥವಾ ವಿಚಾರಣೆಗೆ ಒಳಪಡಿಸುವಂತಿಲ್ಲ.
3 ತಿಂಗಳ ಡೆಡ್‌ಲೈನ್: ಹೊಸ ಎಸ್‌ಐಟಿ ತಂಡವು ಪ್ರಕರಣದ ಮರುತನಿಖೆಯನ್ನು ಪೂರ್ಣಗೊಳಿಸಿ, ಆದೇಶದಂತೆ ನಿಗದಿತ ಮೂರು ತಿಂಗಳೊಳಗೆ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕಿದೆ.
ಹಿನ್ನೆಲೆ: ಸೌಜನ್ಯಾ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ್ ಅವರ ಪೀಠ ಈ ಆದೇಶ ನೀಡಿದೆ. ಒಂದು ದಶಕದ ಬಳಿಕ ಈ ಹೊಸ ತನಿಖಾ ಚೌಕಟ್ಟು ರೂಪುಗೊಂಡಿದೆ.
ಈ ಮಹತ್ವದ ತೀರ್ಪಿನಿಂದಾಗಿ ಕಳೆದ 14 ವರ್ಷಗಳಿಂದ ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಸೌಜನ್ಯಾ ಕುಟುಂಬಕ್ಕೆ ಹಾಗೂ ಮೃತ್ಯುವಿಗೆ ನ್ಯಾಯ ಸಿಗುವ ಭರವಸೆ ಮತ್ತು ನಿರೀಕ್ಷೆಗಳು ಗರಿಗೆದರಿವೆ
crime
ಪುತ್ತೂರು: ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಅಜಿತ್ ರೈ ಹೊಸಮನೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:
- ಷರತ್ತುಬದ್ಧ ಅನುಮತಿ: ಶೋಭಾಯಾತ್ರೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
- ಸಮಯ ಮೀರಿದ ಬಳಿಕವೂ ಬಳಕೆ: ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು.
- ಆರೋಪವೇನು?: ಪೊಲೀಸರು ಸೂಚನೆ ನೀಡಿದರೂ, ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು ಧ್ವನಿವರ್ಧಕ ಬಂದ್ ಮಾಡದಂತೆ ತಡೆದು, ಪುನಃ ಧ್ವನಿವರ್ಧಕ ಬಳಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ:
ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ
-
accident2 months agoಬಿ.ಸಿ. ರೋಡ್ ಸರ್ಕಲ್‌ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್‌ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala9 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
