Politics
ರಸ್ತೆ ಅಭಿವೃದ್ಧಿ ಮಾಡಬೇಕೆಂಬ ಕನಸಿದೆ, ಆದರೆ ನಿಮ್ಮ ವಿರೋಧದ ನಡುವೆ ಮಾಡಬೇಕೆಂಬ ಹಠವಿಲ್ಲ: ಶಾಸಕ ಅಶೋಕ್ ಕುಮಾರ್ ರೈ
ವಿಟ್ಲದ ಪ್ರಮುಖ ನಾಲ್ಕು ರಸ್ತೆಗಳ ಅಗಲೀಕರಣ ಹಿನ್ನೆಲೆ: ಶಾಸಕರ ನೇತೃತ್ವದಲ್ಲಿ ಕಟ್ಟಡ ಮಾಲೀಕರ ಸಭೆ
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಲ್ಕು ಪ್ರಮುಖ ರಸ್ತೆಗಳ ಅಗಲೀಕರಣ ಕುರಿತು ಸಾಧಕ-ಬಾಧಕಗಳನ್ನು ಚರ್ಚಿಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ವರ್ತಕರು ಮತ್ತು ಕಟ್ಟಡ ಮಾಲೀಕರ ಸಭೆ ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು,
1. ಸರ್ಕಾರದ ಸುತ್ತೋಲೆ ಏನಿದೆ?
ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ. PWD ರಸ್ತೆಯ ಪಕ್ಕದಲ್ಲಿರುವ ಕಂಜೆಸ್ಟೆಡ್ ಜಾಗಗಳನ್ನು ಸರ್ವೆ ಮಾಡಿ, ಸರಿಯಾದ ವರದಿಯನ್ನು ಸರ್ಕಾರಕ್ಕೆ ಮಂಡಿಸಬೇಕು. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದರೆ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಆದೇಶ ಬಂದಿದೆ.
2. ಎಷ್ಟು ಅನುದಾನ?
ಕಬಕ – ವಿಟ್ಲ ರಸ್ತೆಯನ್ನು ಫೋರ್ ಲೇನ್ ಮಾಡಲು ಈಗಾಗಲೇ 30 ಕೋಟಿ ರೂ. ಮಂಜೂರಾಗಿದೆ, ಇನ್ನೂ 10 ಕೋಟಿ ರೂ. ಬರಲಿದೆ. ಒಟ್ಟು 40 ಕೋಟಿ ರೂ. ನಲ್ಲಿ 7.5 ಕಿ.ಮೀ ರಸ್ತೆ ಅಭಿವೃದ್ಧಿಯಾಗಲಿದೆ. ಇದು ವಿಟ್ಲದ ಅಭಿವೃದ್ಧಿಗೆ ಪೂರಕ.
3. 22 ಮೀಟರ್ ಬೇಡ, 15 ಮೀಟರ್ ಸಾಕು:
ಮೂಲ ಯೋಜನೆಯಲ್ಲಿ 22 ಮೀಟರ್ ಅಗಲೀಕರಣ ಪ್ರಸ್ತಾವ ಇತ್ತು. ಆದರೆ ವರ್ತಕರಿಗೆ ತೊಂದರೆಯಾಗುತ್ತದೆ ಎಂದು ಚರ್ಚಿಸಿ ಅದನ್ನು 15 ಮೀಟರ್ ಗೆ ಇಳಿಸಿ, ಫುಟ್‌ಪಾತ್ ಸಹಿತ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
4. ಪರಿಹಾರ ಹೇಗೆ?
ರಸ್ತೆಗೆ ಜಾಗ ಬಿಟ್ಟುಕೊಡುವವರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯ ದರದ 3 ಪಟ್ಟು ಪರಿಹಾರ ನೀಡಲಾಗುವುದು. ಸರಿಯಾದ ಸರ್ವೆ ಮಾಡಿ, ನಿಗದಿತ ಹಣ ನೀಡಿದ ಬಳಿಕವೇ ಅಗಲೀಕರಣ. ಸರ್ಕಾರಿ ಜಾಗದಲ್ಲಿ ಅನುಮತಿ ಇಲ್ಲದೆ ಕಟ್ಟಿದ ಕಟ್ಟಡಗಳಿಗೆ ಯಾವುದೇ ಪರಿಹಾರ ಇಲ್ಲ.
5. ವಿಟ್ಲದ ಭವಿಷ್ಯ:
ಕುಡಿಯುವ ನೀರಿಗೆ 6 ಕೋಟಿ ರೂ. ಯೋಜನೆ ಬಂದಿದೆ, ಇನ್ನೂ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿದೆ. ಡ್ರೈನೇಜ್, UGD ವ್ಯವಸ್ಥೆ ಬಂದರೆ ಮಾತ್ರ ನಗರ ಬೆಳೆಯಲು ಸಾಧ್ಯ. ವಿಟ್ಲವು ಕೇರಳ, ಮಂಗಳೂರು, ಪುತ್ತೂರು ಸಂಪರ್ಕಿಸುವ ಸಿಟಿ. ಇಲ್ಲಿ ರಸ್ತೆ ಅಭಿವೃದ್ಧಿಯಾದರೆ ಬ್ಯುಸಿನೆಸ್ ಡೆವಲಪ್ ಆಗುತ್ತದೆ. ಹಳೆಯ ಕಟ್ಟಡಗಳು ಮುಂದಿನ ದಿನಗಳಲ್ಲಿ ಬೀಳುತ್ತವೆ, ಆಗ ಮಾರ್ಜಿನ್ ಬಿಟ್ಟೇ ಕಟ್ಟಬೇಕು.
“ಎಲ್ಲಾ ಕಡೆ ನಗರಗಳು ಬೆಳೆಯುತ್ತಿವೆ. ಇಲ್ಲಿ ಕಾಂಗ್ರೆಸ್-ಬಿಜೆಪಿ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವವ ನಾನಲ್ಲ. ನಿಮ್ಮೆಲ್ಲರ ವಿಶ್ವಾಸ ತೆಗೆದುಕೊಂಡು ಮುಂದುವರೆಯೋಣ. ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್ ಇದ್ದರೆ ಅದರ ಓನರ್ ಶಿಪ್ ನಲ್ಲಿ ಅಂಗಡಿ ಪಡೆದಿರುತ್ತಾರೆ, ಆಗ ರಸ್ತೆ ಅಗಲೀಕರಣಕ್ಕೆ ಬೇಕಾಗುವ ಒಟ್ಟು ಜಾಗದ ವ್ಯಾಲ್ಯೂ ಮೇಲೆ ಎಲ್ಲರಿಗೂ ಸಮಾನವಾಗಿ ಪರಿಹಾರ ಸಿಗುತ್ತದೆ. ಎಲ್ಲರೂ ಜೊತೆಯಾಗಿ ಸೇರಿ ಅಭಿವೃದ್ಧಿ ಮಾಡುವ ಕೆಲಸ ಮಾಡೋಣ ರಸ್ತೆಯನ್ನು ಅಭಿವೃದ್ಧಿ ಮಾಡಬೇಕೆಂಬ ಕನಸಿದೆ. ಆದರೆ ನಿಮ್ಮ ವಿರೋಧದ ನಡುವೆ ಮಾಡಬೇಕೆಂಬ ಹಠವಿಲ್ಲ” – ಅಶೋಕ್ ಕುಮಾರ್ ರೈ, ಶಾಸಕರು

ರಸ್ತೆ ಅಗಲೀಕರಣ ಅತ್ಯಗತ್ಯ, ಜಾಗದ ಮಾಲೀಕರ ಮನವೊಲಿಸಿ ಸಹಕಾರ ಪಡೆಯುತ್ತೇವೆ: ಅಧ್ಯಕ್ಷ ಕರುಣಾಕರ ನಾಯ್ತೊಟ್ಟ
ಸಭೆಯಲ್ಲಿ ಮಾತನಾಡಿದ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರು,”ವಿಟ್ಲ ಪೇಟೆಗೆ ಈಗ ಅಗಲೀಕರಣ ಬಹಳ ಅಗತ್ಯವಿದೆ ಎಂಬುದನ್ನು ಶಾಸಕರು ಈಗಾಗಲೇ ಉಲ್ಲೇಖಿಸಿದ್ದಾರೆ. ಇದು ನಿಜ. ಜಾಗದ ಮಾಲೀಕರು, ವರ್ತಕರ ಅಭಿಪ್ರಾಯವನ್ನು ಪಡೆದುಕೊಂಡು ಮುಂದೆ ಯಾವ ರೀತಿ ಮಾಡಬಹುದು ಎಂದು ಅವರ ಮನಸ್ಸಿನ ಅಭಿಪ್ರಾಯವನ್ನು ತಿಳಿದುಕೊಳ್ಳಲು ಈ ಸಭೆ ಕರೆಯಲಾಗಿದೆ. ಅಂಗಡಿ ಮಾಲಕರು, ವರ್ತಕರ ಅಭಿಪ್ರಾಯ ಪಡೆದು ಮುಂದುವರಿಯಬೇಕು ವಿಟ್ಲ ಪೇಟೆಯ ಅಭಿವೃದ್ಧಿಗೆ ಅಗಲೀಕರಣ ಅತ್ಯಗತ್ಯ. ಜಾಗದ ಮಾಲೀಕರಿಗೆ ಒಳ್ಳೆಯ ಮನಸ್ಸು, ಬುದ್ಧಿ ಬಂದು ಅಗಲೀಕರಣಕ್ಕೆ ಸಹಕರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ನಿಮ್ಮೆಲ್ಲರ ಸಹಕಾರವನ್ನು ನಾನು ಬಯಸುತ್ತೇನೆ. ನನ್ನ ಕಡೆಯಿಂದ ಸಾಧ್ಯವಾದಷ್ಟು ಮನವೊಲಿಸುವ ಕೆಲಸವನ್ನು ಮಾಡಿ, ಪಂಚಾಯತ್ ವತಿಯಿಂದ ಪೂರ್ಣ ಸಹಕಾರ ನೀಡುತ್ತೇನೆ” ಎಂದರು

ವಿಟ್ಲ ಅಭಿವೃದ್ಧಿಗೆ ಶಾಸಕರ ಸಹಕಾರಕ್ಕೆ ಅಭಿನಂದನೆ – ಅಶೋಕ್ ಕುಮಾರ್ ಶೆಟ್ಟಿ
“ಶಾಸಕ ಅಶೋಕ್ ಕುಮಾರ್ ರೈ ಅವರು ಬಹಳ ಕ್ರಿಯಾಶೀಲರು. ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು, ಕಬಕ-ವಿಟ್ಲ ರಸ್ತೆಗೆ 40 ಕೋಟಿ ಅನುದಾನ, ಎರಡು ಹಳೆಯ ಬ್ರಿಟಿಷ್ ಕಾಲದ ಸೇತುವೆಗಳ ನವೀಕರಣ, ವಿಟ್ಲ ಪಟ್ಟಣ ಪಂಚಾಯತಿಗೆ 5 ಕೋಟಿ ಅನುದಾನ ನೀಡಿದ್ದಾರೆ. ರಾಜಕೀಯೇತರವಾಗಿ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ.”
ನಾವು ಜನಪ್ರತಿನಿಧಿಗಳು ಇಂದು ಇರುತ್ತೇವೆ, ನಾಳೆ ಇರುವುದಿಲ್ಲ, ಆದರೆ ಮಾಡಿದ ಕೆಲಸ ಉಳಿಯುತ್ತದೆ. ವಿಟ್ಲದ ಅಭಿವೃದ್ಧಿಗೆ ಪಟ್ಟಣ ಪಂಚಾಯತ್ ವತಿಯಿಂದ ಶಾಸಕರಿಗೆ ಪೂರ್ಣ ಸಹಕಾರ ನೀಡುತ್ತೇವೆ. ಶಾಸಕರು ಕೈ ಹಾಕಿದ ಕೆಲಸಗಳೆಲ್ಲ ಆಗುತ್ತಿದೆ, ಇದು ಒಂದೇ ಸಭೆಯಲ್ಲ, ಮುಂದೆ ಹಲವು ಸಭೆ ನಡೆಸಿ ಎಲ್ಲರಿಗೂ ನ್ಯಾಯಯುತ ಪರಿಹಾರ ಕೊಡುವ ಕೆಲಸವಾಗಲಿ ಎಂದು ಅವರು ಹೇಳಿದರು.
ಇತರರ ಅಭಿಪ್ರಾಯ:
ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೊಪ್ಪಳ: ರಸ್ತೆ ಅಗಲೀಕರಣಕ್ಕೆ ನಮ್ಮ ಸಂಘದ ಸಹಮತ ಇರುವುದಿಲ್ಲ. ರಸ್ತೆ ಅಗಲೀಕರಣ ನಡೆದರೆ ಇಲ್ಲಿನ ವ್ಯಾಪಾರ ವಹಿವಾಟುಗಳು ತಾಳ ತಪ್ಪಲಿದೆ. ಬೈಪಾಸ್ ರಸ್ತೆ ನಿರ್ಮಾಣ ಮಾತ್ರ ಸಮಸ್ಯೆಗೆ ಪರಿಹಾರ.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ: ಇಲ್ಲಿರುವ ಅಂಗಡಿ ಕಟ್ಟಡಗಳ ಸ್ಥಿತಿ ಮತ್ತು ಕನ್ವರ್ಶನ್ ಜಾಗದ ಪರಿಹಾರದ ಬಗ್ಗೆ ಪ್ರಶ್ನಿಸಿದರು.
ಜಾಗದ ಮಾಲಕ ಸುರೇಶ್ ಬನಾರಿ: ಅಗಲೀಕರಣ ನಡೆದರೆ ವಿಟ್ಲ ಪೇಟೆಯೇ ಇರಲಿಕ್ಕಿಲ್ಲ, ಜಾಗದ ಮಾಲೀಕರಿಗೆ ನೋಟಿಸ್ ನೀಡಿ, ಎಷ್ಟು ಜಾಗ ಬೇಕು ಎಂದು ತಿಳಿಸಬೇಕು ಎಂದರು.
ನಿವೃತ್ತ ಅಧ್ಯಾಪಕರಾದ ಮಾಧವ ಕುದ್ರೆತ್ತಾಯರವರು: ಪರ್ಯಾಯ ರೀತಿಯಲ್ಲಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸಲಹೆ ನೀಡಿದರು.
ವೇದಿಕೆಯಲ್ಲಿ ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್, ಜಾಗದ ಮಾಲಕರಾದ ವಿ.ಎ.ರಶೀದ್, ಪ್ರಮುಖರಾದ ಇಕ್ಬಾಲ್ ಹೋನೆಸ್ಟ್, ನೀಲಪ್ಪ ಗೌಡ, ಸಂಜೀವ ಪೂಜಾರಿ ಮತ್ತಿತರರು ಅಭಿಪ್ರಾಯವನ್ನು ತಿಳಿಸಿದರು.
ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಸಂಗೀತಾ ಪಣೆಮಜಲು , ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಎಇ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್, ಮುಖ್ಯಾಧಿಕಾರಿ ಕರುಣಾಕರ ವಿ. ಮೊದಲಾದವರು ಉಪಸ್ಥಿತರಿದ್ದರು
award
ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಐತಿಹಾಸಿಕ ಮಾನ್ಯತೆ: ಕರಾವಳಿಯಲ್ಲಿ ಹಬ್ಬದ ವಾತಾವರಣ
ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.

ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಬಲ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಹೊಂದಿರುವ ಅಪೂರ್ವ ಭಾಷೆಯಾಗಿದೆ. ರಾಜ್ಯ ಸರ್ಕಾರದಿಂದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಲಭಿಸಿರುವುದು, ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಹೋರಾಟಕ್ಕೆ ಮತ್ತಷ್ಟು ಪ್ರಬಲ ವೇದಿಕೆಯಾಗಲಿದೆ.
ನಿರಂತರ ಹೋರಾಟಕ್ಕೆ ಸಿಕ್ಕ ಫಲ: ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷಾ ಮಾನ್ಯತೆ ನೀಡಬೇಕೆಂದು ದಶಕಗಳಿಂದ ತುಳು ಸಾಹಿತ್ಯ ಅಕಾಡೆಮಿ, ತುಳು ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತ ಬಂದಿದ್ದರು.
ತಜ್ಞರ ಸಮಿತಿಯ ವರದಿ ಆಧಾರ: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹಿರಿಯ ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಹೊರ ರಾಜ್ಯಗಳಲ್ಲಿನ ಭಾಷಾ ನೀತಿ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ತುಳುವರ ಬಹುಕಾಲದ ಕನಸು ನನಸಾಗಿದ್ದು, ಕರಾವಳಿ ಭಾಗದಲ್ಲಿ ಹರ್ಷೋದ್ಗಾರ ವ್ಯಕ್ತವಾಗಿದೆ.
CONGRESS
ಮಂಗಳೂರು ಸಚಿವ ಸಂಪುಟ ಸಭೆ: ವಿವಿಧ ಸಂಘಟನೆಗಳ ಪ್ರತಿಭಟನೆ ಮತ್ತು ಬಿಗಿ ಭದ್ರತೆ
ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಶುಕ್ರವಾರ (ಸೆಪ್ಟೆಂಬರ್ 18) ಆಯೋಜಿಸಲಾದ ವಿಶೇಷ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರು ಆಗಮಿಸಿದ ವೇಳೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದವು. ಅಬ್ದುಲ್ ರಹೀಮಾನ್ ಕೊಲೆ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿ ಎಸ್.ಡಿ.ಪಿ.ಐ. ಕಾರ್ಯಕರ್ತರು ಮಂಗಳೂರಿನ ರಾವ್ & ರಾವ್ ಸರ್ಕಲ್ ಬಳಿ ಕಪ್ಪುಪತಾಕೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಅದೇ ರೀತಿ, ಜೈಲ್ ಜಾಮರ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಕೀಲರನ್ನು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹೊರಟ ಸಿ.ಪಿ.ಐ.ಎಂ. ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಇದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ತುಳು ಸಂಘಟನೆಯವರು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಕದ್ರಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಡೀಲ್‌ನಲ್ಲಿರುವ ಪ್ರಜ್ಞಾಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು 33 ಮಂದಿ ಸಚಿವರಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಆಯಾ ಸಭಾಂಗಣದಲ್ಲೇ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಿಗದಿತ ಸಮಯಕ್ಕಿಂತ ಸಭೆ ಸ್ವಲ್ಪ ವಿಳಂಬವಾಗಿ ಆರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
CONGRESS
ಮಂಗಳೂರಿನಲ್ಲಿ ಐತಿಹಾಸಿಕ ರಾಜ್ಯ ವಿಶೇಷ ಸಚಿವ ಸಂಪುಟ ಸಭೆ: ಸಿಎಂ ಹಾಗೂ ಸಚಿವರ ಭೇಟಿ ಮತ್ತು ಕಾರ್ಯಕ್ರಮಗಳ ವರದಿ
ಮಂಗಳೂರು: ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ರಾಜ್ಯ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ಆಗಮಿಸಿದ್ದು, ನಗರದಲ್ಲಿ ಬಿರುಸಿನ ರಾಜಕೀಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾಗಿವೆ.
ಕದ್ರಿ ದೇವಸ್ಥಾನ ಭೇಟಿ ಮತ್ತು ಗಾಂಧೀಜಿ ಸ್ಮರಣೆ
ಪ್ರವಾಸದ ಮೊದಲ ದಿನವಾದ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಗಳು ಐತಿಹಾಸಿಕ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, 1934ರಲ್ಲಿ ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಳಿದುಕೊಂಡಿದ್ದ ಐತಿಹಾಸಿಕ ಮನೆಯ ಸಮೀಪವಿರುವ ಗಾಂಧಿ ಸ್ಕ್ವೇರ್ ಕೆಫೆಗೆ ತೆರಳಿದರು.
ಯುವ ಕಂಟೆಂಟ್ ಕ್ರಿಯೇಟರ್ಸ್ ಜೊತೆ ಉಪಾಹಾರ ಹಾಗೂ ಸಂವಾದ
ಮಂಗಳೂರಿನ ಯುವ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಕೆಫೆಯಲ್ಲಿ ಸಾಂಪ್ರದಾಯಿಕ ಉಪಾಹಾರ ಸವಿಯುತ್ತಾ ಸಿಎಂ ಸಂವಾದ ನಡೆಸಿದರು. ಮಂಗಳೂರು ಬನ್ಸ್, ದೋಸೆ ಸೇರಿದಂತೆ ಕರಾವಳಿಯ ವಿಶಿಷ್ಟ ಉಪಾಹಾರಗಳನ್ನು ಸವಿದ ಅವರು, “ಇಲ್ಲಿಗೆ ಬಂದಿರುವುದು ಬಹಳ ಸಂತೋಷ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಜನರ ಬದುಕು ಮುಖ್ಯ – ಸಿಎಂ ಸ್ಪಷ್ಟನೆ
ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತೇನೆ. ಯಾರೂ ಗಾಬರಿಯಾಗಬೇಕಿಲ್ಲ; ನಮಗೆ ಜನರ ಬದುಕು ಮುಖ್ಯವೇ ಹೊರತು ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ. ಎಲ್ಲರ ಚಿಂತನೆಯನ್ನೊಳಗೊಂಡು ನಮ್ಮ ಸರ್ಕಾರ ಕೆಲಸ ಮಾಡಲಿದೆ” ಎಂದು ಸ್ಪಷ್ಟಪಡಿಸಿದರು.
ಸಂಪುಟ ಸಭೆಗೆ ಭರ್ಜರಿ ಸ್ವಾಗತ ಮತ್ತು ಸಿದ್ಧತೆ
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭವ್ಯ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಪಂಪ್‌ವೆಲ್‌ನಿಂದ ಪಡೀಲ್ ವರೆಗೆ ಚೆಂಡೆ ಬ್ಯಾಂಡ್‌ಗಳು ಹಾಗೂ ವಿವಿಧ ವೇಷಧಾರಿಗಳ ಸಾಂಸ್ಕೃತಿಕ ತಂಡಗಳು ರಸ್ತೆಯುದ್ದಕ್ಕೂ ಗಮನ ಸೆಳೆದವು. ಡಿಸಿ ಕಚೇರಿ ಮುಂದೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದು, ಮುಖ್ಯಮಂತ್ರಿಗಳನ್ನು ಕಣ್ತುಂಬಿಕೊಳ್ಳಲು ರಸ್ತೆ ಬದಿ ಕಾದು ನಿಂತಿದ್ದಾರೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala9 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
