Connect with us

Dakshina Kannada

ಎಚ್ಚರ..ಮಾನವ ನಿರ್ಮಿತ ತಪ್ಪುಗಳೇ ದುರಂತಕ್ಕೆ ಕಾರಣ..! ಕರಾವಳಿಯಲ್ಲಿ ಕಂಟಕವಾಗುತ್ತಿರುವ ಗುಡ್ಡಗಳ ನಾಶ: ಮುಂದೊಂದು ದಿನ ಭೀಕರ ಮಾನವ ನಿರ್ಮಿತ ದುರಂತದ ಎಚ್ಚರಿಕೆ!

Published

on

ಮಂಗಳೂರು: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಭೀತಿ ಮತ್ತೆ ತೀವ್ರಗೊಂಡಿದೆ. ಜಿಲ್ಲೆಯ 100ಕ್ಕೂ ಹೆಚ್ಚು ಪ್ರದೇಶಗಳು ಭೂಕುಸಿತದ ಆತಂಕ ಎದುರಿಸುತ್ತಿದ್ದು, ಈ ಪೈಕಿ 88 ಸ್ಥಳಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ‘ಅತಿ ಅಪಾಯಕಾರಿ ವಲಯಗಳು’ (ಡೇಂಜರ್ ಝೋನ್) ಎಂದು ಗುರುತಿಸಿದೆ.

ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತಗಳಿಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 5ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರೆ, ಈ ಬಾರಿ ಮುಂಗಾರು ಆರಂಭದಲ್ಲೇ ಮೂವರು ಮೃತಪಟ್ಟಿದ್ದಾರೆ. ಇತ್ತೀಚೆಗೆ ನಾಗುರಿಯಲ್ಲಿ ನಡೆದ ದುರಂತ ಮತ್ತೊಮ್ಮೆ ಕರಾವಳಿ ಜನತೆಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಆಸ್ತಿ-ಪಾಸ್ತಿ ನಷ್ಟ ನಿರಂತರವಾಗಿ ಹೆಚ್ಚುತ್ತಿದ್ದರೂ, ಸಂತ್ರಸ್ತರು ಇಂದಿಗೂ ಸೂಕ್ತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಚಟುವಟಿಕೆಗಳು ಹಾಗೂ ಗುಡ್ಡ-ಬೆಟ್ಟಗಳ ನಾಶವು ಭವಿಷ್ಯದಲ್ಲಿ ಭೀಕರ ಭೂಕುಸಿತ ಮತ್ತು ಮಾನವ ನಿರ್ಮಿತ ಮಹಾ ದುರಂತಗಳಿಗೆ ಕಾರಣವಾಗುವ ಆತಂಕ ಎದುರಾಗಿದೆ. ಮಾನವನ ಅಜಾಗರೂಕತೆ ಮತ್ತು ಪ್ರಕೃತಿಯ ಮೇಲಿನ ನಿರಂತರ ಶೋಷಣೆಯಿಂದಾಗಿ ಕರಾವಳಿಯ ವಿಶಿಷ್ಟ ಭೌಗೋಳಿಕತೆಯೇ ಬದಲಾಗುವ ಭೀತಿ ಎದುರಾಗಿದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ತಾಲೂಕುವಾರು ಅತಿ ಅಪಾಯದ ಪ್ರಮುಖ ಪ್ರದೇಶಗಳು:

  • ಬೆಳ್ತಂಗಡಿ (ಅತಿ ಹೆಚ್ಚು ಅಪಾಯ): ಚಾರ್ಮಾಡಿ ಘಾಟ್ ಸೇರಿದಂತೆ ಪಶ್ಚಿಮ ಘಟ್ಟದ ಪಾದಭಾಗದ ನೆರಿಯ, ಶಿಶಿಲ, ನಾರಾವಿ, ವೇಣೂರು ಸೇರಿದಂತೆ 35ಕ್ಕೂ ಹೆಚ್ಚು ಕಡೆ ತೀವ್ರ ಅಪಾಯವಿದೆ.
  • ಮಂಗಳೂರು: ಅಡ್ಡೂರು, ಅರ್ಕುಳ, ಸೂರಿಂಜೆ, ಕೆಂಜಾರು.
  • ಬಂಟ್ವಾಳ: ಅಮ್ಡಾಡಿ, ಮಣಿನಾಲ್ಕೂರು, ಪೆರ್ನೆ, ಸಜಿಪನಡು, ಕರಿಯಂಗಳ ಹಾಗೂ ಬಿ.ಸಿ. ರೋಡ್‌ನ ಗೂಡಿನಬಳಿ.
  • ಸುಳ್ಯ: ಸಂಪಾಜೆ, ಅರಂತೋಡು, ಅಲೆಟ್ಟಿ, ಮರ್ಕಂಜ.
  • ಕಡಬ: ಸುಬ್ರಹ್ಮಣ್ಯ, ಐನೆಕಿದು, ಶಿರಾಡಿ.
  • ಪುತ್ತೂರು: ಬಜತ್ತೂರು, ಪುತ್ತೂರು ಕಸ್ಬಾ.
  • ಉಳ್ಳಾಲ: ಪೆರ್ಮನ್ನೂರು, ಉಳ್ಳಾಲ.
  • ಮೂಡುಬಿದಿರೆ: ಬೆಳುವಾಯಿ, ಶಿರ್ತಾಡಿ, ನಿಡ್ಡೋಡಿ.

ಕೆತ್ತಿಕಲ್‌ನಲ್ಲಿ ಮುಂದುವರಿದ ಆತಂಕ:

ಕಳೆದ ಆಗಸ್ಟ್‌ನಲ್ಲಿ ಗುಡ್ಡ ಕುಸಿದು 200ಕ್ಕೂ ಹೆಚ್ಚು ಮನೆಗಳಿಗೆ ಅಪಾಯ ಎದುರಾಗಿದ್ದ ಕೆತ್ತಿಕಲ್‌ನಲ್ಲಿ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ತೀರಾ ಅಪಾಯದಲ್ಲಿದ್ದ 12 ಕುಟುಂಬಗಳನ್ನು ತಾತ್ಕಾಲಿಕವಾಗಿ ತೆರವು ಮಾಡಲಾಗಿದ್ದರೂ, ಕೇವಲ ಕೆಲವೆಡೆ ಮಾತ್ರ ತಡೆಗೋಡೆ ನಿರ್ಮಾಣವಾಗಿದೆ. ಮಳೆ ಹೆಚ್ಚಾದರೆ ಇಲ್ಲಿ ಮತ್ತೆ ಭೂಕುಸಿತ ಸಂಭವಿಸಿ, ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗುವ ಭೀತಿ ಎದುರಾಗಿದೆ.

ಅವೈಜ್ಞಾನಿಕ ಗುಡ್ಡ ಕುಸಿತ: ಹೆದ್ದಾರಿ ವಿಸ್ತರಣೆ, ಗಣಿಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಕರಾವಳಿಯ ಸೂಕ್ಷ್ಮ ಪ್ರದೇಶಗಳಲ್ಲಿನ ಗುಡ್ಡಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸಲಾಗುತ್ತಿದೆ. ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ ಗುಡ್ಡಗಳ ತಳಭಾಗವನ್ನು ಅಗೆಯುತ್ತಿರುವುದು ಮಳೆಗಾಲದಲ್ಲಿ ಭೀಕರ ಭೂಕುಸಿತಕ್ಕೆ ಪ್ರಮುಖ ಕಾರಣವಾಗುತ್ತಿದೆ.

ಭೌಗೋಳಿಕತೆಯ ಮೇಲಿನ ಪ್ರಭಾವ: ಪಶ್ಚಿಮ ಘಟ್ಟ ಮತ್ತು ಕರಾವಳಿ ತೀರದ ನಡುವಿನ ನೈಸರ್ಗಿಕ ಸಮತೋಲನವನ್ನು ಈ ಬೆಟ್ಟಗಳು ಕಾಯ್ದುಕೊಂಡಿವೆ. ಇವುಗಳ ನಾಶದಿಂದಾಗಿ ಇಡೀ ಕರಾವಳಿ ಭಾಗದ ಭೌಗೋಳಿಕತೆಯ ಮೇಲೆ ತೀವ್ರ ಹಾನಿಯಾಗಲಿದ್ದು, ಅಂತರ್ಜಲ ಕುಸಿತ, ಪ್ರವಾಹ ಹಾಗೂ ಮಣ್ಣಿನ ಸವೆತದಂತಹ ಸಮಸ್ಯೆಗಳು ತೀವ್ರಗೊಳ್ಳಲಿವೆ.

ಮಾನವ ನಿರ್ಮಿತ ಅಜಾಗರೂಕತೆ: ಇದು ಕೇವಲ ನೈಸರ್ಗಿಕ ವಿಕೋಪವಲ್ಲ, ಬದಲಿಗೆ ಸಂಪೂರ್ಣವಾಗಿ ಮಾನವ ನಿರ್ಮಿತ ದುರಂತವಾಗಿದೆ. ಲಾಭದ ಆಸೆಗಾಗಿ ಪ್ರಕೃತಿಯ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿರುವ ಕಾಮಗಾರಿಗಳೇ ಮುಂದಿನ ದಿನಗಳಲ್ಲಿ ಕರಾವಳಿ ಜನತೆಯ ಜೀವ ಮತ್ತು ಆಸ್ತಿಗೆ ಕಂಟಕವಾಗಲಿವೆ.

ಹೆಚ್ಚುತ್ತಿರುವ ಆತಂಕ: ಕಳೆದ ಕೆಲವು ವರ್ಷಗಳಿಂದ ಮಳೆಗಾಲದ ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸಂಭವಿಸುತ್ತಿರುವ ಭೂಕುಸಿತದ ಘಟನೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಇನ್ನಾದರೂ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಂಡು, ಬೆಟ್ಟ-ಗುಡ್ಡಗಳ ನೈಸರ್ಗಿಕ ಸ್ವರೂಪವನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕರಾವಳಿ ಭಾಗ ವಾಸಯೋಗ್ಯವಾಗಿ ಉಳಿಯುವುದಿಲ್ಲ ಎಂದು ವರದಿ ಎಚ್ಚರಿಸಿದೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

CONGRESS

ಮಂಗಳೂರು ಹಳೆ ಬಂದರು ಪ್ರದೇಶಕ್ಕೆ ಸಿಎಂ ಭೇಟಿ: ಮೀನುಗಾರಿಕೆ ವ್ಯವಹಾರ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ, ತನಿಖೆಗೆ ಆದೇಶ

Published

on

ಮಂಗಳೂರು, ಸೆ. 19: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಧಕ್ಕೆ ಹಳೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕಮಾರ್ ಅವರು, ತಮ್ಮ ಭೇಟಿಯ ವೇಳೆ ಮೀನುಗಾರಿಕಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳೇ ಅಥವಾ ಪೊಲೀಸರೇ ಚಟುವಟಿಕೆಗಳನ್ನು ನಿಲ್ಲಿಸಿದ್ದರೆ ಅವರನ್ನು ಇಂದೇ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಮೀನುಗಾರರು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ವ್ಯವಹಾರಗಳು ಎಂದಿನಂತೆ ಸುಗಮವಾಗಿ ನಡೆಯಬೇಕು ಎಂದು ಸಿಎಂ ತಿಳಿಸಿದರು. ಮೀನುಗಾರಿಕೆಯು ಆರ್ಥಿಕತೆಯ ದೊಡ್ಡ ಶಕ್ತಿಯಾಗಿದ್ದು, ಧಕ್ಕೆಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು, ಸುರಕ್ಷತೆ ಒದಗಿಸುವುದು ಹಾಗೂ ಸಣ್ಣ ದೋಣಿ ಮೀನುಗಾರರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಅಳಿವೆ ಬಾಗಿಲಿಗೆ ಹೂಳೆತ್ತದೆ ಇರುವುದು ಅಪಾಯಕಾರಿಯಾಗಿದೆ ಎಂಬ ಮೀನುಗಾರರ ಅಳಲಿಗೆ ಸ್ಪಂದಿಸಿ, ಡ್ರೆಜಿಂಗ್ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿಯ ಸಲಹೆ ಪಡೆದು ಶೀಘ್ರವೇ ಸರ್ಕಾರವೇ ಸ್ವಂತ ಡ್ರೆಜಿಂಗ್ ಯಂತ್ರ ಖರೀದಿಸುವುದೋ ಅಥವಾ ಲೀಸ್‌ಗೆ ಪಡೆಯುವುದೋ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕರಾವಳಿಯ ಅಭಿವೃದ್ಧಿಗೆ ಹೊಸ ಪಥದ ಚಿಂತನೆ ನಡೆಸಲಾಗಿದ್ದು, ಹೂಡಿಕೆದಾರರನ್ನು ಆಕರ್ಷಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜನಸಾಮಾನ್ಯರ ಬದುಕು ನಮಗೆ ಮುಖ್ಯವಾಗಿದ್ದು, ಹಿಂದೆಯೂ ನಾವು ಈ ವರದಿಯನ್ನು ತಿರಸ್ಕರಿಸಿದ್ದೇವೆ ಎಂದರು. ಕಾನೂನು ಚೌಕಟ್ಟಿನಲ್ಲಿ ಜನರಿಗೆ ಆಗುವ ಅನ್ಯಾಯ ತಪ್ಪಿಸಲು ವಾಸ್ತವ ಅಂಶಗಳನ್ನು ಅರಿಯಲು ಜನರ ಬಳಿಗೆ ಬಂದಿರುವುದಾಗಿ ತಿಳಿಸಿದರು. ಸಚಿವ ಸಂಪುಟದ ಅನುಮೋದನೆ ಕುರಿತು ಬಿಜೆಪಿ ಟೀಕೆಗಳಿಗೆ ಉತ್ತರಿಸಿ, “ನಾವು ನುಡಿದಂತೆ ನಡೆಯುತ್ತೇವೆ, ಅದೇ ನಮ್ಮ ಶಕ್ತಿ” ಎಂದು ಸ್ಪಷ್ಟಪಡಿಸಿದರು. ಈ ಭೇಟಿಯ ವೇಳೆ ಸಚಿವ ಯು.ಟಿ. ಖಾದರ್, ವಿವಿಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಮೀನುಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

award

ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಐತಿಹಾಸಿಕ ಮಾನ್ಯತೆ: ಕರಾವಳಿಯಲ್ಲಿ ಹಬ್ಬದ ವಾತಾವರಣ

Published

on

ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.

ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಬಲ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಹೊಂದಿರುವ ಅಪೂರ್ವ ಭಾಷೆಯಾಗಿದೆ. ರಾಜ್ಯ ಸರ್ಕಾರದಿಂದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಲಭಿಸಿರುವುದು, ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಹೋರಾಟಕ್ಕೆ ಮತ್ತಷ್ಟು ಪ್ರಬಲ ವೇದಿಕೆಯಾಗಲಿದೆ.

ನಿರಂತರ ಹೋರಾಟಕ್ಕೆ ಸಿಕ್ಕ ಫಲ: ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷಾ ಮಾನ್ಯತೆ ನೀಡಬೇಕೆಂದು ದಶಕಗಳಿಂದ ತುಳು ಸಾಹಿತ್ಯ ಅಕಾಡೆಮಿ, ತುಳು ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತ ಬಂದಿದ್ದರು.

ತಜ್ಞರ ಸಮಿತಿಯ ವರದಿ ಆಧಾರ: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹಿರಿಯ ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಹೊರ ರಾಜ್ಯಗಳಲ್ಲಿನ ಭಾಷಾ ನೀತಿ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ತುಳುವರ ಬಹುಕಾಲದ ಕನಸು ನನಸಾಗಿದ್ದು, ಕರಾವಳಿ ಭಾಗದಲ್ಲಿ ಹರ್ಷೋದ್ಗಾರ ವ್ಯಕ್ತವಾಗಿದೆ.

Continue Reading

Trending

Copyright © 2025 Deevatige

error: Content is protected !!