Connect with us

crime

ದೀವಟಿಗೆ ವಿಶೇಷ ತನಿಖಾ ವರದಿ: ಪುತ್ತೂರಿನಲ್ಲಿ ಮುದ್ದು ಕಂದಮ್ಮಗಳ ಹೆಸರಿನಲ್ಲಿ ಅನಧಿಕೃತ ದಂಧೆ! ನಿಯಮಗಳನ್ನೆಲ್ಲ ಗಾಳಿಗೆ ತೂರಿ ಮೂರನೇ ಮಹಡಿಯಲ್ಲಿ ನಡೆಯುತ್ತಿದೆಯೇ ಮಕ್ಕಳ ಬದುಕಿನ ಜೊತೆ ಚೆಲ್ಲಾಟ?

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ, ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆಗಳೊಂದಿಗೆ ಸಿದ್ಧತೆ ನಡೆಸುತ್ತಿರುವ ಹೆಮ್ಮೆಯ ನಗರ ಪುತ್ತೂರು. ಸಂವಿಧಾನದ ಆಶಯದಂತೆ ಇಲ್ಲಿನ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು, ಭ್ರಷ್ಟಾಚಾರ-ಲಂಚಮುಕ್ತ ಆಡಳಿತವಿರಬೇಕು, ಶೈಕ್ಷಣಿಕ ಸಂಸ್ಥೆಗಳು ಮಕ್ಕಳ ಭವಿಷ್ಯವನ್ನು ರೂಪಿಸುವ ಪವಿತ್ರ ನಿಲಯಗಳಾಗಬೇಕೆಂದು ಇಲ್ಲಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಘಂಟಾಘೋಷವಾಗಿ ಸಾರುತ್ತಾ ಬಂದಿದ್ದಾರೆ. ಆದರೆ, ಇದೇ ಪುತ್ತೂರು ನಗರದ ಹೃದಯಭಾಗದಲ್ಲಿ ಸದ್ದಿಲ್ಲದೆ, ಯಾವುದೇ ಕಾನೂನಿನ ಭಯವಿಲ್ಲದೆ ಮುದ್ದು ಕಂದಮ್ಮಗಳ ಬದುಕಿನ ಜೊತೆ ಚೆಲ್ಲಾಟವಾಡುವ ಆಘಾತಕಾರಿ ದಂಧೆಯೊಂದು ರಾಜಾರೋಷವಾಗಿ ಕಾರ್ಯಾಚರಿಸುತ್ತಿರುವುದು ಈಗ ಬಯಲಾಗಿದೆ!

ಹೌದು, ಸಮಾಜದ ಬಗ್ಗೆ ಕಾಳಜಿಯುಳ್ಳ ಸಾರ್ವಜನಿಕ ಹಿತಾಸಕ್ತಿಯುಳ್ಳ ಸಮಾಜಸೇವಕ ವೈದ್ಯರೊಬ್ಬರ ತೀಕ್ಷ್ಣ ಕಣ್ಣಿಗೆ ಬಿದ್ದ ಈ ಸತ್ಯ, ಇಡೀ ಪುತ್ತೂರಿನ ಪೋಷಕರು ಮತ್ತು ಶಿಕ್ಷಣ ಇಲಾಖೆ ತಲೆ ತಗ್ಗಿಸುವಂತೆ ಮಾಡಿದೆ.

ಲಿಫ್ಟ್ ಇಲ್ಲ, ಫೈರ್ ಸೇಫ್ಟಿ ಇಲ್ಲ: 3ನೇ ಮಹಡಿಯಲ್ಲಿ ಕಂದಮ್ಮಗಳ ಸೆರೆವಾಸ!

ಪುತ್ತೂರು ನಗರದ ಬೊಳ್ವಾರು ಎಂಬಲ್ಲಿರುವ “ಗಣೇಶ್ ಪ್ರಸಾದ್” ಹೆಸರಿನ ಕಟ್ಟಡದ 3ನೇ ಮಹಡಿಯಲ್ಲಿ ಯಾವುದೇ ಬೋರ್ಡ್ ಹಾಕದೆ, ತಾನೊಂದು ಅನಧಿಕೃತ ಸಂಸ್ಥೆ ಎಂಬುದನ್ನು ಸಾಬೀತುಪಡಿಸುವಂತೆ ಈ “ಮಕ್ಕಳ ಮನೆ” ಕಾರ್ಯಾಚರಿಸುತ್ತಿದೆ.

ಅಲ್ಲಿನ ವಾಸ್ತವ ಸ್ಥಿತಿ ನೋಡಿದರೆ ಎಂಥವರಿಗೂ ಮೈ ಜುಂ ಎನ್ನುತ್ತದೆ:

ಅಪಾಯಕಾರಿ 3ನೇ ಮಹಡಿ: ಕನಿಷ್ಠ ನಡೆದಾಡಲು ಬಾರದ, ಓಡಾಡುವ ವಯಸ್ಸಿನ ಪುಟ್ಟ ಮಕ್ಕಳಿಗೆ ಯಾವುದೇ ಲಿಫ್ಟ್ ಸೌಲಭ್ಯವಿಲ್ಲದ ಮೂರನೇ ಮಹಡಿಯಲ್ಲಿ ಈ ಕೇಂದ್ರವನ್ನು ನಡೆಸಲಾಗುತ್ತಿದೆ.

ರೂಪರೇಷೆಯಿಲ್ಲದ ಹಾಲ್, ಪಕ್ಕದಲ್ಲೇ ಅಡುಗೆ ಕೋಣೆ: ಒಂದು ಉದ್ದನೆಯ ಹಾಲ್, ಅದಕ್ಕೆ ಯಾವುದೇ ಪಾರ್ಟಿಷನ್ ಇಲ್ಲ. ಅದೇ ಹಾಲ್‌ನಲ್ಲಿ ಬೇಬಿ ಸಿಟ್ಟಿಂಗ್, ನರ್ಸರಿ, ಎಲ್‌ಕೆಜಿ, ಯುಕೆಜಿ ಕ್ಲಾಸುಗಳು! ಅಷ್ಟೇ ಏಕೆ, ಅದರ ಒಟ್ಟಿಗೇ ಅಡುಗೆ ಕೋಣೆಯೂ ಇದೆ. ಗ್ಯಾಸ್ ಸಿಲಿಂಡರ್ ಪಕ್ಕದಲ್ಲೇ ಪುಟ್ಟ ಕಂದಮ್ಮಗಳು ಆಟವಾಡಬೇಕಾದ ದುಸ್ಥಿತಿ ಇಲ್ಲಿದೆ.

ಗಾಳಿಗೆ ತೂರಿದ ಸುರಕ್ಷತೆ: ತುರ್ತು ಸಂದರ್ಭದಲ್ಲಿ ಕೆಳಗೆ ಬರಲು ಯಾವುದೇ ಪರ್ಯಾಯ ದಾರಿಯಿಲ್ಲ, ಅಗ್ನಿಶಾಮಕ ಸುರಕ್ಷತೆ (Fire Safety) ಇಲ್ಲವೇ ಇಲ್ಲ. ಇನ್ನು ಮಕ್ಕಳಿಗೆ ಬಳಸುವ ವಾಶ್ ರೂಮ್ ಇರುವುದು ಕೊಠಡಿಯಿಂದ ಹೊರಗಡೆ!

ತಿಂಗಳಿಗೆ 4 ಸಾವಿರಕ್ಕೂ ಅಧಿಕ ಲೂಟಿ!

ಒಂದು ಜೀವ ಉಳಿಸುವ ವೈದ್ಯಕೀಯ ಕ್ಲಿನಿಕ್ ಆರಂಭಿಸಬೇಕಾದರೆ ಎರಡನೇ ಮಹಡಿಯಲ್ಲಿದೆ ಎಂಬ ಕಾರಣಕ್ಕೆ ಅನುಮತಿ ನಿರಾಕರಿಸುವ ನಿಯಮಗಳು ಇಲ್ಲಿ ಎಲ್ಲಿ ಹೋದವು? ಪುಟ್ಟ ಕಂದಮ್ಮಗಳ ಕ್ಲಾಸಿಗೆ 3ನೇ ಮಹಡಿಯಲ್ಲಿ ಪರ್ಮಿಷನ್ ಕೊಟ್ಟವರು ಯಾರು? ಎಲ್‌ಕೆಜಿ ಮಗುವಿಗೆ ತಿಂಗಳಿಗೆ ಬರೋಬ್ಬರಿ 4,000 ರೂಪಾಯಿಗಿಂತಲೂ ಅಧಿಕ ಫೀಸ್ ವಸೂಲಿ ಮಾಡಲಾಗುತ್ತಿದೆ ಎಂದರೆ, ಇನ್ನು ಬೇಬಿ ಸಿಟ್ಟಿಂಗ್ ಹೆಸರಿನಲ್ಲಿ ಹೆತ್ತವರಿಂದ ಎಷ್ಟು ಹಣ ಲೂಟಿ ಮಾಡಲಾಗುತ್ತಿರಬಹುದು? ಇದು ಶಿಕ್ಷಣ ಸಂಸ್ಥೆಯೋ ಅಥವಾ ಕಂದಮ್ಮಗಳನ್ನು ಇಟ್ಟುಕೊಂಡು ಮಾಡುತ್ತಿರುವ ಕಾಸಿನ ದಂಧೆಯೋ?

ಇಲಾಖೆಗಳಿಗೂ ಗೊತ್ತಿಲ್ಲ, ಅಧಿಕಾರಿಗಳಿಗೂ ಸುದ್ದಿಯಿಲ್ಲ!

ಈ ಗಂಭೀರ ದಂಧೆಯ ಬೆನ್ನುಬಿದ್ದ ಆ ಸಮಾಜಸೇವಕ ವೈದ್ಯರು ಮೊದಲು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದಾಗ ಅಧಿಕಾರಿಗಳು ನೀಡಿದ ಉತ್ತರ ನಿಜಕ್ಕೂ ಬೆಚ್ಚಿಬೀಳಿಸುವಂತಿತ್ತು. “ನಾವು ಇದಕ್ಕೆ ಅನುಮತಿ ನೀಡಿಲ್ಲ, ಅದು ನಮ್ಮ ಅಂಡರ್‌ಗೆ ಬರುವುದಿಲ್ಲ” ಎಂದ ಇಲಾಖೆ, “ಅದು ಎಲ್ಲಿದೆ?” ಎಂದು ಉಲ್ಟಾ ಪ್ರಶ್ನೆ ಮಾಡಿದೆ! ತದನಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ, ಅಲ್ಲಿನ ಅಧಿಕಾರಿಗಳಿಗೂ ಈ ಸಂಸ್ಥೆಯ ಬಗ್ಗೆಯಾಗಲಿ, ಅನುಮತಿ ನೀಡಿರುವ ಬಗ್ಗೆಯಾಗಲಿ ಯಾವುದೇ ಮಾಹಿತಿಯೇ ಇಲ್ಲ!

ಯಾರ ಅನುಮತಿಯೂ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಂದಮ್ಮಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವುದನ್ನು ಕಂಡು ಆಕ್ರೋಶಗೊಂಡ ವೈದ್ಯರು, “ನಾನೇ ಈ ಬಗ್ಗೆ ಅಧಿಕೃತ ದೂರು ನೀಡುತ್ತೇನೆ, ತಕ್ಷಣ ಅಲ್ಲಿಗೆ ಹೋಗಿ ತನಿಖೆ ನಡೆಸಿ ಬೀಗ ಜಡಿಯಬೇಕು. ಇನ್ನು ಮುಂದೆ ಪುತ್ತೂರಿನಲ್ಲಿ ಇಂತಹ ಒಂದೇ ಒಂದು ಅನಧಿಕೃತ ಸಂಸ್ಥೆಯೂ ಇರಬಾರದು” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮಾಧ್ಯಮಗಳ ಮುಂದೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ನಿಯಮದ ಪುಸ್ತಕದಲ್ಲೇನಿದೆ? ಈ ಸಂಸ್ಥೆಯಲ್ಲಿ ಏನಿದೆ?

ಸರ್ಕಾರದ ನಿಯಮಾವಳಿಗಳ ಪ್ರಕಾರ ಒಂದು ಪ್ರಿ-ಸ್ಕೂಲ್ ಅಥವಾ ಬೇಬಿ ಸಿಟ್ಟಿಂಗ್ ನಡೆಸಲು ಈ ಕೆಳಗಿನ ದಾಖಲೆಗಳು ಕಡ್ಡಾಯ:

ಸರ್ಕಾರದ ಕಡ್ಡಾಯ ನಿಯಮಗಳುಬೊಳ್ವಾರಿನ ಈ ಅನಧಿಕೃತ ಸಂಸ್ಥೆಯ ಸ್ಥಿತಿ
ಶಿಕ್ಷಣ ಇಲಾಖೆಯ (BEO) ಪೂರ್ವಾನುಮತಿ ಮತ್ತು ನೋಂದಣಿಇಲ್ಲವೇ ಇಲ್ಲ!
ಪುರಸಭೆ/ಸ್ಥಳೀಯ ಆಡಳಿತದ ವ್ಯಾಪಾರ ಪರವಾನಗಿ (Trade License)ಗಾಳಿಗೆ ತೂರಲಾಗಿದೆ!
ಲೋಕೋಪಯೋಗಿ ಇಲಾಖೆಯ (PWD) ಕಟ್ಟಡ ಸುರಕ್ಷತಾ ಪ್ರಮಾಣಪತ್ರಯಾರೂ ಕೇಳುವವರಿಲ್ಲ!
ಅಗ್ನಿಶಾಮಕ ಇಲಾಖೆಯ ನಿಯಮಬದ್ಧ NOC (Fire Safety)ಶೂನ್ಯ!
ಆರೋಗ್ಯ ಇಲಾಖೆಯ ನೈರ್ಮಲ್ಯ ಪ್ರಮಾಣಪತ್ರಪತ್ತೆಯೇ ಇಲ್ಲ!
ಕಟ್ಟಡದ ಅಧಿಕೃತ ಬಾಡಿಗೆ ಅಥವಾ ಲೀಸ್ ಕರಾರು ಪತ್ರಸಂಶಯಾಸ್ಪದ!

ಈ ಯಾವುದೇ ನಿಯಮಗಳನ್ನು ಪಾಲಿಸದೆ ಮಕ್ಕಳನ್ನು ಕೂಡಿಟ್ಟಿರುವುದು ದಂಧೆಯಲ್ಲದೆ ಇನ್ನೇನು?

ಪೋಷಕರೇ ಎಚ್ಚರ.. ಎಚ್ಚರ..!

ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಕಷ್ಟಪಟ್ಟು ದುಡಿದ ಹಣವನ್ನು ತಂದು ಸುರಿಯುವ ಪೋಷಕರಿಗೆ ಈ ಸಂಸ್ಥೆಯ ಅಸಲಿ ಮುಖ ತಿಳಿಯಬೇಕಿದೆ. ಈ ವರದಿ ಪ್ರಕಟವಾಗುವವರೆಗೂ ಆ ಸಂಸ್ಥೆ ಎಲ್ಲಿದೆ ಎಂದು ನಾವು ಗುಪ್ತವಾಗಿಟ್ಟಿದ್ದೆವು. ಈಗಲಾದರೂ ಹೆತ್ತವರು ಎಚ್ಚೆತ್ತುಕೊಳ್ಳಲಿ, ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಜಾಗ ಎಷ್ಟು ಸುರಕ್ಷಿತ ಎಂಬುದನ್ನು ಅರಿತುಕೊಳ್ಳಲಿ ಎಂಬುವುದೇ ನಮ್ಮ ಆಶಯ.

ಇದು ಕೇವಲ ಪುತ್ತೂರು ಪುರಸಭಾ ವ್ಯಾಪ್ತಿಗಷ್ಟೇ ಸೀಮಿತವಾಗಿಲ್ಲ. ಶೈಕ್ಷಣಿಕ ಮಾಫಿಯಾ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ತನ್ನ ಕರಾಳಬಾಹುವನ್ನು ವಿಸ್ತರಿಸಿದ್ಧು ತಕ್ಷಣವೇ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ನಡೆಯುತ್ತಿರುವ ಮೂವತ್ತಕ್ಕೂ ಹೆಚ್ಚು ನಿಯಮಬಾಹಿರ ಸಂಸ್ಥೆಗಳ ವಿರುದ್ಧ ಕಾನೂನುಕ್ರಮ ಜರುಗಿಸಬೇಕಾಗಿದೆ.

ಕೊನೆಯ ಮಾತು: ಇಲಾಖೆಗಳು ಇರುವುದು ಯಾಕೆ?

ಇಷ್ಟೆಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ನಗರದ ಮಧ್ಯದಲ್ಲೇ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಇಲಾಖೆಗಳು ಇರುವುದು ಯಾಕೆ? ಎಂಬುದು ಈಗ ಪುತ್ತೂರಿನ ಸಾರ್ವಜನಿಕರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಈ ಕೂಡಲೇ ಸಂಬಂಧಪಟ್ಟ ಪುರಸಭೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ಈ ಅನಧಿಕೃತ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿದೆ. ಇಲ್ಲದಿದ್ದರೆ ಮಕ್ಕಳ ಜೀವಕ್ಕೆ ಏನಾದರೂ ಅಪಾಯವಾದರೆ ಅದಕ್ಕೆ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ!

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಪುತ್ತೂರು: ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಅಜಿತ್ ರೈ ಹೊಸಮನೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು

Published

on

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:

  • ಷರತ್ತುಬದ್ಧ ಅನುಮತಿ: ಶೋಭಾಯಾತ್ರೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
  • ಸಮಯ ಮೀರಿದ ಬಳಿಕವೂ ಬಳಕೆ: ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು.
  • ಆರೋಪವೇನು?: ಪೊಲೀಸರು ಸೂಚನೆ ನೀಡಿದರೂ, ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು ಧ್ವನಿವರ್ಧಕ ಬಂದ್ ಮಾಡದಂತೆ ತಡೆದು, ಪುನಃ ಧ್ವನಿವರ್ಧಕ ಬಳಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ:

ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ

Continue Reading

crime

ಪುತ್ತೂರು ಮಹಿಳಾ ಠಾಣೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ

Published

on

ಪುತ್ತೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ತಮ್ಮ ಹೋರಾಟಕ್ಕೆ ಜಯ ಸಿಗುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು

ಮೂಲಗಳ ಪ್ರಕಾರ, ಬೆಳಿಗ್ಗೆ 11.30ರ ಸುಮಾರಿಗೆ ಅವರು ತಮ್ಮ ಹಳೆಯ ಕೇಸ್ ಒಂದರ ಸಂಬಂಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮಹಿಳಾ ಠಾಣಾ ಇನ್‌ಸ್ಪೆಕ್ಟರ್‌ ಸುನಿಲ್ ಕುಮಾರ್ ಅವರು ಬೇರೆ ಕಾರ್ಯ ನಿಮಿತ್ತ ಠಾಣೆಯಲ್ಲಿ ಇರಲಿಲ್ಲ. ಹೀಗಾಗಿ, ಲಿಖಿತವಾಗಿ ಹಾಜರಾದ ಬಗ್ಗೆ ಅವರಿಗೆ ನೋಟಿಸ್ ನೀಡಲಾಯಿತು. ಮುಂದಿನ ಸೂಚಿತ ದಿನಾಂಕದಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಮತ್ತೆ ಠಾಣೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ದಿನೇಶ್ ಜೈನ್ ಸೇರಿದಂತೆ ಹಲವರು ಅಭಿಮಾನಿಗಳು ಅವರ ಜೊತೆಗಿದ್ದರು.

ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರಿಗೆ ಭೇಟಿ ನೀಡಿದಾಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದೇ ಹೋಗುತ್ತಿದ್ದು, ಅದರಂತೆ ಇಂದು ಠಾಣೆಗೆ ತೆರಳಿ ಹಿಂತಿರುಗುವಾಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು ಎಂದು ಅವರ ಆಪ್ತ ವಲಯ ತಿಳಿಸಿದೆ.

Continue Reading

crime

ಸಕಲೇಶಪುರ ಲಾಡ್ಜ್‌ನಲ್ಲಿ ಕರಾಳ ರಾತ್ರಿ: ಬಾತ್‌ರೂಮ್‌ನಲ್ಲಿ 23 ವರ್ಷದ ಯುವತಿ ನಿಗೂಢ ಸಾವು, ಜೊತೆಗಿದ್ದ ಯುವಕರು ಎಸ್ಕೇಪ್!

Published

on

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್‌ ಒಂದರಲ್ಲಿ 23 ವರ್ಷದ ವರ್ಷ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಘಟನೆಯು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರಣೆ:

ಪ್ರವಾಸಕ್ಕೆ ತೆರಳಿದ್ದ ಮೂವರು: ಬೆಂಗಳೂರು ಮೂಲದ (ನಾಗಸಂದ್ರ/ಚಿಕ್ಕಬಾಣಾವರ) 23 ವರ್ಷದ ವರ್ಷ ಎಂಬ ಯುವತಿ, ತನ್ನ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಎಂಬುವವರೊಂದಿಗೆ ಶುಕ್ರವಾರ ಪ್ರವಾಸಕ್ಕೆಂದು ಸಕಲೇಶಪುರಕ್ಕೆ ಬಂದಿದ್ದಳು.

ಪ್ರವಾಸಿ ತಾಣಗಳ ವೀಕ್ಷಣೆ: ಶನಿವಾರ, ಭಾನುವಾರ ಹಾಗೂ ಸೋಮವಾರದಂದು ಈ ಮೂವರು ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸುತ್ತಾಡಿದ್ದರು.

ಲಾಡ್ಜ್‌ನಲ್ಲಿ ತಂಗಿದ್ದ ದಳ: ವಳಲಹಳ್ಳಿ ಕೂಡಿಗೆಯಲ್ಲಿರುವ ಶ್ರೀದೇವು ಲಾಡ್ಜ್‌ನಲ್ಲಿ ಮೂವರು ಒಂದೇ ರೂಮ್‌ನಲ್ಲಿ ತಂಗಿದ್ದರು.

ಅನುಮಾನಾಸ್ಪದ ಸಾವು: ಮಂಗಳವಾರ ಲಾಡ್ಜ್‌ನ ಬಾತ್‌ರೂಮ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಅಸುನೀಗಿದ್ದಾರೆ. ಯುವತಿ ಮೃತಪಟ್ಟ ಬಳಿಕ ಜೊತೆಗಿದ್ದ ಯುವಕರು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದಾರೆ (ಕೆಲವು ಮೂಲಗಳ ಪ್ರಕಾರ ಆಸ್ಪತ್ರೆಗೆ ಕರೆತಂದು ಬಳಿಕ ತೆರಳಿದ್ದಾರೆ).

ಆಸ್ಪತ್ರೆ ಹಾಗೂ ಪೊಲೀಸ್ ತನಿಖೆ: ಕೂಡಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾತ್‌ರೂಮ್‌ನಲ್ಲಿ ಯುವತಿ ಮೃತಪಟ್ಟಿರುವುದು ಮತ್ತು ಜೊತೆಗಿದ್ದವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿಗೆ ನಿಖರವಾದ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

Continue Reading

Trending

Copyright © 2025 Deevatige

error: Content is protected !!